ವಿಶ್ವಸಂಸ್ತೆಯಲ್ಲಿ ಕನ್ನಡಕ್ಕಿರುವ ಜಾಗ ಬಾರತ ಒಕ್ಕೂಟದಲ್ಲಿಯೂ ಇರಬೇಕು

ರತೀಶ ರತ್ನಾಕರ.

UNCRC logo

ಕಳೆದ ಅಕ್ಟೋಬರ್ 10 ರಂದು ಜಿನಿವಾದಲ್ಲಿ ನಡೆದ ‘ಹಕ್ಕುಗಳ ಕುರಿತು ವಿಶ್ವಸಂಸ್ತೆ ಸಮಿತಿ ಸಬೆ’ (ಯು.ಎನ್.ಸಿ.ಆರ್‍‍.ಸಿ.)ಯಲ್ಲಿ ಪಾಲ್ಗೊಂಡಿದ್ದ ದಾರವಾಡದ ಮಂಜುಳಾ ಮುನವಳ್ಳಿ ಎಂಬ ಹುಡುಗಿಯೊಬ್ಬಳು, ಸುಮಾರು ಒಂದೂವರೆ ಗಂಟೆ ಕನ್ನಡದಲ್ಲೇ ಮಾತನಾಡಿ ಸಯ್ ಎನಿಸಿಕೊಂಡಿದ್ದಾಳೆ. ಮಕ್ಕಳ ಹಕ್ಕುಗಳು ಮತ್ತು ರಕ್ಶಣೆಯ ಬಗ್ಗೆ ಕರ‍್ನಾಟಕ ಸರಕಾರ ಕಯ್‍ಗೊಂಡಿರುವ ಕ್ರಮಗಳ ಬಗ್ಗೆ ಈ ಸಬೆಯಲ್ಲಿ ಆಕೆ ಮಾತನಾಡಿದ್ದಾಳೆ. ಈಕೆಯ ಕನ್ನಡದ ಮಾತುಗಳನ್ನು ಇಂಗ್ಲೀಶಿನಲ್ಲಿ ನುಡಿಮಾರುವ ಕೆಲಸವನ್ನು ಮಾಡಲಾಗಿತ್ತು, ಅದೇ ಸಬೆಯಲ್ಲಿ ಮಂಜುಳಾ ಮಂಡಿಸಿದ ವರದಿಯ ಕುರಿತು ನೆರೆದಿದ್ದ ಸದಸ್ಯರು ಮೂರು ಗಂಟೆಗೂ ಹೆಚ್ಚು ಹೊತ್ತು ಚರ‍್ಚೆಯನ್ನು ಮಾಡಿದ್ದಾರೆ.

ಹೆರನಾಡಿನಲ್ಲಿ ಕನ್ನಡವನ್ನು ಮೊಳಗಿಸಿದ್ದು ಒಳ್ಳೆಯ ಸುದ್ದಿ. ಇದರ ಜೊತೆಯಲ್ಲಿ ಇಲ್ಲಿ ಗಮನಿಸಬೇಕಾದ ಮತ್ತೊಂದು ಸುದ್ದಿ ಎಂದರೆ, ವಿಶ್ವಸಂಸ್ತೆಯ ಸಬೆಯಲ್ಲಿ ಕನ್ನಡದಲ್ಲಿ ಮಾತನಾಡುವ ಅವಕಾಶ ಇದೆ, ಹಾಗೆಯೇ ಅದನ್ನು ನುಡಿಮಾರ‍್ಪು ಮಾಡಿ ಕನ್ನಡ ಗೊತ್ತಿಲ್ಲದವರಿಗೆ ಸುದ್ದಿ ತಿಳಿಸುವ ಏರ‍್ಪಾಡೂ ಇದೆ. ಆದರೆ, ಕನ್ನಡದ್ದೇ ನೆಲದಲ್ಲಿರುವ ಹಯ್‍ಕೋರ‍್ಟಿನಲ್ಲಿ ಕನ್ನಡದಲ್ಲಿ ತೀರ‍್ಪುಗಳು ಸಿಗುವುದಿಲ್ಲ! ಅಶ್ಟೇ ಅಲ್ಲ, ಒಕ್ಕೂಟದ ಮಾತುಕತೆಗಳು ನಡೆಯುವ ದೆಹಲಿಯ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಬೇಕು ಎಂದರೆ ಸ್ಪೀಕರ್‍ ಅವರ ಅನುಮತಿ ಪಡೆಯಬೇಕಿದೆ! ರಾಜ್ಯದಲ್ಲಿರುವ ಒಕ್ಕೂಟ ಸರಕಾರದ ಇಲಾಕೆಗಳಲ್ಲಿ ಕನ್ನಡಕ್ಕಿಂತ ಹಿಂದಿಗೇ ಮನ್ನಣೆ! ನಮ್ಮದೇ ನಾಡು ಎಂದು ಹೇಳಿಕೊಂಡು ತಿರುಗುವ ಜಾಗದಲ್ಲಿ ನಮ್ಮದೇ ನುಡಿಯಲ್ಲಿ ವ್ಯವಹರಿಸಲು ಹರಸಾಹಸ ಪಡಬೇಕಿದೆ.

ಹೀಗೆ ಹೇಳುತ್ತ ಹೋದರೆ ಹನುಮಂತನ ಬಾಲದಂತೆ ಇಂತಹ ಸಮಸ್ಯೆಗಳ ಸರಮಾಲೆ ಸಿಗುತ್ತವೆ. ಮಂದಿಯು ತಮ್ಮ ನುಡಿಯಲ್ಲಿ ವ್ಯವಹರಿಸಲು ಆಗದಂತಹ ಹುಳುಕಿನ ಏರ‍್ಪಾಡಿನಲ್ಲಿ ನಾವಿಂದು ಇದ್ದೇವೆ. ಇದಕ್ಕೆಲ್ಲಾ ಕಾರಣ ನಮ್ಮ ಹುಳುಕಿನ ನುಡಿ-ನೀತಿ. ನುಡಿಯ ಹಲತನವಿರುವ ಒಂದು ನಾಡಿನಲ್ಲಿ ಎಲ್ಲಾ ನುಡಿಯಾಡುಗರಿಗೆ ಅನುಕೂಲವಾಗುವಂತಹ ಏರ‍್ಪಾಡನ್ನು ಕಟ್ಟುವುದನ್ನು ಬಿಟ್ಟು, ಕೇವಲ ಹಿಂದಿ ಹಾಗೂ ಇಂಗ್ಲೀಶನ್ನು ಮೆರೆಸಿ ಹೇರುತ್ತಿದೆ ಒಕ್ಕೂಟ ಸರಕಾರ. ಜಿನಿವಾದ ಸಮ್ಮೇಳನದಲ್ಲಿ ಕನ್ನಡದಲ್ಲೇ ಮಾತನಾಡುವ ಅವಕಾಶವನ್ನಿಟ್ಟು, ಮಂದಿಯ ನುಡಿಯಲ್ಲಿಯೇ ಏರ‍್ಪಾಡನ್ನು ಕಟ್ಟುವುದರ ಹೆಚ್ಚುಗಾರಿಕೆಯನ್ನು ವಿಶ್ವಸಂಸ್ತೆ ತಿಳಿಸಿದೆ. ಹಾಗೆಯೇ, ನಮ್ಮಲ್ಲಿಯೂ ಇಂತಹ ಏರ‍್ಪಾಡು ಬರಬೇಕಿದೆ.

ವಿಶ್ವಸಂಸ್ತೆಯ ಅಡಿಯಲ್ಲಿ ಹಲವಾರು ನಾಡುಗಳು ಇವೆ, ಅವುಗಳ ನುಡಿಗಳು ಕೂಡ ಬೇರೆ ಬೇರೆಯಾಗಿದೆ. ನುಡಿಯ ಬೇರ‍್ಮೆ ಹೆಚ್ಚಿರುವ ದಸೆಯಿಂದ ವಿಶ್ವಸಂಸ್ತೆಯ ಸಬೆಗಳಲ್ಲಿ ಇಂತಹದ್ದೇ ಒಂದು ನುಡಿಯಲ್ಲಿ ಮಾತನಾಡಬೇಕು ಎಂದು ಯಾವುದೇ ಕಟ್ಟಲೆಯನ್ನು ಮಾಡಿಲ್ಲ. ಮಂದಿಯು ಅವರದೇ ನುಡಿಯಲ್ಲಿ ಮಾತನಾಡುವ ಹಾಗೂ ವ್ಯವಹರಿಸುವ ಏರ‍್ಪಾಡನ್ನು ಕಟ್ಟಲಾಗಿದೆ. ಆದ್ದರಿಂದ ಮಂಜುಳಾ ಎಂಬ ಕನ್ನಡದ ಹುಡುಗಿ ಕನ್ನಡದಲ್ಲೇ ತನ್ನ ವರದಿಯನ್ನು ಮಂಡಿಸಲು ಸಾದ್ಯವಾಯಿತು. ವಿಶ್ವಸಂಸ್ತೆಗೆ ಹೋಲಿಸಿದರೆ ಕಡಿಮೆ ನಾಡುಗಳ ಒಕ್ಕೂಟವಾಗಿರುವ ಇಂಡಿಯಾದಲ್ಲಿ ನುಡಿಯ ಹಲತನವಿದ್ದರೂ ಹಿಂದಿ ಮತ್ತು ಇಂಗ್ಲೀಶಿನಲ್ಲಿ ಒಕ್ಕೂಟ ಸರಕಾರದ ಆಡಳಿತ ನಡೆಯಬೇಕು ಎಂಬ ಕಟ್ಟಲೆಯಿದೆ. ಈ ಕಟ್ಟಲೆಯಿಂದ ಇಂಡಿಯಾದ ಇತರೆ ನುಡಿಗಳನ್ನು ಮತ್ತು ನುಡಿಯಾಡುಗರನ್ನು ಕಡೆಗಣಿಸಿದಂತೆ ಮತ್ತು ಇದರಿಂದ ಅನಾನುಕೂಲಗಳೇ ಹೆಚ್ಚು. ನುಡಿಯ ಹಲತನವಿರುವ ಈ ನಾಡಿನಲ್ಲಿ ಹಿಂದಿ-ಇಂಗ್ಲೀಶು ಎಂಬ ಕಟ್ಟಲೆಯನ್ನು ತೆಗೆದು ಹಾಕಿ ಎಲ್ಲಾ ನುಡಿಗಳಿಗೂ ಒಂದೇ ರೀತಿಯ ಸ್ತಾನಮಾನ ಕೊಡಬೇಕಿದೆ.

(ಚಿತ್ರ ಸೆಲೆ: niccy.org)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.