ಕನ್ನಡ ನುಡಿ ಎಶ್ಟು ಹಳೆಯದು?

ಡಿ.ಎನ್.ಶಂಕರ ಬಟ್.

ನುಡಿಯರಿಮೆಯ ಇಣುಕುನೋಟ – 23

nudi_inukuಕನ್ನಡ ನುಡಿ ಎಶ್ಟು ಹಳೆಯದು ಎಂಬುದನ್ನು ತಿಳಿಯಲು ಹೆಚ್ಚಿನ ಅರಿವಿಗರೂ ಕನ್ನಡದ ಶಾಸನಗಳು ಇಲ್ಲವೇ ಕನ್ನಡ ಪದಗಳನ್ನು ಬಳಸಿರುವ ಪಳೆಯುಳಿಕೆಗಳು ಎಶ್ಟು ಹಳೆಯವು ಎಂಬುದನ್ನು ತಿಳಿಯಲು ಹೊರಡುತ್ತಾರೆ. ಆದರೆ, ಇಂತಹ ಪುರಾವೆಗಳು ಕನ್ನಡ ಬರಹ ಎಶ್ಟು ಹಳೆಯದು ಎಂಬುದನ್ನು ತಿಳಿಸಬಲ್ಲುವಲ್ಲದೆ ಕನ್ನಡ ನುಡಿ ಎಶ್ಟು ಹಳೆಯದು ಎಂಬುದನ್ನು ತಿಳಿಸಲಾರವು. ಯಾಕೆಂದರೆ, ಕನ್ನಡ ನುಡಿ ಎಂಬುದು ಮುಕ್ಯವಾಗಿ ಕನ್ನಡಿಗರ ಮಾತಲ್ಲದೆ ಬರಹವಲ್ಲ. ಎಲ್ಲಾ ನುಡಿಗಳಲ್ಲೂ ಮಾತು ಬರಹದಿಂದ ತುಂಬಾ ಹಿಂದೆಯೇ ಬಳಕೆಗೆ ಬಂದಿರುತ್ತದೆ. ಹಾಗಾಗಿ, ನಾವಿಲ್ಲಿ ಬರಹಕ್ಕಿಂತ ಬೇರಾಗಿರುವ ಪುರಾವೆಗಳನ್ನು ಹುಡುಕಿಹಿಡಿಯಬೇಕಾಗುತ್ತದೆ.

ನುಡಿಗಳ ಹುಟ್ಟು ಮನುಶ್ಯರ ಇಲ್ಲವೇ ಬೇರೆ ಉಸಿರಿಗಳ ಹುಟ್ಟಿಗಿಂತ ತೀರ ಬೇರಾದುದು: ಒಂದು ನುಡಿಯನ್ನಾಡುವ ಮಂದಿ ದೂರದ ಎರಡು ಊರುಗಳಲ್ಲಿ ನೆಲೆಸಿದಾಗ, ಅವರ ನಡುವೆ ಮೊದಲಿಗಿದ್ದ ಸಂಪರ‍್ಕ ಇಲ್ಲವಾಗುತ್ತದೆ, ಮತ್ತು ಇದರಿಂದಾಗಿ ಅವರಾಡುವ ನುಡಿಯಲ್ಲಿ ನಡೆಯುವ ಮಾರ‍್ಪಾಡುಗಳು ಒಂದೇ ಬಗೆಯವಾಗಿರುವುದಿಲ್ಲ. ಹಾಗಾಗಿ, ಸಮಯ ಕಳೆದಂತೆ ಅವರಾಡುವ ನುಡಿಗಳು ಬೇರಾಗುತ್ತಾ ಹೋಗುತ್ತವೆ, ಮತ್ತು ಕೊನೆಗೆ ಅವು ಎರಡು ಬೇರೆಯೇ ನುಡಿಗಳೆಂಬ ಅನಿಸಿಕೆಯನ್ನು ಕೊಡಲು ತೊಡಗುತ್ತವೆ.

ಒಂದು ನುಡಿ ಈ ರೀತಿ ಎರಡು ನುಡಿಗಳಾಗಿ ಕವಲೊಡೆದಾಗ, ಅವುಗಳಲ್ಲಿ ಯಾವುದು ಮೂಲ ನುಡಿ ಮತ್ತು ಯಾವುದು ಹೊಸದಾಗಿ ಹುಟ್ಟಿಕೊಂಡಿರುವ ನುಡಿ ಎಂದು ಬೇರ‍್ಪಡಿಸಿ ಹೇಳಲು ಬರುವುದಿಲ್ಲ. ಯಾಕೆಂದರೆ, ಮಾರ‍್ಪಾಡುಗಳು ಅವೆರಡರಲ್ಲೂ ನಡೆದಿರುತ್ತವೆ; ಒಂದರಲ್ಲಿ ನಡೆದ ಮಾರ‍್ಪಾಡುಗಳು ಇನ್ನೊಂದರಲ್ಲಿ ನಡೆದಿಲ್ಲವೆಂಬುದೇ ಅವೆರಡು ಬೇರೆ ಬೇರಾಗಿ ಕಾಣಿಸಿಕೊಳ್ಳಲು ಕಾರಣ. ಆದರೆ, ಇಂತಹ ಕಡೆಗಳಲ್ಲಿ ಒಂದು ಮೂಲ ನುಡಿ ಎರಡು ಹೊಸ ನುಡಿಗಳಾಗಿ ಕವಲೊಡೆದಿದೆಯೆಂದು ಹೇಳಲು ಬರುತ್ತದೆ, ಮತ್ತು ಎಶ್ಟು ಸಮಯಕ್ಕೆ ಹಿಂದೆ ಅವು ಆ ರೀತಿ ಕವಲೊಡೆದುವೋ ಅಶ್ಟು ಹಳೆಯವು ಆ ನುಡಿಗಳು ಎಂದು ತಿಳಿಯಲು ಬರುತ್ತದೆ.

ಕನ್ನಡ, ತಮಿಳು, ತೆಲುಗು, ಮಲಯಾಳ ಮೊದಲಾದ ಒಟ್ಟು ಸುಮಾರು ಇಪ್ಪತ್ತಯ್ದು ನುಡಿಗಳು ಮೂಲದ್ರಾವಿಡವೆಂಬ ಒಂದು ನುಡಿಯಿಂದ ಯಾವ ರೀತಿಯಲ್ಲಿ ಕವಲೊಡೆದು ಬೇರೆ ಬೇರೆ ನುಡಿಗಳಾಗಿ ಮಾರ‍್ಪಟ್ಟಿರಬೇಕು ಎಂಬುದನ್ನು ತಿಳಿದುಕೊಂಡಲ್ಲಿ, ಅವುಗಳಲ್ಲಿ ಕನ್ನಡ ಎಶ್ಟು ಹಿಂದೆ ಕವಲೊಡೆದಿದೆ ಎಂಬುದನ್ನು ತಿಳಿಯಲು ಬರುತ್ತದೆ.

ಮೂಲದ್ರಾವಿಡ ನುಡಿ ಮೊದಲಿಗೆ ತೆಂಕುದ್ರಾವಿಡ, ಬಡಗುದ್ರಾವಿಡ, ಮತ್ತು ನಡುದ್ರಾವಿಡ ಎಂಬ ಮೂರು ನುಡಿಗಳಾಗಿ ಕವಲೊಡೆದಿರಬೇಕು, ಮತ್ತು ಈ ಮೂರು ನುಡಿಗಳು ಆಮೇಲೆ ಬೇರೆ ಹಲವು ನುಡಿಗಳಾಗಿ ಕವಲೊಡೆಯುತ್ತಾ ಹೋಗಿ ಇವತ್ತಿನ ಇಪ್ಪತ್ತಯ್ದು ನುಡಿಗಳು ಬಳಕೆಗೆ ಬಂದಿರಬೇಕು ಎಂಬುದಾಗಿ ಕಲ್ಪಿಸಲಾಗಿದೆ. ಈ ಕಲ್ಪನೆಗೆ ಇವತ್ತಿನ ದ್ರಾವಿಡ ನುಡಿಗಳ ನಡುವೆ ಎಂತಹ ವ್ಯತ್ಯಾಸಗಳಿವೆ ಮತ್ತು ಎಶ್ಟು ವ್ಯತ್ಯಾಸಗಳಿವೆ ಎಂಬುದೇ ಆದಾರವಾಗಿರುತ್ತದೆ. ಎರಡು ನುಡಿಗಳ ನಡುವೆ ವ್ಯತ್ಯಾಸಗಳು ಹೆಚ್ಚಿದ್ದಶ್ಟೂ ಅವು ಕವಲೊಡೆದಿರುವ ಸಮಯ ಹೆಚ್ಚು ಹಿಂದಕ್ಕೆ ಹೋಗುತ್ತದೆ.

ದ್ರಾವಿಡ ನುಡಿಯ ಮೂರು ಕವಲುಗಳಲ್ಲಿ ಒಂದಾದ ತೆಂಕುದ್ರಾವಿಡ ನುಡಿ ಇವತ್ತು ಕನ್ನಡ, ತಮಿಳು, ಮಲಯಾಳ, ತುಳು, ಕೊಡಗು, ತೊದ, ಕೋತ ಮತ್ತು ಕೊರಗ ಎಂಬ ಒಟ್ಟು ಎಂಟು ಸ್ವತಂತ್ರ ನುಡಿಗಳಾಗಿ ಕವಲೊಡೆದಿದೆಯೆಂದು ಹೇಳಲಾಗುತ್ತದೆ; ಈ ಎಂಟು ನುಡಿಗಳಲ್ಲಿ, ಕೊರಗ ನುಡಿಯನ್ನು ಸದ್ಯಕ್ಕೆ ತೆಂಕುದ್ರಾವಿಡದಲ್ಲಿ ಗುಂಪಿಸಲಾಗಿದೆಯಾದರೂ, ನಿಜಕ್ಕೂ ಅದು ಯಾವ ರೀತಿಯಲ್ಲಿ ಉಳಿದ ನುಡಿಗಳೊಂದಿಗೆ ಸಂಬಂದಿಸಿದೆ ಎಂಬುದನ್ನು ಹೇಳಲು ಇನ್ನೂ ಸಾದ್ಯವಾಗಿಲ್ಲ. ಕೆಲವು ವಿಶಯಗಳಲ್ಲಿ ಅದು ಬಡಗುದ್ರಾವಿಡ ನುಡಿಗಳನ್ನು ಹೋಲುತ್ತಿರುವುದೇ ಇದಕ್ಕೆ ಕಾರಣ.

ಉಳಿದ ಏಳು ತೆಂಕುದ್ರಾವಿಡ ನುಡಿಗಳಲ್ಲಿ, ತುಳು ನುಡಿ ಮೊದಲಿಗೆ ಬೇರ‍್ಪಟ್ಟಿರಬೇಕು; ಯಾಕೆಂದರೆ, ಉಳಿದ ಎಲ್ಲಾ ತೆಂಕುದ್ರಾವಿಡ ನುಡಿಗಳಲ್ಲೂ ನಡೆದಿರುವ ಹಲವು ಮಾರ‍್ಪಾಡುಗಳು ತುಳುವಿನಲ್ಲಿ ನಡೆದಿಲ್ಲ. ಉಳಿದ ಆರು ತೆಂಕುದ್ರಾವಿಡ ನುಡಿಗಳಲ್ಲಿ ಮೊದಲಿಗೆ ಕವಲೊಡೆದು ಸ್ವತಂತ್ರ ನುಡಿಯೆನಿಸಿದುದು ಕನ್ನಡ ನುಡಿ. ಇದನ್ನೂ ಉಳಿದ ತೆಂಕುದ್ರಾವಿಡ ನುಡಿಗಳಲ್ಲಿ ನಡೆದಿರುವ, ಮತ್ತು ಕನ್ನಡದಲ್ಲಿ ನಡೆಯದಿರುವ (ಇಲ್ಲವೇ ಬೇರೆ ಬಗೆಯಲ್ಲಿ ನಡೆದಿರುವ) ಹಲವು ಮಾರ‍್ಪಾಡುಗಳ ಆದಾರದ ಮೇಲೆ ಹೇಳಲು ಬರುತ್ತದೆ.

ಇಂತಹ ಮಾರ‍್ಪಾಡುಗಳಲ್ಲಿ ಒಂದನ್ನು ಹಳೆಗನ್ನಡದ ಬೇಂಟೆ, ತೋಂಟ, ಎಂಟು, ತೆಂಕು ಮೊದಲಾದ ಪದಗಳನ್ನು ತಮಿಳಿನ ವೇಟ್ಟಯ್, ತೋಟ್ಟಮ್, ಎಟ್ಟು, ತೆಕ್ಕು ಮೊದಲಾದ ಪದಗಳೊಂದಿಗೆ ಹೋಲಿಸುವ ಮೂಲಕ ತಿಳಿಯಬಹುದು; ಇವುಗಳಲ್ಲಿ ಮೊದಲಿಗಿದ್ದ ಮೂಗುಲಿ(ಅನುನಾಸಿಕ)ಯನ್ನು ಕನ್ನಡ ಉಳಿಸಿಕೊಂಡಿದೆ; ಆದರೆ, ತಮಿಳು, ಕೊಡಗು (ಎಟ್ಟ್, ತೆಕ್ಕ್), ತೊದ ಮೊದಲಾದ ಉಳಿದ ನುಡಿಗಳು ಕಳೆದುಕೊಂಡಿವೆ. ಇನ್ನೊಂದು ವ್ಯತ್ಯಾಸವನ್ನು ಕನ್ನಡದ ಆಡಿದೆ, ನಂಬಿದೆ, ಕಟ್ಟಿದೆ, ಅಮುಕಿದೆ ಎಂಬ ಎಸಕ(ಕ್ರಿಯಾ)ರೂಪಗಳನ್ನು ತಮಿಳಿನ ಆಟಿನೇನ್, ನಂಪಿನೇನ್, ಕಟ್ಟಿನೇನ್, ಅಮುಕ್ಕಿನೇನ್ ಎಂಬವುಗಳೊಂದಿಗೆ ಹೋಲಿಸುವ ಮೂಲಕ ತಿಳಿಯಬಹುದು.

ಈ ರೂಪಗಳಲ್ಲಿ ಬಂದಿರುವ ಹಿಂಬೊತ್ತಿನ ಒಟ್ಟು (ಪ್ರತ್ಯಯ) ಕನ್ನಡದಲ್ಲಿ ನಕಾರವನ್ನು ಕಳೆದುಕೊಂಡಿದೆ; ಆದರೆ, ತಮಿಳು, ಕೊಡಗು, ತೊದ ಮೊದಲಾದ ಉಳಿದ ನುಡಿಗಳಲ್ಲಿ ಅದನ್ನು ಉಳಿಸಿಕೊಂಡಿದೆ. ಮತ್ತೊಂದು ವ್ಯತ್ಯಾಸವೆಂದರೆ, ತೆಂಕುದ್ರಾವಿಡದಲ್ಲಿದ್ದ ಅ ಮತ್ತು ಅಯ್‌ಗಳಲ್ಲಿ ಕೊನೆಗೊಳ್ಳುವ ಎರಡು ಬಗೆಯ ಎಸಕಪದಗಳು ಕನ್ನಡದಲ್ಲಿ ಒಂದೇ ಬಗೆಯವಾಗಿವೆ; ಕನ್ನಡದ ನಡೆದೆ ಮತ್ತು ತಡೆದೆ ಎಂಬ ರೂಪಗಳನ್ನು ತಮಿಳಿನ ನಟನ್ತೇನ್ ಮತ್ತು ತಟಯ್‌ನ್ತೇನ್ ಎಂಬ ರೂಪಗಳೊಂದಿಗೆ ಹೋಲಿಸಿನೋಡಿದಾಗ ಈ ವ್ಯತ್ಯಾಸ ಕಾಣಿಸುತ್ತದೆ. ಕೊಡಗು, ತೊದ ಮೊದಲಾದ ಉಳಿದ ನುಡಿಗಳೂ ಈ ವ್ಯತ್ಯಾಸವನ್ನು ತಮಿಳಿನ ಹಾಗೆ ಉಳಿಸಿಕೊಂಡಿವೆ.

ಉಳಿದ ಅಯ್ದು ತೆಂಕುದ್ರಾವಿಡ ನುಡಿಗಳಲ್ಲಿ ಮೊದಲಿಗೆ ಕೊಡಗು ನುಡಿ ಬೇರಾಗಿರಬೇಕು, ಮತ್ತು ಆಮೇಲೆ ತೊದ ಮತ್ತು ಕೋತ ನುಡಿಗಳು ಬೇರಾಗಿರಬೇಕು. ತಮಿಳು ಮತ್ತು ಮಲಯಾಳ ನುಡಿಗಳು ಮೂಲನುಡಿಯಿಂದ ಬೇರ‍್ಪಟ್ಟು ಸ್ವತಂತ್ರ ನುಡಿಗಳಾಗುವ ಮೊದಲೇ ಈ ಮೂರು ನುಡಿಗಳೂ ಬೇರ‍್ಪಟ್ಟಿರಬೇಕೆಂದು ಹೇಳುವುದಕ್ಕೆ ತಮಿಳು ಮತ್ತು ಮಲಯಾಳಗಳಲ್ಲಿ ನಡೆದ, ಮತ್ತು ಈ ಮೂರು ನುಡಿಗಳಲ್ಲಿ ನಡೆಯದಿದ್ದ (ಇಲ್ಲವೇ ಬೇರೆ ಬಗೆಯಲ್ಲಿ ನಡೆದ) ಹಲವು ಮಾರ‍್ಪಾಡುಗಳನ್ನು ಎತ್ತುಗೆಯಾಗಿ ಕೊಡಬಹುದು.

ಮೇಲೆ ಕೊಟ್ಟಿರುವ ವಿಶಯಗಳ ಮೇಲೆ, ತಮಿಳು ಬರಹ ಕನ್ನಡ ಬರಹದಿಂದ ಹಳೆಯದಾಗಿದೆಯಾದರೂ ತಮಿಳು ನುಡಿ ಕನ್ನಡ ನುಡಿಗಿಂತ ಹಳೆಯದಲ್ಲ; ಅದು ಸ್ವತಂತ್ರ ನುಡಿಯಾಗುವುದಕ್ಕಿಂತ (ಎಂದರೆ ಅದು ತನ್ನದೇ ಆದ ಪರಿಚೆಗಳನ್ನು ಪಡೆದುಕೊಳ್ಳುವುದಕ್ಕಿಂತ) ಎಶ್ಟೋ ಮೊದಲೇ ಕನ್ನಡ ನುಡಿ ಒಂದು ಸ್ವತಂತ್ರ ನುಡಿಯಾಗಿ ಬೇರ‍್ಪಟ್ಟಿತ್ತೆಂದು ಹೇಳಲು ಬರುತ್ತದೆ. ಆದರೆ, ಇದರಿಂದಾಗಿ ಕನ್ನಡಕ್ಕೊಂದು ‘ಮೇಲ್ತನ’ ದೊರೆತಿದೆಯೆಂದೇನೂ ನನಗೆ ಅನಿಸುವುದಿಲ್ಲ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು) 

 <<ನುಡಿಯರಿಮೆಯ ಇಣುಕುನೋಟ – 22

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. 15/01/2014

    […] <<ನುಡಿಯರಿಮೆಯ ಇಣುಕುನೋಟ – 23 […]

  2. 26/12/2014

    […] ( ಹೆಚ್ಚಿನ ಮಾಹಿತಿಗೆ ಡಾ. ಶಂಕರ ಬಟ್ಟರ “ಕನ್ನಡ ನುಡಿ ಎಶ್ಟು ಹಳೆಯದು?” ಎಂಬ ಬರಹವನ್ನು […]

ಅನಿಸಿಕೆ ಬರೆಯಿರಿ: