ಇಂಗ್ಲಿಶ್ ನುಡಿಯ ಮುನ್ನೊಟ್ಟುಗಳು
ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-8
ಇಂಗ್ಲಿಶ್‌ನಲ್ಲಿ ಹಲವಾರು ಮುನ್ನೊಟ್ಟು(prefix)ಗಳು ಬಳಕೆಯಾಗುತ್ತಿದ್ದು, ಇವನ್ನು ಮುಕ್ಯವಾಗಿ ಅವು ಕೊಡುವ ಹುರುಳುಗಳ ಮೇಲೆ ನಾಲ್ಕು ಗುಂಪುಗಳಲ್ಲಿ ಗುಂಪಿಸಲು ಬರುತ್ತದೆ:
(1) ಅಳವಿಯ ಒಟ್ಟುಗಳು: uni (unilateral), bi (bilateral), poly (polyglot)
(2) ಇಂಬಿನ ಒಟ್ಟುಗಳು: inter (international), intra (intravenous), trans (transmigrate)
(3) ಹೊತ್ತಿನ ಒಟ್ಟುಗಳು : pre (premedical), post (postmodern), neo (neoclassical)
(4) ಅಲ್ಲಗಳೆಯುವ ಒಟ್ಟುಗಳು: in (incorrect), dis (dislike), un (unbelievable)
ಈ ನಾಲ್ಕು ಮುಕ್ಯ ಗುಂಪುಗಳಲ್ಲಿ ಸೇರದಿರುವ ಬೇರೆಯೂ ಕೆಲವು ಒಟ್ಟುಗಳಿದ್ದು, ಅವನ್ನು ಅಯ್ದನೆಯ ಗುಂಪಿನಲ್ಲಿ ಇರಿಸಬಹುದು.
ಕನ್ನಡದಲ್ಲಿ ಮುನ್ನೊಟ್ಟುಗಳ ಬಳಕೆಯಿಲ್ಲ; ಆದರೆ, ಕನ್ನಡದ ಹಲವು ಪರಿಚೆಬೇರುಗಳು ಮತ್ತು ಎಣಿಕೆಬೇರುಗಳು ಮುನ್ನೊಟ್ಟುಗಳ ಹಾಗೆ ಪದಗಳ ಮೊದಲು ಬಳಕೆಯಾಗಬಲ್ಲುವು. ಕನ್ನಡದ ಸೊಲ್ಲರಿಮೆಯಲ್ಲಿ ಇಂತಹ ಬೇರುಗಳನ್ನು ಬಳಸಿರುವ ಪದಗಳನ್ನು ಜೋಡುಪದಗಳು ಇಲ್ಲವೇ ಕೂಡುಪದಗಳು ಎಂಬುದಾಗಿ ಕರೆಯಲಾಗುತ್ತದೆ. ಇಂಗ್ಲಿಶ್‌ನಲ್ಲಿ ಮುನ್ನೊಟ್ಟುಗಳನ್ನು ಬಳಸಿ ಪಡೆದ ಪದಗಳಿಗೆ ಸಾಟಿಯಾಗುವಂತೆ ಹಲವೆಡೆಗಳಲ್ಲಿ ಇಂತಹ ಪದಗಳನ್ನು ಕಟ್ಟಲು ಬರುತ್ತದೆ.
ಆದರೆ, ಕೆಲವೆಡೆಗಳಲ್ಲಿ ಇಂಗ್ಲಿಶ್ ಮುನ್ನೊಟ್ಟುಗಳಿಗೆ ಸಾಟಿಯಾಗಬಲ್ಲ ಹುರುಳುಗಳನ್ನು ಪಡೆಯಲು ಎಸಕಪದಗಳನ್ನು ಇಲ್ಲವೇ ಅವುಗಳ ಪರಿಚೆರೂಪಗಳನ್ನು ಹೆಸರುಪದಗಳ ಬಳಿಕ ಬಳಸಬೇಕಾಗುತ್ತದೆ. ಕೆಲವು ಪರಿಚೆಪದಗಳನ್ನೂ ಈ ರೀತಿ ಹೆಸರುಪದಗಳ ಪತ್ತುಗೆರೂಪದ ಬಳಿಕ ಬಳಸಬೇಕಾಗುತ್ತದೆ.
ಇಂಗ್ಲಿಶ್‌ನ ಅಲ್ಲಗಳೆಯುವ ಮುನ್ನೊಟ್ಟುಗಳಿಗೆ ಸಾಟಿಯಾಗಬಲ್ಲ ಕನ್ನಡದ ಪದಗಳು ಇಲ್ಲವೇ ಒಟ್ಟುಗಳು ಇವೆಲ್ಲಕ್ಕಿಂತ ಬೇರಾಗಿವೆ; ಅವುಗಳಲ್ಲಿ ಹೆಚ್ಚಿನವೂ ಎಸಕಪದಗಳ ಇಲ್ಲವೇ ಹೆಸರುಪದಗಳ ಬಳಿಕ ಬರುತ್ತವೆ. ತಪ್ಪು ಇಲ್ಲವೇ ಕೆಟ್ಟ ಎಂಬಂತಹ ಕೆಲವು ಪದಗಳು ಮಾತ್ರ ಮುನ್ನೊಟ್ಟುಗಳ ಜಾಗದಲ್ಲಿ ಬಳಕೆಯಾಗುತ್ತವೆ.
ಅಳವಿಯ ಮುನ್ನೊಟ್ಟುಗಳು
ಪದಗಳು ತಿಳಿಸುವ ಪಾಂಗಿನ, ಪರಿಚೆಯ, ಇಲ್ಲವೇ ಎಸಕದ ಅಳವಿಯನ್ನು ತಿಳಿಸುವುದಕ್ಕಾಗಿ ಇಂಗ್ಲಿಶ್‌ನಲ್ಲಿ ಎಣಿಕೆಯನ್ನು ತಿಳಿಸುವ ಮುನ್ನೊಟ್ಟುಗಳು ಮತ್ತು ಬೇರೆ ಬಗೆಯ ಅಳವಿಯನ್ನು ತಿಳಿಸುವ ಮುನ್ನೊಟ್ಟುಗಳು ಎಂಬುದಾಗಿ ಎರಡು ಬಗೆಯ ಮುನ್ನೊಟ್ಟುಗಳು ಬಳಕೆಯಾಗುತ್ತವೆ; ಇವುಗಳಲ್ಲಿ ಎಣಿಕೆಯನ್ನು ತಿಳಿಸುವ ಮುನ್ನೊಟ್ಟುಗಳನ್ನು ಕೆಳಗೆ ಮೊದಲು ವಿವರಿಸಲಾಗಿದ್ದು, ಉಳಿದ ಮುನ್ನೊಟ್ಟುಗಳನ್ನು ಆಮೇಲೆ ವಿವರಿಸಲಾಗಿದೆ:
(ಕ) ಎಣಿಕೆಯ ಒಟ್ಟುಗಳು:
ಅಳವಿಯನ್ನು ತಿಳಿಸುವ ಮುನ್ನೊಟ್ಟುಗಳಲ್ಲಿ ಕೆಲವು ಎಣಿಕೆಗೆ ಸಂಬಂದಿಸಿದುವಾಗಿವೆ; ಇವಕ್ಕೆ ಸಾಟಿಯಾಗಿ ಕನ್ನಡದಲ್ಲೂ ಎಣಿಕೆಯನ್ನು ತಿಳಿಸುವ ಎಣಿಕೆಬೇರುಗಳನ್ನು ಮುನ್ನೊಟ್ಟುಗಳ ಜಾಗದಲ್ಲಿ ಬಳಸಲು ಬರುತ್ತದೆ:
(1) uni ಇಲ್ಲವೇ mono ಒಟ್ಟು:
ಈ ಎರಡು ಮುನ್ನೊಟ್ಟುಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಒರ‍್/ಓರ‍್ ಎಂಬ ಪರಿಚೆಬೇರನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ (ಮುಚ್ಚುಲಿಗಳ ಮೊದಲು ಒರ‍್ ಮತ್ತು ತೆರೆಯುಲಿಗಳ ಮೊದಲು ಓರ‍್):
pole | ಕೊನೆ | unipolar | ಒರ‍್ಕೊನೆಯ | |
lateral | ಬದಿಯ | unilateral | ಒರ‍್ಬದಿಯ | |
direction | ತಟ್ಟು | unidirectional | ಒರ‍್ತಟ್ಟು | |
valve | ತೆರ‍್ಪು | univalve | ಒರ‍್ತೆರ‍್ಪಿನ | |
rail | ಕಂಬಿ | monorail | ಒರ‍್ಕಂಬಿ | |
chrome | ಬಣ್ಣ | monochrome | ಒರ‍್ಬಣ್ಣ | |
mania | ಗೀಳು | monomania | ಒರ‍್ಗೀಳು | |
syllable | ಉಲಿಕಂತೆ | monosyllabic | ಓರುಲಿಕಂತೆಯ |
(2) bi ಇಲ್ಲವೇ di ಒಟ್ಟು:
ಈ ಒಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ಇರ‍್/ಈರ‍್ ಎಂಬ ಎಣಿಕೆಬೇರನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
lateral | ಬದಿಯ | bilateral | ಇರ‍್ಬದಿಯ | |
focal | ಸೇರ‍್ಮೆಯ | bifocal | ಇರ‍್ಸೇರ‍್ಮೆಯ | |
polar | ಕೊನೆಯ | bipolar | ಇರ‍್ಕೊನೆಯ | |
sect | ತುಂಡು | bisect | ಇರ‍್ತುಂಡಿಸು | |
pole | ಕೊನೆ | dipole | ಇರ‍್ಕೊನೆ | |
morph | ಪರಿಜು | dimorph | ಇರ‍್ಪರಿಜು |
(3) tri ಒಟ್ಟು:
ಈ ಒಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ಮುರ‍್/ಮೂರ‍್ ಎಣಿಕೆಬೇರನ್ನು ಬಳಸಲು ಬರುತ್ತದೆ:
angle | ಮೊನೆ | triangle | ಮುಮ್ಮೊನೆ | |
colour | ಬಣ್ಣ | tricolour | ಮುಬ್ಬಣ್ಣ | |
lateral | ಬದಿಯ | trilateral | ಮೂರ‍್ಬದಿಯ | |
part | ಪಾಲು | tripartite | ಮೂರ‍್ಪಾಲಿನ |
ಮೂರಕ್ಕಿಂತ ಮೇಲಿನ ಎಣಿಕೆಗಳನ್ನು ತಿಳಿಸುವ quadri, penta ಮೊದಲಾದವುಗಳ ಬಳಕೆ ಮೇಲಿನವುಗಳಿಂದ ತುಂಬಾ ಕಡಿಮೆ; ಅವನ್ನು ಬಳಸಿರುವಲ್ಲೂ ಅವಕ್ಕೆ ಸಾಟಿಯಾಗಿ ನಾಲ್, ಅಯ್ ಮೊದಲಾದ ಕನ್ನಡದ ಎಣಿಕೆಬೇರುಗಳನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ (quadrangle ನಾಲ್ಮೂಲೆ, pentangle ಅಯ್ಮೂಲೆ).
(4) semi, demi, ಇಲ್ಲವೇ hemi ಒಟ್ಟುಗಳು:
ಅರೆವಾಸಿ ಎಂಬ ಹುರುಳನ್ನು ಕೊಡುವ ಮೇಲಿನ ಇಂಗ್ಲಿಶ್ ಮೊನ್ನೊಟ್ಟುಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಅರೆ ಎಂಬ ಎಣಿಕೆಬೇರನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
circle | ಬಳಸಿ | semicircle | ಅರೆಬಳಸಿ | |
detached | ಬೇರ‍್ಪಟ್ಟ | semi-detached | ಅರೆಬೇರ‍್ಪಟ್ಟ | |
final | ಕೊನೆಯ | semi-final | ಅರೆಕೊನೆಯ | |
skilled | ಪಳಗಿದ | semi-skilled | ಅರೆಪಳಗಿದ | |
god | ಕಡವರು | demigod | ಅರೆಕಡವರು | |
relief | ಒದವಿ | demirelief | ಅರೆ ಒದವಿ | |
sphere | ತೆರಳೆ | hemisphere | ಅರೆತೆರಳೆ |
(ಚ) ಬೇರೆ ಬಗೆಯ ಅಳವಿಯ ಮುನ್ನೊಟ್ಟುಗಳು:
ಎಣಿಕೆಯನ್ನು ತಿಳಿಸುವ ಮುನ್ನೊಟ್ಟುಗಳು ಅಳವಿಯನ್ನು ಕಚಿತವಾಗಿ ತಿಳಿಸುತ್ತವೆ; ಬೇರೆ ಹಲವು ಮುನ್ನೊಟ್ಟುಗಳು ತುಂಬಾ, ತುಸು, ಕಡಿಮೆ, ಮೀರಿ, ದೊಡ್ಡ, ಚಿಕ್ಕ, ಹಲವು ಮೊದಲಾದ ಹುರುಳುಗಳನ್ನು ಕೊಡುವ ಮೂಲಕ ಕಚಿತವಲ್ಲದ ಅಳವಿಯನ್ನು ತಿಳಿಸುವಲ್ಲಿ ಬಳಕೆಯಾಗುತ್ತವೆ. ಅಂತಹ ಮುನ್ನೊಟ್ಟುಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಎಂತಹ ಪದಗಳನ್ನು ಇಲ್ಲವೇ ಪರಿಚೆಬೇರುಗಳನ್ನು ಬಳಸಲು ಬರುತ್ತದೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ:
(1) arch ಒಟ್ಟು:
ಈ ಒಟ್ಟಿಗೆ ತುಂಬಾ ಹೆಚ್ಚಿನ ಎಂಬ ಅಳವಿಯ ಹುರುಳಿದ್ದು, ಇದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಎಕ್ಕ ಎಂಬುದನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ.
ಈ ಹುರುಳು ಮಾತ್ರವಲ್ಲದೆ ಮುಕ್ಯವಾದ ಎಂಬ ಹುರುಳೂ ಇದಕ್ಕಿದೆ; ಕನ್ನಡದಲ್ಲಿ ಈ ಹುರುಳನ್ನು ತಿಳಿಸಲು ಮಲ್ಲ ಎಂಬ ಪದವನ್ನು ಬಳಸಬಹುದು (archbishop ಮಲ್ಲಬಿಶಪ್).
enemy | ಹಗೆ | arch-enemy | ಎಕ್ಕಹಗೆ | |
traitor | ನಾಡಹಗೆ | arch-traitor | ಎಕ್ಕನಾಡಹಗೆ | |
magician | ಮಾಟಗಾರ | arch-magician | ಎಕ್ಕಮಾಟಗಾರ | |
murderer | ಕೊಲೆಗಾರ | arch-murderer | ಎಕ್ಕಕೊಲೆಗಾರ |
(2) co ಒಟ್ಟು:
ಈ ಒಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ಕೂಡು ಇಲ್ಲವೇ ಒಡ ಎಂಬುದನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
agent | ಮಾರಾಳು | co-agent | ಕೂಡುಮಾರಾಳು | |
inheritor | ಮರುಪಡೆಗ | coinheritor | ಕೂಡುಮರುಪಡೆಗ | |
education | ಕಲಿಕೆ | co-education | ಕೂಡುಕಲಿಕೆ | |
editor | ಅಳವಡಿಗ | co-editor | ಕೂಡಳವಡಿಗ | |
relation | ಪತ್ತುಗೆ | correlation | ಒಡಪತ್ತುಗೆ | |
medication | ಮದ್ದು | co-medication | ಒಡಮದ್ದು | |
govern | ಆಳು | co-govern | ಒಡ ಆಳು |
(3) hyper ಒಟ್ಟು:
ಈ ಒಟ್ಟನ್ನು ಬಳಸಿರುವಲ್ಲಿ ಅದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಮಿಗಿಲು ಎಂಬ ಪದವನ್ನು ಬಳಸಲು ಬರುತ್ತದೆ:
inflation | ಉಬ್ಬರ | hyperinflation | ಮಿಗಿಲುಬ್ಬರ | |
link | ಕೊಂಡಿ | hyperlink | ಮಿಗಿಲುಕೊಂಡಿ | |
market | ಮಾರುಕಟ್ಟೆ | hypermarket | ಮಿಗಿಲುಮಾರುಕಟ್ಟೆ | |
sensitive | ನಾಟುವ | hypersensitive | ಮಿಗಿಲುನಾಟುವ |
(4) mini ಒಟ್ಟು:
ಈ ಒಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ಕಿರು ಎಂಬುದನ್ನು ಬಳಸಲು ಬರುತ್ತದೆ; ಇದಕ್ಕೆ ತೆರೆಯುಲಿಗಳ ಮೊದಲಿಗೆ ಕಿತ್ ಎಂಬ ರೂಪ ಇದೆ:
cab | ಬಾಡಿಗೆಬಂಡಿ | minicab | ಕಿರುಬಾಡಿಗೆಬಂಡಿ | |
computer | ಎಣ್ಣುಕ | minicomputer | ಕಿತ್ತೆಣ್ಣುಕ | |
dictionary | ಪದನೆರಕ | minidictionary | ಕಿರುಪದನೆರಕ | |
camp | ಬೀಡು | minicamp | ಕಿರುಬೀಡು |
(5) out ಒಟ್ಟು:
ಈ ಒಟ್ಟನ್ನು ಮುಕ್ಯವಾಗಿ ಹೊರ ಮತ್ತು ಮೀರು ಎಂಬ ಎರಡು ಹುರುಳುಗಳಲ್ಲಿ ಬಳಸಲಾಗುತ್ತದೆ; ಇವುಗಳಲ್ಲಿ ಮೊದಲನೆಯ ಹುರುಳು ಇಂಬಿಗೆ ಸಂಬಂದಿಸಿದುದಾಗಿದ್ದು, ಅದರ ಬಳಕೆಯನ್ನು ಮುಂದೆ ()ರಲ್ಲಿ ವಿವರಿಸಲಾಗಿದೆ; ಎರಡನೆಯ ಹುರುಳಿನಲ್ಲಿ ಬಳಕೆಯಾಗುವ ಈ ಮುನ್ನೊಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ಮೀರು ಎಂಬ ಪದವನ್ನು ಬಳಸಲು ಬರುತ್ತದೆ.
ಇಂಗ್ಲಿಶ್‌ನಲ್ಲಿ ಮೇಲಿನ ಒಟ್ಟಿನೊಂದಿಗೆ ಬರುವ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ (ಕ) ಕೆಲವೆಡೆಗಳಲ್ಲಿ ಒಂದು ಎಸಕಪದವನ್ನು ಬಳಸಬೇಕಾಗುತ್ತದೆ, ಮತ್ತು (ಚ) ಬೇರೆ ಕೆಲವು ಕಡೆಗಳಲ್ಲಿ ಒಂದು ಹೆಸರುಪದವನ್ನು ಬಳಸಬೇಕಾಗುತ್ತದೆ.
(ಕ) ಎಸಕಪದವನ್ನು ಬಳಸುವುದಿದ್ದಲ್ಲಿ, ಅದರ ಮುಂದೆ ಮೀರು ಪದದ ಜೋಡಿಸುವ ರೂಪವಾದ ಮೀರಿ ಎಂಬುದನ್ನು ಬಳಸಲು ಬರುತ್ತದೆ:
weigh | ತೂಗು | outweigh | ಮೀರಿ ತೂಗು | |
sell | ಮಾರು | outsell | ಮೀರಿ ಮಾರು | |
shine | ಹೊಳೆ | outshine | ಮೀರಿ ಹೊಳೆ | |
last | ಬಾಳು | outlast | ಮೀರಿ ಬಾಳು |
(ಚ) ಹೆಸರುಪದವನ್ನು ಬಳಸುವುದಿದ್ದಲ್ಲಿ, ಅದರ ಬಳಿಕ ಮೀರು ಪದವನ್ನು ಒಂದು ಎಸಕಪದವಾಗಿ ಬಳಸಲು ಬರುತ್ತದೆ:
number | ಎಣಿಕೆ | outnumber | ಎಣಿಕೆ ಮೀರು | |
rank | ಮಟ್ಟ | outrank | ಮಟ್ಟ ಮೀರು | |
size | ಅಳತೆ | outsize | ಅಳತೆ ಮೀರಿದ | |
law | ಕಟ್ಟಲೆ | outlaw | ಕಟ್ಟಲೆ ಮೀರಿದ |
(6) over ಒಟ್ಟು:
ಈ ಒಟ್ಟಿಗೆ ಅಳವಿನ ಹುರುಳೂ ಇದೆ, ಮತ್ತು ಇಂಬಿನ ಹುರುಳೂ ಇದೆ; out ಎಂಬ ಮುನ್ನೊಟ್ಟಿನ ಬಳಕೆಯಲ್ಲಿ ಕಾಣಿಸುವ ಹಾಗೆ, ಈ ಒಟ್ಟಿಗಿರುವ ಅಳವಿನ ಬಳಕೆಯಲ್ಲೂ ಕನ್ನಡದ ಮೀರು ಪದವನ್ನು ಬಳಸಲು ಬರುತ್ತದೆ:
(ಕ) ಎಸಕಪದದ ಬಳಕೆ:
achieve | ಪಡೆ | overachieve | ಮೀರಿ ಪಡೆ | |
burden | ಹೇರು | overburden | ಮೀರಿ ಹೇರು | |
charge | ಬೆಲೆಹಾಕು | overcharge | ಮೀರಿ ಬೆಲೆಹಾಕು | |
heat | ಕಾಯು | overheat | ಮೀರಿ ಕಾಯು |
(ಚ) ಹೆಸರುಪದದ ಬಳಕೆ:
balance | ಸರಿತೂಕ | overbalance | ಸರಿತೂಕ ಮೀರು | |
dose | ಮದ್ದಳವು | overdose | ಮದ್ದಳವು ಮೀರು | |
due | ತಲಪುಗೆ | overdue | ತಲಪುಗೆ ಮೀರಿದ | |
price | ಬೆಲೆ | overpriced | ಬೆಲೆ ಮೀರಿದ |
(7) super ಒಟ್ಟು:
ಈ ಒಟ್ಟಿಗೆ ತುಂಬಾ ಹೆಚ್ಚಿನ ಎಂಬ ಅಳವಿಯ ಹುರುಳಿದ್ದು, ಕನ್ನಡದಲ್ಲಿ ಅದಕ್ಕೆ ಸಾಟಿಯಾಗಿ ಎಕ್ಕ (ಎಕ್ಕಟ) ಎಂಬ ಪರಿಚೆಬೇರನ್ನು ಮುನ್ನೊಟ್ಟುಗಳ ಜಾಗದಲ್ಲಿ ಇರಿಸಿ ಹೇಳಲು ಬರುತ್ತದೆ:
hero | ಕೆಚ್ಚುಗ | superhero | ಎಕ್ಕಕೆಚ್ಚುಗ | |
computer | ಎಣ್ಣುಕ | supercomputer | ಎಕ್ಕೆಣ್ಣುಕ | |
glue | ಅಂಟು | superglue | ಎಕ್ಕಂಟು | |
market | ಮಾರುಕಟ್ಟೆ | supermarket | ಎಕ್ಕಮಾರುಕಟ್ಟೆ | |
brain | ಮಿದುಳು | superbrain | ಎಕ್ಕಮಿದುಳು |
(8) ultra ಒಟ್ಟು:
ಈ ಒಟ್ಟಿಗೂ ತುಂಬಾ ಹೆಚ್ಚು ಎಂಬ ಹುರುಳಿದ್ದು, ಇದಕ್ಕೆ ಸಾಟಿಯಾಗಿಯೂ ಕನ್ನಡದಲ್ಲಿ ಎಕ್ಕ ಎಂಬ ಪರಿಚೆಬೇರನ್ನು ಬಳಸಲು ಬರುತ್ತದೆ:
high | ಎತ್ತರ | ultra-high | ಎಕ್ಕೆತ್ತರ | |
long | ಉದ್ದ | ultra-long | ಎಕ್ಕುದ್ದ | |
ripe | ಕಳಿತ | ultra-ripe | ಎಕ್ಕಕಳಿತ | |
secure | ನೆಮ್ಮದಿಯ | ultra-secure | ಎಕ್ಕನೆಮ್ಮದಿಯ |
(9) under ಒಟ್ಟು:
ಈ ಒಟ್ಟಿಗಿರುವ ಅಳವಿನ ಬಳಕೆಯಲ್ಲಿ ಕನ್ನಡದ ಕೊರೆ ಎಂಬ ಪದವನ್ನು ಅದಕ್ಕೆ ಸಾಟಿಯಾಗಿ ಬಳಸಲು ಬರುತ್ತದೆ:
dress | ತೊಡು | underdress | ಕೊರೆತೊಡು | |
spend | ಬಳಸು | underspend | ಕೊರೆಬಳಸು | |
perform | ನೆಗಳು | underperform | ಕೊರೆನೆಗಳು | |
fed | ತಿನ್ನಿಸಿದ | underfed | ಕೊರೆತಿನ್ನಿಸಿದ | |
fund | ಹಣ | underfund | ಕೊರೆಹಣ ಕೊಡು | |
nourished | ಆರಯ್ಕೆಯ | undernourished | ಕೊರೆಯಾರಯ್ಕೆಯ | |
pay | ಕೂಲಿ | underpay | ಕೊರೆಕೂಲಿ | |
weight | ತೂಕ | underweight | ಕೊರೆತೂಕದ |
(10) poly ಇಲ್ಲವೇ multi ಒಟ್ಟು:
ಹಲವು ಎಂಬ ಹುರುಳನ್ನು ಕೊಡುವ ಈ ಒಟ್ಟುಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಹಲ ಎಂಬ ಪರಿಚೆಬೇರನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
morph | ಪರಿಜು | polymorphic | ಹಲಪರಿಜಿನ | |
phone | ಉಲಿ | polyphonic | ಹಲವುಲಿಯ | |
syllable | ಉಲಿಕಂತೆ | polysyllabic | ಹಲವುಲಿಕಂತೆಯ | |
technical | ಅರಿವಿನ | polytechnic | ಹಲವರಿವಿನ | |
coloured | ಬಣ್ಣದ | multicoloured | ಹಲಬಣ್ಣದ | |
lateral | ಬದಿಯ | multilateral | ಹಲಬದಿಯ | |
party | ತಂಡ | multiparty | ಹಲತಂಡದ | |
race | ತಳಿ | multiracial | ಹಲತಳಿಯ |
(11) pan ಒಟ್ಟು:
ಈ ಒಟ್ಟಿಗೆ ಎಲ್ಲ ಎಂಬ ಹುರುಳಿದ್ದು, ಕನ್ನಡದಲ್ಲಿ ಅದೇ ಪದವನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
chromatic | ಬಣ್ಣದ | panchromatic | ಎಲ್ಲಬಣ್ಣದ | |
linguistic | ನುಡಿಯ | panlinguistic | ಎಲ್ಲನುಡಿಯ | |
African | ಆಪ್ರಿಕದ | pan-African | ಎಲ್ಲಾಪ್ರಿಕದ | |
phobia | ಅಂಜಿಕೆ | panphobia | ಎಲ್ಲಂಜಿಕೆಯ |
ತಿರುಳು:
ಅಳವಿಯನ್ನು ತಿಳಿಸುವ ಮುನ್ನೊಟ್ಟುಗಳಲ್ಲಿ ಅದನ್ನು ಕಚಿತವಾಗಿ ತಿಳಿಸುವ ಎಣಿಕೆಯ ಮುನ್ನೊಟ್ಟುಗಳು ಮತ್ತು ಅಶ್ಟೊಂದು ಕಚಿತವಲ್ಲದಂತೆ ಬೇರೆ ಬಗೆಯಲ್ಲಿ ತಿಳಿಸುವ ಅಳವಿಯ ಮುನ್ನೊಟ್ಟುಗಳು ಎಂಬುದಾಗಿ ಎರಡು ಬಗೆಯವು ಇಂಗ್ಲಿಶ್‌ನಲ್ಲಿವೆ.
ಇವುಗಳಲ್ಲಿ ಎಣಿಕೆಯ ಮುನ್ನೊಟ್ಟುಗಳಿಗೆ ಸಾಟಿಯಾಗಿ ಕನ್ನಡದ ಒರ‍್/ಓರ‍್, ಇರ‍್/ಈರ‍್, ಮುರ‍್/ಮೂರ‍್, ಅರೆ ಮೊದಲಾದ ಎಣಿಕೆಬೇರುಗಳನ್ನು ಮೊನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ, ಮತ್ತು ಬೇರೆ ಬಗೆಯ ಅಳವಿಯನ್ನು ತಿಳಿಸುವ ಮುನ್ನೊಟ್ಟುಗಳಿಗೆ ಸಾಟಿಯಾಗಿ ಹೆಚ್ಚಿನೆಡೆಗಳಲ್ಲೂ ಕನ್ನಡದ ಎಕ್ಕ, ಒಡ, ಕಿರು/ಕಿತ್ತ್, ಕೊರೆ, ಹಲ ಎಂಬಂತಹ ಪರಿಚೆಬೇರುಗಳನ್ನು ಬಳಸಲು ಬರುತ್ತದೆ; ಕೆಲವೆಡೆಗಳಲ್ಲಿ ಮಾತ್ರ ಮೀರು, ಕೂಡು, ಮಿಗಿಲು ಎಂಬಂತಹ ಪದಗಳನ್ನು ಮೊನ್ನೊಟ್ಟಿನ ಜಾಗದಲ್ಲಿ ಇಲ್ಲವೇ ಪದಗಳ ಬಳಿಕ ಬಳಸಬೇಕಾಗುತ್ತದೆ.
1 Response
[…] << ಬಾಗ-8 […]