ಈಗಲಾದರೂ ಎಲ್ಲೆಡೆ ಕನ್ನಡ ಪಸರಿಸಲಿ

– ವಿವೇಕ್ ಶಂಕರ್.

Loudspeaker

ಮಾರ‍್ಚ್ 15 ರಂದು ಗ್ರಾಹಕರ ದಿನವೆಂದು ಆಚರಿಸಲಾಗುತ್ತದೆ. ನಾವೆಲ್ಲರು ಒಂದೆಲ್ಲ ಒಂದು ಬಗೆಯಲ್ಲಿ ಗ್ರಾಹಕರೇ. ” ಗ್ರಾಹಕನೇ ಅರಸ ” ಎಂದು ನಾವು ಕೂಡ ಹಲವು ಸಲ ಕೇಳಿರುತ್ತೇವೆ. ಎಲ್ಲಾ ವ್ಯವಹಾರಗಳಲ್ಲೂ ಗ್ರಾಹಕರೇ ಅರಿದೆಂಬುದು ಗೊತ್ತಿರುವುದೇ. ಯಾಕೆಂದರೆ ವ್ಯವಹಾರಗಾರರ ಹುಟ್ಟುವಳಿ(income) ನಿಂತಿರುವುದೇ ಗ್ರಾಹಕರಿಂದ. ಗ್ರಾಹಕನೇ ಅರಸನೆಂದ ಮೇಲೆ ಗ್ರಾಹಕರ ಸುತ್ತಲೂ ಮಾಡಿರುವ ಹಕ್ಕುಗಳು ಕೂಡ ಅರಿದೆಂದು ನಾವು ಗಮನಿಸಬಹುದಾಗಿದೆ. ಈ ಎಲ್ಲಾ ಹಕ್ಕುಗಳನ್ನು ನಾವು ಗಮನಿಸಿದರೆ (ಮಾಡುಗೆಗಳ ಇಲ್ಲವೇ ಬದಗುಗಳ ಇರಬಹುದು) ತೂಕ, ಅಳತೆ, ಬೆಲೆ, ಗುಣಮಟ್ಟ ಬಗ್ಗೆ ಕಟ್ಟಲೆಗಳಿವೆ ಮತ್ತು ಅದರ ಸುತ್ತಲೂ ಮಾತ್ವರಸೆಗಳು ನಡೆಯುತ್ತವೆ. ಇವೆಲ್ಲ ಅರಿದು ಯಾಕೆಂದರೆ ಓರ‍್ವ ಕೊಳ್ಳುಗನಿಗೆ ತಾನು ಕೊಡುವ ದುಡ್ಡಿಗೆ ಸರಿಯಾದ ಗುಣಮಟ್ಟದ ಮಾಡುಗೆ ತನ್ನ ಕಯ್ಗೆ ಸೇರುವುದು ಸರಿಯಾದುದೇ.

ಆದರೆ ಇಲ್ಲಿ ನಾವು ಇನ್ನೊಂದು ಕೋನವನ್ನು ಆಳವಾಗಿ ಗಮನಿಸಿಲ್ಲ, ಅದೇನೆಂದರೆ ಯಾವುದೇ ಮಾಡುಗೆಯಾಗಲಿ, ಅದರ ಮೇಲೆ ಅಚ್ಚಾಗಿರುವ ಮಾಹಿತಿ ಇಲ್ಲವೇ ಬಳಸುವ ಹೊಲಬು ಮಾಡುಗೆಯ ಮೇಲಿರುತ್ತದೆ. ಇದು ಮಾಡುಗೆಯಾದರೆ, ಇನ್ನೂ ಬದಗು ಬಗ್ಗೆ ಹೇಳುವುದಾದರೆ ಅಂಗಡಿಗೆ ಹೋದ ಗ್ರಾಹಕರಿಗೆ ಬದಗು ದೊರೆಯುತ್ತದೆ. ಈ ಎರಡು ಕುಳ್ಳಿಹಗಳಲ್ಲೂ ನುಡಿಯ ಬಳಕೆ ನಡೆಯುತ್ತದೆ ಅಲ್ವೇ ? ಇದರ ಕುರಿತು ಗ್ರಾಹಕ ಹಕ್ಕುಗಳು ಹಾಗೂ ಕಟ್ಟಲೆಗಳು ಒತ್ತು ನೀಡಿಲ್ಲವೆಂಬುದನ್ನು ನಾವು ಗಮನಸಿಬಹುದು. ಗ್ರಾಹಕರ ಹಕ್ಕುಗಳಲ್ಲಿ ತೂಕ, ಅಳತೆ, ಬೆಲೆ, ಗುಣಮಟ್ಟ, ಸರಿಮೆ ಇವೆಲ್ಲಕ್ಕೂ ಒತ್ತು ನೀಡುವುದು ಸರಿಯೇ ಆದರೆ ಗ್ರಾಹಕ ಸೇವೆಯೂ ಯಾವ ನುಡಿಯಲ್ಲಿ ನಡೆಯುತ್ತದೆಂಬುದನ್ನು ಕಡೆಗಣಿಸಬಾರದು. ಕರ‍್ನಾಟಕದಲ್ಲಿ ಇವೆಲ್ಲ ಕನ್ನಡದಲ್ಲಿ ನಡೆಯಬೇಕೆಂದು ಕಟ್ಟಲೆ ಯಾಕಿಲ್ಲ? ಕನ್ನಡ ಈ ಮಣ್ಣಿನ ನುಡಿ ಹಾಗೂ ಸುತ್ತಮುತ್ತಲಿರುವ ನುಡಿ ಅಲ್ವೇ ? ಕನ್ನಡಿಗರಿಗೆ ಇವೆಲ್ಲ ಕನ್ನಡಲ್ಲಿ ಒದಗುವಂತಿರಬೇಕು.

ಆದರೆ ನಮ್ಮ ಸುತ್ತಮುತ್ತಲೂ ನೋಡಿದರೆ ಹಲವು ಕಡೆ ಕನ್ನಡದ ಕಡೆಗಣನೆ ನೆರೆಯಾಗಿ ನಡೆದಿದೆ ಹಾಗೂ ನಡೆಯುತ್ತಿದೆ. ಮೊದಲಿಗೆ ನಮ್ಮ ಮನೆಗಳಲ್ಲಿ ಬಳಸುವ ಆವಿ ಉರುಳೆಯನ್ನು(gas cylinder) ನೋಡೋಣ. ಅದರ ಮೇಲೆ ಬರೆದಿರುವ ಕಾಪು ಮಾಹಿತಿ ಹಾಗೂ ಬೇರೆ ಮಾಹಿತಿ ಅರಿದು ಯಾಕೆಂದರೆ ಇಲ್ಲಿ ಏನೇ ತಪ್ಪಿದರೂ ತುಂಬಾ ತುಂಬಾ ತೊಂದರೆಯಾಗಬಹುದೆಂದು ನಮಗೆ ಗೊತ್ತು. ಆದರೆ ಈ ಮಾಹಿತಿಯೂ ಕನ್ನಡದಲ್ಲಿಲ್ಲ, ಇಂಗ್ಲಿಶ್ ಇಲ್ಲವೇ ಹಿಂದಿಯಲ್ಲಿ ಇರುತ್ತದೆ. ಹಾಗಾದರೆ ಕನ್ನಡ ಬಲ್ಲ ಮಂದಿಯ ಬಾಳಿಗೆ ಬೆಲೆ ಇಲ್ವೇ ? ಇನ್ನೊಂದೆಡೆ ನಾವು ಓಡಾಡುವ ಹಳಿಬಂಡಿಗಳನ್ನು ನೋಡೋಣ, ಕರ‍್ನಾಟಕದಲ್ಲಿ ಓಡಾಡುವ ಹಳಿಬಂಡಿಗಳನ್ನು ಹೆಚ್ಚು ಬಳಸುವುದು ಕನ್ನಡಿಗರೇ, ಆದರೆ ಬಂಡಿಯೊಳಗೆ ಬರೆದಿರುವ ಮಾಹಿತಿ ಕನ್ನಡದಲ್ಲಿಲ್ಲ. “ಹಳಿಬಂಡಿಯನ್ನು ನಿಲ್ಲಿಸುವುದಕ್ಕೆ ಸರಪಳಿಯನ್ನು ಎಳೆಯಬೇಕೆಂದು” ಬರೆದಿರುವ ಮಾಹಿತಿ ಕನ್ನಡಿಗರ ಪಾಲಿಗೆ ಏನೂ ಉಪಯೋಗವಿಲ್ಲ ಯಾಕೆಂದರೆ ಅದು ಕನ್ನಡದಲ್ಲಿಲ್ಲ, ಇಂಗ್ಲೀಶ್ ಮತ್ತು ಹಿಂದಿಯಲ್ಲಿ ಮಾತ್ರಾ ಇದೆ. ಕನ್ನಡದಲ್ಲಿ ದೊರಕದ ಮಾಹಿತಿಯೂ ಗೊಡ್ಡು.

gas_cylinderಈ ಎರಡು ಕಡೆ ಗಮನಿಸಿದರೆ ಇದು ಮಂದಿಗಳ ಬಾಳಿನ ಬಗ್ಗೆ ನಾವು ಮಾತನಾಡುತ್ತಿರುವುದು ಎಂಬುದು ಎದ್ದು ಕಾಣುತ್ತದೆ. ಎರಡು ಕಡೆ ಏನೇ ಹೆಚ್ಚು-ಕಡಿಮೆ ಆದರೂ ತುಂಬಾ ಕೆಟ್ಟ ದೊರೆತ ಉಂಟಾಗುವುದೆಂದು ನಮಗೆ ಗೊತ್ತು. ಗ್ರಾಹಕರ ಹಕ್ಕುಗಳಲ್ಲಿ ತಿಳಿದುಕೊಳ್ಳುವ ಹಕ್ಕು(right to be informed) ಕೂಡ ಇದೆ, ಆದರೆ ಮಾಹಿತಿಯೂ ತಿಳಿಯುವ ನುಡಿಯಲ್ಲಿ ಇಲ್ಲದಿದ್ದರೆ ಅದು ಗೊಡ್ಡು. ಇಲ್ಲಿ ಹಕ್ಕಿನ ಬಗ್ಗೆ ಮಾತನಾಡುವುದು ಸರಿ ಆದರೆ ತಿಳಿಯುವ ನುಡಿಯಲ್ಲಿ ಮಾಹಿತಿ ನೀಡಿದರೆ ತಾನೇ ಅದು ತಿಳಿಯುತ್ತದೆ. ಹೀಗೆ ಹಲವು ಎತ್ತುಗೆಗಳನ್ನು ನಾನು ನೀಡಬಲ್ಲೆ, ಹಲವು ಮಳಿಗೆಗಳಿಗೆ ಹೋದರೆ ಅಲ್ಲಿ ಹಲವು ಅಂಗಡಿಗಳಲ್ಲಿ ಕನ್ನಡ ಮಾತನಾಡುವ ಮಂದಿ ಇರದ ದೂಸರು ಹಲವು ಕನ್ನಡಿಗರಿಗೆ ತೊಂದರೆಯುಂಟಾಗುವುದು ನಮಗೆ ಗೊತ್ತು. ಹೀಗೆ ಅಂಚೆಮನೆಗಳಲ್ಲಿ, ಹಣಮನೆಗಳಲ್ಲಿ, ಬಾನೋಡಗಳಲ್ಲಿ ಹಲವೆಡೆ ಕನ್ನಡವನ್ನು ಕಡೆಗಣಿಸುವ ಕುಳ್ಳಿಹಗಳು ನಮ್ಮ ಮುಂದಿವೆ.

Trainಇವೆಲ್ಲ ಕೇಳಿದ ಮೇಲೆ ನಮ್ಮಲ್ಲಿ ಮೂಡುವ ಕೇಳ್ವಿ, ಹಾಗಾದರೆ ನಾವೇನು ಮಾಡಬಹುದೆಂದು ? ಮೊದಲು ಹೇಳಿದ ಹಾಗೆ ನಾವೆಲ್ಲರು ಒಂದೆಲ್ಲ ಒಂದು ಬಗೆಯಲ್ಲಿ ಗ್ರಾಹಕರೇ. ಹಾಗಾಗಿ ಇಡೀ ವಹಿವಾಟಿನಲ್ಲಿ ನಮ್ಮ ಪಾಂಗು ಹಿರಿದೆಂದು ನಾವು ಮರೆಯಬಾರದು. ಕನ್ನಡಿಗರು ಕನ್ನಡ ಬೇಕೆಂದು ಗಟ್ಟಿಯಾಗಿ ಕೋರಬೇಕು. ಕನ್ನಡಕ್ಕೆ ನಾವು ಒತ್ತಾಯ ಮಾಡಿದರೆ ನಮಗೆ ಬೇಕಾಗುವ ಮಾರ‍್ಪಾಡುಗಳು ದೊರೆಯುತ್ತದೋ ಇಲ್ಲವೋ ಎಂಬ ಗೊಂದಲ ನಮ್ಮಲ್ಲಿ ಮೂಡಬಹುದು.

ಇಲ್ಲಿ ಒಂದು ಗೆಲುವಿನ ಕತೆಯನ್ನು ಹೇಳುತ್ತೇನೆ. ಸಿಟಿಬ್ಯಾಂಕ್ ಜಗತ್ತಿನ ಹಲವೆಡೆ ಕೆಲಸ ಮಾಡುವ ಹಣಮನೆ. ಸುಮಾರು ಕೆಲವು ಏಡುಗಳ ಹಿಂದೆ ಇವರು ಬೇರೆ ಕಾಸಗಿ ಬ್ಯಾಂಕಿನ ಹಾಗೆ ಕೆಲಸ ಮಾಡುತ್ತಿದ್ದರೆ, ಎಲ್ಲೆಡೆ ಹಿಂದಿ ಹಾಗೂ ಇಂಗ್ಲಿಶ್ನಲ್ಲಿ ಬದಗು ನೀಡುತ್ತಿದ್ದರು. ಕೆಲವು ಏಡುಗಳ ಹಿಂದೆ ಓರ‍್ವ ಕನ್ನಡಿಗರು ಗಟ್ಟಿ ನಿಲುವನ್ನು ತೆಗೆದುಕೊಂಡು ಕನ್ನಡದಲ್ಲಿ ಬದಗು ಬೇಕೇ ಬೇಕೆಂದು ಕೋರಿದರು. ಮೊದಮೊದಲಿಗೆ ಇವರ ಕೋರಿಕೆ, ದೂರುಗಳಗೆ ಏನೂ ದೊರಯದಿದ್ದರೂ, ಅವರು ನಿಲ್ಲದೇ ಇದರ ಬಗ್ಗೆ ಹಲವು ಮಂದಿಯಲ್ಲಿ ಅರಿವು ಮೂಡಿಸಿದರು. ಅಮೇಲೆ ಹಲವು ಗೆಳೆಯರು ಕೂಡ ಕನ್ನಡಕ್ಕೆ ಒತ್ತಾಯ ಮಾಡಿದರು.

ಕೊಂಚ ಹೊತ್ತು ಕಳೆದ ಮೇಲೆ ಈ ಒತ್ತಡಕ್ಕೆ ಮಣಿದ ಸಿಟಿಬ್ಯಾಂಕ್ ತಮ್ಮ ಹಣಗೂಡುಗಳಲ್ಲಿ(ATM) ಕನ್ನಡ ಆಯ್ಕೆ ನೀಡಿದರು, ಒಂದು ಹಂತಕ್ಕೆ ಗೆಲುವಾಯಿತೆಂದು ನಾವು ಲೆಕ್ಕಿಸಿದರೂ ಈ ಗೆಳೆಯರು ಈ ಬ್ಯಾಂಕಿನಲ್ಲಿ ಇನ್ನೂ ಮಾರ‍್ಪಾಡುಗಳು ನಡೆಯಬೇಕೆಂದು ನಿಲುವು ತೆಗೆದುಕೊಂಡು ಕೆಲಸ ಮಾಡಿದರು, ಆಗ ತಮ್ಮ ಹಣಚೀಟಿಗಳಲ್ಲಿ(challan) ಕನ್ನಡ ನೀಡಿದರು. ಇದರ ಜೊತೆ ಅಲ್ಲಿ ಕೆಲಸ ಮಾಡುವವರು ಕೂಡ ಕನ್ನಡದಲ್ಲಿ ಮಾತನಾಡಲು ತೊಡಗಿದರು. ಈಗ ನನಗಂತೂ ಯಾವುದೇ ಕರೆ ಬಂದರೂ ಅವರು ಕನ್ನಡದಲ್ಲಿ ಮಾತನಾಡುತ್ತಾರೆ. ಇನ್ನೂ ಕೆಲವು ಮಾರ‍್ಪಾಡುಗಳು ಆಗಬೇಕಿವೆ, ಆದರೆ ಒಂದು ಮಟ್ಟಕ್ಕೆ ನಮಗೆ ಗೆಲುವು ಕಾಣಿಸಿದೆ. ಕೇಳಿದರೆ ನಲಿವು ಉಂಟಾಗುವುದು ಸರಿ, ಆದರೆ ಇದೆಲ್ಲ ಹೇಗೆ ಆಯಿತು? ಇದೆಲ್ಲ ನಮ್ಮಿಂದಲೇ, ಕನ್ನಡಿಗರ ಒತ್ತಡದಿಂದ. ಇಲ್ಲಿ ಕಟ್ಟಲೆಗಳಲ್ಲೂ ಮಾರ‍್ಪಾಡುಗಳು ನಡೆಯಬೇಕೆಂಬುದನ್ನು ಒಪ್ಪುತ್ತೇನೆ, ಆದರೆ ನಮ್ಮ ನಿಲ್ಲದ ಕೆಲಸದಿಂದಲೇ ಈ ಬೆಳವಣಿಗೆಯೂ ನಡೆಯಿತು. ಇದೇ ಬಗೆಯಲ್ಲಿ ಹಲವು ಕಡೆ ಬೇರೆ ಬೇರೆ ಬೆಳವಣಿಗೆಗಳನ್ನು ನೋಡಬಹುದು.

citibank

citibank (1)

ಗೆಳೆಯರೆ ಈ ಮಾರ‍್ಚ 15 ರಂದು ಗ್ರಾಹಕರ ಹಕ್ಕುಗಳಲ್ಲಿ ಗುಣಮಟ್ಟ, ತೂಕ, ಬೆಲೆ, ಸರಿಮೆ ಮುಂತಾದವುಗಳ ಬಗ್ಗೆ ಕೊಡುವ ಒತ್ತಿನ ಜೊತೆ ನುಡಿಗೂ ಒತ್ತು ಸಿಗಲೆಂದು ನಾವು ತೀರ‍್ಮಾನಿಸೋಣ, ಕರ‍್ನಾಟಕದಲ್ಲಿ ಎಲ್ಲೆಡೆ ಗ್ರಾಹಕ ಸೇವೆ ಕನ್ನಡದಲ್ಲಿ ನಡೆಯಬೇಕು, ನಮ್ಮ ಕರುನಾಡಿನಲ್ಲಿ ಎಲ್ಲೆಡೆ ಕನ್ನಡ ಪಸರಿಸಬೇಕು. ಮುಂದಕ್ಕೆ ಹೋಗುತ್ತ ಗ್ರಾಹಕರ ಹಕ್ಕುಗಳಲ್ಲಿ ನುಡಿಗೆ ಸಿಗಬೇಕಾದ ಒತ್ತು ಸಿಗಬೇಕು. ಇದರ ಕಡೆ ಕೆಲಸ ನಡೆಯುತ್ತಿದೆ ಹಾಗೂ ನಡೆಯಬೇಕು. ಕಡೆಯಾಗಿ ಈ ಅರಿವಿನ ಅಲೆ ಕಡೆ ’ಕನ್ನಡ ಗ್ರಾಹಕರ ಕೂಟ’ ಕೂಡ ತುಂಬಾ ಕೆಲಸ ಮಾಡಿದೆ ಹಾಗೂ ಮಾಡುತ್ತಿದೆ. ನಿಮಗೂ ಈ ಪಯಣದ ಜೊತೆ ಕಯ್ ಜೋಡಿಸುವ ಮನಸಾದರೆ ಈ ಪೇಸ್ ಬುಕ್ ಪುಟಕ್ಕೆ(https://www.facebook.com/Angadiyalikannadanudi?fref=ts) ಸೇರಬಹುದು. ನೀವು ಸೇರಿಕೊಳ್ಳಿರಿ, ನಿಮ್ಮ ಗೆಳೆಯರಿಗೂ ಸೇರುವುದಕ್ಕೆ ತಿಳಿಸಿರಿ.

(ಚಿತ್ರ ಸೆಲೆ: ic.gc.ca)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: