ಅರಿಮೆಯ ಬರಹಗಳ ತೊಡಕುಗಳು
ನುಡಿಯರಿಮೆಯ ಇಣುಕುನೋಟ – 22
ಅರಿಮೆಯ (ವಿಜ್ನಾನದ) ಬರಹಗಳನ್ನು ಓದುತ್ತಿರುವವರಿಗೆ ಅವು ತುಂಬಾ ತೊಡಕಿನವಾಗಿ ಕಾಣಿಸಲು ಹಲವು ಕಾರಣಗಳಿವೆ; ಇವುಗಳಲ್ಲಿ ಎಸಕ(ಕ್ರಿಯೆ)ಗಳನ್ನು ತಿಳಿಸಲು ಎಸಕಪದಗಳನ್ನು ಬಳಸುವ ಬದಲು ಅವುಗಳ ಹೆಸರುರೂಪಗಳನ್ನು ಇಲ್ಲವೇ ಬೇರೆ ಹೆಸರುಕಂತೆಗಳನ್ನು ಬಳಸುವುದು ಒಂದು ಮುಕ್ಯ ಕಾರಣ. ಓಡು ಎಂಬುದು ಒಂದು ಎಸಕವನ್ನು ತಿಳಿಸುತ್ತದೆ; ರಾಜು ಓಡುತ್ತಿದ್ದಾನೆ ಎಂಬ ಸೊಲ್ಲಿನಲ್ಲಿ ಇದನ್ನು ಒಂದು ಎಸಕಪದದ ಮೂಲಕ ಒಂದು ಎಸಕವಾಗಿ ತಿಳಿಸಲಾಗಿದೆ. ಸಾಮಾನ್ಯವಾಗಿ ಮಾತಿನಲ್ಲಿ ಈ ರೀತಿ ಎಸಕಗಳನ್ನು ಎಸಕಗಳಾಗಿಯೇ ತಿಳಿಸಲಾಗುತ್ತದೆ; ಆದರೆ, ಅದನ್ನೊಂದು ವಿಶಯವಾಗಿಯೂ ತಿಳಿಸಲು ಬರುತ್ತದೆ, ಮತ್ತು ಇದಕ್ಕಾಗಿ ಮೇಲಿನ ಸೊಲ್ಲನ್ನು ರಾಜುವಿನ ಓಡುವಿಕೆ ಇಲ್ಲವೇ ರಾಜುವಿನ ಓಟ ಎಂಬ ಒಂದು ಹೆಸರುಕಂತೆಯಾಗಿ ಮಾರ‍್ಪಡಿಸಲು ಬರುತ್ತದೆ.
ಇಂತಹ ಮಾರ‍್ಪಡಿಸಿದ ಬಳಕೆಗಳು ಮಾತಿನಲ್ಲಿ ಇಲ್ಲವೇ ಸಾಮಾನ್ಯ ಬರಹಗಳಲ್ಲಿ ಕಾಣಿಸಿಕೊಳ್ಳುವುದು ತುಂಬಾ ಕಡಿಮೆ; ಆದರೆ, ಅರಿಮೆಯ ಬರಹಗಳಲ್ಲಿ ಅವನ್ನು ತುಂಬಾ ಹೆಚ್ಚು ಬಳಸಲಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ಅವನ್ನು ಬಳಸುವ ಮೂಲಕ ಹೇಳಬೇಕೆಂದಿರುವ ಸಂಗತಿಯನ್ನು ತುಂಬಾ ಅಡಕವಾಗಿ ಹೇಳಲು ಬರುತ್ತದೆ; ಎತ್ತುಗೆಗಾಗಿ, ಮಕ್ಕಳನ್ನು ತಾಯಂದಿರು ಸಾಕುತ್ತಾರೆ ಎಂಬುದನ್ನು ಒಮ್ಮೆ ಸೂಚಿಸಿದ ಮೇಲೆ, ಅದರ ಕುರಿತಾಗಿ ಬೇರೆ ಸಂಗತಿಗಳನ್ನು ತಿಳಿಸಬೇಕಾದಾಗ ಅದನ್ನು ಅಡಕವಾಗಿ ಮಕ್ಕಳ ಸಾಕುವಿಕೆ ಇಲ್ಲವೇ ಬರೀ ಸಾಕುವಿಕೆ ಎಂಬುದಾಗಿ ಮಾರ‍್ಪಡಿಸಿ ಸೂಚಿಸಲು ಬರುತ್ತದೆ.
ಇದಲ್ಲದೆ, ಅರಿಮೆಯ ಬರಹಗಳ ಇಟ್ಟಳ (ರಚನೆ) ಬೇರೆ ಬರಹಗಳ ಇಟ್ಟಳಕ್ಕಿಂತ ಈ ವಿಶಯದಲ್ಲಿ ಬೇರಾಗಿದೆ; ಸಾಮಾನ್ಯ ಬರಹಗಳಲ್ಲಿ ಉದ್ದಕ್ಕೂ ಒಬ್ಬ ವ್ಯಕ್ತಿ ಇಲ್ಲವೇ ಕೆಲವು ವ್ಯಕ್ತಿಗಳು ಏನು ಮಾಡಿದ್ದಾರೆ ಎಂಬುದಾಗಿ ಹಲವು ಬಗೆಯ ಎಸಕಗಳು ಒಂದರ ಬಳಿಕ ಒಂದರಂತೆ ನಡೆದಿರುವುದನ್ನು ತಿಳಿಸಲಾಗುತ್ತದೆ; ಇದಕ್ಕೆ ಬದಲು, ಅರಿಮೆಯ ಬರಹಗಳಲ್ಲಿ ಒಂದು ಎಸಕವನ್ನು ತಿಳಿಸಿದ ಮೇಲೆ, ಆ ಎಸಕದ ಕುರಿತಾಗಿ ಹಲವಾರು ವಿಶಯಗಳನ್ನು ತಿಳಿಸಬೇಕಾಗುತ್ತದೆ, ಮತ್ತು ಇದಕ್ಕಾಗಿ ಆ ಎಸಕವನ್ನು ಮುಂದಿನ ಸೊಲ್ಲುಗಳ ನೆಲೆಯಾಗಿ ಬಳಸಬೇಕಾಗುತ್ತದೆ; ಆದರೆ, ಹೆಸರುಪದಗಳು ಇಲ್ಲವೇ ಎಸಕಪದಗಳ ಹೆಸರುರೂಪಗಳು ಮಾತ್ರ ಸೊಲ್ಲುಗಳ ನೆಲೆಗಳಾಗಬಲ್ಲುವು; ಹಾಗಾಗಿ, ಆ ಎಸಕವನ್ನು ತಿಳಿಸಲು ಒಂದು ಹೆಸರುಕಂತೆಯನ್ನು ಬಳಸಬೇಕಾಗುತ್ತದೆ.
ಇಂತಹ ಮಾರ‍್ಪಡಿಸಿದ ಬಳಕೆಗಳು ತೊಡಕಿನವಾಗಿ ಕಾಣಿಸಲು ಮುಕ್ಯ ಕಾರಣವೇನೆಂದರೆ, ಸಾಮಾನ್ಯವಾಗಿ ನಮ್ಮ ಮಾತಿನಲ್ಲಿ ಎಸಕಪದಗಳು ಎಸಕಗಳನ್ನು ಸೂಚಿಸುತ್ತವೆ ಮತ್ತು ಹೆಸರುಪದಗಳು ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುತ್ತವೆ; ಆದರೆ, ಈ ಮಾರ‍್ಪಡಿಸಿದ ಬಳಕೆಗಳಲ್ಲಿ ಹೆಸರುಪದಗಳ ಮೂಲಕ ಎಸಕಗಳನ್ನು ಸೂಚಿಸಲಾಗುತ್ತದೆ. ಎಂದರೆ, ಇವು ನಾವು ಜಗತ್ತನ್ನು ನೋಡುವ ಬಗೆಯನ್ನೇ ಬೇರೆ ಮಾಡುತ್ತವೆ: ಅವು ಎಸಕಗಳನ್ನು ಹೆಸರುಗಳಾಗಿ, ಎಂದರೆ ವಸ್ತು ಇಲ್ಲವೇ ವಿಶಯಗಳಾಗಿ ನೋಡುವಂತೆ ಮಾಡುತ್ತವೆ. ಅರಿಮೆಯ ಬರಹಗಳನ್ನು ಓದುವವರು ಜಗತ್ತನ್ನು ಈ ರೀತಿ ಒಂದು ಹೊಸ ಬಗೆಯಲ್ಲಿ ನೋಡಲು ಕಲಿಯಬೇಕಾಗುತ್ತದೆ. ಇದು ಸುಲಬದ ಕೆಲಸವಲ್ಲ.
ಕನ್ನಡದ ಮಟ್ಟಿಗೆ ಹೇಳುವುದಾದರೆ, ಇಲ್ಲಿ ಇನ್ನೊಂದು ತೊಡಕೂ ಕಾಣಿಸಿಕೊಳ್ಳುತ್ತದೆ: ಅರಿಮೆಯ ಬರಹಗಳನ್ನು ಬರೆಯುವವರು ಎಸಕಪದಗಳನ್ನು ಹೆಸರುಕಂತೆಗಳಾಗಿ ಮಾರ‍್ಪಡಿಸುವಲ್ಲಿ ಕನ್ನಡದ ಕಸುವು ಎಂತಹದು ಎಂಬುದನ್ನು ಸರಿಯಾಗಿ ತಿಳಿದುಕೊಂಡಿಲ್ಲ. ಹಾಗಾಗಿ, ಅವರು ಕನ್ನಡದವೇ ಆದ ಹೆಸರುಪದಗಳನ್ನು ಇಲ್ಲವೇ ಎಸಕಪದಗಳ ಹೆಸರುರೂಪಗಳನ್ನು ಬಳಸುವ ಬದಲು, ಸಂಸ್ಕ್ರುತದ ಪದ ಮತ್ತು ಪದರೂಪಗಳನ್ನು ಅನವಶ್ಯಕವಾಗಿ ಎರವಲು ಪಡೆದು ಬಳಸಹೋಗುತ್ತಾರೆ, ಮತ್ತು ಆ ಮೂಲಕ ತಮ್ಮ ಬರಹಗಳಲ್ಲಿ ಇನ್ನಶ್ಟು ತೊಡಕುಗಳನ್ನು ಸೇರಿಸಿಕೊಳ್ಳುತ್ತಾರೆ.
ಎತ್ತುಗೆಗಾಗಿ, ಈ ಮಣ್ಣಿನಲ್ಲಿ ಕ್ಶಾರ ಇದೆ ಎಂಬ ಸೊಲ್ಲನ್ನು ಕನ್ನಡದಲ್ಲೇನೇ ಕ್ಶಾರವಿರುವ (ಇಲ್ಲವೇ ಕ್ಶಾರವುಳ್ಳ) ಮಣ್ಣು ಎಂಬುದಾಗಿ ಮಾರ‍್ಪಡಿಸಬಹುದು. ಆದರೆ ಇದು ಕನ್ನಡದಲ್ಲಿ ಅರಿಮೆಯ ಬರಹಗಳನ್ನು ಬರೆಯುವವರ ಗಮನಕ್ಕೇ ಬರುವುದಿಲ್ಲ. ಅದಕ್ಕೆ ಬದಲಾಗಿ ಅವರು ಕ್ಶಾರಯುಕ್ತ ಮಣ್ಣು ಎಂಬುದಾಗಿ ಸಂಸ್ಕ್ರುತದಿಂದ ಯುಕ್ತ ಪದರೂಪವನ್ನು ಎರವಲು ಪಡೆದು ಬಳಸುತ್ತಾರೆ. ಜೀವ ಹೇಗೆ ಹುಟ್ಟಿತು? ಎಂಬ ಪ್ರಶ್ನೆಯೊಂದನ್ನು ಕೇಳಿ, ಅದರ ಮುಂದಿನ ಸೊಲ್ಲಿನಲ್ಲಿ ಜೀವದ ಹುಟ್ಟು ಎಂಬುದಾಗಿ ಅದನ್ನು ಮಾರ‍್ಪಡಿಸಿಕೊಳ್ಳುವ ಬದಲು, ಜೀವದ ಉಗಮ ಎಂಬುದಾಗಿ ಬರೆಯುತ್ತಾರೆ; ಎಂದರೆ, ಸಂಸ್ಕ್ರುತದ ಉಗಮ ಪದವನ್ನು ಅನವಶ್ಯಕವಾಗಿ ಎರವಲಾಗಿ ಪಡೆದು ಬಳಸುತ್ತಾರೆ. ಇದರಿಂದಾಗಿ, ಮೊದಲೇ ತೊಡಕಿನದಾಗಿ ಕಾಣಿಸುವ ಅರಿಮೆಯ ಬರಹ ಇನ್ನಶ್ಟು ತೊಡಕಿನದಾಗುತ್ತದೆ.
ಎಸಕಗಳನ್ನು ತಿಳಿಸಲು ಹೆಸರುಕಂತೆಗಳನ್ನು ಬಳಸಿರುವಲ್ಲಿ ಓದುಗರು ಎಸಕದಿಂದ ವಿಶಯಕ್ಕೆ ನೆಗೆಯಬೇಕಾಗುತ್ತದೆ. ಯಾಕೆಂದರೆ, ಮೇಲೆ ಸೂಚಿಸಿದ ಹಾಗೆ, ಎಸಕವನ್ನು ಇಲ್ಲಿ ಎಸಕಪದದ ಮೂಲಕ ಒಂದು ಎಸಕವಾಗಿ ಸೂಚಿಸದೆ, ಹೆಸರುಪದದ ಮೂಲಕ ಒಂದು ವಿಶಯವಾಗಿ ಸೂಚಿಸಲಾಗುತ್ತದೆ. ಇದಲ್ಲದೆ, ಆ ರೀತಿ ಬದಲಾವಣೆಯನ್ನು ಮಾಡಲಾಗಿದೆ ಎಂಬುದನ್ನು ಬರಹಗಳಲ್ಲಿ ಯಾವ ರೀತಿಯಲ್ಲೂ ಸೂಚಿಸಲಾಗುವುದಿಲ್ಲ. ಓದುಗರು ಈ ನೆಗೆತವನ್ನು ತಾವೇ ಮಾಡಿಕೊಳ್ಳಬಲ್ಲರು ಎಂಬುದಾಗಿ ತಿಳಿಯಲಾಗುತ್ತದೆ.
ಆದರೆ, ಅರಿಮೆಯ ಬರಹಗಳನ್ನು ಓದಿ ಪಳಗಿಲ್ಲದ ಓದುಗರಿಗೆ ಈ ನೆಗೆತ ತೊಂದರೆಯನ್ನು ಕೊಡುತ್ತದೆ. ಕನ್ನಡದ ಅರಿಮೆಯ ಬರಹಗಳಲ್ಲಿ ಈ ನೆಗೆತದೊಂದಿಗೆ ಇನ್ನೊಂದು ನೆಗೆತವನ್ನೂ ಓದುಗರ ಮೇಲೆ ಹೊರಿಸಲಾಗುತ್ತದೆ: ಅವರು ಎಸಕದಿಂದ ಹೆಸರಿಗೆ ನೆಗೆಯಬೇಕಾಗುತ್ತದೆ ಮಾತ್ರವಲ್ಲ, ಕನ್ನಡದ ಹೆಸರಿನಿಂದ ಸಂಸ್ಕ್ರುತದ ಹೆಸರಿಗೂ ನೆಗೆಯಬೇಕಾಗುತ್ತದೆ. ಎತ್ತುಗೆಗಾಗಿ, ಒಂದು ಜೀವಿ ಇನ್ನೊಂದು ಜೀವಿಯನ್ನು ಹುಟ್ಟಿಸುತ್ತದೆ ಎಂಬಲ್ಲಿಂದ ಹುಟ್ಟಿಸುವಿಕೆ ಎಂಬುದಕ್ಕೆ ಹೋಗದೆ ನೇರವಾಗಿ ಪ್ರಜನನ ಕ್ರಿಯೆ ಎಂಬುದಕ್ಕೆ ನೆಗೆಯಬೇಕಾಗುತ್ತದೆ.
ಚಿಕ್ಕ ಮಕ್ಕಳಿಗಾಗಿ ಬರೆದ ಅರಿಮೆಯ ಬರಹಗಳಲ್ಲೂ ಇಂತಹ ಹಲವಾರು ಸಂಸ್ಕ್ರುತದ ಪದರೂಪಗಳನ್ನು ಕಾಣಬಹುದು. ಇವನ್ನು ಮಕ್ಕಳು ಕಣ್ಣು ಮುಚ್ಚಿ ಬಾಯಿಪಾಟ ಮಾಡುತ್ತಾರಲ್ಲದೆ, ಅವು ನಿಜಕ್ಕೂ ಏನು ಹೇಳುತ್ತವೆ ಎಂಬುದು ಅವರ ಗಮನಕ್ಕೆ ಬರುವುದೇ ಇಲ್ಲ. ಯಾಕೆಂದರೆ, ಅವರಿಗೆ ಇವುಗಳಲ್ಲಿ ಬರುವ ಎಸಕದಿಂದ ಹೆಸರಿಗೆ ಹಾರುವ ಮೊದಲ ನೆಗೆತವೇ ತೊಡಕಿನದಾಗಿ ಕಾಣಿಸುತ್ತದೆ; ಇನ್ನು ಕನ್ನಡದ ಹೆಸರಿನಿಂದ ಸಂಸ್ಕ್ರುತದ ಹೆಸರಿಗೆ ಹಾರುವ ಎರಡನೆಯ ನೆಗೆತ ಅವರ ಅಳವಿಗೆ ಮೀರಿದ್ದು.
ಅರಿಮೆಯ ಬರಹಗಳನ್ನು ಮಂದಿ ಮೆಚ್ಚುವ (ಜನಪ್ರಿಯವಾಗುವ) ಹಾಗೆ ಇಲ್ಲವೇ ಚಿಕ್ಕ ಮಕ್ಕಳಿಗೆ ಗೊತ್ತಾಗುವ ಹಾಗೆ ಬರೆಯಬೇಕಿದ್ದಲ್ಲಿ ಬರಹಗಾರರು ಕೆಳಗೆ ಕೊಟ್ಟಿರುವ ಉಪಾಯಗಳನ್ನು ಬಳಸಿಕೊಳ್ಳಬೇಕಾಗುತ್ತದೆ: (೧) ಆದಶ್ಟು ಮಟ್ಟಿಗೆ ಅವರು ಅರಿಮೆಯ (ಪಾರಿಬಾಶಿಕ) ಪದಗಳ ಬಳಕೆಯನ್ನು ಕಡಿಮೆ ಮಾಡಬೇಕು; (೨) ಎಸಕಗಳನ್ನು ತಿಳಿಸುವ ಹೆಸರುಕಂತೆಗಳನ್ನು ಸೊಲ್ಲುಗಳಾಗಿ ಬದಲಾಯಿಸಿಕೊಳ್ಳಬೇಕು; (೩) ಸಿಕ್ಕಲು ಸೊಲ್ಲುಗಳನ್ನು ಸುಳುಸೊಲ್ಲುಗಳಾಗಿ ಬಿಡಿಸಿ ಬರೆಯಬೇಕು; ಮತ್ತು (೪) ಸಂಸ್ಕ್ರುತ (ತತ್ಸಮ) ಪದಗಳ ಬದಲು ಆದಶ್ಟು ಮಟ್ಟಿಗೆ ಕನ್ನಡದವೇ ಆದ ಪದಗಳನ್ನು ಬಳಸಬೇಕು.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
1 Response
[…] <<ನುಡಿಯರಿಮೆಯ ಇಣುಕುನೋಟ – 22 […]