ಕಂಪ್ಯೂಟರ್ ಆಟಗಳ ಅಲೆದಾಟ
– ವಿವೇಕ್ ಶಂಕರ್.
ಎಣ್ಣುಕಗಳ ಆಟಗಳು (computer games) ಮಂದಿಯಲ್ಲಿ ಅದರಲ್ಲೂ ಮಕ್ಕಳಲ್ಲಿ ತುಂಬಾ ಮೆಚ್ಚಿಗೆ ಪಡೆದಿರುವಂತವು. ಎಣ್ಣುಕದಾಟಗಳಲ್ಲಿಯೇ ಮಕ್ಕಳು ಹಲವು ಹೊತ್ತು ಮುಳುಗಿ ಹೋಗುವುದೂ ಗೊತ್ತಿರುವಂತದೆ. ಎಣ್ಣುಕದಾಟಗಳನ್ನು ಹೊರತರುವ ಕೆಲಸ ಒಂದೆಡೆಯಾದರೆ ಅವುಗಳನ್ನು ಸುಳುವಾಗಿ ಜಗದೆಲ್ಲೆಡೆ ಸಾಗಿಸುವುದು ’ಆಟ ಮಾಡುವ’ ಕೂಟಗಳಿಗೆ ದೊಡ್ಡ ಸವಾಲೇ ಸರಿ.
ಇತ್ತೀಚೆಗೆ ಎಲೆಕ್ಟ್ರಾನಿ ಆರ‍್ಟ್ ಹೊರತಂದ ಬ್ಯಾಟಲ್ ಪೀಲ್ಡ್-4 (Battefield -4) ಆಟದಲ್ಲಿ ಇಪ್ಪತೊಂದನೆಯ ನೂರೇಡಿನ ಕಾಳಗದ ನೋಟಗಳು ಹೇಗಿರುತ್ತವೆ ಅಂತ ತುಂಬಾ ಸೊಗಸಾಗಿ ತೋರಿಸಲಾಗಿದೆ. ಆದರೆ ಇಂತ ಆಟವನ್ನು ಕಟ್ಟುವ ಸಲುವಾಗಿ ಮಾಡಿದ ಕಡತಗಳು ತುಂಬಾ ದೊಡ್ಡ ಕಡತಗಳಾಗಿವೆ. ಕೆಲವು ಆಟದ ಕಡತಗಳಂತೂ ಸುಮಾರು 50 GB ಯಶ್ಟು ದೊಡ್ಡದಾಗಿವೆ!
ಇಂತಹ ದೊಡ್ಡ ಕಡತಗಳನ್ನು ಜಗತ್ತಿನ ಹಲವೆಡೆಗಳಲ್ಲಿರುವ ಬಳಕೆದಾರರಿಗೆ ತುಂಬಾ ಕಡಿಮೆ ಹೊತ್ತಿನಲ್ಲಿ ದೊರೆಯುವಂತೆ ಮಾಡಬೇಕಾದರೆ ಆಟ ಮಾಡುವ ಕೂಟಗಳು ಹಲವಾರು ಹೊಸ ಚಳಕಗಳನ್ನು ಕಯ್ಗೂಡಿಸಿಕೊಳ್ಳಬೇಕಾಗುತ್ತದೆ.
ಕೂಟಗಳ ಚಳಕಗಳು
ಆಟದ ದೊಡ್ಡ ಕಡತಗಳನ್ನು ಒಂದೆಡೆಯಿಂದ ಇನ್ನೊಂದೆಡೆ ಕಳುಹಿಸುವುದಕ್ಕೆ ಕೂಟಗಳು ತಮ್ಮ ಎಣ್ಣುಕದ ನೆಲುಹುಗಳನ್ನು (network) ಬಳಸುತ್ತವೆ. ನೆಲುಹುಗಳ ಮಿಂಬಲೆಯ ಮೂಲಕ ಹಲವು ಕಡೆ ಆಟದ ದೊಡ್ಡ ಕಡತಗಳನ್ನು ಕಳುಹಿಸಲಾಗುತ್ತದೆ. ಮಿಂಬಲೆಯಲ್ಲಿ ಇಂತ ಕಡತಗಳನ್ನು ’ನಡುವಣ ತಿಳಿಹದ ಗೂಡೊಂದರಿಂದ’ (central data repository) ಬೇರೆಡೆಗೆ ಹಂಚಲಾಗುತ್ತದೆ.
ಇದರ ಜೊತೆ ಆಟಗಳ ಕೂಟಗಳು ಇನ್ನೊಂದು ಹೊಳಹವನ್ನು ಅಳವಡಿಸಿಕೊಂಡಿವೆ, ಅದೇನೆಂದರೆ ಆದಶ್ಟು ಕಡಿಮೆ ತಿಳಿಹವನ್ನು ಹಂಚಿಕೊಳ್ಳುವ ಚಳಕ, ಅದೇ ಕ್ಲವ್ಡ್ ಚಳಕ (cloud technology). ಈ ಚಳಕದಲ್ಲಿ ಒಂದು ಕ್ಲವ್ಡ್ ಎಣ್ಣುಕದಲ್ಲಿ ಎಲ್ಲಾ ತಿಳಿಹವೂ ಇರುತ್ತದೆ. ಆ ತಿಳಿಹಕ್ಕೆ ಏನೇ ಮಾರ‍್ಪಾಟಾದರೂ ಎಲ್ಲೆಡೆ ಆ ಮಾರ‍್ಪಾಟು ಕಾಣುವುದರಿಂದ ತಿಳಿಹದ ಸಾಗಣೆ ದೊಡ್ಡ ಮಟ್ಟದಲ್ಲಿ ಸುಲಬವಾಗುತ್ತದೆ.
ಆಟದ ಹಲವು ವರಸೆಗಳು
ಈ ಮೇಲಿನ ಚಳಕಗಳ ಜೊತೆ ಹಂಚುವ ತಿಳಿಹವನ್ನು ಕಡಿಮೆ ಮಾಡುವುದರ ಸಲುವಾಗಿ ಇನ್ನೂ ಎರಡು ಚಳಕಗಳಿವೆ. ಒಂದು ’ಕುಗ್ಗಿಕೆ’ (compression) ಮತ್ತು ಎರಡು ’ಪಳಿತೆರೆವಿಕೆ’ (deduplication). ಕುಗ್ಗಿಕೆ ಅಂದರೆ ಕಡತವನ್ನು ಸಣ್ಣ ಮಾಡುವುದು ಅದೇ ಪಳಿತೆರೆವಿಕೆ ಅಂದರೆ ತಿಳಿಹದಲ್ಲಿ ಎಲ್ಲೆಲ್ಲಿ ಪಳಿಗಳು (duplicates) ಕಂಡುಬರುತ್ತವೋ ಅಲ್ಲಲ್ಲಿ ಒಂದೇ ಪಳಿಯನ್ನು (copy) ಉಳಿಸುವುದು.
ಎಲೆಕ್ಟ್ರಾನಿ ಆರ‍್ಟ್ ನಂತಹ ಕೂಟಗಳಿಗೆ ಇದರಿಂದ ತುಂಬಾ ಉಪಯೋಗವಾಗುತ್ತದೆ ಯಾಕೆಂದರೆ ಅವರು ಈ ಆಟದ ಹಲವು ವರಸೆಗಳು ಬೇರೆ ಬೇರೆ ಎಣ್ಣುಕಗಳಿಗೆ ಬಿಡುಗಡೆ ಮಾಡಬಹುದು. ಹಲವು ವರಸೆಗಳಲ್ಲಿ ತಿಳಿಹ ಹೆಚ್ಚು ಕಡಿಮೆ ಒಂದೇ ತರಹವಿರುವುದರಿಂದ ಕಡಿಮೆ ತಿಳಿಹವನ್ನು ಇರಿಸಿಕೊಂಡರೆ ತಿಳಿಹದ ಸಾಗಣೆ ಬೇಗ ನಡೆಯುತ್ತದೆ. ಹಾಗಾಗಿ ಇಂತ ಚಳಕಗಳ ಬಳಕೆಯಿಂದ ಕಡತಗಳನ್ನು ಸಾಗಿಸುವ ಹೊರೆ ಕಡಿಮೆ ಆಗುತ್ತದೆ.
ಬಿಟ್ ಟಾರೆಂಟ್
ಹಲವು ಸಣ್ಣ ಕೂಟಗಳಿಗೆ ಮೇಲ್ಕಾಣಿಸಿದ ಬದಗುಗಳನ್ನು (services) ಒದಗಿಸಲು ಹೆಚ್ಚಿನ ಬೆಲೆಯಿಂದಾಗಿ ಸಾದ್ಯವಾಗುವುದಿಲ್ಲ ಹಾಗಾಗಿ ಅವರು ಬೇರೆ ಹೊಲಬುಗಳನ್ನು (method) ಕಂಡುಹಿಡಿಯುತ್ತಿದ್ದಾರೆ. ಅದರಲ್ಲಿ ಬಿಟ್ ಟಾರೆಂಟ್(Bit Torrent) ಕೂಟದೊಂದು ಹೊಸ ದಾರಿ.
ಬಿಟ್ ಟಾರೆಂಟ್ ಕೂಟದ ಮಾಡುಗೆಯಾದ ಬಿಟ್ ಟಾರೆಂಟ್ ಸಿಂಕ್ (Bit Torrent Sync) ಬಳಸಿದರೆ ಕಡತಗಳನ್ನು ಬೇರೆ ಎಣ್ಣುಕಗಳಲ್ಲಿ ಕೂಡಿಡುವ ತೊಂದರೆ ತಪ್ಪುತ್ತದೆ. ಒಂದು ಎಣ್ಣುಕದಿಂದ ಇನ್ನೊಂದು ಎಣ್ಣುಕಕ್ಕೆ ಕಡತಗಳನ್ನು ಕಳುಹಿಸಿವಾಗ ಈ ಮಾಡುಗೆ ಕಡತಗಳನ್ನು ಹಲವು ಸಣ್ಣ ಕಡತಗಳಾಗಿ ಪಾಲು ಮಾಡಿ ಆ ಕಡತಗಳನ್ನು ಬೇರೆ ಎಣ್ಣುಕಗಳಿಗೆ ಕಳುಹಿಸುತ್ತದೆ. ಸಣ್ಣ ಮಾಡಿದ ಮೇಲೆ ಒಟ್ಟಿಗೆ ಜೋಡಿಸುವ ಕೆಲಸ ಕೂಡ ಈ ಮಾಡುಗೆಯೇ ಸುಳುವಾಗಿ ಮಾಡುತ್ತದೆ.
ಬಿಟ್ ಟಾರೆಂಟ್ ಬಳಕೆಯಿಂದ ಕಡತ ಹಂಚಿಕೆಯ ತೊಂದರೆಯಿಂದ ಪಾರಾಗಿ, ಸಣ್ಣ ಕೂಟಗಳೂ ಆಟದ ಈ ಮಾರಾಟದಲ್ಲಿ ಹುರುಪಿನಿಂದ ಪಾಲ್ಗೊಳ್ಳತ್ತಿವೆ.
ಹೀಗೆ ಎಣ್ಣುಕದಾಟಗಳ ಕೂಟಗಳು ಹಲವು ದಾರಿಗಳನ್ನು ಬಳಸಿ, ಕಡತ ಸಾಗಣೆಯ ದೊಡ್ಡ ತೊಂದರೆಯನ್ನು ಬಗೆಹರಿಸಿಕೊಳ್ಳುತ್ತಿವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡದಾದ, ಸೊಗಸಾದ ಆಟಗಳು ನಮ್ಮ ಎಣ್ಣುಕದಲ್ಲಿ ಸೇರುವುದಂತು ಕಂಡಿತಾ. ಆದರೆ ನೆನಪಿರಲಿ ಮಕ್ಕಳಿಗೆ ’ಮನೆಯಲ್ಲಿ ಕುಳಿತು’ ಆಡುವ ಆಟಕ್ಕಿಂತ ’ಬಯಲಿನಲ್ಲಿ ಕುಣಿದು’ ಆಡುವ ಆಟಗಳೇ ಲೇಸು.
(ಒಸಗೆಯ ಹಾಗೂ ತಿಟ್ಟದ ಸೆಲೆ: bbc)
ಇತ್ತೀಚಿನ ಅನಿಸಿಕೆಗಳು