ತೋರುಗಾರಿಕೆಯ ಹುಸಿ ನಾಡೊಲುಮೆಯಿಂದ ಕುತ್ತಿದೆ

– ಸಂದೀಪ್ ಕಂಬಿ.

dushanbe

ಕಳೆದ ಕೆಲವು ವರುಶಗಳಿಂದ ನಡು ಏಶ್ಯಾದ ಕೆಲವು ನಾಡುಗಳ ನಡುವೆ ವಿಚಿತ್ರವಾದ ಪಯ್ಪೋಟಿಯೊಂದು ನಡೆಯುತ್ತಿದೆ. ಅದು ಪ್ರಪಂಚದ ಕಡು ಎತ್ತರದ ಬಾವುಟದ ಕಂಬವನ್ನು ಕಟ್ಟುವುದು. ಇದು ಮೊದಲ್ಗೊಂಡಿದ್ದು ಅಬು ದಾಬಿಯಲ್ಲಿ 2001ರಲ್ಲಿ ಕಟ್ಟಲಾದ ಒಂದು ಎತ್ತರದ ಕಂಬದಿಂದ. ಇದನ್ನು ಮೀರಿಸುವ ಹಟಕ್ಕೆ ಬಿದ್ದ ಜೋರ‍್ಡಾನ್ ನಾಡು ತನ್ನ ನೆಲೆವೀಡಾದ ಅಮ್ಮಾನ್ ಪಟ್ಟಣದಲ್ಲಿ 2003ರಲ್ಲಿ ಇದಕ್ಕೂ ಎತ್ತರದ ಬಾವುಟದ ಕಂಬವನ್ನು ಕಟ್ಟಿತು. ಮತ್ತೆ ಮುಂದಿನ ವರುಶವೇ ಅದೇ ಜೋರ‍್ಡಾನಿನ ಅಕಬಾ ಎಂಬಲ್ಲಿ ಇನ್ನೂ ಎತ್ತರದ ಕಂಬವನ್ನು ಕಟ್ಟಲಾಯಿತು. ಹೀಗೆ ಎತ್ತರದ ಕಂಬಗಳನ್ನು ಕಟ್ಟಿ, ಅದರ ಮೇಲೆ ತಮ್ಮ ನಾಡಿನ ಬಾವುಟ ಹಾರಿಸುವ ಹುಚ್ಚು, ಸುತ್ತ ಇರುವ ಹಲವು ನಾಡುಗಳಿಗೆ ಹಿಡಿಯಿತು. ಒಬ್ಬರ ಮೇಲೊಬ್ಬರು ಬಾವುಟದ ಕಂಬಗಳನ್ನು ಕಟ್ಟಲು ತೊಡಗಿದರು.

ಇಂದಿನ ದಿನ ತಜಿಕಿಸ್ತಾನದ ದುಶಾನ್ಬೆಯಲ್ಲಿರುವ ಕಂಬ ಕಡು ಎತ್ತರದ ಬಾವುಟದ ಕಂಬ ಎನಿಸಿಕೊಂಡಿದೆ. ಈ ಪೋಟಿಯಲ್ಲಿ ಎರಡನೇ ನೆಲೆ ಅಜರ್‍ಬಾಯ್ಜಾನ್ ನಾಡಿನ ಬಾಕು ಎಂಬಲ್ಲಿರುವ ಕಂಬಕ್ಕೆ ಸಂದಿದೆ. ಮೂರನೇ ನೆಲೆ ಬಡಗಣ ಕೊರಿಯಾಗೆ ದಕ್ಕಿದ್ದರೆ ನಾಲ್ಕನೇ ನೆಲೆ ತುರ್‍ಕ್ಮೇನಿಸ್ತಾನ್ ನಾಡಿಗೆ ಹೋಗಿದೆ. ವಿಚಿತ್ರವೆನಿಸುವ ಈ ಕಂಬದ ಕಾಳಗಕ್ಕೆ ಸಿಲುಕಿರುವ ಈ ನಾಡುಗಳ ಹಿನ್ನೆಲೆಗಳನ್ನು ಒಮ್ಮೆ ಗಮನಿಸೋಣ.

ತಜಿಕಿಸ್ತಾನ ಏಳಿಗೆಯಲ್ಲಿ ಇನ್ನೂ ಬೆಳೆಯುತ್ತಿರುವ ನಾಡು. ಇಲ್ಲಿ ಚುನಾವಣೆಗಳು ನಡೆಯುತ್ತವಾದರೂ, ಹಿನ್ನೆಲೆಯಲ್ಲಿ ಪಲಿತಾಂಶಗಳ ಕಳ್ಳಮಾರ‍್ಪಾಟು ಮಾಡಲಾಗುತ್ತದೆ ಎಂಬ ತಪ್ಪುಹೊರಿಸುವಿಕೆ ಇದೆ. ಒಂದೇ ಆಳ್ಮೆಬದಿ ಅಲ್ಲಿ ಮೇಲುಗಯ್ ಸಾದಿಸಿದೆ ಮತ್ತು ಯಾವಾಗಲೂ ಚುನಾವಣೆಗಳಲ್ಲಿ ಅದೇ ಗೆಲ್ಲುತ್ತದೆ. ಸುದ್ದಿ ಮಾದ್ಯಮಗಳಿವೆ, ಮತ್ತು ಅವುಗಳ ಮೇಲೆ ಹೆಚ್ಚು ಕಟ್ಟುಪಾಡುಗಳು ಇಲ್ಲ, ಆದರೆ ಹೆಚ್ಚು ಕಡಿಮೆ ಎಲ್ಲವೂ ಆಡಳಿತದ ಹಿಡಿತದಲ್ಲಿವೆ. ಹೊರ ನಾಡಿನ ಮಿಂದಾಣಗಳ ಮೇಲೆ ತಡೆ ಇದೆ.

ಹಣಕಾಸಿನ ವಿಚಾರದಲ್ಲಿ ಅಜರ್‍ಬಾಯ್ಜಾನ್ ತಜಿಕಿಸ್ತಾನಕ್ಕಿಂತ ಮುಂದುವರಿದಿದ್ದರೂ ಅಲ್ಲಿನ ಮಂದಿಯ ಹಕ್ಕುಗಳ ವಿಚಾರದಲ್ಲಿ ಹಿಂದಿದೆ ಎನ್ನಲಾಗುತ್ತದೆ. ಹಲವು ಚುನಾವಣೆಗಳು ನಡೆದಿವೆಯಾದರೂ ಅಲ್ಲಿನ ಪಡೆಗಳು ಹಲವು ಸಲ ಆಡಳಿತವನ್ನು ಕಯ್ಗೆತ್ತಿಕೊಂಡಿರುವುದೂ ಇದೆ. ನಾಡಿನ ಆಡಳಿತದ ಮೇಲೆ ಚುನಾವಣೆಗಳ ಕಳ್ಳಮಾರ‍್ಪಾಟು ಮತ್ತು ನಡೆಗೇಡಿತನದ ತಪ್ಪುಹೊರಿಸಿಕೆಯಿದೆ. ಇನ್ನು ಬಡಗಣ ಕೊರಿಯಾದಲ್ಲಂತೂ ಅಲ್ಲಿನ ಮಂದಿಗೆ ಹೆಚ್ಚಿನ ಮಾನವ ಹಕ್ಕುಗಳನ್ನು ಕೊಡದೆ, ಎಲ್ಲಕ್ಕೂ ಕಡಿವಾಣ ಹಾಕುತ್ತ, ಎಲ್ಲವನ್ನೂ ಹಿಡಿತದಲ್ಲಿಟ್ಟುಕೊಳ್ಳ ಬಯಸುವ ಕಮ್ಯೂನಿಸ್ಟ್ ಆಡಳಿತವಿದೆ.

ತುರ್‍ಕ್ಮೇನಿಸ್ತಾನದ ಸ್ತಿತಿಯೂ ಅಂತೆಯೇ. ಇತ್ತೇಚೆಗೆ ಹೊರ ಪ್ರಪಂಚಕ್ಕೆ ತೆರೆದುಕೊಳ್ಳುವ ಪ್ರಯತ್ನ ನಡೆಯುತ್ತಿದ್ದರೂ, ತುರ್‍ಕ್ಮೇನಿಸ್ತಾನ್ ಹಲವಾರು ಕಟ್ಟುಪಾಡುಗಳು ಇರುವ ನಾಡು. ಮಾನವ ಹಕ್ಕುಗಳನ್ನು ಮುರಿಯುವುದು ಅಲ್ಲಿ ಸಾಮಾನ್ಯ ಮತ್ತು ಬಡಗಣ ಕೊರಿಯಾದಲ್ಲಿರುವಂತೆಯೇ ಅಲ್ಲಿನ ಮಂದಿ ಹೊರ ನಾಡುಗಳಿಗೆ ಹೋಗುವುದರಲ್ಲಿ ಹಲವಾರು ಅಡೆ-ತಡೆಗಳು ಕಡಿವಾಣಗಳು ಇವೆ.

ದೊಡ್ಡ ದೊಡ್ಡ ಕಟ್ಟಡಗಳು ಮಂದಿಯಲ್ಲಿ ಹೆಮ್ಮೆಯನ್ನು ಮೂಡಿಸುತ್ತವೆ ಮತ್ತು ನಾಡೊಲುಮೆಯ ಗುರುತಾಗಿಯೂ ಕೆಲಸ ಮಾಡುತ್ತವೆ. ಇಂತಹ ಗುರುತುಗಾರಿಕೆಗಳು ಎಲ್ಲ ನಾಡುಗಳಿಗೂ ಬೇಕಾಗುತ್ತವೆ ಎಂಬುದೇನೋ ನಿಜ, ಆದರೆ ಗುರುತುಗಾರಿಕೆಗಾಗಿಯೇ, ಸಾಕಶ್ಟು ಹಣ ಸುರಿದು ನಾಡುಗಳು ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಲು ಹೊರಡುವುದು ಏಕೆ ಎಂಬ ಕೇಳ್ವಿ ಏಳುತ್ತದೆ. ಮತ್ತು ಇಲ್ಲಿಗಮನಿಸ ಬೇಕಾದ ಕುತೂಹಲಕಾರಿ ವಿಶಯವೇನೆಂದರೆ ಮೇಲೆ ಹೇಳಿದ ಎಲ್ಲ ನಾಡುಗಳೂ (ಅಬು ದಾಬಿಯನ್ನು ಹೊರತು ಪಡಿಸಿ) ಹೆಚ್ಚು ಏಳಿಗೆಯನ್ನು ಸಾದಿಸಿದ ನಾಡುಗಳಲ್ಲ. ಮತ್ತು ಇಲ್ಲಿನ ಆಡಳಿತಗಳು ಮಂದಿಯ ಹಕ್ಕುಗಳ ಮೇಲೆ, ಮತ್ತು ನಾಡನ್ನು ನಡೆಸುವ ಹಲವು ವಿಚಾರಗಳಲ್ಲಿ ತಮ್ಮ ಗಟ್ಟಿಯಾದ ಹಿಡಿತವನ್ನು ಬಯಸುವಂತಹವು.

ಅದೇ ಮುಂದುವರಿದ ಮತ್ತು ಮಂದಿಯ ಹಕ್ಕುಗಳ ವಿಚಾರದಲ್ಲಿ ಹೆಚ್ಚು ತೆರೆದುಕೊಂಡಿರುವ ನಾಡುಗಳಲ್ಲಿ ಈ ಬಗೆಯ ಗುರುತುಗಳು ಕಡಿಮೆಯೇ ಎಂದು ಹೇಳಬಹುದು. ಇದಕ್ಕೆ ಹಲವು ಕಾರಣಗಳಿರುತ್ತವೆ. ಕಲಿಕೆ, ಅರಿಮೆ, ಹಣಕಾಸು, ವ್ಯಾಪಾರ, ಕೊಡುಕೊಳೆ, ಸಾರಿಗೆ ಮುಂತಾದವುಗಳಲ್ಲಿ ಏಳಿಗೆಯನ್ನು ಹೊಂದಿರುವ ನಾಡುಗಳಲ್ಲಿ ಆ ಏಳಿಗೆ ಮತ್ತು ಅದರ ಬಾಗವಾದ ಕೆಲವು ಸಂಸ್ತೆಗಳೇ ಹೆಮ್ಮೆಯ ಗುರುತುಗಳಾಗಿ ಕೆಲಸ ಮಾಡುತ್ತವೆ. ಎತ್ತುಗೆಗೆ, ಹಾರ‍್ವರ‍್ಡ್, ಎಂ. ಅಯ್. ಟಿ. ಅಂತಹ ಕಲಿಮನೆಗಳು, ಸಾಮ್ಸಂಗ್, ಆಪಲ್, ಗೂಗಲ್, ಟೊಯೋಟಾನಂತಹ ಸಂಸ್ತೆಗಳು, ಸಾರಿಗೆಗೆ ಅನುಕೂಲವಾಗುವಂತಹ ಹೆದ್ದಾರಿಗಳು, ಬಾನೋಡ ನಿಲ್ದಾಣಗಳು, ಸಿಟಿಬ್ಯಾಂಕ್, ಎಚ್. ಎಸ್. ಬಿ. ಸಿ. ಯಂತಹ ಹಣಮನೆಗಳು, ಇವೆಲ್ಲವೂ ಆಯಾ ನಾಡಿನ ಮಂದಿಗೆ ಒಂದು ಬಗೆಯಲ್ಲಿ ನಾಡೊಲುಮೆಯ ಗುರುತುಗಳೇ. ದಿನ ನಿತ್ಯವೂ ಬದುಕಿನ ಎಲ್ಲ ಹರಹುಗಳಲ್ಲಿಯೂ ಏಳಿಗೆ ಸಾದಿಸುತ್ತಿರುವ ನಾಡುಗಳಿಗೆ ಆ ಏಳ್ಗೆಯ ಗುರುತುಗಳೇ ಹೆಮ್ಮೆಯ ಹೆಗ್ಗುರುತುಗಳಾಗುತ್ತವೆ. ಹಾಗಾಗಿ ಇಂತಹ ನಾಡುಗಳಿಗೆ ಬೇರೆ ತೋರುಗಾರಿಕೆಯ ಗುರುತುಗಳು ಬೇಕಾಗುವುದಿಲ್ಲ.

ಹಾಗೆಂದ ಮಾತ್ರಕ್ಕೆ ತೋರುಗಾರಿಕೆ ಇಲ್ಲವೇ ಇಲ್ಲ ಎಂದಲ್ಲ. ಮುಂದುವರಿದ ನಾಡಾದ ತೆಂಕಣ ಕೊರಿಯಾದಲ್ಲಿ 323 ಅಡಿ ಎತ್ತರದ ಬಾವುಟದ ಕಂಬವನ್ನು 1980ರ ಸುಮಾರಿಗೆ ಕಟ್ಟಲಾಗಿತ್ತು. ಇದು ಬಡಗಣಕ್ಕೆ ತನ್ನ ಬಲವನ್ನು ತೋರಿಸುವ ಉದ್ದೇಶದಿಂದ ಮಾಡಿದ್ದು ಎನ್ನಲಾಗುತ್ತದೆ. ಇದಕ್ಕೆ ಉತ್ತರವಾಗಿ ಬಡಗಣ ಕೊರಿಯಾ 525 ಅಡಿ ಎತ್ತರದ ಕಂಬವನ್ನು ಕಟ್ಟಿತು. ಆದರೆ ಮತ್ತೆ ಅದನ್ನು ಮೀರಿಸುವ ಕೆಲಸಕ್ಕೆ ತೆಂಕಣ ಕೊರಿಯಾ ಕಯ್ ಹಾಕಲಿಲ್ಲ. ಎಲ್ಲ ಹರಹುಗಳಲ್ಲಿಯೂ ಮುಂದುವರಿದಿರುವ ತೆಂಕಣ ಕೊರಿಯಾ ನಾಡಿಗೆ ಇದರ ಅಗತ್ಯವಿಲ್ಲ ಎಂಬುದು ಮನವರಿಕೆ ಆದಂತಿದೆ. ಹಾಗಾಗಿ ಕಂಬದ ಕಾಳಗದಿಂದ ಹಿಂದೆ ಸರಿಯಿತು. ಸಾಮ್ಸಂಗ್, ಹ್ಯುಂಡಯ್, ಡೇವೂ ತೆರನಾದ ಸಂಸ್ತೆಗಳೇ ಕಂಬಗಳಂತೆ ನಿಂತಿರುವಾಗ ತೋರುಗಾರಿಕೆಯ ಕಂಬವೇಕೆ, ಅಲ್ಲವೇ?

ತೋರುಗಾರಿಕೆಯ ಹೆಗ್ಗುರುತುಗಳು ಮಂದಿಯಲ್ಲಿ ಹುಸಿ ಹೆಮ್ಮೆಯ ಅನಿಸಿಕೆ ಮೂಡಿಸುವುದರಿಂದ ಸೂಕ್ಶ್ಮ ವಾಗಿ ತಮ್ಮ ನಾಡು ತಮಗಿಂತ ದೊಡ್ಡದು, ಒಬ್ಬನಿಗಿಂತ ಇಡೀ ನಾಡು, ಇಲ್ಲವೇ ಕೂಡಣ ದೊಡ್ಡದು, ಅದರ ಒಳಿತೇ ಮುಕ್ಯವಾದುದು ಎಂಬ ಬಾವನೆಗಳನ್ನು ಗಟ್ಟಿಗೊಳಿಸುತ್ತವೆ. ಇದನ್ನು ಕಟ್ಟಾಳ್ಮೆಯ (dictatorial) ಆಡಳಿತಗಾರರು ನಾಡಿನ ಮಂದಿಯ ಹಕ್ಕುಗಳನ್ನು ಕಸಿದುಕೊಂಡು, ಹುಸಿ ನಾಡೊಲುಮೆಯ ಬಾವನೆ ತುಂಬಿಸಿ, ಅವರುಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಸಲಕರಣೆಯಾಗಿ ಬಳಸಿಕೊಳ್ಳುತ್ತಾರೆ. ಹಿಂದೆ ನಾತ್ಸಿ ಆಡಳಿತದ ಜರ‍್ಮನಿಯಲ್ಲೂ ಇದೇ ತಂತ್ರವನ್ನು ಬಳಸಲಾಗಿತ್ತು. ಇಂದಿಗೂ ಮಂದಿಯ ಮೇಲೆ ಗಟ್ಟಿಯಾದ ಹಿಡಿತ ಸಾದಿಸ ಬಯಸುವ ಆಡಳಿತಗಾರರು ಇದೇ ತಂತ್ರವನ್ನು ಬಳಸುತ್ತಾರೆ.

ಕೂಡಣದಲ್ಲಿ ಒಬ್ಬೊಬ್ಬರಿಗೂ ಬಿಡುಗಡೆ ಮತ್ತು ತೆರೆದ ಅವಕಾಶಗಳು ಇರುವಂತಹ ಏರ್‍ಪಾಡಿನಲ್ಲಿ ಒಬ್ಬೊಬ್ಬರೂ ಬೆಳೆಯುವ, ಏಳಿಗೆ ಸಾದಿಸುವ ಅವಕಾಶಗಳಿರುತ್ತವೆ, ಹಾಗೂ ತಮ್ಮ ಬದುಕನ್ನು ತಮಗೆ ಬೇಕಾದಂತೆ ಕಟ್ಟಿಕೊಳ್ಳುವ ಬಿಡತೆಯಿರುತ್ತದೆ. ಹೀಗೆ ಏಳಿಗೆ ಕಾಣುವ ಒಬ್ಬೊಬ್ಬರೂ ಮತ್ತೆ ಕೂಡಣಕ್ಕೆ ತಮ್ಮ ಕೊಡುಗೆಗಳನ್ನು ನೀಡಿ, ಇಡೀ ಕೂಡಣವೇ ಏಳಿಗೆ ಸಾದಿಸುವ ಅವಕಾಶಗಳು ಹೆಚ್ಚಾಗುತ್ತವೆ. ಆದರೆ ಬಿಗಿ ಆಡಳಿತದ ನಾಡುಗಳಲ್ಲಿ ಇಂತಹವಕ್ಕೆ ಅವಕಾಶಗಳು ಇರುವುದಿಲ್ಲ. ಹಾಗಾಗಿ, ಇಂದಿನ ಮುಂದುವರಿದ ಕೂಡಣದ ಏರ್‍ಪಾಟನ್ನು ಕಟ್ಟ ಬಯಸುವ ನಾವು ಇಂತಹ ತೋರುಗಾರಿಕೆಯ ಗುರುತುಗಳಿಗೆ ಹೆಚ್ಚುಗಾರಿಕೆ ನೀಡದೆ ದಿಟ ಏಳಿಗೆಯತ್ತ ಗಮನ ಹರಿಸಬೇಕಾಗಿದೆ.

(ಚಿತ್ರ ಸೆಲೆ: http://www.vice.com/read/trident-flagpole-interview)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. ನಡು-ಏಸ್ಯಾ ನಾಡುಗಳ ಕಯ್ಯಲ್ಲಿ ಎಣ್ಣೆ, ಕೋತಿ ಕಯ್ಯಲ್ಲಿ ಗುರಗಂಜಿ!!

  2. ಅಲ್ಲಿ ಕಂಬ… ಇಲ್ಲಿ ಸತ್ತವರ ಮೂರುತಿ ಕಟ್ಟೋ ಪಯ್ಪೋಟಿಗೆ ನಾಂದಿ ಮಾಡಯಿತಲ್ಲ

    • Sandeep Kn says:

      ಹವ್ದು, ದೊಡ್ಡ ಮೂರುತಿಗಳನ್ನು ಕಟ್ಟಿ, ಇಡೀ ಬಾರತ ಒಕ್ಕೂಟವೇ ಒಂದು, ಅದರಲ್ಲಿ ಬೇರ್‍ಮೆಯೇ ಇಲ್ಲ ಇಲ್ಲವೇ ಬೇರ್‍ಮೆಗಳು ಮುಕ್ಯವೇ ಅಲ್ಲ ಎಂದು ತೋರಿಸಿ, ಹುಸಿ ನಾಡೊಲುಮೆಯನ್ನು ಮೂಡಿಸಬಹುದು ಎಂದುಕೊಂಡಿದ್ದಾರೆ.

ಅನಿಸಿಕೆ ಬರೆಯಿರಿ: