ಹಾರ‍್ಲೇ ಡೆವಿಡ್ಸನ್ – ಇನ್ನು ಬಾರತದಲ್ಲೇ ಅಣಿ

ಜಯತೀರ‍್ತ ನಾಡಗವ್ಡ.

Haraley_Bike_1

‘ಪಟ್ ಪಟ್’ ಎಂದು ಬೀದಿಗಳಲ್ಲಿ ಸದ್ದು ಹುಟ್ಟಿಸುವ ಬಂಡಿ ತಯಾರಕರ ದಿಟ್ಟ ಹೆಜ್ಜೆ ಎಂದರೆ ಇದೇ ಇರಬೇಕು. ಜಗತ್ತಿನ ಹೆಚ್ಚು ತಾನೋಡ ಕೂಟಗಳು ತಮ್ಮ ಹೊಸ ಹಮ್ಮುಗೆಗಳನ್ನು ನಿದಾನಗೊಳಿಸಿಯೋ ಇಲ್ಲವೇ ಇರುವ ಕೆಲಸವನ್ನು ಕಡಿತಗೊಳಿಸಿಯೋ ಹಣ ಉಳಿಸಲು ಹವಣಿಕೆ ಹಾಕುವ ಕಾಲ ಇದು. ಇಂತದರಲ್ಲಿ ಇಗ್ಗಾಲಿ ಬಂಡಿ ದಿಗ್ಗಜನೆಂದೇ ಹೆಸರುವಾಸಿಯಾಗಿರುವ ಹಾರ‍್ಲೇ ಡೆವಿಡ್ಸನ್ ಕೂಟ ಬಾರತದ ಹರ‍್ಯಾಣದಲ್ಲಿರುವ ಕಾರ‍್ಕಾನೆಯಲ್ಲಿ ಪೂರ‍್ತಿಯಾಗಿ ತನ್ನ ಬಂಡಿಗಳನ್ನು ಬಾರತದಲ್ಲೇ ಮಾಡಿ, ಮಾರಾಟ ಮಾಡುವ ಮಹತ್ವದ ನಿರ‍್ದಾರ ತಿಳಿಯಪಡಿಸಿದೆ.

ಇದೇ ಮೊದಲ ಬಾರಿಗೆ ಅಮೇರಿಕಾದ ಹೊರತಾದ ಬೇರೊಂದು ದೇಶದಲ್ಲಿ ಇಡೀ ಬಂಡಿಗಳ ತಯಾರಿಕೆ ನಡೆಯಲಿದೆ. ಇಲ್ಲಿಯವರೆಗೆ ಡೆವಿಡ್ಸನ್ ಕೂಟದವರು ಹರ‍್ಯಾಣದ ಬಾವಲ್‍ನ ಕಾರ‍್ಕಾನೆಯಲ್ಲಿ ಅಮೇರಿಕಾದಿಂದ ಬಿಡಿಬಾಗಗಳನ್ನು ತರಿಸಿಕೊಂಡು, ಜೋಡಿಸಿ ಇಗ್ಗಾಲಿ ಬಂಡಿಗಳನ್ನು ಅಣಿಗೊಳಿಸುತ್ತಿದ್ದರು. ಇದರಿಂದ ಕೊಳ್ಳುವವರಿಗೆ ಹೆಚ್ಚಿನ ತೆರಿಗೆ ಹೊರೆ ಬೀಳುತಿತ್ತು. ಇನ್ಮುಂದೆ ಕಡಿಮೆ ಬೆಲೆಯಲ್ಲಿ, ಇಡಿಯಾಗಿ ಬಾರತದಲ್ಲೇ  ಹಾರ‍್ಲೇ ಡೆವಿಡ್ಸನ್ ಬಂಡಿಗಳು ಅಣಿಗೊಳ್ಳಲಿವೆ.

ಹದಿಮೂರು ವರುಶಗಳ ನಂತರ ’ಸ್ಟ್ರೀಟ್-500’ ಮತ್ತು ’ಸ್ಟ್ರೀಟ್-750’ ಎಂಬ ಎರಡು ಹೊಸ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು ಅದರೊಂದಿಗೆ ತನ್ನ ಈ ಹೊಸ ಹಮ್ಮುಗೆಯನ್ನು ಹೊರಹಾಕಿದೆ. ಈ ಸುದ್ದಿ ಪಯ್ಪೋಟಿಗಾರರು ಸೇರಿದಂತೆ ತಾನೋಡ ಕಯ್ಗಾರಿಕೆಯ ಹಲವರನ್ನು ಬೆರಗುಗೊಳಿಸಿದೆ. ಸಾಮಾನ್ಯವಾಗಿ ಮುಕ್ಕಾಲು ಲೀಟರ‍್‍ಗಿಂತ ದೊಡ್ಡ ಅಳತೆಯ ಬಿಣಿಗೆ ಬಂಡಿ ಮಾಡುತ್ತಿದ್ದ ಹಾರ‍್ಲೇ ಡೆವಿಡ್ಸನ್ ಈ ಮಾದರಿಗಳ ಮೂಲಕ ಅರ‍್ದ ಹಾಗೂ ಮುಕ್ಕಾಲು ಲೀಟರ್ ಅಳತೆಯ ಚಿಕ್ಕ ಬಿಣಿಗೆಗಳ ತಯಾರಿಕೆಗೆ ಕಯ್ ಹಾಕಿದ್ದು ಹೊಸದೇ.

ಬಾವಲ್‍ನಲ್ಲಿ ಸಿದ್ದಗೊಳ್ಳುವ ಈ ಹೊಸ ಬಂಡಿಗಳು ಬಾರತ ಅಶ್ಟೇಯಲ್ಲದೇ ಯೂರೋಪಿಗೂ ಸಾಗಣೆಯಾಗಲಿವೆ. ಇವೇ ಬಂಡಿಗಳು ಅಮೇರಿಕದ ಕಾನ್ಸಾಸ್ ಊರಿನ ಕಾರ‍್ಕಾನೆಯಲ್ಲಿಯೂ ಮಾಡಲ್ಪಟ್ಟು ಬಡಗಣ ಅಮೇರಿಕದ ಬೇಡಿಕೆ ಪೂರಯ್ಸಲಿವೆ. ಈ ಮುಂಚೆಯೇ ಸಾಕಶ್ಟು ಮಾರುಕಟ್ಟೆಯ ಅರಕೆ ನಡೆಸಿರುವ ಡೆವಿಡ್ಸನ್ ಕೂಟದವರು ಮೊದಲು ಬಾರತಕ್ಕೆ ಸ್ಟ್ರೀಟ್-750 ತರಲಿದ್ದು, ಪೆಬ್ರವರಿ 2014 ರ ತಾನೋಡಗಳ ತೋರ‍್ಪಿನಲ್ಲಿ (auto expo 2014) ಇದು ಕಾಣಿಸಿಕೊಳ್ಳಲಿದೆ. ಇದರ ಗೆಲುವು ಸೋಲುಗಳ ಗಮನಿಸಿ ಸ್ಟ್ರೀಟ್-500 ಮಾದರಿಯ ಬಿಡುಗಡೆ ಮಾಡುವ ಮನಸ್ಸು ತೋರಿದ್ದಾರೆ.

harley_bike_2

ಬೆಲೆಯ ವಿಶಯಕ್ಕೆ ಬಂದಾಗ ಹಾರ‍್ಲೇ ಡೆವಿಡ್ಸನ್ ತುಂಬಾ ದುಬಾರಿಯದ್ದೇ ಆಗಿರುತ್ತದೆ. ಬಾರತದ ಮಾರುಕಟ್ಟೆಯಲ್ಲಿರುವ ಇವರ ಹಲವಾರು ಮಾದರಿಗಳ ಬೆಲೆ ಹತ್ತಾರು ಲಕ್ಶಕ್ಕಿಂತಲೂ ಹೆಚ್ಚಾಗಿದೆ. ಆದರೆ ಬರಲಿರುವ ಈ ಹೊಸ ಮಾದರಿಗಳನ್ನು ಅಯ್ದು ಲಕ್ಶ ರೂಪಾಯಿಗಳೊಳಗೆ ತಯಾರಿಸಿ ಬಾರತದಲ್ಲಿ ತನ್ನ ನೆಲೆಯನ್ನು ಗಟ್ಟಿಗೊಳಿಸುವ ಆಸೆ ಹೊಂದಿದೆ ಹಾರ‍್ಲೇ ಡೆವಿಡ್ಸನ್.

ಬಾರತದ ಹೆಚ್ಚಿನ ಮಾರಾಳಿಗ ಉದ್ದಿಮೆಗಳಿಗೂ ಇದು ಸವಿ ಸುದ್ದಿಯಾಗಿದ್ದು, ಹಾರ‍್ಲೇ ಡೆವಿಡ್ಸನ್ ಜೊತೆಗೆ ತಮ್ಮ ವ್ಯವಹಾರವನ್ನೂ ಬೆಳೆಸಿಕೊಳ್ಳಬಹುದು. ಬಾರತದ ಮಾರುಕಟ್ಟೆಯಲ್ಲಿ ಎಗ್ಗಿಲ್ಲದೆ ಮುನ್ನುಗ್ಗುತ್ತಿರುವ ಬಜಾಜ್, ಹೋಂಡಾ, ಹಿರೋ, ಟಿ.ವಿ.ಎಸ್, ರಾಯಲ್ ಎನ್-ಪೀಲ್ಡನಂತಹ ಕಡಿಮೆ ಬೆಲೆಯ ಬಂಡಿ ತಯಾರಕರಿಗೆ ಹಾರ‍್ಲೇ ಡೆವಿಡ್ಸನ್ ಅದೆಂತಹ ಪಣವೊಡ್ಡಲಿದೆ ಎಂಬುದು ಎಲ್ಲರ ಕುತೂಹಲ.

ಹಾರ‍್ಲೇ ಡೆವಿಡ್ಸನ್ ಜಗತ್ತಿನಲ್ಲಿ ತುಂಬಾ ಹೆಸರುಗಳಿಸಿರುವ ಇಗ್ಗಾಲಿ ಬಂಡಿಗಳ ತಯಾರಕ. 1930 ರಲ್ಲಿ ಜಗತ್ತಿನಲ್ಲಾದ ಬಾರಿ ಹಣಕಾಸಿನ ಏರಿಳಿತಕ್ಕೂ (economic slow down) ಜಗ್ಗದೇ ಉಳಿದುಕೊಂಡು ಬಂದ ಬಯ್ಕು ತಯಾರಕರಲ್ಲೊಂದು ಹಾರ‍್ಲೇ ಡೆವಿಡ್ಸನ್. ಹಾರ‍್ಲೇ ಡೆವಿಡ್ಸನ್ ಬಾಯ್ಕುಗಳು ಹೆದ್ದಾರಿಗಳಲ್ಲಿ ಜುಮ್ಮನೆ ತೇಲುತ್ತ ಸಾಗಲು ಹೇಳಿಮಾಡಿಸಿದಂತಿವೆ, ಇವುಗಳ ಬಾರವೂ ಹೆಚ್ಚಿದ್ದು ಇದಕ್ಕೆ ತಕ್ಕುದಾಗಿದೆ.

harley_bike_3

ಈ ಬಯ್ಕುಗಳ ಇನ್ನೊಂದು ವಿಶೇಶತೆ ಎಂದರೆ ಹೆಚ್ಚಿನ ವಾಡಿಸುವಿಕೆ(customization).
ಕಾರ‍್ಕಾನೆಯಿಂದ ಹೊರಬರುವ ಮುನ್ನವೇ ಕೊಳ್ಳುಗರ ಇಶ್ಟದ ಬಣ್ಣ ಬಳಿದು, ವಿವಿದ ತೆರನಾದ ಬಿಡಿಬಾಗಗಳನ್ನು ಸೇರಿಸಿ ಬಂಡಿ ಕೊಳ್ಳುಗರಿಗೊಪ್ಪುವಂತೆ ಬಯ್ಕುಗಳನ್ನು ಹಾರ‍್ಲೇ ಡೆವಿಡ್ಸನ್ ನೀಡುತ್ತಾ ಬಂದಿದೆ. ಕೊಳ್ಳುಗರನ್ನು ತನ್ನತ್ತ ಸೆಳೆಯಲು ಇದು ಕೂಡ ನೆರವಾಗಿದೆ.

ಹೆಚ್ಚಿನ ಹಾರ‍್ಲೇ ಬಯ್ಕುಗಳು ಒಂದಕ್ಕೊಂದು ಇಂಗ್ಲಿಶ್ ನ “ವಿ” ಪದದಂತೆ ಜೋಡಿಸಲ್ಪಟ್ಟ ಎರಡು ಬಿಣಿಗೆ (V-Twin) ಅಳವಡಿಸಿಕೊಂಡಿರುತ್ತವೆ.ಈ ಕಾರಣಕ್ಕೆ ಬಿಣಿಗೆ ಹೆಚ್ಚಿನ ಕಸುವೂ ನೀಡುವುದಲ್ಲದೇ, ತಲೆ ತಲಾಂತರದ ಬಂದಿರುವ “ಪಟ್ ಪಟ್ ಪಟ್” ಎಂಬ ಸದ್ದನ್ನು ಉಂಟುಮಾಡುತ್ತದೆ. ಇವುಗಳ ಮೂಲಕ ಹಾರ‍್ಲೇ ಡೆವಿಡ್ಸನ್ ಎಲ್ಲ ಇಗ್ಗಾಲಿ ಬಂಡಿ ಓಡಿಸುಗರ ಅಚ್ಚು ಮೆಚ್ಚು.

ಕಳೆದ ಬಾರಿ ಕನ್ನಡದ ಕೋಟ್ಯಾದಿಪತಿ ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದವನೊಬ್ಬ ದುಬಾರಿ ಹಾರ‍್ಲೇ-ಡೆವಿಡ್ಸನ್ ಬಂಡಿಕೊಳ್ಳಲೆಂದೇ ಕೋಟ್ಯಾದಿಪತಿಯಲ್ಲಿ ಆಡುತ್ತಿರುವುದಾಗಿ ಹೇಳಿದ್ದುಂಟು. ಹೀಗಿದೆ ಈ ಬಯ್ಕುಗಳ ಅಮಲು.

(ಸುದ್ದಿ ಮತ್ತು ತಿಟ್ಟದ ಸೆಲೆ: ndtv, wikipedia, harley-davidson.com)Categories: ಅರಿಮೆ

ಟ್ಯಾಗ್ ಗಳು:, , , , , , , , , , , , , ,

1 reply

Trackbacks

  1. ಇಂದಿನಿಂದ ’ಬಂಡಿಗಳ ಸಂತೆ’ | ಹೊನಲು

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s