ಶಾಂತಿ, ಪ್ರೀತಿ ಮತ್ತು ದೀನತೆಯ ಸಂದೇಶ ಸಾರುವ ಕ್ರಿಸ್‍ಮಸ್‍

– ಪ್ರಶಾಂತ್ ಇಗ್ನೇಶಿಯಸ್.

christmas_mara

ಡಿಸೆಂಬರ್ ತಿಂಗಳು ಬರುತ್ತಿದ್ದಂತೆ ವರ್‍ಶಪೂರ್‍ತಿ ಮನೆಯ ಮೂಲೆಯಲ್ಲಿ ಮುದುಡಿಕೊಂಡಿದ್ದ ಕಂಬಳಿಗಳು ಅರಳಿಕೊಳ್ಳುತ್ತವೆ. ಚುಮು ಚುಮು ಚಳಿಯ ಜೊತೆಯಲ್ಲೇ ಅನೇಕ ಬೆಚ್ಚನೆಯ ನೆನಪುಗಳೂ ಗರಿಗೆದರುತ್ತವೆ. ಈ ನೆನಪುಗಳಲ್ಲಿ ಕ್ರಿಸ್‍ಮಸ್ ಹಬ್ಬದ್ದೂ ದೊಡ್ಡ ಪಾತ್ರವೇ. ದೂರದಲ್ಲೆಲ್ಲೋ ಕೇಳಿ ಬರುವ ಕ್ರಿಸ್‍ಮಸ್‍ನ ಕ್ಯಾರೋಲ್ ಹಾಡು, ಗಿಜಿ ಗಿಜಿ ರಸ್ತೆಯ ಆಚೆಗೆ ದೀಪಗಳಿಂದ ಕಂಗೊಳಿಸುವ ಯಾವುದೋ ಚರ್‍ಚ್, ಸ್ವಲ್ಪ ಇಣುಕಿ ನೋಡಿದರೆ ಒಳಗೆ ಕಾಣ ಸಿಗುವ ಅಲಂಕ್ರುತ ಗೋದಲಿ, ಎತ್ತರದಲ್ಲಿ ಕಟ್ಟಿರುವ ತಾರೆ, ಅಂಗಡಿಗಳಲ್ಲಿ ತೂಗಿ ಹಾಕಿರುವ ಬಣ್ಣ ಬಣ್ಣದ ಅಲಂಕಾರದ ವಸ್ತುಗಳು, ಮಳಿಗೆಗಳ ಬಾಗಿಲಲ್ಲಿ ಸ್ವಾಗತ ಮಾಡುತ್ತಿರುವ ಬಿಳಿಯ ಗಡ್ಡದಾರಿ ಕ್ರಿಸ್‍ಮಸ್‍ ತಾತ, ಇವೆಲ್ಲವೂ ಡಿಸೆಂಬರ ಚಳಿಗೆ ತಳಕುಗೊಂಡ ದ್ರುಶ್ಯಗಳು.

ಹಾಗೆ ನೋಡಿದರೆ ಇಡೀ ವಿಶ್ವದಲ್ಲಿ ವಿಶಿಶ್ಟ ರೀತಿಯಲ್ಲಿ ಅಚರಿಸಲಾಗುವ ಕ್ರಿಸ್‍ಮಸ್‍ ಸಮಯದಲ್ಲಿ ಒಂದು ಮಾಯಾಲೋಕವೇ ಸ್ರುಶ್ಟಿಯಾದಂತೆ ಕಾಣಿಸುತ್ತದೆ. ಇತ್ತೀಚೆಗಂತೂ ಆಡಂಬರದ ಪಾಶ್ಚಾತ್ಯ ಶಯ್ಲಿಯೇ ವಿಶ್ವದ ಎಲ್ಲೆಡೆ ಹಬ್ಬುತ್ತಿದೆ. ವ್ಯಾಪಾರೀಕರಣದ ಕದಂಬ ಬಾಹುಗಳು ಕ್ರಿಸ್‍ಮಸ್‍ನ ಆಚರಣೆಯ ಸುತ್ತ ಹಬ್ಬಿಕೊಳ್ಳುತ್ತಿದ್ದರೂ, ಕ್ರಿಸ್‍ಮಸ್‍ನ ನಿಜವಾದ ಆಚರಣೆಗಳು ಬಹಳ ಅರ್‍ತಗರ್‍ಬಿತ. ಕ್ರಿಸ್‍ಮಸ್‍ ಸಮಯದಲ್ಲಿ ನೋಡಲು ಸಿಗುವ ಗೋದಲಿ, ನಕ್ಶತ್ರ, ಸ್ಯಾಂಟ ಕ್ಲಾಸ್, ದೇವ ದೂತರುಗಳು ಎಲ್ಲಕ್ಕೂ ತನ್ನದೇ ಅರ್‍ತವಿದೆ.

ಕ್ರಿಸ್‍ಮಸ್‍ನ ಹಿನ್ನಲೆಯನ್ನು ತಿಳಿಯಲು ಬಯ್ಬಲ್‍ನಲ್ಲಿ ಯೇಸು ಕ್ರಿಸ್ತನ ಜನನದ ಸುತ್ತ ನಡೆಯುವ ಗಟನೆಗಳತ್ತ ಕಣ್ಣಾಡಿಸಿದರೆ, ಅದೊಂದು ಮನಮೋಹಕವಾದ ದ್ರುಶ್ಯ ಕಾವ್ಯದಂತೆ ಕಾಣಿಸುತ್ತದೆ. ದ್ವೇಶ, ಅಶಾಂತಿ, ದವುರ್‍ಜನ್ಯ, ಅಸಮತೆಯಿಂದ ಬಳಲುತ್ತಿದ್ದ ಜಗತ್ತಿಗೆ ದೇವರು ಯೇಸುವಿನ ರೂಪದಲ್ಲಿ ತಮ್ಮ ಮಗನನ್ನೇ ಕಳುಹಿಸುತ್ತಾರೆ ಎಂಬುದು ತಿರುಳಾದರೂ ದೇವರ ಪುತ್ರ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಒಂದು ದನಗಳು ವಾಸಿಸುವ ಗೋದಲಿಯಲ್ಲಿ ಜನಿಸಿದ ಎಂಬುದು ದೀನತೆಯ ಪ್ರತೀಕವಾಗಿದೆ. ಇದೇ ದೀನತೆ, ಕ್ಶಮೆ, ಸಹನೆಯ ಸಂದೇಶವನ್ನು ಯೇಸು ಮುಂದೆ ಬೋದಿಸಿದರು ಎಂಬುದಕ್ಕೆ ಈ ಗೋದಲಿ ಮುನ್ನುಡಿಯಾಗುತ್ತದೆ.

ಅಂತೆಯೇ ಜನರನ್ನು ರಕ್ಶಿಸುವ ಉದ್ದಾರಕ ಬಂದಾಗ ಪೂರ್‍ವ ದಿಕ್ಕಿನಲ್ಲಿ ತಾರೆಯೊಂದು ಕಾಣಿಸುತ್ತದೆ ಎಂಬ ಪ್ರವಾದನೆ ಯೇಸು ಹುಟ್ಟಿದ್ದಾಗ ನಿಜವಾಗುತ್ತದೆ. ಪ್ರಜ್ವಲವಾಗಿ ಹೊಳೆಯುತ್ತಿದ್ದ ಆ ತಾರೆಯೇ ಜನರಿಗೆ ಯೇಸು ಹುಟ್ಟಿದ ಸಂದೇಶವನ್ನು ಸಾರಿದ್ದಲ್ಲದೆ, ಗೋದಲಿಗೆ ದಾರಿಯನ್ನೂ ತೋರಿಸಿತು ಎನ್ನುತ್ತದೆ ಬಯ್ಬಲ್. ಇದೇ ಸಂಕೇತವಾಗಿ ಇಂದಿಗೂ ಕ್ರಿಸ್‍ಮಸ್‍ ಸಮಯದಲ್ಲಿ ಬಣ್ಣ ಬಣ್ಣದ ತಾರೆಗಳು ಕ್ರಯ್ಸ್ತರ ಮನೆಗಳ ಮೇಲೆ ರಾರಾಜಿಸುತ್ತವೆ. ಯೇಸು ಹುಟ್ಟಿದ ಸಂತೋಶದ ವಾರ್‍ತೆಯನ್ನು ಆ ಸಮಯದಲ್ಲಿ ದೇವ ದೂತರುಗಳು ಆಕಾಶದಲ್ಲಿ ಹಾಡುಗಳ ಮೂಲಕ ಎಲ್ಲೆಡೆ ಸಾರಿದರರು ಎನ್ನುವುದರ ಸಂಕೇತವಾಗಿ ಮನೆ ಮನೆಗೆ ಹೋಗಿ ಕ್ರಿಸ್‍ಮಸ್‍ ಹಾಡುಗಳನ್ನು ಹಾಡುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ಇಶ್ಟೆಲ್ಲದರ ನಡುವೆಯೇ ಜೀವನದುದ್ದಕ್ಕೂ ಶಾಂತಿ, ಪ್ರೀತಿ, ಸಹನೆ, ಕ್ಶಮೆಯ ಸಂದೇಶವನ್ನು ತನ್ನ ನಡೆ ನುಡಿಯಿಂದ ಬೋದಿಸಿದ ಯೇಸು ಕ್ರಿಸ್ತನನ್ನು ಕಂದನಾಗಿ, ಮನೆಯ ಮಗುವಾಗಿ, ಅನಂದ ತರುವ ಬಂದುವಾಗಿ, ಕತ್ತಲನನ್ನು ಹೋಗಲಾಡಿಸುವ ದಿವ್ಯ ಬೆಳಕ್ಕಾಗಿ ನೆನಪಿಸಿಕೊಳ್ಳುವ ಸುಸಮಯ ಈ ಕ್ರಿಸ್‍ಮಸ್‍.

ಇನ್ನೂ ಸ್ಯಾಂಟ ಕ್ಲಾಸ್‍ದೇ ಮತ್ತೊಂದು ಕತೆ. 4ನೇ ಶತಮಾನದಲ್ಲಿ ಈಗಿನ ಟರ್‍ಕಿ ದೇಶದಲ್ಲಿದ್ದ ನಿಕೋಲೇಸ್ ಎಂಬ ವ್ಯಕ್ತಿಗೆ ಬಡವರನ್ನು ಕಂಡರೆ ಬಹಳ ಪ್ರೀತಿ. ಬಡವರಿಗೆ ಉಡುಗೊರೆಗಳನ್ನು ಕೊಡುವುದು ಅವರಿಗೆ ಇಶ್ಟವಾದ ಕೆಲಸ. ಅದನ್ನು ಯಾರಿಗೂ ಗೊತ್ತಾಗದ ಹಾಗೆ ಮಾಡುತ್ತಿದ್ದದ್ದು ಅವರ ವಿಶೇಶತೆ. ಬಡವನ ಮನೆಯ ಹೊರಗಿನ ಪಾದರಕ್ಶೆಗಳಲ್ಲಿ ನಾಣ್ಯವನ್ನು ಇಡುವುದು, ಹೊಗೆ ಗೂಡಿನಿಂದ ಉಡುಗೊರೆಗಳನ್ನು ಚೆಲ್ಲುವುದು, ಈ ರೀತಿಯಾಗಿ ಗುಟ್ಟಾಗಿ ಮಾಡುತ್ತಿದ್ದ ನಿಕೋಲೇಸ್ ಮಾಡುತ್ತಿದ ಸಹಾಯವನ್ನು ಅವರು ಸತ್ತ ಮೇಲೂ ಅವರ ಅಬಿಮಾನಿಗಳು ಮುಂದುವರಿಸಿಕೊಂಡು ಬಂದರು ಎನ್ನುತ್ತದೆ ಮಾಹಿತಿಗಳು. 19ನೇ ಶತಮಾನದಲ್ಲಿ ಅಮೇರಿಕಾದ ಕಲಾವಿದನೊಬ್ಬ ಈ ಸ್ಯಾಂಟ ಎಂಬ ಕಲ್ಪನೆಗೆ ಈಗಿರುವ ರೂಪ ಕೊಟ್ಟ ಪಲವಾಗಿ ಈಗ ಕೆಂಪು ಬಣ್ಣದ ಸ್ಯಾಂಟ ನ ರೂಪ ಜನಪ್ರಿಯವಾಗಿದೆ.

ಇಂತಹ ಮಾನವೀಯ ಗುಣದ ಸ್ಯಾಂಟವನ್ನು ಇಂದಿನ ವ್ಯಾಪಾರಿ ಜಗತ್ತು ಒಬ್ಬ ಮಾರಾಟ ವ್ಯಕ್ತಿಯಾಗಿ ಬಳಸಿಕೊಳ್ಳುತ್ತಿರುವುದು ದುಕ್ಕಕರವಾದರೂ ಮಕ್ಕಳ ಮನಸ್ಸಿನಲ್ಲಿ ಸ್ಯಾಂಟ ವ್ಯಾಪಾರವನ್ನು ಮೀರಿದ ಮುದ್ದಿನ ತಾತನೇ.

ಎಲ್ಲಾ ಸಂಸ್ಕ್ರುತಿ, ದೇಶ, ಬಾಶೆಗಳೂ ತಮ್ಮದೇ ಆದ ರೀತಿಯಲ್ಲಿ ಕ್ರಯ್ಸ್ತ ದರ್‍ಮ ಹಾಗೂ ಕ್ರಿಸ್‍ಮಸ್‍ ಅನ್ನು ಆಚರಿಸುವಂತೆ ನಮ್ಮ ಕರ್‍ನಾಟಕದ ಕ್ರಯ್ಸ್ತರೂ ತಮ್ಮದೇ ಆದ ಸ್ತಳೀಯ ಆಚಾರ ವಿಚಾರದೂಂದಿಗೆ ಕ್ರಿಸ್‍ಮಸ್‍ ಆಚರಿಸುತ್ತಾರೆ. ಕನ್ನಡದ ಕ್ರಿಸ್‍ಮಸ್‍ ಗೀತೆಗಳಲ್ಲಿ ಕನ್ನಡದ ಜಾನಪದ ಮಿಳಿತವಾಗಿರುವ ಪರಿಯನ್ನು ಕೇಳಿಯೇ ಆನಂದಿಸಬೇಕು. ಚರ್‍ಚುಗಳಲ್ಲಿನ ಕನ್ನಡದ ಪ್ರಾರ್‍ತನೆಗಳಲ್ಲಿ ನಾಡು ಹಾಗೂ ನಾಡಿನ ಜನರಿಗಾಗಿ ಪ್ರಾರ್‍ತನೆ ಎಂದಿಗೂ ಮೀಸಲು. ಕ್ರಯ್ಸ್ತರ ಮನೆಗಳಲ್ಲಿ ಮಾಡಲಾಗುವ ಕ್ರಿಸ್‍ಮಸ್‍ ತಿಂಡಿಗಳಲ್ಲಿ ರವೆ ಉಂಡೆ, ಚಕ್ಕುಲಿ, ಕರ್‍ಜಿಕಾಯಿ, ಮುರುಕು, ಕಜ್ಜಾಯಗಳದ್ದೇ ಕಾರುಬಾರು. ಇದರ ಜೊತೆ ಕೇಕ್, ಕಲಕಲ, ಕುಕ್‍ನದೂ ಪಾಲುಗಾರಿಕೆ. ಮನೆಗಳಲ್ಲಿ ಅಲಂಕಾರಗೊಳ್ಳುವ ಗೋದಲಿಯಲ್ಲಿ ದಸರಾ ಬೊಂಬೆಗಳ ರೀತಿಯದೇ ಮೆರಗು. ಮನೆ ಮುಂದೆ ಅರಳುವ ರಂಗೋಲಿಯಲ್ಲಿ ’ಹ್ಯಾಪಿ ಕ್ರಿಸ್‍ಮಸ್‍’ ಎಂಬ ಹಾರಯ್ಕೆ. ಮನೆಗಳಿಗೆ ತಿಂಡಿ ತಿನ್ನಲು ಬರುವ ಅಕ್ಕ ಪಕ್ಕದ ಮನೆಯ ಮಕ್ಕಳ ಕಲರವಕ್ಕೆ ಜಾತಿ ಮತಗಳ ಹಂಗಿಲ್ಲ.

ಹೀಗೆ ಇಡೀ ವಿಶ್ವವೇ ಜಾತಿ ಮತಗಳ ಬೇದವಿಲ್ಲದೆ ಆಚರಿಸುವ ಕ್ರಿಸ್‍ಮಸ್‍ನ ಹಬ್ಬದ ತಿರುಳಿರುವುದು ಶಾಂತಿ, ಪ್ರೀತಿ ಹಾಗೂ ದೀನತೆಯ ಸಂದೇಶದಲ್ಲೇ. ಇದೇ ಶಾಂತಿ ಪ್ರೀತಿ ಸಹನೆ ದೀನತೆ ನಮ್ಮ ಪ್ರತಿ ದಿನವನ್ನೂ ಹಬ್ಬವಾಗಿ ಮಾರ್‍ಪಡಿಸಲಿ, ಯೇಸುವಿನ ಸಂದೇಶಗಳು ನಮ್ಮ ಮನಸ್ಸೆಂಬ ಗೋದಲಿಯಲ್ಲಿ ಸದಾ ನೆಲೆಗೊಳ್ಳಲ್ಲಿ ಎನ್ನುವುದರಲ್ಲಿದೆ ಕ್ರಿಸ್‍ಮಸ್‍ನ ಸಾರ್‍ತಕತೆ.

(ಚಿತ್ರಸೆಲೆ: fanpop.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: