ಎಸಕವನ್ನು ಗುರುತಿಸುವ ಹೆಸರುಪದಗಳು
ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-೫
ಎಸಕವನ್ನು ಇಲ್ಲವೇ ಎಸಕದ ದೊರೆತವನ್ನು ಗುರುತಿಸುವ ಹೆಸರುಪದಗಳು:
ಇಂಗ್ಲಿಶ್ನ ಎಸಕಪದದಿಂದ ಪಡೆದ ಹೆಸರುಪದಗಳು ಎಸಕವನ್ನು ಹೆಸರಿಸುತ್ತಿವೆಯೇ ಇಲ್ಲವೇ ಎಸಕದ ದೊರೆತವನ್ನು ಹೆಸರಿಸುತ್ತಿವೆಯೇ ಎಂಬುದನ್ನು ಅವುಗಳನ್ನು ಪಡೆಯುವಲ್ಲಿ ಬಳಕೆಯಾಗುವ ಒಟ್ಟುಗಳು ತಿಳಿಸುವುದಿಲ್ಲ. ಯಾಕೆಂದರೆ, ಎಸಕವನ್ನು ಹೆಸರಿಸಬಲ್ಲ ಹೆಚ್ಚಿನ ಹೆಸರುಪದಗಳೂ ಎಸಕದ ದೊರೆತವನ್ನೂ ಹೆಸರಿಸಬಲ್ಲುವು.
ಆದರೆ, ಅವು ಗುರುತಿಸುವ ದೊರೆತಗಳು ಮೊದಲನೆಯ ಹಂತದ, ಎಂದರೆ ನನಸಿನ (concrete) ಪಾಂಗುಗಳೇ ಇಲ್ಲವೇ ಮೇಲಿನ ಹಂತದ, ಎಂದರೆ ನೆನಸಿನ (abstract) ಪಾಂಗುಗಳೇ ಎಂಬುದನ್ನು ಕೆಲವು ಒಟ್ಟುಗಳ ನಡುವಿನ ವ್ಯತ್ಯಾಸ ತಿಳಿಸಬಲ್ಲುದು. ಎತ್ತುಗೆಗಾಗಿ, ing ಮತ್ತು ant/ent ಎಂಬ ಒಟ್ಟುಗಳಿಂದ ಪಡೆದ ಹೆಸರುಪದಗಳು ಎಸಕದ ದೊರೆತವನ್ನು ಹೆಸರಿಸುವುದಿದ್ದಲ್ಲಿ ಮುಕ್ಯವಾಗಿ ನನಸಿನ ಪಾಂಗುಗಳನ್ನು ಹೆಸರಿಸುತ್ತವೆ, ಮತ್ತು ation, al, ment, ಮತ್ತು age ಒಟ್ಟುಗಳಿಂದ ಪಡೆದ ಹೆಸರುಪದಗಳು ಮುಕ್ಯವಾಗಿ ನೆನಸಿನ ಪಾಂಗುಗಳನ್ನು ಹೆಸರಿಸುತ್ತವೆ.
ನನಸಿನ ದೊರೆತ |
ನೆನಸಿನ ದೊರೆತ |
||
build | building | resign | resignation |
swell | swelling | locate | location |
lubricate | lubricant | propose | proposal |
cool | coolant | marry | marriage |
repel | repellent | arrange | arrangement |
ಕನ್ನಡದಲ್ಲಿಯೂ ಎಸಕಪದಗಳಿಂದ ಹೆಸರುಪದಗಳ ಪಡೆಯುವಲ್ಲಿ ಬಳಕೆಯಾಗುವ ಒಟ್ಟುಗಳ ನಡುವೆ ಇಂತಹದೇ ವ್ಯತ್ಯಾಸವಿದೆ; ಇಕೆ ಮತ್ತು ತ ಒಟ್ಟುಗಳು ಮುಕ್ಯವಾಗಿ ಎಸಕವನ್ನು ಇಲ್ಲವೇ ನೆನಸಿನ ದೊರೆತವನ್ನು ಹೆಸರಿಸುವುದಕ್ಕಾಗಿ ಬಳಕೆಯಾಗುತ್ತವೆ, ಮತ್ತು ಗೆ ಹಾಗೂ ತೆ ಒಟ್ಟುಗಳು ಮುಕ್ಯವಾಗಿ ಎಸಕದಿಂದ ಪಡೆದ ನನಸಿನ ದೊರೆತಗಳನ್ನು ಇಲ್ಲವೇ ಎಸಕವನ್ನು ನಡೆಸುವಲ್ಲಿ ಬಳಸುವ ಮುಟ್ಟನ್ನು ಹೆಸರಿಸುವುದಕ್ಕಾಗಿ ಬಳಕೆಯಗುತ್ತವೆ. ಇಂಗ್ಲಿಶ್ನಲ್ಲಿ ಕಾಣಿಸುವ ಹಾಗೆ, ಕನ್ನಡದಲ್ಲೂ ಇದು ಒಟ್ಟುಗಳ ಬಳಕೆಯಲ್ಲಿ ಕಾಣಿಸುವ ಒಲವು ಮಾತ್ರ; ಇದರ ಹಿಂದೆ ಕಟ್ಟುನಿಟ್ಟಾದ ಕಟ್ಟಳೆಯೇನೂ ಇಲ್ಲ.
ಹಾಗಾಗಿ, ಇಂಗ್ಲಿಶ್ನ ಎಸಕಪದಗಳಿಂದ ಪಡೆದ ಹೆಸರುಪದಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಹೊಸದಾಗಿ ಉಂಟುಮಾಡುವಲ್ಲಿ, ಅವು ಎಸಕವನ್ನು ಇಲ್ಲವೇ ಎಸಕದ ನೆನಸಿನ ದೊರೆತವನ್ನು ಹೆಸರಿಸುತ್ತಿವೆಯಾದರೆ ಇಕೆ ಇಲ್ಲವೇ ತ ಒಟ್ಟನ್ನು ಬಳಸಬಹುದು, ಮತ್ತು ಎಸಕದ ನನಸಿನ ದೊರೆತವನ್ನು ಹೆಸರಿಸುತ್ತಿವೆಯಾದರೆ ಗೆ ಇಲ್ಲವೇ ತೆ ಒಟ್ಟನ್ನು ಬಳಸಬಹುದು.
ಕನ್ನಡದ ಎಸಕಪದಗಳು ಎಕಾರ ಇಲ್ಲವೇ ಇಕಾರದಲ್ಲಿ ಕೊನೆಗೊಳ್ಳುತ್ತಿವೆಯಾದರೆ (ಇಲ್ಲವೇ ಅವುಗಳ ಕೊನೆಯ ಬರಿಗೆಕಂತೆಯಲ್ಲಿ ಯಕಾರ ಇದೆಯಾದರೆ), ಅವುಗಳ ಬಳಿಕ ಸಾಮಾನ್ಯವಾಗಿ ತ ಇಲ್ಲವೇ ತೆ ಒಟ್ಟು ಬರುತ್ತದೆ, ಮತ್ತು ಉಕಾರದಲ್ಲಿ ಕೊನೆಗೊಳ್ಳುತ್ತಿವೆಯಾದರೆ ಅವುಗಳ ಬಳಿಕ ಸಾಮಾನ್ಯವಾಗಿ ಇಕೆ ಇಲ್ಲವೇ ಗೆ ಒಟ್ಟು ಬರುತ್ತದೆ; ಎಂದರೆ, ಇಕೆ ಮತ್ತು ತ ಒಟ್ಟುಗಳ ನಡುವೆ ಹಾಗೂ ಗೆ ಮತ್ತು ತೆ ಒಟ್ಟುಗಳ ನಡುವೆ ಹುರುಳಿನಲ್ಲಿ ವ್ಯತ್ಯಾಸವಿಲ್ಲ. (ಇದೂ ಒಂದು ಒಲವಲ್ಲದೆ ಕಟ್ಟಲೆಯಲ್ಲ; ಯಾಕೆಂದರೆ, ಇದಕ್ಕೂ ಕೆಲವು ಹೊರಪಡಿಕೆಗಳಿವೆ).
ಉಕಾರದ ಪದಗಳು |
ಎ, ಇ, ಯಗಳ ಪದಗಳು |
||
ಬೆಚ್ಚು | ಬೆಚ್ಚಿಕೆ | ಅಗೆ | ಅಗೆತ |
ಅಂಜು | ಅಂಜಿಕೆ | ಉರಿ | ಉರಿತ |
ನಾಚು | ನಾಚಿಕೆ | ಗೆಯ್ಯು | ಗೆಯ್ತ |
ಕೆತ್ತು | ಕೆತ್ತುಗೆ | ನಡೆ | ನಡತೆ |
ಅಪ್ಪು | ಅಪ್ಪುಗೆ | ಮಿಡಿ | ಮಿಡಿತೆ |
ಎಸಕಪದಗಳಿಂದ ಅವು ತಿಳಿಸುವ ಎಸಕವನ್ನು ಗುರುತಿಸುವಂತಹ ಹೆಸರುಪದಗಳನ್ನು ಪಡೆಯಲು ಇಂಗ್ಲಿಶ್ನಲ್ಲಿ ಮೇಲೆ ತಿಳಿಸಿದಂತಹ ಎರಡು ಬಗೆಯ ಒಟ್ಟುಗಳನ್ನೂ ಬಳಸಲಾಗುತ್ತದೆ, ಮತ್ತು ಈ ಪದಗಳಿಗೆ ಸಾಟಿಯಾಗುವಂತಹ ಹೆಸರುಪದಗಳನ್ನು ಕನ್ನಡದಲ್ಲಿ ಹೊಸದಾಗಿ ಉಂಟುಮಾಡಲು ಕನ್ನಡದ ಎಸಕಪದಗಳಿಗೆ ಇಕೆ ಇಲ್ಲವೇ ತ ಒಟ್ಟನ್ನು ಸೇರಿಸಬಹುದು:
-ing | read | ಓದು | reading | ಓದಿಕೆ |
pierce | ಇರಿ | piercing | ಇರಿತ | |
search | ಅರಸು | searching | ಅರಕೆ | |
weigh | ತೂಗು | weighing | ತೂಗಿಕೆ | |
-ation | embark | ಏರು | embarkation | ಏರಿಕೆ |
vaccinate | ತಡೆಚುಚ್ಚು | vaccination | ತಡೆಚುಚ್ಚಿಕೆ | |
narrate | ಕೊಗೆ | narration | ಕೊಗೆತ | |
tempt | ಸೆಳೆ | temptation | ಸೆಳೆತ | |
-al | remove | ತೆಗೆ | removal | ತೆಗೆತ |
renew | ಮುಂದುವರಿಸು | renewal | ಮುಂದುವರಿಕೆ | |
arrive | ತಲಪು | arrival | ತಲಪಿಕೆ | |
deny | ಅಲ್ಲಗಳೆ | denial | ಅಲ್ಲಗಳೆತ | |
propose | ನೀಡು | proposal | ನೀಡಿಕೆ | |
-age | assemble | ನೆರೆ | assemblage | ನೆರೆತ |
shrink | ಮುರುಟು | shrinkage | ಮುರುಟಿಕೆ | |
slip | ಜಾರು | slippage | ಜಾರಿಕೆ | |
equip | ಒದಗಿಸು | equippage | ಒದಗಿಕೆ | |
-ment | allot | ಹಂಚು | allotment | ಹಂಚಿಕೆ |
invest | ಹೂಡು | investment | ಹೂಡಿಕೆ | |
establish | ನೆಲಸು | establishment | ನೆಲಸಿಕೆ |
ಇದಲ್ಲದೆ, ಎಸಕವನ್ನು ನಡೆಸುವ ಬೇರೆ ಬಗೆಯ ನನಸಿನ ಪಾಂಗುಗಳನ್ನು ಹೆಸರಿಸುವುದಕ್ಕಾಗಿಯೂ ant/ent ಒಟ್ಟಿನಿಂದ ಪಡೆದ ಕೆಲವು ಹೆಸರುಪದಗಳು ಬಳಕೆಯಾಗುತ್ತಿದ್ದು, ಇವುಗಳಿಗೆ ಸಾಟಿಯಾಗಬಲ್ಲ ಹೆಸರುಪದಗಳನ್ನು ಕನ್ನಡದಲ್ಲಿ ಹೊಸದಾಗಿ ಉಂಟುಮಾಡಲು ಕ ಒಟ್ಟನ್ನು ಬಳಸಲು ಬರುತ್ತದೆ ಎಂಬುದನ್ನೂ ಮೇಲೆ ನೋಡಿರುವೆವು (anticoagulant ಹೆಪ್ಪಳಿಕ).
(ಕ) ant/ent ಒಟ್ಟಿನಿಂದ ಪಡೆದ ಹೆಸರುಪದಗಳು ಎಸಕವನ್ನು ನಡೆಸುವ ಮಂದಿಯನ್ನೂ ಹೆಸರಿಸಬಲ್ಲುವು ಎಂಬುದನ್ನು, ಮತ್ತು ಇಂತಹ ಹೆಸರುಪದಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಉಂಟುಮಾಡಲು ಗ ಒಟ್ಟನ್ನು ಬಳಸಬೇಕಾಗುತ್ತದೆ ಎಂಬುದನ್ನು ಮೇಲೆ ನೋಡಿರುವೆವು (contestant ಸೆಣಸುಗ).
(ಚ) ing ಒಟ್ಟನ್ನು ಬಳಸಿ ಉಂಟುಮಾಡಿದ ಕೆಲವು ಹೆಸರುಪದಗಳು ಎಸಕಗಳ ದೊರೆತಗಳಾಗಿರುವಂತಹ ನನಸಿನ ಪಾಂಗುಗಳನ್ನು ಗುರುತಿಸುತ್ತಿದ್ದು, ಅವಕ್ಕೆ ಸಾಟಿಯಾಗಬಲ್ಲ ಹೆಸರುಪದಗಳನ್ನು ಕನ್ನಡದಲ್ಲಿ ಉಂಟುಮಾಡಲು ಗೆ/ಇಗೆ ಒಟ್ಟನ್ನು ಬಳಸಬಹುದು:
knit | ಹೆಣೆ | knitting | ಹೆಣಿಗೆ |
fill | ತುಂಬು | filling | ತುಂಬಿಗೆ |
shoot | ಎಸು | shooting | ಎಸುಗೆ |
sew | ಹೊಲಿ | sewing | ಹೊಲಿಗೆ |
write | ಬರೆ | writing | ಬರವಣಿಗೆ |
(ಟ) ಮೇಲೆ ತಿಳಿಸಿದ ಹಾಗೆ, ಎಸಕಪದಗಳಿಂದ ಹೆಸರುಪದಗಳನ್ನು ಪಡೆಯಲು ಇಂಗ್ಲಿಶ್ನಲ್ಲಿ ಮೇಲೆ ವಿವರಿಸಿದ ಒಟ್ಟುಗಳಲ್ಲದೆ ಬೇರೆಯೂ ಹಲವು ಒಟ್ಟುಗಳನ್ನು ಬಳಸಲಾಗುತ್ತದೆ; ance/ence, ety/ry, ion ಮೊದಲಾದವು ಇಂತಹ ಒಟ್ಟುಗಳು. ಆದರೆ, ಇವುಗಳ ಹರವು ಮೇಲಿನ ಒಟ್ಟುಗಳ ಹರವಿನಶ್ಟಿಲ್ಲ. ಹಾಗಾಗಿ, ಅವನ್ನು ಇಲ್ಲಿ ಬೇರೆ ಬೇರಾಗಿ ವಿವರಿಸಿಲ್ಲ. ಅವುಗಳನ್ನು ಬಳಸಿರುವ ಹೆಸರುಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಕನ್ನಡದಲ್ಲಿ ಉಂಟುಮಾಡಲು ಅವು ಕೊಡುವ ಹುರುಳನ್ನವಲಂಬಿಸಿ ಮೇಲೆ ವಿವರಿಸಿದಂತಹ ಒಟ್ಟುಗಳನ್ನೇ ಬಳಸಲು ಬರುತ್ತದೆ:
absorb | ಹೀರು | absorbacne | ಹೀರಿಕೆ |
rid | ತೊಲಗಿಸು | riddance | ತೊಲಗಿಕೆ |
exist | ಇರು | existence | ಇರುವಿಕೆ |
eat | ತಿನ್ನು | eatery | ತಿಂಡಿಮನೆ |
starve | ಹಸಿ | starvation | ಹಸಿತ |
colonize | ನೆಲಸು | colonization | ನೆಲಸಿಕೆ |
(ಈ ಪಸುಗೆ ಇಂಗ್ಲಿಶ್ ಪದಗಳಿಗೆ…-6ರಲ್ಲಿ ಮುಂದುವರಿಯುತ್ತದೆ)
1 Response
[…] << ಬಾಗ-5 […]