ನಾವ್ ನಮ್ ಅಪ್ಪಟ ನುಡಿಯನ್ ಪಟ್ಟಕ್ಕೇರ‍್ಸ್ ಕೊಳ್ಳೋದ್ ಯಾವಾಗ?

 ಶ್ರೀನಿವಾಸಮೂರ‍್ತಿ ಬಿ.ಜಿ.

6_GoldenThrone

ಮಾರ‍್ಚ್ 9, 2014 ರಂದು ನೆಲಮಂಗಲ ತಾಲ್ಲೂಕಿನ ವನಕಲ್ಲು ಮಲ್ಲೇಶ್ವರ ಮಟದಲ್ಲಿ ನಡೆದ ವನಕಲ್ಲು ಸಾಂಸ್ಕ್ರುತಿಕ ಹಬ್ಬ ಹಾಗೂ ಮಲ್ಲೇಶ್ವರ ಸ್ವಾಮಿ ತೇರ‍್ಹಬ್ಬಕ್ಕೆ ನಾನು ಹೋಗಿದ್ದೆ. ಈ ಹಬ್ಬದಲ್ಲಿ ಸಿದ್ದಯೋಗಾನಂದ ಸ್ವಾಮೀಜಿಯ ನೆನಪಿಗಿರಿಸಿರುವ ‘ವನಕಲ್ಲು ಶ್ರೀ’ ಮೆಚ್ಚುಗೆಯನ್ನು, ಚಿತ್ರದುರ‍್ಗದ ಶಿವಮೂರ‍್ತಿ ಮುರುಗಾ ಶರಣರಿಂದ ಪಡೆದುಕೊಂಡು ಡಾ. ಕೆ. ಎಸ್‌. ನಿಸಾರ್‌ ಅಹಮದ್‌ ರವರು ಮಾತನಾಡುವಾಗ, “ಮಂದಿಗಳು ಮಾತನಾಡುವ ಅಪ್ಪಟ ನುಡಿಗಳು ಮಾತ್ರ ಮಂದಿಗಳ ಸಂಸ್ಕ್ರುತಿಯನ್ನು ಹಾಗೂ ಬಾವನೆಗಳನ್ನು ಹಿಡಿದಿಡಬಲ್ಲದು.” ಎನ್ನುತ್ತಲೇ ಮಂದಿಗಳ ನಡುವೆ ಇರುವ ಮಂದಿಹಾಡಿನ

ಬಡವರು ಸತ್ತರೆ ಸುಡಲೀಕೆ ಸೌದಿಲ್ಲೋ
ಒಡಲ ಬೆಂಕೀಲೆ ಹೆಣ ಬೆಂದೋ
ಒಡಲ ಬೆಂಕೀಲೆ ಹೆಣ ಬೆಂದೋ
ದೇವಾರೆ ಬಡವರಿಗೆ ಸಾವಾ ಕೊಡಬ್ಯಾಡ

ಈ ಸಾಲನ್ನು ಪುರಾವೆಯನ್ನಾಗಿಸುತ್ತಾ ಹೇಳಿದರು.

ಈ ಹೊತ್ತಲ್ಲೇ ನನಗೆ “ನಾವ್ ನಮ್ ಅಪ್ಪಟ ನುಡಿಯನ್ ಪಟ್ಟಕ್ಕೇರ‍್ಸ್ ಕೊಳ್ಳೋದ್ ಯಾವಾಗ?” ಇದನ್ನೇ ಇವರನ್ನು ಕೇಳಲೇಬೇಕು ಅಂದುಕೊಂಡೆ. ಕಾರ‍್ಯಕ್ರಮ ಮುಗಿದ ಬಳಿಕ ಡಾ. ಕೆ.ಎಸ್‌. ನಿಸಾರ್‌ ಅಹಮದ್‌ ರವರಿಗೆ ನನ್ನ ಪರಿಚಯ ಮಾಡಿಕೊಂಡು “ನಾವ್ ನಮ್ ಅಪ್ಪಟ ನುಡಿಯನ್ ಪಟ್ಟಕ್ಕೇರ‍್ಸ್ ಕೊಳ್ಳೋದ್ ಯಾವಾಗ?” ಎಂದು ಕೇಳಿದೆ. ಆಗ ಅವರು ತುಸು ಸುಮ್ಮನಾದರು. ನಾನೇ “ನಮ್ಮ ಕನ್ನಡವನ್ನು ಆಡಳಿತದ ನುಡಿಯಾಗಿಸೋದು ಯಾರು? ಯಾವಾಗ?” ಎಂದು ನೇರವಾಗಿಯೇ ಕೇಳಿದೆ. ತಟ್ಟನೆ “ಎಲ್ಲರ ಒತ್ತಾಯದ ಹೊರತು ಏನೇನೂ ಆಗದು. ನಮ್ಮ ನುಡಿಗಾಗಿ ನಮ್ಮ ನುಡಿಯವರ ಬಳಿಯೇ ಬೇಡಿಕೊಳ್ಳಬೇಕಾದ ಪರಿಸ್ತಿತಿ ಇದೆ. ನಮಗಿಂತಲೂ ಚಿಕ್ಕ ಎಲ್ಲೆ ಹೊಂದಿರುವ ನುಡಿಗಳು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿವೆ. ಈಗ ನಮ್ಮ ನುಡಿಯ ಬೆಳವಣಿಗೆಗೆ ತೊಡಕಾಗಿರುವವರನ್ನು ಕಡೆಗಣಿಸಿ ನುಡಿಗಾಗಿ ದುಡಿಯಬೇಕಿದೆ.” ಎಂದು ಹೇಳಿದರು. ನಾನು “ಎಲ್ಲರ ಕನ್ನಡ ಶಯ್ಲಿಯ ಬರವಣಿಗೆಗಳನ್ನು honalu.net ಎನ್ನುವ ಮಿಂಬಲೆಯಲ್ಲಿ ಓದ್ಬಹುದು.” ಎಂದೆ. ಅದಕ್ಕೆ “ಮಹಾಪ್ರಾಣ, ಅಲ್ಪಪ್ರಾಣ ಇವುಗಳ ವ್ಯತ್ಯಾಸ ಮಕ್ಕಳಿಗೆ ಅಶ್ಟಾಗಿ ತಿಳಿಯೊಲ್ಲ. ಆಡಿದ್ದನ್ನು ಸಲೀಸಾಗಿ ಬರೆದರೆ ನುಡಿಯ ಸೊಗಡು ಹೆಚ್ಚಾಗುತ್ತೆ. ಆ ರೀತಿಯ ಬರಹಗಳು ಹೆಚ್ಚಾಗಿ ಬರಬೇಕಿದೆ.” ಎಂದು ಹಾರಯ್ಸಿ ಹೋದರು.

“ನಾವ್ ನಮ್ ಅಪ್ಪಟ ನುಡಿಯನ್ ಪಟ್ಟಕ್ಕೇರ‍್ಸ್ ಕೊಳ್ಳೋದ್ ಯಾವಾಗ?” ಆ ಹೊತ್ತಿನಿಂದ ಈವರೆಗೂ ಈ ಕೇಳ್ವಿ ನನ್ನ ಮನಸ್ಸನ್ನು ಕೊರೆದೂಕೊರೆದು ಈ ಕೆಳಗಿನ ಕೇಳ್ವಿಗಳ ಕವಲುಗಳನ್ನು ಉಂಟು ಮಾಡಿಬಿಟ್ಟಿದೆ!
1. ನಾವ್ ಈ ಕುರಿತು ಎಶ್ಟೋ ಬರಹಗಾರರ ಎಶ್ಟೋ ಬರಹಗಳನ್ನು ಓದಿಕೊಂಡಿದ್ದರೂ ಬರಹಗಾರರು ಬರೆದಶ್ಟೇ ಪ್ರಯತ್ನ ಮಾಡಿದ್ದರೆ ಈ ಹೊತ್ತಿಗೆ ನಮ್ಮ ನುಡಿಯ ಎತ್ತರ ಎಶ್ಟ್ ಇರುತ್ತಿತ್ತು?
2. ಆಳುತ್ತಿರುವ ನಮ್ಮ ನುಡಿಯವರು ನಮ್ಮ ನುಡಿಗೆ ಒತ್ತು ನೀಡಿದ್ದರೆ ನುಡಿಯ ಸವಲತ್ತು ಹೇಗಿರುತ್ತಿತ್ತು?
3. ನುಡಿಯ ಏಳಿಗೆಗೆಂದೇ ತೊಡಗಿಸಿದ ದುಡ್ಡನ್ ಲಪಟಾಯಿಸುವವರು ಇಶ್ಟು ಮಂದಿ ಇರುವಾಗ ಇನ್ನು ಬಡತನವನ್ನು ತೊಡೆಯಲಿಕ್ಕೆಂದು ತೊಡಗಿಸಿದ ದುಡ್ಡನ್ ಲಪಟಾಯಿಸಲು ಅದೆಶ್ಟು ಮಂದಿ ಇದ್ದಾರೋ?
4. ನುಡಿಯ ಹಲತನವನ್ನು ಉಳಿಸಿಕೊಳ್ಳಲು unicode ಕಟ್ಟಲೆ ಎಣ್ಣುಕಗಳಲ್ಲಿ ಬಳಕೆಗೆ ಬಂದಿರುವುದರ ಅರಿವು ಆಳ್ಮೆಗಾರರಿಗೆ ಇದ್ದರೂ ಅವರು ಅಂದುಕೊಂಡಿದ್ದನ್ನೇ ಮಾಡುವ ಬಯಕೆಯಾದರೂ ಎಂತದ್ದು?
5. ಗಾಂದೀಜಿ ಹಿಂದಿಯನ್ನು ದೇಶದ ನುಡಿಯನ್ನಾಗಿಸಬೇಕು ಅಂದಿದ್ದು, ತೀರ‍್ಪುಗಾರರೂ ಕೂಡ ಹಿಂದಿಯ ಒಲವಿಗೆ ಬಾಗಿಕೊಂಡಿರೋದು, ರಾಶ್ಟ್ರೀಯ ಪಕ್ಶಗಳು ಜಾತಿ-ದರ‍್ಮ-ಪಂಗಡ’ಗಳಲ್ಲಿ ಇರುವ ಬೇರ‍್ಮೆಯನ್ನು ಕಂಡು ತಮ್ಮ ಇರುವಿಕೆಯನ್ನು ಉಳಿಸಿಕೊಳ್ಳಲು ಯೋಜನೆಗಳನ್ನು ಜಾರಿಗೊಳಿಸಿ ನುಡಿಗಳ ಬೇರ‍್ಮೆಯನ್ನು ಕಡೆಗಣಿಸಿರೋದು ಯಾವ ರೀತಿಯ ಆಡಳಿತದ ಲಕ್ಶಣ?
6. ನಮ್ಮ ಸಂವಿದಾನದ ಪ್ರಸ್ತಾವನೆಯಲ್ಲಿನ
“ಸಾಮಾಜಿಕ, ಆರ‍್ತಿಕ ಮತ್ತು ರಾಜಕೀಯ ನ್ಯಾಯ ; ವಿಚಾರ, ಅಬಿವ್ಯಕ್ತಿ, ವಿಶ್ವಾಸ, ದರ‍್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ; ಸ್ತಾನಮಾನ ಹಾಗೂ ಅವಕಾಶ ಸಮಾನತೆ”
ಈ ಸಾಲಿನಲ್ಲಿ ‘ ಬಾಶೆ ’ ಪದವನ್ನು ವಾಕ್ಯಕ್ಕನುಸಾರ ಸೇರಿಸಲು ಈ ಸಂವಿದಾನದ ಪ್ರಸ್ತಾವನೆಯನ್ನು ತಿದ್ದುಪಡಿಗೊಳಿಸಿ ದಿಟ್ಟವಾಗಿ ಅದಿನಿಯಮಿಸಿ ಅರ‍್ಪಿಸಿಕೊಳ್ಳುವುದು ಯಾವಾಗ? ಹಾಗೂ ಎಂತಹ ಆಳ್ಮೆಯ ಪಕ್ಶ ಆಡಳಿತಕ್ಕೆ ಬಂದಾಗ ಇದು ಆಗಬಲ್ಲದು?
7. ಈ ಕೇಳ್ವಿಗಳ ಹೆಗ್ಗುಂಡಿಗಳ ಮೇಲೆ ಹೇಳ್ವಿಗಳ ಸೇತುವೆಯನ್ನು ಕಟ್ಟುವುದರೊಂದಿಗೆ ನಮ್ಮ ನಾಡಿನ ನುಡಿಗಳೆಲ್ಲವು ಸರಾಗವಾಗಿ ಸಾಗಲು ಏರ‍್ಪಾಟನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಇರುವ ತೊಡಕುಗಳ ಗಂಟನ್ನು ಬಿಡಿಸಿಕೊಳ್ಳಲು ನಮಗೆ ನಮ್ಮವರಿಂದಲೇ ಅಡ್ಡಿ ಇದೆಯಲ್ಲ ಅದನ್ನು ಹೇಗೆ ದಾಟಿ ಮುಂದೆ ಸಾಗೋದು?

(ಚಿತ್ರ ಸೆಲೆ: mysorepalace.gov)

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: