ಇರುವೆಗೆ ನನ್ನ ಸವಾಲ್

– ಹರ‍್ಶಿತ್ ಮಂಜುನಾತ್.

ant_iruve

ಪ್ರತಿದಿನ ಪ್ರತಿಕ್ಶಣ ನಮ್ಮ ಸುತ್ತ ಅದೆಶ್ಟೋ ವಿಶಯಗಳು ನಡೆಯುತ್ತವೆ. ಅದರಲ್ಲಿ ಕೆಲವು ನಮ್ಮ ಗಮನಕ್ಕೆ ಬರುತ್ತವೆ. ಮತ್ತೆ ಕೆಲವು ಗಮನಕ್ಕೆ ಬಾರದೆಯೇ ಹೋಗುತ್ತವೆ. ಕೆಲವೊಮ್ಮೆ ವಿಶಯಗಳು ಗೋಚರವಾದರೂ, ಸಮಯದ ಜೊತೆ ಕಳೆದುಹೋಗಿರುತ್ತವೆ. ಮತ್ತೆ ಕೆಲವು ನಮ್ಮನ್ನು ಒಂದು ಹೊಸ ಕುತೂಹಲಗಳತ್ತ ಸೆಳೆದುಕೊಂಡುಹೋಗುತ್ತವೆ. ಅದರಲ್ಲೂ ಕೆಲವು ಪ್ರಶ್ನಾತೀತ ಕುತೂಹಲಗಳಿಗೆ ಉತ್ತರ ಕಂಡುಕೊಂಡಾಗ ಅದೊಂದು ವಿಶಿಶ್ಟ ಅನುಬವ.

ಕೆಲ ದಿನಗಳ ಹಿಂದೆ ಗೆಂಟುಕಾಣ್ಕೆ(television)ಯಲ್ಲಿ ನಾನೊಂದು ಕಾರ್‍ಯಕ್ರಮ ನೋಡುತ್ತಿದೆ. ಅದೊಂದು ಕೊಲೆ ಪ್ರಕರಣವನ್ನು ಬೇದಿಸಿದಂತಹ ಪಾತಕದ ಕತೆ (crime story) ಸಂಬಂದಿತ ಕಾರ್‍ಯಕ್ರಮವಾಗಿತ್ತು. ಆ ಕಾರ್‍ಯಕ್ರಮದ ನಿರೂಪಕನೋ, ಬಲು ಚತುರ ಮಾತುಗಾರ. ಆತ ಆ ಪ್ರಕರಣಕ್ಕೆ ಸಂಬಂದಿಸಿದಂತೆ ಕಾಪುಗರನ್ನು (police) ಹೊಗಳುವ ಸಲುವಾಗಿ ಒಂದು ಮಾತು ಹೇಳಿದ.

ಎಂತಹದೇ ಪ್ರಕರಣವಾಗಲಿ, ತಪ್ಪಿತಸ್ತ ಅದೆಶ್ಟೇ ಬುದ್ದಿವಂತಿಕೆ ಉಪಯೋಗಿಸಿದರೂ, ಕಾಪುಗರು ಅದರೆರಡರಶ್ಟು ಬುದ್ದಿವಂತಿಕೆ ಉಪಯೋಗಿಸಿ ಆ ಪ್ರಕರಣ ಬೇದಿಸುತ್ತಾರೆ. ಸಕ್ಕರೆಯನ್ನು ಅದೆಶ್ಟೇ ಬದ್ರವಾಗಿರಿಸಿದರೂ ಇರುವೆಗಳು ಆ ಜಾಗವನ್ನು ಪತ್ತೆ ಹಚ್ಚುತ್ತವೆ ನೋಡಿ ಹಾಗೆ.

”ಅರೇ ಹವ್ದಲ್ಲ, ನಾವೆಲ್ಲೆ ಸಿಹಿ ಇಟ್ಟರು ಅಲ್ಲಿಗೆ ಇರುವೆ ಮುತ್ತುತ್ತವೆ. ಅಶ್ಟಕ್ಕೂ ನಾವು ಸಿಹಿ ಇಡುವ ವಿಶಯ ಇರುವೆಗೆ ತಿಳಿಯುವುದಾದರೂ ಹೇಗೆ?” ಆ ನಿರೂಪಕನ ಒಂದು ಮಾತು ನಿಜಕ್ಕೂ ನನ್ನಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸಿತು. ಸಿಹಿ ಇರುವಲ್ಲಿಗೆ ಇರುವೆ ಬರುವ ವಿಶಯ ನಮಗೆ ತಿಳಿದಿರುವುದೆ. ಆದರೂ ಆದಕ್ಕೇನು ಕಾರಣವೆಂದು ತಿಳಿದುಕೊಳ್ಳುವ ಗೋಜಿಗೆ ನಾವು ಹೋಗುವುದಿಲ್ಲ. ಕುತೂಹಲ ಗರಿಗೆದರಿ ವಿಶಯವರಿಯುವಲ್ಲಿ ಆಸಕ್ತಿ ಹೆಚ್ಚಾಯ್ತು. ಆದರೂ ಒಮ್ಮೆ ಪ್ರಯೋಗಿಕವಾಗಿ ನೋಡಿಯೇ ಬಿಡೋಣ ಎಂದುಕೊಂಡು ಕೆಲಸ ಶುರುವಿಟ್ಟೆ.

ರಾತ್ರಿ ಮಲಗುವ ಮುನ್ನ ಒಂದು ಚಿಕ್ಕ ಚೀಲಕ್ಕೆ ಸ್ವಲ್ಪ ಸಿಹಿ ತುಂಬಿಸಿ, ನನ್ನ ಕೋಣೆಯ ಗೋಡೆಯ ಮದ್ಯದಲ್ಲಿ ಸ್ವಲ್ಪ ಎತ್ತರವಾಗಿ ಇರಿಸಿದೆ. ಅಲ್ಲಿ ಗೋಡೆಗೆ ಚೀಲ, ಚೀಲಕ್ಕೆ ಗೋಡೆ ಬಿಟ್ಟರೆ ಬೇರಾವುದೇ ವಸ್ತುವಿನ ಸಂಪರ್‍ಕವಿರಲಿಲ್ಲ. ‘ನೋಡೋಣ, ಇಲ್ಲಿಗೆ ಇರುವೆ ಹೇಗೆ ಬರುತ್ತದೆ’ ಎಂದು ನನ್ನೊಳಗೇ ಅಂದಾಜಿಸಿದೆ. ಒಂದರ್‍ತದಲ್ಲಿ ಇರುವೆ ಮತ್ತು ಪ್ರಕ್ರುತಿಯ ಹಲವು ಬೆರಗುಗಳಲ್ಲಿ ಒಂದಕ್ಕೆ ನಾನೆಸೆದ ಸವಾಲದಾಗಿತ್ತು. ಅಂತೂ ಬೆಳಗಾಯಿತು. ಬೆಳಗ್ಗೆ ಕಣ್ಣು ಬಿಟ್ಟವನೇ ನೇರವಾಗಿ ಆ ಚೀಲದತ್ತ ನೋಡಿದೆ. ಇರುವೆಯ ಸುಳುವೇ ಇರಲಿಲ್ಲ.

ಹ್ಹಾ…! ಆ ಕ್ಶಣಕ್ಕೆ ನಾನು ಗೆದ್ದಿದ್ದೆ. ಆದರೂ ಕುತೂಹಲ, ‘ಆ ಚೀಲವನ್ನು ಮತ್ತೆ ಕೆಲ ಸಮಯಗಳ ವರೆಗೆ ಅಲ್ಲೇ ಬಿಡು’ ಎಂದು ಹೇಳುತ್ತಿತ್ತು. ಅದಕ್ಕೆ ಇರುವೆಗೆ ಮತ್ತೊಂದು ಅವಕಾಶ ಕೊಟ್ಟು ನನ್ನ ಕಚೇರಿ ಕಡೆ ನಡೆದೆ. ಏನೆ ಆದರೂ ಇಂತಹ ಪ್ರಯೋಗಗಳು ನನಗೆ ಹೊಸತು ನೋಡಿ, ಹಾಗಾಗಿ ಅದೆಶ್ಟೇ ಮರೆತರೂ ಮತ್ತೆ ಮತ್ತೆ ನೆನಪು ನನ್ನ ಹುಡುಕಿ ಬರುತ್ತಿತ್ತು. ಅಂತೂ ದಿನ ಕಳೆದೆ. ಸಂಜೆ ಮನೆಗೆ ಹೋಗಿ ನಾನಿಟ್ಟ ಸಿಹಿಗಂಟನ್ನೊಮ್ಮೆ ನೋಡುವ ವರೆಗೆ ಮನಸು ತಡಕಾಡುತ್ತಿತ್ತು. ಮನೆಗೆ ಬಂದವನೇ ನೇರವಾಗಿ ನನ್ನ ಕೋಣೆಯೊಳಗೆ ಹೊಕ್ಕು ನೋಡಿದೆ. ನಿಜಕ್ಕೂ ಆ ನಿರೂಪಕ ನುಡಿದಂತೆಯೇ ಆಗಿತ್ತು. ಹವ್ದು, ಇರುವೆ ಗೆದ್ದಿತ್ತು. ಸ್ರುಶ್ಟಿಯ ಬೆರಗಿಗೆ ನಾನೂ ಸೋಲಲೇಬೇಕಾಯಿತು.

ಅಶ್ಟಕ್ಕೂ ನಾನೆಸೆದ ಆ ಸವಾಲನ್ನು ನಿಜವಾಗಿಯೂ ಇರುವೆ ಸ್ವೀಕರಿಸಿತೇ? ನಾನಿಟ್ಟ ಸಿಹಿಯ ಚೀಲ ಇರುವೆಗೆ ತಿಳಿದದ್ದಾದರೂ ಹೇಗೆ? ಇರುವೆಯ ಈ ಎಲ್ಲಾ ಚಟುವಟಿಕೆಗಳಿಗೆ ಕಾರಣವಾದರೂ ಏನು? ಹೀಗೆ ನನ್ನಲ್ಲಿ ಹಲವು ಪ್ರಶ್ನೆಗಳು ಮೂಡಿತು. ನನ್ನ ಕುತೂಹಲ ಮತ್ತಶ್ಟು ಗರಿಗೆದರಿತು, ತಿಳಿದುಕೊಳ್ಳುವ ಹಂಬಲ ಉತ್ತರ ಕಂಡುಕೊಳ್ಳುವವರೆಗೆ ನನ್ನನ್ನು ಬಿಡುವ ಹಾಗೆ ಕಾಣಲಿಲ್ಲ. ಉತ್ತರ ಹುಡುಕುವ ಕೆಲಸವನ್ನು ಕೊನೆಗೂ ಶುರುವಿಟ್ಟೆ. ನಾನು ಹಲವರಲ್ಲಿ ಈ ಕುರಿತು ವಿಚಾರಿಸಿದೆ. ಆದರೆ ಯಾರಿಂದಲೂ ನನಗೆ ಸಮರ್‍ಪಕವಾದ ಉತ್ತರ ಸಿಗಲಿಲ್ಲ. ಆದರೆ ತಿಳಿದುಕೊಳ್ಳುವ ಹಸಿವು ನನ್ನಲ್ಲಿ ಇಂಗಿರಲಿಲ್ಲ ನೋಡಿ, ಹಾಗಾಗಿ ಕೊನೆಗೆ ಅಂತರ್‍ಜಾಲದಲ್ಲಿ ಜಾಲಾಡುವ ಯೋಜನೆ ಹಾಕಿಕೊಂಡೆ. ಅಲ್ಲಿ ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ವಯ್ಗ್ನಾನಿಕವಾಗಿ ವಿವರಿಸಲಾಗಿತ್ತು. ನಿಜಕ್ಕು ಅದೊಂದು ರೋಚಕ ಕ್ರಿಯೆ. ಇರುವೆಯ ಈ ಎಲ್ಲಾ ವಿದ್ಯಾಮಾನಗಳಿಗೆ ಕಾರಣ ಹೀಗಿದೆ.

ಹೆಚ್ಚಾಗಿ ಕೀಟಗಳು ಸಾಕಶ್ಟು ಚಲನಶಕ್ತಿಯನ್ನು ಹೊಂದಿರುವ ಮೀಸೆಗಳ ಮೂಲಕ ವಾಸನೆಯನ್ನು ಗ್ರಹಿಸುತ್ತವೆ. ಹಾಗೆಯೇ ಇರುವೆಗಳೂ ಕೂಡ ಮೀಸೆಗಳ ಮೂಲಕ ವಾಸನೆಯನ್ನು ತಿಳಿದುಕೊಳ್ಳುತ್ತವೆ. ಇರುವೆಯ ತಲೆಯ ಎರಡೂ ಬದಿಯಲ್ಲ್ಲಿ ಒಂದೊಂದರಂತೆ ಇರುವ ಈ ಮೀಸೆಗಳು ವಾಸನೆಯ ತೀವ್ರತೆ ಮತ್ತು ದಿಕ್ಕುಗಳೆರಡನ್ನೂ ಸರಿಯಾಗಿ ತಿಳಿದುಕೊಳ್ಳಲು ಉಪಕಾರಿಯಾಗಿವೆ. ಇರುವೆಗಳು ಪರಸ್ಪರ ಸಂಪರ್‍ಕ ಹೊಂದಲು ಕೂಟಸೋರುಗೆ (pheromones) ಎಂಬ ರಾಸಾಯನಿಕವನ್ನು ಬಳಸಿಕೊಳ್ಳುತ್ತವೆ. ಸಾಮಾನ್ಯವಾಗಿ ಇರುವೆಗಳು ನೆಲದ ಮೇಲೆಯೇ ಬದುಕುವುದರಿಂದ ಕೂಟಸೋರುಗೆ ರಾಸಾಯನಿಕವನ್ನು ಉಳಿಸಿಕೊಳ್ಳಲು ನೆಲವು ಹೆಚ್ಚು ಸಹಾಯಕವಾಗತ್ತದೆ.

ಉಳಿದ ಇರುವೆಗಳು ಹಿಂಬಾಲಿಸಲು ಈ ರಾಸಾಯನಿಕ ಅನುಕೂಲವಾಗುತ್ತದೆ. ಒಟ್ಟಿಗೆ ಹೊರಟು ಆಹಾರವನ್ನು ಹುಡುಕುವ ಇರುವೆಗಳು ಆಹಾರವು ಕಂಡಾಗ ಆ ಜಾಗದಿಂದ ತಮ್ಮ ಗೂಡಿನವರೆಗೆ ಕೂಟಸೋರುಗೆ ರಾಸಾಯನಿಕದ ಮೂಲಕ ಒಂದು ದಾರಿಯನ್ನು ರಚನೆ ಮಾಡುತ್ತವೆ. ಇದರ ಸಹಾಯದಿಂದ ಮುಂದೆ ಗೂಡಿನ ಇತರ ಇರುವೆಗಳು ಈ ಗುಂಪಿನಲ್ಲಿಯೇ ಹೋಗಿ ಆಹಾರವಿರುವ ಜಾಗವನ್ನು ತಲುಪುತ್ತವೆ.

ಹೀಗೆ ಗುಂಪಿನಲ್ಲಿ ಹೋಗುವಾಗ ಇರುವೆಗಳಿಗೆ ಯಾವುದಾದರೂ ಹೊಸ ತೊಂದರೆಗಳುಂಟಾಗಿ ದಾರಿಯು ಮುಚ್ಚಿದಾಗ, ಸಾಗುವ ಗುಂಪಿನಲ್ಲಿ ಮುಂದಿರುವ ಇರುವೆಗಳು ಹೊಸ ದಾರಿಯನ್ನು ಹುಡುಕತೊಡಗುತ್ತವೆ. ಈ ಹುಡುಕಾಟದಲ್ಲಿ ಗೆಲುವು ಕಾಣುವ ಇರುವೆಯು ಹಿಂದಕ್ಕೆ ಮರಳುವಾಗ ಮತ್ತೊಮ್ಮೆ ಕೂಟಸೋರುಗೆಯನ್ನು ಉದುರಿಸುತ್ತಾ ಹೊಸ ದಾರಿಯನ್ನು ತೋರಿಸುತ್ತದೆ. ಈ ಹೊಸದಾದ ದಾರಿಯನ್ನು ಮತ್ತಶ್ಟು ಇರುವೆಗಳು ಹಿಂಬಾಲಿಸುವುದರ ಜೊತೆಗೆ ಅವು ಸಾಗುವ ದಾರಿಯುದ್ದಕ್ಕೂ ಈ ರಾಸಾಯನಿಕವನ್ನು ಉದುರಿಸುತ್ತಾ ಸಾಗುತ್ತವೆ.

ಹೀಗೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುವ ಕೂಟಸೋರುಗೆ ರಾಸಾಯನಿಕವುಳ್ಳ ದಾರಿ ಉಳಿದ ಇರುವೆಗಳಿಗೆ ಸಾಗಲು ಅನುವು ಮಾಡಿಕೊಡುವುದು. ಆಹಾರವನ್ನು ಹುಡುಕುತ್ತ ಗೂಡಿನಿಂದ ಬಲು ದೂರ ಹೋಗುವ ಇರುವೆಗಳೂ ಕೂಡ ಈ ರಾಸಯನಿಕದ ಸಹಾಯದಿಂದಲೇ ಮರಳಿ ಗೂಡಿಗೆ ಸೇರಿಕೊಳ್ಳುತ್ತದೆ.

(ಮಾಹಿತಿ ಮೂಲ: ವೀಕಿಪೀಡಿಯಾ ) 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: