ಬೆರಗುಗೊಳಿಸುವ ಸೀರುಗಗಳ ಜಗತ್ತು

ಶಿವರಾಮು ಕೀಲಾರ.

ನೆಲದ ಮಾರ‍್ಪಾಟು, ಜೀವಿಗಳ ಹುಟ್ಟು, ಒಕ್ಕಲುತನ ಬೆಳೆದಂತೆ, ಜೊತೆಯಲ್ಲಿ ಬೆಳೆಯುತ್ತ ಬಂದಿದ್ದು ಈ ಅರಿಮೆ. ಅರಿಮೆಯ ಅನೇಕ ಕೊಡುಗೆಗಳು ಜೀವಿಗಳ ಸರಳ ಹಾಗು ಚೆಂದವಾದ ಬದುಕಿಗೆ ನೆರವಾಗಿವೆ. ನಿಮಗೆಲ್ಲ ತಿಳಿದಿರುವಂತೆ ಅರಿಮೆ ಎಂಬುದಕ್ಕೆ ಹಿರಿದಾದ ಹುರುಳಿದೆ. ಅರಿಮೆ ಎಂದ ಕೂಡಲೇ ಮುಕ್ಯವಾಗಿ ನೆನಪಿಗೆ ಬರುವುದು ಇರುವರಿಮೆ (Physics), ಇರ‍್ಪರಿಮೆ (Chemistry), ಮತ್ತು ಉಸಿರರಿಮೆ (Biology). ಈ ಮುಕ್ಯವಾದ ಅರಿಮೆಯ ಬಾಗಗಳಲ್ಲಿ, ನಾನು ಉಸಿರರಿಮೆಗೆ ಸಂಬಂದಿಸಿದ ಒಂದು ವಿಶಯವನ್ನು ಹೇಳ ಹೊರಟಿದ್ದೇನೆ.

ಉಸಿರರಿಮೆಯಲ್ಲಿ, ಉಸಿರಾಡುವ ಜೀವಿಗಳ ಬಗ್ಗೆ ನಾವು ತಿಳಿದುಕೊಳ್ಳುತ್ತೇವೆ. ಅನೇಕ ಜೀವಿಗಳು ನಮ್ಮ ಬರಿ ಕಣ್ಣಿಗೆ ಕಾಣುತ್ತವೆ, ಎತ್ತುಗೆಗೆ: ಮನುಶ್ಯರು, ಹಕ್ಕಿಗಳು, ಉಸುರಿಗಳು (animals), ಜಂತುಗಳು ಮುಂತಾದವು. ಇವುಗಳ ಜೊತೆಯಲ್ಲಿ ನಮ್ಮ ಬರಿಗಣ್ಣಿಗೆ ಕಾಣದಿರುವ ಜೀವಿಗಳೂ ಇವೆ, ಅವುಗಳನ್ನು ’ಸೀರು-ಉಸಿರುಗಗಳು’, ’ಸೀರುಸಿರುಗಗಳು’, ’ಸೀರುಗಗಳು’ (microbes/microorganisms) ಎನ್ನುತ್ತಾರೆ. ಈ ಸೀರುಸಿರುಗಗಳ ಬಗ್ಗೆ ತಿಳಿಸುವ ಉಸಿರರಿಮೆಗೆ ಸೀರು-ಉಸಿರರಿಮೆ, ಸೀರುಸಿರರಿಮೆ (Microbiology) ಎಂದು ಕರೆಯುತ್ತಾರೆ.

microbes_1ಹುಲುಸಾಗಿರುವ ಹಲತನದಿಂದ (diversity) ಕೂಡಿರುವ ಈ ಸೀರು-ಉಸಿರುಗಗಳು ಬೂಮಿಯ ಮೇಲೆ ಇರುವ ಎಲ್ಲಾ ಜೀವಿಗಳ ಇರುವಿಕೆಗೆ, ಅವುಗಳ ಮಯ್ಯನ್ನು ರೂಪಿಸಲು ಬೇಕಾಗಿರುವ ಪೊರೆತಗಳನ್ನು (Nutrients) ಮರುಬಳಕೆ ಮಾಡುವುದಕ್ಕೆ ಮತ್ತು ಹವಾಮಾನವನ್ನು ಅಂಕೆಯಲ್ಲಿ ಇಟ್ಟುಕೊಳ್ಳುವ ಕೆಲಸದಲ್ಲಿ ತಮ್ಮ ಆಳವಾದ ಪರಿಣಾಮ ಬೀರಿವೆ.

ಸೀರುಸಿರರಿಮೆಯಲ್ಲಿ ಕಂಡುಬರುವ ಮುಕ್ಯ ಸೀರುಗಗಳೆಂದರೆ – ಸೀರ‍್ಕೋಲುಗಳು (Bacteria), ಪಾಚಿ (Algae), ಮುಗ್ಗು (Fungi), ಮುನ್ನುಸುರಿ/ಮುಂಪುಳು (Protozoa), ಮತ್ತು ನ0ಜುಳಗಳು (Viruses).

ಸೀರುಗಗಳು ಬೂಮಿಯ ಮೇಲೆ ಬದುಕಲು ತಕ್ಕುದಾದ ಎಲ್ಲಾ ನೆಲೆಗಳಲ್ಲೂ ಇರುತ್ತವೆ. ಇವುಗಳ ಇರುವಿಕೆಯ ಸಂಕೆಯೂ ಹೆಚ್ಚು. ಕೊರೆಯುವ ಚಳಿಯನ್ನು ಹೊಂದಿರುವ ಅಂಟಾರ‍್ಟಿಕದಿಂದ ಹಿಡಿದು, ಬೆಟ್ಟಗಳ ತುದಿ, ಕಡಲಿನ ತಳದಲ್ಲಿ ಇರುವ ಬಿಸಿಚಿಲುಮೆ (thermal vents), ಕಗ್ಗತ್ತಲಿನ ಗುಹೆಗಳು ಹೀಗೆ ಹಲಬಗೆಯ ವಾತಾವರಣಗಳಲ್ಲಿ ಸೀರುಗಳಿರುತ್ತವೆ. ಸೋಜಿಗವೆಂದರೆ, ಎಲ್ಲ ಸೀರುಗಗಳನ್ನು ಒಟ್ಟಾಗಿ ಸೇರಿಸಿದರೆ, ಬೂಮಿಯ ಮೇಲೆ ಬದುಕಿರುವ ವಸ್ತುಗಳಲ್ಲಿ 2/3 ರಶ್ಟಾಗುತ್ತವೆ.

ಸೀರುಗಗಳಲ್ಲಿ ಒಂದಾದ ನಂಜುಳಗಳು (Viruses) ಅನೇಕ ಸಲ ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಊಟದಲ್ಲಿ ಇರುತ್ತವೆ. ಕೆಲವೊಮ್ಮೆ, ಕೆಲವು ಸೀರುಗಗಳನ್ನು ನಮ್ಮ ಊಟದಲ್ಲಿ ಬೇಕೆಂದೇ ಸೇರಿಸಿರುತ್ತೇವೆ. ಎತ್ತುಗೆಗೆ, ಹುದುಗೆಬ್ಬಿಸುವ ಅಣಬೆ(Yeast)ನ್ನು ಗೋದಿ ಹಿಟ್ಟನ್ನು ಮೆತ್ತಗಾಗಿಸಲು ಮತ್ತು ಹಾಲನ್ನು ಮೊಸರು ಮಾಡಲು ಲ್ಯಕ್ಟೋಬೆಸಿಲೆಸ್ ಎನ್ನೋ ಸೀರ‍್ಕೋಲನ್ನು ಬಳಸುತ್ತೇವೆ.

ಸೀರ‍್ಕೋಲುಗಳು (Bacteria) ಸಾಮಾನ್ಯವಾಗಿ ನಮ್ಮ ಚರ‍್ಮ, ಬಾಯಿ, ಕಣ್ಣು, ಕಿವಿ, ಮೂಗು, ಗಂಟಲು ಹಾಗು ಅರಗಿಸುವ ಜಾಡಿನಲ್ಲೂ (Digestive tract) ತಮ್ಮ ಮನೆಮಾಡಿಕೊಂಡಿರುತ್ತವೆ. ಇವುಗಳಲ್ಲಿ, ಹೆಚ್ಚೆಣಿಕೆಯವು ನಮ್ಮ ಮಯ್ಯೊಳಿತಿಗೆ ಕುತ್ತುತರುವ ಸೀರ‍್ಕೋಲುಗಳಿಂದ ಕಾಪಾಡುತ್ತವೆ.

microbes_2ಆದರೂ, ಸೀರ‍್ಕೋಲುಗಳು (Bacteria), ನಂಜುಳು (Virus) ಎನ್ನುವ ಪದ ಕೇಳಿದ ಕೂಡಲೇ ನಾವು ಯೋಚಿಸುವುದು ರೋಗದ ಬಗ್ಗೆ.

ರೋಗವನ್ನು ತರುವ ಸೀರ‍್ಕೋಲುಗಳು, ನಂಜುಳುಗಳು ಹೆಚ್ಚು ಕಾಣಸದಿದ್ದರೂ, ಆಗಾಗೆ ಸೋಂಕುರೋಗವನ್ನು ಹರಡಿ ಮಂದಿ ಹಾಗು ಉಸುರಿಗಳ ಇರುವಿಕೆಗೆ ಕುತ್ತು ತಂದಿವೆ. ಎತ್ತುಗೆಗೆ, ಹಿಂದಿನ ಕಾಲದಲ್ಲಿ ಮನುಶ್ಯರಿಗೆ ಬರುತ್ತಿದ್ದ ಪ್ಲೇಗ್, ಕಾಲರ, ಸಿಡುಬು ಹಾಗು ಮುಂತಾದವು. ಈಗಲೂ ಕೂಡ ಕೆಲವು ಸೀರ‍್ಕೋಲುಗಳು ಮತ್ತು ನಂಜುಳುಗಳು, ಮಂದಿ ಹಾಗು ಇತರ ಉಸುರಿಗಳಿಗೆ ಕುತ್ತು ತರುವ ರೋಗಗಳನ್ನು ತರುತ್ತಲೇ ಇವೆ. ಎತ್ತುಗೆಗೆ, ಏಡ್ಸ್, ಸಾರ‍್ಸ್, ಹಕ್ಕಿ ರೋಗ/ಕೋಳಿ ಜ್ವರ (Avian Influenza/Bird Flu).

ಮೊದಲೇ ಹೇಳಿದಂತೆ ಸೀರುಸಿರುಗರಿಮೆಯ ಕೊಡುಗೆ ಅಪಾರ, ಇದರಿಂದ ತಿಳಿಯುವುದು ಬಹಳ ಇದೆ. ಸೀರುಸಿರುಗರಿಮೆಯು ನೆಲದ ಮೇಲಿನ ನಮ್ಮ ಇರುವಿಕೆಯ ಪ್ರಶ್ನೆಗೆ ಉತ್ತರ ಒದಗಿಸುವ ಬಹು ದೊಡ್ಡ ಸಲಕರಣೆಯಾಗಿದೆ.

ಇದಲ್ಲದೆ, ಜೀವಿಗಳ ಮಯ್ಯ (Physical) ಮತ್ತು ರಾಸಾಯನಿಕ (chemcial) ಚಟುವಟಿಕೆಗಳು, ತಳಿಯರಿಮೆ ಹೊಂದಾಣಿಕೆ, ರೋಗವನ್ನು ಕಂಡುಹಿಡಿಯಲು ಹಾಗು ಬೆಳವಣಿಗೆಯ ಸಂಬಂದಗಳನ್ನು ಅರಿತುಕೊಳ್ಳಲು ಸೀರುಗಗಳನ್ನು ಆರಯ್ಕೆಯ ಮಾದರಿಯಾಗಿ (experimental model) ಬಳಸಲಾಗುತ್ತದೆ.

ಹೀಗೆ ಸೀರು-ಉಸಿರರಿಮೆಯ ಬಗ್ಗೆ ತಿಳಿಯುವುದೆಂದರೆ ಬರಿಗಣ್ಣಿಗೆ ಕಾಣಿಸದ ಬೇರೊಂದು ಜಗತ್ತನ್ನು ಹೊಕ್ಕಂತೆಯೆ. ಸೀರುಗಗಳಿಂದಾಗಿ ನಮ್ಮ ಮಯ್ಯಿಗೆ ಎರಗುವ ಕುತ್ತಗಳನ್ನು ಹೋಗಲಾಡಿಸಲಶ್ಟೇ ಅಲ್ಲದೇ ಅವುಗಳಿಂದಾಗುವ ಒಳಿತುಗಳನ್ನೂ ಅರಿಯಲು ಸೀರುಗಗಳ ಬಗ್ಗೆ ಆಳವಾದ ಅರಕೆ ನಡೆಯುತ್ತಿದೆ.

ಈ ಕುರಿತಾದ ನನ್ನ ಕಲಿಕೆಯಿಂದ ಮತ್ತು ಅಮೇರಿಕಾದಲ್ಲಿ ನಾನು ಈಗ ಮಾಡುತ್ತಿರುವ ಕೆಲಸ, ಅರಕೆಯಿಂದ ಪಡೆದುಕೊಂಡಿರುವ ತಿಳುವಳಿಕೆಗಳನ್ನು ಈ ಸರಣಿಯ ಬಾಗವಾಗಿ ನಿಮ್ಮ ಮುಂದಿಡಲಿರುವೆ. ಮುಂದಿನ ಬರಹದಲ್ಲಿ ಸೀರುಗಗಳ ಹುಟ್ಟು, ಅವುಗಳನ್ನು ಕಂಡುಹಿಡಿದ ಅರಿಮೆಗಾರರ ಬಗ್ಗೆ ತಿಳಿದುಕೊಳ್ಳೋಣ.

ಬನ್ನಿ, ಪುಟ್ಟ-ಪುಟಾಣಿ ಸೀರುಗಗಳ ಜಗತ್ತಲ್ಲಿ ಸುತ್ತಾಡೋಣ, ಅವುಗಳ ಬಗ್ಗೆ ನಮ್ಮ ತಿಳುವಿಳಿಕೆಯನ್ನು ಹೆಚ್ಚಿಸಿಕೊಳ್ಳೋಣ.

(ತಿಳಿವಿನ ಸೆಲೆ: Alcamo’s fundamentals of microbiology text book)

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications