ಕುತೂಹಲ ಪುಟಿಸಿದ ಆಸ್ಟ್ರೇಲಿಯನ್ ಪುಟಿ
– ಚೇತನ್ ಜೀರಾಳ್.
ಮೆಲ್ಬರ್‍ನಿನಲ್ಲಿರುವ ನಮ್ಮ ಮನೆಯ ಹತ್ತಿರುವೇ “ಎತಿಹಾದ್” ಅನ್ನುವ ಹೆಸರಿನ ಒಂದು ಆಟದ ಮಯ್ದಾನವಿದೆ. ಬಹುಶಹ ಅದು ಪುಟ್ಬಾಲ್ ಆಟದ ಬಯಲಿರಬೇಕು ಎಂದು ನಾವು ಅಂದುಕೊಂಡಿದ್ದೆವು. ಒಂದು ದಿನ ನಮ್ಮ ಮನೆಗೆ ಬಂದಿದ್ದ ನಮ್ಮ ಮನೆಯ ಒಡೆಯ ಇದು ಪುಟಿ (Footy ಇಲ್ಲವೇ Australian Rules Football) ಆಟದ ಬಯಲು ಎಂದು ಹೇಳಿದ್ದರು. ನಾನು ಅದೇನು ರಗ್ಬಿ ಆಟವೇ ಎಂದು ಕೇಳಿದ್ದಕ್ಕೆ ಅಲ್ಲವೆಂದು ಹೇಳಿದರು, ಇದು ಆಸ್ಟ್ರೇಲಿಯಾದಲ್ಲಿ ತುಂಬ ಹೆಸರುವಾಸಿಯಾದ ಆಟವೆಂದು ಹೇಳಿದರು. ಇದರಿಂದ ನನ್ನ ಕುತೂಹಲ ಕೆರಳಿತು. ಪುಟ್ಬಾಲ್ ಆಟವಲ್ಲದ, ರಗ್ಬಿಯೂ ಅಲ್ಲದ ಪುಟಿ ಯಾವತರಹದ ಆಟವೆಂದು ತಿಳಿಯುವ ಹಂಬಲವಾಯಿತು.
ಅದರಂತೆಯೇ ಮೊನ್ನೆ ಶನಿವಾರ ಅಲ್ಲಿ ಆಟ ನಡೆಯುತ್ತಿರುವ ಬಗ್ಗೆ ವಿಶಯ ಗೊತ್ತಾಯಿತು. ನೋಡೋಣವೆಂದು ನಮ್ಮ ಮನೆಯ ಬಾಲ್ಕನಿಯಲ್ಲಿ ಬಂದು ನಿಂತರೆ ಹಿಂಡು ಹಿಂಡು ಜನರು ತಮ್ಮ ನೆಚ್ಚಿನ ತಂಡದ ಹೆಸರು ಕೂಗಿಕೊಂಡು ಮಯ್ದಾನದ ಒಳಗೆ ಹೋಗುತ್ತಿರುವ ನೋಟ ಕಂಡುಬಂತು. ಆಟ ಮುಗಿಯುವ ತನಕ ನಮ್ಮ ಮನೆಯಲ್ಲಿ ಮಯ್ದಾನದಲ್ಲಿ ಕೂಗಾಡುತ್ತಿದ್ದ ಜನರ ಕೂಗು ನಮಗೆ ಕೇಳಿಸುತ್ತಲೇ ಇತ್ತು ಅನ್ನಿ.
ಹಾಗಿದ್ದರೆ ಪುಟಿ ಎಂದರೆ ಏನು? ಇದನ್ನು ಹೇಗೆ ಆಡುತ್ತಾರೆ ಅಂತ ತಿಳಿಯುವ ಕುತೂಹಲ ನಿಮಗೂ ಇದೆಯೇ? ಮುಂದೆ ಓದಿ.
ಪುಟಿ ಅಂದರೆ?
ಪುಟಿ (Footy) ಅನ್ನುವುದು ಆಸ್ಟ್ರೇಲಿಯನ್ ರೂಲ್ಸ್ ಪುಟ್ಬಾಲ್ ಹೆಸರಿನ ಆಟಕ್ಕಿರುವ ಹಲವಾರು ಹೆಸರುಗಳಲ್ಲಿ ಒಂದು ಹಾಗೂ ಅತಿ ಸಾಮಾನ್ಯವಾಗಿ ಬಳಸಲ್ಪಡುವ ಹೆಸರು. ಇದನ್ನ ಪುಟ್ಬಾಲ್, ಆಸೀಸ್ ರೂಲ್ಸ್ ಮತ್ತು ಎ.ಎಪ್.ಎಲ್ (ಆಸ್ಟ್ರೇಲಿಯನ್ ಪುಟ್ಬಾಲ್ ಲೀಗ್) ಎಂದು ಕರೆಯುತ್ತಾರೆ.
ಇದನ್ನು ಹೇಗೆ ಆಡುವುದು?
ಈ ಆಟವನ್ನು ಎರಡು ತಂಡಗಳ ನಡುವೆ ಆಡಲಾಗುತ್ತದೆ. ಪ್ರತಿಯೊಂದು ತಂಡದಲ್ಲೂ 18 ಆಟಗಾರರು ಇರುತ್ತಾರೆ. ಇದನ್ನು ಪುಟಿ ಆಟದ ಬಯಲಲಲ್ಲಿ ಅತವಾ ಮಾರ‍್ಪಾಡು ಮಾಡಲಾಗಿರುವ ಕ್ರಿಕೆಟ್ ಆಟದ ಬಯಲಲ್ಲೂ ಆಡಲಾಗುತ್ತದೆ. ಈ ಆಟದಲ್ಲಿ ಅಂಕಗಳನ್ನು ಪಡೆಯಲು ಎದುರು ತಂಡದ ಬಾಗದಲ್ಲಿರುವ ಎರಡು ಉದ್ದನೆಯ ಗೂಟಗಳ ನಡುವೆ ಬಾಲನ್ನು ಒದೆಯಬೇಕು. ಅತಿ ಹೆಚ್ಚು ಅಂಕ ಗಳಿಸಿದ ತಂಡವನ್ನ ಗೆದ್ದ ತಂಡವೆಂದು ಸಾರಲಾಗುತ್ತದೆ.
ಈ ಆಟದಲ್ಲಿ ಆಟಗಾರ ಮಯ್ದಾನದ ಯಾವುದೇ ಬಾಗದಲ್ಲಿ ಬೇಕಾಗದರೂ ನಿಲ್ಲಬಹುದು ಮತ್ತು ಚೆಂಡನ್ನು ಮುಂದೂಡಲು ದೇಹದ ಯಾವುದೇ ಬಾಗವನ್ನು ಬೇಕಾದರು ಬಳಸಬಹುದು. ಎತ್ತುಗೆಗೆ, ಕಾಲಿಂದ ಒದೆಯುವುದು, ಕಯ್ಯಿಂದ ಹೊಡೆಯುವುದು (ಒಂದು ರೀತಿ ವಾಲಿಬಾಲಿನಲ್ಲಿ ಚೆಂಡನ್ನು ಎದುರು ತಂಡದ ಕಣಕ್ಕೆ ಕಳುಹಿಸುವಂತೆ), ಕಯ್ಯಲ್ಲಿ ಹಿಡಿದು ಓಡುವುದು. ಆದರೆ ಚೆಂಡನ್ನು ಕಯ್ಯಲ್ಲಿ ಹಿಡಿದು ಒಂದೇ ಸಮನೆ ಓಡುವಂತಿಲ್ಲ, ಬದಲಿಗೆ ಆಗಾಗ ನೆಲಕ್ಕೆ ಮುಟ್ಟಿಸಬೇಕು ಅತವಾ ನೆಲದ ಮೇಲೆ ಪುಟಿಸಬೇಕು.
ಈ ಆಟದ ಮುಕ್ಯ ಅಂಶವೆಂದರೆ ಮಾರ‍್ಕ್. ಇದೊಂದು ಆಟಗಾರರು ತೋರಿಸುವ ಚಳಕ. ಚೆಂಡನ್ನು ಯಾರಾದರು ಕಾಲಿನಲ್ಲಿ ಗಾಳಿಯಲ್ಲಿ 15 ಅಡಿಗಿಂತ ಹೆಚ್ಚಿನ ಎತ್ತರಕ್ಕೆ ಹೊಡೆದಾಗ ಅದನ್ನು ಆಟಗಾರನೊಬ್ಬ ಯಾರೂ ಮುಟ್ಟದಂತೆ ತಾನು ಹಿಡಿಯುವುದನ್ನು ಮಾರ‍್ಕ್ ಎಂದು ಕರೆಯುತ್ತಾರೆ.
ಈ ಆಟದ ಇನ್ನೊಂದು ಮುಕ್ಯ ಸಂಗತಿಯೆಂದರೆ ಈ ಆಟದಲ್ಲಿ ಎದುರು ತಂಡದ ಆಟಗಾರರನ್ನು ತಡೆಯಲು ಕಯ್ಯನ್ನು ಅತವಾ ತಮ್ಮ ದೇಹವನ್ನು ಬಳಸಬಹುದಾಗಿದೆ. ಹಾಗಂತ ಇದರಲ್ಲಿ ಬೇಕಾಬಿಟ್ಟಿಯಾಗಿ ಆಡಬಹುದು ಅಂತ ತಿಳಿಯಬೇಕಾಗಿಲ್ಲ. ಬೇಕಂತಲೇ ಎದುರು ತಂಡವರನ್ನು ಬೀಳಿಸುವುದು, ಗುದ್ದುವುದು ಅತವಾ ಕಾಡಿಸುವುದನ್ನು ಮಾಡಿದಲ್ಲಿ ದಂಡ ಹಾಕಲಾಗುತ್ತದೆ. ಈ ಆಟದಲ್ಲಿ ಎದುರು ತಂಡದವರ ಕಾದಾಟ, ಮಾರ‍್ಕಿಂಗ್, ಎರಡು ತಂಡದವರ ಚುರುಕಿನ ಓಡಾಟ ಮತ್ತು ಅಂಕ ಗಳಿಸುವಿಕೆ ನಮ್ಮನ್ನು ಕಾತುರತೆಯಿಂದ ಆಟವನ್ನು ನೋಡುವಂತೆ ಮಾಡುತ್ತದೆ.
ಈ ಆಟದ ಹಿನ್ನೆಲೆ ಏನು?
ಈ ಆಟದ ಹುಟ್ಟಿನ ಬಗ್ಗೆ ಹಲವಾರು ಗೊಂದಲಗಳಿದ್ದರೂ ಈ ಆಟವನ್ನು ಮೊದಲ ಬಾರಿಗೆ 1841 ರಲ್ಲಿ ಮೆಲ್ಬರ್‍ನಿನಲ್ಲಿ ಆಡಲಾಯಿತು. ಈ ಆಟಕ್ಕೆ ರೂಪ ಬಂದಿದ್ದು 1859 ಮೇ ತಿಂಗಳಿನಲ್ಲಿ. ಈ ಆಟದ ನಿಯಮಗಳನ್ನು ಮೆಲ್ಬರ‍್ನ್ ಪುಟ್ಬಾಲ್ ಕ್ಲಬ್ ನವರು ಪ್ರಕಟಿಸಿದರು.
ಮೊದಲ ಮತ್ತು ಎರಡನೆಯ ಮಹಾಯುದ್ದದ ವೇಳೆಯಲ್ಲಿ ಈ ಆಟವು ಹಲವಾರು ಕಂಟಕಗಳನ್ನು ಎದುರಿಸಿತು. ಯುದ್ದದ ಸಮಯದಲ್ಲಿ ಹಲವಾರು ಒಳ್ಳೆಯ ಅಟಗಾರರು ಸತ್ತುಹೋದರು. ಯುದ್ದದ ನಂತರ ನಿದಾನವಾಗಿ ಚಿಗುರಲು ಶುರುವಾದ ಆಟ ನಂತರ ಹಲವಾರು ಬದಲಾವಣೆಯಗಳನ್ನು ಪಡೆದುಕೊಂಡು ಈಗ ಆಸ್ಟ್ರೇಲಿಯಾದಲ್ಲೇ ಅತಿ ಹೆಚ್ಚು ನೋಡಲ್ಪಡುವ ಆಟ ಎಂಬ ಹೆಸರು ಗಳಿಸಿದೆ. ಈ ಆಟವನ್ನು ಹಲವಾರು ನಾಡುಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಆಡಲಾಗುತ್ತಿದೆ. ಈಗ ಈ ಆಟವನ್ನು ಎ.ಎಪ್.ಎಲ್ ಕಮಿಶನ್ ಅನ್ನುವ (ಕ್ರಿಕೆಟ್ಟಿನಲ್ಲಿ ಅಯ್.ಸಿ.ಸಿ ಇದ್ದ ಹಾಗೆ) ಕೂಟವೊಂದು ನಿಯಂತ್ರಿಸುತ್ತದೆ.
ಇದು ರಗ್ಬಿ ಆಟವಾ?
ನೀವು ರಗ್ಬಿ ಆಟ ನೋಡುವವರಾಗಿದ್ದರೆ ಇದು ಹೆಚ್ಚು ಕಡಿಮೆ ರಗ್ಬಿ ಆಟದ ತರವೇ ಇದೆ ಇದರಲ್ಲಿ ಹೊಸತೇನಿದೆ ಎಂಬ ಕೇಳ್ವಿ ಏಳಬಹುದು. ಇದಕ್ಕೆ ಉತ್ತರ ಇಲ್ಲಿದೆ:
ರಗ್ಬಿ |
ಪುಟಿ |
ಚವ್ಕದ ಆಟದ ಮಯ್ದಾನ |
ಒವಲ್ ರೂಪದ ಮಯ್ದಾನ (ಕ್ರಿಕೆಟ್ ಮಯ್ದಾನದಂತೆ) |
ಒಂದು ತಂಡದಲ್ಲಿ 15 ಆಟಗಾರರು |
ಒಂದು ತಂಡದಲ್ಲಿ 18 ಆಟಗಾರರು |
40 ನಿಮಿಶಗಳ ಎರಡು ಕಂತುಗಳು |
25 ನಿಮಿಶಗಳ ನಾಲ್ಕು ಕಂತುಗಳು |
ಎರಡು ಎತ್ತರದ ಗೂಟಗಳ ಜೊತೆ ನಡುವೆ ಒಂದು ಅಡ್ಡ ಗೆರೆಯಿರುತ್ತದೆ |
ನಾಲ್ಕು ಎತ್ತರದ ಗೂಟಗಳು, ಅಡ್ಡ ಗೆರೆ ಇರುವುದಿಲ್ಲ |
ಅಂಕಗಳಿಸಲು ಚೆಂಡು ಈ ಅಡ್ಡ ಗೆರೆಯ ಮೇಲೆ ಮತ್ತು ಎರಡು ಗೂಟಗಳ ನಡುವೆ ಹೋಗಬೇಕು |
ಹೊರಗಿನ ಗೂಟದ ನಡುವೆ ಚೆಂಡು ಹಾದು ಹೋದರೆ ಒಂದು ಅಂಕ ಮತ್ತು ಒಳಗಿನ ಗೂಟಗಳ ನಡುವೆ ಹಾದು ಹೋದರೆ ಗೋಲ್ |
ಚೆಂಡನ್ನು ಹಿಂದೆ ಮಾತ್ರ ದಾಟಿಸಬಹುದು |
ಚೆಂಡನ್ನು ಯಾವ ದಿಕ್ಕನಲ್ಲಿ ಬೇಕಾದರೂ ದಾಟಿಸಬಹುದು |
ಪಂದ್ಯಾವಳಿಗಳು
ಎಲ್ಲಾ ಆಟಗಳಲ್ಲೂ ಇರುವಂತೆ ಪುಟಿಯಲ್ಲೂ ಸಹ ಹಲವಾರು ಪಂದ್ಯಾವಳಿಗಳು ನಡೆಯುತ್ತವೆ. ಇದರಲ್ಲಿ ಮುಕ್ಯವಾಗಿ ಆಸ್ಟ್ರೇಲಿಯನ್ ಪುಟ್ವಾಲ್ ಲೀಗ್ ಪಂದ್ಯ ತುಂಬಾ ಹಿರಿಮೆಯನ್ನು ಪಡೆದಿದೆ. ಈ ಪಂದ್ಯಗಳಲಿ ಹಲವಾರು ಗುಂಪುಗಳು ಪಾಲ್ಗೊಳುತ್ತವೆ. ವರ‍್ಶದ ಬಹುತೇಕ ತಿಂಗಳುಗಳು ಪಂದ್ಯಗಳು ನಡೆಯುತ್ತಲೇ ಇರುತ್ತವೆ. ಇದರ ಪಟ್ಟಿಯನ್ನು ಎ.ಎಪ್.ಎಲ್ ಬಿಡುಗಡೆ ಮಾಡುತ್ತದೆ.
ಒಟ್ಟಿನಲ್ಲಿ ಪುಟಿ ಆಟವೂ ಆಸ್ಟ್ರೇಲಿಯಾದ ಜನರು ಹುಚ್ಚು ಹಿಡಿಸಿಕೊಂಡು ನೋಡುವ ಆಟವಾಗಿದೆ. ನೀವು ರಗ್ಬಿ ಆಟ ಇಶ್ಟ ಪಡುತ್ತೀರಿ ಎಂದಾದರೆ ಪುಟಿಯನ್ನು ಒಂದು ಬಾರಿ ನೋಡಬಹುದು. ಸಮಯ ಸಿಕ್ಕಾಗ ನಾವು ಒಂದು ಆಟವನ್ನು ಆಟದ ಬಯಲಲ್ಲೇ ನೋಡಬೇಕು ಎಂದುಕೊಂಡಿದ್ದೇನೆ.
(ಚಿತ್ರ ಸೆಲೆ: en.wikipedia.org)
ಇತ್ತೀಚಿನ ಅನಿಸಿಕೆಗಳು