ಮೂಳೆಗಳ ಒಳನೋಟ

ಯಶವನ್ತ ಬಾಣಸವಾಡಿ.

ಹುರಿಕಟ್ಟಿನ ಏರ‍್ಪಾಟು – ಬಾಗ 2 

ಮೂಳೆಗಳ ಬಗೆಗಿನ ಹಿಂದಿನ ಬರಹವನ್ನು ಮುಂದುವರೆಸುವ ಮುನ್ನ ನಮ್ಮ ಮೂಳೆಗಳ ಕುರಿತ,

ದಿಟ ಚಟಾಕೆಗಳು (fun facts):

1) ಮನುಶ್ಯರ ಮಯ್ಯಲ್ಲಿ ಕಂಡು ಬರುವ ತೀರ ಚಿಕ್ಕದಾದ ಎಲುಬು – ’ಅಂಕಣಿ’ (stapes) ಇದು ಕಿವಿಯಲ್ಲಿ ಕಂಡುಬರುತ್ತದೆ.

2) ಕಾಲಿನಲ್ಲಿರುವ ’ತೊಡೆಮೂಳೆ’ (femur) – ನಮ್ಮ ಮಯ್ಯಲ್ಲಿ ಕಂಡುಬರುವ ಬಹಳ ಗಟ್ಟಿಯಾದ ಹಾಗು ತೀರ ಉದ್ದನೆಯ ಎಲುಬಾಗಿದೆ.

3) ಕೀಲಿಕ/ಹೆಡುಕ (calvicle/collar bone) – ಮನುಶ್ಯರ ಎಲುಬುಗಳಲ್ಲೇ ಅತಿ ಮೆದುವಾದುದು.

ಹುಟ್ಟುವಾಗ ಮನುಶ್ಯರಲ್ಲಿ 300ಕ್ಕೂ ಹೆಚ್ಚು ಎಲುಬುಗಳು ಇರುತ್ತವೆ. ಹರೆಯದ ಕಡೆಗೆ ಬೆಳೆದಂತೆ, ಒಂದಶ್ಟು ಮೂಳೆಗಳು ಒಂದಕ್ಕೊಂದು ಅಂಟಿಕೊಳ್ಳುತ್ತವೆ. ಒಬ್ಬ ಹರೆಯ ತುಂಬಿದ ಮನುಶ್ಯನಲ್ಲಿ ಸರಾಸರಿ 206 ಎಲುಬುಗಳಿರುತ್ತವೆ. ನಮ್ಮ ಮಯ್ಯಲ್ಲಿ ಜೋಡಿಸಲ್ಪಟ್ಟಿರುವ ವಿದಾನಕ್ಕೆ ಅನುಗುಣವಾಗಿ ಎಲುಬುಗಳನ್ನು ಎರಡು ಗುಂಪುಗಳಾಗಿ ವಿಬಾಗಿಸಬಹುದಾಗಿದೆ.

1) ನಟ್ಟೊಡಲ ಎಲುಬುಗಳು (axial skeleton)

2) ಕಯ್ಕಾಲುಗಳ ಎಲುಬುಗಳು (appendicular skeleton)

titta1

ನಟ್ಟೊಡಲ ಎಲುಬುಗಳು ನಮ್ಮ ಮಯ್ ನಡು ಬಾಗದಲ್ಲಿದ್ದು, 80 ಎಲುಬುಗಳಿಂದ ಮಾಡಲ್ಪಟ್ಟಿರುತ್ತವೆ

 • ತಲೆಬುರುಡೆ (skull)
 • ನಾಲಗೆಲ್ಲು (hyoid)
 • ಆಲಿಕೆಯ ಕಿರ್‍ಮೂಳೆಗಳು (auditory ossicles)
 • ಪಕ್ಕೆಲುಬುಗಳು (ribs)
 • ಎದೆಚಕ್ಕೆ (sternum)
 • ಬೆನ್ನೆಲುಬಿನ ಕಂಬ (vertebral column)

ಕಯ್ಕಾಲುಗಳ ಎಲುಬುಗಳು (appendicular skeleton) ನಟ್ಟೊಡಲಿನ ಇಕ್ಕೆಲಗಳಲ್ಲಿ ಇರುತ್ತವೆ. ಇವುಗಳಲ್ಲಿ ಕಂಡು ಬರುವ ಒಟ್ಟು ಎಲುಬುಗಳ ಸಂಕೆ 126.

 • ಕಯ್ಗಳು (upper limbs)
 • ಕಾಲುಗಳು (lower limbs)
 • ಕೀಳ್ಗುಳಿಯ ಸುತ್ತುಕಟ್ಟು (pelvic girdle)
 • ಎದೆಯ ಕಟ್ಟು (pectoral girdle)

ತಲೆಬುರುಡೆ (skull):

titta2

ತಲೆಬುರುಡೆಯು 22 ಎಲುಬುಗಳನ್ನು ಹೊಂದಿರುತ್ತದೆ. ಕೆಳದವಡೆಯನ್ನು (mandible) ಹೊರತುಪಡಿಸಿ, ಉಳಿದೆಲ್ಲ ತಲೆಬುರುಡೆಯ ಮೂಳೆಗಳು ಒಂದಕ್ಕೊಂದು ಬೆಸೆದುಕೊಂಡಿರುತ್ತವೆ (fused). ಮಕ್ಕಳಲ್ಲಿ ತಲೆಬುರುಡೆಯ ಎಲುಬುಗಳು ಒಂದಕ್ಕೊಂದು ಬೆಸೆದುಕೊಂಡಿರದೇ (not fused), ಬೇರೆ-ಬೇರೆಯಾಗಿರುತ್ತವೆ; ಇದು ಮಕ್ಕಳಲ್ಲಿ ತಲೆಬುರುಡೆ ಹಾಗು ಮಿದುಳು ಬೆಳೆಯಲು ನೆರವಾಗುತ್ತದೆ. ತಲೆಬುರುಡೆಗೆ ಹೆಚ್ಚಿನ ಬಲ ಹಾಗು ಮಿದುಳಿಗೆ ಕಾಪುಗಳನ್ನು (protection) ಒದಗಿಸಲು, ಈ ಎಲುಬುಗಳು ದೊಡ್ಡವರಲ್ಲಿ ಬೆಸೆದುಕೊಂಡಿರುತವೆ.

ಕೆಳದವಡೆಯು (mandible), ಬೆಸೆದುಕೊಂಡಿರುವ ತಲೆಬುರುಡೆಯ ಎಲುಬುಗಳಲ್ಲಿ ಒಂದಾದ ಕಣತಲೆಯ ಎಲುಬಿಗೆ (temporal bone), ಜಂಟಿಯ ಮೂಲಕ ಜೋತುಬಿದ್ದಿರುತ್ತದೆ. ತಲೆಬುರುಡೆಯ ಮೇಲಿನ ಬಾಗವನ್ನು ಬುರುಡೆಚಿಪ್ಪು (cranium) ಎಂದು ಕರೆಯುತ್ತಾರೆ; ಇದು ಹೊರಗಿನ ಪೆಟ್ಟು ಹಾಗು ಒತ್ತಡಗಳಿಂದ ಮಿದುಳನ್ನು ಕಾಪಾಡುತ್ತದೆ. ತಲೆಬುರುಡೆಯ ಮುಂಬಾಗದ ಹಾಗು ಕೆಳಬಾಗದ ಎಲುಬುಗಳನ್ನು ಮುಂದಲೆ ಇಲ್ಲವೇ ಮೊಗದ ಮೂಳೆಗಳೆಂದು (facial bones) ಗುರುತಿಸಲಾಗಿದ್ದು, ಇವು ಕಣ್ಣು, ಮೂಗು, ಹಾಗು ಬಾಯಿಗಳ ಆಕಾರ ಹಾಗು ಇರುವಿಕೆಗೆ (support/stability) ನೆರವಾಗುತ್ತವೆ.

ನಾಲಗೆಲ್ಲು (hyoid):

tita3

ನಾಲಗೆಲ್ಲು (hyoid), ”U” ಆಕಾರದಲ್ಲಿರುತ್ತದೆ. ಇದನ್ನು ಕೆಳದವಡೆಯ ಕೆಳಗೆ ಕಾಣಬಹುದು. ಇತರ ಎಲುಬುಗಳಿಗೆ ಹೋಲಿಸಿದರೆ, ನಾಲಗೆಲ್ಲು (hyoid), ಯಾವುದೇ ಎಲುಬು/ಮೆಲ್ಲೆಲುಬುಗಳ ಜೊತೆ ಕೊಂಡಿಯಾಗಿರುವುದಿಲ್ಲ. ಆದ್ದರಿಂದ ಇದನ್ನು ತೇಲೆಲುಬು (floating bone) ಎಂದು ಕರೆಯುತ್ತಾರೆ. ಈ ಎಲುಬು ಉಸಿರ್‍ಗೊಳವೆಯನ್ನು (trachea) ತೆರೆದ ಸ್ತಿತಿಯಲ್ಲಿ ಇಡಲು ಹಾಗು ನಾಲಗೆಯ ಮಾಂಸಗಳಿಗೆ ಆಸರೆಯನ್ನು ಕೊಡಲು ನೆರವಾಗಿದೆ.

ಆಲಿಕೆಯ  ಕಿರ್‍ಮೂಳೆಗಳು (auditory ossicles):

titta4

ಬಡಿಕಿರ್‍ಮೂಳೆ/ಬಡಿಕೆ (malleus), ಅಡಿಕಿರ್‍ಮೂಳೆ/ಅಡಿಕೆ (incus) ಹಾಗು ಅಂಕಣಿ (stapes) – ಇವುಗಳನ್ನು ಒಟ್ಟಾಗಿ ಆಲಿಕೆಯ ಕಿರ್‍ಮೂಳೆಗಳು (auditory ossicles) ಎಂದು ಕರೆಯಲಾಗುತ್ತದೆ. ಇವು ಮನುಶ್ಯರ ಮಯ್ಯಲ್ಲಿರುವ ತುಂಬಾ ಸಣ್ಣ ಮೂಳೆಗಳಾಗಿವೆ. ಇವುಗಳು ಕಣತಲೆಯ ಎಲುಬಿಗೆನೊಳಗೆ (temporal bone) ಇರುವ ಸಣ್ಣ ಗೂಡಿನಲ್ಲಿ ಕಾಣಸಿಗುತ್ತವೆ. ಈ ಎಲುಬುಗಳು ಸಪ್ಪಳವನ್ನು ಕಿವಿದಮಟೆಯಿಂದ (ear drum) ಕಿವಿಯ ಒಳಬಾಗಕ್ಕೆ ರವಾನಿಸಲು ಹಾಗು ಸದ್ದನ್ನು ಹಿಗ್ಗಿಸಲು (amplify) ನೆರವಾಗುತ್ತವೆ.

ಬೆನ್ನೆಲುಬುಗಳು:  (ತಿಟ್ಟ 1 ಮತ್ತು 5 )

titta5

26 ಬೆನ್ನೆಲುಬುಗಳು ಒಟ್ಟುಗೂಡಿ ಮನುಶ್ಯನ ಬೆನ್ನೆಲುಕಂಬವನ್ನು (vertebral column) ಮಾಡುತ್ತವೆ. ಬೆನ್ನೆಲುಕಂಬದ ನಡುಬಾಗದಲ್ಲಿರುವ ಬೆನ್ನೆಲುಕಾಲುವೆಯಲ್ಲಿ (spinal canal), ಮಿದುಳುಬಳ್ಳಿಯನ್ನು (spinal cord) ಕಾಣಬಹುದು. ಬೆನ್ನೆಲುಕಂಬವು ಮಿದುಳುಬಳ್ಳಿಗೆ ಆಸರೆ ಹಾಗು ಕಾಪುವಿಕೆಯನ್ನು ಒದಗಿಸುತ್ತದೆ. ಬೆನ್ನೆಲುಬುಗಳು ನೆಲೆಸಿರುವ  ಬೆನ್ನಿನ ಬಾಗ ಹಾಗು ಆಕಾರದ ಮೇಲೆ, ಅವುಗಳನ್ನು ಕೆಳಕಂಡಂತೆ ಗುಂಪಿಸಬಹುದಾಗಿದೆ.

 • ಕೊರಳಿನ ಬೆನ್ನೆಲುಬುಗಳು (cervical/neck) – 7
 • ಎದೆಗೂಡಿನ ಬೆನ್ನೆಲುಬುಗಳು (thoracic/chest) – 12
 • ಸೊಂಟದ ಬೆನ್ನೆಲುಬುಗಳು (lumbar/lower back) – 5
 • ಮಡಿ (sacrum) – 1
 • ಬಾಲದ ಎಲುಬು (coccyx/tailbone) – 1

ಪಕ್ಕೆಲುಬುಗಳು (ribs) ಮತ್ತು ಎದೆಚಕ್ಕೆ (sternum): (ತಿಟ್ಟ 1, 5, 6)

titta6

ಚೂರಿಯ ಆಕಾರದಲ್ಲಿರುವ ಎದೆಚಕ್ಕೆಯು (sternum), ಎದೆಗೂಡಿನ ಮುಂಬಾಗದ ನಡುಗೆರೆಯಲ್ಲಿ (midline) ಇರುತ್ತದೆ. ಪಕ್ಕೆಲುಬಿನ-ಮೆಲ್ಲೆಲುಬುಗಳ (costal cartilage) ಮೂಲಕ ಪಕ್ಕೆಲುಬಿನ (ribs) ಒಂದು ತುದಿಯು, ಎದೆಯ ಮುಂಬಾಗದಲ್ಲಿ ಎದೆಚಕ್ಕೆಗೆ (sternum) ಅಂಟಿಕೊಂಡಿರುತ್ತದೆ.

ಮನುಶ್ಯರಲ್ಲಿ 12 ಜೊತೆ ಪಕ್ಕೆಲುಬುಗಳಿರುತ್ತವೆ. ಇವು ಎದೆಚಕ್ಕೆಯ ಜೊತೆಗೂಡಿ, ಎದೆಬಾಗದಲ್ಲಿ ಎದೆಗೂಡನ್ನು (rib cage) ಮಾಡುತ್ತವೆ. ಮೊದಲ 7 ಜೊತೆ ಪಕ್ಕೆಲುಬುಗಳನ್ನು ’ದಿಟ-ಪಕ್ಕೆಲುಬುಗಳು’ ಎಂದು ಕರೆಯಲಾಗುತ್ತದೆ. ಏಕೆಂದರೆ, ಇವು ಎದೆಗೂಡಿನ ಬೆನ್ನೆಲುಬುಗಳನ್ನು (thoracic vertebrae) ಪಕ್ಕೆಲುಬಿನ-ಮೆಲ್ಲೆಲುಬುಗಳ (costal cartilage) ಮೂಲಕ ನೇರವಾಗಿ ಎದೆಚಕ್ಕೆಗೆ (sternum) ಹೊಂದಿಸುತ್ತವೆ.

8, 9, ಮತ್ತು 10ನೇ  ಪಕ್ಕೆಲುಬುಗಳು, ಏಳನೆಯ ಪಕ್ಕೆಲುಬಿನ ಮೆಲ್ಲೆಲುಬಿನ (costal cartilage) ಮೂಲಕ ಎದೆಚಕ್ಕೆಗೆ ಅಂಟಿಕೊಳ್ಳುವುದರಿಂದ, ಅವುಗಳನ್ನು ’ಹುಸಿ-ಪಕ್ಕೆಲುಬುಗಳು’ (false ribs) ಎಂದು ಕರೆಯುತ್ತಾರೆ.  11 ಮತ್ತು 12ನೇ ಪಕ್ಕೆಲುಬುಗಳೂ ಹುಸಿ-ಪಕ್ಕೆಲುಬುಗಳ ಗುಂಪಿಗೆ ಸೇರಿದ್ದರೂ, ಅವುಗಳನ್ನು ’ತೇಲು-ಪಕ್ಕೆಲುಬು’ಗಳೆಂದು (floating ribs) ವಿಂಗಡಿಸಲಾಗುತ್ತದೆ. ಏಕೆಂದರೆ, ಇವು ಎದೆಚಕ್ಕೆಗೆ ಅಂಟಿಕೊಂಡಿರುವುದಿಲ್ಲ.

ಎದೆಯ ಕಟ್ಟು (pectoral girdle) ಮತ್ತು  ಕಯ್ಗಳು (upper limbs): (ತಿಟ್ಟ 1, 6, 7)

titta7

ಎದೆಯ ಕಟ್ಟು (pectoral girdle) ಕಯ್ಗಳನ್ನು ನಟ್ಟೊಡಲ ಎಲುಬುಗಳಿಗೆ (axial skeleton) ಜೋಡಿಸಲು  ನೆರವಾಗುತ್ತದೆ. ಎದೆಕಟ್ಟು (pectoral girdle),  ಕೀಲಿಕ/ಹೆಡುಕ (left and right clavicles) ಮತ್ತು ಹೆಗಲೆಲುಬುಗಳಿಂದ (scapula) ಮಾಡಲ್ಪಟ್ಟಿರುತ್ತದೆ.

ಕಯ್ಯಲ್ಲಿನ ಮೇಲ್ಬಾಗದ ಎಲುಬನ್ನು ತೋಳ್ಮೂಳೆ (humerus) ಎಂದು ಕರೆಯಲಾಗುತ್ತದೆ. ಮೇಲ್ತುದಿಯ ತೋಳ್ಮೂಳೆಯು (humerus), ಹೆಗಲೆಲುಬಿನ (scapula) ಜೊತೆಗೂಡಿ ತೋಳಿನಲ್ಲಿ ಒರಳು-ಗುಂಡಿಯ ಜಂಟಿಯನ್ನು (ball & socket joint)  ಮಾಡುತ್ತದೆ.

ಕೆಳತುದಿಯು, ಅರೆಲು (radius) ಹಾಗು ಮೊಣೆಲು (ulna) ಎಂಬ ಮುಂಗಯ್ ಎಲುಬುಗಳ ಜೊತೆಗೂಡಿ, ಮೊಣಕಯ್ ಜಂಟಿಯನ್ನು (elbow joint) ಮಾಡುತ್ತದೆ. ಅರೆಲು (radius) ಮತ್ತು ಮೊಣೆಲು (ulna) ಒಟ್ಟುಗೂಡಿಸಿ ಮುಂದೋಳು (forearm) ಎನ್ನಬಹುದು.

ಮೊಣೆಲು (ulna), ಮುಂದೋಳಿನ ನಡು/ಒಳಬಾಗದಲ್ಲಿದ್ದು (medial), ತೋಳ್ಮೂಳೆಯ (humerus) ಜೊತೆ ಸೇರಿ ತಿರುಗಣೆ ಜಂಟಿಯನ್ನು (hinge joint) ಮಾಡುತ್ತದೆ. ಅರೆಲು (radius), ಮುಂದೋಳನ್ನು (forearm) ಮಣಿಕಟ್ಟಿನ ಜಂಟಿಯ (wrist) ಮಟ್ಟದಲ್ಲಿ ತಿರುಗಿಸಲು ನೆರವಾಗುತ್ತದೆ.

ಮುಂಗಯ್ ಎಲುಬುಗಳು (lower arm bones), ಮಣಿಕಟ್ಟಿನ ಮೂಳೆಗಳ ನೆರವಿನಿಂದ ಮಣಿಕಟ್ಟಿನ ಜಂಟಿಯನ್ನು (wrist) ಮಾಡುತ್ತದೆ. ಈ ಮಣಿಕಟ್ಟಿನ ಎಲುಬುಗಳ ಸಂಕೆ 8. ಇವುಗಳು ಮಣಿಕಟ್ಟಿಗೆ ಬಾಗುವ ಅಳವನ್ನು (flexibility) ಕೊಡುತ್ತವೆ. ಮಣಿಕಟ್ಟಿನ ಎಲುಬುಗಳಿಗೆ  5 ಅಂಗಯ್ ಎಲುಬುಗಳು (metacarpal bones/bones of the hand) ಜೋಡಿಸಲ್ಪಟ್ಟಿರುತ್ತವೆ.

ಒಂದೊಂದು ಅಂಗಯ್ ಎಲುಬುಗಳಿಗೆ (metacarpal bones ), ಒಂದೊಂದು ಬೆರಳುಗಳು ಜೋತುಬಿದ್ದಿರುತ್ತವೆ. ಪ್ರತಿ ಬೆರಳು 3 ಎಲುವೆರಳುಗಳನ್ನು (phalanges) ಹೊಂದಿರುತ್ತವೆ. ಹೆಬ್ಬೆರಳು (thumb) ಮಾತ್ರ 2 ಎಲುವೆರಳುಗಳನ್ನು (phalanges)  ಹೊಂದಿರುತ್ತದೆ.

ಕೀಳ್ಗುಳಿಯ ಸುತ್ತುಕಟ್ಟು (pelvic girdle) ಮತ್ತು ಕಾಲುಗಳು (lower limbs): (ತಿಟ್ಟ 1, 8, 9)

titta8

ಎಡ ಹಾಗು ಬಲ ಚಪ್ಪೆಲುಗಳು (hip bones) ಕೂಡಿ ಮಾಡಲ್ಪಡುವ ಕೀಳ್ಗುಳಿಯ ಸುತ್ತುಕಟ್ಟು (pelvic girdle), ಕಾಲುಗಳನ್ನು ನಟ್ಟೊಡಲಿಗೆ (axial skeleton) ಕೂಡಿಸಲು ನೆರವಾಗುತ್ತದೆ. ತೊಡೆಮೂಳೆ (femur) ಮನುಶ್ಯರಲ್ಲಿ ಕಂಡು ಬರುವ ಅತಿ ದೊಡ್ಡ ಎಲುಬು. ಇದು ತೊಡೆ ಬಾಗದಲ್ಲಿ ಕಂಡುಬರುವ ಒಂದೇ ಒಂದು ಎಲುಬು ಕೂಡ ಹವ್ದು.  ತೊಡೆಮೂಳೆಯು, ಚಪ್ಪೆಲುಬಿನ  ಜೊತೆಗೂಡಿ ಒರಳು-ಗುಂಡಿನ ಜಂಟಿಯನ್ನು (ball and socket joint) ಮಾಡುತ್ತದೆ. ಈ ಜಂಟಿಯನ್ನು ಸೊಂಟಕೀಲು (hip joint) ಎಂದು ಕರೆಯುತ್ತಾರೆ.

ತೊಡೆಮೂಳೆಯ ಮತ್ತೊಂದು ತುದಿಯು, ಕಣಕಾಲೆ (tibia) ಹಾಗು ಮಂಡಿಚಿಪ್ಪುಗಳ (patella) ಜೊತೆಗೂಡಿ ಮಂಡಿ ಜಂಟಿಯನ್ನು (knee joint) ಮಾಡುತ್ತದೆ. ಈ ಮಂಡಿ ಜಂಟಿಯಲ್ಲಿ ಕಂಡು ಬರುವ ಮಂಡಿಚಿಪ್ಪಿನ (patella) ವಿಶೇಶತೆ ಎಂದರೆ, ಈ ಎಲುಬು, ಹುಟ್ಟುವಾಗ ಮನುಶ್ಯರಲ್ಲಿ ಕಂಡುಬರುವುದಿಲ್ಲ. ಆದರೆ, ನಂತರದ ದಿನಗಳಲ್ಲಿ ಮಗು ತೆವಳಲು ಆರಂಬಿಸಿದಾಗ, ಈ ಚಿಪ್ಪು ಮಾಡಲ್ಪಡುತ್ತದೆ.

titta9

ಕಣಕಾಲೆ (tibia) ಮತ್ತು ಸೂಚಿಲುಕ (fibula), ಎಂಬ ಎರಡು ಎಲುಬುಗಳು, ಕಾಲಿನ ಕೆಳಬಾಗದಲ್ಲಿ ಇರುತ್ತವೆ. ಇವೆರಡರಲ್ಲಿ ಕಣಕಾಲೆ, ಸೂಚಿಲುಕ್ಕಿಂತ ದೊಡ್ದದಿದ್ದು, ಹೆಚ್ಚು-ಕಡಿಮೆ ಇಡೀ ಮಯ್ ತೂಕವನ್ನು ಹೊರುತ್ತದೆ. ಕಣಕಾಲೆ (tibia) ಮತ್ತು  ಸೂಚಿಲುಕಗಳು (fibula), ಎಳುದಾಲಿನ (talus) ಜೊತಗೂಡಿ, ಹಿಮ್ಮಡಿ ಜಂಟಿಯನ್ನು (ankle joint) ಮಾಡುತ್ತವೆ.

ಮುಂಗಾಲೆಲುತಂಡ/ರೆಪ್ಪದರ (tarsals) ಏಳು ಸಣ್ಣ ಎಲುಬುಗಳ ಗುಂಪು. ಇದು ಕಾಲಿನ ಹಿಂಬಾಗ ಹಾಗು ಹಿಮ್ಮಡಿಯನ್ನು ಮಾಡುತ್ತದೆ. ಮುಂಗಾಲೆಲುತಂಡವು, ಅಯ್ದು ಅಂಗಾಲೆಲುಬುಗಳ (metatarsals)  ಜೊತೆಗೂಡಿ, ಜಂಟಿಗಳನ್ನು ಮಾಡುತ್ತದೆ.

ಒಂದೊಂದು ಅಂಗಾಲೆಲುಬು (metatarsals), ಕಾಲ್ಬೆರಳುಗಳ ಎಲುವೆರಳುಗಳ (phalanges) ಜೊತೆ ಸೇರಿ, ಜಂಟಿಯನ್ನು ಮಾಡುತ್ತದೆ. ಕಾಲಿನ ಹೆಬ್ಬೆರಳನ್ನು ಹೊರತುಪಡಿಸಿ ಮಿಕ್ಕೆಲ್ಲ ಕಾಲ್ಬೆರಳುಗಳಲ್ಲಿ 3 ಎಲುವೆರಳುಗಳು (phalanges) ಇರುತ್ತವೆ. ಹೆಬ್ಬರಳಿನಲ್ಲಿ, ಕೇವಲ ಎರಡು ಎಲುವೆರಳುಗಳು (phalanges) ಇರುತ್ತವೆ.

ಇಲ್ಲಿಯವರೆಗೆ ಮನುಶ್ಯರ ’ಎಲುಬುಗಳ’ ಏರ‍್ಪಾಟಿನ ಬಗ್ಗೆ ತಕ್ಕಮಟ್ಟಿಗೆ ತಿಳಿಸುವ ಪ್ರಯತ್ನವನ್ನು ಮಾಡಿದ್ದೇನೆ. ಹುರಿಕಟ್ಟಿನ ಏರ್‍ಪಾಟಿನಲ್ಲಿ ಕಂಡುಬರುವ ಇತರ ಅಂಗಗಳನ್ನು ಹಾಗು ಇವುಗಳಿಗೆ ತಗುಲುವ ಬೇನೆಗಳನ್ನು ಮುಂದಿನ ಕಂತುಗಳಲ್ಲಿ ತಿಳಿಸಿಕೊಡುತ್ತೇನೆ.

(ತಿಳಿವಿನ ಮತ್ತು ತಿಟ್ಟ ಸೆಲೆಗಳು: 1. wikispaces.com, 2. wikimedia.org, 3. medical-dictionary, 4. daviddarling, 5. wikipedia, 6. dmacc.edu, 7. people.emich.edu, 8. physio-pedia.com, 9. drugs.com, 10. answers.com

<< ಹುರಿಕಟ್ಟಿನ ಏರ‍್ಪಾಟು – ಬಾಗ 1 

ನಿಮಗೆ ಹಿಡಿಸಬಹುದಾದ ಬರಹಗಳು

4 Responses

 1. smhamaha says:

  ಅಣ್ಣ ಅಂಕಣ ಚನ್ನಾಗಿದೆ .. ಆದರೆ ಈ ಪಾಟಿ ಕನ್ನಡ ಪದಗಳು ಒಟ್ಟಗೆ ಬಂದರೆ ಅರಗಿಸಿಕೊಳಲು ಆಗುವುದಿಲ್ಲ … ಏನು ದೇವ್ರು ಎಲ್ಲಿಂದ ಬಂದವು ಈ ಪದಗಳು ??? “ಕನ್ನಡದ ಅರಿಮೆಯ ಮುತ್ತು – ಡಾII ಡಿ.ಎಸ್‌. ಶಿವಪ್ಪ” ಇಲ್ಲಿಂದ ಬಂದವ ಈ ಪದಗಳು?? … ಕೆಲವು ಪದಗಳು ಹೆಂಗೆ ಬಂತು ಅಂತ ಒಂದು ಅಂದಾಜು ಹೇಳಬಹುದು .. ಮಿಕ್ಕವು ಆಗೋದಿಲ್ಲ .. ನಿಮಗೆ ತೊಂದರೆ ಇಲ್ಲ ಅಂದರೆ ಅಂಕಣ ಚಿಕ್ಕದಾಗಿ ಬರೆದು ಪದಗಳ ಹುಟ್ಟಿನ ಬಗ್ಗೆ ತಿಳಿಸಿ .. ನಾವು ಕೂಡ ಪದ ಕಟ್ಟಲು ನಿಮ್ಮ ಕಟ್ಟಲೆಗಳನ್ನು ಬಳಿಸುವೆವು ..

  ಎತ್ತುಗೆಗೆ .. ಎದೆಚಕ್ಕೆ , ಕುಂಡೆಲು , ಕಿವಿದಮಟೆ etc ಇವು ಏನು ಅಂತ ಊಹಿಸಬಹುದು .. ಆದರೆ ಅರೆಲು , ಮೊಣೆಲು ,ಅಡಿಕೆ ,ಅಂಕಣಿ .. ಇಲ್ಲವೇ ಇಲ್ಲ ನನ್ನ ತಲೆಗೆ ಏನು ಹೊಳಿಲಿಲ್ಲ .. ನನ್ನ ಕೆಳ್ವಿ ಇಶ್ಟೆ ಈ ಪದಗಳನ್ನು ಕಟ್ಟಲು ಒಬ್ಬ ನಾಡಾಡಿ ಕನ್ನಡಿಗನಿಗೆ ಆಗುತ್ತಾ ಅತವ ಈ ಪದಗಳನ್ನು ಉರು ಹೊಡಿಬೆಕಾ ?

 2. @smhamah ….ನನ್ನ ಬರಹವನ್ನು ಓದಿ ಸಲಹೆಗಳನ್ನು ನೀಡಿದ್ದಕ್ಕೆ ತುಂಬಾ ನನ್ನಿ.
  “ಈ ಪಾಟಿ ಕನ್ನಡ ಪದಗಳು ಒಟ್ಟಗೆ ಬಂದರೆ ಅರಗಿಸಿಕೊಳಲು ಆಗುವುದಿಲ್ಲ … ಏನು ದೇವ್ರು ಎಲ್ಲಿಂದ ಬಂದವು ಈ ಪದಗಳು ??? “ಕನ್ನಡದ ಅರಿಮೆಯ ಮುತ್ತು – ಡಾII ಡಿ.ಎಸ್‌. ಶಿವಪ್ಪ” ಇಲ್ಲಿಂದ ಬಂದವ ಈ ಪದಗಳು?? ಕೆಲವು ಪದಗಳು ಹೆಂಗೆ ಬಂತು ಅಂತ ಒಂದು ಅಂದಾಜು ಹೇಳಬಹುದು .. ಮಿಕ್ಕವು ಆಗೋದಿಲ್ಲ .. ನಿಮಗೆ ತೊಂದರೆ ಇಲ್ಲ ಅಂದರೆ ಅಂಕಣ ಚಿಕ್ಕದಾಗಿ ಬರೆದು ಪದಗಳ ಹುಟ್ಟಿನ ಬಗ್ಗೆ ತಿಳಿಸಿ .. ನಾವು ಕೂಡ ಪದ ಕಟ್ಟಲು ನಿಮ್ಮ ಕಟ್ಟಲೆಗಳನ್ನು ಬಳಿಸುವೆವು ..”

  ಒಂದ್-ಎರಡು ಪದಗಳನ್ನು ಹೊರತುಪಡಿಸಿ, ಮಿಕ್ಕೆಲ್ಲ ಪದಗಳನ್ನು ಡಾllll. ಶಿವಪ್ಪ ಅವರ “ವಯ್ದ್ಯ ಪದಕೋಶ” ಅನ್ನೋ ಪದನೆರಕೆಯಿಂದ ತೆಗೆದುಕೊಂಡಿದ್ದೇನೆ. ಇದರಲ್ಲಿ ಅವರು ಪದಗಳ ಮೂಲವನ್ನು ವಿವರಿಸಿಲ್ಲ. ಆದರೆ, ಆ ಹೊತ್ತಿಗೆಯ ಮೊದಲಿಗೆ ಅವರು ಪದಗಳನ್ನು ಕಟ್ಟಿದ್ದು ಬಳಕೆಯಲ್ಲಿರುವ ಹಳ್ಳಿಗಾಡಿನ ಪದಗಳ ಆದಾರದ ಮೇಲೆ ಅಂತ ಇದೆ. ಒಂದಶ್ಟು ಪದಗಳ ಮೂಲವನ್ನು ನೀವು ಹೂಯಿಸಿದಂತೆ, ಮಿಕ್ಕ ಪದಗಳ ಜಾಡು ಹಿಡಿಯುತ್ತ ಹೊರಟರೆ, ಪದಗಳ ಮೂಲ ತಂತಾನೇ ಸಿಗುತ್ತವೆ.
  ಎತ್ತುಗೆಗೆ:
  ೧) ಅಡಿಕೆ = incus…The incus or anvil is the anvil-shaped small bone or ossicle in the middle ear. Incus means “anvil” in Latin. An anvil is a basic tool, a block with a hard surface on which another object is struck . ಅಡಿಕೆ ಬಂದದ್ದು….ಅಡಿಗಲ್ಲು ಅನ್ನೋ ಅರ್ತದಲ್ಲಿ.
  ೨) ಅಂಕಣಿ=stapes= ಕಿವಿಯ ಈ ಬಾಗ ಕುದುರೆಯನ್ನು ಏರುವಾಗ ಬಳಸುವ ಆಸರೆಗೆ ಹೋಲುವುದರಿಂದ ಇಂಗ್ಲಿಶನಲ್ಲಿ ಸ್ಟೇಪ್ಸ ಅಂತಾ ಬಳಸಿದ್ದಾರೆ. ಕನ್ನಡಕ್ಕೆ ತರುವಾಗ ಎರವಲು ಪದವಾದ ರಿಕಾಪುವನ್ನು ರಿಕಾಪಿ ಎಂದರು. ಈ ಪದ ಅರೇಬಿಕ್ ಇರಬಹುದು ಅಂತಾ ಜಿವಿ ಪದನೆರಕೆಯಲ್ಲಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು
  ಅಂಕಣಿ ನಾಮಪದ (ದೇ) ಕುದುರೆಯ ರಿಕಾಪು
  ೩) ಬಡಿಕೆ=malleus……malleus=mallet=hammer….ಬಡಿಯಲು ಬಳಸುವ ವಸ್ತು…”ಬಡಿಕೆ” ಅಂತ ಬಂದಿದೆ.
  ೫) ಮೊಣೆಲು=ulna= ulna is the major contributor to the elbow joint…ಮೊಣಕಯ್ನ ಮುಕ್ಯ ಎಲುಬು ಅನ್ನೊ ಹುರುಳಿನಲ್ಲಿ ಈ ಪದವನ್ನು ಕಟ್ಟಿರಬಹುದು.

  ನೀವು ತಿಳಿಯಬೇಕಾದ ಅಂಶಗಳೆಂದರೆ:
  1) Srikishan Belakavadi Mohan ಅವ್ರು ಗಮನಿಸಿದಂತೆ ಇಂಗ್ಲಿಶ್ ನಲ್ಲಿ ಕಟ್ಟಿರುವ ಹಲವಾರು ಪದಗಳು ಸುಮ್ಮನೆ ಹಾಗೇ ಬಳಕೆಗೆ ಬಂದಿರುವಂತಹವು. ಅದರ ಬರವಣಿಗೆಯ ಹುರುಳು ಬೇರೆ ಇದ್ದು, ಬಳಕೆಯ ಹುರುಳು ಬೇರೆ ಇದೆ. ಶಿವಪ್ಪನವರೂ ಇದೆ ಬಗೆಯಾಗಿ ಒಂದಶ್ಟು ಪದಗಳನ್ನು ಕಟ್ಟಿದಾರೆ ಅನ್ನುವುದು ನನ್ನ ಅನಿಸಿಕೆ. ಇವನ್ನು ಬಾಯಿಪಾಟ ಮಾಡಬೇಕು ಇಲ್ಲವೇ, ಹೊಸ ಪದ ಕಟ್ಟಬೇಕು
  2) “ನನ್ನ ಕೆಳ್ವಿ ಇಶ್ಟೆ ಈ ಪದಗಳನ್ನು ಕಟ್ಟಲು ಒಬ್ಬ ನಾಡಾಡಿ ಕನ್ನಡಿಗನಿಗೆ ಆಗುತ್ತಾ ಅತವ ಈ ಪದಗಳನ್ನು ಉರು ಹೊಡಿಬೆಕಾ ?” ಈ ಬರಹ ಅಡಿಯರಿಮೆಗೆ (basic science) ಸಂಬಂದಿಸಿದ್ದು. ಅಡಿಯರಿಮೆ ಓದುಗರಿಗೆ ಅಶ್ಟಾಗಿ ರುಚಿಸದು. ಇನ್ನು ಒಡಲರಿಮೆಯಂತೂ (anatomy) ಓದಲು ತೀರ “dry subject”. ನಾನು ಮೊದಲೇ ಹೇಳಿರುವಂತೆ, ಪದಗಳ ಮೂಲವನ್ನು ಹುಡಕಬೇಕು. ನಿಮಗೆ ಬೇರೊಂದು ಉಪಾಯ ತಿಳಿದಿದ್ದರೆ ದಯವಿಟ್ಟು ತಿಳಿಸಿ. ಸರಿ ಎನಿಸಿದರೆ ಅಳವಡಿಸಿಕೊಳ್ಳೋಣ.
  “ನಿಮಗೆ ತೊಂದರೆ ಇಲ್ಲ ಅಂದರೆ ಅಂಕಣ ಚಿಕ್ಕದಾಗಿ ಬರೆದು ಪದಗಳ ಹುಟ್ಟಿನ ಬಗ್ಗೆ ತಿಳಿಸಿ “ … ಸಾದ್ಯವಾದರೆ ಮುಂದಿನ ಬರಹಗಳಲ್ಲಿ ಪದಗಳು ಹುಟ್ಟಿದ ಬಗೆಯನ್ನೂ ತಿಳಿಸಲು ಪ್ರಯತ್ನಿಸುತ್ತೇನೆ.
  ಮತ್ತೊಮ್ಮೆ ನಿಮ್ಮ ಸಲಹೆಗಳಿಗೆ ನನ್ನಿ.

  • smhamaha says:

   ತುಂಬಾ ತುಂಬಾ ನಣ್ಮೆಗಳು .. ಇಸ್ಟು ಬಿಡಿ ಬಿಡಿಯಾಗಿ ಬಿಡಿಸಿ ತಿಳಿಸಿ ಬರೆದಿದಕ್ಕೆ ..

   .. ಒಡಲರಿಮೆ dry ಅಂತ ಹೇಳಿದ್ದಿರಾ .. ಆದರು ನೀವು ಅದನ್ನು ಬೊಂಬಾಟಾಗಿ ರುಚಿಯಾಗಿ ಇಲ್ಲಿ ಬಡಿಸಿದ್ದಿರ .. ನನಗು ವಯಸ್ಸು ಆಯ್ತು ಉರು ಹೊಡಿಯೊದಕ್ಕೆ ಕಶ್ಟ .ಅದಕ್ಕೆ ಪದಗಳ ಮೂಲ ಕೇಳಿದ್ದು ಮೆದುಳಿಗೆ ಬೇಗ ನಾಟುತ್ತೆ .. ಇಸ್ಟು ಸಾಕು ಅಲ್ಲಿ ಇಲ್ಲಿ ಹಿಂಗೆ ಪದಗಳು ಹುಟ್ಟಿನ ಬಗ್ಗೆ ತಿಳಿಸಿದರೆ ಓದೋ ನಮಗೂ ಕುಸಿ. ಪುಸ್ತಕಗಳ reference ಕೊಟ್ಟಿದಕ್ಕು ನಣ್ಮೆಗಳು …. ದೇವ್ರು ಹಿಂಗೆ ಮುಂದೆ ಹೆಚ್ಚು ಬರೆಯಿರಿ

 1. 03/02/2014

  […] ಮಯ್ಯಿ ಕುರಿತಾದ ನನ್ನ ಹಿಂದಿನ ಬರಹಗಳ (1, 2, 3) ಮುಂದುವರೆದ ಬಾಗವಾಗಿ ಕಂಡಗಳ (muscles) ಬಗ್ಗೆ […]

ಅನಿಸಿಕೆ ಬರೆಯಿರಿ: