ಪ್ರೊ. ಎಮ್. ಎನ್. ಶ್ರೀನಿವಾಸ್ – ನಾವು ಅರಿಯಬೇಕಿರುವ ಸಮಾಜಶಾಸ್ತ್ರದ ಅರಿಗ
ಪ್ರೊ. ಎಮ್. ಎನ್. ಶ್ರೀನಿವಾಸ್ ಎಂಬ ಮಹಾನ್ ಸಮಾಜಶಾಸ್ತ್ರದ ಅರಿಗರ ಬಗೆಗಿನ ಅರಿವು ನಮಗಿರುವುದು ಕೊಂಚ ಕಡಿಮೆಯೇ ಸರಿ. ಏಕೆಂದರೆ ಅವರು ತಮ್ಮ ಸಮಾಜಶಾಸ್ತ್ರದ ಕುರಿತು ಬರೆದಿರುವ ಬಹುತೇಕ ಬರಹಗಳು ಆಂಗ್ಲ ನುಡಿಯಲ್ಲಿರುವುದು ಎಂಬ ಸಾದಾರಣ ಕಾರಣವನ್ನು ನೀಡಬಹುದು. ಆದರೂ ಜಗತ್ತಿನಾದ್ಯಾಂತ ಒಳ್ಳೆಯ ಹೆಸರು ಪಡೆದಿರುವ ಸಮಾಜಶಾಸ್ತ್ರದ ಅರಿಗ, ಕನ್ನಡಿಗ ಪ್ರೊ. ಎಮ್. ಎನ್. ಶ್ರಿನಿವಾಸ್ ಅವರ ಬಗ್ಗೆ ತಿಳಿದುಕೊಳ್ಳೋಣ.
ಪ್ರೊ. ಎಮ್. ಎನ್. ಶ್ರೀನಿವಾಸ್ ಅವರು 16 ನೇ ನವೆಂಬರ್ 1916 ರಲ್ಲಿ ಮಯ್ಸೂರಿನಲ್ಲಿ ಹುಟ್ಟಿದರು. ತಂದೆ ಶ್ರೀ ನರಸಿಂಹಾಚಾರ‍್ಯರು. ಶ್ರೀನಿವಾಸರವರು ತಮ್ಮ ಎಳವೆಯನ್ನು ಬಹುತೇಕ ಮಯ್ಸೂರಿನಲ್ಲಿ ಕಳೆದರು. ತಮ್ಮ ಮೊದಲ ಹಂತದ ಕಲಿಕೆಯನ್ನು ಮಯ್ಸೂರಿನ ಸದ್ವಿದ್ಯಾ ಕಲಿಕಾ ಮನೆಯಲ್ಲಿ ಪ್ರಾರಂಬಿಸಿ, 1931 ಮೆಟ್ರಿಕ್ ಪರೀಕ್ಶೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಮುಂದಿನ ಹಂತಕ್ಕೆ ಕಲಿಕೆಯನ್ನು ಮಯ್ಸೂರಿನ ಮಹಾರಾಜ ಕಾಲೇಜಿನಲ್ಲಿ ಮುಂದುವರೆಸಿದರು. ಬಳಿಕ ಮಯ್ಸೂರಿನ ವಿಶ್ವವಿದ್ಯಾಲಯದಲ್ಲಿ ತರ‍್ಕಶಾಸ್ತ್ರ ವಿಶಯದಲ್ಲಿ ಬಿ. ಎ ಕಲಿಕೆ ಮುಗಿಸಿದರು. ಆ ಕಾಲಕ್ಕೆ ಸಮಾಜಶಾಸ್ತ್ರ ಕಲಿಕೆಯ ವಿಬಾಗ ಅಶ್ಟರಮಟ್ಟಿಗೆ ಬೆಳೆದಿರಲಿಲ್ಲ. ಇಂಡಿಯಾದಲ್ಲಿ ಸಮಾಜಶಾಸ್ತ್ರ ಕಲಿಕೆಯ ವಿಬಾಗವನ್ನು ಮೊದಲಾಗಿ ಮುಂಬಯಿ ವಿಶ್ವವಿದ್ಯಾಲಯ ಪ್ರಾರಂಬಿಸಲಾಯಿತು. ಆ ವಿಬಾಗದ ಮುಕ್ಯಸ್ತರಾದ ಪ್ರೊ. ಜಿ. ಎಸ್. ಗುರ‍್ಯೆಯವರ ಮಾರ‍್ಗದರ‍್ಶನದಲ್ಲಿ ಶ್ರೀನಿವಾಸ್ ರವರು ಸ್ನಾತಕೋತ್ತರ ಪದವಿಯನ್ನು 1938 ರಲ್ಲಿ ಪಡೆದರು. ಮುಂದೆ 1944 ರಲ್ಲಿ ಕೊಡವಮತ-ಸಮಾಜ (ದಿ ಕೂರ‍್ಗ್ಸ್ ಎ ಸೋಶಿಯೋ-ಎತನಿಕ್ ಸ್ಟಡಿ) ಎಂಬ ಮಹಾ ಪ್ರಬಂದ ಬರೆದು ಡಾಕ್ಟರೇಟ್ ಪದವಿಯನ್ನು ಪಡೆದರು.
ಪ್ರೊ. ಎಮ್. ಎನ್. ಶ್ರೀನಿವಾಸ್ ರವರ ಸೇವೆಗಳು :
• ಶ್ರೀನಿವಾಸರವರು 1942 ರಿಂದ 1944 ರವರೆಗೆ ಮುಂಬಯಿ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಬಾಗದಲ್ಲಿ ಸಹಾಯಕ ಅರಕೆಗಾರರಾಗಿ ಸೇವೆ ಸಲ್ಲಿಸಿದರು. ಆದರೆ ಇವರ ಹೆಚ್ಚಿನ ಕೆಲಸಗಳು ಪ್ರೊ. ಗುರ‍್ಯೆ ರವರ ಅರಕೆಗಳಿಗೆ ಮಾಹಿತಿ ತಿಳಿಸಿ ಕೊಡುವುದಾಗಿತ್ತು. ಇದರಿಂದ ಇವರಿಬ್ಬರ ನಂಟು ಅಶ್ಟಾಗಿ ಬೆಳೆಯಲಿಲ್ಲ.
• ಶ್ರೀನಿವಾಸರವರು 1945ರಲ್ಲಿ ಆಕ್ಸ್ ಪರ‍್ಡ್ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ ಮಾನವ ಶಾಸ್ತ್ರ ವಿಬಾಗಕ್ಕೆ ಸೇರಿ, 1948 ರಿಂದ 1951 ರವರೆಗೆ ಬಾರತೀಯ ಸಮಾಜಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.
• 1947 ರಲ್ಲಿ ಆಕ್ಸ್ ಪರ‍್ಡ್ ದಿಂದ ಡಿ. ಪಿಲ್ ಪದವಿ ಪಡೆದು, ಗುರುಗಳಾದ ಪ್ರೊ. ವಾಡಿಯಾರವರ ಸಲಹೆಯಂತೆ ಸಮಾಜಶಾಸ್ತ್ರದ ಪ್ರಾದ್ಯಾಪಕರಾಗಿ ಬರೋಡದ ಎಮ್. ಎಸ್. ವಿಶ್ವವಿದ್ಯಾಲಯವನ್ನು 1952 ರಲ್ಲಿ ಸೇರಿಕೊಂಡರು. ಅಲ್ಲಿ ಹೊಸ ವಿಬಾಗವನ್ನು ಕಟ್ಟುವ ಹಾಗು ಪಟ್ಯಕ್ರಮವನ್ನು ರೂಪಿಸುವ ಕೆಲಸ ಶುರುವಿಡುವುದರ ಜೊತೆಗೆ ಹೊಸ ಅರಕೆಗಳಿಗೆ ಹೆಚ್ಚಿನ ಒತ್ತು ನೀಡಿದರು.
• 1959 ರಲ್ಲಿ ಸಮಾಜಶಾಸ್ತ್ರ ಪ್ರಾದ್ಯಾಪಕರಾಗಿ ದೆಹಲಿ ವಿಶ್ವವಿದ್ಯಾನಿಲಯ ಸೇರಿಕೊಂಡ ಶ್ರೀನಿವಾಸರವರು, ಅಲ್ಲಿನ ಪಟ್ಯಕ್ರಮ ಮತ್ತು ಅರಕೆಗಳಿಗೆ ಹೊಸ ಆಯಾಮ ಒದಗಿಸಿದರು. ಇವರ ಪರಿಶ್ರಮದಿಂದಲೇ ಮುಂದೆ ದೆಹಲಿ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಬಾಗವು ಯು. ಜಿ. ಸಿ (Centre for Advanced Study in Socioligy) ಯಿಂದ ಮಾನ್ಯತೆ ಪಡೆಯಿತು.
• ಶ್ರೀನಿವಾಸರವರು 1972 ರಲ್ಲಿ ಬೆಂಗಳೂರಿನ ‘ಸಾಮಾಜಿಕ ಹಾಗೂ ಹಣಕಾಸಿನ ಬದಲಾವಣೆ ಸಂಸ್ತೆ’ಯಲ್ಲಿ ಜಂಟಿ ನಿರ‍್ದೇಶಕ ಮತ್ತು ಸಮಾಜಶಾಸ್ತ್ರದ ಮುಕ್ಯಸ್ತರಾಗಿ ಸೇರಿಕೊಂಡರು.
ಪ್ರೊ. ಎಮ್. ಎನ್. ಶ್ರೀನಿವಾಸ್ ರವರ ಬರಹಗಳು:
• ಶ್ರೀನಿವಾಸರವರು ತಮ್ಮ ಮೊದಲನೆಯ ಕ್ರುತಿಯಾದ ‘ಮಯ್ಸೂರಿನಲ್ಲಿ ವಿವಾಹ ಹಾಗೂ ಕುಟುಂಬ ( Marriage and Family in Mysore )’ ವನ್ನು 1942ರಲ್ಲಿ ಹೊರತಂದರು. ಈ ಕ್ರುತಿಯಲ್ಲಿ ಪರಸ್ಪರ ವಿರುದ್ದವಾದ ಆಚಾರ ವಿಚಾರ, ಸಂಪ್ರದಾಯ, ನಂಬಿಕೆ, ಮದುವೆ, ಹುಟ್ಟು ಸಾವು, ಉಡುಗೆ ತೊಡುಗೆ, ಮತ್ತು ನಮ್ಮ ನಾಡಿನಲ್ಲಿ ನುಡಿಗಳ ಬಳಕೆಯ ಬಗ್ಗೆ ವಿವರವಾಗಿ ತಮ್ಮ ನಿಲುವನ್ನು ತಿಳಿಸಿದ್ದಾರೆ.
• ಶ್ರೀನಿವಾಸರವರು ‘ದಕ್ಶಿಣ ಬಾರತದಲ್ಲಿ ದರ‍್ಮ ಹಾಗೂ ಸಮಾಜ (Religion and Society among the Coorgs of South India)’ ಎಂಬ ಕ್ರುತಿಯನ್ನು 1952 ರಲ್ಲಿ ಬರೆದರು. ಇಂಡಿಯಾದ ಸಮಾಜಶಾಸ್ತ್ರದ ಬೆಳವಣಿಗೆಯಲ್ಲಿ ಈ ಕ್ರುತಿ ಮಹತ್ತರದ ಪಾತ್ರ ವಹಿಸಿತು. ಅಲ್ಲದೆ ಈ ಕ್ರುತಿ ಶ್ರೀನಿವಾಸರವರಿಗೆ ಬಾರತೀಯ ಸಮಾಜ ಅದ್ಯಾಯನಕ್ಕೆ ಸಂಬಂದಿಸಿದಂತೆ ಒಳ್ಳೆಯ ಹೆಸರು ತಂದುಕೊಟ್ಟಿತು.
• 1950 ರ ಸಮಯದಲ್ಲಿ ಶ್ರೀನಿವಾಸರವರ ಬರಹಗಳು ವಿಶೇಶವಾದ ಹೆಚ್ಚುಗಾರಿಕೆ ಪಡೆದುಕೊಂಡವು. ಚುನಾವಣೆ, ಮತದಾನ, ಮಂದಿಯಾಳ್ವಿಕೆ ಮತ್ತು ರಾಜಕೀಯಕ್ಕೆ ಸಂಬಂದ ಪಟ್ಟ ಬರಹಗಳು ಬಾರತೀಯ ಸಮಾಜಕ್ಕೆ ಹೊಸ ತಿರುವು ನೀಡಿದವು. ಅಲ್ಲದೆ ಜಾತಿ ರಾಜಕೀಯ, ಬಾರತದಲ್ಲಿ ಕೂಡಣದ ಬಾಳ್ವೆ, ಶೋಶಿತರ ಮೇಲಿನ ದಬ್ಬಾಳಿಕೆ , ಮೀಸಲಾತಿ, ಮಹಿಳೆಯರ ಸ್ತಾನಮಾನ, ವರದಕ್ಶಿಣೆಯ ಇಂತಹ ಸಾಮಾಜಿಕ ಪಿಡುಗುಗಳ ವಿರುದ್ದ ‘ಜಾತಿ ವ್ಯವಸ್ತೆಯ ಇತ್ತೀಚಿನ ಒಲವುಗಳು’ ಎಂಬ ಬರಹವನ್ನು ಪ್ರಕಟಿಸಿದರು. ಮತ್ತು 1952 ರಲ್ಲಿ‘ಆದುನಿಕ ಬಾರತದಲ್ಲಿ ಜಾತಿ ಹಾಗೂ ಇತರ ನಿಬಂದಗಳು (Caste in Modern India and Other Essays)’ ಎಂಬ ಹೊತ್ತಿಗೆಯನ್ನು ಬರೆದರು.
• ಶ್ರೀನಿವಾಸರವರ ‘ದಿ ರಿಮೆಂಬರ‍್ಡ್ ವಿಲೇಜ್ (The Remembered Village)’ ಎಂಬ ಕ್ರುತಿಯು ಅವರ ಹೆಸರಾಂತ ಕ್ರುತಿಗಳಲ್ಲೊಂದು. ಈ ಕ್ರುತಿಯು ರಾಮಾಪುರ ಎಂಬ ಹಳ್ಳಿಯಲ್ಲಿ 1948ರಲ್ಲಿ ಇದ್ದಂತಹ ಹಣಕಾಸಿನ ವ್ಯವಸ್ತೆ, ಜಾತಿ-ಬೇದ ಮತ್ತು ಇತರೆ ಕೆಲವು ವಿಶಯಗಳ ಕುರಿತ ಬರಹವಾಗಿತ್ತು.
• ಇದರ ಜೊತೆಗೆ ‘ಬಾರತದ ಗ್ರಾಮಗಳು (Indian Villages)’ ಮತ್ತು ‘ಬಾರತದಲ್ಲಿ ಸಾಮಾಜಿಕ ಬದಲಾವಣೆಯ ವಿಸ್ತೀರ‍್ಣ (Dimensions of Social Change in India)’ ಇವರು ಸಂಪಾದಿಸಿದ ಕ್ರುತಿಗಳು.
ಪ್ರಶಸ್ತಿಗಳು ಮತ್ತು ಗವ್ರವಗಳು:
• ಪ್ರೊ. ಎಮ್. ಎನ್. ಶ್ರೀನಿವಾಸ್ ರವರು ತಮ್ಮ ವಿಶಿಶ್ಟ ಬರವಣಿಗೆಯ ಮೂಲಕ ಬಹಳಶ್ಟು ಪ್ರಶಸ್ತಿಗಳು ಮತ್ತು ಗವ್ರವಗಳನ್ನು ಪಡೆದುಕೊಂಡರು. ಅವುಗಳಲ್ಲಿ 1950 ರಲ್ಲಿ ಶರತ್ ಚಂದ್ರರಾಯ್ ಬಂಗಾರದ ಪದಕವು ಬಾರತೀಯ ಮಾನವಶಾಸ್ತ್ರಕ್ಕೆ ಸಲ್ಲಿಸಿದ ಕೊಡುಗೆಗಳಿಗಾಗಿ ಮತ್ತು 1978ರಲ್ಲಿ ಜಿ.ಎಸ್ ಗುರ‍್ಯೆ ಬಹುಮಾನವನ್ನು ಪಡೆದುಕೊಂಡರು.
‘ಬಾರತೀಯ ಸಮಾಜಶಾಸ್ತ್ರೀಯ ಸಮಾಜ (Indian Sociological Society)’ ಮತ್ತು ‘ಅಕಿಲ ಬಾರತ ಸಮಾಜಶಾಸ್ತ್ರೀಯ ಮಹಾಸಬೆ (All India Sociological Conference)’ ಯನ್ನು ಒಗ್ಗೂಡಿಸಿ ಅವುಗಳಿಗೆ ಉತ್ತಮ ಆಯಾಮ ದೊರಕಿಸಿಕೊಟ್ಟ ಹಿರಿಮೆ ಪ್ರೊ. ಎಮ್. ಎನ್. ಶ್ರೀನಿವಾಸ್ ರವರಿಗೆ ಸಲ್ಲುತ್ತದೆ. ಹೀಗೆ ಹತ್ತು ಹಲವು ಗವ್ರವಗಳು, ಪ್ರಶಸ್ತಿಗಳು, ಬಹುಮಾನಗಳು, ಹುದ್ದೆಗಳು, ಅಂತರಾಶ್ಟ್ರೀಯ ಮನ್ನಣೆಗಳನ್ನು ಪಡೆದು ಸರಳ ಜೀವನವನ್ನು ನಡೆಸುವ ಮೂಲಕ ನಮಗೆಲ್ಲರಿಗೂ ಸ್ಪೂರ‍್ತಿಯಾಗಿರುವ ಪ್ರೊ. ಎಮ್. ಎನ್. ಶ್ರೀನಿವಾಸ್ ರವರು 30-11-1999 ರಲ್ಲಿ ನಮ್ಮನ್ನಗಲಿದರು.
(ಚಿತ್ರ ಸೆಲೆ: vedamsbooks)
ಇತ್ತೀಚಿನ ಅನಿಸಿಕೆಗಳು