‘ಮಾಡಿದ’ ನೆತ್ತರು

 ವಿವೇಕ್ ಶಂಕರ್.

Red blood cells

ನೆತ್ತರ (ರಕ್ತ/blood) ಕೊರತೆ ಇಲ್ಲವೇ ನೆತ್ತರಿನ ಇತರ ಬೇನೆಗಳಿಂದ ಬಳಲುತ್ತಿರುವವರು ಹಲವರಿದ್ದಾರೆ. ಬೇಡಿಕೆಗೆ ಸರಿಯಾಗಿ ನೆತ್ತರು ಪೂರಯ್ಸುವುದು ಒಂದು ದೊಡ್ಡ ಸವಾಲೇ ಸರಿ. ನೆತ್ತರನ್ನು ಬೇರೊಬ್ಬರು ನೀಡಬೇಕು ಹಾಗೂ ಹಲವು ನೆತ್ತರು ಗುಂಪುಗಳಿರುವುದರಿಂದ ಅವುಗಳ ಹೋಲಿಕೆ ಮಾಡಿದ ಮೇಲೆ ಬೇನಿಗರಿಗೆ ನೆತ್ತರನ್ನು ಕೊಡಲಾಗುತ್ತದೆಯೆಂದು ನಮಗೆ ಗೊತ್ತಿರುವಂತ ವಿಶಯ. ಆದರೆ ನೆತ್ತರನ್ನು ಹೊರಗಡೆ ತಯಾರಿಸಲು ಆಗುವುದೇ? ಬೇರೆ ಮಾಡುಗೆಗಳನ್ನು ಮಾಡಿದ ಹಾಗೆ ನೆತ್ತರನ್ನು ಮಾಡಿದರೆ ಹೇಗೆ? ಕೇಳಿದರೆ ಬೆರಗು ಉಂಟಾಗುತ್ತದೆ ಅಲ್ವೇ? ಮಾಡಬಹುದಂತೆ, ಹೀಗೊಂದು ನಲ್ ಸುದ್ದಿ ಇತ್ತೀಚಿಗೆ ಹೊರಬಿದ್ದಿದೆ.

ಎಡಿನ್ಬರೊ ಕಲಿಕೆವೀಡಿನ (Edinburgh University) ಒಂದು ಅರಕೆ ತಂಡವೂ ಈ ಕೆಲಸವನ್ನು ಮಾಡಿದ್ದಾರೆ. ವ್ಯಕ್ತಿಯೊಬ್ಬನ ತೊಗಲಿನ ಸೂಲುಗೂಡುಗಳಿಂದ (skin cells) ಕೆಂಪು ನೆತ್ತರಿನ ಸೂಲುಗೂಡುಗಳನ್ನು ಮಾಡುವಲ್ಲಿ ಈ ತಂಡವು ಗೆಲುವುಕಂಡಿದೆ. ಈ ಒಸಗೆಯನ್ನು ತಂಡದ ಮಾರ‍್ಕ್ ಟರ‍್ನರ್ (Marc Turner) ಟೆಲಿಗ್ರಾಪ್(Telegraph) ಸುದ್ದಿಸೆಲೆಗೆ ತಿಳಿಸಿದ್ದಾರೆ. ಇದರ ಸಲುವಾಗಿ ಅವರು ಹಲವು ಯುನಯ್ಟಡ್ ಕಿಂಗ್ಡಂ (United Kingdom) ಕೂಟಗಳ ಜೊತೆ ಕೆಲಸ ಮಾಡುತ್ತಿದ್ದಾರಂತೆ.

ಕೆಂಪು ನೆತ್ತರಿನ ಸೂಲುಗೂಡುಗಳನ್ನು ತಯಾರಿಸುವ ಕೆಲಸ ಕೊಂಚ ಸಿಕ್ಕಲೇ, ಯಾಕೆಂದರೆ ಒಂದು ಹಸುಬೆಯೊಳಗೆಯಿರುವ ನೆತ್ತರಿನಲ್ಲಿ ಸುಮಾರು 2,000,000,000,000 (ಎರಡು ಲಕ್ಶ ಕೋಟಿ) ಕೆಂಪು ನೆತ್ತರಿನ ಸೂಲುಗೂಡುಗಳಿರುತ್ತವೆ. ಅರಕೆಗೂಡಿನಲ್ಲಿ ಮಾಡುವುದಕ್ಕೆ ತುಂಬಾ ದೊಡ್ಡ ಕೆಲಸವೆಂದು ಜೋಯಾನ್ ಮಂವ್ಟಪೋರ‍್ಡ್ (Joanne Mountford) ಅವರಿಂದ ತಿಳಿಯುತ್ತದೆ. ಆದರೂ ಮೊಟ್ಟಮೊದಲ ಬಾರಿಗೆ ಈ ಕೆಲಸದಲ್ಲಿ ಗೆಲುವು ಸಿಕ್ಕಿದೆಯಂತೆ.

ಕೆಂಪು ನೆತ್ತರಿನ ಸೂಲುಗೂಡುಗಳನ್ನು ತಲಸ್ಸೆಮಿಯ(thalassemia) ಇಂದ ಬಳಲುತ್ತಿರುವ ಮಂದಿಗೆ ಕೊಡುವ ಕೆಲಸವನ್ನು ಮಾರ್‍ಕ್ ಟರ್‍ನರ್‍ ತಂಡ ಹಮ್ಮಿಕೊಂಡಿದ್ದಾರೆ. ಈ ಸೂಲುಗೂಡುಗಳನ್ನು ಒರೆಗೆ ಒಳಗೊಳಿಸುವ ಕೆಲಸವು 2016ರ ಕೊನೆಯಲ್ಲಿ ಮಾಡಬಹುದೆಂದು ತಿಳಿಯಲಾಗಿದೆ. ಒಟ್ಟಿನಲ್ಲಿ ನೆತ್ತರು ಯಾವಾಗಲೂ ಬೇಕಾಗಿರುವುದೆಂದು ನಮಗೆ ಗೊತ್ತು, ದೊಡ್ಡ ಮಟ್ಟದಲ್ಲಿ ನೆತ್ತರನ್ನು ಮಾಡುವ ಕೆಲಸ ನಡೆದರೆ ಅದರಿಂದ ತುಂಬಾ ಉಪಯೋಗವಾಗುತ್ತದೆ, ಅಲ್ವೇ ?

(ಒಸಗೆ ಹಾಗೂ ತಿಟ್ಟದ ಸೆಲೆ: www.popsci.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: