ಒಡೆಯರ ನೆನಸೋಣ

ಸಂದೀಪ್ ಕಂಬಿ.

wodeyar

ಮಯ್ಸೂರು ಒಡೆಯರ ಅರಸುಮನೆತನದ ಕೊನೆಯ ಕುಡಿ ಶ್ರೀಕಂಟದತ್ತ ನರಸಿಂಹರಾಜ ಒಡೆಯರು ನೆನ್ನೆ ಕೊನೆಯುಸಿರೆಳೆದರು. ಜಯಚಾಮರಾಜೇಂದ್ರ ಒಡೆಯರ ಒಬ್ಬನೇ ಮಗನಾದ ಇವರು ಹುಟ್ಟಿದ್ದು 1953ರಲ್ಲಿ. ಅರಸು ಮನೆತನದಲ್ಲಿ ಹುಟ್ಟಿದವರಾದರೂ, ಸರಳಜೀವಿಯಾಗಿದ್ದ ಇವರು, ತಮ್ಮ ಎಳೆಯ ವಯಸ್ಸಿನಿಂದಲೂ ಎಲ್ಲರೊಡನೆ ಬೆರೆತು ಸಾಮಾನ್ಯರಂತೆಯೇ ಜೀವಿಸಿದವರು. ಲೋಕಸಬೆಯಲ್ಲಿ ನಾಲ್ಕು ಸಲ ಮಯ್ಸೂರನ್ನು ಪ್ರತಿನಿದಿಸಿದ್ದರು ಮತ್ತು ಇತ್ತೀಚೆಗಶ್ಟೇ ಕರ್‍ನಾಟಕ ಕ್ರಿಕೆಟ್ ಮಂಡಳಿಯ ಅದ್ಯಕ್ಶರಾಗಿ ಆಯ್ಕೆಯಾಗಿದ್ದರು. ಹಲವು ನೂರ್‍ಮಾನಗಳ ಕಾಲ ತೆಂಕಣ ಕರ್‍ನಾಟಕವನ್ನು ಆಳಿ ಜನಪರ ಆಡಳಿತ ನೀಡಿದ ಕನ್ನಡ ನಾಡಿನ ನೆಚ್ಚಿನ ಅರಸುಮನೆತನ ಇವರದು.

ಮಯ್ಸೂರಿನಲ್ಲಿ ಕೊನೆಯ ಸಲ ಇವರ ದರ್‍ಶನ ಪಡೆಯಲು ಕಡಲೋಪಾದಿಯಾಗಿ ಬಂದ ಜನರೇ ಇವರು ಮತ್ತು ಇವರ ಮನೆತನದ ಬಗ್ಗೆ ಜನರಿಗೆ ಇದ್ದ ಒಲವು, ಗವ್ರವಗಳಿಗೆ ಸಾಕ್ಶಿ. ಬನ್ನಿ, ಇಂತಹ ಒಂದು ಮನೆತನದ ಹಿನ್ನೆಲೆಯನ್ನು, ಸಾದನೆಗಳನ್ನು, ಮತ್ತು ಕೊಡುಗೆಗಳನ್ನು ನೋಡೋಣ.

1399ರಲ್ಲಿ ಕರ್‍ಣಾಟ (ವಿಜಯನಗರ) ಸಾಮ್ರಾಜ್ಯದ ಬಾಗವಾಗಿ ಮಯ್ಸೂರ ಒಡೆಯರ ಆಳ್ವಿಕೆ ಶುರುವಾಯಿತು. ಯದುರಾಯನಿಂದ ತೊಡಗಿದ ಈ ಮನೆತನ ಮಯ್ಸೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಹಲವು ವರುಶಗಳ ಕಾಲ ಆಳಿತಾದರೂ ಒಂದು ಸಣ್ಣ ಅರಸುನಾಡಾಗಿಯೇ ಉಳಿಯಿತು. ಆದರೆ ಕರ್‍ಣಾಟ ಸಾಮ್ರಾಜ್ಯದ ಆಳ್ವಿಕೆ ಕೊನೆಗೊಂಡ ಬಳಿಕ ದೊಡ್ಡದಾಗಿ ಬೆಳೆಯಲು ತೊಡಗಿದ ಮಯ್ಸೂರು ಅರಸುನಾಡು ಮುಂದೆ ಕಂಟೀರವ ನರಸರಾಜನ ಕಾಲದಲ್ಲಿ (1638-1659) ತಿರುಚಿರಾಪಳ್ಳಿಯ ವರೆಗೂ ತನ್ನ ಹರಹನ್ನು ಹಬ್ಬಿತು.

ನರಸರಾಜನು ಬಿಜಾಪುರದ ಆದಿಲ್ ಶಾಹಿಯ ಪಡೆಯನ್ನು ಹಿಮ್ಮೆಟ್ಟಿದ್ದಲ್ಲದೆ ಮದುರೆಯ ನಾಯಕರಿಂದ ಸತ್ಯಮಂಗಳವನ್ನು ಕಸಿದುಕೊಂಡನು. ಕಂಟೀರಾಯ ಹಣ ಎಂಬ ಕಾಸನ್ನೂ ಹೊರತಂದನು. ಹಲಕಾಲ ಈ ಕಂಟೀರಾಯ ಹಣವು ಮಯ್ಸೂರಿನಲ್ಲಿ ಸಲುವಳಿಯಲ್ಲಿತ್ತು.

1673ರಲ್ಲಿ ಗದ್ದುಗೆಯನ್ನೇರಿದ ಚಿಕ್ಕದೇವರಾಜ ಒಡೆಯರ ಕಾಲದಲ್ಲಿ ಮಯ್ಸೂರು ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಿತು. ತನ್ನ ಅರಸುನಾಡನ್ನು ಹರಡಿ ಗಟ್ಟಿ ಮಾಡಿದ್ದಲ್ಲದೆ ಕನ್ನಡವನ್ನು ಮರಾಟಿ ಆಡಳಿತದ ದಬ್ಬಾಳಿಕೆಯಿಂದ ಕಾಪಾಡಿದ ಕೀರ್‍ತಿ ಈ ಅರಸನಿಗೆ ಸಲ್ಲುತ್ತದೆ.

ಸುಮಾರು 4ನೇ ನೂರ್‍ಮಾನದಿಂದ ಆಡಳಿತ ನುಡಿಯಾಗಿ, ಸಾಹಿತ್ಯದ ನುಡಿಯಾಗಿ ಮೆರೆದ ಕನ್ನಡ, ಬಹಮನಿಯರ ಕಾಲದಿಂದೀಚೆಗೆ ಬಡಗಣ ಕರ್‍ನಾಟಕದಲ್ಲಿ (ಮತ್ತು ಇಂದಿನ ತೆಂಕಣ ಮಹಾರಾಶ್ಟ್ರದಲ್ಲಿ) ಮೇಲ್ಮೆಯನ್ನು ಕಳೆದುಕೊಳ್ಳುತ್ತ ಬಂದಿತೆಂದು ಹೇಳಲಾಗುತ್ತದೆ. ಇದಕ್ಕೆ ಸುಲ್ತಾನರ ಸಾಮ್ರಾಜ್ಯದಲ್ಲಿ ಮೆಲ್ಲಗೆ ತಲೆಯೆತ್ತುತ್ತಿದ್ದ ಮರಾಟಿಗರ ಹಿಡಿತವೂ ಒಂದು ಕಾರಣ. ಶಿವಾಜಿಯ ತಂದೆ ಶಹಾಜಿಯು ಬೆಂಗಳೂರು, ಹೊಸಕೋಟೆ, ಕೋಲಾರ, ದೊಡ್ಡಬಳ್ಳಾಪುರ, ಸಿರಾಗಳನ್ನು ಬಿಜಾಪುರ ಸುಲ್ತಾನರಿಂದ ಜಹಗೀರಾಗಿ ಪಡೆದು ಅಲ್ಲೆಲ್ಲ ಮರಾಟಿಯನ್ನು ಆಡಳಿತ ನುಡಿಯಾಗಿಸಿದನು. ಹಲವು ಮರಾಟಿಗರನ್ನು ಆಡಳಿತದ ಅದಿಕಾರಿಗಳನ್ನಾಗಿ ನೇಮಿಸಿದನು. ಡಾ|| ಜಿ. ನಾರಾಯಣ ರಾವ್ ಅವರು ಹೇಳುವಂತೆ ಕರ್‍ನಾಟಕದಲ್ಲಿ ‘ಒಂದು ಕಿರು ಮಹಾರಾಶ್ಟ್ರವನ್ನು ನೆಟ್ಟನು’.

ಆದರೆ ಚಿಕ್ಕದೇವರಾಯನ ದಿಟ್ಟತನ ಮತ್ತು ರಾಜಕೀಯ ಜಾಣ್ಮೆಯಿಂದಾಗಿ ಈ ಮರಾಟಿ ಪ್ರಾಬಲ್ಯ ಹಳೆ ಮಯ್ಸೂರು ಪ್ರದೇಶಗಳಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ. ಮುಂದೆ ಬೆಂಗಳೂರು ಮೊಗಲರ ಕಯ್ ಸೇರಿದಾಗ ಚಿಕ್ಕದೇವರಾಜನು ಅದನ್ನು ದುಡ್ಡು ಕೊಟ್ಟು ಅವರಿಂದ ಕೊಂಡುಕೊಂಡನು. ಮರಾಟರ ಕಯ್ಯಲ್ಲಿದ್ದ ಹಲವು ಬಾಗಗಳನ್ನುವಶಪಡಿಸಿಕೊಂಡುದಲ್ಲದೆ ಮುಂದೆ ಶಿವಾಜಿ, ಸಂಬಾಜಿಯರಿಂದ ಆದ ದಾಳಿಗಳನ್ನು ತಡೆದು ಮರಾಟರನ್ನು ಹಿಮ್ಮೆಟ್ಟಿದನು. ಹಾಗಾಗಿ “ಮಹಾರಾಶ್ಟ್ರ ಬೂಪಾಲ ರಿಪು” ಎಂಬ ಬಿರುದನ್ನೂ ಪಡೆದನು.

ಆದರೆ ಮರಾಟರ ಕಯ್ಯಲ್ಲಿದ್ದ ಬಡಗಣ ಕರ್‍ನಾಟಕವು ಮರಾಟಿ ಪ್ರಾಬಲ್ಯಕ್ಕೆ ಒಳಗಾಗಿ ಅಲ್ಲಿ ಕನ್ನಡವೂ, ಕನ್ನಡಿಗರೂ ತುಳಿತಕ್ಕೆ ಒಳಗಾಗಿದ್ದು ಗೊತ್ತೇ ಇದೆ. ಆಡಳಿತದಿಂದ ಕನ್ನಡವು ಮರೆಯಾಯಿತು. ಮುಂದೆ ಪೇಶ್ವ, ನಿಜಾಮ, ಬ್ರಿಟೀಶರ ಕಯ್ಯಲ್ಲೆಲ್ಲ ಸಿಕ್ಕು, ಹರಿದು ಹಂಚಿ ಹೋಗಿ ಕನ್ನಡಿಗರಿಗೆ ಉಂಟಾದ ಪಾಡು ಈಗ ಇತಿಹಾಸ. ಆದರೆ ತೆಂಕಣ ಕರ್‍ನಾಟಕದಲ್ಲಿ ಕನ್ನಡವನ್ನು ಉಳಿಸಿಕೊಂಡ ಮೇಲ್ಮೆ ಚಿಕ್ಕದೇವರಾಜ ಮತ್ತು ಅವನ ಬಳಿಕ ಆಳಿದ ಒಡೆಯರ ದೊರೆಗಳಿಗೆ ಸೇರಬೇಕು.

ಮುಂದೆ ಹಯ್ದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಕಯ್ಗೆ ಸೇರಿದ ಮಯ್ಸೂರು ಅರಸುನಾಡು 1799ರಲ್ಲಿ ಮತ್ತೆ ಒಡೆಯರ ಕಯ್ ಸೇರಿತು. ಆದರೆ 1831ರಲ್ಲಿ ಬ್ರಿಟಿಶರು ವಶಪಡಿಸಿಕೊಂಡು 1881ರ ವರೆಗೂ ಆಳಿದರು. 1881ರಲ್ಲಿ ಮತ್ತೆ ಆಡಳಿತವನ್ನು ಒಡೆಯರಿಗೆ ಹಿಂದಿರುಗಿಸಲಾಯಿತು. ಆಗ ಗದ್ದುಗೆಯನ್ನೇರಿದ ಚಾಮರಾಜ ಒಡೆಯರು ಜನಪರವಾದ ಆಡಳಿತವನ್ನು ನೀಡಲು ಮುಂದಾದರು. ಅರಸಾಳ್ವಿಕೆಯಾದರೂ ಕಟ್ಟಲೆಗಳನ್ನು ಮಾಡಿ ಅದನ್ನು ಮೇಲ್ನೋಡಲು ಮಂದಿಯಾಳ್ವಿಕೆಯ ಏರ್‍ಪಾಡನ್ನು ತಂದರು. ಅಂದಿನ ಬ್ರಿಟಿಶ್ ಬಾರತದ ಯಾವುದೇ ಅರಸುನಾಡು ಇಂತಹ ಪ್ರಯೋಗಕ್ಕೆ ಕಯ್ ಹಾಕಿರಲಿಲ್ಲ.

ಸ್ವಾಮಿ ವಿವೇಕಾನಂದರು 1893ರಲ್ಲಿ ಶಿಕಾಗೋದಲ್ಲಿ ನಡೆದ ‘ಪಾರ್‍ಲಿಮೆಂಟ್ ಆಪ್ ರಿಲಿಜಿಯನ್ಸ್’ನಲ್ಲಿ ಮಾಡಿದ ಬಾಶಣ ನಮಗೆಲ್ಲ ತಿಳಿದೇ ಇದೆ. ಆದರೆ ಅವರು ಇಲ್ಲಿಂದ ಅಮೇರಿಕಾದ ವರೆಗೂ ಹೋಗಲು ಹಣನೆರವು ಒದಗಿಸಿದವರು ಚಾಮರಾಜ ಒಡೆಯರು. ಇವರ ಆಳ್ವಿಕೆ ಕಿರುಹೊತ್ತಿನದಾದರೂ ಕಲಿಕೆ, ಕಾಯ್ಗಾರಿಕೆ, ಹಣಕಾಸು, ಆಡಳಿತ ಮುಂತಾದವುಗಳಲ್ಲಿ ಮಯ್ಸೂರು ಏಳ್ಗೆಯನ್ನು ಕಂಡಿತು.

ತಮ್ಮ ತಂದೆ ಚಾಮರಾಜ ಒಡೆಯರಂತೆ ನಾಲ್ವಡಿ ಕ್ರಿಶ್ಣರಾಜ ಒಡೆಯರು ಕೂಡ ಜನಪ್ರೇಮಿ ದೊರೆಗಳು. ಇವರ ಆಡಳಿತದಿಂದಾಗಿ ಮಯ್ಸೂರು ಎಲ್ಲ ಕ್ಶೇತ್ರಗಳಲ್ಲಿಯೂ ಏಳ್ಗೆಯನ್ನು ಸಾದಿಸಿತು. ಕನ್ನಂಬಾಡಿ ಕಟ್ಟೆಯನ್ನು ಕಟ್ಟಿಸುವಾಗ ಹಣ ಸಾಲದಾದಾಗ ಅರಮನೆಯ ಒಡವೆಗಳನ್ನೂ ಮಾರಲು ಇವರು ಹಿಂಜರಿಯಲಿಲ್ಲ. ಇವರ ಆಡಳಿತವನ್ನು ಮಾಹಾತ್ಮ ಗಾಂದಿಯವರು ‘ರಾಮ ರಾಜ್ಯ’ ಎಂದು ಕರೆದರು. ಲಾರ್‍ಡ್ ಸ್ಯಾಂಕಿಯವರು ಇವರ ಆಡಳಿತದ ಮಯ್ಸೂರನ್ನು “ಪ್ರಪಂಚದಲ್ಲಿ ಎಲ್ಲಕ್ಕೂ ಚೆನ್ನಾಗಿ ಆಳಲ್ಪಡುತ್ತಿರುವ ರಾಜ್ಯ” ಎಂದು ಬಣ್ಣಿಸಿದರು. ಇವರ ಸಾದನೆಗಳನ್ನು ಈಗಾಗಲೇ ಹಿಂದಿನ ಒಂದು ಬರಹದಲ್ಲಿ ನಾವು ಓದಿದ್ದೇವೆ.

ಇವರ ಬಳಿಕ ದೊರೆಗಳಾದ ಜಯಚಾಮರಾಜೇಂದ್ರ ಒಡೆಯರು 1950ರ ವರೆಗೂ ಹತ್ತು ವರುಶಗಳ ಕಾಲ ಆಳಿದರು. ನಾಲ್ವಡಿ ಕ್ರಿಶ್ಣರಾಜ ಒಡೆಯರಂತೆ ಒಳ್ಳೆಯ ಆಡಳಿತವನ್ನು ನೀಡಿದರು. ಮಯ್ಸೂರು ಅರಸುನಾಡನ್ನು ಬಾರತ ಒಕ್ಕೂಟಕ್ಕೆ ಸೇರಿಸಲಾದ್ದರಿಂದ ಒಡೆಯರ ಮನೆತನವು ತಮ್ಮ ಅರಸೊತ್ತಿಗೆಯನ್ನು ಕಳೆದುಕೊಂಡಿತು. ಮುಂದೆ ಮಯ್ಸೂರು ಮತ್ತು ಮದರಾಸು ರಾಜ್ಯಗಳ ಗವರ್‍ನರ್ ಆಗಿ ಸೇವೆ ಸಲ್ಲಿಸಿದ ಇವರು 1974ರಲ್ಲಿ ಸಾವನ್ನಪ್ಪಿದರು. ಈಗ ಇವರ ಮಗ ಶ್ರೀಕಂಟದತ್ತ ನರಸಿಂಹ ರಾಜ ಒಡೆಯರು ನಮ್ಮನ್ನು ಅಗಲಿದ್ದಾರೆ. ಇವರ ಅರಸುಮನೆತನವು ಕನ್ನಡ ನಾಡಿಗೆ ನೀಡಿದ ಕೊಡುಗೆಗಳನ್ನು ಗವ್ರವದಿಂದ ನೆನೆಯುತ್ತ ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರೋಣ.

(ಮಾಹಿತಿ ಸೆಲೆ: ಬಾಶಿಕ ಬ್ರುಹತ್ ಕರ್‍ನಾಟಕ, ಡಾ ಎಂ. ಚಿದಾನಂದ ಮೂರ್‍ತಿ; ವಿಕಿಪೀಡಿಯಾ)
(ಚಿತ್ರ ಸೆಲೆ: buzzintown.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Samad Kottur says:

    ಮೈಸೂರಿನ ಮಹಾರಾಜರ ಕೊನೆಯ ಕುಡಿ ಶ್ರೀಕಂಠದತ್ತ ನರಸಿಂಹರಾಜರ ಅಕಾಲಿಕ ನಿಧನ ಅತೀವ ದುಃಖವನ್ನುಂಟುಮಾಡಿದೆ. ಜಪಾನ್, ಇಂಗ್ಲೆಂಡ್ ದೇಶದ ರಾಜ ಮನೆತನಕ್ಕೆ ಅಲ್ಲಿನ ಸರ್ಕಾರ ಗೌರವ ನೀಡುವ ಹಾಗೆ ಮೈಸೂರಿನ ಮಹಾರಾಜರ ವಂಶಸ್ಥರನ್ನು ನಮ್ಮ ಸರ್ಕಾರ ನೋಡಿಕೊಂಡಿಲ್ಲ ಎಂದೆನಿಸುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
    ಸಮದ್ ಕೊಟ್ಟೂರು.

ಅನಿಸಿಕೆ ಬರೆಯಿರಿ:

%d bloggers like this: