ಎರಡು ತೆರನ ಎರಡು ಪಕ್ಶಗಳು ಮಂದಿಯಾಳ್ವಿಕೆಗೆ ಸಾಕು ಅನಿಸುತ್ತೆ!

 ಶ್ರೀನಿವಾಸಮೂರ‍್ತಿ ಬಿ.ಜಿ.

Submitting a Vote

ರಾಜಕೀಯವನ್ನೇ ಬದುಕಿನ ದಾರಿಯನ್ನಾಗಿಸಿಕೊಂಡಿರುವವರು ಸಿದ್ದಾಂತಗಳ ಗೊಂದಲಗಳಿಂದಲೋ/ಬದಲಾವಣೆಯ ಗುರುತನ್ನಾಗಿಸುವುದಕ್ಕೋ/ ಅವಕಾಶಗಳು ದೊರೆಯದಕ್ಕೋ/ ಗಟ್ಟಿತನವನ್ನು ತೋರ‍್ಪಡಿಸುವುದಕ್ಕೋ ತಮ್ಮದೇ ಗುಂಪುಗಳನ್ನು ಕಟ್ಟಿಕೊಂಡು ಒಮ್ಮನಸ್ಸಿನಿಂದ ಕೆಲಸ ಮಾಡದೆ, ಒಂದು ನಿರ‍್ದಿಶ್ಟ ಗುರಿಯನ್ನು ಹಾಕಿಕೊಳ್ಳದೆ ತನ್ನತನ/ಪ್ರತಿಶ್ಟೆ ಇವುಗಳಲ್ಲಿ ಒಂದರ ಮಟ್ಟದಲ್ಲಿ ಹೊಸ ಪಕ್ಶಗಳನ್ನು ಹುಟ್ಟು ಹಾಕಿ ಮಂದಿ ಆಳ್ವಿಕೆಯನ್ನು ತಮಗಿಶ್ಟದಂತೆ ರೂಪಿಸಿಕೊಳ್ಳಲು ಹಾತೊರೆಯುತ್ತಾರೆ.

ಚುನಾವಣೆಯ ಕಾವು ಏರುತ್ತಿದ್ದಂಗೆ ಅವರು ಸರಿ ಇಲ್ಲ-ಇವರು ಸರಿ ಇಲ್ಲ ಅಂತ ಮಂದಿಗಳನ್ನು ಗೊಂದಲಕ್ಕೆ ಈಡು ಮಾಡಿಬಿಡುತ್ತಾರೆ. ಎಲ್ಲಾ ಪಕ್ಶಗಳಲ್ಲೂ ಕೆಟ್ಟವರು-ಒಳ್ಳೆಯವರು ಇರೋದ್ರಿಂದಲೇ ಯಾವ ಪಕ್ಶ ಒಳ್ಳೆಯ ದಾರಿಯಿಂದ ಕೂಡಿದೆ ಎಂದು ನಾವು ನಮ್ಮ ಮನಸ್ಸಿಗೆ ಕೇಳಿಕೊಂಡರೆ ಮನಸ್ಸೇ ಗೋಜಲು ಅನಿಸಿಕೆಯನ್ನು ಹೊರ ಹಾಕುತ್ತದೆ. ಮಂದಿ ಆಳ್ವಿಕೆಯು ಗಟ್ಟಿಗೊಳ್ಳಬೇಕಾದರೆ ಈ ಹಲವು ಪಕ್ಶಗಳ ಏರ‍್ಪಾಟನ್ನು ತೆಗೆದು ಹಾಕಿ ದೇಶಕ್ಕೆ ಎರಡು ಹಾಗೂ ಎಲ್ಲಾ ರಾಜ್ಯಕ್ಕೆ ಎರಡು ಪಕ್ಶಗಳು ಇರುವ ಏರ‍್ಪಾಟನ್ನು ಮಾಡಬೇಕು. ದೇಶದ ಎಲ್ಲಾ ನುಡಿಗಳನ್ನು ರಾಶ್ಟ್ರೀಯ ನುಡಿಗಳೆಂದು ಒಪ್ಪುವ ಮೂಲಕ ಮಂದಿ ಆಳ್ವಿಕೆಗೆ ಹುರುಪು ತುಂಬಬೇಕು.

ರಾಶ್ಟ್ರ ಮಟ್ಟದ ಪಕ್ಶವು ರಾಜ್ಯ ಮಟ್ಟದ ಪಕ್ಶವೊಂದರ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಪ್ರಣಾಳಿಕೆಯ ಅಣಿಗೊಳಿಕೆಯ ಕೆಲಸದಲ್ಲಿ ರಾಜ್ಯ ಮಟ್ಟದ ಪಕ್ಶಗಳಿಗೂ ಸರಿಸಮವಾಗಿ ಮನ್ನಣೆ ನೀಡಬೇಕು. ಸಂಸತ್ ಚುನಾವಣೆಯಲ್ಲಿ ರಾಶ್ಟ್ರ ಮಟ್ಟದ ಪಕ್ಶದಿಂದ ಮಾತ್ರ ವ್ಯಕ್ತಿಗಳು ಪಾಲ್ಗೊಳ್ಳಬೇಕು. ರಾಶ್ಟ್ರ ಮಟ್ಟದ ಚುನಾವಣೆಗಳಲ್ಲಿ ರಾಜ್ಯ ಮಟ್ಟದ ಪಕ್ಶವೊಂದರ ವ್ಯಕ್ತಿ ಸ್ಪರ‍್ದಿಸಲು ಬಯಸಿದರೆ ರಾಶ್ಟ್ರ ಮಟ್ಟದ ಪಕ್ಶವೊಂದರ ಬೆಂಬಲ ಅಗತ್ಯ. ಒಂದು ವೇಳೆ ರಾಶ್ಟ್ರ ಮಟ್ಟದ ಪಕ್ಶವೊಂದರ ಬೆಂಬಲ ದೊರಕದಿದ್ದರೆ ತಾನಿರುವ ಪಕ್ಶಕ್ಕೆ ರಾಜಿನಾಮೆಯನ್ನು ನೀಡಿ ಪಕ್ಶೇತರನಾಗಿ ಪಾಲ್ಗೊಳ್ಳುವಂತಹ ಏರ‍್ಪಾಟು ಆಗಬೇಕು.

ರಾಜ್ಯ ಮಟ್ಟದ ಪಕ್ಶವು ರಾಜ್ಯದಲ್ಲಿ ನಡೆಯುವ ರಾಶ್ಟ್ರ ಮಟ್ಟದ ಚುನಾವಣೆಯನ್ನು ಹೊರತುಪಡಿಸಿ ಎಲ್ಲಾ ತೆರನ ಚುನಾವಣೆಗಳಿಗೆ ತನ್ನ ವ್ಯಕ್ತಿಗಳನ್ನು ನಿಲ್ಲಿಸಬೇಕು ಮತ್ತು ರಾಶ್ಟ್ರ ಮಟ್ಟದ ಪಕ್ಶದ ವ್ಯಕ್ತಿ ಪಾಲ್ಗೊಳ್ಳಲು ಬಯಸಿದರೆ ಹೊಂದಾಣಿಕೆಯ ಪಕ್ಶದ ಬೆಂಬಲವಿದ್ದರೆ ಮಾತ್ರ ಚುನಾವಣೆಗೆ ಸ್ಪರ‍್ದಿಸಬೇಕು. ಒಂದು ವೇಳೆ ಆತನಿಗೆ ಬೆಂಬಲ ಸಿಗದಿದ್ದರೆ ರಾಶ್ಟ್ರ ಮಟ್ಟದ ಪಕ್ಶಕ್ಕೆ ರಾಜಿನಾಮೆ ನೀಡಿ ಪಕ್ಶೇತರನಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳುವಂತಹ ಏರ‍್ಪಾಟು ಆಗಬೇಕು.

ಮಂದಿ ಆಳ್ವಿಕೆಯಲ್ಲಿ ಹಲವು ಪಕ್ಶಗಳ ಏರ‍್ಪಾಟು ಇರೋದ್ರಿಂದ ದೊಂಬಿಗಳು ಆಗಾಗ್ಗೆ ನಡೆಯುತ್ತಲಿರುತ್ತವೆ. ಹಲವು ಪಕ್ಶಗಳ ಅನಿಸಿಕೆಗಳು ಮತ್ತೊಂದು ಪಕ್ಶಗಳನ್ನು ಗೆಲ್ಲುವ ಜಾಣ್ಮೆಯನ್ನು ಹೊಂದಿರುತ್ತವೆ. ಕಾವಲುಗಾರರ ಮೇಲೆ ಹೆಚ್ಚು ಬೇಕಾಗಿರದ ಕೆಲಸಗಳ ಹೊರೆ ಬೀಳುತ್ತವೆ. ಜೊತೆಗೆ ಅಬಿವ್ರುದ್ದಿಗೆ ಅನುವಾಗುವಂತಹ ಸುತ್ತಣದ ವೇದಿಕೆ ಉಂಟಾಗಲು ತಡವಾಗುತ್ತವೆ. ಹೀಗಾಗಿ ಮಂದಿ ಆಳ್ವಿಕೆಯನ್ನು ಗಟ್ಟಿಗೊಳಿಸಲು ಮತ್ತು ದುಬಾರಿಯಲ್ಲದ ಆಡಳಿತದ ಏರ‍್ಪಾಟಿಗಾಗಿ ಈ ತೆರನ ಕಲ್ಪನೆಯು ನೆರವಾಗಬಲ್ಲದು ಅನ್ನೋದು ನನ್ನ ಅನಿಸಿಕೆಯಾಗಿದೆ.

ಕೊನೆಯದಾಗಿ…
ಈಗ ನಮ್ಮ ದೇಶದಲ್ಲಿ;
-ಯಾವುದೇ ಪಕ್ಶಗಳ ಬೆಂಬಲವಿಲ್ಲದೆಯೇ ವ್ಯಕ್ತಿಯೋರ‍್ವ ಎಲ್ಲಾ ತೆರನ ಚುನಾವಣೆಗೆ ಸ್ಪರ‍್ದಿಸಬಹುದಾಗಿದೆ.
-ಚುನಾವಣಾ ಆಯೋಗಕ್ಕೆ-ರಾಶ್ಟ್ರಪತಿಗಳಿಗೆ ಯಾರೂ ಸರಿಯಾದ ವ್ಯಕ್ತಿ ನಮಗಾಗಿ ನಿಂತಿಲ್ಲವೆಂದು ತಿಳಿಸುವ NOTA ಗುಂಡಿ ನಮಗಾಗಿ ಇದೆ.
-RTI ಮೂಲಕ ಸರ‍್ಕಾರಗಳು ಯೋಜನೆಗೆ ತೊಡಗಿಸುವ ಹಣದ ಕುರಿತು ಮಾಹಿತಿಯನ್ನು ಪಡೆಯಬಹುದಾಗಿದೆ.
-RTI ಮೂಲಕ ರಾಜಕಾರಣಿಗಳ ಆಸ್ತಿಗಳ ಏರ್‍-ಇಳಿಕೆಯ ಬಗ್ಗೆಯೂ ತಿಳಿದುಕೊಳ್ಳಬಹುದಾಗಿದೆ.
ತೀರ‍್ಪು ಮನೆಗಳಿವೆ, ಲಂಚವನ್ನು ಹತೋಟಿಯಲ್ಲಿಡಬಲ್ಲ ಕಾಯ್ದೆಗಳಿವೆ, ಲೋಕಾಯುಕ್ತವಿದೆ ಹಾಗೂ ಲೋಕಪಾಲ್ ಏರ‍್ಪಾಟು ಕೂಡ ಇನ್ನೇನು ಅಣಿಗೊಳ್ಳಲಿದೆ.
ಈ ತೆರನ ಸವಲತ್ತುಗಳು ಈಗ ನಮ್ಮ ದೇಶದಲ್ಲಿ ಇರುವಾಗ ಹಲವು ಪಕ್ಶಗಳ ಏರ‍್ಪಾಟು ಬೇಕೋ ಬೇಡವೋ ಎಂಬುವ ಚರ‍್ಚೆ ನಡೆಯಬೇಕಾಗಿದೆ.

(ಚಿತ್ರಸೆಲೆ: thescocialleader.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: