ಓಡಿಸುಗನಿಲ್ಲದ ಗೂಗಲ್ ಕಾರು
ಗೂಗಲ್ – ಎಲ್ಲರಿಗೂ ಗೊತ್ತಿರುವ ಹೆಸರು. ಮಿಂಬಲೆಯಲ್ಲಿ ನಿಮಗೆ ಏನು ಬೇಕು ಅದನ್ನು ಹುಡುಕಿಕೊಡುವ ಎಲ್ಲರ ನೆಚ್ಚಿನ ಸಂಗಾತಿಯೆಂದರೆ ತಪ್ಪಲ್ಲ. ಕಳೆದ ನಾಲ್ಕಾರು ವರುಶಗಳಿಂದ ಕ್ಯಾಲಿಪೋರ‍್ನಿಯಾದ (California) ಗೂಗಲ್ ಸಂಸ್ತೆ ಕೆಲವು ಕಾರು ತಯಾರಕ ಕೂಟಗಳೊಂದಿಗೆ ಸೇರಿಕೊಂಡು ಓಡಿಸುಗನಿಲ್ಲದೇ ತನ್ನಿಂದ ತಾನೇ ಓಡುವ ಕಾರು ಮಾಡುವಲ್ಲಿ ತೊಡಗಿಕೊಂಡಿದ್ದು, ಅದರ ಬಗ್ಗೆ ಈ ಹಿಂದಿನ ಬರಹವೊಂದರಲ್ಲಿ ವಿವರ ನೀಡಲಾಗಿತ್ತು. ಸರ‍್ಕಾರಿ ಸಂಸ್ತೆಗಳು, ಮಂದಿಯಾಳ್ವಿಗರು ಮತ್ತು ಸಾಮಾನ್ಯ ಮಂದಿಯ ಬೇಕು ಬೇಡಗಳ ನಡುವೆ ಗೂಗಲ್ ಕೂಟ ಈ ಓಡಿಸುಗನಿಲ್ಲದ ಕಾರುಗಳನ್ನು ಬೀದಿಗೆ ತರುವಲ್ಲಿ ಹಂತ ಹಂತವಾಗಿ ಗೆಲುವು ಕಾಣುತ್ತಿದೆ.
ಇತ್ತೀಚಿಗೆ ಇಂತಹವೊಂದು ಓಡಿಸುಗನಿಲ್ಲದ ಕಾರು ಮಾದರಿಯನ್ನು ತಯಾರಿಸಿ ಹಲವಾರು ಮಂದಿಯನ್ನು ಕೂರಿಸಿಕೊಂಡು ಅವರಿಗೆ ಕಾರಿನ ಮೊದಲ ಅನುಬವ ನೀಡುವಲ್ಲಿ ಗೂಗಲ್ ಮತ್ತೆ ಗೆಲುವು ಕಂಡಿದೆ. ಈ ಕಾರಿನಲ್ಲಿ ಸುಮ್ಮನೆ ಕುಳಿತು ಜುಮ್ಮನೆ ಓಡಾಡಿದ ಮಂದಿ ಬಲು ಮೆಚ್ಚುಗೆಯ ಮಾತುಗಳನ್ನಾಡಿದ್ದು ಗೂಗಲ್‍ನ ಹುರುಪು ಇಮ್ಮಡಿಯಾಗುವಂತೆ ಮಾಡಿದೆ.
ಈಗಾಗಲೇ ಇಂತಹ ಒಂದುನೂರು ಮಾದರಿ ಕಾರುಗಳನ್ನು ತಯಾರಿಸುವ ಕೆಲಸ ಬಿರುಸಿನಿಂದ ಸಾಗಿದ್ದು, ಇವುಗಳನ್ನು ಕ್ಯಾಲಿಪೋರ‍್ನಿಯಾದಲ್ಲಿ ಓಡಿಸುವ ಗುರಿ ಗೂಗಲ್ನದ್ದು. ಇದರ ಸಲುವಾಗಿ ಈ ಮೊದಲ 100 ಮಾದರಿಗಳು ಗೂಗಲ್ ನ ಕ್ಯಾಲಿಪೋರ‍್ನಿಯಾದ ಕೆಲಸಿಗರ ಕಯ್ ಸೇರಲಿವೆ.
ತಮ್ಮ ಕೆಲಸಿಗರು ನೀಡುವ ಹಿನ್ನುಣಿಕೆಯಂತೆ ಕಾರುಗಳನ್ನು ಮತ್ತಶ್ಟು ಸುದಾರಿಸಿ ಆಮೇಲೆ ಮಾರುಕಟ್ಟೆಗೆ ಲಗ್ಗೆ ಇಡುವುದು ಗೂಗಲ್ ಕೂಟದ ಮಹದಾಸೆ. ಹಾಗಾದರೆ ಗೂಗಲ್ ಕಾರು ತಯಾರಿಕೆಯ ಕಯ್ಗಾರಿಕೆಗೆ ಕಯ್ ಹಾಕುವುದೇ ಎಂಬುದು ಹಲವರ ಕೇಳ್ವಿ? ಇದಕ್ಕೆ ಮೊದಲು ಹೊಸ ಸಾರಿಗೆ ನಿಯಮ ಜಾರಿಗೆ ತರುವುದು ಮತ್ತು ಈ ಚಳಕವನ್ನು ಜಗತ್ತಿನ ಪ್ರಮುಕ ಕಾರು/ಬಂಡಿ ತಯಾರಕ ಜೊತೆಯಾಗಿ ಬೆಳೆಸುವುದು ಎಂಬ ಚುರುಕಾದ ಹಾರಿಕೆಯ ಹೇಳ್ವಿ ಗೂಗಲ್ ಕಡೆಯಿಂದ ಬಂದಿದೆ.
ಇತ್ತೀಚಿಗೆ ಬಿಡುಗಡೆಗೊಳಿಸಿದ ಪುಟಾಣಿ ಮಾದರಿಯು ಪಿಯಟ್-500 (Fiat-500), ಮರ‍್ಸಿಡಿಸ್ ಸ್ಮಾರ‍್ಟ್ (Mercedes Smart)ಕಾರುಗಳನ್ನು ಹೋಲುವಂತಿದೆ. ಈ ಕಾರಿಗೆ ಯಾವುದೇ ಮಿಂತಿಗುರಿ(steering wheel), ತುಳಿಗೆ(brake pedal) ಇರುವುದಿಲ್ಲ. ಹಾಗೆಯೇ ಹಲ್ಗಾಲಿ (gear) ಬದಲಾಯಿಸುವ ಕಿರಿಕಿರಿ ಇಲ್ಲ. ಬದಲಿಗೆ ಕಾರನ್ನು ಓಡುವಂತೆ ಆದೇಶ ನೀಡಲು ಮತ್ತು ಅವಗಡದ ಸನ್ನಿವೇಶಗಳಲ್ಲಿ ಇದ್ದಕ್ಕಿದ್ದಂತೆ ನಿಲ್ಲಿಸುವ 2 ಒತ್ತು ಗುಂಡಿಗಳನ್ನು ನೀಡಲಾಗಿದೆ.
ಇನ್ನೂ ಹೆಚ್ಚಿನ ವಿಶೇಶಗಳೆಂದರೆ ನಿಮ್ಮ ಚೂಟಿಯುಲಿಯ (smart phone) ಮೂಲಕವು ಈ ಕಾರನ್ನು ನೀವಿದ್ದಲ್ಲಿಗೆ ಕರೆಸಿಕೊಳ್ಳಬಹುದು.ನಿಮ್ಮ ಚೂಟಿಯುಲಿಯಲ್ಲಿ ಇದರ ಬಳಕದ (app) ಮೂಲಕ ಇದಕ್ಕೆ ಬರುವಂತೆ ಹೇಳಿದರೆ ಸಾಕು ನೀವಿದ್ದಲ್ಲಿ ಗೂಗಲ್ ಕಾರ್ ಬಂದು ಬಾಗಿಲು ತೆರೆದುಕೊಳ್ಳುತ್ತದೆ. ಇದಶ್ಟೇ ಅಲ್ಲ, ನಿಮ್ಮ ಚೂಟಿಯುಲಿಯ ಬಳಕದ ಮೂಲಕ ನೀವು ತಲುಪಬೇಕಾಗಿರುವ ತಾಣಕ್ಕೆ ಯಾವುದೇ ಕಿರಿಕಿರಿಯಿಲ್ಲದೇ ಕರೆದೊಯ್ಯುತ್ತದೆ. ಸದ್ಯಕ್ಕೆ ಈ ಕಾರಿನಲ್ಲಿ ಇಬ್ಬರು ಕೂಡಲಶ್ಟೇ ಅನುವು ಮಾಡಲಾಗಿದೆ. ಕಾಲ್ನಡಿಗೆಯವರಿಗೆ ಎದುರಿಂದ ಕಾರು ಗುದ್ದಿದರೂ ಅನಾಹುತವಾಗದಂತೆ ತಡೆಯಲು ಬಂಡಿಯ ಮುಂಬಾಗ ಸ್ಪಂಜು ಮತ್ತು ರಬ್ಬರ್ ನಂತಿರುವ ನೊರೆಯಂತ ಮೆದು ವಸ್ತು ಬಳಸಿ ತಯಾರಿಸಲಾಗಿದೆ.
ಗೂಗಲ್ ಕೂಟ ಹುಟ್ಟಿಹಾಕಿದವರಲ್ಲೊಬ್ಬರಾದ ಸೆರ‍್ಜಿ ಬ್ರಿನ್ (Sergie Brin) ಪ್ರಕಾರ ಕಳೆದ ವರುಶವೇ ಕೆಲವು ಆಯ್ದ ಕೆಲಸಿಗರಿಗೆ ಇಂತಹ ಕಾರು ಮಾದರಿಗಳನ್ನು ನೀಡಿ ಅವರ ಅನುಬವದ ಬಗ್ಗೆ ಮಾಹಿತಿ ಪಡೆಯಲಾಗಿತ್ತಂತೆ. ಇದರಲ್ಲಿ ಯಾವುದೇ ಗುದ್ದುವಿಕೆ ಮತ್ತು ಇತರೆ ಅಪಗಾತದಂತ ಕೆಡುಕುಗಳು ಕಂಡುಬಂದಿಲ್ಲ.
ಹೆಸರುವಾಸಿ ಕಾರ‍್ನೀಜ್ ಮೆಲ್ಲೊನ್ ಕಲಿಕೆವೀಡಿನಲ್ಲಿ ಉಕ್ಕಾಳಿನ ಚಳಕದ ಬಗ್ಗೆ ಓದು ಮುಗಿಸಿರುವ ಕ್ರಿಸ್ಟೋಪರ್ ಉರ‍್ಮ್ಸನ್ (Christopher Urmson) ಈ ಹಮ್ಮುಗೆಯ ಮುಂದಾಳು. ಓಡಿಸುಗನಿಲ್ಲದ ಈ ಕಾರು ಹಲವಾರು ಅರಿವಿಕಗಳಿಂದ (sensors) ಕೂಡಿದ್ದು, ಇದರಿಂದ ತನ್ನ ಸುತ್ತಮುತ್ತ 600 ಅಡಿಗಳ ಹತ್ತಿರ ಕಾಣುವ ಎಲ್ಲ ನೋಟವನ್ನು ಇದು ಅರಿತುಕೊಳ್ಳುವಂತೆ ಮಾಡಲಾಗಿದೆ ಎನ್ನುತ್ತಾರೆ ಉರ‍್ಮ್ಸನ್. ಇಶ್ಟೆಲ್ಲ ಅರಿವಿಕ ಹೊಂದಿದ್ದರೂ ಕ್ಯಾಲಿಪೋರ‍್ನಿಯಾದ ಸಾರಿಗೆ ನಿಯಮದಂತೆ ಹಿಂಬದಿಯ ಕನ್ನಡಿಗಳನ್ನು ಈ ಮಾದರಿಗಳಲ್ಲಿ ಅಳವಡಿಸಲಾಗಿದೆ.
ಗೂಗಲ್ ಕೂಟ, ಟೊಯೋಟಾದ ಹಲಬಳಕೆ ಬಂಡಿ ಲೆಕ್ಸಸ್ ನಲ್ಲಿ ಕೂಡ ಇದೇ ತೆರನಾದ ಚಳಕವನ್ನು ಅಳವಡಿಸಿ ಒರೆಗೆಹಚ್ಚುತ್ತಿದ್ದರ ಬಗ್ಗೆ ನೀವು ಹಿಂದಿನ ಬರಹದಲ್ಲಿ ಓದಿರಬಹುದು. ಮರ‍್ಸಿಡಿಸ್, ಬಿ.ಎಂ.ಡಬ್ಲ್ಯೂ ಮತ್ತು ವೋಲ್ವೋ ಕೂಟಗಳು ಸಹ ಇಂತ ತನ್ನಿಂದ ತಾನೇ ಓಡುವ ಕಾರುಗಳ ತಯಾರಿಕೆಯಲ್ಲಿ ತೊಡಗಿದ್ದು ಗೂಗಲ್ ನ ಹೊಸ ಚಳಕಕ್ಕೆ ಪಣವೊಡ್ಡಲಿರುವುದು ಕಚಿತ. 2017ರಲ್ಲಿ ಸ್ವೀಡನ್ ನಾಡಿನ ಗೋತೆನ್ ಬರ‍್ಗ್ ದಲ್ಲಿ(Gothenburg) ಇಂತ ತನ್ನಿಂದ ತಾನೇ ಓಡುವ ಬಂಡಿಗಳು ಬೀದಿಗಿಳಿಯಲಿವೆ ಎಂದು ವೋಲ್ವೋ ಕೂಟ ಹೇಳಿಕೊಂಡಿದೆ.(ವೋಲ್ವೋ ಕೂಟದ ಪ್ರಮುಕ ಕೆಲಸದೆಡೆ ಸ್ವೀಡನ್ನಿನ ಗೋತೆನ್ ಬರ‍್ಗ್ ನಲ್ಲಿದೆ)
ಗೂಗಲ್ ಇದೀಗ ತೋರ‍್ಪಡಿಸಿರುವ ಕಾರು ಪ್ರತಿಗಂಟೆಗೆ 40ಕಿ.ಮೀ ವೇಗದಲ್ಲಿ ಓಡಬಲ್ಲುದು. ಪಟ್ಟಣ ಮತ್ತು ಅರೆ-ಪಟ್ಟಣದ ಹಾದಿಯಲ್ಲಿ ಸಾಗಲಿರುವ ಈ ಕಾರಿಗೆ ಪ್ರಮುಕ ಹೆದ್ದಾರಿಗಳಲ್ಲಿ ಸಾಗುವ ಒಪ್ಪಿಗೆ ನೀಡಲಾಗಿಲ್ಲ. ಇದಕ್ಕೆ ಕಾರಣ ಇವುಗಳ ವೇಗದ ಮಿತಿ ಎನ್ನಲಾಗಿದೆ. ಅಮೇರಿಕೆಯ ನಾಡಹೆದ್ದಾರಿಗಳಲ್ಲಿ 40ಕಿ.ಮೀ ವೇಗದಲ್ಲಿ ಓಡಿಸುವುದೆಂದರೆ ಕೆಡುಕಗಳುಂಟಾಗುವುದದಲ್ಲಿ ಎರಡು ಮಾತಿಲ್ಲ. ಮುಂಬರುವ ದಿನಗಳಲ್ಲಿ ಈ ಬಂಡಿಗಳ ವೇಗವನ್ನು ಹೆಚ್ಚಿಸುವುದರತ್ತ ಗೂಗಲ್ ನ ಅರಕೆಗಾರರು ಕೆಲಸ ಮಾಡುತ್ತಿದ್ದಾರೆ.
ತಾನೋಡಗಳ ತಯಾರಿಕೆಯ ಕಣಜವೆಂದ ಹೆಸರಾದ ಡೆಟ್ರಾಯ್ಟ್ (Detroit) ಊರಿನ ಪ್ರಮುಕ ಕಾರು ತಯಾರಕರೊಂದಿಗೆ ಸೇರಿ ಈ ಮೊದಲ 100 ಮಾದರಿಗಳನ್ನು ಹೊರತರಲಾಗುವುದು ಎಂದಿರುವ ಗೂಗಲ್, ಆ ತಯಾರಕರ ಹೆಸರನ್ನು ಬಿಟ್ಟುಕೊಟ್ಟಿಲ್ಲ. ಮಾದರಿ ಕಾರುಗಳ ಬೆಲೆಯ ಬಗ್ಗೆಯೂ ಗೂಗಲ್ ಇದೇ ರೀತಿ ತುಟಿ ಬಿಚ್ಚಿಲ್ಲ. ಮೊದಲು ಮಾದರಿಗಳನ್ನು ಅಣಿಗೊಳಿಸಿ ಒರೆಹಚ್ಚುವುದಲ್ಲದೇ ಇವುಗಳ ಬಳಕೆಯ ಬಗ್ಗೆ ಹಲವು ನಾಡಿನ ಸಾರಿಗೆ ನಿಯಮ ಮತ್ತು ಕಟ್ಟಳೆಗಳ ಹುಟ್ಟುಹಾಕುವುದರತ್ತ ಗೂಗಲ್ ಕೆಲಸ ಮಾಡುತ್ತಿದೆ.
ಕ್ಯಾಲಿಪೋರ‍್ನಿಯಾ ಸೇರಿದಂತೆ ನೆವಡಾ(Nevada) ಮತ್ತು ಪ್ಲೋರಿಡಾ(Florida) ನಾಡಿನಲ್ಲಿ ಮಾತ್ರ ಈ ಓಡಿಸುಗನಿಲ್ಲದ ಕಾರುಗಳ ಓಡಾಟಕ್ಕೆ ಒಪ್ಪಿಗೆ ದೊರೆತಿದೆ, ಆದರೆ ಇದಕ್ಕೆ ತಕ್ಕ ಸಾರಿಗೆ ನಿಯಮಗಳು ಇನ್ನೂ ಎಳಸು. ಬರುವ ದಿನಗಳಲ್ಲಿ ಉಂಟಾಗುವ ಬದಲಾವಣೆಗೆ ಮತ್ತು ಅನುಬವಗಳಿಗೆ ತಕ್ಕಂತೆ ಈ ನಿಯಮಗಳನ್ನು ಮತ್ತೆ ಬದಲಾಯಿಸುವ ಹೊಣೆ ಆಯಾ ಸಾರಿಗೆ ಸಂಸ್ತೆಗಳದ್ದು.
ಮ್ಯಾನ್ಹಟ್ಟನ್(Manhattan) ಊರಿನ ಸಂಸ್ತೆಯೊಂದು ತನ್ನಿಂದ ತಾನಾಗೇ ಓಡುವ ಕಾರುಗಳ ಮಾರುಕಟ್ಟೆಯ ಬಗ್ಗೆ ಆಳವಾದ ಅರಕೆ ನಡೆಸಿದೆ. ಇದರ ಪ್ರಕಾರ ಮುಂಬೊತ್ತಿನ ದಿನಗಳಲ್ಲಿ ಓಡಿಸುಗನಿಲ್ಲದ ಕಾರುಗಳು ಮ್ಯಾನ್ಹಟ್ಟನ್ ನಂತ ಊರುಗಳ ಟ್ಯಾಕ್ಸಿಗಳಾದರೆ ಹೆಚ್ಚು ಲಾಬ ಎಂದಿದ್ದಾರೆ. ಈಗಿರುವ ಟ್ಯಾಕ್ಸಿಗಳಿಗಿಂತ ಕಡಿಮೆ ಕಾಯುವ ಹೊತ್ತಿನಲ್ಲಿ,ಕಡಿಮೆ ದರದಲ್ಲಿ ಇವುಗಳು ಓಡಲಿವೆ,ಪ್ರತಿ ಮಯ್ಲಿಗೆ ಅರ‍್ದ ಡಾಲರ್ ವೆಚ್ಚವಾಗಬಹುದು ಎಂಬುದು ಈ ಅರಕೆಗಾರರ ಇಂಗಿತ.
ಒಟ್ಟಿನಲ್ಲಿ ಓಡಿಸುಗನಿಲ್ಲದ ಕಾರುಗಳು ನಮ್ಮ ಸಾರಿಗೆಯ ಅನುಬವವನ್ನು ಇನ್ನೊಂದು ಹಂತ ಮುಂದಕ್ಕೊಯ್ಯುವುದು ದಿಟವಾಗಿದೆ.ಅಲ್ಲಿಯವರೆಗೆ ಕಾಯ್ದು ನೋಡುವುದೊಂದೇ ನಮ್ಮಲ್ಲಿರುವ ಆಯ್ಕೆ.
ಬನ್ನಿ, ಗೂಗಲ್ ಕಾರಲ್ಲಿ ಒಂದು ಸುತ್ತು ಸುತ್ತಾಡೋಣ…
[youtube https://www.youtube.com/watch?v=CqSDWoAhvLU&w=560&h=315]
(ಮಾಹಿತಿ ಮತ್ತು ತಿಟ್ಟ ಸೆಲೆ: nytimes.com)
ಇತ್ತೀಚಿನ ಅನಿಸಿಕೆಗಳು