ಬನಾನಾ ರಿಪಬ್ಲಿಕ್

ಪ್ರಿಯಾಂಕ್ ಕತ್ತಲಗಿರಿ

banana_republic

ಬನಾನಾ ರಿಪಬ್ಲಿಕ್ ಅಂದರೆ “ಬಾಳೆಹಣ್ಣಿನ ಆಡಳಿತ” ಎಂಬ ಹೆಸರು ಕೆಲ ತಿಂಗಳುಗಳ ಹಿಂದೆ ಚರ‍್ಚೆಯಲ್ಲಿ ಮುನ್ನೆಲೆಗೆ ಬಂದಿತ್ತು. ಏನಿದು ಬನಾನಾ ರಿಪಬ್ಲಿಕ್ ಎಂದರೆ? ಎಂತಹ ನಾಡನ್ನು ಬನಾನಾ ರಿಪಬ್ಲಿಕ್ ಎಂದು ಕರೆಯುತ್ತಾರೆ? ಯಾಕೆ ಈ ಹೆಸರು ಬಂದಿದ್ದು? ಎಂಬ ವಿವರಗಳನ್ನು ಈ ಬರಹದಲ್ಲಿ ನೋಡೋಣ.

ಆಡಳಿತದರಿಮೆಯಂತೆ ಬನಾನಾ ರಿಪಬ್ಲಿಕ್ ಎಂದರೇನು?

ಆಡಳಿತದರಿಮೆಯಲ್ಲಿ (political science) ಬನಾನಾ ರಿಪಬ್ಲಿಕ್ ಎಂಬ ಹೆಸರನ್ನು ಬಳಸಲಾಗುತ್ತದೆ. ಇದರಂತೆ, ಯಾವ ನಾಡಿನ ಆಡಳಿತದೇರ‍್ಪಾಡು ತುಮುಲಗಳನ್ನು ಕಾಣುತ್ತಲೇ ಇರುತ್ತದೋ, ಮತ್ತದರ ಹಣಕಾಸಿನ ಏರ‍್ಪಾಡು ಯಾವುದೋ ಒಂದು ವಸ್ತುವನ್ನು ಹೊರದೇಶಗಳಿಗೆ ಮಾರಾಟ ಮಾಡುವುದರ ಮೇಲೆ ನಿಂತಿರುತ್ತದೋ, ಅಂತಹ ನಾಡನ್ನು ’ಬನಾನಾ ರಿಪಬ್ಲಿಕ್’ ಎಂದು ಬಣ್ಣಿಸಲಾಗುತ್ತದೆ. ಇಂತಹ ನಾಡಿನಲ್ಲಿ ಸಾಮಾನ್ಯವಾಗಿ, ಕಡುಬಡವರು ಹೆಚ್ಚಿನ ಎಣಿಕೆಯಲ್ಲಿರುತ್ತಾರೆ ಮತ್ತು ಕೆಲವೇ ಕೆಲವು ಸಿರಿವಂತರು ಇಡೀ ನಾಡಿನ ಆಡಳಿತದೇರ‍್ಪಾಡು ಮತ್ತು ಹಣಕಾಸು ಏರ‍್ಪಾಡನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿರುತ್ತಾರೆ.

ಈ ಹೆಸರು ಹುಟ್ಟಿಕೊಂಡಿದ್ದು ಹೇಗೆ?

ಬನಾನಾ ರಿಪಬ್ಲಿಕ್ ಎಂಬ ಹೆಸರನ್ನು ಮೊದಲ ಬಾರಿಗೆ ಬಳಸಿದ್ದು ಅಮೇರಿಕಾದ ಬರಹಗಾರರಾದ ಒ. ಹೆನ್ರಿ ಅವರು. ಹೆನ್ರಿಯವರು “ಕ್ಯಾಬೇಜಸ್ ಅಂಡ್ ಕಿಂಗ್ಸ್” (ಕೋಸುಗಳು ಮತ್ತು ಅರಸರು) ಎಂಬ ಹೆಸರಿನ ಹೊತ್ತಗೆಯನ್ನು ಬರೆದಿದ್ದರು. ಆ ಹೊತ್ತಗೆಯಲ್ಲಿ ಒಂದು ಕಾಲ್ಪನಿಕ ನಾಡನ್ನು ’ರಿಪಬ್ಲಿಕ್ ಆಪ್ ಅಂಚುರಿಯಾ’ ಎಂದು ಹೆಸರಿಸಿ ಬಣ್ಣಿಸುತ್ತಾರೆ. ಹೆನ್ರಿಯವರು 1870ರ ಹೊತ್ತಿನಲ್ಲಿ ಹೊಂಡುರಾಸ್ ನಾಡಿನಲ್ಲಿ ಕಳೆದ ಹಲದಿನಗಳಲ್ಲಿ ತಮಗಾದ ಅನುಬವಗಳನ್ನು ಸೇರಿಸಿ ಬರೆದ ಕತೆಗಳ ಗೊಂಚಲೇ ಈ ಹೊತ್ತಗೆ. ’ಕ್ಯಾಬೇಜಸ್ ಅಂಡ್ ಕಿಂಗ್ಸ್’ ಹೊತ್ತಗೆಯಲ್ಲಿಯೇ ಮೊದಲ ಬಾರಿಗೆ ’ಬನಾನಾ ರಿಪಬ್ಲಿಕ್’ ಎಂಬ ಪದ ಬಳಕೆಗೆ ಬಂದಿದ್ದು.

ಹೊಂಡುರಾಸ್ ನಾಡನ್ನು ’ಬನಾನಾ ರಿಪಬ್ಲಿಕ್’ ಎಂದು ಯಾಕೆ ಕರೆಯಲಾಗುತ್ತದೆ?

ಅಮೇರಿಕಾದಲ್ಲಿ 1870ರಲ್ಲಿ ಮೊದಲ ಬಾರಿಗೆ ಬಾಳೆಹಣ್ಣನ್ನು ಜನರಿಗೆ ಪರಿಚಯಿಸಿದಾಗ, ಅದರ ರುಚಿ ಮತ್ತು ಕಮ್ಮಿ ಬೆಲೆಗೆ ಜನರು ಮಾರುಹೋಗಿದ್ದರು ಎನ್ನಲಾಗುತ್ತದೆ. ಅಲ್ಲಿಯವರೆಗೆ ಅಮೇರಿಕಾದಲ್ಲಿ ಸಿಗುತ್ತಿದ್ದ ಸೇಬಿನಹಣ್ಣಿಗಿಂತ ಬಾಳೆಹಣ್ಣಿಗೆ ಒಮ್ಮೆಲೆ ವಿಪರೀತ ಬೇಡಿಕೆ ಬಂತಂತೆ. ಜಮಯ್ಕಾ ನಾಡಿನಲ್ಲಿ ಬೆಳೆಯಲಾಗುತ್ತಿದ್ದ ಬಾಳೆಹಣ್ಣನ್ನು, ಅಮೇರಿಕಾದ ಬಾಸ್ಟನ್ನಿನಲ್ಲಿ ಮಾರಿ ತಮ್ಮ ಲಾಬವನ್ನು 1000 ಪಟ್ಟು ಮಾಡಿಕೊಂಡವರಿದ್ದರು ಎನ್ನಲಾಗುತ್ತದೆ.

ಅದೇ ಹೊತ್ತಿಗೆ ಹೆನ್ರಿ ಮಿಗ್ಸ್ ಮತ್ತು ಮಯ್ನರ್ ಸಿ. ಕೀತ್ ಎಂಬಿಬ್ಬರು ಅಮೇರಿಕನ್ನರು ’ಟ್ರಾಪಿಕಲ್ ಟ್ರೇಡಿಂಗ್ ಅಂಡ್ ಟ್ರಾನ್ಸ್‍ಪೋರ‍್ಟ್ ಕಂಪನಿ’ ಹೆಸರಿನ ಕಂಪನಿಯೊಂದನ್ನು ನಡೆಸುತ್ತಿದ್ದರು. ನಡು-ಅಮೇರಿಕಾದ ನಾಡಾದ ಕೋಸ್ಟರಿಕದಲ್ಲಿ ರಯ್ಲು ಹಳಿಗಳನ್ನು ಹಾಕಿ ರಯ್ಲು ಓಡಿಸುವ ಉದ್ದಿಮೆಯನ್ನು ಈ ಕಂಪನಿ ಮಾಡುತ್ತಿತ್ತು. ಬಾಳೆಹಣ್ಣಿಗೆ ಅಮೇರಿಕಾದಲ್ಲಿ ಹುಟ್ಟಿದ ಬೇಡಿಕೆಯನ್ನು ಕಂಡ ಇವರುಗಳು, ಕೋಸ್ಟರಿಕದಲ್ಲಿ ತಮ್ಮ ಕಂಪನಿ ಹಾಕಿದ ರಯ್ಲುಹಳಿಗಳ ಅಕ್ಕ-ಪಕ್ಕದ ಜಾಗಗಳಲ್ಲಿ ಬಾಳೆಹಣ್ಣಿನ ಗಿಡಗಳನ್ನು ನೆಡತೊಡಗಿದರು. ಆ ಗಿಡಗಳಿಂದ ಹುಟ್ಟಿದ ಪಸಲನ್ನು ಅಮೇರಿಕಾದಲ್ಲಿ ಮಾರಿ ಸಿಕ್ಕಾಪಟ್ಟೆ ಕಾಸು ಮಾಡಿದರು. ಇವರ ಲಾಬ ಎಶ್ಟರಮಟ್ಟಿಗೆ ಇತ್ತೆಂದರೆ, ಬಾಳೆಹಣ್ಣನ್ನು ಬೆಳೆದು ಮಾರುವ ಉದ್ದಿಮೆಯನ್ನು ನೋಡಿಕೊಳ್ಳುವ ಸಲುವಾಗಿ “ಯುನಯ್ಟೆಡ್ ಪ್ರೂಟ್ ಕಂಪನಿ” ಹೆಸರಿನ ಮತ್ತೊಂದು ಕಂಪನಿಯನ್ನೇ ಹುಟ್ಟುಹಾಕಿದರು.

ಬಾಳೆಹಣ್ಣು ಮಂದಿಮೆಚ್ಚುಗೆ ಪಡೆಯುವಲ್ಲಿ ಅದರ ಬೆಲೆಯೂ ಕಾರಣವಾದ್ದರಿಂದ, ಬಾಳೆಹಣ್ಣಿನ ಬೆಲೆಯನ್ನು ಕಮ್ಮಿಯೇ ಉಳಿಸಲು ಈ ಕಂಪನಿಯು ತಾನು ಬಾಳೆಹಣ್ಣು ಬೆಳೆಯುವ ನಾಡಿನ ಆಡಳಿತದ ಮೇಲೂ ಹಿಡಿತ ಸಾದಿಸಿತು. ಆಡಳಿತದ ಮೇಲಿನ ತನ್ನ ಹಿಡಿತದ ಮೂಲಕ, ಬಾಳೆಯಹಣ್ಣನ್ನು ಬೆಳೆಯುವ ನೆಲಗಳೆಲ್ಲವನ್ನು ಕಡಿಮೆ ಬೆಲೆಗೆ ತನ್ನದಾಗಿಸಿಕೊಳ್ಳುತ್ತಾ ಸಾಗಿತು. ಹೊಂಡುರಾಸ್ ನಾಡಿನ ಮೇಲೂ ಯುನಯ್ಟೆಡ್ ಪ್ರೂಟ್ ಕಂಪನಿಯು ಹಿಡಿತ ಗಳಿಸಿತ್ತು. ಹೊಂಡುರಾಸಿನಲ್ಲಿ ತಾನು ಹಾಕುವ ಪ್ರತಿಯೊಂದು ಕಿ.ಮೀ. ರಯ್ಲುಹಳಿಗೆ 1,235 ಎಕರೆ ಬಾಳೆಹಣ್ಣು ಬೆಳೆಯುವ ಜಾಗವನ್ನು ಸರ‍್ಕಾರದಿಂದ ಪಡೆದುಕೊಳ್ಳುತ್ತಿತ್ತು ಯನಯ್ಟೆಡ್ ಪ್ರೂಟ್ ಕಂಪನಿ. ಆ ಎಲ್ಲಾ ಜಾಗದಲ್ಲೂ ಬಾಳೆಹಣ್ಣನ್ನು ಬೆಳೆದು, ಕಮ್ಮಿಬೆಲೆಯಲ್ಲಿ ಅಮೇರಿಕಾದಲ್ಲಿ ಮಾರಾಟ ಮಾಡಿ, ಸಾಕಶ್ಟು ಲಾಬ ಮಾಡಿಕೊಳ್ಳುತ್ತಿತ್ತು ಕಂಪನಿ.

ಹೀಗೆ ಕೆಲವೊಂದು ಕಂಪನಿಗಳ ಹಿಡಿತದಲ್ಲಿ ಸಿಕ್ಕಿಕೊಂಡು, ತನ್ನ ಜನರ ಏಳಿಗೆಗೆ ಮಾಡಬೇಕಾದ ಕೆಲಸಗಳನ್ನೂ ಕಡೆಗಣಿಸಿ ಜನರ ಕೆಂಗಣ್ಣಿಗೆ ಗುರಿಯಾಗಿ, ಹಿಂಸೆಯ ತೊಳಲಾಟದಲ್ಲಿ ಬೆಂದುಹೋಗಿದ್ದ ಹೊಂಡುರಾಸ್ ನಾಡಿನ ಆಡಳಿತದೇರ‍್ಪಾಡು ’ಬನಾನಾ ರಿಪಬ್ಲಿಕ್’ ಎಂದು ಕರೆಯಿಸಿಕೊಂಡಿತ್ತು. ಇವತ್ತಿಗೂ, ಮುರಿದುಬಿದ್ದ ಆಡಳಿತದೇರ‍್ಪಾಡು ಹೊಂದಿರುವ ಹಲನಾಡುಗಳನ್ನು ‘ಬನಾನಾ ರಿಪಬ್ಲಿಕ್’ ಎಂದು ಕರೆಯುವುದುಂಟು.

(ಚಿತ್ರ ಸೆಲೆ: sabinabecker.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ತುಂಬಾ ಒಳ್ಳೆಯ ಬರಹ ಪ್ರಿಯಾಂಕ್, ನಾನು ಇದುವರೆಗೂ ಬನಾನ ರಿಪಬ್ಲಿಕ್ ಎಂದು ಕೇಳಿದ್ದೆನೇ ಹೊರತು ತಿಳಿದುಕೊಂಡಿರಲಿಲ್ಲ. ಇಂತಹ ಬರಹಗಳು ಹೆಚ್ಚು ಹೆಚ್ಚು ಬರಲಿ…

  2. tumba olleya mahiti kottiddiri…

ಅನಿಸಿಕೆ ಬರೆಯಿರಿ: