ಎಣಿಕೆಯಲ್ಲೂ ಹಲವು ಬಗೆಗಳಿವೆ

– ಡಿ. ಎನ್. ಶಂಕರ ಬಟ್.

ನುಡಿಯರಿಮೆಯ ಇಣುಕುನೋಟ – 28

nudi_inukuಕನ್ನಡದಲ್ಲಿ ಎಣಿಸುವುದಕ್ಕೂ ಬೇರೆ ನುಡಿಗಳಲ್ಲಿ ಎಣಿಸುವುದಕ್ಕೂ ನಡುವೆ ಹಲವು ಬಗೆಯ ವ್ಯತ್ಯಾಸಗಳಿವೆ; ಕನ್ನಡದಲ್ಲಿ ಎಣಿಕೆಪದಗಳನ್ನು ಉಂಟುಮಾಡಲು ಮುಕ್ಯವಾಗಿ ಎರಡು ಬಗೆಯ ಹೊಲಬುಗಳನ್ನು ಬಳಸಲಾಗುತ್ತದೆ: ಒಂದು ಎಣಿಕೆಪದವನ್ನು ನೇರವಾಗಿ ಇನ್ನೊಂದು ಎಣಿಕೆಪದದೊಂದಿಗೆ ಸೇರಿಸಿ ಹೇಳುವುದು ಒಂದು ಹೊಲಬು; ಇದನ್ನು ಇಪ್ಪತ್ತು (ಎರಡು+ಹತ್ತು), ಇನ್ನೂರು (ಎರಡು+ನೂರು) ಎಂಬಂತಹ ಎಣಿಕೆಪದಗಳಲ್ಲಿ ಕಾಣಬಹುದು. ಒಂದು ಎಣಿಕೆಪದದ ಪತ್ತುಗೆ(ಸಂಬಂದ)ರೂಪವನ್ನು ಇನ್ನೊಂದು ಎಣಿಕೆಪದಕ್ಕೆ ಸೇರಿಸಿ ಹೇಳುವುದು ಇನ್ನೊಂದು ಹೊಲಬು; ಇದನ್ನು ಇಪ್ಪತ್ತಾರು (ಇಪ್ಪತ್ತರ+ಆರು), ನೂರ ಹತ್ತು (ನೂರರ+ಹತ್ತು) ಎಂಬಂತಹ ಎಣಿಕೆಪದಗಳಲ್ಲಿ ಕಾಣಬಹುದು.

ಇವುಗಳಲ್ಲಿ ಮೊದಲನೆಯದನ್ನು ಪೆಚ್ಚಿಸುವ (ಗುಣಿಸುವ) ಹುರುಳಿನಲ್ಲೂ, ಎರಡನೆಯದನ್ನು ಕೂಡಿಸುವ ಹುರುಳಿನಲ್ಲೂ ಬಳಸಲಾಗುತ್ತದೆ. ಆದರೆ, ಈ ಕಟ್ಟಲೆಗೆ ಒಂದು ಹೊರಪಡಿಕೆಯೂ ಇದೆ: ಒಂಬತ್ತು (ಒಂದು+ಹತ್ತು) ಎಂಬುದರಲ್ಲಿ ಮೊದಲನೆಯ ಹೊಲಬು ಬಳಕೆಯಾಗಿದೆಯಾದರೂ ಅದಕ್ಕೆ ‘ಹತ್ತರಿಂದ ಒಂದು ಕಡಿಮೆ’ ಎಂಬ ಕಳೆತದ ಹುರುಳಿದೆ.

ಒಂದರಿಂದ ಎಂಟರ ವರೆಗಿನ ಎಣಿಕೆಪದಗಳು, ಮತ್ತು ಹತ್ತು, ನೂರು ಎಂಬ ಪದಗಳು ಒತ್ತೆ ಪದಗಳು; ಹನ್ನೊಂದರಿಂದ ಹತ್ತೊಂಬತ್ತರ ವರೆಗಿನ ಪದಗಳಲ್ಲಿ ಹತ್ತು ಪದದ ಪತ್ತುಗೆರೂಪಕ್ಕೆ ಒಂದರಿಂದ ಒಂಬತ್ತರವರೆಗಿನ ಪದಗಳನ್ನು ಸೇರಿಸಲಾಗಿದೆ. ಅದಕ್ಕೆ ಮೇಲೆ, ಇಪ್ಪತ್ತು ಎಂಬುದರಲ್ಲಿ ಎರಡು (ಇಪ್) ಪದಕ್ಕೆ ಹತ್ತು (ಪತ್ತು) ಪದವನ್ನು ನೇರವಾಗಿ ಸೇರಿಸಲಾಗಿದೆ. ಇದೇ ರೀತಿಯಲ್ಲಿ, ಮುಂದೆಯೂ ಇಪ್ಪತ್ತರಿಂದ ಇಪ್ಪತ್ತೊಂಬತ್ತರ ವರೆಗಿನ ಪದಗಳಲ್ಲಿ ಇಪ್ಪತ್ತು ಪದದ ಪತ್ತುಗೆರೂಪಕ್ಕೆ ಒಂದರಿಂದ ಒಂಬತ್ತರ ವರೆಗಿನ ಪದಗಳನ್ನು ಸೇರಿಸಲಾಗಿದೆ (ಇಪ್ಪತ್ತೊಂದು, ಇಪ್ಪತ್ತೆರಡು), ಮತ್ತು ಮೂವತ್ತು ಪದದಲ್ಲಿ ಮೂರು ಪದಕ್ಕೆ ಹತ್ತು (ವತ್ತು) ಪದವನ್ನು ನೇರವಾಗಿ ಸೇರಿಸಲಾಗಿದೆ.

ಮುಂದೆ ತೊಂಬತ್ತೊಂಬತ್ತರ ವರೆಗೂ ಇದೇ ರೀತಿಯಲ್ಲಿ ಈ ಎರಡು ಹೊಲಬುಗಳ ಬಳಕೆಯಾಗಿದೆ: ಮೊದಲ ಒಂಬತ್ತು ಎಣಿಕೆಪದಗಳನ್ನು ಪತ್ತುಗೆರೂಪದ ಮೂಲಕ ಉಂಟುಮಾಡಲಾಗಿದೆ, ಮತ್ತು ಹತ್ತನೆಯ ಪದವನ್ನು ನಾಲ್ಕು, ಅಯ್ದು, ಆರು ಮೊದಲಾದ ಪದಗಳಿಗೆ ನೇರವಾಗಿ ಹತ್ತು ಪದವನ್ನು ಸೇರಿಸಿ ಉಂಟುಮಾಡಲಾಗಿದೆ. ನೂರು ಎಂಬುದನ್ನು ತಿಳಿಸಲು ಮಾತ್ರ ಒತ್ತೆ ಪದದ ಬಳಕೆಯಾಗಿದೆ.

ನೂರರ ಬಳಿಕವೂ ಇವೇ ಎರಡು ಹೊಲಬುಗಳನ್ನು ಬಳಸಲಾಗಿದೆ: ನೂರ ಒಂದು, ನೂರ ಎರಡು, … ನೂರ ಹತ್ತು, … ನೂರ ಮೂವತ್ತೆಂಟು … ಎಂಬುದಾಗಿ ಒಟ್ಟು ನೂರು ಎಣಿಕೆಗಳನ್ನು ನೂರು ಎಂಬ ಪದದ ಪತ್ತುಗೆ ರೂಪಕ್ಕೆ ಒಂದರಿಂದ ತೊಂಬತ್ತೊಂಬತ್ತರ ವರೆಗಿನ ಪದಗಳನ್ನು ಸೇರಿಸಿ ಹೇಳಲಾಗಿದೆ, ಮತ್ತು ಮುಂದಿನ ಎಣಿಕೆಪದಗಳನ್ನು ಎರಡು, ಮೂರು ಮೊದಲಾದ ಒಂಬತ್ತು ಪದಗಳಿಗೆ ನೇರವಾಗಿ ನೂರು ಪದವನ್ನು ಸೇರಿಸಿ ಇನ್ನೂರು, ಮುನ್ನೂರು ಮೊದಲಾದ ಪದಗಳನ್ನು ಉಂಟುಮಾಡಲಾಗಿದೆ. ಇದು ಕನ್ನಡ, ತಮಿಳು, ತೆಲುಗು ಮೊದಲಾದ ದ್ರಾವಿಡ ನುಡಿಗಳಲ್ಲಿ ಬಳಕೆಯಾಗುವ ಎಣಿಕೆಯ ಹೊಲಬಾಗಿದೆ.

ಈ ಎಣಿಕೆಪದಗಳಲ್ಲಿ ಬರುವ ಪದಗಳ ಓರಣ ಅಂಕೆಗಳಲ್ಲಿ ಕಾಣಿಸುವ ಓರಣವನ್ನೇ ಹೋಲುತ್ತದೆ; ಎತ್ತುಗೆಗಾಗಿ, ‘ಮೂವತ್ತೆಂಟು’ ಎಂಬುದರಲ್ಲಿ ‘3(ಹತ್ತು)8’ ಎಂಬ ಓರಣವಿದೆ, ಮತ್ತು ಅದನ್ನು 38 ಎಂಬುದಾಗಿ ಅಂಕೆಯಲ್ಲಿ ಬರೆಯುವಾಗಲೂ 3 ಮೊದಲು ಬರುತ್ತದೆ, ಮತ್ತು 8 ಬಳಿಕ ಬರುತ್ತದೆ. ಇದೇ ರೀತಿಯಲ್ಲಿ, ‘ಎರಡು ಸಾವಿರದ ಮುನ್ನೂರ ನಲುವತ್ತಾರು’ ಎಂಬುದರಲ್ಲಿ ಕಾಣಿಸುವ ‘2(ಸಾವಿರ)3(ನೂರು)4(ಹತ್ತು)6’ ಎಂಬ ಓರಣವೇ 2346 ಎಂಬ ಅಂಕೆಯಲ್ಲೂ ಕಾಣಿಸುತ್ತದೆ.

ಆದರೆ, ಸಂಸ್ಕ್ರುತದಲ್ಲಿ ಮತ್ತು ಅದರಿಂದ ಬೆಳೆದು ಬಂದಿರುವ ಹಿಂದಿ, ಮರಾಟಿ ಮೊದಲಾದ ಇಂಡೋ-ಆರ‍್ಯನ್ ನುಡಿಗಳಲ್ಲಿ ಎಣಿಕೆಯ ಪದಗಳನ್ನು ಬೇರೆಯೇ ಬಗೆಯಲ್ಲಿ ಕಟ್ಟಲಾಗಿದ್ದು, ಅವಕ್ಕೂ ಅಂಕೆಗಳಿಗೂ ನಡುವೆ ಇಂತಹ ಹೊಂದಾಣಿಕೆ ಕಾಣಿಸುವುದಿಲ್ಲ. ಎತ್ತುಗೆಗಾಗಿ, ಹಿಂದಿಯಲ್ಲಿ ‘ಅಡ್ತೀಸ್’ ಎಂಬ ಎಣಿಕೆಪದದಲ್ಲಿ ‘8-3(ಹತ್ತು)’ ಎಂಬ ಓರಣವಿದೆ; ಈ ಓರಣ 38 ಎಂಬ ಅಂಕೆಯಲ್ಲಿರುವ ಓರಣಕ್ಕಿಂತ ಬೇರಾಗಿದೆ; ಸಂಸ್ಕ್ರುತದಲ್ಲೂ ಎಪ್ಪತ್ತಯ್ದು ಎಂಬ ಹುರುಳನ್ನು ಕೊಡುವ ‘ಪಂಚಸಪ್ತತಿ’ ಎಂಬ ಎಣಿಕೆಪದದಲ್ಲಿ 5-7(ಹತ್ತು) ಎಂಬ ಓರಣವಿದ್ದು, ಅದು 75 ಎಂಬ ಅಂಕೆಯಲ್ಲಿರುವ ಓರಣಕ್ಕಿಂತ ಬೇರಾಗಿದೆ.

ಕನ್ನಡ ಮತ್ತು ಸಂಸ್ಕ್ರುತಗಳೆರಡರಲ್ಲೂ ಹತ್ತರ ಹೊಲಬು ಬಳಕೆಯಲ್ಲಿದೆ. ಆದರೆ, ಬೇರೆ ಕೆಲವು ನುಡಿಗಳಲ್ಲಿ ಬೇರೆಯೇ ಬಗೆಯ ಹೊಲಬುಗಳು ಬಳಕೆಯಾಗುತ್ತವೆ. ಅಸ್ಸಾಮಿನಲ್ಲಿ ವಾಸಿಸುವ ಕಸಾರಿ ಜನಾಂಗದವರ ಬೋಡೊ (ಇಲ್ಲವೇ ಬೋರೊ) ಎಂಬ ನುಡಿಯಲ್ಲಿ ಎಣಿಕೆಯನ್ನು ನಾಲ್ಕರ ಗುಂಪುಗಳಲ್ಲಿ ಮಾಡಲಾಗುತ್ತದೆ. ಈ ನುಡಿಯಲ್ಲಿ ಒಂದರಿಂದ ನಾಲ್ಕರ ವರೆಗೆ ಎಣಿಸಿ, ಮುಂದಕ್ಕೆ ಒಂದ್ನಾಲ್ಕು ಒಂದು (ಎಂದರೆ ಐದು), ಒಂದ್ನಾಲ್ಕು ಎರಡು (ಎಂದರೆ ಆರು), ಒಂದ್ನಾಲ್ಕು ಮೂರು (ಎಂದರೆ ಏಳು), ಎರಡ್ನಾಲ್ಕು (ಎಂದರೆ ಎಂಟು) ಎಂಬುದಾಗಿ ಎಣಿಕೆ ಸಾಗುತ್ತದೆ. ಹನ್ನೊಂದು ಎನ್ನಲು ಈ ನುಡಿಯಲ್ಲಿ ಎರಡ್ನಾಲ್ಕು ಮೂರು ಎನ್ನಬೇಕು, ಮತ್ತು ಹದಿನಾಲ್ಕು ಎನ್ನಲು ಮೂರ್ನಾಲ್ಕು ಎರಡು ಎನ್ನಬೇಕು.

ಬೋಡೊ ನುಡಿಯಲ್ಲಿ ಐದಕ್ಕೂ ಒಂದು ಪದ ಇದೆಯಾದ ಕಾರಣ, ಈ ನಾಲ್ಕರ ಹೊಲಬಿನಲ್ಲಿ ಇಪ್ಪತ್ತರವರೆಗೆ ಲೆಕ್ಕ ಹಾಕಲು ಬರುತ್ತದೆ; ಅದಕ್ಕಿಂತ ಹೆಚ್ಚಿನ ಎಣಿಕೆಯನ್ನು ನಡೆಸಲು, ಅದಕ್ಕೆ ಹೊಸದೊಂದು ಹೊಲಬು ಬೇಕಾಗುತ್ತದೆ. ಇದಕ್ಕಾಗಿ ನಮ್ಮಲ್ಲಿ ನೂರರ ಹೊಲಬಿರುವಂತೆ, ಬೋಡೊ ನುಡಿಯಲ್ಲಿ ಇಪ್ಪತ್ತರ ಹೊಲಬಿದೆ. ಈ ಹೊಲಬಿನಂತೆ, ಇಪ್ಪತ್ತಾರು ಎನ್ನಲು ‘ಒಂದಿಪ್ಪತ್ತು ಒಂದ್ನಾಲ್ಕು ಎರಡು’ ಎನ್ನಬೇಕು, ಮತ್ತು ಎಪ್ಪತ್ತಮೂರು ಎನ್ನಲು ‘ಮೂರಿಪ್ಪತ್ತು ಮೂರ್ನಾಲ್ಕು ಒಂದು’ (3 x 20) + (3 x 4) + 1 ಎನ್ನಬೇಕು. ಇಂತಹ ಎಣಿಕೆ ನಮ್ಮದರಿಂದ ತೊಡಕಾದುದೆಂದು ನಮಗೆ ತೋರಬಹುದು, ಆದರೆ ಬೋಡೊ ನುಡಿಯಲ್ಲಿ ಮಾತನಾಡುವವರಿಗೆ ನಮ್ಮಲ್ಲಿರುವ ಹತ್ತರ ಹೊಲಬಿಗಿಂತ ಅವರ ನಾಲ್ಕರ ಹೊಲಬೇ ಒಳ್ಳೆಯದೆಂದು ಅನಿಸದಿರದು.

ನಮ್ಮಲ್ಲಿ ಎಣಿಕೆಯ ಪದಗಳನ್ನು ಉಂಟುಮಾಡುವಲ್ಲಿ ಹತ್ತರ ಹೊಲಬು ಬಳಕೆಯಲ್ಲಿದೆಯಾದ ಕಾರಣ, ಅದೇ ಹತ್ತರ ಹೊಲಬಿನಲ್ಲಿ ಉಂಟುಮಾಡಿರುವ ಲೀಟರ್, ರುಪಾಯಿ, ಗ್ರಾಮ್ ಮೊದಲಾದ ಅಳತೆಪದಗಳ ಬಳಕೆ ಮೊದಲಿಗಿದ್ದ ರಾತಲು, ಸೇರು, ಅಡಿ ಮೊದಲಾದವುಗಳಿಗಿಂತ ಒಳ್ಳೆಯವೆಂದು ಅನಿಸುತ್ತದೆ; ಆದರೆ, ನಾಲ್ಕರ ಹೊಲಬನ್ನು ಬಳಸುವವರಿಗೆ ಅವು ಹಿಂದಿನವಕ್ಕಿಂತ ಒಳ್ಳೆಯವೆಂದೇನೂ ಅನಿಸಬೇಕಾಗಿಲ್ಲ.

ಎಣಿಕೆಪದಗಳ ಬಳಕೆಯಲ್ಲೂ ನುಡಿಗಳ ನಡುವೆ ಹಲವು ಬಗೆಯ ವ್ಯತ್ಯಾಸಗಳನ್ನು ಕಾಣಬಹುದು: ಕನ್ನಡದಲ್ಲಿ ಎಣಿಕೆಪದಗಳನ್ನು ಮರ, ಮನೆ, ಹುಡುಗ, ಚೆಂಡು ಮೊದಲಾದ ಪದಗಳಿಗೆ ನೇರವಾಗಿ ಸೇರಿಸಲು ಬರುತ್ತದೆ (ಮೂರು ಮನೆಗಳು, ಇಪ್ಪತ್ತೊಂದು ಚೆಂಡುಗಳು); ಆದರೆ, ನೀರು, ಅಕ್ಕಿ, ಎಣ್ಣೆ, ಹಾಲು ಮೊದಲಾದ ಪದಗಳಿಗೆ ಎಣಿಕೆಪದಗಳನ್ನು ಸೇರಿಸಬೇಕಿದ್ದಲ್ಲಿ, ಮೊದಲಿಗೆ ಅವಕ್ಕೆ ಅಳತೆಯನ್ನು ತಿಳಿಸುವ ಪದಗಳನ್ನು ಸೇರಿಸಬೇಕಾಗುತ್ತದೆ (ಮೂರು ಕಿಲೋ ಅಕ್ಕಿ, ಎರಡು ಲೀಟರ್ ಹಾಲು). ಇದಕ್ಕೆ ಬದಲು, ಬೋಡೊ ನುಡಿಯಲ್ಲಿ ಯಾವ ಪದಕ್ಕೂ ಎಣಿಕೆಪದಗಳನ್ನು ನೇರವಾಗಿ ಸೇರಿಸಲು ಬರುವುದಿಲ್ಲ; ಒಂದು ಪದ ತಿಳಿಸುವ ವ್ಯಕ್ತಿ ಇಲ್ಲವೇ ವಸ್ತು ಎಂತಹದು ಎಂಬುದನ್ನು ಅಡಕವಾಗಿ ತಿಳಿಸುವ ಪದವನ್ನು ಅದಕ್ಕೆ ಮೊದಲು ಸೇರಿಸಿ, ಆಮೇಲೆ ಎಣಿಕೆ ಪದಗಳನ್ನು ಸೇರಿಸಬೇಕಾಗುತ್ತದೆ.

ಇಂತಹ ಬೇರೆಯೂ ಹಲವು ವ್ಯತ್ಯಾಸಗಳು ನುಡಿಗಳಲ್ಲಿ ಬಳಕೆಯಾಗುವ ಎಣಿಕೆಯ ಹೊಲಬುಗಳ ನಡುವೆ ಕಾಣಿಸಿಕೊಳ್ಳುತ್ತವೆ. ಇವೆಲ್ಲವೂ ಎಣಿಕೆಯನ್ನು ಬಳಸುವಲ್ಲಿ ಮಾನವನು ಕಂಡುಕೊಂಡಿರುವ ಜಾಣ್ಮೆಯ ಹೊಲಬುಗಳೆಂದು ಹೇಳಬಹುದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು) 

<< ನುಡಿಯರಿಮೆಯ ಇಣುಕುನೋಟ – 27

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *