ಕೇಂದ್ರಿಯ ವಿದ್ಯಾಲಯ ತರುವುದೊಂದು ಸಾದನೆಯೇ ಅಲ್ಲ

– ರತೀಶ ರತ್ನಾಕರ.

KV-logo

ಲೋಕಸಬೆ ಚುನಾವಣೆ ಹತ್ತಿರ ಬರುತ್ತಿರುವ ಹೊತ್ತಿನಲ್ಲಿ ಚುನಾವಣಾ ಸುದ್ದಿಗಳು ಸುದ್ದಿ ಹಾಳೆಗಳಲ್ಲಿ ರಾರಾಜಿಸುತ್ತಿವೆ. ಯಾವ ಯಾವ ಪಕ್ಶದಿಂದ ಯಾರು ನಿಲ್ಲುತ್ತಿದ್ದಾರೆ, ಯಾರು ಗೆಲ್ಲಬಹುದು, ಯಾವ ಪಕ್ಶಕ್ಕೆ ಹೆಚ್ಚಿನ ಸೀಟುಗಳು ಹೋಗಬಹುದು, ಹೀಗೆ ಹಲವಾರು ವಿವರಗಳು ಕಾಣಸಿಗುತ್ತಿವೆ. ಇದರಲ್ಲಿ ನನಗೆ ಸೆಳೆದದ್ದು ಎಂದರೆ ಹಾಲಿ ಸಂಸದರ ಸಾದನೆಗಳ ವಿವರ. ಕರ‍್ನಾಟಕದಲ್ಲಿ ಕಳೆದ ಲೋಕಸಬೆ ಚುನಾವಣೆ(2009)ಯಲ್ಲಿ ಬಿಜೆಪಿಯಿಂದ 19, ಕಾಂಗ್ರೆಸ್ ನಿಂದ 6 ಹಾಗು ಜೆಡಿಎಸ್ ನಿಂದ 3 ಸೀಟುಗಳನ್ನು ಗೆಲ್ಲಲಾಗಿತ್ತು. ಕಳೆದ ಅಯ್ದು ವರುಶಗಳಲ್ಲಿ ಈ ಸಂಸದರ ಸಾದನೆಗಳ ವಿವರ ಹಲವು ಸುದ್ದಿ ಹಾಳೆಗಳಲ್ಲಿ ಬರುತ್ತಿದೆ.

ಇದರಲ್ಲಿ ಶಿವಮೊಗ್ಗದ ಸಂಸದ ಬಿ. ವಯ್. ರಾಗವೇಂದ್ರ, ದಾವಣಗೆರೆಯ ಜಿ. ಎಂ. ಸಿದ್ದೇಶ್ವರ ಮತ್ತು ಇನ್ನಿತರ ಕೆಲವು ಸಂಸದರ ಸಾದನೆಗಳ ಪಟ್ಟಿಯಲ್ಲಿ ಕೇಂದ್ರಿಯ ವಿದ್ಯಾಲಯಗಳನ್ನು ಕರ‍್ನಾಟಕದಲ್ಲಿ ಸ್ತಾಪಿಸಿರುವುದು ಇಲ್ಲವೇ ಕೇಂದ್ರಿಯ ವಿದ್ಯಾಲಯಕ್ಕೆ ಶಂಕುಸ್ತಾಪನೆ ಹಾಕಿರುವುದನ್ನು ದೊಡ್ಡ ಸಾದನೆ ಎಂದು ಬಿಂಬಿಸಲಾಗಿದೆ. ಇದನ್ನು ನೋಡಿದರೆ, ಕೇಂದ್ರಿಯ ವಿದ್ಯಾಯಲಗಳು ನಮ್ಮ ನಾಡಿನಲ್ಲಿ ಹೆಚ್ಚು ಹೆಚ್ಚು ಬಂದರೆ ಅದು ದಿಟವಾಗಿಯೂ ಕರ‍್ನಾಟಕಕ್ಕೆ ಒಳಿತೇ? ಇದರಿಂದ ಕನ್ನಡ ಮತ್ತು ಕನ್ನಡಿಗನ ಏಳಿಗೆ ಆಗುತ್ತದೆಯೇ? ಕೇಂದ್ರಿಯ ವಿದ್ಯಾಲಯವನ್ನು ತರುವುದು ನಿಜವಾಗಿಯೂ ದೊಡ್ಡ ಸಾದನೆಯೇ? ಹೀಗೆ ಹಲವು ಕೇಳ್ವಿಗಳು ಏಳುತ್ತವೆ.

ಮೊದಲನೆಯದಾಗಿ ಕೇಂದ್ರಿಯ ವಿದ್ಯಾಲಯ ಇರುವುದು ಕೇಂದ್ರ ಸರಕಾರದಡಿಯಲ್ಲಿ ಕೆಲಸ ಮಾಡುವುವರ ಮಕ್ಕಳಿಗೆಂದು. ಇವು ಇರುವ ರಾಜ್ಯಗಳಲ್ಲಿ ಹಿಂದಿ ಮತ್ತು ಇಂಗ್ಲಿಶ್ ನುಡಿಗಳಲ್ಲಿ ಮಾತ್ರ ಕಲಿಕೆಯನ್ನು ನೀಡುತ್ತವೆ. ಹೀಗಾಗಿ ಇವು ಕನ್ನಡದ ಮಕ್ಕಳಿಗೆ ಅಶ್ಟಾಗಿ ಉಪಯೋಗಕ್ಕೆ ಬರುವುದಿಲ್ಲ. ಈ ವಿದ್ಯಾಲಯಗಳಲ್ಲಿ ಕೆಲಸ ಮಾಡಬೇಕೆಂದರೆ ಚೆನ್ನಾಗಿ ಹಿಂದಿ ಮತ್ತು ಇಂಗ್ಲೀಶ್ ಬಲ್ಲವರಾಗಿರಬೇಕು, ಹಾಗಾಗಿ ಕನ್ನಡಿಗರಿಗೆ ಇಲ್ಲಿ ಕೆಲಸದ ಅವಕಾಶಗಳು ಕಡಿಮೆ. ಒಂದು ವೇಳೆ ಕನ್ನಡಿಗರಿಗೆ ಕೆಲಸ ದೊರಕಿಸಿಕೊಡುತ್ತಿದೆ, ಕನ್ನಡಿಗರ ಮಕ್ಕಳಿಗೆ ಕಲಿಕೆಯನ್ನು ನೀಡುತ್ತಿದೆ ಎಂದಿಟ್ಟುಕೊಂಡರು, ಒಂದು ಜಿಲ್ಲೆಯಲ್ಲಿ ಹೆಚ್ಚೆಂದರೆ 300 ರಿಂದ 500 ಜನರಿಗೆ ಕೆಲಸ ಹಾಗು ಕಲಿಕೆ ಸಿಗಬಹುದು. ಲಕ್ಶಗಟ್ಟಲೆ ಮಂದಿಯನ್ನು ಪ್ರತಿನಿದಿಸುವ ಒಬ್ಬ ಸಂಸದರಿಂದ ಕೇವಲ 300-500 ಮಂದಿಗೆ ಸಿಗುವಂತಹ ಯೋಜನೆಗಳು ಬಂದರೆ ಅದನ್ನು ಸಾದನೆ ಎಂದು ಹೇಳುವುದು ಸರಿಯೇ?

ಕೇಂದ್ರೀಯ ವಿದ್ಯಾಲಯಗಳು ಸಿ.ಬಿ.ಎಸ್.ಸಿ ಸಿಲೆಬಸ್ ಅನ್ನು ಪಾಲಿಸುತ್ತಾ ಅಲ್ಲಿ ಕಲಿಯುವ ಮಕ್ಕಳನ್ನು ಹಿಂದಿಮಯ ಮಾಡುವತ್ತ ಕೆಲಸ ಮಾಡುತ್ತಿದ್ದಾರೆ. ಅವರ ಪಾಟಗಳಲ್ಲಿ ಕರ‍್ನಾಟಕದ ಹಳಮೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಬದಲಾಗಿ ಉತ್ತರ ಬಾರತದ ಹಳಮೆಯನ್ನು ಹಿಂದಿಯಲ್ಲಿ ಹೇಳಿಕೊಡಲಾಗುತ್ತದೆ. ಹೀಗಾಗಿ ಇದರಿಂದ ಹೊರಬರುವ ಮಕ್ಕಳು ಒಳ್ಳೆಯ ಉತ್ತರ ಬಾರತೀಯನಾಗಿರುತ್ತಾನೆಯೇ ಹೊರತು ಒಳ್ಳೆಯ ಕನ್ನಡಿಗನಾಗಿರುವುದಿಲ್ಲ. ಇದರಿಂದ ಕನ್ನಡ ಹಾಗು ಕರ‍್ನಾಟಕಕ್ಕೆ ಯಾವ ಒಳಿತು ಇಲ್ಲ.

ಇದರ ಬದಲಾಗಿ, ಕೇಂದ್ರೀಯ ವಿದ್ಯಾಲಯದ ಕಲಿಕೆಯ ಗುಣಮಟ್ಟಕ್ಕೆ ಹೋಲುವ ಇಲ್ಲವೇ ಅದನ್ನು ಮೀರಿಸುವಂತಹ ಕಲಿಕೆಯ ಸ್ಕೂಲುಗಳನ್ನು, ಹೆಚ್ಚಿನ ಮಕ್ಕಳಿಗೆ ಅನುಕೂಲವಾಗುವಂತೆ ರಾಜ್ಯದಲ್ಲಿ ಕಟ್ಟಿಸಬೇಕಾಗುತ್ತದೆ. ನಮ್ಮ ರಾಜ್ಯದಲ್ಲಿರುವ ಪ್ರಾತಮಿಕ, ಪ್ರವ್ಡ ಹಾಗು ಕಲಿಕೆವೀಡಿನ ಕಲಿಕೆಯ ಗುಣಮಟ್ಟವನ್ನು ಮತ್ತು ಕಲಿಕೆಯ ಸಾದ್ಯತೆಗಳನ್ನು ಹೆಚ್ಚಿಸುವಂತೆ, ಹಣ ಇಲ್ಲವೇ ಇತರೆ ಸವಲತ್ತುಗಳನ್ನು ಕೇಂದ್ರ ಸರಕಾರದಿಂದ ತರಬೇಕಾಗುತ್ತದೆ. ರಾಜ್ಯ ಸರಕಾರದ ಅಡಿಯಲ್ಲೇ ಬರುವ ಹಾಗೆ ಉನ್ನತ ಮಟ್ಟದ ಕಲಿಕೆಯನ್ನು ಒದಗಿಸುವ ಕಲಿಕೆವೀಡುಗಳನ್ನು ತರಬೇಕಾಗುತ್ತದೆ. ರಾಜ್ಯದ ಮಂದಿಗೆ ಮತ್ತು ಮಕ್ಕಳಿಗೆ ನೆರವಾಗುವಂತೆ ರಾಜ್ಯ ಸರಕಾರದ ಅಡಿಯಲ್ಲೇ ಬರುವಹಾಗೆ ಕ್ರುಶಿ ಕಲಿಕೆವೀಡುಗಳು, ವಯ್ದ್ಯಕೀಯ ಕಲಿಕೆವೀಡುಗಳು, ಉನ್ನತ ಮಟ್ಟದ ಅರಿಮೆಯ ಕಲಿಕೆವೀಡುಗಳನ್ನು ಕಟ್ಟಬೇಕಾಗುತ್ತದೆ.

ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿ ಬರುವ ಹಲವಾರು ಯೋಜನೆಗಳು ರಾಜ್ಯದಲ್ಲಿದ ಪಾಲಿಗೆ ದಕ್ಕುವುದೇ ಕಡಿಮೆ. ಎತ್ತುಗೆಗೆ, ಚಿಕ್ಕಮಗಳೂರು ಮತ್ತು ಕಡೂರು ನಡುವೆ ರಯ್ಲು ದಾರಿಯನ್ನು ಹಾಕಲು ಸುಮಾರು ಇಪ್ಪತ್ತು ವರುಶಗಳನ್ನು ತೆಗೆದುಕೊಂಡಿವೆ! ಹರಿಹರ ಮತ್ತು ಕೊಟ್ಟೂರು ನಡುವಿನ ರಯ್ಲು ದಾರಿ ಮುಗಿಯಲು ಇನ್ನೂ ಕಾಲಕೂಡಿ ಬಂದಿಲ್ಲ! ಬೆಂಗಳೂರಿಗೆ ಯಾವುದೇ ಹೊಸ ರಯ್ಲು ಬಂದರೆ ಅದು ಹೊರ ರಾಜ್ಯದಿಂದ ಬೆಂಗಳೂರಿಗೆ ಸಂಪರ‍್ಕ ಮೂಡಿಸುವ ಏರ‍್ಪಾಡಾಗಿರುತ್ತದೆ. ಬೆಂಗಳೂರು ಮತ್ತು ರಾಜ್ಯದ ಇತರೆ ಎಲ್ಲಾ ಜಿಲ್ಲೆಗಳ ನಡುವೆ ಸಂಪರ‍್ಕ ಮೂಡಿಸುವ ರಯ್ಲುದಾರಿ ಇನ್ನೂ ಬಂದಿಲ್ಲ. ಹೀಗೆ ಇಂತಹ ಹಲವಾರು ಸಮಸ್ಯೆಗಳು ನಮ್ಮಲ್ಲಿವೆ.

ರಾಜ್ಯದ ಸಂಸದರು ಮಂದಿಗೆ ಒಳಿತಾಗುವಂತಹ ದೊಡ್ಡ ದೊಡ್ಡ ನೀರಾವರಿ ಯೋಜನೆಗಳನ್ನು ತರಬೇಕಾಗುತ್ತದೆ. ರಾಜ್ಯದ ಜಿಲ್ಲೆಗಳ ನಡುವೆ ಸಂಪರ‍್ಕವನ್ನು ಒದಗಿಸುವಂತಹ ರಯ್ಲುದಾರಿಗಳನ್ನು ತರಬೇಕಾಗುತ್ತದೆ. ಗಟ್ಟಿಮುಟ್ಟಾದ ರಸ್ತೆಗಳನ್ನು ಕಟ್ಟುವಂತಹ ಯೋಜನೆಗಳನ್ನು ತರಬೇಕಾಗುತ್ತದೆ. ರಾಜ್ಯದ ಮಂದಿಯ ಮೇಲೆ ನಡೆಯುತ್ತಿರುವ ಹಿಂದಿ ಹೇರಿಕೆಯ ಎದುರು ಮಾತನಾಡಿ ಕನ್ನಡಕ್ಕೂ ಸಮಾನ ಸ್ತಾನಮಾನ ನೀಡುವತ್ತ ಕೆಲಸಗಳನ್ನು ಮಾಡಬೇಕಾಗುತ್ತದೆ. ಹೀಗೆ, ಕರ‍್ನಾಟಕ-ಕನ್ನಡ-ಕನ್ನಡಿಗರ ಏಳಿಗೆಗೆ ಪೂರಕವಾಗುವಂತಹ ಕೆಲಸಗಳು ನಿಜವಾದ ಸಾದನೆಗಳಾಗುತ್ತವೆಯೇ ಹೊರತು ಕೇಂದ್ರಿಯ ವಿದ್ಯಾಲಯಗಳಲ್ಲ. ಇಂತಹ ಕೆಲಸಗಳನ್ನು ಮಾಡುವತ್ತ ನಮ್ಮ ರಾಜ್ಯದ ಸಂಸದರು ಮುಕ ಮಾಡಬೇಕಿದೆ.

(ಮಾಹಿತಿ ಸೆಲೆ: vijayakarnataka)

(ಚಿತ್ರ ಸೆಲೆ: studentuniform)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: