ಇಂಗ್ಲೆಂಡಿನ ಹಿನ್ನಡವಳಿಯಿಂದ ಕಲಿಯಬೇಕಾದ ಪಾಟ

– ಅನ್ನದಾನೇಶ ಶಿ. ಸಂಕದಾಳ.

ಬಾರತವನ್ನು ಹಲವಾರು ವರುಶಗಳ ಕಾಲ ಇಂಗ್ಲೆಂಡ್ ದೇಶದವರು ಆಳಿದ್ದನ್ನು ನಾವು ಬಲ್ಲೆವು. ಬ್ರಿಟೀಶರು ಒತ್ತಿದ ಚಾಪು ಹೇಗಿದೆ ಅಂದರೆ ಅವರು ಬಾರತ ಬಿಟ್ಟು ಹೋದರೂ, ಅವರ ನುಡಿಯಾದ ಇಂಗ್ಲೀಶ್ ಜನರ ಬದುಕಿನಲ್ಲಿ ಇನ್ನೂ ಹೆಚ್ಚು ಹಾಸುಹೊಕ್ಕಾಗುತ್ತಿದೆ. ಬಾರತದಲ್ಲಿ ಇಂದಿಗೂ, ಕಲಿಕೆಯ ಒಯ್ಯುಗೆ (medium) ಇಂಗ್ಲೀಶಿನಲ್ಲಿರಬೇಕು ಎಂಬುದರ ಬಗ್ಗೆ ಹಲವಾರು ಚರ್‍ಚೆಗಳನ್ನು, ವಿವಾದಗಳನ್ನೂ ಹುಟ್ಟಿ ಹಾಕಿರುವ ಮಟ್ಟಿಗೆ ಇಂಗ್ಲೀಶ್ ಈ ದೇಶವನ್ನು ಆವರಿಸಿದೆ ಎಂದರೆ ಆ ನುಡಿಯ ಅಳವಿನ ( capacity ) ಬಗ್ಗೆ ಅಂದಾಜು ಸಿಗುತ್ತದೆ. ಇಂಗ್ಲೀಶ್ ನುಡಿ ಆ ಮಟ್ಟ ತಲುಪಿ ಇಂದು ಅದಕ್ಕೆ ಆ ಪಟ್ಟ ಸಿಕ್ಕಿದೆಎಂಬುದನ್ನು ಯಾರೂ ಅಲ್ಲಗಳೆಯಲಾರರು. ಆದರೆ ಇಂಗ್ಲೀಶಿನ ತವರೂರಾದ ಇಂಗ್ಲೆಂಡ್ ನಾಡಿನಲ್ಲೂ ಕೂಡಾ ಇಂತದೇ ಒಂದು ಸ್ತಿತಿ ಉಂಟಾಗಿತ್ತು, ಇಂಗ್ಲೆಂಡೂ ಕೂಡ ಒಂದು ಕಾಲದಲ್ಲಿ ಬೇರೆಯವರ ಮತ್ತು ಬೇರೆ ನುಡಿಯಲ್ಲಿನ ಆಳ್ವಿಕೆಗೆ ಒಳಗಾಗಿತ್ತು ಎಂಬುದರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ.

ಹವ್ದು, ಅದು ಪ್ರೆಂಚರ ಆಳ್ವಿಕೆ:
ಸರಿ ಸುಮಾರು ನಾಲ್ಕನೇ ಶತಮಾನದ ಕೊನೆಯಲ್ಲಿ ಅತವಾ ಅಯ್ದನೇ ಶತಮಾನದ ಶುರುವಿನಲ್ಲಿ ರೋಮನ್ನರ ಸಾಮ್ರಾಜ್ಯ ಕೊನೆಗೊಂಡು ಆ ಸಾಮ್ರಾಜ್ಯದಿಂದ ಹೊರಬಂದು ಇಂಗ್ಲೆಂಡ್ ಬೇರೆ ನಾಡಾಯಿತು ಎಂದು ಹಿನ್ನಡವಳಿ(history) ಹೇಳುತ್ತದೆ. ಹೀಗೆ ಇರವು (existence) ಕಂಡುಕೊಂಡ ಇಂಗ್ಲೆಂಡನ್ನು, ಆಂಗ್ಲೋ-ಸ್ಯಾಕ್ಸನ್ ಎಂಬ ಬಡಗಣ ಯುರೋಪಿನ ಪಂಗಡಕ್ಕೆ ಸೇರಿದ ಮಂದಿ ಅರಸುನಾಡುಗಳನ್ನು ಕಟ್ಟಿಕೊಂಡು ಆಳಲು ಶುರು ಮಾಡಿದರು. ಈ ಅರಸರು ಈ ಹಿಂದೆ ರೋಮನ್ನರ ಆಳ್ವಿಕೆಯಲ್ಲಿದ್ದ ‘ಬ್ರಿಟಿಶ್’ ನುಡಿಯನ್ನು ತೆಗೆದು ‘ಹಳೆ ಇಂಗ್ಲೀಶ್’ ನುಡಿಯನ್ನು ಇಂಗ್ಲೆಂಡಿನಲ್ಲಿ ನೆಲೆಗೊಳಿಸಿದರು. ಹಲವಾರು ಅರಸುನಾಡುಗಳನ್ನು ಹೊಂದಿದ್ದ ಇಂಗ್ಲೆಂಡನ್ನು, ಆ ಎಲ್ಲಾ ಅರಸುನಾಡುಗಳನ್ನು ಒಟ್ಟು ಸೇರಿಸಿ ‘ಕಿಂಗ್ಡಂ ಆಪ್ ಇಂಗ್ಲೆಂಡ್‘ ಎಂದು ಹತ್ತನೇ ಶತಮಾನದಲ್ಲಿ ಮಾಡಲಾಯಿತು.

ಆದರೆ ಹನ್ನೊಂದನೇ ಶತಮಾನದ ಶುರುವಿನ ಕ್ರಿ.ಶ. 1066 ರಲ್ಲಿ ಪ್ರಾನ್ಸ್ ನಾಡಿನ ಬಡಗಣ ಕರಾವಳಿಯ ನಾರ್‍ಮಂಡಿ ಎಂಬ ಪ್ರಾಂತದ ಅರಸನಾದ ವಿಲಿಯಂ, ಇಂಗ್ಲೆಂಡಿನ ಅರಸನಾದ ಹೆರಾಲ್ಡನನ್ನು ಮೋಸದಿಂದ ಸೋಲಿಸಿ ಇಂಗ್ಲೆಂಡನ್ನು ಗೆಲ್ಲುತ್ತಾನೆ. ಇಲ್ಲಿಂದ ಶುರುವಾಗುತ್ತದೆ ಪ್ರೆಂಚರ ಆಳ್ವಿಕೆ ಇಂಗ್ಲೆಂಡಿನಲ್ಲಿ.

ಆಡಳಿತ ನುಡಿ ಪ್ರೆಂಚ್:
ನಾರ್‍ಮನ್ನರು (ನಾರ್‍ಮಂಡಿಯ ಮಂದಿ) ಇಂಗ್ಲೆಂಡಿನಲ್ಲಿ ಎಣಿಕೆಯಲ್ಲಿ ಕಡಿಮೆ ಇದ್ದಿದ್ದರೂ ಕೂಡ ಪ್ರೆಂಚ್ ನುಡಿಯನ್ನು ಬಳಸಿಯೇ ಆಡಳಿತ ನಡೆಸಲು ಶುರುವಿಟ್ಟುಕೊಂಡರು. ನಾರ್‍ಮನ್ನರಿಗೆ ಇಂಗ್ಲೀಶ್ ಕಲಿಯುವುದು ಕಡ್ದಾಯವಾಗಿರಲಿಲ್ಲ ಕಾರಣ ಅಳುವ ಮಂದಿ ಅವರೇ ಆಗಿದ್ದುದರಿಂದ! ಒಂದು ಸಮಾಜ ಅಂತಾದ ಮೇಲೆ ಮೇಲ್ವರ್‍ಗ ಅನ್ನುವುದು ಹುಟ್ಟು ಪಡೆಯುವುದು ಮತ್ತು ಆ ಮಂದಿ ಆಳುವ ಜನರಿಗೆ ಹತ್ತಿರವಾಗಿಯೇ ಇರಲು ಪ್ರಯತ್ನಿಸುವುದು, ತಮ್ಮ ಸಾಮಾಜಿಕ ಸ್ತಾನಮಾನ ಗಟ್ಟಿಗೊಳಿಸಲು – ಹಣಕಾಸಿನ ವಿಚಾರಗಳಲ್ಲಿ ಹೆಚ್ಚಿನ ಅನುಕೂಲ ಪಡೆಯಲು ಅದನ್ನು ಒದಗಿಸಿಕೊಡುವಂತ ನುಡಿಗೆ ಮೊರೆ ಹೋಗುವುದು – ಬಹುಶ ಇವೆಲ್ಲ ಮನುಶ್ಯನ ಹುಟ್ಟುಗುಣ ಇರಬಹುದೇನೋ ಅಂತ ಅನಿಸುತ್ತದೆ. ಹೆಚ್ಚಿನ ಜನರ ನುಡಿ ಮತ್ತು ತಮ್ಮ ನುಡಿ, ಇಂಗ್ಲೀಶ್ ಆಗಿದ್ದರೂ ಇಂಗ್ಲೆಂಡಿನ ಮೇಲ್ವರ್‍ಗದವರು, ಪ್ರೆಂಚ್ ನುಡಿ – ನಾಗರೀಕರ ನುಡಿಯೆಂದೂ, ಇಂಗ್ಲೀಶ್  ಅನಾಗರೀಕ ಮತ್ತು ಸಮಾಜದ ಕೆಳಜನರ ನುಡಿ ಅನ್ನುವ ನಿಲುವು ಹೊಂದಹತ್ತಿದರು. ತಮ್ಮ ವಹಿವಾಟುಗಳಿಗೆ ದಕ್ಕೆ ಬರದಂತೆ ಆಳುವ ಅರಸರ ಒಲವು ಗಳಿಸಲು ಪ್ರೆಂಚ್ ನುಡಿಯನ್ನು ಬಳಸಲು ಶುರು ಮಾಡಿದ್ದರು.

ಇಂಗ್ಲೀಶ್ ನುಡಿ ಆಡುವ ಎಲ್ಲರೂ ಒಂದೇ ಜನಾಂಗದವರಾಗಿದ್ದರೂ ಕೂಡ ತಾವು ಉಳಿದವರಿಗಿಂತ ಬೇರೆ ಎಂದು ತೋರಿಸಿಕೊಳ್ಳಲು ಪ್ರೆಂಚ್ ನುಡಿ ಹೆಚ್ಚು ಬಳಸಲು ಶುರು ಮಾಡಿದರು. ಇಂಗ್ಲೀಶರ ಮತ್ತು ಪ್ರೆಂಚರ ನಡುವೆ ನಡೆದ ಮದುವೆಗಳು, ಕೊಡು-ತೊಗೊಳ್ಳುವ ನಂಟುಗಳು ಪ್ರೆಂಚ್ ನುಡಿಯ ಸ್ತಾನವನ್ನು ಇಂಗ್ಲೆಂಡಿನಲ್ಲಿ ಗಟ್ಟಿಗೊಳಿಸುತ್ತಾ ಹೋದವು. ನಾರ್‍ಮನ್ನರ ಆಳ್ವಿಕೆಯಲ್ಲಿ ಪ್ರೆಂಚ್ ನುಡಿಗೆ ಹೆಚ್ಚು ಒತ್ತು ಸಿಕ್ಕಿದ್ದು ಮತ್ತು ಪ್ರೆಂಚ್ ನುಡಿ ಬಳಕೆಗೆ ಹೆಚ್ಚಿನ ಬೆಂಬಲ ಸಿಕ್ಕಿದ್ದು, ಇಂಗ್ಲೀಶ್ ತಾಯ್ನುಡಿಯ ಇಂಗ್ಲೆಂಡ್ ಸಮಾಜವನ್ನು ‘ಪ್ರೆಂಚ್ ಬಲ್ಲವರು’ ಮತ್ತು ‘ಪ್ರೆಂಚ್ ಬಾರದವರು’ ಎಂದು ಎರಡು ಬಾಗ ಮಾಡುವಂತಹ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿತು. ಇಂಗ್ಲೆಂಡಿನ ಮೇಲ್ವರ್‍ಗದವರು ತಮ್ಮ ನಿತ್ಯ ವ್ಯವಹಾರಗಳಲ್ಲಿ ಪ್ರೆಂಚ್ ನುಡಿಯನ್ನು ಬಳಸುವುದು ಸುಮಾರು ಹದಿಮೂರನೇ ಶತಮಾನದ  ಶುರುವಾಗುವವರೆಗೂ ಮುಂದುವರೆಯಿತು ( ಸುಮಾರು ಇನ್ನೂರು ವರುಶಗಳವರೆಗೂ ) ಎಂದು ಹಿನ್ನಡವಳಿ ತಿಳಿಸುತ್ತದೆ.

ಇಂಗ್ಲೀಶ್ ಸ್ತಿತಿ ‘ಆಮೇಲೆ’: 
ಇಂಗ್ಲೆಂಡಿನಲ್ಲಿ ಪ್ರೆಂಚರ ಆಳ್ವಿಕೆ ಕೊನೆಗೊಂಡು, ಇಂಗ್ಲೀಶರೇ ತಮ್ಮ ಜನರನ್ನು ಆಳತೊಡಗಿದಾಗ, ಇಂಗ್ಲೀಶ್ ನುಡಿಯ ಬಳಕೆ ಎಲ್ಲೆಡೆ ಹಬ್ಬಿತು. ತಮ್ಮ ನುಡಿಯಲ್ಲಿಯೇ ಎಲ್ಲ ಕೆಲಸವೂ ನಡೆಯುವಂತಹ ಏರ್‍ಪಾಡು ಮೂಡಿದ್ದರಿಂದ, ಹಂತ ಹಂತವಾಗಿ ಇಂಗ್ಲೀಶು ಜನರ ಏಳಿಗೆಗೂ ಕಾರಣವಾಯಿತು. ತನ್ನನ್ನು ಆಳಿದ್ದ ಪ್ರೆಂಚನ್ನು ಮೀರಿ, ಹಲವಾರು ದೇಶಗಳನ್ನು ಇಂಗ್ಲೀಶರು ಹೆಚ್ಚಿನ ಕಾಲ ಆಳುವ ಮಟ್ಟಕ್ಕೆ ಇಂಗ್ಲೀಶ್ ಬೆಳೆಯಿತು. ಒಂದು ಕಾಲದಲ್ಲಿ ತನ್ನ ನಾಡಿನಲ್ಲೇ ಪರಕೀಯವಾಗಿದ್ದ ನುಡಿ ಇಂದು ಯಾವ ಮಟ್ಟಕ್ಕೆ ಬೆಳೆದಿದೆ ಎಂಬುದನ್ನು ಇಡೀ ಜಗತ್ತು ಕಂಡಿದೆ. ಅರಿಮೆ-ಅರಕೆ-ಕಲಿಕೆ-ಚಳಕದರಿಮೆ ಹೀಗೆ ಎಲ್ಲವೂ ಇಂಗ್ಲೀಶಿನಲ್ಲಿ ಸಿಗುತ್ತದಲ್ಲದೇ, ಜಾಗತಿಕ ವ್ಯವಹಾರಗಳೆಲ್ಲಾ ಇಂಗ್ಲೀಶಿನಲ್ಲೇ ನಡೆಯುವಂತಾಗಿದೆ. ಏಳಿಗೆ ಹೊಂದುತ್ತಿರುವ ಬಹುತೇಕ ನಾಡುಗಳು ತಮ್ಮ ಏಳಿಗೆಗೆ ಇಂಗ್ಲೀಶ್ ಬೇಕೇ ಬೇಕು ಅನ್ನುವ ನಿಲುವು ತಾಳುತ್ತಿರುವುದು ಇಂಗ್ಲೀಶಿನ ಬಲವನ್ನು ತೋರಿಸುತ್ತದೆ. ತಮ್ಮ ನುಡಿಗೆ ಈ ಮಟ್ಟಿನ ಕಸುವು ತುಂಬಿರುವುದರಲ್ಲಿ ಇಂಗ್ಲೀಶರ ಶ್ರಮ ಬಹಳಶ್ಟಿದೆ ಮತ್ತು ಅದನ್ನು ಮೆಚ್ಚಲೇಬೇಕು.

ಕನ್ನಡಿಗರು ಅರಿಯಬೇಕಾದುದು:
ಇಂಗ್ಲೀಶ್ ಯಾವುದೇ ಒಂದು ಬೇರೆ ಗ್ರಹದಲ್ಲಿರುವವರ ನುಡಿಯಲ್ಲ. ಬೂಮಿಯ ಮೇಲೆ ಇರುವ ಒಂದು ನಾಡಿನ ಮಂದಿಯ ತಾಯ್ನುಡಿಯೇ ಆಗಿದೆ. ಇಂಗ್ಲೀಶ್ ಇಶ್ಟೆಲ್ಲಾ ಬೆಳವಣಿಗೆ ಹೊಂದಿದ್ದರೂ ಇಂಗ್ಲೀಶ್ ಮಾತನಾಡುವ ನಾಡಿನ ಸರಿ ಸಮಾನರಾಗಿ ಏಳಿಗೆ ಹೊಂದಿದ ನಾಡುಗಳೂ ಹಲವಾರಿವೆ. ಎತ್ತುಗೆಗೆ : ಜಪಾನ್, ಜರ್‍ಮನಿ, ಇಸ್ರೇಲ್. ಈ ನಾಡುಗಳೂ ಕೂಡ ತಮ್ಮ ತಮ್ಮ ತಾಯ್ನುಡಿಗಳಿಗೆ ಹೆಚ್ಚಿನ ಒತ್ತು ಕೊಟ್ಟು ಅವುಗಳ ಸುತ್ತ ಏಳಿಗೆಗೆ ಬೇಕಾದ ಎಲ್ಲವನ್ನೂ ಕಟ್ಟಿಕೊಂಡಿರುವುದು ನಮ್ಮ ಕಣ್ಣು ಮುಂದೆಯೇ ಇದೆ.

ಇದರಿಂದೆಲ್ಲ ತಿಳಿಯುವುದು ಏನೆಂದರೆ,  ನಾಡಿನ ನಾಳೆಗಳಿಗೆ ಗಟ್ಟಿಯಾದ ಬುನಾದಿ  ತಾಯ್ನುಡಿಯಿಂದ ಮಾತ್ರವೇ ಸಿಗುವುದು. ಈಗಿನ ಕನ್ನಡದ ಸ್ತಿತಿ ಮತ್ತು ಈ ಹಿಂದೆ ಇಂಗ್ಲೀಶ್ ನುಡಿ, ಪ್ರೆಂಚರ ಕಯ್ಲಿ ಪಟ್ಟ ಪಾಡು, ಎರಡೂ ಬೇರೆ ಏನೂ ಅಲ್ಲ. ಒಂದೇ ಜನಾಂಗದವರಾಗಿದ್ದರೂ ಕೂಡ ತಾವು ಉಳಿದವರಿಗಿಂತ ಬೇರೆ ಎಂದು ತೋರಿಸಿಕೊಳ್ಳಲು ಬೇರೆ ನುಡಿ ಬಳಸುವ ಮನಸ್ತಿತಿಯೂ ನಮ್ಮ ಮಂದಿಯಲ್ಲಿರೋದು ಗೊತ್ತಿರುವ ವಿಶಯವೇ ಆಗಿದೆ. ಆದರೆ, ಕನ್ನಡ ನುಡಿಗೆ ಹೆಚ್ಚಿನ ಕಸುವು  ತುಂಬುವ ಕೆಲಸ ಕನ್ನಡಿಗರಿಂದಲೇ ಆಗಬೇಕು. ಇದು ರಾತ್ರೋ ರಾತ್ರಿ ಆಗುವಂತ ಕೆಲಸ ಅಲ್ಲ ಎಂಬುದೂ ಗೊತ್ತಿರಬೇಕಾದ ದಿಟ. ಸರಿಯಾದ ದೂರಗಾಮಿ ಹಮ್ಮುಗೆಗಳು, ತಾಳ್ಮೆ, ಹಟ, ಚಲ, ಕನ್ನಡಿಗರ ನಡುವೆ ಒಗ್ಗಟ್ಟು – ಇವೆಲ್ಲವನ್ನು ಒಟ್ಟುಗೂಡಿಸಿ ಕೆಲಸ ಮಾಡಿದರೆ ಕನ್ನಡಕ್ಕೆ ಅಂತ ಕಸುವು ಬಂದೇ ಬರುತ್ತದೆ. ಯಾಕೆಂದರೆ ಕನ್ನಡದವರೂ ಕೂಡ ಬೇರೊಂದು ನುಡಿಯಾಡುವ ಮಂದಿಯ ಆಳ್ವಿಕೆಗೆ ಒಳಪಟ್ಟವರೇ!

(ಮಾಹಿತಿ ಸೆಲೆwikipedia, orbilat.com)

(ಚಿತ್ರ ಸೆಲೆ: star-ts)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: