ವಿಶಿಯನ್ನು ಗೆಲ್ಲಬಲ್ಲನೇ ಈ ಪ್ರಳಯಾಂತಕ ಹುಡುಗ?
– ರಗುನಂದನ್.
ಈ ತಿಂಗಳ 9ನೇ ತೇದಿಯಿಂದ 28ರ ವರೆಗೆ ಚೆನ್ನಯ್‍ನಲ್ಲಿ ವಿಶ್ವ ಚೆಸ್ ಚಾಂಪಿಯನ್‍ಶಿಪ್ ಆಟ-ಸರಣಿ ನಡೆಯಲಿದೆ. ಈ ಚಾಂಪಿಯನ್‍ಶಿಪ್‍ನಲ್ಲಿ ಒಟ್ಟು 12 ಆಟಗಳು ನಡೆಯಲಿದ್ದು ಇಂಡಿಯಾದ ವಿಶ್ವನಾತನ್ ಆನಂದ್ ಮತ್ತು ನಾರ‍್ವೆಯ ಮಾಗ್ನಸ್ ಕಾರ‍್ಲ್‌ಸನ್ ಸೆಣಸಾಡಲಿದ್ದಾರೆ. ಈ ಆಟಗಳ ಬಳಿಕ ವಿಶ್ವ ಚಾಂಪಿಯನ್ ಯಾರೆಂಬುದು ತೀರ‍್ಮಾನವಾಗಲಿದ್ದು ಚೆಸ್ ನೋಡುಗರಲ್ಲಿ ಕುತೂಹಲ ಕೆರಳಿಸಿದೆ. ಇದರ ಹಿನ್ನಲೆ ತಿಳಿದುಕೊಳ್ಳೋಣ.
ವಿಶ್ವನಾತನ್ ಆನಂದ್‍ರವರು 2012ರಲ್ಲಿ ಇಸ್ರೇಲಿನ ಬೋರಿಸ್ ಗೆಲ್ಪಾಂಡ್ ಅವರನ್ನು ಸೋಲಿಸಿ ವಿಶ್ವ ಚಾಂಪಿಯನ್‍ಶಿಪ್ ಪಟ್ಟ ಪಡೆದಿದ್ದರು. ಮಾಗ್ನಸ್ ಈ ವರುಶದ ಕಾಂಡಿಡೇಟ್ಸ್ ಟೂರ‍್ನಮೆಂಟನ್ನು ಗೆದ್ದು ಆನಂದ್‍ರವರಿಗೆ ನೇರ ಎದುರಾಳಿಯಾಗಿ ನಿಂತಿದ್ದಾರೆ. ಈ ಆಟ-ಸರಣಿಯಲ್ಲಿ ಆನಂದ್‍ರವರ ಮಾಗಿದ ಆಟ (experienced play) ಗೆಲ್ಲುತ್ತದೋ ಇಲ್ಲವೇ ಮಾಗ್ನಸ್‍ನ ಚುರುಕಿನ ಆಟ (dynamic play) ಗೆಲ್ಲುತ್ತದೋ ಕಾದು ನೋಡಬೇಕಾಗಿದೆ.
ಚೆಸ್ ಆಟ ಬೇರೆ ಆಟಗಳಂತಲ್ಲ. ಇಲ್ಲಿ ಆಟಗಾರನ ಮಯ್ಕಟ್ಟು (fitness) ಮುಕ್ಯವಲ್ಲ ಆದರೂ ಮಿದುಳು ಚುರುಕಾಗಿರಬೇಕಾದರೆ ಹದುಳವನ್ನು(health) ಕಾಪಾಡಿಕೊಳ್ಳುವುದು ಮುಕ್ಯ. ಆಟೋಟಗಳಲ್ಲಿ ಆಟಗಾರನ ಅನುಬವಕ್ಕೆ ಹೆಚ್ಚು ಅಳವು ಕೊಡಲಾದರೂ ಚೆಸ್ಸಿನಲ್ಲಿ ಮಿದುಳಿನ ಕೆಲಸ ಬೇರೆ ಆಟಗಳಿಗೆ ಹೋಲಿಸಿದರೆ ಕೊಂಚ ಹೆಚ್ಚಿನದ್ದೇ. ಈ ಕಾರಣಕ್ಕಾಗಿಯೇ ಈ ಚಾಂಪಿಯನ್‍ಶಿಪ್ ಹೆಚ್ಚು ಕುತೂಹಲ ಹುಟ್ಟಿಸಿರುವುದು. ನಾರ‍್ವೆ ನಾಡಿನ ಮಾಗ್ನಸ್‍ಗೆ ಬರಿ 22 ವರುಶವಾದರೆ ಆನಂದ್‌ಗೆ 43 ವರುಶ.
ಕಳೆದ ಇಪ್ಪತ್ತು ವರುಶಗಳಲ್ಲಿ ವಿಶ್ವ ಚೆಸ್ಸಿನಲ್ಲಿ ತಮ್ಮದೇ ಆದ ಚಾಪು ಮೂಡಿಸಿದವರು ವಿಶ್ವನಾತನ್ ಆನಂದ್. ಬರಿ 18ರ ಹರೆಯದಲ್ಲೇ ಗ್ರಾಂಡ್‍ಮಾಸ್ಟರ್ ಪಟ್ಟ ಮುಡಿಗೇರಿಸಿಕೊಂಡಿದ್ದ ಆನಂದ್ ಚೆಸ್ಸಿನ ಹಿರಿಯಾಳುಗಳನ್ನು ಸೋಲಿಸಿ ಬೆರಗು ಮೂಡಿಸಿದ್ದರು. ಇದೇ ಇಪ್ಪತ್ತು ವರುಶಗಳಲ್ಲಿ ಯಾವತ್ತೂ ಟಾಪ್ 10 ಆಟಗಾರರ ಪಟ್ಟಿಯಿಂದ ಆಚೆ ಬಂದಿಲ್ಲದಿರುವುದು ಅವರ ಚಾಕಚಕ್ಯತೆಯನ್ನು (competence) ತೋರಿಸುತ್ತದೆ. FIDE ರ‍್ಯಾಂಕಿಂಗ್‍ನಲ್ಲಿ ಈಗ ಕಾರ‍್ಲ್‌ಸನ್ 2872 ಅಂಕಗಳನ್ನು ಹೊಂದಿದ್ದಾರೆ. ಆನಂದ್ 2775 ಪಾಯಿಂಟ್‍ಗಳನ್ನು ಹೊಂದಿದ್ದಾರೆ. ನೆನಪಿರಲಿ, ಕಾರ‍್ಲ್‌ಸನ್ ಪಡೆದಿರುವ 2872 ಅಂಕಗಳು ಇದುವರೆಗೂ ಯಾವುದೇ ಚೆಸ್ ಆಟಗಾರ ಪಡೆದಿರುವ ಕಡು ಹೆಚ್ಚು ಅಂಕಗಳಾಗಿವೆ. ಇದುವರೆಗೂ ಇವರಿಬ್ಬರ ನಡುವೆ 29 ಆಟಗಳು ಆಗಿದ್ದು ಆನಂದ್ 6 ಗೆದ್ದಿದ್ದರೆ ಮಾಗ್ನಸ್ 3 ಗೆದ್ದಿದ್ದಾರೆ. ಮಿಕ್ಕವು ಡ್ರಾ ಆಗಿವೆ.
ಯಾರು ಗೆಲ್ಲಬಹುದು ?
ಆನಂದ್ ಮಾಗಿದ ಆಟಗಾರನಾಗಿದ್ದರೂ ಸಾಕಶ್ಟು ಚಾಂಪಿಯನ್‍ಶಿಪ್‍ಗಳನ್ನು ಗೆದ್ದಿದ್ದರೂ ತನ್ನ ತಾಳಿಕೆಗೆ (tenacity) ಹೆಸರಾಗಿದ್ದರೂ ಮಾಗ್ನಸ್ ಎಂಬ ಹರೆಯ ಆಟಗಾರನ ಎದುರು ಈ ಸರತಿ ಗೆಲ್ಲುವುದು ಕಶ್ಟವೆಂದೇ ಚೆಸ್ ತಿಳಿವಿಗರ ಅನಿಸಿಕೆ. ಇದಕ್ಕೆ ಸಾಕಶ್ಟು ಸಲುವುಗಳಿವೆ. ಚೆಸ್ ಚಾಂಪಿಯನ್‌ಶಿಪ್‍ಗಳು ನಡೆಯುವ ಮುನ್ನ ಆಟಗಾರರು ಗುಟ್ಟಾಗಿ ಹಳೆಯ ಹೆಸರುವಾಸಿ ಚೆಸ್ ಆಟಗಾರರೊಡನೆ ಪಳಗುತ್ತಾರೆ. ಮಾಗ್ನಸ್ ರಶ್ಯಾದ ಕಾಸ್ಪರೋವ್ ಅವರೊಡನೆ ತಿಂಗಳುಗಳ ಕಾಲ ಪಳಗಿದ್ದಾರೆ ಎಂಬುದು ಸುದ್ದಿಹಾಳೆಗಳ ಗುಸುಗುಸು. ಕಾಸ್ಪರೋವ್ ಆನಂದ್ ಎದುರು ಮುಂಚೆ ಆಡಿದ್ದಾರೆ. ಆದರೆ ಇದೊಂದೆ ಕಾರಣ ಅಲ್ಲ.
ಕಾರ‍್ಲ್‌ಸನ್ ಒಬ್ಬ ಜೀನಿಯಸ್ ಹುಡುಗ. ತನ್ನ ತಂದೆ ಚೆಸ್ ಆಟಕ್ಕೆ ಅವನನ್ನು ಗೊತ್ತುಮಾಡಿದರೂ ಹೆಚ್ಚಾಗಿ ತಾನಾಗಿಯೇ ಕಲಿತವ. ಚೆಸ್ ಜಗತ್ತು ಸೋಜಿಗ ಪಡುವಂತೆ ಮೇಲೇರುತ್ತ ಬಂದಿದ್ದಾನೆ. ಚೆಸ್ಸಿನ ಕಾಯಿಗಳ ಜರುಗಾಟದಲ್ಲಿ ಆನಂದ್‍ಗೆ ಇರುವಶ್ಟು ಹಿಡಿತ ಇಲ್ಲದಿದ್ದರೂ ಮಾಗ್ನಸ್‍ಗೆ ನೆನಪಿನ ಅಳವು, ಬಗೆಯ ಸರಿಸ (mental equlibirum), ಚೂಪು ಕಣ್ಣು ಮತ್ತು ಹೊಸದಾಗಿ ಉಂಕಿಸುವ ಕಸುವು ತನ್ನ ನೆರವಿಗೆ ಬರಬಲ್ಲುದು ಎಂದು ಚೆನ್ನಾಗಿ ತಿಳಿದಿದೆ. ಇದನ್ನು ಅವನ ಚಿಗುರು ಮೀಸೆಯ ಮೊಗದ ಮೇಲಿರುವ ತನ್ನಂಬಿಕೆಯಲ್ಲಿ (self-confidence) ಕಾಣಬಹುದು. ಅವನ ಲೆಕ್ಕಾಚಾರದ ಚುರುಕುತನ ಎಣ್ಣುಕಗಳಿಗೇ ಸಾಟಿಯಾಗಬಲ್ಲದು ಎನ್ನಲಾಗಿದೆ. ಆದರೆ ಆನಂದ್ ಇವೆಲ್ಲವನ್ನು ಮೀರಿ ಹೊಸ ಚಳಕ ಯಾವುದಾದರೂ ಬಳಸಬಲ್ಲರೇ ಎಂಬುದು ಈ ತಿಂಗಳ ಕೊನೆಯವರೆಗೂ ಕಾದುನೋಡಬೇಕಿದೆ. ಈ ಆಟ-ಸರಣಿ ನಡೆಯುವುದು ಚೆನ್ನಯ್ ಊರಿನ ಗ್ರಾಂಡ್ ಹ್ಯಾಟ್ ಹೋಟೆಲಿನಲ್ಲಿ.
(ಚಿತ್ರ ಸೆಲೆ: pub.tv.no)
ಇತ್ತೀಚಿನ ಅನಿಸಿಕೆಗಳು