ಟಗರು ಮತ್ತು ಪ್ರೀತಿ

-ಸಿ.ಪಿ.ನಾಗರಾಜ

potaraaja

 

ನಾನು  ಏಳೆಂಟು  ವರುಶದ  ಹುಡುಗನಾಗಿದ್ದಾಗ ನಡೆದ ಪ್ರಸಂಗವಿದು. ನಮ್ಮೂರಿನಲ್ಲಿ ಒಂದು ದಿನ ಬೆಳಗ್ಗೆ ಇಬ್ಬರು ಆಳುಗಳೊಡನೆ ಹೊಲದ ಬಳಿಗೆ ಹೋದೆನು. ನಮ್ಮ ಸಂಗಡ ಮನೆಯಿಂದ  ಒಂದು ಟಗರು ಕೂಡ ಬಂದಿತ್ತು.

ಆ ವರುಶ ಮಳೆಗಾಲ ಚೆನ್ನಾಗಿ ನಡೆದು ಹೊಲಮಾಳದಲ್ಲಿ ಎತ್ತ ನೋಡಿದರೆ ಅತ್ತ ರಾಗಿ ಪಯಿರುಗಳು  ತೆಂಡೆ ತೆಂಡೆಗಳಾಗಿ ಕವಲೊಡೆದು ಸೊಂಪಾಗಿ ಬೆಳೆದು ಹಚ್ಚಹಸಿರು ಕಣ್ಣಿಗೆ ರಾಚುತ್ತಿತ್ತು. ಸಾಲಾರಂಬದಲ್ಲಿ ಬೆಳೆದು ನಿಂತಿದ್ದ ಅವರೆ-ಹುಚ್ಚೆಳ್ಳು-ನವಣೆ-ಜೋಳ-ತೊಗರಿಯ ಗಿಡಗಳು ಬಿಳಿ ಹಳದಿ ಬಂಗಾರದ ಬಣ್ಣಬಣ್ಣದ ಹೂವುಗಳಿಂದ ತುಂಬಿ ಕಂಗೊಳಿಸುತ್ತಿದ್ದವು. ಹೊಲದೊಳಕ್ಕೆ  ಬರುತ್ತಿದ್ದಂತೆಯೇ ಆಳುಗಳು ಟಗರಿನ ಕತ್ತಿನಲ್ಲಿದ್ದ ಹುರಿಯನ್ನು ಬಿಚ್ಚಿ. ಅದು ತನಗೆ ಬೇಕೆಂದ ಕಡೆ ಮೇಯಲೆಂದು ಬಿಟ್ಟ ನಂತರ, ನನ್ನನ್ನು ಕುರಿತು “ನೀವು ತೆವರಿ ಮ್ಯಾಲೆ ಕುಂತ್ಕೊಳ್ರಪ್ಪ “ ಎಂದು  ಹೇಳಿ, ಅವರಿಬ್ಬರೂ ಅಲ್ಲಲ್ಲಿ ಬೆಳೆದಿದ್ದ ಕಳೆಯನ್ನು ಕೀಳುವುದರಲ್ಲಿ ಮಗ್ನರಾದರು.

ಏಕೋ ಏನೋ ಮೇಯಲೆಂದು ಬಿಟ್ಟಿದ್ದ ಟಗರು ಎಲ್ಲೂ ಬಾಯಾಡಿಸದೆ, ತೆವರಿಯ ಮೇಲೆ ಸುಮ್ಮನೆ ನಿಂತಿತ್ತು . ಅದನ್ನು ನೋಡಿದ ನನಗೆ ಎಲ್ಲೆಡೆ ಪಯಿರುಪಚ್ಚೆಗಳು ಬೆಳೆದು ನಿಂತಿದ್ದರೂ ರಾಗಿ  ಗರಿಯನ್ನಾಗಲಿ  ಅವರೆ ಎಲೆಯನ್ನಾಗಲಿ, ಗರಕೆ  ಹುಲ್ಲನ್ನಾಗಲಿ ತಿನ್ನದೆ ನಿಂತಿದೆಯಲ್ಲ  ಎಂದು ಅಚ್ಚರಿಯುಂಟಾಯಿತು. “ಅಯ್ಯೋ  ಪಾಪ …. ಟಗರು  ಹಸ್ಕೊಂಡು  ನಿಂತಿದೆಯಲ್ಲಾ“ ಎಂಬ  ಕರುಣೆಯುಂಟಾಯಿತು. ಕೂಡಲೇ ತೆವರಿಯಲ್ಲಿ ಚೆನ್ನಾಗಿ ಬೆಳೆದಿದ್ದ ಗರಕೆ ಹುಲ್ಲಿನಲ್ಲಿ ಒಂದು ಹಿಡಿಯಶ್ಟನ್ನು ನನ್ನ ಪುಟ್ಟ ಕಯ್ಗಳಿಂದ ಕಿತ್ತುಕೊಂಡೆನು. ನಾನು ಹುಲ್ಲನ್ನು ಕೀಳುತ್ತಿದ್ದಾಗಲೂ ಟಗರು  ನಿಂತ ಕಡೆಯಲ್ಲೇ ಸುಮ್ಮನೆ ತಲೆಯೆತ್ತಿ ಅತ್ತಿತ್ತ ಅಲುಗದೆ ನಿಂತಿತ್ತು. ಅದು ಸುಮ್ಮನೆ ನಿಂತಿರುವುದನ್ನು ಕಂಡು ನನಗೆ ಸಂಕಟವಾಯಿತು .

ಈಗ ನಾನೇ ಟಗರಿನ ಮುಂದಕ್ಕೆ ಹೋಗಿ, ಅದರ ಬಾಯಿಯ ಬಳಿ ಹುಲ್ಲಿನ ಎಸಳುಗಳನ್ನು ಹಿಡಿದೆನು. ಆಗ ಅದು ಒಂದೆರಡು ಹೆಜ್ಜೆ ಹಿಂದಕ್ಕೆ ಜರುಗಿತು. ನಾನು ಮತ್ತಶ್ಟು ಮುಂದಕ್ಕೆ ಹೋಗಿ ಅದರ  ಮಟ್ಟಕ್ಕೆ  ಬಗ್ಗಿ ….. ಅದರ ಬಾಯಿಗೆ ಹುಲ್ಲನ್ನು ತುರುಕಲು ಯತ್ನಿಸಿದೆನು. ಅದು ಹಿಂದೆ ಹಿಂದೆ ಜರುಗತೊಡಗಿತು, ನಾನು ಮುಂದೆ ಮುಂದೆ ಅದರ ಬಾಯಿಯ ಬಳಿಯಲ್ಲೇ ಹುಲ್ಲನ್ನು ಹಿಡಿದು ತುಸು  ತುಸು ಮುಂದಕ್ಕೆ ನಡೆದೆನು. ಹಿಂದೆ ಹಿಂದೆ ಸರಿಯುತ್ತಿದ್ದ ಟಗರು ಇದ್ದಕ್ಕಿದ್ದಂತೆಯೇ ಹೆಚ್ಚಿನ ವೇಗದಿಂದ ಮುನ್ನುಗ್ಗಿ ಬಂದು ನನಗೆ  ಡಿಕ್ಕಿ ಹೊಡೆಯಿತು. ಅದರ ತಲೆಯ ಬಿರುಸಿನ ಹೊಡೆತಕ್ಕೆ ಸಿಲುಕಿ ‘ ದೊಪ್ಪೆಂದು ‘ ತೆವರಿಯಿಂದ ಕೆಳಕ್ಕೆ ಉರುಳಿ ಬಿದ್ದೆನು. ಆಳುಗಳಿಬ್ಬರೂ ದೂರದಲ್ಲಿ ಇದ್ದುದರಿಂದ ಅವರಿಗೆ ಇದಾವುದು ತಿಳಿಯಲಿಲ್ಲ.

ಕೆಳಕ್ಕೆ ಉರುಳಿ ಬಿದ್ದುದರಿಂದ ನನ್ನ ಮಯ್ಯಿಗೆ ತುಸು ಪೆಟ್ಟಾಗಿತ್ತು. ಆದರೆ ಅದಕ್ಕಿಂತ ಹೆಚ್ಚಾಗಿ ಮನಸ್ಸಿಗೆ ತುಂಬಾ ನೋವಾಗಿತ್ತು. “ನಾನು ಅದಕ್ಕೆ ಹುಲ್ಲನ್ನು ತಿನ್ನಿಸಲೆಂದು ಹೋದರೆ, ಅದು ನನ್ನನ್ನು  ಹೀಗೆ ಗುದ್ದಿ ಕೆಡಹಿತಲ್ಲ! ….. ಇದ್ಯಾಕೆ ಹೀಗೆ ಮಾಡಿತು? “ ಎಂಬ ಕಹಿ ಅನಿಸಿಕೆಯು ನನ್ನ ಮನದಲ್ಲಿ ಆಳವಾಗಿ ಬೇರೂರಿತು . ಮತ್ತೆ ಅದರ ಬಳಿಗೆ ನಾನು ಹೋಗಲಿಲ್ಲ . ಅಂದು ನನ್ನ ಎಳೆಯ  ಮನಸ್ಸಿನ ಮೇಲೆ ಬಿದ್ದ ಪೆಟ್ಟು, ಕೆಲವು ಸಂಗತಿಗಳನ್ನು ಕಂಡಾಗ ಈಗಲೂ ಮತ್ತೆ ಮತ್ತೆ ಮರುಕಳಿಸುತ್ತಿರುತ್ತದೆ. ನನ್ನ ಕಣ್ಣ ಮುಂದಿನ ಸಮಾಜದಲ್ಲಿನ ಹತ್ತಾರು ಕುಟುಂಬಗಳಲ್ಲಿ “ತಾವು ಒಲವು  ನಲಿವಿನಿಂದ ಹೆತ್ತು ಹೊತ್ತು ಸಾಕಿ ಸಲಹಿ ಬೆಳೆಸಿದ ಮಕ್ಕಳಿಂದಲೇ ಅನಂತರದ ವರುಶಗಳಲ್ಲಿ ನಾನಾ ಕಾರಣಗಳಿಂದಾಗಿ ಬಗೆಬಗೆಯ ನೋವು ಸಂಕಟ/ಅಪಮಾನಗಳಿಗೆ ಗುರಿಯಾಗಿ ನರಳುವ  ತಂದೆತಾಯಂದಿರನ್ನು ಕಂಡಾಗ ತನ್ನ ಮಯ್-ಮನಗಳನ್ನು ಒಪ್ಪಿಸಿಕೊಂಡು, ತಾನು ಬಹಳವಾಗಿ ಪ್ರೀತಿಸುವ ಹಾಗೂ ನಂಬಿಕೊಂಡಿರುವ ಗಂಡನಿಂದಲೇ ಕಾಲಕ್ರಮೇಣ ವಂಚಿತಳಾಗಿ ಕಣ್ಣೀರಲ್ಲೇ   ಕಯ್ ತೊಳೆಯುತ್ತಿರುವ ಹೆಣ್ಣನ್ನು ಕಂಡಾಗ, ಒಟ್ಟಾರೆಯಾಗಿ ಸಮಾಜದ ಎಲ್ಲಾ ರಂಗಗಳಲ್ಲಿಯೂ ವ್ಯಕ್ತಿಯ/ಕುಟುಂಬದ /ಒಕ್ಕೂಟದ /ಸಮುದಾಯದ ಒಳಿತಿಗಾಗಿ ದುಡಿದು, ಅನಂತರ ಕಾಲ  ಉರುಳಿದಂತೆ ತಾವು ಒಳ್ಳೆಯ ಉದ್ದೇಶದಿಂದ ಬೆಳೆಸಿದವರಿಂದಲೇ ಬಹು ಬಗೆಯ ಸಂಕಟಗಳಿಗೆ ಗುರಿಯಾಗಿ ಕೊರಗುವವರನ್ನು ಕಂಡಾಗಲೆಲ್ಲಾ ಟಗರು  ಮುನ್ನುಗ್ಗಿ  ಗುದ್ದಿ  ಉರುಳಿಸಿದ್ದು  ನೆನಪಾಗುತ್ತಿರುತ್ತದೆ.

(ಚಿತ್ರ: rishakthi.wordpress.com

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. smhamaha says:

    ನಿಮ್ಮ ಈ ಅಂಕಣ ಚನ್ನಾಗಿದೆ ಆದರೆ ಕೊನೆಯ ಕುರಳು ಇನ್ನು ಸಕ್ಕತ್ತಾಗಿ ಬರಿಯಬಹುದಿತ್ತು, ನಮ್ಮ ಸಿದ್ದಲಿಂಗು ತಿಟ್ಟದಹಾಗೆ ಎಡವಿದೆ

    ನಗರಾಜಣ್ಣ ನಿಮ್ಮದು ಯಾವ ಊರು ಹಾಸನ ನ ???
    ತಿಳಿಯುವ ಕುತೂಹಲ ಅಷ್ಟೇ .. racist ಅಲ್ಲ … ನಿಮ್ಮ ಕನ್ನಡದ ಸೊಗಡು ನಮಗೆ ಗೊತ್ತಾಗಲಿಲ್ಲ ಅದಕ್ಕೆ
    ಎತ್ತುಗೆ ಗೆ

    ಹೊಲಮಾಳ — ನಾವು ಹೊಲಗದ್ದೆ ಅನ್ನುತೇವೆ
    ರಾಗಿ ಜೋಳ ಎರಡು ನಿಮ್ಮಲಿ ಬೆಳೆಯುತ್ತಾರಾ ???.. ರಾಗಿ ಪಕ್ಕದಲ್ಲಿ ನಾವು ಕೆಲವು ಬಾರಿ ತೊಗರಿ .. ಒಸಿ ನೀರಿದ್ದರೆ ಎಳ್ಳು …
    ಇನ್ನು ನವಣೆ ನಮ್ಮ ಅಜ್ಜಿ ಕಾಲದಿಂದ ನಿಲ್ಲಿಸಿ ಬಿಟ್ಟೆವು
    ಹುರಿ … ನಮ್ಮಲಿ ಹಗ್ಗ ಆಗುತ್ತೆ
    ತೆವರಿ .. ನಮ್ಮಲಿ ಏರಿ ಆಗುತ್ತೆ

ಅನಿಸಿಕೆ ಬರೆಯಿರಿ: