ಮರೆಯಾಗದ ಮುತ್ತು – ಡಾ. ರಾಜ್‍ಕುಮಾರ್

– ಪ್ರಶಾಂತ್ ಇಗ್ನೇಶಿಯಸ್.

rajkumar

ಅದು 90ರ ದಶಕದ ಮದ್ಯದ ಒಂದು ದಿನ. ಅಂದು ಯಾವುದೋ ಒಂದು ಸಂಸ್ತೆಯ ಸಹಾಯಾರ‍್ತದ ಡಾ.ರಾಜ್ ಕುಮಾರ್ ರಸಸಂಜೆ. ಸ್ತಳ ಬೆಂಗಳೂರಿನ ಕಂಟೀರವ ಕ್ರೀಡಾಂಗಣ. ಅದಾಗಲೇ ರಾಜ್, ಚಿತ್ರಗಳಲ್ಲಿ ನಟಿಸುವುದು ವಿರಳವಾಗಿತ್ತು. ಸಿನಿಮಾ ಸಂಬಂದದ ಕಾರ‍್ಯಕ್ರಮಗಳನ್ನು ಬಿಟ್ಟರೆ ಸಾರ‍್ವಜನಿಕವಾಗಿ ಸಹ ಅಶ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ನಾವು ನೋಡಿದಂತೆ 80ರ ದಶಕದಲ್ಲಿ ರಾಜ್ ರಸಸಂಜೆಗಳಿಗೂ, ಈ ಕಂಟೀರವ ಕ್ರೀಡಾಂಗಣಕ್ಕೂ ಅವಿನಾಬಾವ ಸಂಬಂದ. ಅಗಾಗ ನಡೆಯುತ್ತಿದ್ದ ಈ ರಸ ಸಂಜೆಯ ಸಮಯದಲ್ಲಿ ಇಡೀ ಕ್ರೀಡಾಂಗಣ, ಅದರ ಅವರಣವೆಲ್ಲಾ ತುಂಬಿ ಹೋಗಿ, ಕಾರ‍್ಪೋರೇಶನ್ ಸುತ್ತಮುತ್ತಲಿನ ರಸ್ತೆಗಳಲ್ಲಿ ನಿಂತು ಒಳಗಿನ ರಾಜ್ ಗೀತೆಗಳನ್ನು ಕೇಳುತ್ತಿದ್ದ ಜನಸ್ತೋಮದ ದ್ರುಶ್ಯಗಳನ್ನು ನೆನೆದರೆ ಇಂದಿಗೂ ರೋಮಾಂಚನವಾಗುತ್ತದೆ.

ಕನ್ನಡದ ಒಂದು ಕಾರ‍್ಯಕ್ರಮದಲ್ಲಿ ಅಶ್ಟೊಂದು ಸಡಗರ, ವಯ್ಬವವೆಲ್ಲಾ ಇಂದು ಕನಸಿನ ಮಾತೇ ಸರಿ. 90ರ ದಶಕಕ್ಕೆ ಬರೋಣ. ಕಾರ‍್ಯಕ್ರಮ ಶುರುವಾಗಲು ಇನ್ನೂ 2, 3 ಗಂಟೆ ಇರುವಾಗಲೇ ಸುತ್ತಮುತ್ತಲೆಲ್ಲಾ ಜನ ಸಾಗರ. ಕ್ರೀಡಾಂಗಣ ಒಳಗಿದ್ದಶ್ಟೇ ಜನ ಹೊರ ಆವರಣದಲ್ಲೂ ನೆರದಿದ್ದಾರೆ. ಗುಂಪು ಗುಂಪಾಗಿ ನಿಂತ ಜನಗಳ ನಡುವೆ ರಾಜ್, ರಾಜ್ ಚಿತ್ರಗಳ ಬಗ್ಗೆಯೇ ಮಾತು. ರಾಜ್ ಕ್ರೀಡಾಂಗಣದ ಒಳಗೆ ಹೋಗಬೇಕಾದರೆ ಸಾಗಬೇಕಾದ ದಾರಿಯಲೆಲ್ಲಾ ಜನ. ಒಂದು ಕ್ಶಣ ನೋಡಲು ಸಿಕ್ಕರೂ ಸಾಕೆಂಬಂತೆ.

ರಸ ಸಂಜೆಗೆ ಕಾಸು ಕೊಟ್ಟವರು, ಪಾಸು ಪಡೆದವರು ಒಳಗಿದ್ದರೆ, ಅದು ಸಾದ್ಯವಾಗದವರ ಸಂಬ್ರಮ ಕ್ರೀಡಾಂಗಣದ ಹೊರಗಡೆ. ಹಗಲು ತನ್ನ ಬೆಳಕನ್ನು ಕಳಚಿಕೊಳ್ಳುತ್ತಾ ರಾತ್ರಿ ಕತ್ತನ್ನು ತಬ್ಬಿಕೊಳ್ಳುವ ಮುನ್ನ ಆಕಾಶದಲ್ಲಿ ಕೆಂಪು ನೀಲಿ ಬಣ್ಣಗಳು ಕಣ್ಣಾ ಮುಚ್ಚಾಲೆ ಆಡುತ್ತಿರುವ ಸಮಯ. ಬೆಳಕೂ ಅಲ್ಲದ ಕತ್ತಲೂ
ಅಲ್ಲದ ಮಂಕಿನಲ್ಲಿ ಸುತ್ತಮುತ್ತಲಿನ ಮರಗಳಲ್ಲಿ ಪಕ್ಶಿಗಳ ಚಿಲಿಪಿಲಿಯಿಲ್ಲ. ಅಲ್ಲೆಲ್ಲಾ ರಾಜ್ ದೇ ದ್ಯಾನ, ಕಲರವ. ಇದಕ್ಕಿಂದಂತೆ ಮುಕ್ಯ ದ್ವಾರದ ಬಳಿ ವಾಹನವೊಂದು ಬರುತ್ತದೆ. ಅದರ ಹಿಂದೆ ಮುಂದೆ ಪೋಲಿಸ್ ಬೆಂಗಾವಲು ವಾಹನಗಳು. ವಾತಾವರಣದಲ್ಲಿ ಮಿಂಚಿನ ಸಂಚಾರ. ವಾಹನದ ಕಿಟಿಕಿಯಿಂದಲೇ ತಮ್ಮ ಆ ಸುಂದರ ನಗುವಿನೊಂದಿಗೆ ರಾಜ್ ಕಯ್ ಬೀಸುತ್ತಿದ್ದಂತೆ ನೆರದಿದ್ದ ಪ್ರತಿಯೊಬ್ಬನೂ ಅದು ತನಗೇ ಎಂಬಂತೆ ಕಯ್ ಬೀಸುತ್ತಾನೆ. ಆಗ ಅತ್ತವರೆಶ್ಟೋ? ಜಯಕಾರ ಕೂಗಿದವರೆಶ್ಟೋ, ವಾಹನದ ಹಿಂದೆ ಓಡಿದವರೆಶ್ಟೋ, ಬಿದ್ದವರೆಶ್ಟೋ, ನನ್ನಂತೆ. ಅಲ್ಲೇ ನಿಂತು ಮಯ್ ಮರೆತವರೆಶ್ಟೋ?

ಮುಂದೆ ನಡೆದದ್ದು ಮಾತ್ರ ಎಂದಿಗೂ ಮರೆಯಲು ಸಾದ್ಯವಾಗದ ಗಟನೆ. ಕ್ರೀಡಾಂಗಣದ ಬಾಗಿಲ ಒಳಗೆ ವಾಹನ ಮರೆಯಾಗುತ್ತಿದೆ ಎನಿಸುತ್ತಿದ್ದಂತೆ, ವಾಹನ ಗಕ್ಕೆನೆ ನಿಲ್ಲುತ್ತದೆ. ಕಾಸಿಲ್ಲದೆ, ಪಾಸಿಲ್ಲದೆ ಒಳಗಿರಲು ಸಾದ್ಯವಾಗದವರ ಬಗ್ಗೆ ಪ್ರೀತಿಯೋ, ಮಮತೆಯೋ ಎಂಬಂತೆ ರಾಜ್ ಜೀಪಿನಿಂದ ಕೆಳಗಿಳಿಯುತ್ತಾರೆ. ಅಲ್ಲಿ ಇಳಿಯುವ ಸಂದರ‍್ಬವೆನು ಇರಲಿಲ್ಲ. ಜನ ಏನಾಗುತಿದೆ ಎಂದು ನೋಡುತ್ತಿದಂತೆ ರಾಜ್ ಬಾಗಿಲು ತೆರೆದು, ಅದೇ ವಾಹನದ ಕಟ್ಟೆಯೊಂದರ ಮೇಲೆ ನಿಲ್ಲುತ್ತಾರೆ. ನಿಂತು, ತಮ್ಮ ಪಂಚೆಯನ್ನು ಒಮ್ಮೆ ಗಟ್ಟಿಯಾಗಿ ಕಟ್ಟಿ, ಎರೆಡು ಕಯ್ ಮೇಲಕ್ಕೆತ್ತಿ ನಮಸ್ಕಾರ
ಎನ್ನುತ್ತಿದ್ದಂತೆ ಆ ಸ್ತಳದಲ್ಲಾದ ರೂಪಾಂತರ ಅಕ್ಶರಗಳಲ್ಲಿ ವರ‍್ಣಿಸುವುದು ಅಸಾದ್ಯ.

ಎಲ್ಲವೂ ಮೊದಲೇ ನಿರ‍್ದಾರವಾಗಿತ್ತೇನೋ ಎಂಬಂತೆ ದಟ್ಟ ಬಣ್ಣದ ಆ ವಾಹನದ ವೇದಿಕಯಲ್ಲಿ, ನಸುಗತ್ತಲ ನಡುವೆ ರಾಜ್ ತಮ್ಮ ಅಚ್ಚ ಬಿಳಿ ಅಂಗಿ ಹಾಗೂ ಪಂಚೆಯಲ್ಲಿ ಕಂಗೊಳಿಸಿದ ರೀತಿ ಅದ್ಬುತ. “ಅಬಿಮಾನಿ ದೇವರುಗಳಿಗೆ ನಮಸ್ಕಾರ” ಎಂಬಂತ ಆ ಬಂಗಿಗೆ ಅಲಲ್ಲಿ ಗುಂಪಾಗಿದ್ದ ಇಡೀ ಜನಸ್ತೋಮವೇ ವಾಹನದತ್ತ ದಾಪುಗಾಲಿಡುತ್ತದೆ. ಸಾವಿರಾರು ಕಪ್ಪು ತಲೆಗಳ ನಡುವೆ ಬಿಳಿಯ ಬಟ್ಟೆ ತೊಟ್ಟ ರಾಜ್. ಅಣ್ಣಾವ್ರಿಗೆ ಜಯ್ ಎಂಬ ಮಾತು ಎಲ್ಲ ಕಡೆಯಿಂದ ಮೊಳಗುತ್ತದೆ. ಕೆಲವೇ ಕ್ಶಣಗಳಲ್ಲಿ ಅವರಿದ್ದ ವಾಹನದ ಸುತ್ತಾ ಸಾವಿರಾರು ಜನ. ಪೋಲಿಸರ ಪಾಡಂತೂ ಬೇಡವೇ ಬೇಡ. ಸುತ್ತಲೂ ನಿಂತು ಜನ ಕೂಗುತ್ತಾ ಕುಣಿಯುತ್ತಿದ್ದ ರೀತಿ ಮರೆಯಲಸಾದ್ಯ.

ರಾಜ್ ರದು ಎಂದಿನ ವಿನೀತ ನಗು. ಕಣ್ಣಲ್ಲಿ ಆನಂದಬಾಶ್ಪವಿತ್ತೇ ತಿಳಿಯಲಿಲ್ಲ. ಇಡೀ ಜನಸ್ತೋಮದತ್ತ ಬಾವಪೂರ‍್ಣವಾಗಿ ಕಯ್ ಬೀಸುತ್ತಾ ನಿಂತವರನ್ನು, ಪಕ್ಕದಲ್ಲಿದ್ದವರು ಎಚ್ಚರಿಸುತ್ತಾರೆ. ಇನ್ನೂ ಅಲ್ಲಿದ್ದರೆ ಆಗುವುದಿಲ್ಲ ಎಂದು ಅರಿತ ಪೋಲಿಸರು ವಾಹನವನ್ನು ಹೊರಡಿಸಿ ಕ್ರೀಡಾಂಗಣದ ಒಳಗೆ ಮರೆಯಾಗುತ್ತಾರೆ. ಜನರದ್ದು ಮಾತ್ರ ನಿಲ್ಲದ ಸಡಗರ, ಕೇಕೆ, ಕುಣಿತ. ಬಾಗಿಲಿಗೇ ಬಂದ ಬಗವಂತನ ಕಂಡ ಬಾವ ಪರವಶತೆ. ಅದು ಸಾಮಾನ್ಯ ಚಿತ್ರ ನಟನೊಬ್ಬನಿಗೆ ಇರಬಹುದಾದ ಅಬಿಮಾನವನ್ನು ಮೀರಿದ ಮಿಡಿತ, ತುಡಿತ. ರಾಜ್ ಮತ್ತು ಕನ್ನಡಿಗರದು ಸಿನಿಮಾ, ನಟನೆಗೆ ಮೀರಿದ ಸಂಬಂದ. ಅಂದು ರಾಜ್ ರ ಬಗೆಗಿನ ಜನರ ಪ್ರೀತಿ, ಉತ್ಸಾಹ ಮತ್ತು ರಾಜ್ ಗೆ ಅಬಿಮಾನಿಗಳ ಮೇಲಿದ್ದ ಕಾಳಜಿಯ ಒಟ್ಟು ರೂಪ ಕೆಲವೇ ಕ್ಶಣದಲ್ಲಿ ಮಯ್ದಳೆದು ಮರೆಯಾದ ಅನುಬವ.

ರಸ ಸಂಜೆ ಮುಗಿಯುವ ವರೆಗೂ ಕರಗಲಿಲ್ಲ ಜನ, ಮತ್ತೊಮ್ಮೆ ಸಿಕ್ಕೀತೆ ಬಾಗ್ಯ ಎಂಬ ನಿರೀಕ್ಶೆಯಲ್ಲಿ. ಆದೇ ಕ್ರೀಡಾಂಗಣದಲ್ಲಿ ರಾಜ್ ರನ್ನು ಕೊನೆಯ ಬಾರಿಗೆ ನೋಡಿದಾಗಲೂ ಜನರದು ಅದೇ ಪ್ರೀತಿ, ರಾಜ್ ಮುಕದಲ್ಲಿ ಅದೇ ನಗು. ಉಸಿರು ಮಾತ್ರ ನಿಂತು ಹೋಗಿತ್ತು. ರಾಜ್ ವ್ಯಕ್ತಿಯಲ್ಲ ಶಕ್ತಿ ಎಂಬದಕ್ಕೆ ಸಾಕ್ಶಿಯಾಗಿತ್ತು ಆ ಗಟನೆ. ರಾಜ್ ಎಂಬ ವ್ಯಕ್ತಿತ್ವಕ್ಕೆ ಅಶ್ಟು ಜನರನ್ನು ಸೆಳೆಯುವ ಶಕ್ತಿ ಬಂದದಾದರೂ ಹೇಗೆ? ಒಂದೇ ಒಂದು ನಮಸ್ಕಾರ, ’ಅಬಿಮಾನಿ ದೇವರುಗಳೇ’ ಎಂಬ ಒಂದೇ ಒಂದು ಸಣ್ಣ ಉದ್ಗಾರಕ್ಕೂ ಸಿಗುತ್ತಿದ್ದ ಆ ಪ್ರತಿಕ್ರಿಯೆ, ಪ್ರೀತಿ ಹೇಗೆ ಸಾದ್ಯವಾಯಿತು ಎಂಬುದು ನಿಜಕ್ಕೂ ಆಶ್ಚರ‍್ಯದ ವಿಶಯವೇ.

ಆದರೆ ರಾಜ್ ರ ದೊಡ್ಡ ಶಕ್ತಿ ಇದ್ದದ್ದು ಅವರು ಸಾಮಾನ್ಯ ಕನ್ನಡಿಗನಿಗೆ ತಂದಿತ್ತ ಸ್ವಾಬಿಮಾನ, ಆತ್ಮವಿಶ್ವಾಸದಲ್ಲಿ, ನೆರೆಹೊರೆಯಲ್ಲಿ ಕುಗ್ಗಿ ಹೋಗಿದ್ದ ಸಾಮಾನ್ಯ ಕನ್ನಡಿಗನ ಆತ್ಮ ಸ್ತಯ್ರ್ಯಕ್ಕೆ ರಾಜ್ ಚಿತ್ರಗಳು, ವ್ಯಕ್ತಿತ್ವ ಕೊಟ್ಟ ಕೊಡುಗೆಯಲ್ಲಿ. ’ನಮ್ಮವನೊಬ್ಬ ಹೇಗಿದ್ದಾನೆ ನೋಡಿ’ ಎಂದು ಗಟ್ಟಿಯಾಗಿ ಹೇಳಲು ಆರಿಸಿಕೊಂಡ ಕನ್ನಡಿಗನ ಸಂಬ್ರಮದಲ್ಲಿ. ಸಾಮಾನ್ಯರಲ್ಲಿ ಸಾಮಾನ್ಯನಾಗಿದ್ದ ಮುತ್ತುರಾಜ್, ಡಾ.ರಾಜ್ ಕುಮಾರ್ ಆಗಿ ಸಾಗಿದ ರೋಮಾಂಚಕ ಪಯಣದಲ್ಲಿ. ಸಾಮಾನ್ಯ ಚಿತ್ರ ಪ್ರೇಕ್ಶಕನಿಂದ ದೊರಕಬಹುದಾದ ಸಿನಿಮಾ ನಟನೆಡೆಗಿನ ಪ್ರೀತಿ, ಅಬಿಮಾನವನ್ನು ಒಬ್ಬ ಸಾಂಸ್ಕ್ರುತಿಕ ರಾಯಬಾರಿಗೆ ಸಿಗಬಹುದಾದ ಗವ್ರವವನ್ನಾಗಿ ವಿಸ್ತರಿಕೊಂಡವರು ರಾಜ್.

ಕರ‍್ನಾಟಕ ಅದಾಗಲೇ ಹಲವು ಮಹನೀಯರು, ಪ್ರತಿಬಾವಂತರನ್ನು ಕಂಡಾಗಿತ್ತು. ಆದರೂ ರಾಜ್ ಬೆಳೆದ ಪರಿ ಅದ್ಬುತ. ಅದಕ್ಕೆ ಅವರು ವಿಶೇಶವಾದ ಪ್ರಯತ್ನಗಳನೇನು ಮಾಡಲಿಲ್ಲ. ಪ್ರತಿಬೆ, ಸಾಮರ‍್ತ್ಯದ ಜೊತೆ ನೆಚ್ಚಿಕೊಂಡಿದ್ದು ಶ್ರಮ, ಶ್ರದ್ದೆಯನ್ನು. ಮರೆಯದಿದ್ದದ್ದು ನಾಡು ನುಡಿಯನ್ನು. ಅವಲಂಬಿಸಿದ್ದು ಹಿರಿಯರ, ಅಬಿಮಾನಿಗಳ ಆಶೀರ‍್ವಾದವನ್ನು. ಬಿಡದೆ ಬೆಳೆಸಿಕೊಂಡದ್ದು ಸರಳತೆ, ಶಿಸ್ತು ಹಾಗೂ ಸಾಮಾಜಿಕ ಜವಬ್ದಾರಿಯನ್ನು. ಅಶ್ಟಕ್ಕೂ ರಾಜ್ ಜನರಿಗೆ ಅಶ್ಟೇಕೆ ಹತ್ತಿರವಾದರು, ಅಬಿಮಾನಿಗಳಿಗೆ ದೇವರಾದರು ಎಂಬುದನ್ನು ಉತ್ತರಿಸುವುದು ಸುಲಬದ ವಿಶಯವಲ್ಲದಿದ್ದರೂ ಕಶ್ಟವೂ ಅಲ್ಲ. ಅದು ನಟನೆಯಿಂದಲೇ, ತಮ್ಮ ಗಾಯನದಿಂದಲೇ, ಅಪರಿಮಿತ ಕನ್ನಡ ಪ್ರೇಮದಿಂದಲೇ, ತಮ್ಮ ನಿರ್‍ಮಲ ನಗುವಿಂದಲೇ, ಸರಳತೆಯಿಂದಲೇ, ಎಲ್ಲರೊಂದಿಗೂ ಬೆರೆಯುವ ಗುಣದಿಂದಲೇ, ಆ ಸ್ಪಶ್ಟ ಸಂಬಾಶಣೆಯಿಂದಲೇ? ಉತ್ತರ – ಎಲ್ಲದರಿಂದಲೂ ಹವ್ದು ಅತವಾ ಇವುಗಳಲ್ಲಿ ಯಾವುದಾದರೂ ಒಂದರಿಂದಲೂ ಹವ್ದು. ಜೀವನದಲ್ಲಿ ಚಿತ್ರಗಳನ್ನೇ ನೋಡದೆ ಇದ್ದರೂ ಅವರ ಬಕ್ತಿ, ಗೀತೆ, ಅವರ ವ್ಯಕ್ತಿತ್ವ, ಸಂಬಾಶಣೆಯ ಶಯ್ಲಿಗೆ ಮರುಳಾಗಿ ಅಬಿಮಾನಿ ಎನಿಸಿಕೊಂಡವರ ದೊಡ್ಡ ಬಳಗವೇ ಇದೆ.

ರಾಜ್ ಗೆ ಕನ್ನಡಿಗರು ತೋರಿದ ಪ್ರೀತಿ ದೊಡ್ಡದೋ ಅತವಾ ರಾಜ್ ರ ಕೊಡುಗೆ ದೊಡ್ಡದೋ ಎಂಬ ಮಾತುಗಳ ನಡುವೆ ಅದಾವುದನ್ನೂ ಲೆಕ್ಕಿಸದೇ ರಾಜ್ ರನ್ನು ಪ್ರೀತಿಯಿಂದ ಅಪ್ಪಿ ಒಪ್ಪಿಕೊಂಡ ಕನ್ನಡಿಗರ ಸಂಕ್ಯೆ ಎಲ್ಲಕಿಂತ ದೊಡ್ಡದಿದೆ. ಆಗಶ್ಟೇ ಬೆಳೆಯುತ್ತಿದ್ದ ಚಿತ್ರರಂಗಕ್ಕೆ ಯುವ ಪ್ರತಿನಿದಿಯಾಗಿ, ಚಿಗುರೊಡೆಯುತ್ತಿದ್ದ ಅಕಂಡ ಕರ‍್ನಾಟಕದ ಬಾವನೆಗಳಿಗೆ ಸಾಂಸ್ಕ್ರುತಿಕ ರಾಯಬಾರಿಯಾಗಿ, ಶ್ರಮ ಜೀವಿಗಳ ಮುಕವಾಣಿಯಾಗಿ, ಕನ್ನಡ ಸ್ವಾಬಿಮಾನದ ಪ್ರತೀಕವಾಗಿ, ಸರಳತೆ, ದೀನತೆಯ ರೂಪಕವಾಗಿ, ಕನ್ನಡ ಪರ ನಿಲುವಿನ ಗಟ್ಟಿ ದನಿಯಾಗಿ, ಅಸಂಕ್ಯ ಕನ್ನಡಿಗರ ಕನಸುಗಳ ಸಾಕಾರತೆಗೆ ಸ್ಪೂರ‍್ತಿಯಾಗಿ, ರಾಜೀವನಾಗಿ, ಮಯೂರನಾಗಿ, ಕುಂಬಾರನಾಗಿ, ಸನಾದಿ ಅಪ್ಪಣ್ಣನಾಗಿ ರಾಜ್ ಈ ನಾಡಿಗೆ ನೀಡಿದ ಕೊಡುಗೆ ಅಪಾರ. ತನ್ನದು ಕೊಡುಗೆಯಲ್ಲ ರುಣ ಸಂದಾಯ ಎಂಬ ಬಾವದಲ್ಲಿಯೇ ಮರೆಯಾದರೂ ಮರೆಯಲಾಗದ ನೆನಪುಗಳನ್ನು ಬಿಟ್ಟು ಹೋದ ರಾಜ್ ರ ಹುಟ್ಟು ಹಬ್ಬದ ದಿನ ಪ್ರತಿಯೊಬ್ಬ ಅಬಿಮಾನಿಯ ಪಾಲಿಗೆ ಅವರ ಮೇಲಿನ ಅಬಿಮಾನದ ಮರುಹುಟ್ಟಿನ ದಿನವೇ ಸರಿ.

(ಚಿತ್ರ ಸೆಲೆ: mbasics)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *