ಸೂರ‍್ಯಕಾಂತಿ – ಒಂದಶ್ಟು ಮಾಹಿತಿ

– ಮಾರಿಸನ್ ಮನೋಹರ್.

SunFlower ಸೂರ‍್ಯಕಾಂತಿ

ನಾವು ಚಿಕ್ಕವರಿದ್ದಾಗ ರಜೆಯಲ್ಲಿ ತಾತ-ಅಜ್ಜಿಯ ಮನೆಗೆ ಹೋಗುತ್ತಿದ್ದೆವು. ಅವರ ಹೊಲದಲ್ಲಿ ಸೂರ‍್ಯಕಾಂತಿ ಬೆಳೆಯನ್ನು ಸಮ್ರುದ್ದವಾಗಿ ಬೆಳೆಸುತ್ತಿದ್ದರು. ಸೂರ‍್ಯಕಾಂತಿ ಹೊಲವನ್ನು ನೋಡುವುದೇ ಒಂದು ಚಂದ. ಇಡೀ ಹೊಲದಲ್ಲಿ ಅರಿಶಿಣ ಬಣ್ಣದ ತನೆಗಳನ್ನು ಹೊತ್ತ ಸೂರ‍್ಯಕಾಂತಿ ಮನಸೂರೆ ಮಾಡುತ್ತದೆ. ನಾವು ಈ ಸೂರ‍್ಯಕಾಂತಿ ಹೊಲದ ಪಕ್ಕದ ಕಾಲಿ ಹೊಲಗಳಲ್ಲಿ ಗಾಳಿಪಟ ಹಾರಿಸುತ್ತಿದ್ದೆವು. ಸೂರ‍್ಯಕಾಂತಿ ಗಿಡಗಳು ಎರೆಮಣ್ಣಿನ ಹೊಲದಲ್ಲಿ ತುಂಬಾ ಚೆನ್ನಾಗಿ ನಳನಳಿಸಿ ಬೆಳೆಯುತ್ತವೆ. ಚೆನ್ನಾಗಿ ಕಾಳು ಕಟ್ಟುತ್ತವೆ. ತೆನೆಗಳಿಂದ ದಪ್ಪ ದಪ್ಪ ಕರಿ ಬಣ್ಣದ ಎಣ್ಣೆ ತುಂಬಿದ ಕಾಳುಗಳು ಬರುತ್ತವೆ. ಹೊಲಗಳಿಂದ ಸೂರ‍್ಯಕಾಂತಿ ಗಿಡಗಳಿಂದ ತೆನೆಗಳನ್ನು ಕೊಯ್ದು ಕೊಂಡು ಬಂದು ಟಾರ‍್ಪಲಿನ್ ಹಾಸಿನ ಮೇಲೆ ಹಾಕುತ್ತಿದ್ದರು. ಒಂದೊಂದು ಸೂರ‍್ಯಕಾಂತಿ ತೆನೆಗಳು ಮೊರಗಳ ಹಾಗೆ ಅಗಲವಾಗಿ ಇರುತ್ತಿದ್ದವು.

ವಿಶೇಶ ಎಂದರೆ ಇವುಗಳಲ್ಲಿನ ಬೀಜಗಳನ್ನು ಸಿಪ್ಪೆ ಸುಲಿದು ತಿನ್ನಬಹದು. ಮನೆಗಳ ಅಂಗಳದಲ್ಲಿ ಸೂರ‍್ಯಕಾಂತಿ ತೆನೆಗಳನ್ನು ಕುಂಪೆ (ಗುಡ್ಡೆ) ಹಾಕಿದಾಗ ದಪ್ಪ ಕಾಳಿದ್ದ ದೊಡ್ಡ ತೆನೆಗಳನ್ನು ಮುರಿದುಕೊಂಡು ಅವುಗಳನ್ನು ಹೆಕ್ಕಿ ಹೆಕ್ಕಿ ತಿನ್ನುತ್ತಿದ್ದೆವು. ದೊಡ್ಡವರು ನಾವು ಸೂರ‍್ಯಕಾಂತಿ ಬೀಜಗಳನ್ನು ಹೀಗೆ ತಿನ್ನುತ್ತಿದ್ದರೆ “ಹೊಟ್ಟೆ ಜಾಡಿಸುತ್ತದೆ, ಹೆಚ್ಚು ತಿನ್ನಬೇಡಿ. ಅದು ಎಣ್ಣೆಕಾಳು; ಕಡೆಲೆ ಕಾಳಲ್ಲ” ಎಂದು ಬೈಯ್ಯುತ್ತಿದ್ದರು. ನಾವು ಅವರ ಯಾವ ಮಾತನ್ನು ಕೇಳದೆ ಬೀಜಗಳನ್ನು ಬಾಯಲ್ಲಿ ಸಿಪ್ಪೆ ಬಿಡಿಸಿ ಒಳಗಿನ ಪ್ರೋಟೀನ್ ತುಂಬಿದ ಕಾಳನ್ನು ತಿನ್ನುತ್ತಿದ್ದೆವು. ಸೂರ‍್ಯಕಾಂತಿ ಬೀಜಗಳಲ್ಲಿ ಪ್ರೋಟೀನ್ ಇರುತ್ತದೆ. ಗುಡ್ಡೆ ಹಾಕಿದ ಈ ರಾಶಿ ರಾಶಿ ಸೂರ‍್ಯಕಾಂತಿ ತೆನೆಗಳನ್ನು ಒಂದು ಉದ್ದವಾದ ಕೋಲಿನಿಂದ ಬಡಿಯುತ್ತಿದ್ದರು. ಚಿಕ್ಕವರಾದ ನಾವೂ ಆ ಬಡಿಗೆಗಳನ್ನು ತೆಗೆದುಕೊಂಡು ಬಡಿಯುತ್ತಿದ್ದೆವು. ಹತ್ತಾರು ತೆನೆಗಳನ್ನು ಬಡಿದ ಮೇಲೆ ಕೈ ನೋಯಲು ಬಿಟ್ಟು ಮತ್ತೆ ಬೀಜಗಳನ್ನು ತಿನ್ನುತ್ತಿದ್ದೆವು! ಹೀಗೆ ಬಡಿದು ಬೀಜ ಉದುರಿಸಿದ ಮೇಲೆ ಅದನ್ನು ಗೋಣಿ ಚೀಲಗಳಲ್ಲಿ ತುಂಬುತ್ತಿದ್ದರು. ಆಗ ಅವು ಗಂಜ್ ಗೆ (ಮಾರುಕಟ್ಟೆಗೆ) ಹೋಗಲು ರೆಡಿಯಾಗುತ್ತಿದ್ದವು.

ನಾನು ಒಂದು ಸಲ ಸೂರ‍್ಯಕಾಂತಿಯಿಂದ ಎಣ್ಣೆ ತೆಗೆಯುವ ಗಾಣಕ್ಕೆ ಹೋಗಿದ್ದೆ. ಗೋಣಿ ಚೀಲಗಳನ್ನು ಟ್ರಾಲಿಯಿಂದ ಇಳಿಸಿದಾಗ ಗಾಣದ ಆಳೊಬ್ಬ ಬಂದು ಕಾಳನ್ನು ನೋಡುತ್ತಿದ್ದ. ಅದನ್ನು ಒಯ್ದು ಗಾಣದ ಮಾಲೀಕನಿಗೆ ತೋರಿಸುತ್ತಿದ್ದ. ಆ ಗಾಣದ ತುಂಬೆಲ್ಲಾ ಸೂರ‍್ಯಕಾಂತಿ ಎಣ್ಣೆಯ ಗಮ ತುಂಬಿರುತ್ತಿತ್ತು. ಸೀಸನ್ ನಲ್ಲಿ ಎಣ್ಣೆ ತೆಗೆಯುವ ಗಾಣಗಳು ಹಗಲಿರುಳೂ ಎಣ್ಣೆ ತೆಗೆಯುತ್ತಿದ್ದವು. ತುಂಬಾ ಮಂದಿ ಬರುತ್ತಿದ್ದರಿಂದ ತಮ್ಮ ಸರದಿ ಬರುವವರೆಗೆ ಸಾಲಿನಲ್ಲಿ ಕಾಯಬೇಕಾಗಿತ್ತು. ಕೆಲಸದ ಆಳುಗಳು ಚೀಲ ಎತ್ತಿ ಗಾಣಗಳ ಮಶಿನುಗಳಿಗೆ ಮೇಲಿಂದ ಹಾಕುತ್ತಿದ್ದರು. ಮಶೀನ್ ಎಣ್ಣೆ ತೆಗೆಯುವುದನ್ನು ನೋಡುವುದು ಒಂತರಾ ಕುಶಿ ಕೊಡುತ್ತಿತ್ತು. ಸೂರ‍್ಯಕಾಂತಿ ಬೀಜಗಳನ್ನು ಮಶೀನುಗಳಿಂದ ಒತ್ತಲ್ಪಟ್ಟು ಎಣ್ಣೆ ಹೊರಗೆ ಬಂದು ಹದಿನೈದು ಕಿಲೋ ಸ್ಟಾಂಡರ‍್ಡ್ ಎಣ್ಣೆ ಪೀಪಿಗಳಲ್ಲಿ (ಡಬ್ಬಿ) ಹಿಡಿದಿಡುತ್ತಿದ್ದರು. ನಾವು “ಓಹೋ ಮನೆಯಲ್ಲಿ ಇರುವ ಸೂರ‍್ಯಕಾಂತಿ ಎಣ್ಣೆ ಹೀಗಾ ಬರುತ್ತೆ!” ಅಂತ ಸೋಜಿಗಕ್ಕೆ ಒಳಗಾಗುತ್ತಿದ್ದೆವು. ಮನೆಯಲ್ಲಿ ಬಳಸುವ ರಿಪೈನ್ಡ್ ಎಣ್ಣೆಯ ಹಾಗೆ ಇದು ಇರುತ್ತಿರಲಿಲ್ಲ. ಈ ಗಾಣದ ಎಣ್ಣೆಗೆ ಸೂರ‍್ಯಕಾಂತಿ ಹೂವಿನ ವಾಸನೆ ಇರುತ್ತಿತ್ತು. ಈ ಎಣ್ಣೆ ಹೆಚ್ಚಾಗಿ ಹಳ್ಳಿಗಳಲ್ಲಿ ಬಳಸುತ್ತಿದ್ದರು. ಹಳ್ಳಿಗಳಿಂದ ಪಟ್ಟಣಕ್ಕೆ ಬಂದ ಒಕ್ಕಲಾದ ಕೆಲವರು ತಮ್ಮ ಹಳ್ಳಿ ಊಟದ ಸೊಬಗನ್ನು ಮರೆಯಲಾಗದೆ ಪಟ್ಟಣಕ್ಕೂ ಈ ಗಾಣದೆಣ್ಣೆ ತಂದು ಬಳಸುತ್ತಿದ್ದರು.

ಸೂರ‍್ಯಕಾಂತಿ ಗಿಡದ ತವರು ಬಡಗು-ನಡು-ತೆಂಕು ಅಮೆರಿಕಾದ ನಾಡುಗಳು. ಅದರಲ್ಲೂ ಮೆಕ್ಸಿಕೊ ಇದು ಬಂದ ಮೂಲ ನಾಡಾಗಿದೆ. ಬ್ರೆಜಿಲ್ ನಲ್ಲಿ ಸೋಯಾಬಿನ್-ಸೂರ‍್ಯಕಾಂತಿ ಸಿಸ್ಟಮ್ ನಲ್ಲಿ ಇದನ್ನು ಬೆಳೆಸುತ್ತಾರೆ. ಹೊಲದ ಮೊದಲ ಬೆಳೆಯಾಗಿ ಸೂರ‍್ಯಕಾಂತಿ ಆಮೇಲೆ ಸೋಯಾ ಹಾಕುತ್ತಾರೆ. ಹೀಗೆ ಸರದಿ ಪ್ರಕಾರ ಬೆಳೆಸುವದರಿಂದ ಸೂರ‍್ಯಕಾಂತಿಯ ಗಿಡಗಳ ಗೊಬ್ಬರ ಸೋಯಾಗೆ ಸಿಗುತ್ತದೆ ಮತ್ತು ಸೋಯಾದ ಗೊಬ್ಬರ ತಿರುಗಿ ಸೂರ‍್ಯಕಾಂತಿ ಗಿಡಗಳಿಗೆ ಸಿಕ್ಕು ಚೆನ್ನಾಗಿ ಬೆಳೆಯುತ್ತದೆ. ನೈಟ್ರೋಜನ್ ಹೆಚ್ಚಿರುವ ಗೊಬ್ಬರ ಈ ಗಿಡಕ್ಕೆ ಸಿಕ್ಕರೆ ಆಳೆತ್ತರವಾಗಿ ಬೆಳೆದು ದೊಡ್ಡ ದೊಡ್ಡ ತೆನೆಗಳನ್ನು ಬಿಡುತ್ತದೆ. ಕಾಳುಗಳೂ ಎಣ್ಣೆಯಿಂದ ತುಂಬುತ್ತವೆ. ಆದರೂ ಕಾಳುಗಳಲ್ಲಿನ ಎಣ್ಣೆಯ ಅಂಶ ಅದರ ತಳಿಯ ಮೇಲೆ ಆತುಕೊಂಡಿದೆ. ಸೂರ‍್ಯಕಾಂತಿಯ ಒಕ್ಕಲು ಮಾಡುವ ಮೊದಲು ಅದರ ತಳಿಯ ಬಗ್ಗೆ ಗಮನ ಹರಿಸಬೇಕಾಗಿದೆ. ಸೂರ‍್ಯಕಾಂತಿ ಬೀಜಗಳಲ್ಲಿ ಲಿನೋಲೈಕ್, ಹೈ ಓಲಿಕ್ ಮತ್ತು ಸನ್ ಪ್ಲವರ್ ಎಣ್ಣೆಯದ್ದು ಅಂತ ಮೂರು ಬಗೆಗಳು ಇವೆ. ಸೂರ‍್ಯಕಾಂತಿ ಬೀಜಗಳ ಬೆಲೆ ದಾರಣೆಯು ಅದೆರಲ್ಲಿ ಇರುವ ಈ ಲಿನೋಲೈಕ್ ಓಲಿಕ್ ಅಂಶಗಳ ಮೇಲೆ ಆತುಕೊಂಡಿದೆ.

ಸುಲಿದ 100 ಗ್ರಾಂ ಸೂರ‍್ಯಕಾಂತಿ ಬೀಜಗಳಲ್ಲಿ 584 ಕ್ಯಾಲೋರಿ ಕಸುವು ಇದೆ. 51% ಎಣ್ಣೆ ಮತ್ತು 20% ಪ್ರೋಟೀನ್ ಇದೆ. ಇದರಲ್ಲಿ ಪ್ರೋಟೀನ್ ಅಂಶ ಸೂರ‍್ಯಕಾಂತಿ ಎಣ್ಣೆಯ ಜೊತೆಗೆ ಕೂಡಿಕೊಂಡಿರುವುದರಿಂದ ರುಚಿಕರ ಸ್ನ್ಯಾಕ್ ಕೂಡ ಆಗಿದೆ. ತಂಬಾಕು ಮೆಲ್ಲುವ ಚಟವಿರುವ ಕೆಲ ಅಮೆರಿಕ ರಾಜ್ಯಗಳ ಬೇಸ್ ಬಾಲ್ ಆಟಗಾರರು ಸೂರ‍್ಯಕಾಂತಿ ಬೀಜಗಳನ್ನು ತಿನ್ನುತ್ತಾರಂತೆ! ಶೇಂಗಾಕಾಳಿನ ಅಲರ‍್ಜಿ ಇರುವವರು ಸೂರ‍್ಯಕಾಂತಿ ಹಿಂಡಿಯನ್ನು ಬಳಸಬಹುದು. ನಮ್ಮಲ್ಲಿ ಅಶ್ಟು ಇಲ್ಲದಿದ್ದರೂ ಬೆಲಾರಸ್, ರಶ್ಯಾ, ಯುಕ್ರೇನ್ ನಾಡುಗಳಲ್ಲಿ ಸೂರ‍್ಯಕಾಂತಿ ಕಾಳುಗಳಿಂದ ಸಿಹಿ ಚಿಕ್ಕಿ ಮಾಡುತ್ತಾರೆ. ಈ ನಾಡುಗಳಲ್ಲಿ ಸುಲಿದ ಸೂರ‍್ಯಕಾಂತಿ ಕಾಳುಗಳನ್ನು ಲಿಕರ್ ಜೊತೆಗೆ ಸಂಗಟಿ (ಚಾಕಣಾ) ಆಗಿ ಕೂಡ ತೆಗೆದುಕೊಳ್ಳುತ್ತಾರೆ! ಈ ಬೀಜಗಳಿಂದ ಎಣ್ಣೆ ತೆಗೆದ ಮೇಲೆ ಬರುವ ಹಿಂಡಿ ಪ್ರೋಟೀನ್ ನಿಂದ ತುಂಬಿದ್ದು ಉಸಿರಿಗಳ ಉಣಿಸಾಗಿ (animal food) ಬಳಸಿದರೆ ಎತ್ತು, ದನ, ಕರು, ಆಡುಗಳು ಮೈದುಂಬಿ ಬೆಳೆಯುತ್ತವೆ. ಸೂರ‍್ಯಕಾಂತಿ ತಳಿಯಲ್ಲಿ ‘ಸಣ್ಣಕಾರಳ್ಳು’ ಎಂಬ ತಳಿಯಿದೆ. ಇದು ಸೂರ‍್ಯಕಾಂತಿ ಗಿಡಗಳ ಹಾಗೆ ಆಳೆತ್ತರಕ್ಕೆ ಬೆಳೆಯೋಲ್ಲ, ನೆಲಮಟ್ಟದಲ್ಲಿ ಬೆಳೆಯುತ್ತದೆ. ಇದರ ಸಣ್ಣ ಸಣ್ಣ ಬೀಜಗಳನ್ನು ಇಡಿಯಾಗಿ ಹುರಿದು ಹಿಂಡಿ ಮಾಡಿ ಅಡುಗೆ ಮಾಡುವಾಗ ತರಕಾರಿ ಪಲ್ಯಗಳಿಗೆ (ಅದರಲ್ಲೂ ಕುಂಬಳ ಕಾಯಿ ಪಲ್ಯಕ್ಕೆ) ಹಾಕುವುದು ಬಡಗಣ ಕರ‍್ನಾಟಕ ಮತ್ತು ತೆಂಕಣ ಮಹಾರಾಶ್ಟ್ರದ ಕಡೆ ಚಾಲ್ತಿಯಲ್ಲಿದೆ.

ಸೂರ‍್ಯಕಾಂತಿಯ100 ಗ್ರಾಂ ಎಣ್ಣೆಯಲ್ಲಿ 884 ಕ್ಯಾಲೋರಿ ಶಕ್ತಿ ಇದೆ 84% ಮೊನೊ ಅನ್ಸ್ಯಾಚುರೇಟೆಡ್ ಕೊಬ್ಬಿನ ಅಂಶ ಇದೆ (ಓಮೆಗಾ 9 ಮತ್ತು ಓಮೇಗಾ 6). ಸೂರ‍್ಯಕಾಂತಿ ಎಣ್ಣೆಯಲ್ಲಿ ವಿಟಮಿನ್ E ಹೇರಳವಾಗಿದೆ. ಸೂರ‍್ಯಕಾಂತಿ ಎಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬಿನ ಅಂಶ ಕಡಿಮೆ ಇದೆ. ರಿಪೈನ್ಡ್ ಮತ್ತು ಅನ್ ರಿಪೈನ್ಡ್ (ಗಾಣದೆಣ್ಣೆ) ಸೂರ‍್ಯಕಾಂತಿ ಎಣ್ಣೆಗಳ ಬಳಕೆಗೆ ಬಂದರೆ ರಿಪೈನ್ಡ್ ಎಣ್ಣೆಯನ್ನು ಬಳಸುವುದು ಒಳ್ಳೇದು. ಏಕೆಂದರೆ ರಿಪೈನ್ಡ್ ಎಣ್ಣೆಯ ಹೊಗೆ ಅಂಕ (smoking point) 232 ಡಿಗ್ರಿ ಸೆಲ್ಸಿಯಸ್ ಇದೆ. ತಾಳೆ ಎಣ್ಣೆಗಿಂತ (palm oil) ರಿಪೈನ್ಡ್ ಸೂರ‍್ಯಕಾಂತಿ ಎಣ್ಣೆಯನ್ನು ಕರಿಯುವುದಕ್ಕೆ ಬಳಸಬಹದು. ರಿಪೈನ್ಡ್ ಎಣ್ಣೆಗೆ ಬೇಗನೆ ಮುಗ್ಗು (oxidation) ಆಗುವುದಿಲ್ಲ. ಆದ್ದರಿಂದ ಇದಕ್ಕೆ ಕೆಟ್ಟ ವಾಸನೆ ಬೇಗನೆ ಬಾರದು. ಯಾವುದೇ ಅನ್ ರಿಪೈನ್ಡ್ ಎಣ್ಣೆ ಗಾಳಿ ಬಡಿದು (rancidity) ಬೇಗ ಹಾಳಾಗಿ ಹೋಗುತ್ತದೆ ಮತ್ತು ಕರಿಯುವುದಕ್ಕೆ ಅಶ್ಟು ಸೂಕ್ತವಲ್ಲ.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia1, wikipedia2)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks