ಪೊದೆಯೊಳಗಿನ ಗವುರಿ ಗಣೇಶ

ಸಿ.ಪಿ.ನಾಗರಾಜ

Copy of IMG_1427

ಮಂಡ್ಯ ನಗರಕ್ಕೆ ನೀರು ಸರಬರಾಜು ಮಾಡುವ ದೊಡ್ಡ ವಾಟರ್ ಟ್ಯಾಂಕಿನ ಬಳಿಯಿರುವ ಗೆಳೆಯರೊಬ್ಬರ ಮನೆಗೆ ಹೋಗುತ್ತಿದ್ದಂತೆಯೇ ಅವರು “ಬನ್ನಿ …ಬನ್ನಿ …ಈ ಕಡೆ ಬನ್ನಿ “ ಎಂದು ಕರೆಯುತ್ತಾ … ತಮ್ಮ ಮನೆಯ ಹಿಂದುಗಡೆಗೆ ಕರೆದುಕೊಂಡು ಹೋದರು . ಅಲ್ಲಿ ಒಂದು ರಾಟೆ ಬಾವಿಯಿದೆ . ಬಾವಿಗೆ ಸೇರಿದಂತೆ ಎಂಟು ಅಡಿ ಎತ್ತರದ ಗೋಡೆಯಿದೆ . “ಈ ರಾಟೆ ಬಾವಿ ಚಪ್ಪಡಿಯ ಮೇಲೆ ಹತ್ತಿ ನಿಂತು , ಗೋಡೆಯ ಆಚೆ ಏನ್ ಕಾಣ್ತದೆ ನೋಡಿ” ಎಂದರು .

“ಯಾಕೆ … ಏನಿದೆ ಅಲ್ಲಿ ? ”

“ನೀವು ಸುಮ್ಮನೆ ಹತ್ತಿ ನೋಡಿ” ಎಂದು ಒತ್ತಾಯ ಮಾಡಿದರು. ಮನಸ್ಸಿಲ್ಲದ ಮನಸ್ಸಿನಿಂದ ರಾಟೆ ಬಾವಿ ಚಪ್ಪಡಿಯ ಮೇಲೆ ಹತ್ತಿ ನಿಂತು ,

ಆಚೆ ಕಡೆಗೆ ಬಗ್ಗಿ ನೋಡಿದೆ .

ಹಸುರೆಲೆಯ ಕಡ್ಡಿಗಳಿಂದ ಮಾಡಿದ  ಒಂದು ಚಿಕ್ಕ ಮಂಟಪದ ಮುಂದೆ ನಾಲ್ಕು ಮಂದಿ ಹುಡುಗರು  ಕುಳಿತಿದ್ದರು . ಮಂಟಪದೊಳಗೆ  ಗವುರಿ ಗಣೇಶನ ಮಣ್ಣಿನ ಪುಟ್ಟ ಗೊಂಬೆಗಳಿದ್ದವು . ಬಗೆಬಗೆಯ ಹೂವುಗಳಿಂದ  ಪೂಜೆ ನಡೆದಿತ್ತು . ಉರಿಯುತ್ತಿದ್ದ ಊದುಕಡ್ಡಿಗಳಿಂದ  ಹೊರಬೀಳುತ್ತಿದ್ದ  ಸುವಾಸನೆಯು ಮಂಟಪದ ಸುತ್ತೆಲ್ಲಾ ಪಸರಿಸಿತ್ತು . ಆ ಹುಡುಗರು ದೇವರನ್ನು ಪೂಜಿಸಲು ಆಯ್ಕೆ ಮಾಡಿಕೊಂಡಿದ್ದ  ಎಡೆಯನ್ನು ಕಂಡು ನಾನು ಅಚ್ಚರಿಗೊಂಡೆ . ವಾಟರ್ ಟ್ಯಾಂಕಿನ  ಪ್ರದೇಶದಲ್ಲಿ  ಸಾರ್‍ವಜನಿಕರು  ಹಾದುಹೋಗದಿರಲೆಂದು, ಅದರ ಎಲ್ಲೆಯ ಸುತ್ತ ಕಟ್ಟಿರುವ ಹತ್ತು ಅಡಿ ಎತ್ತರದ  ಗೋಡೆ ಮತ್ತು ನನ್ನ ಗೆಳೆಯರ ಮನೆಯ ಹಿಂದುಗಡೆ ಕಟ್ಟಿರುವ ಎಂಟು ಅಡಿ ಎತ್ತರದ ಗೋಡೆಯ ನಡುವೆ, ಸುಮಾರು ನಾಲ್ಕು ಅಡಿಗಳ ಎಡೆಯಿದೆ. ಆ ಜಾಗದಲ್ಲಿ ರೋಜವಾರ, ಉಗನಿ ಹಂಬು ಮತ್ತು ನಾನಾ ಬಗೆಯ ಮುಳ್ಳುಗಿಡಗಳ ಪೊದೆ ಬೆಳೆದು ಹಬ್ಬಿದೆ. ಅಂತಹ ಪೊದೆಯೊಳಗೆ  ನುಗ್ಗಿ ಬಂದು …ಪೊದೆಯನ್ನು ಸವರಿ …ಮಟ್ಟ ಮಾಡಿ … ಇಕ್ಕಟ್ಟಾದ ಎಡೆಯಲ್ಲಿ  ಹುಡುಗರು  ಹಸಿರು ಮಂಟಪವನ್ನು ಕಟ್ಟಿ ದೇವರನ್ನು ಪೂಜಿಸುತ್ತಿದ್ದರು . ನಾನು ಬಾವಿ ಕಟ್ಟೆಯ ಮೇಲಿನಿಂದ ಕೆಳಕ್ಕೆ ಇಳಿದು ಬಂದು , ನನ್ನ ಗೆಳೆಯರನ್ನು  ಕುರಿತು “ಬನ್ನಿ … ಹುಡುಗರ ಹತ್ತಿರ ಹೋಗೋಣ . ಅದ್ಯಾಕೆ  ಯಾರ ಕಣ್ಣಿಗೂ  ಬೀಳದ  ಜಾಗದಲ್ಲಿ ದೇವರನ್ನು ಪೂಜಿಸುತ್ತಿದ್ದಾರೆ ಅಂತ ಕೇಳೋಣ” ಎಂದೆ.

ಈಗ ನಾವಿಬ್ಬರೂ ಕುತೂಹಲದಿಂದ ಮನೆಯನ್ನು ಬಳಸಿಕೊಂಡು , ಅಲ್ಲಿಗೆ ಹೋಗಲು ಅಡಿಯಿಟ್ಟೆವು . ಆದರೆ ಎರಡು ದೊಡ್ಡ ಗೋಡೆಗಳ ನಡುವಣ ಎಡೆಯಲ್ಲಿ  ಗಿಡಗಂಟೆಗಳು  ಬೆಳೆದು ಹೆಣೆದುಕೊಂಡಿದ್ದರಿಂದ , ಒಳಹೋಗಲು  ತಲೆ ಬಗ್ಗಿಸಿ , ನಡು ಬಗ್ಗಿಸಿ  ತೆವಳಿಕೊಂಡು ಹೋಗಬೇಕಾಗಿತ್ತು . ನಾವು ಅದರೊಳಗೆ  ನುಗ್ಗಿ ಹೋಗುವುದಕ್ಕೆ  ಹಿಂಜರಿದು ,  ಬಾವಿಯ ಕಟ್ಟೆಯ ಬಳಿಗೆ ಹಿಂದಿರುಗಿದೆವು . ನಾನು ಮತ್ತೆ ಬಾವಿ ಕಟ್ಟೆಯ ಮೇಲೇರಿ  ನಿಂತು , ಎತ್ತರದ ಗೋಡೆಗಳ ನಡುವೆ ಬಗ್ಗಿ ನೋಡುತ್ತಾ … ಆ ಹುಡುಗರೊಡನೆ  ಮಾತನಾಡತೊಡಗಿದೆ .

“ಇದ್ಯಾಕೆ … ಇಲ್ಲಿ … ಈ  ಸಂದೀಲಿ … ಪೂಜೆ  ಮಾಡ್ತಿದ್ದೀರಿ” ಎಂದು ಪ್ರಶ್ನಿಸಿದೆ. ಅವರಲ್ಲಿ  ದೊಡ್ಡವನಾಗಿದ್ದ ಒಬ್ಬನು- “ ಇನ್ನೆಲ್ಲೂ  ಜಾಗ  ಸಿಕ್ಕಿಲಿಲ್ಲ … ಅದಕ್ಕೆ” ಎಂದು ಉತ್ತರಿಸಿದ. ಬಾವಿ ಕಟ್ಟೆಯ ಕೆಳಗೆ ನಿಂತಿದ್ದ ನನ್ನ ಗೆಳೆಯರು- “ಅವರನ್ನ… ನೀವು ಯಾರು ಅಂತ ಕೇಳಿ ತಿಳ್ಕೊಳಿ” ಎಂದು ಸೂಚಿಸಿದರು.

ಆಗ ನಾನು ಆ ಹುಡುಗರ ಹೆಸರನ್ನು ಮತ್ತು ಅವರ ಹಿನ್ನೆಲೆಯನ್ನು ಕೇಳಿ ತಿಳಿದುಕೊಂಡೆ. ಅವರೆಲ್ಲಾ  ವಾಟರ್ ಟ್ಯಾಂಕಿಗೆ  ಹತ್ತಿರದ ಬಡಾವಣೆಯೊಂದರಲ್ಲಿ ವಾಸಿಸುತ್ತಿರುವ ಸಾಬರ ಹುಡುಗರು. ಆರೇಳು ವರುಶದ ವಯೋಮಾನದ ಇಬ್ಬರು ಶಾಲೆಗೆ ಹೋಗುತ್ತಿದ್ದರು. ಎಂಟು ವರುಶದ  ಒಬ್ಬನು ಸಯ್ಕಲ್ ಶಾಪಿನಲ್ಲಿಯೂ, ಹತ್ತು ವರುಶದ ಮತ್ತೊಬ್ಬನು  ಶೋ-ರೂಮ್  ಒಂದರಲ್ಲಿ  ಕೆಲಸದಲ್ಲಿದ್ದನು. ಸಂಪಾದನೆ ಮಾಡುತ್ತಿದ್ದ ಈ ಇಬ್ಬರು ಹುಡುಗರು ಪ್ರತಿ ತಿಂಗಳು ತುಸು ದುಡ್ಡನ್ನು ಮಿಗಿಸಿ, ಗವುರಿ-ಗಣೇಶನ ಹಬ್ಬದ ಸಮಯದಲ್ಲಿ ಈಗ ಮೂವತ್ತು-ನಲವತ್ತು ರೂಪಾಯಿಗಳನ್ನು ವೆಚ್ಚ ಮಾಡಿ ವಿಗ್ರಹಗಳನ್ನು ತಂದು ಇಲ್ಲಿ ಪೂಜಿಸುತ್ತಿದ್ದರು .

“ನೀವು  ಯಾಕ್ರೋ … ಗವುರಿ-ಗಣೇಶನ ಪೂಜೆ ಮಾಡ್ತಾ ಇದ್ದೀರಿ” ಎಂದು ಮುಗುಳ್ನಗುತ್ತ  ಪ್ರಶ್ನಿಸಿದ  ನನಗೆ, ಆ ಮಕ್ಕಳು ಬಹಳ ಸರಳವಾಗಿ ಉತ್ತರಿಸಿದರು. “ಪೂಜೆ ಮಾಡ್ಬೇಕು  ಅಂತ ಆಸೆಯಾಯ್ತು … ಅದಕ್ಕೆ”.

ಅವರ ಮಾತುಗಳನ್ನು ಕೇಳಿ ಅರೆಗಳಿಗೆ ನಾನು ಮೂಕನಾದೆ. ಜಾತಿ-ಮತ-ದೇವರುಗಳ ಬಗೆಗೆ ಯಾವುದೇ ಬಗೆಯ ಸೆಳೆತಕ್ಕೆ ಒಳಗಾಗುವುದಕ್ಕೆ ಮೊದಲು ಮಾನವ ಜೀವಿಯು ಹೊಂದಿರುವ ತಿಳಿಯಾದ ಮನಸ್ಸಿನ ತುಡಿತ…ಆ ಮಕ್ಕಳ  ಉತ್ತರದಲ್ಲಿತ್ತು. ಹಿಂದು ದರ್‍ಮದ ತಮ್ಮ ಓರಿಗೆಯ ಮಕ್ಕಳು ಹಬ್ಬದ ದಿನಗಳಲ್ಲಿ  ಬೀದಿಬೀದಿಗಳಲ್ಲಿ ಬಹಿರಂಗವಾಗಿ  ಗವುರಿ-ಗಣೇಶರನ್ನು ಮೆರೆಸುತ್ತಾ…ಮನಬಂದಂತೆ  ಕುಣಿದು ಕುಪ್ಪಳಿಸುತ್ತಿರುವಾಗ…ದಾರ್‍ಮಿಕ ಆಚರಣೆಗಳ ಮಿತಿಯಿಂದಾಗಿ, ಅಂತಹ ಸಡಗರದಿಂದ ದೂರವಾಗಿರುವ ಸಾಬರ ಈ ಮಕ್ಕಳು…ಗೋಡೆಗಳ ಮರೆಯಲ್ಲಿ ಗುಟ್ಟಾಗಿ ಗವುರಿ-ಗಣೇಶರನ್ನು ಪೂಜಿಸುತ್ತಾ…ಆನಂದವನ್ನು ಪಡೆಯುತ್ತಿದ್ದರು.

(ಚಿತ್ರ: ಬರತ್ ಕುಮಾರ್)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: