ಅಲ್ಲಗಳೆಯುವ ಒಟ್ಟುಗಳು
ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವುದು-12
(ಇಂಗ್ಲಿಶ್ ಪದಗಳಿಗೆ-11ರಿಂದ ಮುಂದುವರಿದುದು)
(5) in ಒಟ್ಟು:
ಅಲ್ಲಗಳೆಯುವ ಹುರುಳಿರುವ ಈ ಒಟ್ಟಿಗೆ in, il, im, ಮತ್ತು ir ಎಂಬ ನಾಲ್ಕು ರೂಪಗಳಿವೆ; ಇವುಗಳಲ್ಲಿ il ಎಂಬುದು l ಬರಿಗೆಯಲ್ಲಿ ಮೊದಲಾಗುವ ಪದಗಳೆದುರು (legal : illegal), im ಎಂಬುದು m ಇಲ್ಲವೇ p ಬರಿಗೆಯಲ್ಲಿ ಮೊದಲಾಗುವ ಪದಗಳೆದುರು (possible : impossible, mobile : immobile), ir ಎಂಬುದು r ಬರಿಗೆಯಲ್ಲಿ ಮೊದಲಾಗುವ ಪದಗಳೆದುರು (regular : irregular), ಮತ್ತು in ಎಂಬುದು ಉಳಿದ ಕಡೆಗಳಲ್ಲಿ ಬಳಕೆಯಾಗುತ್ತದೆ (coherent : incoherent, elegant : inelegant).
ಈ ಒಟ್ಟನ್ನು ಎಂತಹ ಪದಕ್ಕೆ ಸೇರಿಸಲಾಗಿದೆ, ಮತ್ತು ಅದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಎಂತಹ ಪದವನ್ನು ಕೊಡಲು ಬರುತ್ತದೆ ಎಂಬುದರ ಮೇಲೆ ಈ ಒಟ್ಟಿರುವ ಪದಗಳಿಗೆ ಸಾಟಿಯಾಗುವಂತಹ ಪದಗಳನ್ನು ಕನ್ನಡದಲ್ಲಿ ಕಟ್ಟುವುದು ಹೇಗೆ ಎಂಬುದನ್ನು ತೀರ‍್ಮಾನಿಸಬೇಕಾಗುತ್ತದೆ. ಇದನ್ನು ಕೆಳಗೆ ವಿವರಿಸಲಾಗಿದೆ:
(ಕ) ಈ ಒಟ್ಟನ್ನು ಸೇರಿಸಿರುವ ಇಂಗ್ಲಿಶ್ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಒಂದು ಹೆಸರುಪದದ ಪರಿಚೆರೂಪವನ್ನು ಕೊಡಬೇಕಾಗುತ್ತಿದೆಯಾದರೆ, ಅಂತಹ ಕಡೆಗಳಲ್ಲಿ ಕನ್ನಡದ ಹೆಸರುಪದಕ್ಕೆ ಇಲ್ಲದ ಇಲ್ಲವೇ ಅಲ್ಲದ ಎಂಬುದನ್ನು ಸೇರಿಸಿ ಹೊಸಪದವನ್ನು ಉಂಟುಮಾಡಲು ಬರುತ್ತದೆ:
modest | ಸಿಗ್ಗಿನ | immodest | ಸಿಗ್ಗಿಲ್ಲದ | |
tolerant | ತಾಳ್ಮೆಯ | intolerant | ತಾಳ್ಮೆಯಿಲ್ಲದ | |
sincere | ನೆಚ್ಚಿಕೆಯ | insincere | ನೆಚ್ಚಿಕೆಯಿಲ್ಲದ |
ಇಂತಹ ಕೆಲವು ಹೆಸರುಪದಗಳು ಉಳ್ಳ ಇಲ್ಲವೇ ಆದ ಎಂಬ ಪದದೊಂದಿಗೆ ಬರುತ್ತಿದ್ದು, ಅಂತಹ ಕಡೆಗಳಲ್ಲಿ ಉಳ್ಳ ಇಲ್ಲವೇ ಆದ ಎಂಬುದರ ಬದಲು ಇಲ್ಲದ ಇಲ್ಲವೇ ಅಲ್ಲದ ಎಂಬ ಪದವನ್ನು ಬಳಸಬೇಕಾಗುತ್ತದೆ:
efficient | ಅಳವುಳ್ಳ | inefficient | ಅಳವಿಲ್ಲದ | |
fertile | ಎರುಬುಳ್ಳ | infertile | ಎರುಬಿಲ್ಲದ | |
elegant | ನಿರತೆಯುಳ್ಳ | inelegant | ನಿರತೆಯಿಲ್ಲದ | |
decent | ಹದನಾದ | indecent | ಹದನಲ್ಲದ |
(ಚ) ಈ ಒಟ್ಟನ್ನು ಸೇರಿಸಿರುವ ಇಂಗ್ಲಿಶ್ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಒಂದು ಎಸಕಪದದ ಪರಿಚೆರೂಪವನ್ನು ಬಳಸಬೇಕಾಗಿದೆಯಾದರೆ, ಅಂತಹ ಕಡೆಗಳಲ್ಲಿ ಅದರ ಅಲ್ಲಗಳೆಯುವ ರೂಪವನ್ನು ಬಳಸಲು ಬರುತ್ತದೆ; ಕನ್ನಡದಲ್ಲಿ ಎಸಕಪದಗಳಿಗೆ ಹಿಂಬೊತ್ತಿನ (ಮುಗಿದ) ಮತ್ತು ಮುಂಬೊತ್ತಿನ (ಮುಗಿಯುವ) ಪರಿಚೆರೂಪಗಳಿದ್ದು, ಇವೆರಡಕ್ಕೂ ಒಂದೇ ಬಗೆಯ ಅಲ್ಲಗಳೆಯುವ ರೂಪ ಇದೆ ಎಂಬುದನ್ನು ಇಲ್ಲಿ ಗಮನಿಸಬಹುದು:
mature | ಬಲಿತ | immature | ಬಲಿಯದ | |
complete | ಮುಗಿದ | incomplete | ಮುಗಿಯದ | |
conclusive | ಕೊನೆಗೊಂಡ | inconclusive | ಕೊನೆಗೊಳ್ಳದ | |
sensitive | ನಾಟುವ | insensitive | ನಾಟದ | |
contested | ಪೊಣರುವ | incontested | ಪೊಣರದ | |
mobile | ಮಿಳಿರುವ | immobile | ಮಿಳಿರದ | |
accessible | ಸಿಗುವ | inaccessible | ಸಿಗದ | |
coherent | ಹೊಂದಿಕೊಳ್ಳುವ | incoherent | ಹೊಂದಿಕೊಳ್ಳದ |
(ಟ) ಕನ್ನಡದ ಪರಿಚೆಪದಗಳನ್ನೇ ಇದಕ್ಕಾಗಿ ಬಳಸಬೇಕಾಗುವಂತಹ ಕಡೆಗಳೂ ಹಲವಿವೆ; ಇಂತಹ ಕಡೆಗಳಲ್ಲಿ ಕನ್ನಡದ ಈ ಪದಗಳಿಗೇನೇ ನೇರವಾಗಿ ಅಲ್ಲದ ಎಂಬುದನ್ನು ಸೇರಿಸಿ in ಒಟ್ಟಿರುವ ಪದಗಳಿಗೆ ಸಾಟಿಯಾದ ಹೊಸಪದಗಳನ್ನು ಉಂಟುಮಾಡಲು ಬರುತ್ತದೆ:
direct | ನೇರ | indirect | ನೇರವಲ್ಲದ | |
dependent | ಹೊರಕುಳಿ | independent | ಹೊರಕುಳಿಯಲ್ಲದ | |
active | ಚುರುಕು | inactive | ಚುರುಕಲ್ಲದ | |
equal | ಸಾಟಿ | inequal | ಸಾಟಿಯಲ್ಲದ |
(ತ) ಇಂಗ್ಲಿಶ್ನ ಪರಿಚೆಪದಗಳು able/ible ಎಂಬ ಒಟ್ಟಿನಲ್ಲಿ ಕೊನೆಗೊಳ್ಳುತ್ತವೆಯಾದರೆ, ಅವಕ್ಕೆ ಸಾಟಿಯಾಗಿ ಕನ್ನಡದಲ್ಲಿ ಬಲ್ಲ ಇಲ್ಲವೇ ತಕ್ಕ ಎಂಬುದರಲ್ಲಿ ಕೊನೆಗೊಳ್ಳುವ ಪದಗಳನ್ನು ಉಂಟುಮಾಡಲು ಬರುತ್ತದೆ ಎಂಬುದನ್ನು ಮೇಲೆ ()ರಲ್ಲಿ ನೋಡಿರುವೆವು; ಇಂತಹ ಪದಗಳಿಗೂ in ಒಟ್ಟನ್ನು ಸೇರಿಸಲಾಗುತ್ತಿದ್ದು, ಅವಕ್ಕೆ ಸಾಟಿಯಾದ ಹೊಸಪದಗಳನ್ನು ಕನ್ನಡದಲ್ಲಿ ಉಂಟುಮಾಡಲು ಬಲ್ಲ ಇಲ್ಲವೇ ತಕ್ಕ ಎಂಬುದಕ್ಕೆ ಬದಲಾಗಿ ಆಗದ ಎಂಬುದನ್ನು ಬಳಸಬೇಕಾಗುತ್ತದೆ:
calculable | ಎಣಿಸಬಲ್ಲ | incalculable | ಎಣಿಸಲಾಗದ | |
palpable | ಮುಟ್ಟಬಲ್ಲ | impalpable | ಮುಟ್ಟಲಾಗದ | |
comparable | ಹೋಲಿಸಬಲ್ಲ | incomparable | ಹೋಲಿಸಲಾಗದ | |
tolerable | ತಾಳಬಲ್ಲ | intolerable | ತಾಳಲಾಗದ | |
curable | ಮಾಜಿಸಬಲ್ಲ | incurable | ಮಾಜಿಸಲಾಗದ |
ಕೆಲವೆಡೆಗಳಲ್ಲಿ ಎಸಕಪದಗಳ ಮುಂಬೊತ್ತಿನ ಪರಿಚೆರೂಪವನ್ನೂ ಇಂತಹ able/ible ಎಂಬ ಒಟ್ಟಿನ ಪದಗಳಿಗೆ ಸಾಟಿಯಾಗಿ ಕೊಡಲು ಬರುತ್ತಿದ್ದು, ಅಂತಹ ಪದಗಳಿಗೆ in ಒಟ್ಟನ್ನು ಸೇರಿಸಿರುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದಗಳ ಅಲ್ಲಗಳೆಯುವ ಪರಿಚೆರೂಪಗಳನ್ನು ಕೊಡಲು ಬರುತ್ತದೆ:
visible | ಕಾಣಿಸುವ | invisible | ಕಾಣಿಸದ | |
flexible | ಬಳಕುವ | inflexible | ಬಳಕದ | |
variable | ಮಾರ‍್ಪಡುವ | invariable | ಮಾರ‍್ಪಡದ | |
audible | ಕೇಳಿಸುವ | inaudible | ಕೇಳಿಸದ |
(6) non ಒಟ್ಟು:
ಪಾಂಗಿನ ಇಲ್ಲವೇ ಪರಿಚೆಯ ಇಲ್ಲದಿಕೆಯನ್ನು ತಿಳಿಸುವ ಈ ಒಟ್ಟು ಇಲ್ಲದಿಕೆಯನ್ನಶ್ಟೇ ತಿಳಿಸುತ್ತದೆಯಲ್ಲದೆ ಸಾಮಾನ್ಯವಾಗಿ ಬೇರೆ ಹೆಚ್ಚಿನ ಹುರುಳುಗಳನ್ನು ಕೊಡಲು ಹೋಗುವುದಿಲ್ಲ.
ಕನ್ನಡದಲ್ಲಿ ಈ ಒಟ್ಟನ್ನು ಬಳಸಿರುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಎರಡು ಬಗೆಯ ಹಮ್ಮುಗೆಗಳನ್ನು ಬಳಸಲು ಬರುತ್ತದೆ; ಈ ಒಟ್ಟನ್ನು ಸೇರಿಸಿರುವ ಇಂಗ್ಲಿಶ್ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಎಂತಹ ಪದವನ್ನು ಬಳಸಲು ಬರುತ್ತದೆ ಎಂಬುದರ ಮೇಲೆ ಇವುಗಳಲ್ಲೊಂದನ್ನು ಆರಿಸಿಕೊಳ್ಳಬೇಕಾಗುತ್ತದೆ:
(ಕ) ಪರಿಚೆಪದದ ಇಲ್ಲವೇ ಹೆಸರುಪದದ ಪತ್ತುಗೆ ರೂಪವನ್ನು ಬಳಸಲು ಬರುತ್ತದೆಯಾದರೆ ಆ ಪದಗಳಿಗೆ ಇಲ್ಲದ ಇಲ್ಲವೇ ಅಲ್ಲದ ಎಂಬ ಪದವನ್ನು ಸೇರಿಸಿ ಹೇಳಬಹುದು:
profit | ಪಡಪು | non-profit | ಪಡಪಿಲ್ಲದ | |
sense | ಹುರುಳು | nonsense | ಹುರುಳಿಲ್ಲದ | |
essential | ಅರಿದು | non-essential | ಅರಿದಲ್ಲದ |
(ಚ) ಎಸಕಪದದ ಪರಿಚೆರೂಪವನ್ನು ಬಳಸಲು ಬರುತ್ತದೆಯಾದರೆ, ಆ ಎಸಕಪದದ ಅಲ್ಲಗಳೆಯುವ ಪರಿಚೆರೂಪವನ್ನು ಬಳಸಬಹುದು:
stop | ನಿಲ್ಲು | non-stop | ನಿಲ್ಲದ | |
skid | ಜಾರು | non-skid | ಜಾರದ | |
conductor | ಹರಿಸುವ | non-conductor | ಹರಿಸದ | |
productive | ಉಂಟುಮಾಡುವ | non-productive | ಉಂಟುಮಾಡದ |
(7) un ಒಟ್ಟು:
in ಒಟ್ಟಿನ ಬಳಕೆಯಿರುವಲ್ಲಿ ಕಾಣಿಸಿದ ಹಾಗೆ, ಇಲ್ಲಿಯೂ ಎಂತಹ ಕನ್ನಡ ಪದಗಳನ್ನು ಉಂಟುಮಾಡಬಹುದು ಎಂಬುದು ಈ ಒಟ್ಟನ್ನು ಎಂತಹ ಪದಗಳಿಗೆ ಸೇರಿಸಲಾಗಿದೆ, ಮತ್ತು ಅವಕ್ಕೆ ಸಾಟಿಯಾಗಿ ಕನ್ನಡದಲ್ಲಿ ಎಂತಹ ಪದಗಳನ್ನು ಇಲ್ಲವೇ ಪದರೂಪಗಳನ್ನು ಕೊಡಲು ಬರುತ್ತದೆ ಎಂಬುದರ ಮೇಲೆ ತೀರ‍್ಮಾನಿಸಬೇಕಾಗುತ್ತದೆ.
ಇಂಗ್ಲಿಶ್ನಲ್ಲಿ un ಒಟ್ಟನ್ನು ಮುಕ್ಯವಾಗಿ ಪರಿಚೆಪದಗಳಿಗೆ ಸೇರಿಸಲಾಗುತ್ತದೆ; ಆದರೆ, ಕನ್ನಡದಲ್ಲಿ ಇಂತಹ ಪರಿಚೆಪದಗಳಿಗೆ ಸಾಟಿಯಾಗಿ ಕೆಲವೆಡೆಗಳಲ್ಲಿ ಎಸಕಪದಗಳ ಇಲ್ಲವೇ ಕೂಡುಪದಗಳ ಪರಿಚೆರೂಪಗಳನ್ನು ಕೊಡಲು ಬರುತ್ತದೆ, ಮತ್ತು ಬೇರೆ ಕೆಲವೆಡೆಗಳಲ್ಲಿ ಹೆಸರುಪದಗಳ ಪರಿಚೆರೂಪಗಳನ್ನು ಕೊಡಲು ಬರುತ್ತದೆ.
(ಕ) ಇಂಗ್ಲಿಶ್ ಪರಿಚೆಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದದ ಇಲ್ಲವೇ ಕೂಡುಪದದ ಪರಿಚೆರೂಪ ಇದೆಯಾದರೆ, ಅದರ ಅಲ್ಲಗಳೆಯುವ ರೂಪವನ್ನು un ಒಟ್ಟನ್ನು ಸೇರಿಸಿರುವ ಇಂಗ್ಲಿಶ್ ಪರಿಚೆಪದಕ್ಕೆ ಸಾಟಿಯಾಗಿ ಕೊಡಲು ಬರುತ್ತದೆ.
ಮೇಲೆ ತಿಳಿಸಿದ ಹಾಗೆ, ಎಸಕಪದಗಳ ಇಲ್ಲವೇ ಕೂಡುಪದಗಳ ಪರಿಚೆರೂಪಗಳು ಎರಡು ಬಗೆಯವಾಗಿರುತ್ತವೆ: (1) ನಡೆದ ಎಸಕವನ್ನು ಪರಿಚೆಯಾಗಿ ತಿಳಿಸುವ ಹಿಂಬೊತ್ತಿನ ರೂಪಗಳು (ಕೇಳಿದ), ಮತ್ತು (2) ಬಳಕೆಯಲ್ಲಿರುವ ಪರಿಚೆಯನ್ನು ಎಸಕವಾಗಿ ತಿಳಿಸುವ ಮುಂಬೊತ್ತಿನ ರೂಪಗಳು (ತಿನ್ನುವ); ಇವೆರಡಕ್ಕೂ ಒಂದೇ ಬಗೆಯ ಅಲ್ಲಗಳೆಯುವ ರೂಪಗಳು ಬರುತ್ತವೆ (ಕೇಳದ, ತಿನ್ನದ):
affected | ನಾಟಿದ | unaffected | ನಾಟದ | |
broken | ಒಡೆದ | unbroken | ಒಡೆಯದ | |
heard | ಕೇಳಿದ | unheard | ಕೇಳದ | |
ripe | ಮಾಗಿದ | unripe | ಮಾಗದ | |
reserved | ಕಾದಿರಿಸಿದ | unreserved | ಕಾದಿರಿಸದ | |
erring | ತಪ್ಪುವ | unerring | ತಪ್ಪದ | |
fit | ಹೊಂದುವ | unfit | ಹೊಂದದ | |
pleasant | ಒಗ್ಗುವ | unpleasant | ಒಗ್ಗದ | |
blushing | ನಾಚುವ | unblushing | ನಾಚದ | |
expected | ಎದುರುನೋಡುವ | unexpected | ಎದುರುನೋಡದ |
(ಚ) ಇಂಗ್ಲಿಶ್ ಪರಿಚೆಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಹೆಸರುಪದದ ಪತ್ತುಗೆರೂಪವನ್ನು ಬಳಸಲಾಗುತ್ತಿದೆಯಾದರೆ, ಆ ಹೆಸರುಪದಕ್ಕೆ ಇಲ್ಲದ ಇಲ್ಲವೇ ಅಲ್ಲದ ಎಂಬುದನ್ನು ಸೇರಿಸಿ, ಅದನ್ನು un ಒಟ್ಟನ್ನು ಸೇರಿಸಿರುವ ಇಂಗ್ಲಿಶ್ ಪರಿಚೆಪದಕ್ಕೆ ಸಾಟಿಯಾಗಿ ಕೊಡಲು ಬರುತ್ತದೆ:
aided | ನೆರವಿನ | unaided | ನೆರವಿಲ್ಲದ | |
fortunate | ಸಯ್ಪಿನ | unfortunate | ಸಯ್ಪಿಲ್ಲದ | |
happy | ಸೊಮ್ಮಿನ | unhappy | ಸೊಮ್ಮಿಲ್ಲದ | |
real | ನನಸಿನ | unreal | ನನಸಲ್ಲದ | |
natural | ತನ್ಪರಿಜೆಯ | unnatural | ತನ್ಪರಿಜೆಯಲ್ಲದ |
ಇಂತಹ ಕಡೆಗಳಲ್ಲಿ ಹೆಸರುಪದದೊಂದಿಗೆ ಪತ್ತುಗೆ ಒಟ್ಟನ್ನು ಬಳಸುವ ಬದಲು ಆಗು ಇಲ್ಲವೇ ಇರು ಎಂಬ ಎಸಕಪದದ ಪರಿಚೆರೂಪವನ್ನು ಬಳಸಿರುವುದೂ ಇದೆ; ಅಂತಹ ಕಡೆಗಳಲ್ಲೂ ಇಲ್ಲದ ಇಲ್ಲವೇ ಅಲ್ಲದ ಎಂಬುದನ್ನು ನೇರವಾಗಿ ಹೆಸರುಪದಗಳಿಗೆ ಸೇರಿಸಿ, ಅದನ್ನು un ಒಟ್ಟನ್ನು ಸೇರಿಸಿರುವ ಇಂಗ್ಲಿಶ್ ಪರಿಚೆಪದಕ್ಕೆ ಸಾಟಿಯಾಗಿ ಕೊಡಲು ಬರುತ್ತದೆ:
rivalled | ಎಣೆಯಿರುವ | unrivalled | ಎಣೆಯಿಲ್ಲದ | |
savoury | ಸವಿಯಾದ | unsavoury | ಸವಿಯಲ್ಲದ | |
lucky | ಸಯ್ಪುಳ್ಳ | unlucky | ಸಯ್ಪಿಲ್ಲದ | |
known | ಗೊತ್ತಿರುವ | unknown | ಗೊತ್ತಿಲ್ಲದ |
(ಟ) un ಒಟ್ಟನ್ನು able/ible ಎಂಬ ಒಟ್ಟಿನಲ್ಲಿ ಕೊನೆಗೊಳ್ಳುವ ಪದಗಳಿಗೆ ಸೇರಿಸಲಾಗಿದೆಯಾದರೆ, ಅವಕ್ಕೆ ಸಾಟಿಯಾಗುವಂತೆ ಕನ್ನಡದಲ್ಲಿ, ಮೇಲೆ ಒಟ್ಟಿರುವ ಪದಗಳ ಕುರಿತಾಗಿ ಹೇಳಿರುವಂತೆ, ಎರಡು ಬಗೆಯ ಹಮ್ಮುಗೆಗಳನ್ನು ಬಳಸಲು ಬರುತ್ತದೆ:
(1) able/ible ಎಂಬ ಒಟ್ಟಿರುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಬಲ್ಲ ಎಂಬುದರಲ್ಲಿ ಕೊನೆಗೊಳ್ಳುವ ಪದಗಳನ್ನು ಬಳಸಲು ಬರುತ್ತದೆಯಾದರೆ, ಅವಕ್ಕೆ un ಒಟ್ಟನ್ನು ಸೇರಿಸಿರುವಲ್ಲಿ ಬಲ್ಲ ಪದದ ಬದಲು ಆಗದ ಎಂಬುದನ್ನು ಬಳಸಲು ಬರುತ್ತದೆ:
acceptable | ಒಪ್ಪಬಲ್ಲ | unacceptable | ಒಪ್ಪಲಾಗದ | |
alterable | ಮಾರ‍್ಪಡಿಸಬಲ್ಲ | unalterable | ಮಾರ‍್ಪಡಿಸಲಾಗದ | |
desirable | ಬಯಸಬಲ್ಲ | undesirable | ಬಯಸಲಾಗದ | |
deniable | ಅಲ್ಲಗಳೆಯಬಲ್ಲ | undeniable | ಅಲ್ಲಗಳೆಯಲಾಗದ |
(2) able/ible ಎಂಬ ಒಟ್ಟಿರುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದಗಳ ಪರಿಚೆರೂಪಗಳನ್ನು ಬಳಸಲು ಬರುತ್ತದೆಯಾದರೆ, ಅವಕ್ಕೆ un ಒಟ್ಟನ್ನು ಸೇರಿಸಿರುವಲ್ಲಿ ಎಸಕಪದಗಳ ಅಲ್ಲಗಳೆಯುವ ಪರಿಚೆರೂಪಗಳನ್ನು ಬಳಸಲು ಬರುತ್ತದೆ:
sociable | ಸೇರುವ | unsociable | ಸೇರದ | |
controllable | ಹಿಡಿತಕ್ಕೆ ಸಿಗುವ | uncontrollable | ಹಿಡಿತಕ್ಕೆ ಸಿಗದ |
(ತ) ಕೆಲವೆಡೆಗಳಲ್ಲಿ in ಇಲ್ಲವೇ dis ಬಂದಿರುವಲ್ಲಿ ಅವುಗಳ ಬದಲು un ಎಂಬುದನ್ನು ಬಳಸಲು ಬರುತ್ತದೆ, ಮತ್ತು ಅಂತಹ ಕಡೆಗಳಲ್ಲಿ ಈ ವ್ಯತ್ಯಾಸದ ಮೂಲಕ ಅಲ್ಲಗಳೆಯುವ ಹುರುಳಿನಲ್ಲೇನೇ ಒಂದು ಬಗೆಯ ವ್ಯತ್ಯಾಸವನ್ನು ತೋರಿಸಲು ಬರುತ್ತದೆ: ಎತ್ತುಗೆಗಾಗಿ, ಮತ್ತು ಎಂಬ ಎರಡು ಬಳಕೆಗಳೂ ಇಂಗ್ಲಿಶ್ನಲ್ಲಿದ್ದು, ಅವುಗಳಲ್ಲಿ ಎರಡನೆಯ ಪದಕ್ಕೆ ಸರಿಪಡಿಸಲು ಸಾದ್ಯವೇ ಇಲ್ಲ ಎಂಬುದಾಗಿ ಒತ್ತಿಹೇಳುವ ಹುರುಳಿದೆ.
ಇಂತಹ ಕಡೆಗಳಲ್ಲಿ in ಇಲ್ಲವೇ dis ಒಟ್ಟುಗಳನ್ನು ಬಳಸಿರುವ ಪದಗಳಿಗೆ ಸಾಟಿಯಾಗಿ ಇಂತಹ ಹೆಚ್ಚಿನ ಹುರುಳನ್ನು ಕೊಡಬಲ್ಲ ಪದಗಳನ್ನು ಇಲ್ಲವೇ ನುಡಿತಗಳನ್ನು ಕನ್ನಡದಲ್ಲಿ ಕಟ್ಟಬೇಕಾಗುತ್ತದೆ. ಸಾಮಾನ್ಯವಾಗಿ ಈ ಮೂರು ಒಟ್ಟುಗಳಲ್ಲಿ un ಎಂಬುದು ನೇರವಾದ ಅಲ್ಲಗಳೆತವನ್ನು ತಿಳಿಸಲು ಬಳಕೆಯಾಗುತ್ತದೆ.
(ಈ ಒಳಪಸುಗೆ ಇಂಗ್ಲಿಶ್ ಪದಗಳಿಗೆ…-13ರಲ್ಲಿ ಮುಂದುವರಿಯುತ್ತದೆ)
1 Response
[…] (ಇಂಗ್ಲಿಶ್ ಪದಗಳಿಗೆ…-12ರಿಂದ ಮುಂದುವರಿದುದು) […]