‘ನಾ ಮಾಡಬಲ್ಲೆ’ ಎಂಬ ಅಳವು

ಶ್ರೀಕಿಶನ್ ಬಿ. ಎಂ.

willpower- titta

ಸೆಲವಿನಳವು (willpower) – ಈ ಬಗ್ಗೆ ನಾವು ಹಲವು ಕಡೆ ಕೇಳಿರುತ್ತೇವೆ. ಮೆಚ್ಚುಗೆಯ ಮಂದಿಯ ಬಾಳುನಡವಳಿಯ ಬರಹಗಳಿರಬಹುದು ಇಲ್ಲವೇ ಹಾಗೇ ಸುಮ್ಮನೆ ಹುರಿದುಂಬಿಕೆಯ ವಿಶಯಗಳ ಬಗ್ಗೆ ಓದಿದಾಗಲೋ ವಿಚಾರ ಮಾಡಿದಾಗಲೋ ಮಾತಾಡಿಕೊಂಡಾಗಲೋ ನಮ್ಮೊಳಗಿನ ಸೆಲವಿನಳವಿನ ಬಗ್ಗೆ ಸಾಕಶ್ಟು ತಿಳಿದಿರುತ್ತೇವಂತ ಹೇಳಬಹುದು. ಅರಿಮೆಯು ಇದನ್ನು ಒಂದು ‘ಗುಣ’ವೆಂದೇ ಹೇಳಿ, ಇದು ಮನುಶ್ಯನಲ್ಲಿ ಕಂಡುಬರುವುದು, ಬೇರೆ ಉಸುರಿಗಳಲ್ಲಿ ಅಲ್ಲ, ಎನ್ನುತ್ತದೆ. ಕೆಲಕಡೆ ಇದಕ್ಕೆ ಎಲ್ಲೆಯೇ ಇಲ್ಲವೆಂದೂ ಓದಿರುತ್ತೇವೆ.

ಯೋಗ, ತಾಯ್ಚಿ, ಮತ್ತಿತರ ತನ್ಪಳಗುವಿಕೆಗಳು (disciplines) ಇಂತಹದಕ್ಕೆ ಹೆಚ್ಚು ಒತ್ತು ನೀಡಿವೆ. ಇನ್ನು ಕೆಲವೆಡೆಯ ಬರಹಗಳು, ‘ಇರವುನೋಟದಿಂದ (practical) ನೋಡಿದಾಗ ಇದು ಹಿಡಿದ ಕೆಲಸ ಮಾಡಿ ಮುಗಿಸಲು ನೆರವಿಗೆ ಬರುವುದು, ಆದರೆ ಇದಕ್ಕೆ ಎಲ್ಲೆಯೇ ಇಲ್ಲ ಎಂದು ಹೇಳುವುದರಲ್ಲಿ ಹುರುಳಿಲ್ಲ, ಅದು ದಿಟವಾಗುವುದಿಲ್ಲ’, ಎಂದು ಹೇಳುತ್ತವೆ.

ಈಚೆಯ ಅರಕೆಯೊಂದು ಇದರ ಬಗ್ಗೆ ತನ್ನ ನಿಲುವನ್ನು ಹೀಗೆ ಹೇಳುತ್ತದೆ,

ಸೆಲವನ್ನು ಒಂದು ಮೇರೆಯುಳ್ಳ ಒಡಮೆ (finite resource) ಎಂದು ಬಗೆಯುವವರು ಸಾಮಾನ್ಯವಾಗಿ ಒಂದು ಹಿಡಿದ ಕಶ್ಟದ ಕೆಲಸವನ್ನು ಮುಂದುವರೆಸಲು ಇಲ್ಲವೇ ಸಿಕ್ಕಲಿನಿಂದ ಬಿಡಿಸಿಕೊಳ್ಳಲು ಹುರಿದುಂಬಿಕೆಗಾಗಿ ಏನಾದರೂ ‘ಹಿಡಿದುನಿಲಿಸುವಿಕೆ’ಯನ್ನು ಎದುರುನೋಡುತ್ತಾರೆ.

ಆದರೆ ಸೆಲವಿನಳವಿನ ಮೇರೆ ಇಲ್ಲಮೆಯ ಬಗ್ಗೆ ನಂಬಿಕೆ ಇರುವವರು ಹೀಗೆ ಯೋಚಿಸಲಾರರು, ಈ ನಿಟ್ಟಿನಲ್ಲಿ ಒಬ್ಬನ ನಂಬಿಕೆಯನ್ನು ಬಳಸಿಕೊಂಡು ಅವನು ಮಾಡುವ ಕೆಲಸದ ಅಚ್ಚುಕಟ್ಟುತನವನ್ನು ಹೇಗೆ ಬೇಕಾದರೂ ಮಾರ್‍ಪಡಿಸಬಹುದು, ಎನ್ನುತ್ತದೆ ಈ ಅರಕೆ. ಇಂತಹ ನೋಟದಿಡುವಿಕೆಗಳನ್ನು ಅಮೇರಿಕಾದ ‘ಅರಿಮೆಗಳ ಕೇಂದ್ರ ಅಕ್ಯಾಡೆಮಿಯು ಇತ್ತೀಚೆಗೆ ಅಚ್ಚು ಹಾಕಿಸಿತು. ‘ಸೆಲವಿನಳವೆನ್ನುವುದು ಬೇಗ ಬರಿದಾಗುತ್ತಾ ಹೋಗುವಂತಹದ್ದು’ ಎನ್ನುವ ಹಿಂದಿನ ಅದ್ಯಯನಗಳನ್ನು ಇದಿರುನುಡಿಯುತ್ತದೆ.

timthumb

ಇತ್ತೀಚಿನ ಕೆಲವು ವರ‍್ಶಗಳಿಂದ ತಕ್ಕಮಟ್ಟಿನ ಎಣಿಕೆಯ ಅರಕೆಗಳು ಹೇಳುತ್ತಿದ್ದುದೇನಂದರೆ, ಸೆಲವಿನಳವು ಒಂದು ನರಕಟ್ಟಿನಂತೆ, ಹೆಚ್ಚಿನ ಜಗ್ಗಾಟದಿಂದ ದಣಿದುಬಿಡುತ್ತದೆ ಮತ್ತು ಕೆಲವು ಓದುವಿಕೆಗಳು, ಮಯ್ ನೇರದ ಮೇಲ್ದೂಡುಗೆಯಿಂದ (physical boost) ಕುಗ್ಗುತ್ತಿರುವ ಸೆಲವಿನಳವನ್ನು ಮರು-ತುಂಬಿಸಬಹುದು.

ಎತ್ತುಗೆಯೊಂದರಲ್ಲಿ, ಒಂದು ಅರಕೆಯಲ್ಲಿ ಪಾಲ್ಗೊಳ್ಳುಗರು ಸಕ್ಕರೆ ಸೇರಿಸಿದ ಕುಡಿಗೆ(drink)ಯೊಂದನ್ನು ಕುಡಿದು, ಮಾನಸಿಕವಾಗಿ ಪೋಟಿಯೊಡ್ಡುವ ಕೆಲಸದ ನಂತರವೂ ತನ್ನಂಕೆಯನ್ನು ಉಳಿಸಿಕೊಂಡರು. ಇದ್ದ ನಿಲುವೇನೆಂದರೆ, ಸೆಲವಿನಳವು ಕಸುವಳವನ್ನು (energy) ಹೀರಿ ಮಿದುಳಿನ ಗ್ಲೂಕೋಸ್ ಒದಗಿಕೆಯನ್ನು ಕುಗ್ಗಿಸುತ್ತದೆ. ಹೀಗಾಗಿ ಮಯ್ಗೆ ಆಗುವ ಸಕ್ಕರೆಯ ಪೂರಯ್ಕೆಯಿಂದ ಮಿದುಳಿಗೆ ಗ್ಲುಕೋಸ್ ನೆರವಿನಿಂದ ಹುರುಪು ಮರುಕಳಿಸುತ್ತದೆಂದು ಹಿಂದಿನ ಓದುಗೆಗಳು ಹೇಳುತ್ತಿದ್ದವು.

ಸ್ಟಾನ್ಪೋರ್‍ಡ್ ಅರಕೆಯೆಡೆಯ ಮನದರಿವಿಗರಾದ ಡ್ವೆಕ್ ಮತ್ತು ಅವರ ಒಡಗೆಯ್ಯುಗರು, ಜರ್‍ಮನಿ, ಸ್ವಿಟ್ಜರ್‍ಲ್ಯಾಂಡ್, ಅಮೆರಿಕದಲ್ಲಿನ ಒಟ್ಟು 87 ಮೇಲುಶಾಲೆಯ ಓದುಗರನ್ನು, ಸೆಲವಿನಳವಿನ ಬಗ್ಗೆ ತಮ್ಮ ನಂಬಿಕೆಗಳನ್ನು ಮುಂದಿಡುವಂತೆ ಕೇಳಿದರು. ಅವರಲ್ಲಿ ಕೆಲವರು ಸೆಲವಿನಳವನ್ನು ಕುರಿತಾಗಿ, ಅದು ನರಕಟ್ಟಿನ-ಹೊಳಹಿನಂತಹುದು ಎಂದು ಒಪ್ಪಿಗೆ ಸಲ್ಲಿಸಿದವರಾದರೆ, ಮಿಕ್ಕಿದವರು, ಸೆಲವೆನ್ನುವುದು ಹೇರಳವಾಗಿ ಇರುವುದು, ಅದನ್ನು ಬಳಸಿದಶ್ಟೂ ಅದು ಮತ್ತು ಬೆಳೆಯುತ್ತದೆಂದು ತಮ್ಮ ತಮ್ಮ ಅನಿಸಿಕೆಗಳನ್ನು ತಿಳಿಸಿದರು.

ಇದರ ಬಳಿಕ ಓದುಗೆಗೆ ಒಳಪಟ್ಟ ವಿದ್ಯಾರ್‍ತಿಗಳಿಗೆ ಮನಸಿಗೆ ಪೋಟಿಯಿಡುವ ಕೆಲಸಗಳಿಗೆ ತೊಡಗಿಸುತ್ತ, ಮೊದಲಿಗೆ, ಕೆಲ ಸಿಕ್ಕಲಿನ ನಿಯಮಗಳಂತೆ ಒಂದು ತಿರುಳಿನ ಕೆಲಬಗೆಯ ಬರಿಗೆಗಳನ್ನು ಗೀಟು ಹಾಕುವುದು, ಎರಡನೆಯ ಕೆಲಸದಲ್ಲಿ, ಪಾಲುಗೊಂಡವರಿಗೆ ಮನದ ಉರವಣೆಯನ್ನು (impulse) ತಡೆಯುವಂತೆ ತಿಳಿಸಿದರು. ಎತ್ತುಗೆಗೆ, ಒಂದು ಬಣ್ಣದಲ್ಲಿ (ತಿಟ್ಟದಲ್ಲಿ) ಅದರೊಳಗೆ ಬರೆದ ಆ ಬಣ್ಣದ ಹೆಸರು ಬೇರೊಂದು ಬಣ್ಣದಲ್ಲಿ ಇದ್ದರೆ ಅದನ್ನು ಓದದೇ ಇರುವಂತದ್ದು.

ಈ ಪ್ರಯೋಗದಲ್ಲಿ ಕಂಡದ್ದೇನೆಂದರೆ, ಮೇರೆಯಿರುವ ಸೆಲವನ್ನು ಯಾರಾರು ನಂಬಿದ್ದರೋ, ಅವರು ಮೊದಲ ಕೆಲಸದ ಬಳಿಕವೇ ದಣಿವನ್ನು ಕಂಡು, ಎರಡನೆಯದರಲ್ಲಿ ತುಸು ಕಳಪೆಯಾಗಿ ಕೆಲಸವನ್ನು ನಡೆಸಿದರು. ಆದರೆ ಮೊದಲ ಎಸಕದ ಬಳಿಕ ಸಕ್ಕರೆಯಂತಹ ಕುಡಿಗೆಯನ್ನು ಸೇವಿಸಿದಾಗ ಎರಡನೆಯ ಕೆಲಸದಲ್ಲಿ ಏರುಗೆ ಕಂಡು ಬಂದಿತು. ಆದರೆ ಸೆಲವು ಅಳಿಯದೆಂದು ನಂಬಿದ ಮಂದಿ ಮೊದಲ ಕೆಲಸದ ಬಳಿಕವೂ ದಣಿವನ್ನು ಕಾಣದೆಯೋ ಇಲ್ಲವೇ ಲೆಕ್ಕಿಸದೆಯೋ ಎರಡನೆಯ ಕೆಲಸವನ್ನು ಯಾವ ಮೇಲ್ದೂಡುಗೆ ಸೇವಿಸದೆಯೂ ಮಾಡಿ ಮುಗಿಸಿದರು.

ನಂಬಿಕೆಯ ಶಕ್ತಿಯೇ?

ಆದರೆ ಇಶ್ಟಿದ್ದರೂ, ಸೆಲವಿನಳವಿನ ಬಗೆಗಿನ ನಂಬಿಕೆಯು ಅವರ ನೆಗಳಿಕೆಯ (performance) ಮೇಲೆ ಪ್ರಬಾವ ಬೀರಿತೆಂದು ಸ್ಪಶ್ಟವಾಗಿ ಹೇಳಲಾಗದು. ಏಕಂದರೆ ಸೆಲವಿಗೆ ಮೇರೆಯಿದೆ ಎಂದು ನಂಬಿದವರು, ತಮ್ಮ ತಮ್ಮ ಬಲ್ಮೆಯನ್ನು ಅವರಿಗೆ ಕಂಡ ದಿಟದಲ್ಲಿ ಮರುಬಗೆದು, ತಾವು ಬೇಗನೆ ದಣಿಯುವರೆಂದು ಮನಗಾಣುತ್ತಿರಬಹುದು.

ಈ ಆಗುವಿಕೆಯನ್ನು ತಳ್ಳಿ ಹಾಕುವ ಸಲುವಾಗಿ, ಅರಕೆತಂಡವು ಮತ್ತೊಂದು ಗುಂಪಿನ ಮಂದಿಗೆ ಒಂದು ಒರೆತವನ್ನು (survey) ನೀಡಿತು. ಹೇಗೆಂದರೆ, ಒಂದು ಒರೆತವು ಸೆಲವಿನ ಎಲ್ಲೆಯ ಬಗ್ಗೆ, ಮತ್ತೊಂದು ಒರೆತವು ಅದರ ಮಿಗುತೆಯ (abundance) ಬಗ್ಗೆ ಮನಸಿಗೆ ಮೆಲ್ಲಗೆ ದೂಡಿಕೆಯನ್ನು ಉಂಟುಮಾಡುವಂತೆ ನಡೆಸಲಾಯಿತು.

ಸೆಲವಿನಳವು ಹೆಚ್ಚಿಲ್ಲದ್ದು ಎಂದು ದೂಡಲ್ಪಟ್ಟವರು, ಚೆನ್ನಾಗಿ ಕೆಲಸ ಮುಗಿಸಲು ಸಕ್ಕರೆಯ ಕುಡಿಗೆಯ ಬೇಡಿಕೆಯನ್ನು ತೋರಿದರು. ಇದಕ್ಕೆ ಎದುರಾದ ಬಾವನೆಗೆ ದೂಡಲ್ಪಟ್ಟವರು, ಇದರ ಅಗತ್ಯ ತೋರದೆ ಮುಂದುವರೆದರು.

“ಈ ಅರಕೆಯ ದೊರೆತಗಳಿಂದ ತಿಳಿಯುವುದೇನೆಂದರೆ, ಒಡಲುನೋಟದಿಂದ ನೋಡಿದಾಗ ಸೆಲವಿನಳವು ಕುಗ್ಗುವಂತಹ ಒಡಮೆಯಲ್ಲ, ಬದಲಾಗಿ, ಮಂದಿಯ ನಂಬಿಕೆಗಳು ಅವರ ನಡತೆ-ನೆಗಳಿಕೆಗಳನ್ನು ರೂಪಿಸುತ್ತಿರುತ್ತವೆ”, ಎನ್ನುತ್ತಾರೆ ಡ್ವೆಕ್. “ಸೆಲವಿನಳವಿಗೆ ಎಲ್ಲೆಯಿದೆಯೆಂದು ನಂಬುವ ಮಂದಿ, ತಮ್ಮ ಅಳವು-ಒಡಮೆಗಳ ಬಗ್ಗೆ ಹೊತ್ತೊತ್ತಿಗೆ ಹೊಳಹು ನಡೆಸುತ್ತಿರುತ್ತಾರೆ” ಎಂದು ಈ ಪ್ರಯೋಗದಿಂದ ನಾವು ನಮ್ಬಿದ್ದೇವೆ. “‘ನನಗೆ ಹಸಿವಾಗುತ್ತಿದೆಯೇ? ಏರುಗೆಯ ಅಗತ್ಯ ಬಿದ್ದಿದೆಯೇ?’ ಎಂದು ಯೋಚಿಸುತ್ತ, ಆ ಹೊತ್ತಿನ ಮರುಪೊರೆತ ಇಲ್ಲದೆ ಕೆಲಸ ಮುಂದುವರೆಸಲು ಹಿಂದೇಟು ಹಾಕುತ್ತಾರೆ”.

ಈ ವಿಶಯದ ಬಗ್ಗೆ ಹಿಂದೆ ನಡೆಸಿದ ಓದುಗೆಗಳ ತೋರುಕೆಗಳಲ್ಲಿ, ಸೆಲವಿನಳವು ಕುಗ್ಗಿ ಹೋಗುವಂತಹದ್ದು, ಏಕೆಂದರೆ ಹೆಚ್ಚಿನ ಮಂದಿ ಅದರ ಎಲ್ಲೆಯ ಬಗ್ಗೆ ಹೊಳಹು ಇಟ್ಟುಕೊಂಡು ತಮ್ಮ ನಂಬಿಕೆಗಳನ್ನು ಕಟ್ಟಿಟ್ಟಿರುತ್ತಾರೆ, ಎಂದು ಹೇಳಿವೆ.

ಈ ನಿಟ್ಟಿನಲ್ಲಿ ಡ್ವೆಕ್ ರ ತಂಡವು, ಮುಂದೆ ಮತ್ತೂ ಹೆಚ್ಚಿನ ಅರಕೆಗಳನ್ನು ನಡೆಸಿ ಮೇಲುಕಲಿಕೆಯ ಮುನ್ನವೇ ಮಕ್ಕಳ ನಂಬಿಕೆಗಳನ್ನು ರೂಪಿಸುವ ನಿಲುವನ್ನು ತಳೆದಿದೆ. “ಸೆಲವಿನಳವೆನ್ನುವುದು ಒಂದು ತನ್ನುಟ್ಟಿನ (self – generating) ಒಡಮೆ, ಹೆಚ್ಚೆಚ್ಚು ಯತ್ನಿಸಿದಶ್ಟೂ, ಕಾದಶ್ಟೂ ಹೆಚ್ಚು ಬೆಳೆಯುವಂತದ್ದು, ಹಾಗೂ ಮತ್ತೂ ದೊಡ್ಡ, ತೊಡಕಿನ ಕೆಲಸವನ್ನು ಮಾಡಿಸಬಲ್ಲದ್ದು- ಎಂದು ಮಕ್ಕಳಿಗೆ ತಿಳಿಸಬಯಸುತ್ತೇವೆ. ಹಾಗೂ ಹೀಗೆ ಮಾಡಿ ಅದು ನಾಟುವುದನ್ನೂ ನೋಡಿದ್ದೇವೆ” ಎನ್ನುತ್ತಾರೆ.

(ತಿಟ್ಟಸೆಲೆ: www.lorenzoquinn.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: