‘ಪನ್’ ಅವಾಂತರಗಳು
ನನಗೆ ಚಿಕ್ಕಂದಿನಿಂದಲೂ ‘ಪನ್’ ಬಗ್ಗೆ ತುಂಬಾ ಒಲವು. ಬಗೆಬಗೆಯ ವಸ್ತುಗಳನ್ನು ಸೂಚಿಸುವ ಒಂದೇ ಪದದಿಂದ, ಒಂದೇ ತರಹದ ದನಿಯುಳ್ಳ ಬೇರೆ ಬೇರೆ ಪದಗಳಿಂದ ‘ಪನ್’ ಉಂಟಾಗುತ್ತದೆ. ಇದರಿಂದ ಹಲವಾರು ಹಾಸ್ಯ ಸನ್ನಿವೇಶಗಳು ಎದುರಾಗುತ್ತವೆ. ಒಮ್ಮೊಮ್ಮೆ ಅವಾಂತರಗಳೂ ನಡೆದುಬಿಡುತ್ತವೆ. ನಾನು ಕಂಡಿರುವ ‘ಪನ್’ ಇಂದ ಉಂಟಾದ ಎರಡು ವಿಚಿತ್ರ ಅವಾಂತರಗಳು ಹೀಗಿವೆ.
ನಾನಾಗ ಮೂರನೆಯ ತರಗತಿಯಲ್ಲಿ ಓದುತ್ತಿದ್ದೆ ಅಂತ ನೆನಪು. ಆರನೆಯ ತರಗತಿಯಲ್ಲಿ ಓದುತ್ತಿದ್ದ ಸೋಮ ಅನ್ನುವ ಹುಡುಗ ನಮ್ಮ ಟೀಚರಿಗೆ ಅಚ್ಚುಮೆಚ್ಚು. ಸೋಮ ಆಟದಲ್ಲೂ ಚೂಟಿ, ಓದುವುದರಲ್ಲೂ ಮುಂದು. ನೀವು ಮಕ್ಕಳೆಲ್ಲಾ ಸೋಮನಂತೆ ಇರಬೇಕು, ಸೋಮ ಹೀಗೆ ಹೇಳಿದ, ಸೋಮ ಹಾಗೆ ಮಾಡಿದ ಅಂತೆಲ್ಲಾ ನಮ್ಮ ಟೀಚರು ಯಾವಾಗಲೂ ಕತೆ ಹೇಳುತ್ತಾ ಇದ್ದರು. ಸೋಮನ ಕತೆಗಳನ್ನು ಕೇಳಿ ಕೇಳಿ ರೋಸಿಹೋದ ನಾವು ಅಕ್ಕಪಕ್ಕದವರೊಡನೆ ಹರಟೆ ಹೊಡೆಯುತ್ತಾ ಕುಳಿತುಬಿಡುತ್ತಿದ್ದೆವು. ಒಮ್ಮೆ ನನ್ನ ಪಕ್ಕ ಕುಳಿತಿದ್ದ ಹುಡುಗಿಗೆ “ನಮ್ಮ ಟೀಚರಿಗೆ ಸೋಮನ ಬಗ್ಗೆ ಎಶ್ಟು ಗೊತ್ತು ಅಂದರೆ ಮುಂದೊಂದು ದಿನ ಅವರಿಂದ ಸೋಮಾಯಣ ಬಂದರೂ ಬರಬಹುದು” ಅಂದೆ. ಆಗ ನಾನು “ರಾಮಾಯಣ” ಅಂದರೆ “ರಾಮನ ಕತೆ” ಅಂತ ತಪ್ಪಾಗಿ ತಿಳಿದುಕೊಂಡಿದ್ದೆ. ನನ್ನ ಅಪಾರ ತಿಳಿವನ್ನು (ದಡ್ಡತನವನ್ನು?) ತೋರಿಸಿಕೊಳ್ಳಲು ಹೀಗೊಂದು ಹೊಸಾ ಪದಪ್ರಯೋಗ ಮಾಡಿದ್ದೆ – “ಸೋಮಾಯಣ”.
ನಾನು ಹಾಗೆ ಹೇಳಿದ್ದೇ ತಡ ಆ ಹುಡುಗಿ “ಟೀಚರಿಗೆ ಯೋಳ್ತೀನಿ ತಾಳು…” ಅಂತ ತನ್ನ ತೋರುಬೆರಳನ್ನು ಆಡಿಸುತ್ತಾ ಬೆದರಿಸಿದಳು. ನಾನು ಏನಾಯಿತೆಂದು ತಿಳಿಯದೇ ತಬ್ಬಿಬ್ಬಾದೆ.
ಕಡೆಗೆ “ನಾನೇನು ಅಂತ ಹೇಳಬಾರದ್ದು ಹೇಳಿದೆ ಅಂತ ದೂರು ಕೊಡುತ್ತೀಯ?” ಅಂತ ಕೇಳಿಯೇ ಬಿಟ್ಟೆ.
“ಮತ್ತೆ ಏನು ಅಂಗೆಲ್ಲಾ ಕೆಟ್ಟಕೆಟ್ಟ ಮಾತು ಆಡೋದು…ಸೋಮ ಯಣ (ಯೆಣ) ಅಂತೆಲ್ಲಾ” ಅಂತ ವಿವರಿಸಿದಳು. “ಹ” ಹೇಳದ ಆ ಹುಡುಗಿ ಏನೂ ತಪ್ಪು ಮಾಡಿರದ ನನ್ನಿಂದ ಸೋಮನ ಹೆಣ ಉರುಳಿಸಿಬಿಟ್ಟಿದ್ದಳು!
ನಾನು ಎಂಟನೆಯ ತರಗತಿಯಲ್ಲಿದ್ದಾಗ ಇನ್ನೊಂದು ರಂಜನೀಯ ಸನ್ನಿವೇಶ ಜರುಗಿತು. ಆಗೆಲ್ಲಾ ಕ್ರಿಕೆಟ್ ಹುಚ್ಚು ಜಾಸ್ತಿ ನಮಗೆ. ಅಕ್ಕಪಕ್ಕದ ಮನೆಗಳ ಕಿಟಕಿ ಗಾಜುಗಳನ್ನು ಒಡೆದಿದ್ದರಿಂದ ಆಟದ ಸಮಯದಲ್ಲಿ ರಸ್ತೆಯಿಂದ ಗಡೀಪಾರಾಗಿದ್ದೆವು. ಇನ್ನೇನೂ ಮಾಡಲಾಗದೆ ಬಯಲನ್ನು ಹುಡುಕಿಕೊಂಡು ಹೋಗಿ ಆಡಬೇಕಾಗಿತ್ತು. ಯಾವುದಾದರೊಂದು ಆಟದ ಬಯಲಿಗೆ ಹೋದರೆ ಅಲ್ಲಿನ ಮೂಲನಿವಾಸಿ ಆಟಗಾರರ ಜೊತೆ ಸೇರಿಕೊಂಡು ಆಡಬೇಕಾಗುತ್ತಿತ್ತು. ಮೂಲನಿವಾಸಿಗರ ಮತ್ತು ವಲಸಿಗರ ನಡುವೆ ಪಂದ್ಯ ಸಾಮಾನ್ಯವಾಗಿತ್ತು. ಒಮ್ಮೆ ಹೀಗೇ ಹುಡುಕಿಕೊಂಡು ಹೊರಟಾಗ ಹೊಸದೊಂದು ಆಟದ ಬಯಲು ಸಿಕ್ಕಿತು. ಆಡುವ ಜಾಗದಲ್ಲಿ ಒಬ್ಬ ಚಿಕ್ಕ ಹುಡುಗ ಕುಳಿತಿದ್ದ. ನಾವು ಅಲ್ಲಿ ವಿಕೆಟ್ ನೆಡಲು ಶುರುಮಾಡಿದಾಗ ಅವನು,”ನಾನು ನಮ್ ಅಣ್ಣ ಎಲ್ಲಾ ಇಲ್ಲೇ ಆಡ್ತಾ ಇದೀವಿ ಆಗ್ಲೇ” ಅಂತ ಹೇಳಿದ. ಸರಿ ಆ ಹುಡುಗರ ಜೊತೆಯೇ ಒಟ್ಟಿಗೆ ಆಡೋಣ ಅಂತ ಅಂದುಕೊಂಡೆವು.
ನನ್ನ ಗೆಳೆಯನೊಬ್ಬ ಆ ಹುಡುಗನಿಗೆ “ಸರಿ ಒಟ್ಟಿಗೆ ಆಡೋಣ, ನಿಮ್ಮವ್ನನ್ನು ಕರಕೊಂಡು ಬಾ” ಅಂತ ಹೇಳಿದ.
ಹಂಗಂದಿದ್ದೆ ತಡ, ಆ ಚಿಕ್ಕ ಹುಡುಗ “ಹೋ” ಅಂತ ಜೋರಾಗಿ ಕೂಗಿಕೊಂಡು ಅವನ ಅಣ್ಣನ ಹತ್ತಿರ ಓಡಿದ. ನಮಗೆ ಏನಾಯಿತೆಂದು ತೋಚದೆ ಒಬ್ಬರನ್ನೊಬ್ಬರು ಮಿಕಮಿಕ ನೋಡುತ್ತಿದ್ದಾಗ, ಆ ಹುಡುಗನ ಅಣ್ಣ ಮತ್ತು ಅವನ ಗೆಳೆಯರೆಲ್ಲಾ ಕೋಪದಿಂದ ನಮ್ಮೆಡೆಗೆ ಬಂದರು. ಎಲ್ಲರೂ ನನ್ನ ಗೆಳೆಯನನ್ನು ಸುತ್ತಿವರಿದು “ಏನಲೇ, ಪೋಲಿ ಮಾತು ಬಯುತ್ತೀಯೇನೋ ನಮ್ಮ ಹುಡುಗನಿಗೆ?” ಅಂತ ಗದರಿದರು.
ನನ್ನ ಗೆಳೆಯ “ಇಲ್ಲಪ್ಪ, ನಿಮ್ಮನ್ನ ಕರಕೊಂಡು ಬಾ ಅಂದೆ, ಬೇರೇನೂ ಅನ್ನಲಿಲ್ಲ ದೇವರಾಣೆ…” ಅಂತ ಹೇಳಿದ.
ಆದರೆ ಆ ಚಿಕ್ಕ ಹುಡುಗನ ಅಣ್ಣ “ಓಹೋ, ನನ್ನ ತಮ್ಮನ ಹತ್ತಿರ ಏನೋ ನಿಮ್ಮವ್ವನ್ ಅಂದೆಯಂತೆ ಆಗ…” ಅಂತ ಆವಾಜ್ ಹಾಕಿದ.
“ಅವನು ಹೇಳಿದ್ದು ನಿಮ್ಮವ್ವನ್ ಅಲ್ಲ, ನಿಮ್ಮವನನ್ನು ಅಂತ” ಅಂತ ಹೇಳಿ ಅವರನ್ನು ಸಮಾದಾನ ಮಾಡುವಲ್ಲಿಗೆ ಸಾಕು ಸಾಕಾಯಿತು. ಆ ಕಡೆ ಆಟ ಆಡಕ್ಕೆ ಹೋಗಿದ್ದು ಅದೇ ಕೊನೆ!
(ಚಿತ್ರ: www.jamiesinz.com )
ಚೆನ್ನಾಗಿದೆ…ಚೆನ್ನಾಗಿದೆ. 🙂