ಮಯ್ಕಲ್ ಶೂಮಾಕರ್

ರಗುನಂದನ್.

michael-schumacher-ski-accident

1 ಮೇ 1994 – ಈ ದಿವಸ ಬಂಡಿಯಾಟದ (motorsports) ಚರಿತ್ರೆಯಲ್ಲಿಯೇ ಕಪ್ಪು ದಿವಸ. ಆವತ್ತು ಆಗಿನ ಪಾರ್‍ಮುಲ 1 ವಿಶ್ವ ಚ್ಯಾಂಪಿಯನ್ ಆಗಿದ್ದ ಆರ್‍ಟನ್ ಸೆನ್ನ ಸಾವನ್ನಪ್ಪಿದ ದಿನ. ಇಟಲಿಯ ಇಮೋಲದಲ್ಲಿ ನಡೆಯುತ್ತಿದ್ದ ಸಾನ್ ಮರಿನೊ ಗ್ರಾಂಡ್ ಪ್ರೀಯಲ್ಲಿ (Grand prix) ತಡೆಗೋಡೆಗೆ ಡಿಕ್ಕಿ ಹೊಡೆದು ಸಾವಿಗೀಡಾಗಿದ್ದರು. ಅಲ್ಲಿಯವರೆಗೆ ಜಗತ್ತಿನ ಮೇಲು ಪಾರ್‍ಮುಲ 1 ಕಾರು ಓಡಿಸುಗರಲ್ಲಿ ಆರ್‍ಟನ್ ಸೆನ್ನ ಮೊದಲಿಗರಾಗಿದ್ದರು. ಇಂತಹ ಓಡಿಸುಗ ಮತ್ತೆ ಹುಟ್ಟಬಲ್ಲನೇ ಎಂಬುದು ಪಾರ್‍ಮುಲಾ 1 ನೋಡುಗರ ಕೇಳ್ವಿಯಾಗಿತ್ತು. ಅದೇ ಹೊತ್ತಿಗೆ ಪಾರ್‍ಮುಲ 1ನಲ್ಲಿ ಹೆಸರು ಮಾಡಲು ಮೊದಲು ಮಾಡಿದ್ದು ಜರ್‍ಮನಿಯ ಮಯ್ಕಲ್ ಶೂಮಾಕರ್.

ಮಯ್ಕಲ್ ಶೂಮಾಕರ್ ತಮ್ಮ ಪಾರ್‍ಮುಲಾ 1 ಬದುಕನ್ನು ಮೊದಲುಮಾಡಿದ್ದು ಜೋರ್‍ಡಾನ್ ತಂಡದ ಜೊತೆ. ಬಳಿಕ 1991ರಲ್ಲೇ ಬೆನೆಟ್ಟಾನ್ ತಂಡ ಮಯ್ಕಲ್‍ನನ್ನು ನೋಂದಾಯಿಸಿಕೊಂಡಿತು. 1991ರಲ್ಲಿ ಶೂಮಾಕರ್ ಬರಿ ನಾಲ್ಕು ಅಂಕಗಳನ್ನು ಗಳಿಸಿದ್ದರು. ಬಳಿಕ 1992ರಲ್ಲಿ ಮೆಕ್ಸಿಕೋ ಗ್ರಾಂಡ್ ಪ್ರೀಯಲ್ಲಿ ಮೂರನೇ ಸ್ತಾನ ಗಳಿಸಿದರು, ಬೆಲ್ಜಿಯನ್ ಗ್ರಾಂಡ್ ಪ್ರೀಯಲ್ಲಿ ಮೊದಲನೇ ಸ್ತಾನ ಗಳಿಸಿದರು. ಒಟ್ಟಾರೆ 1992 ರಲ್ಲಿ ಡ್ರಯ್ವರ್‍ಸ್ ಚ್ಯಾಂಪಿಯನ್ಶಿಪ್ಪಿನಲ್ಲಿ ಮೂರನೇ ಸ್ತಾನ ಗಳಿಸಿದರು. ಆಮೇಲೆ 1994ರಲ್ಲಿ ಮೊದಲ ಸಲಿ ಶೂಮಾಕರ್ ಡ್ರಯ್ವರ್‍ಸ್ ಚ್ಯಾಂಪಿಯನ್ಶಿಪ್ಪನ್ನು ಗೆಲ್ಲುತ್ತಾರೆ.

ಇದೇ ವರುಶವೇ ಆರ್‍ಟನ್ ಸೆನ್ನ ಸಾವನ್ನಪ್ಪುತ್ತಾರೆ. ಬಳಿಕ 1995ರಲ್ಲಿಯೂ ಕೂಡ ಡ್ರಯ್ವರ್‍ಸ್ ಚ್ಯಾಂಪಿಯನ್ಶಿಪ್ಪನ್ನು ಮಯ್ಕಲ್ ಗೆಲ್ಲುತ್ತಾರೆ. ಆದರೆ ಬೆನೆಟ್ಟಾನ್ ಜೊತೆಗೆ ಇದೇ ಅವರ ಕಟ್ಟಕಡೆಯ ವರುಶ. ಮುಂದಿನ ವರುಶ ಅಂದರೆ 1996ರಲ್ಲಿ ಶೂಮಾಕರ್ ಪೆರಾರಿ (Ferrari) ತಂಡವನ್ನು ಸೇರುತ್ತಾರೆ. ಈ ಹೆಜ್ಜೆ ಮಯ್ಕಲ್ ಬಂಡಿಯಾಟದ ಬದುಕಿನಲ್ಲಿ ತುಂಬಾ ಅರಿದಾದದ್ದು. ಏಕೆಂದರೆ ಈ ಜೋಡಿ ಮುಂದಿನ ಹತ್ತು ವರುಶಗಳಲ್ಲಿ ಪಾರ್‍ಮುಲ 1 ಆಟದ ದಿಕ್ಕನ್ನೇ ಬದಲಿಸುತ್ತದೆ.

ಪೆರಾರಿ ತಂಡ ಮಯ್ಕಲ್ ಸೇರುವುದಕ್ಕೆ ಮುಂಚೆ 1979ರಲ್ಲಿ ಡ್ರಯ್ವರ್‍ಸ್ ಚ್ಯಾಂಪಿಯನ್ಶಿಪ್ಪನ್ನು ಗೆದ್ದಿತ್ತು, ಅಂದರೆ ಸುಮಾರು 17 ವರುಶಗಳ ಹಿಂದೆ. ಆ ಹೊತ್ತಿನಲ್ಲಿ ಪೆರಾರಿ ತಂಡ ಈಗಿನಶ್ಟು ಹೆಸರುವಾಸಿಯಾಗಿರಲಿಲ್ಲ. ಇದಕ್ಕೆ ಕಾರಣವೆಂದರೆ ಅವರು ಬಳಸುತ್ತಿದ್ದ ಬಿಣಿಗೆಗಳು (engines). V12 ಬಿಣಿಗೆಗಳನ್ನು ಬಳಸುತ್ತಿದ್ದ ಪೆರಾರಿ V10 ಬಿಣಿಗೆಗಳನ್ನು ಬಳಸುತ್ತಿದ್ದ ತಂಡಗಳ ಸರಿಸಾಟಿಯಾಗಿ ನಿಲ್ಲಲು ಆಗುತ್ತಿರಲಿಲ್ಲ. ಹಾಗಾಗಿ ಇಂತಹ ತಂಡವನ್ನು ಮೇಲೆತ್ತಲು ಚಳಕಿನರಿವಿಗರಾದ ರಾಸ್ ಬ್ರಾನ್, ರೋರಿ ಬಯರ್‍ನ್ ಮತ್ತು ಜೀನ್ ಟಾಡ್ಟ್ ಜೊತೆಗೂಡಿ ಮಯ್ಕಲ್ ಪೆರಾರಿಯೊಂದಿಗೆ ಹೊಸ ಚಿನ್ನದ ಯುಗವೊಂದನ್ನು ಹುಟ್ಟುಹಾಕುತ್ತಾರೆ. ಪಾರ್‍ಮುಲ 1 ತಿಳಿವಿಗರ ಪ್ರಕಾರ ಇದೇ ಮಯ್ಕಲ್ ಶೂಮಾಕರ್ ಮಾಡಿದ ದೊಡ್ಡಮಟ್ಟದ ಸಾದನೆ.

1996ರಲ್ಲಿ ಶೂಮಾಕರ್ ಡ್ರಯ್ವರ್‍ಸ್ ಚ್ಯಾಂಪಿಯನ್ಶಿಪ್ಪಿನಲ್ಲಿ ಮೂರನೇ ಸ್ತಾನ ಗಳಿಸದರೆ ಪೆರಾರಿ ತಂಡ ಚ್ಯಾಂಪಿಯನ್ಶಿಪ್ಪಿನಲ್ಲಿ ಎರಡನೇ ಸ್ತಾನ ಗಳಿಸುತ್ತದೆ. ಆ ವರುಶ ಬೆನೆಟ್ಟಾನ್‍ಗಿಂತ ಮೇಲಿನ ಸ್ತಾನ ಪೆರಾರಿ ಗಳಿಸಿರುತ್ತದೆ. 1997ರಲ್ಲಿ ವಿಲಿಯಮ್ಸ್ ತಂಡದ ಜಾಕ್ ವಿಲ್ನೇವ್ ಮತ್ತೆ ಮಯ್ಕಲ್ ನಡುವೆ ಸಾಕಶ್ಟು ಪಯ್ಪೋಟಿ ಏರ್‍ಪಡುತ್ತದೆ. ಕಡೆಗೆ ಜಾಕ್ ಗೆಲ್ಲುತ್ತಾರೆ. ಇದೇ ರೀತಿ 1998ರಲ್ಲಿ ಮಿಕ ಹ್ಯಾಕಿನೆನ್ ಮತ್ತು ಶೂಮಾಕರ್ ನಡುವೆ ಡ್ರಯ್ವರ್‍ಸ್ ಪಟ್ಟಕ್ಕೆ ತಿಕ್ಕಾಟ ನಡೆಯುತ್ತದೆ. ಆದರೆ ಮತ್ತೆ ಶೂಮಾಕರ್ ಮೊದನಲೇ ಸ್ತಾನ ಗಳಿಸುವಲ್ಲಿ ಎಡವುತ್ತಾರೆ. 1999ರಲ್ಲಿ ಪೆರಾರಿ ತಂಡಗಳ ಚ್ಯಾಂಪಿಯನ್ಶಿಪ್ಪನ್ನು ಗೆಲ್ಲುತ್ತದೆ ಆದರೆ ಮಯ್ಕಲ್‍ರವರನ್ನು ಮತ್ತೆ ಹ್ಯಾಕಿನೆನ್ ಸೋಲಿಸುತ್ತಾರೆ.

ಬಳಿಕ 2000ರಿಂದ 2004ರ ವರೆಗೆ ಒಟ್ಟು ಅಯ್ದು ಚ್ಯಾಂಪಿಯನ್ಶಿಪ್ಪುಗಳನ್ನು ಗೆಲ್ಲುತ್ತಾರೆ ಶೂಮಾಕರ್. ಈ ಗಡುವಿನಲ್ಲಿ ಪಾರ್‍ಮುಲಾ 1 ಹಿನ್ನಡವಳಿಯಲ್ಲಿಯೇ ಯಾರೂ ಗೆಲ್ಲದಶ್ಟು ಆಟಗಳನ್ನು ಗೆದ್ದು ಡ್ರಯ್ವರ್‍ಸ್ ಚ್ಯಾಂಪಿಯನ್ಶಿಪ್ ಪಟ್ಟವನ್ನು ಮುಡಿಗೇರಿಸಿಕೊಳ್ಳುತ್ತಾರೆ. 2003ರ ಹೊತ್ತಿಗೆ ಅವರ 6ನೇ ಡ್ರಯ್ವರ್‍ಸ್ ಪಟ್ಟ ದೊರೆತಿರುತ್ತದೆ. ಆ ಪಟ್ಟ ಅವರಿಗೆ ಕಡು ಹೆಚ್ಚು ಪಟ್ಟಗಳನ್ನು ಪಡೆದ ದಾಕಲೆ ಹೊಂದಿದ ಮೇಲ್ಮೆ ತಂದುಕೊಡುತ್ತದೆ. 2004ರಲ್ಲಿ ಮೊದಲ 13 ರೇಸುಗಳಲ್ಲಿ 12ಅನ್ನು ಗೆದ್ದು ಮತ್ತೊಂದು ದಾಕಲೆ ಬರೆಯುತ್ತಾರೆ. ಅದೇ ವರುಶ ಒಟ್ಟು 13 ರೇಸುಗಳನ್ನು ಗೆದ್ದು 148 ಅಂಕಗಳನ್ನು ಗಳಿಸಿ ಪಾರ್‍ಮುಲ 1 ನಲ್ಲಿಯೇ ಕಡು ಹೆಚ್ಚು ಅಂಕಗಳನ್ನು ಪಡೆದ ದಾಕಲೆಗೆ ಪಾತ್ರರಾಗುತ್ತಾರೆ.

2005ರ ಬಳಿಕ ಮಯ್ಕಲ್ ಶೂಮಾಕರ್ ರವರ ಆಟದ ಮಟ್ಟ ಕುಸಿಯುತ್ತಾ ಬಂದಿತು. ಆ ವರುಶದಲ್ಲಿ ಬರಿ 62 ಅಂಕಗಳನ್ನು ಪಡೆದು ಮೂರನೇ ಸ್ತಾನ ಗಿಟ್ಟಿಸಿದರು. ಆ ಹೊತ್ತಿಗೆ ಪರ್‍ನಾಂಡೊ ಅಲೋನ್ಸೊ ಮೇಲೇರಲು ಶುರು ಮಾಡಿದರು. 2006ರಲ್ಲಿಯೂ ಹೆಚ್ಚೇನು ಸಾದನೆಗೆಯ್ಯಲ್ಲಿಲ್ಲ ಶೂಮಾಕರ್. ಅಶ್ಟೊತ್ತಿಗೆ ಪೆರಾರಿ ತಂಡದವರು ಮಯ್ಕಲ್ ಇನ್ನೇನು ತಮ್ಮ ತಂಡವನ್ನು ತೊರೆಯಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. 2007 ರಿಂದ 2009ರ ವರೆಗೆ ಪೆರಾರಿ ತಂಡದ ಅರಿವೀಯುಗರಾಗಿ (Advisor) ಕೆಲಸ ಮಾಡಿದರು. ಬಳಿಕ ಮತ್ತೆ 2010ರಲ್ಲಿ ಮರ್‍ಸೇಡಿಸ್ ತಂಡದ ಮೂಲಕ ಮತ್ತೆ ಪಾರ್‍ಮುಲ 1 ಗೆ ಮರಳಿದರು. ಆದರೆ ಅವರಿಗೆ ಮೇಲ್ಮಟ್ಟದ ಸಾದನೆ ಏನು ಮಾಡಲಾಗಲಿಲ್ಲ. ಅವರ ವಯಸ್ಸೂ ಕೂಡ ಹೆಚ್ಚಾಗುತ್ತ ಬಂದಿತ್ತು. 2012ರಲ್ಲಿ ಅವರು ಏಳನೇ ಸ್ತಾನ ಪಡೆದಿದ್ದರು.

ಇತ್ತೀಚಿಗೆ (29/12/2013) ಪ್ರಾನ್ಸಿನ ಆಲ್ಪ್ಸಿನಲ್ಲಿ ಸ್ಕೀಯಿಂಗ್(Skiing) ಮಾಡಬೇಕಾದರೆ ಶೂಮಾಕರ್ ರವರು ತಮ್ಮ ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಮಿದುಳಿಗೆ ಏಟು ಬಿದ್ದಿರುವುದರಿಂದ ಅವರ ಸ್ತಿತಿ ಈಗ ಗಂಬೀರವಾಗಿದೆ ಎಂದು ಹೇಳಲಾಗಿದೆ. ಅವರಿಗೆ ಬೇಗ ವಾಸಿಯಾಗಲೆಂದು ಹಾರಯ್ಸೋಣ.

(ಚಿತ್ರ ಸೆಲೆ: bmwblog.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: