ಪುಟಾಣಿ ಮಗುವೇ ಕೇಳು

ಸಿ.ಪಿ.ನಾಗರಾಜ

ಹಳ್ಳಿಗಾಡಿನ ಮಕ್ಕಳಿಗೆ ಒಳ್ಳೆಯ ವಿದ್ಯೆ ದೊರಕುವಂತಾಗಲೆಂಬ ಉದ್ದೇಶದಿಂದ ಗ್ರಾಮೀಣ ಪ್ರದೇಶದಲ್ಲಿ ಶಾಲಾಕಾಲೇಜುಗಳನ್ನು ಕಟ್ಟಿ ಬೆಳೆಸುತ್ತಿರುವ ವಿದ್ಯಾಸಂಸ್ತೆಯ ಒಬ್ಬ ಚೇರ‍್ಮನ್ನರ ಜೀವನದಲ್ಲಿ ನಡೆದ ಪ್ರಸಂಗವಿದು .

ಸುಮಾರು ನಲವತ್ತು ವರುಶಗಳ ಹಿಂದೆ ಕಾಲೇಜನ್ನು ತೆರೆದ ಹೊಸದರಲ್ಲಿ, ಆಯ್ಕೆಗೊಂಡ ಕಾಲೇಜು ಉಪನ್ಯಾಸಕರನ್ನು ಕುರಿತು “ನೀವು ನಮ್ಮ ಹಳ್ಳಿಯ ಮಕ್ಕಳಿಗೆ, ಅವರು ಪ್ರತಿ ನಿತ್ಯ ಮಡಿಬಟ್ಟೆ ಉಟ್ಕೊಂಡು, ಎಣ್ಣೆ ಹಾಕಿ ತಲೆ ಬಾಚ್ಕೊಂಡು, ಕಾಲಿಗೆ ಚಪ್ಪಲಿ ಹಾಕೊಂಡು, ಕಾಲೇಜಿಗೆ ನೀಟಾಗಿ ಬರ‍್ಬೇಕು ಅನ್ನೋದನ್ನ ಮೊದಲು ಒಂದೆರಡು ತರಗತಿಗಳಲ್ಲಿ ಪದೇ ಪದೇ ಹೇಳಿ, ಅನಂತರ ಅವರಿಗೆ ಒಳ್ಳೆಯ ನಡೆನುಡಿಗಳ ತರಬೇತಿ ನೀಡಿ, ಆಮೇಲೆ ಪಾಟಗಳನ್ನು ಕಲಿಸಿ” ಎಂದು ತಮಗಿರುವ ಕಳಕಳಿಯನ್ನು ತೋಡಿಕೊಂಡಿದ್ದರು. ಇವತ್ತಿಗೂ ನಮ್ಮ ಗ್ರಾಮೀಣ ಮಕ್ಕಳು ಪರೀಕ್ಶೆಗಳಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿದಾಗ, ಆಟೋಟಗಳಲ್ಲಿ ಮತ್ತು ಹಾಡುಕುಣಿತ ಚರ‍್ಚಾಕೂಟಗಳಲ್ಲಿ ದೊಡ್ಡದೊಡ್ಡ ಬಹುಮಾನಗಳನ್ನು ಹೊತ್ತು ತಂದಾಗ ಚೇರ‍್ಮನ್ನರು ಪಡುವ ಆನಂದಕ್ಕೆ ಎಣೆಯಿಲ್ಲ.

ಒಂದನೆಯ ತರಗತಿಯಿಂದ ಹಿಡಿದು ಪದವಿ ತರಗತಿಯವರೆಗೆ ಹಬ್ಬಿರುವ ವಿದ್ಯಾಸಂಸ್ತೆಯಲ್ಲಿ ಆಗಿಂದಾಗ್ಗೆ ಅಗತ್ಯವಾಗುವ ಅದ್ಯಾಪಕರ ಹುದ್ದೆಗಳನ್ನು ತುಂಬುವುದಕ್ಕಾಗಿ ನಡೆಯುವ ಸಂದರ‍್ಶನಗಳಲ್ಲಿ ಚೇರ‍್ಮನ್ನರು ಕಡ್ಡಾಯವಾಗಿ ಹಾಜರಾಗುತ್ತಿದ್ದರು . ಜಾತಿ, ಮತ, ಪ್ರಾಂತ್ಯ ಮತ್ತು ತನ್ನ ನೆಂಟರಿಶ್ಟರು ಎಂಬ ಮೋಹದಿಂದ ದೂರವಿರುವ ಚೇರ‍್ಮನ್ನರು “ಮೇಸ್ಟ್ರುಗಳು ಅಂದರೆ … ಮಕ್ಕಳ ನಡೆನುಡಿಗಳನ್ನು ಎಲ್ಲಾ ರೀತಿಯಿಂದಲೂ ಉತ್ತಮವಾಗಿ ರೂಪಿಸುವ ಹೊಣೆಯನ್ನು ಹೊರಬೇಕಾದವರು ” ಎಂಬ ನಿಲುವನ್ನು ಹೊಂದಿದ್ದರು. ಆದುದರಿಂದಲೇ ಒಳ್ಳೆಯ ಅಂಕಗಳನ್ನು ಪಡೆದು ತೇರ‍್ಗಡೆಯಾಗಿರುವ ಮತ್ತು ಸಂದರ‍್ಶನದಲ್ಲಿ ಚೆನ್ನಾಗಿ ಉತ್ತರಗಳನ್ನು ಹೇಳುವವರು ಮತ್ತಾರ ಬೆಂಬಲವೂ ಇಲ್ಲದೆ ಮಾಸ್ತರುಗಳಾಗಿ ಆಯ್ಕೆಗೊಳ್ಳುವುದು ಗ್ಯಾರಂಟಿಯಾಗಿತ್ತು.

ಸಂದರ‍್ಶನಕ್ಕೆಂದು ಬಂದವರಿಗೆ ಚೇರ‍್ಮನ್ನರು ಯಾವಾಗಲೂ ಕೇಳುತ್ತಿದ್ದುದು ಒಂದೇ ಬಗೆಯ ಕೇಳ್ವಿ. ಅದೇನೆಂದರೆ “ನೋಡಿ… ನನ್ನನ್ನು ಮತ್ತು ಇಲ್ಲಿ ನನ್ನ ಅಕ್ಕಪಕ್ಕದಲ್ಲಿ ಕುಳಿತಿರುವ ಆಯ್ಕೆ ಸಮಿತಿಯ ಸದಸ್ಯರನ್ನು… ನಿಮ್ಮ ವಿದ್ಯಾರ‍್ತಿಗಳೆಂದು ತಿಳಿದುಕೊಂಡು, ನಮಗೆ ಚೆನ್ನಾಗಿ ಮನದಟ್ಟಾಗುವಂತೆ ನೀವು ಪರಿಣತಿಯನ್ನು ಪಡೆದಿರುವ ವಿಶಯವನ್ನು ಕುರಿತು ಹತ್ತು ನಿಮಿಶಗಳ ಕಾಲ ಪಾಟ ಮಾಡಿ ” ಎಂದು ಕೇಳುತ್ತಿದ್ದರು. ಆಗ ಉದ್ಯೋಗವನ್ನು ಅರಸಿ ಬಂದವರು ಆಡುವ ಮಾತುಗಳ ರೀತಿ, ಅದಕ್ಕೆ ಪೂರಕವಾಗಿ ಕಂಡು ಬರುವ ಲವಲವಿಕೆಯ ಚಲನವಲನ ಮತ್ತು ವಿಶಯ ನಿರೂಪಣೆಯಲ್ಲಿನ ಅಚ್ಚುಕಟ್ಟುತನವನ್ನು ಗಮನಿಸಿ, ಪ್ರತಿಬಾವಂತರಾಗಿ ಕಂಡುಬಂದವರನ್ನು, ಇತರ ಯಾವುದೇ ಒತ್ತಡಗಳಿಗೂ ಮಣಿಯದೇ, ಕೂಡಲೇ ಆಯ್ಕೆ ಮಾಡುತ್ತಿದ್ದರು.

ಒಮ್ಮೆ ಒಂದರಿಂದ ನಾಲ್ಕನೆಯ ತರಗತಿಯವರೆಗೆ ನಡೆಯುತ್ತಿರುವ ಶಾಲೆಗೆ ಅದ್ಯಾಪಕಿಯರ ಆಯ್ಕೆ ನಡೆಯುತ್ತಿತ್ತು. ಎಂದಿನಂತೆ ಚೇರ‍್ಮನ್ನರು ಆಯ್ಕೆ ಸಮಿತಿಯ ಇತರ ನಾಲ್ಕಾರು ಸದಸ್ಯರೊಡನೆ ಕುಳಿತಿದ್ದರು. ಚೇರ‍್ಮನ್ನರಿಗೆ ಸಿಗರೇಟು ಸೇದುವ ಚಟವಿತ್ತು. ಸಂದರ‍್ಶನ ನಡೆಯುತ್ತಿರುವಾಗಲೇ, ಆಗಿಂದಾಗ್ಗೆ ಸಿಗರೇಟನ್ನು ಹಚ್ಚುತ್ತಿದ್ದರು. ಒಬ್ಬ ಹೆಣ್ಣುಮಗಳು ಒಳಕ್ಕೆ ಬಂದಾಗ ಸಿಗರೇಟನ್ನು ಸೇದುತ್ತಾ ಕುಳಿತಿದ್ದ ಚೇರ‍್ಮನ್ನರು, ಅವಳನ್ನು ಕುರಿತು-
“ನೋಡಮ್ಮ, ನಿನ್ನ ಮುಂದೆ ಇರುವ ನನ್ನನ್ನು ಮತ್ತು ನನ್ನ ಜತೆ ಕುಳಿತಿರುವ ಇವರೆಲ್ಲರನ್ನೂ… ಒಂದನೇ ಕ್ಲಾಸಿನ ಪುಟಾಣಿ ಮಕ್ಕಳು ಅಂತ ತಿಳ್ಕೊಂಡು… ನಮಗೆ ಚೆನ್ನಾಗಿ ತಿಳಿಯುವಂತೆ… ಒಂದು ಹತ್ತು ನಿಮಿಶ ಏನಾದ್ರು ಪಾಟ ಮಾಡಮ್ಮ ” ಎಂದರು. ಈಗ ಮತ್ತೊಮ್ಮೆ ಚೇರ‍್ಮನ್ನರು ಸೇದಿ ಬಿಟ್ಟ ಸಿಗರೇಟಿನ ಹೊಗೆಯು ಕೊಟಡಿಯ ಒಂದು ಬದಿಯಲ್ಲಿ ಹಬ್ಬುತ್ತಿರುವುದನ್ನು ನೋಡುತ್ತಾ, ಆಕೆಯು ಸುಮ್ಮನೆ ಕುಳಿತಿದ್ದಳು.

“ಯಾಕಮ್ಮ ?… ಸುಮ್ಮನೆ ಕುಳಿತುಬಿಟ್ಟೆ… ನಮ್ಮನ್ನು ಪುಟಾಣಿ ಮಕ್ಕಳು ಅಂತ ಊಹಿಸಿಕೊಂಡು… ಏನಾದ್ರು ಒಂದು ಹೇಳಮ್ಮ ” ಎಂದು ಉತ್ತೇಜಿಸುವ ದನಿಯಲ್ಲಿ ನುಡಿದರು. ಈಗ ಆಕೆಯು ಚೇರ‍್ಮನ್ನರ ಮತ್ತು ಆಯ್ಕೆ ಸಮಿತಿಯ ಸದಸ್ಯರನ್ನು ಒಮ್ಮೆ ಕಣ್ತುಂಬ ನೋಡಿ, ನಗುಮೊಗದಿಂದ ಮಾತನಾಡತೊಡಗಿದಳು.

“ಪುಟಾಣಿ ಮಕ್ಕಳೇ… ಇವತ್ತು ನೀವೆಲ್ಲಾ ಬಣ್ಣಬಣ್ಣದ ಬಟ್ಟೆಗಳನ್ನು ತೊಟ್ಕೊಂಡು ಶಾಲೆಗೆ ಬಂದಿದ್ದೀರಿ… ಇಲ್ಲಿ ನೀವೆಲ್ಲಾ ಚೆನ್ನಾಗಿ ಆಟ ಆಡ್ಕೊಂಡು ನಗನಗ್ತಾ ಇರ‍್ಬೇಕು… ಅಆ ಇಈ ಉಊ ಅಂತ ಬಾಯಲ್ಲಿ ಹೇಳ್ಕೊಂಡು… ಕನ್ನಡದ ಅಕ್ಶರಗಳನ್ನು ಕಲಿಯುತ್ತಾ… ಜೊತೆಜೊತೆಗೆ ಒಳ್ಳೆಯ ಬುದ್ದಿಯನ್ನು ಪಡೀಬೇಕು… ನಾನು ಹೇಳ್ತಾಯಿರೋದು ಏನು ಅಂತ ಗೊತ್ತಾಯ್ತ ? ” ಎಂದು ನುಡಿಯುತ್ತಾ, ಈಗ ಚೇರ‍್ಮನ್ನರನ್ನೇ ನೇರವಾಗಿ ನೋಡುತ್ತಾ-

“ಇಶ್ಟು ಚಿಕ್ಕ ವಯಸ್ಸಿನಲ್ಲೇ ನೀನು ಸಿಗರೇಟು ಸೇದುವುದನ್ನು ಕಲ್ತಿದ್ದೀಯಲ್ಲಪ್ಪ !… ಯಾರಪ್ಪ ನಿಂಗೆ ಕಲಿಸಿದವರು ?… ಇದು ಕೆಟ್ಟದ್ದು ಮಗು… ಈ ಚಟ ಒಳ್ಳೇದಲ್ಲ… ಈಗ ನಿನ್ನ ಕಯ್ಯಲ್ಲಿರುವ ಸಿಗರೇಟನ್ನು ಬಿಸಾಕಪ್ಪ… ಮುಂದೆ ನೀನು ತುಂಬಾ ಒಳ್ಳೆಯ ಹುಡುಗನಾಗಿ ಬೆಳೆಯಬೇಕು ” ಎಂದು ಹೇಳುತ್ತಿದ್ದಂತೆಯೇ, ಚೇರ‍್ಮನ್ನರು ತಮ್ಮ ಮುಂದಿದ್ದ ಆಶ್ಟ್ರೇನಲ್ಲಿ ಸಿಗರೇಟನ್ನು ಹೊಸಕಿ ಹಾಕಿ… ತುಂಬಾ ಆನಂದದಿಂದ ಮುಗುಳುನಗೆಯನ್ನು ಬೀರುತ್ತಾ-

“ಶಹಬ್ಬಾಸ್ ! ನಿನ್ನ ದಿಟ್ಟತನ ನನಗೆ ಮೆಚ್ಚುಗೆಯಾಯ್ತಮ್ಮ. ಮಕ್ಕಳ ನಡೆನುಡಿಯಲ್ಲಿ ಕೆಟ್ಟದ್ದನ್ನು ಕಂಡ ಕೂಡಲೇ… ಅದನ್ನು ಗುರುತಿಸಿ ತಾಳ್ಮೆಯಿಂದ ತಿದ್ದಿ ಸರಿಪಡಿಸುವ ಗುಣ ನಿನ್ನಲ್ಲಿದೆ. ಮುಂದಕ್ಕೆ ನೀನು ಒಳ್ಳೇ ಟೀಚರ್ ಆಗ್ತೀಯ” ಎಂದು ಬಾಯ್ತುಂಬ ಹೊಗಳಿ ಕೊಂಡಾಡುತ್ತಾ, ಆಕೆಯನ್ನು ಅದ್ಯಾಪಕಿಯಾಗಿ ನೇಮಕ ಮಾಡಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.