ಅಂಕೆಯೇರ‍್ಪಾಟಿನ ಮೇಲ್ನೋಟ

ಗಿರೀಶ ವೆಂಕಟಸುಬ್ಬರಾವ್.

ಅಂಕೆಯೇರ‍್ಪಾಟಿಗೆ (control system) ಸೋಪಾನ:
ಬಿರುಬೇಸಿಗೆಯ ನಡುಹಗಲು ಬಂಡಿಯನ್ನು ಓಡಿಸುತ್ತಿದ್ದೀರಿ, ಹೊರಗಿರುವ ಹೊಗೆದುಂಬು ತಾಳಲಾರದೆ ಗಾಡಿಯ ಕಿಟಕಿಯ ಗಾಜನ್ನೂ ಮುಚ್ಚಿದ್ದೀರಿ. ಕೆಲವೇ ನಿಮಿಶಗಳಲ್ಲಿ ಮುಚ್ಚಿರುವ ಬಂಡಿಯೊಳಗಿನ ಕಾವು ಏರಿ ಇನ್ನು ತಾಳಲಾರದಂತಾಗುತ್ತಿದ್ದಂತೆ ಕಯ್ ಗಾಳಿಯಹಮ್ಮುಗೆಯನ್ನು (Air Conditioner) ತಿರುಗಿಸುತ್ತದೆ, ತಂಗಾಳಿ ಬೀಸಿ ಒಳಗಿರುವ ಬಿಸುಪನ್ನು ನಿಮ್ಮಂಕೆಗೆ ತಂದು ಹದುಳಗೊಳಿಸುತ್ತದೆ.

ಇನ್ನಶ್ಟು ದೂರ ಹೋದ ಬಳಿಕ, ಇನ್ನು ಗುರಿಯ ತಲುಪಲು ತಡವಾಗುತ್ತಿರುವುದು ಗಮನಕ್ಕೆ ಬರುತ್ತದೆ. ಕಣ್ಣುಗಳು ಮುಂದಿರುವ ರಸ್ತೆಯ ತೆರವು ಗಮನಿಸುತ್ತದೆ, ಕಾಲುಗಳು ಉರುಬುಹೆಚ್ಚುಕವನ್ನು (accelerator) ತುಳಿಯುತ್ತದೆ ಬಂಡಿಯ ಉರುಬೇರುತ್ತದೆ, ಬಂಡಿಯು ಗುರಿಯನ್ನು ಬೇಗ ಮುಟ್ಟುವಂತಾಗುತ್ತದೆ.

control-sys-AC

ಈ ಮೇಲಿನ ಎತ್ತುಗೆಯಲ್ಲಿ ಗಮನಿಸಬೇಕಾದ ಸೂಟಿಗಳೆಂದರೆ:

• ಗಾಡಿಯೊಳಗಿನ ಬಿಸುಪೇರಿ ನಮ್ಮ ಅರಿವಿಗೆ ಬಂದಿದ್ದು ಹಾಗು ಅದನ್ನು ನಾವು ಬಯಸಿದ ಮಟ್ಟಕ್ಕೆ ತಂದುಕೊಂಡು ಹದುಳುಗೊಳಿಸಿದ್ದು.

• ಬಂಡಿಯ ಉರುಬಿನ ಮಟ್ಟವನ್ನು ಹಾಗು ರಸ್ತೆ ತೆರವಾಗಿರುವುದನ್ನು ಗಮನಿಸಿ, ಬಂಡಿಯ ಉರುಬನ್ನು ನಾವು ಬಯಸಿದ ಮಟ್ಟಕ್ಕೆ ಕೊಂಡೊಯ್ಯಿದಿದ್ದು.

ಈ ರೀತಿ ನಾವು ಅರಿತಮಾರ‍್ಪುಕವನ್ನು (physical variable) ನಮ್ಮ ಅಂಕೆಯೊಳಗೆ ತೆಗೆದುಕೊಂಡು, ನಮ್ಮ ಅಗತ್ಯಕ್ಕೆ ತಕ್ಕಂತೆ ಏರಿಳಿಸಿ (alter) ಅನುಕೂಲದ ಆಗುಹವನ್ನು(result) ಹೊಂದುವುದೇ ಅಂಕೆ(Control), ಅರಿತಮಾರ‍್ಪುಕವನ್ನು ಬೇಕಾದರೀತಿಯಲ್ಲಿ ಹೊಂದಿಸಿ ನಮ್ಮ ಬೇಡಿಕೆಯ ಪೂರಯ್ಸುವ ಅನುಕೂಲತೆಯೇ ಅಂಕೆಯೇರ‍್ಪಾಟು (Control System).

ಅಂಕೆಯೇರ‍್ಪಾಟಿನ ಬಳಕೆಯ ಪದಗಳು ಹಾಗು ಹುರುಳುಗಳು:

• ಗಾಡಿಯೊಳಗಿನ ಗಾಳಿಹಮ್ಮುಗೆಯಿಂದ ಹದವಾಗಿಸಿದ ಬಿಸುಪಿನ ಅಂಕೆಯೇರ‍್ಪಾಟು (Temperature Control System), ಗಾಡಿಯ ಉರುಬುಹೆಚ್ಚುಕದ ಉರುಬು-ಅಂಕೆಯೇರ‍್ಪಾಟು (Speed Control System), ಹೀಗೆ ಯಾವ ಅರಿತಮಾರ‍್ಪುಕವನ್ನು ಹತೋಟಿಯಲ್ಲಿಡುತ್ತೇವೋ ಅದಕ್ಕೆ ಅದರದೇ ಆದ ಅಂಕೆಯೇರ‍್ಪಾಟು ಬೇಕಾಗುತ್ತದೆ.

• ಗಾಡಿಯೊಳಗಿನ ಬಿಸುಪು ಹಾಗು ಗಾಡಿಯ ಉರುಬುಗಳು ಅಂಕೆಯಲ್ಲಿಟ್ಟ ಮಾರ‍್ಪುಕ (Controlled Variable) ಎಂದು ಗುರುತಿಸಲ್ಪಡುತ್ತವೆ

• ನಮ್ಮ ಅನುಕೂಲಕ್ಕೆ ಬೇಕಾದ ಅಂಕೆಯಲ್ಲಿಟ್ಟ ಮಾರ‍್ಪುಕದ ಬೆಲೆಯನ್ನು ಇಟ್ಟಮಟ್ಟ (Setpoint) ಎನ್ನುತ್ತಾರೆ

• ಗಾಳಿಯ ಹಮ್ಮುಗೆಯಿಂದ ಹೊರಬರುವ ಗಾಳಿಯ ಹರಿವು ಹಾಗೂ ಬಂಡಿ ತುಳಿದಾಗ ಏರುವ ಉರುವಲಿನ ಹರಿವೆಯನ್ನು ಅಂಕೆಯಲ್ಲಿಡುವ ಮಾರ‍್ಪುಕಗಳು (Manipulated or Controlling Variable) ಎಂದು ಕರೆಯುತ್ತಾರೆ

• ಅಂಕೆಯಲ್ಲಿಟ್ಟ ಮಾರ‍್ಪುಕದಲ್ಲಿ (Controlled Variable) ಕೆಲವೊಮ್ಮೆ ಉಂಟಾಗುವ ಗೊಂದಲದಿಂದ (Disturbance) ಏರುಪೇರು ಆಗುತ್ತದೆ. ನಮ್ಮ ಉದಾಹರಣೆಯಲ್ಲಿ ಬಂಡಿಗೆ ಎದುರಾಗುವ ಏರುದಾರಿ ಒಂದು “ಗೊಂದಲ” ಅನ್ನಬಹುದು, ಅದು ಗಾಡಿಯ ಉರುಬನ್ನು ಕೊಂಚ ಹೊತ್ತು ಇಳಿಯುವಂತೆ ಮಾಡುತ್ತದೆ. ಉರುಬು ಅಂಕೆಯೇರ‍್ಪಾಟಿನ ನೆರವಿನಿಂದ ಉರುಬನ್ನು ಹೆಚ್ಚಿಸಿಕೊಂಡು ಗೊಂದಲವನ್ನು ಎದುರಿಸಬಹುದು.

• ಅರಿತಮಾರ‍್ಪುಕವನ್ನು ನಿಕರವಾಗಿ ಅಳೆದು ನಮಗೆ ತೋರುವುದೇ ಅಳಕಗಳು (Measuring Instruments) ಇವು ಬಂಡಿಯ ತೋರುಹಲಗೆಯಲ್ಲಿ ಅಡಕವಾಗಿರುತ್ತದೆ.

ಲಾರ‍್ಡ್ ಕೆಲ್ವಿನರ ಹೇಳಿಕೆ:

ಯಾವುದನ್ನಾದರೂ ನಾವು ಅಂಕೆಯಲ್ಲಿಡಲು ಯತ್ನಿಸುವ ಮೊದಲು ಇಲ್ಲಿ ನಾವು ಅರಿಯಲೇ ಬೇಕಾದ ಇನ್ನೊಂದು ಸೂಟಿಯನ್ನು, ಹೆಸರುವಾಸಿ ಅರಿಮೆಗಾರರಾದ ಲಾರ‍್ಡ್ ಕೆಲ್ವಿನರು ಹೇಳಿಕೆಯೊಂದರಲ್ಲಿ ತಿಳಿಸಿಕೊಟ್ಟಿದ್ದಾರೆ

To measure is to know. If you cannot measure it, you cannot improve it.

ಅಂದರೆ,

ಯಾವುದೇ ಅರಿತಮಾರ‍್ಪುಕದ ಬಗೆಗೆ ಅರಿತು ಅದರ ಪರಿಮಾಣವನ್ನು ಎಣೆಸಲು ಅಳಕಗಳು ಬೇಕೇ ಬೇಕು. ನಮಗೆ ಅಳಿಯಲು ಬಾರದಿದ್ದರೆ ಆ ಅರಿತಮಾರ‍್ಪುಕವನ್ನು ಅಂಕೆಯಲ್ಲಿಡಲು ಆಗದು. ಅಶ್ಟೇ ಅಲ್ಲ ಒಂದು ಅಂಕೆಯೇರ‍್ಪಾಟು ಕಟ್ಟುನಿಟ್ಟಿನಲ್ಲಿ ಕೆಲಸಮಾಡಬೇಕಾದರೆ ಸರಿಯಾದ ಅಳಕಗಳು ಬೇಕೇ ಬೇಕು.

ಒಟ್ಟಿನಲ್ಲಿ ಅಳತೆ ಹಾಗೂ ಅಂಕೆಯಲ್ಲಿಡುವಿಕೆಯ ಹೊಂದಾಣಿಕೆಯಿಲ್ಲದಿದ್ದರೆ ಎಲ್ಲ ಕೆಟ್ಟಿತೆಂದೆಂಬುದೇ ಇದರ ಹುರುಳು.

ಅಂಕೆಯಿಲ್ಲದ ಹಾಗೂ ಅಂಕೆಯಲ್ಲಿಟ್ಟ ಹೊಲಬಿನ ನಡುವಳಿಕೆ (Process Behaviour):
ಒಂದು ಹೊಲಬಿನ ನಡುವಳಿಕೆ ಅಂಕೆಯೇರ‍್ಪಾಟು ಇಲ್ಲದಿದ್ದಾಗ ಯಾವ ರೀತಿಯಲ್ಲಿ ಇರುತ್ತದೆ ಹಾಗು ಅದೇ ಹೊಲಬಿನಲ್ಲಿ ಒಂದು ಅಂಕೆಯೇರ‍್ಪಾಟಿನ ಅಳವಡಿಕೆಯಿಂದ ಹೇಗೆ ಅರಿತಮಾರ‍್ಪುಕದ ಮೇಲೆ ಹತೋಟಿಯನ್ನು ಹೊಂದಬಹುದೆಂದು ಕೆಳಗಿನ ತಿಟ್ಟದಿಂದ ನೋಡರಿಯಬಹುದು. ಮೊದಲು ಅರಿತಮಾರ‍್ಪುಕದ ಬೆಲೆ ಯಾವಾಗಲೂ ಏರುಪೇರಿನಿಂದ ಕೂಡಿರುತ್ತದೆ. ಅದೇ ಹೊಲಬಿನಲ್ಲಿ ಒಂದು ಅಂಕೆಯೇರ‍್ಪಾಟನ್ನು ಅಳವಡಿಸಿದಾಗ ಅರಿತಮಾರ‍್ಪುಕದ ಬೆಲೆಯನ್ನು ಇಟ್ಟಮಟ್ಟದಲ್ಲೇ ಹತೋಟಿಯಲ್ಲಿಡಬಹುದು.

ಅಂದರೆ ಅಂಕೆಯೇರ‍್ಪಾಟಿನ ನೆರವಿನಿಂದ ಕೆಲಸವೊಂದರ ಮತ್ತು ಅದರಿಂದ ಹೊರಹೊಮ್ಮುವ ನಡುವಳಿಕೆಯನ್ನು ಸರಿಯಾಗಿ ಹಿಡಿತದಲ್ಲಿಡಬಹುದು. ಅರಿತಮಾರ‍್ಪುಕಗಳ ಮೇಲೆ ಹತೋಟಿಯನ್ನು ಹೊಂದುವುದರಿಂದ ನಾವು ಹೊಲಬನ್ನೇ ನಮ್ಮ ಅಂಕೆಯಲ್ಲಿಟ್ಟುಕೊಂಡು ಮಾಡುವಿಕೆಗೆ (Production) ಬೇಕಾದ ಒಳ್ಳೆಯ ಗುಣಮಟ್ಟವನ್ನು (Quality) ಪಡೆಯಬಹುದು.

control-sys-nocontrol

control-sys-controll

ಅಂಕೆಯೇರ‍್ಪಾಟಿನ ಮತ್ತಶ್ಟು ಹೊಣೆಗಾರಿಕೆಗಳು:

ಹೊಲಬೊಂದನ್ನು ಕೇವಲ ಹತೋಟಿಯಲ್ಲಿಟ್ಟರಶ್ಟೆ ಅಂಕೆಯೇರ‍್ಪಾಟಿನ ಕೆಲಸ ಮುಗಿಯದು, ಅಂಕೆಯತ್ತ ಗಮನಿಸುತ್ತ, ಅಂಕೆತಪ್ಪಿದರೆ ಆಗಬಹುದಾದ ಅನಾಹುತಕ್ಕೆ ಎಡೆಯಾಗದಂತೆ ಕಾಪಾಡುವ ಹೊಣೆಯೂ ಕೂಡಾ ಅಂಕೆಯೇರ‍್ಪಾಟಿನದೆ. ಎತ್ತುಗೆಗೆ: ಕೊಪ್ಪರಿಗೆಯ (Boiler) ಒತ್ತಡ ಅಂಕೆಯನ್ನು ಮೀರಿದಾಗ, ಕಾಪಾಡುವ ಕವಾಟಗಳು ತೆರೆದು ಒತ್ತಡವನ್ನು ಇಳಿಸಿಬಿಡುತ್ತವೆ.

ಅಂಕೆಯೇರ‍್ಪಾಟು ಮಾಡುವಿಕೆಯ ವೆಚ್ಚವನ್ನು ಕಡಿಮೆ ಮಾಡುವುದರಲ್ಲೂ ಬೆನ್ನೆಲುಬಾಗುತ್ತದೆ. ಒಟ್ಟಿನಲ್ಲಿ ಹೇಳಬೇಕೆಂದರೆ, ಅಂಕೆಯೇರ‍್ಪಾಟು ಎಲ್ಲ ದಿಕ್ಕಿನಲ್ಲೂ, ಬೇರೆಬೇರೆ ಅರಿಮೆ ಹಾಗೂ ಚಳಕಿನರಿಮೆಯ ಆರಯ್ಕೆಯಲ್ಲಿ ನಮಗೆ ತುಂಬಾ ಅಗತ್ಯ. ಅಂಕೆಯೇರ‍್ಪಾಟಿನ ಇನ್ನಶ್ಟು ಎತ್ತುಗೆಗಳು ಹೀಗಿವೆ:

• ಬಿಸುಪನ್ನು ಅಂಕೆಯಲ್ಲಿಟ್ಟೇ ಹಲವು ಉಕ್ಕು ತಯಾರಿಕೆಯ ಹೊಲಬುಗಳನ್ನು ನಡೆಸ ಬೇಕಾಗುತ್ತದೆ.

• ಉತ್ತರ ಬಾರತದ ಬೋಪಾಲಿನಲ್ಲಿ 1984 ರಲ್ಲಿ ಅಂಕೆಯೇರ‍್ಪಾಟು ಕಯ್ಕೊಟ್ಟಾಗ ನಂಜುಗಾಳಿ ಸೋರಿ 2000ಕ್ಕೋ ಹೆಚ್ಚು ಮಂದಿ ಸಾವಿಗೀಡಾಗಿದ್ದರು. ಇದರಿಂದಾಗಿ ಅಂಕೆಯೇರ‍್ಪಾಟು ಕಯ್ಕೊಟ್ಟರೆ ಎಂತಹ ಅನಾಹುತಗಳಾಗುತ್ತವೆ ಅನ್ನುವುದನ್ನು ಮನಗಾಣಬಹುದು.

• ತಂಗಳು ಪೆಟ್ಟಿಗೆಯಲ್ಲಿ ಮಂಜುಕೆನೆ ಹರಿಯದಂತಾಗಲು, ಬಿಸುಪನ್ನು ಅಂಕೆಯಲ್ಲಿಡಬೇಕಾಗುತ್ತದೆ.

ಬಾನೋಡವು ಎತ್ತರಕ್ಕೆ ಏರುತ್ತಿದ್ದಂತೆ ಅದರ ಮೇಲೆ ಬೀಳುವ ಒತ್ತಡ ಕೂಡಾ ಹೆಚ್ಚು ಕಡಿಮೆಯಾಗುತ್ತಿರುತ್ತದೆ. ಬಾನೋಡದೊಳಗಿನ ಒತ್ತಡವನ್ನು ಅಂಕೆಯಲ್ಲಿಡದಿದ್ದರೆ ಬಾನೋಡದ ಮಯ್ ಸಿಡಿದುಹೋಗುವ ಅಪಾಯವಿರುತ್ತದೆ. ಒತ್ತಡವನ್ನು ಹಿಡಿತದಲ್ಲಿಡಲು ಅಂಕೆಯೇರ‍್ಪಾಟು ಬೇಕಾಗುತ್ತದೆ.

ಅಳಕ ಅಳವಡಿಕೆ (instrumentation) ಹಾಗು ಅಂಕೆಯೇರ‍್ಪಾಟುಗಳನ್ನು ಬಗೆಗೆ ಓದಿ ನಿಪುಣತೆ ಗಳಿಸಲು ಇರುವ ಬಿಣಿಗೆಯರಿಮೆಯ ಕವಲೇ ಅಳಕ ಅಳವಡಿಕೆ ಹಾಗು ಅಂಕೆಯೇರ‍್ಪಾಟಿನ ಅರಿಮೆ (Instrumentation and Control Engineering). ಈ ಅರಿಮೆ ಒಂದು ರೀತಿಯಲ್ಲಿ ಇತರೆ ಎಲ್ಲಾ ಬಿಣಿಗೆಯರಿಮೆಗಳಿಗೆ ಬೆನ್ನೆಲುಬಾಗಿ ಕೆಲಸ ಮಾಡಿ, ಅವುಗಳ ಯಶಸ್ಸಿಗೆ ತಮ್ಮ ಪಾಲನ್ನು ನೀಡುತ್ತದೆ. ಮುಂದಿನ ಬರಹಗಳಲ್ಲಿ ಅಂಕೆಯೇರ‍್ಪಾಟಿನ ಕಟ್ಟಲೆಗಳ (Control Theory) ಕೆಲವು ಮೆಟ್ಟಿಲುಗಳನ್ನು ಏರಿ ಇನ್ನಶ್ಟು ಅರಿವನ್ನು ಪಡೆಯೋಣ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 04/07/2014

    […] ಹಿಂದಿನ ಬರಹದಲ್ಲಿ ಅಂಕೆಯರಿಮೆಯ ಮೊದಲ ಮೆಟ್ಟಿಲನ್ನು ಏರಿದ್ದೆವು, ಅಲ್ಲಿ ಬಂಡಿಯೊಳಗಿನ ಬಿಸುಪು ಹಾಗು ಬಂಡಿಯ ಉರುಬನ್ನು ಅಂಕೆಯಲ್ಲಿಡುವ ಬಗೆಯಿಂದ ಅಂಕೆಯೇರ‍್ಪಾಟಿನ ಬಗ್ಗೆ ಕೊಂಚ ಅರಿತೆವು. ಆ ಬರಹದಲ್ಲಿ ಓದಿದ ಮತ್ತಶ್ಟು ತಿಳಿವುಗಳನ್ನು ಒಮ್ಮೆ ಮೆಲಕು ಹಾಕೋಣ: […]

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *