ಮೂಳ್ವಡದಲ್ಲಿ ರಾಜಕೀಯ ಎಚ್ಚರದ ಹೊಸಗಾಳಿ

ಜಯತೀರ‍್ತ ನಾಡಗವ್ಡ.

North-East-Regional-Political-Front

ಮೂಳ್ವಡದ ನಾಡುಗಳ ಹತ್ತು ಸ್ತಳೀಯ ಪಕ್ಶಗಳು ಸೇರಿ ಹೊಸದೊಂದು ಆಳ್ವಿಕೆಯ ಕೂಟಕ್ಕೆ ಹುಟ್ಟು ನೀಡಿವೆ. ಇದನ್ನು ನಾರ‍್ತ್ ಈಸ್ಟ್ ರೀಜನಲ್ ಪೂಲಿಟಿಕಲ್ ಪ್ರಂಟ್ (ಮೂಳ್ವಡದ ಸ್ತಳೀಯ ಆಳ್ವಿಕೆಯ ಕೂಟ) ಎಂದು ಹೆಸರು ನೀಡಿವೆ. ಈ ಮೂಲಕ ತಮ್ಮ ನಾಡು, ನುಡಿ, ನಡೆ, ಹಣಕಾಸು, ಗಡಿ, ಸಾಮಾಜಿಕ ಮತ್ತು ಆಳ್ವಿಕೆಯ ಹಕ್ಕುಗಳ ಕಾಪಾಡುವುದಲ್ಲದೆ ಸ್ತಳೀಯ ಬುಡಕಟ್ಟು ಜನತೆಯ ಗುರುತನ್ನು ಎತ್ತಿ ಹಿಡಿಯುವುದು ಈ ಕೂಟದ ಮುಕ್ಯ ಗುರಿ.

ಕಳೆದ ಅಕ್ಟೋಬರ್ 20ರಂದು ಈ ಎಲ್ಲ ಹತ್ತು ಪ್ರಮುಕ ಪಕ್ಶಗಳ ಮುಂದಾಳುಗಳು ಅಸ್ಸಾಂ ನಾಡಿನ ನೆಲೆವೀಡು ಗುವಾಹಾಟಿಯಲ್ಲಿ ಸೇರಿಕೊಂಡು ಮಾತುಕತೆ ನಡೆಸಿದ್ದಾರೆ. ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ, ಅರುಣಾಚಲ ಪ್ರದೇಶ, ಮೇಗಾಲಯ, ಮೀಜೊರಾಮ್, ತ್ರಿಪುರ ನಾಡಿನ ಹಲವು ಪಕ್ಶಗಳು ಈ ಮಾತುಕತೆಯಲ್ಲಿ ಸೇರಿದ್ದವು. ಅಸ್ಸಾಂ ಗಣ ಪರಿಶದ್ ಈ ಮಾತುಕತೆಯ ಮುಂದಾಳತ್ವ ವಹಿಸಿತ್ತು. ಇದೇ ಪಕ್ಶದ ಹಿರಿಯಾಳು ಮತ್ತು ಅಸ್ಸಾಂನ ಮಾಜಿ ಮುಕ್ಯಮಂತ್ರಿ ಪ್ರಪುಲ್ಲಕುಮಾರ ಮಹಾಂತಾ ಈ ಕೂಟದ ಪ್ರಮುಕ ಅರಿವಿಗರಾಗಿಯೂ, ನಾಗಾಲ್ಯಾಂಡ್‍ನ ಮುಕ್ಯಮಂತ್ರಿ ನೆಪಿಯು ರಯೊ ಸೇರಿಸುಗರಾಗಿಯೂ ಆಯ್ಕೆಗೊಂಡಿದ್ದಾರೆ. ಒಂದು ಪಕ್ಶದ ಪರವಾಗಿ ನಾಲ್ಕು ಜನ ಎತ್ತುಗರನ್ನು ಈ ಕೂಟ ಹೊಂದಿರುತ್ತದೆ. ಈ ಮಾಹಿತಿಯನ್ನು ಹತ್ತು ಪಕ್ಶದ ಮುಂದಾಳುಗಳ ಜತೆಗೂಡಿ ಮಹಾಂತಾ ಮತ್ತು ರಿಯೊರವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಹೊಸ ಪಕ್ಶದ ಕೂಡುತಾಣ ಗುವಾಹಾಟಿಯಲ್ಲಿ ಇರಲಿದೆ. ಪಕ್ಶದ ಮೊದಲ ಕೂಡುಹ  ನಾಗಾಲ್ಯಾಂಡ್‍ನ ನೆಲೆವೀಡು ಕೊಹಿಮಾದಲ್ಲಿ ನಡೆಸಲಾಗುವುದು, ಬರುವ ವರ‍್ಶದ ಜನವರಿ ತಿಂಗಳಿನಲ್ಲಿ ಗುವಾಹಾಟಿಯಲ್ಲಿ ಪಕ್ಶದ ಮೆರವಣಿಗೆಯೊಂದನ್ನು ಹಮ್ಮಿಕೊಳ್ಳಲಾಗಿದೆ.

ಮೊನ್ನೆ ನಡೆದ ಕೂಡುಹದಲ್ಲಿ ಒಟ್ಟು 17 ವಿವಿದ ಸಮರಿಗಳ ಬಗ್ಗೆ ನಿರ‍್ದಾರ ತಳೆಯಲಾಗಿದೆ. ಅದರಲ್ಲಿ ಕೆಲ ಮುಕ್ಯವಾದವುಗಳೆಂದರೆ ಈಗಿರುವ ಒಕ್ಕೂಟ ಸರ‍್ಕಾರ ಹಾಗೂ ನಾಡುಗಳ ನಡುವಣ ಸಂಬಂದಗಳಿಗೆ ನಿಜವಾದ ಒಪ್ಪುಕೂಟ ವ್ಯವಸ್ತೆಯ ಬಣ್ಣ ನೀಡುವುದು. ಸಂವಿದಾನದ 7ನೇ ಪರಿಚ್ಚೇದದ ತಿದ್ದುಪಡಿಗೆ ಒತ್ತಾಯ, ಒಕ್ಕೂಟ ಸರ‍್ಕಾರದ ಬಿಗಿಹಿಡಿತದಲ್ಲಿರುವ ನಾಡಿಗೆ ಸಂಬಂದಿಸಿದ ಅದಿಕಾರವನ್ನು ಆಯಾ ನಾಡುಗಳಿಗೆ ನೀಡಿ, ಸದ್ಯ ಜಂಟಿ ಪಟ್ಟಿಯಲ್ಲಿರುವ ವಿಶಯಗಳನ್ನು ನಾಡುಗಳ ಪಟ್ಟಿಗೆ ಸೇರಿಸಿವುದು ಆಗಿವೆ. ದೇಶದ ಕಾಪು, ಹೊರದೇಶಗಳೊಂದಿಗಿನ ಸಂಬಂದ ಮತ್ತು ಹಣಕಾಸು-ವ್ಯಾಪಾರದಂತಹ ವಿಶಯಗಳನ್ನು ಹೊರತುಪಡಿಸಿ ನಾಡಿನ ಒಳ ವಿಶಯಗಳಲ್ಲಿ ಒಕ್ಕೂಟ ಸರ‍್ಕಾರ ತಲೆತೂರಿಸುವುದನ್ನು ಕಟುವಾಗಿ ಕಂಡಿಸಿವೆ.

ಈ ಬಾಗದ ಜನರ ಜೀವಾಳದಂತಿರುವ ಬ್ರಮ್ಮಪುತ್ರ ಹೊಳೆಯ ಮೇಲ್ತಟದಲ್ಲಿ ಚೀನಿ ಸರ‍್ಕಾರ ಒಪ್ಪಿಗೆಯಿಲ್ಲದೆ ಆಣೆಕಟ್ಟು ಕಟ್ಟಿಸಿ ಹೊಳೆದಾರಿಯನ್ನು ತಮಗೆ ತಕ್ಕಂತೆ ಬದಲಾಯಿಸುತ್ತಿರುವುದು ಅನ್ಯಾಯವೆಂದು, ಇದನ್ನು ಚೀನಿಯರ ಜೊತೆ ಮಾತುಕತೆ ನಡೆಸಿ ತಿಳಿಹೇಳಬೇಕೆಂದು ಒಕ್ಕೂಟ ಸರ‍್ಕಾರಕ್ಕೆ ಕೋರಿವೆ. ದೆಹಲಿಯಲ್ಲಿರುವ ಆಳ್ವಿಗರು ಈ ವಿಶಯವನ್ನು ಕಡೆಗಣಿಸಿರುವುದನ್ನು ಹರಿಹಾಯ್ದಿವೆ. ಸೇನೆಯ ತುಕಡಿಗಳಿಗೆ ನೀಡಿರುವ ವಿಶೇಶ ಅದಿಕಾರದ ಕಟ್ಟಲೆ ಬಗ್ಗೆಯೂ ಮೂಳ್ವಡದ ಮುಂದಾಳುಗಳು ಬೇಸರಗೊಂಡಿದ್ದು, ತಕ್ಶಣದಿಂದಲೇ ಸೇನೆಯ ತುಕಡಿಗಳು ತಮ್ಮ ಎಲ್ಲ ವಿಶೇಶ ಅದಿಕಾರ ನಡೆಸುವುದನ್ನು ನಿಲ್ಲಿಸುವಂತೆ ಒತ್ತಡ ಹೇರಲಿವೆ.

ಈ ಬಾಗದ ನಾಡಿನ ಮಕ್ಕಳಿಗೆ ಒಕ್ಕೂಟದ ಸರ‍್ಕಾರಿ, ಅರೆ-ಸರ‍್ಕಾರಿ ಸೇರಿದಂತೆ ಇತರೆ ಎಲ್ಲ ಕಯ್ಗಾರಿಕೆಗಳಲ್ಲಿ ಶೇಕಡ 80ರಶ್ಟು ಕೆಲಸಗಳ ಮೀಸಲಾತಿಯ ಕುರಿತು ಹೆಚ್ಚಿನ ಮಾತುಕತೆ ನಡೆಸಿಲಾಗಿದೆ. ಮೂಳ್ವಡದ ಮಂದಿಗೆ ತಕ್ಕ ಹಮ್ಮುಗೆಗಳನ್ನು ಒಕ್ಕೂಟ ಸರ‍್ಕಾರ ಮಾಡಲಿ, ಅಯ್ತಿಹಾಸಿಕ ‘ಸ್ಟಿಲ್ವೆಲ್ ರಸ್ತೆ’ಯನ್ನು ದುರಸ್ತಿಗೊಳಿಸಿ ಹೊಸದಾಗಿ ಕಟ್ಟಿಸಲಿ ಎಂಬುವು ಕೂಡುಹದಲ್ಲಿ ಕೇಳಿಬಂದ ಇತರೆ ಬೇಡಿಕೆಗಳು. ರಾಶ್ಟ್ರೀಯ ಪಕ್ಶಗಳಾದ ಕಾಂಗ್ರೆಸ್, ಬಾಜಪ ಜೊತೆಗಿನ ಸಂಬಂದದ ವಿಶಯದಲ್ಲಿ ಎಲ್ಲರ ಒಮ್ಮತ ಪಡೆದು ಮುಂದಿನ ಹೆಜ್ಜೆ ಎಂದು ಕೂಟದ ಸೇರಿಸುಗ ರಯೋ ಸುದ್ದಿಗಾರರಿಗೆ ಬಿಡಿಸಿಹೇಳಿದ್ದಾರೆ.

ಇಲ್ಲಿಯವರೆಗೆ ರಾಶ್ಟ್ರೀಯ ಪಕ್ಶಗಳನ್ನು ಬೆಂಬಲಿಸಿ ತಮ್ಮ ನಾಡಿನ ಮಂದಿಯ ಕೆಲಸ, ಕಲಿಕೆ, ದುಡಿಮೆ, ಹಣ ಕಾಸು ಮೊದಲಾದವುಗಳಲ್ಲಿ ಬೆಳವಣಿಗೆ ಕಾಣದರ ಕುರಿತು ಮೂಳ್ವಡದ ನಾಡುಗಳ ಅರಿವಿಗೆ ಬಂದಂತಿದೆ. ಸ್ತಳೀಯರು ಮುಂದುವರೆಯಲು ಸ್ತಳೀಯರ ಆಳ್ವಿಕೆಯೇ ತಕ್ಕದ್ದು ಎಂಬುದನ್ನು ತಡವಾಗಿಯಾದರೂ ಈ ಬಾಗದ ಮುಂದಾಳುಗಳು ಅರಿತುಕೊಂಡು, ಬಾರತದಂತಹ ಒಪ್ಪುಕ್ಕೂಟದಲ್ಲಿ ತಮ್ಮ ಗುರುತನ್ನು ಉಳಿಸಿಕೊಂಡು ಹೋಗಲು ಪಣತೊಟ್ಟಂತಿವೆ. ಚಿಕ್ಕ ಪುಟ್ಟ ನಾಡುಗಳ ಒಂದೋ ಎರಡೋ ಸಂಸದರನ್ನ ಇಟ್ಟುಕೊಂಡು ದೆಲ್ಲಿಯ ಲೋಕಸಬೆಯಲ್ಲಿ ನಾಡಿನ ವಿಶಯಗಳ ಪರ ನಿಲ್ಲುವುದರ ಬದಲು ಓಟ್ಟಾಗಿ ಹೋರಾಡಿ ತಮ್ಮತನ ಉಳಿಸಿಕೊಳ್ಳುತ್ತಿರುವುದು ಮೆಚ್ಚುವಂತಹದ್ದು. ಮೂಳ್ವಡದ ಆಳ್ವಿಗರು ನಿಜವಾದ ಒಪ್ಪುಕೂಟಕ್ಕೆ ಒಕ್ಕೊರಲಿನ ದನಿ ಎತ್ತಿದ್ದು ಇತರೆ ನಾಡುಗಳಿಗೆ ಮಾದರಿಯಾಗಿದೆ.

(ಚಿತ್ರ ಸೆಲೆ: tehelka.com)

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: