ಇನ್ನೇನು ಬರಲಿದೆ ಹಾರುವ ಬಯ್ಕು

– ಜಯತೀರ‍್ತ ನಾಡಗವ್ಡ.

flying bike 2

ಬಯ್ಕುಗಳು ನಮ್ಮಲ್ಲಿ ಹಲವರಿಗೆ ದಿನನಿತ್ಯದ ಸಾರಿಗೆಯ ಸಂಗಾತಿ. ಬೆಳೆಯುತ್ತಿರುವ ಬೆಂಗಳೂರಿನಂತಹ ಊರುಗಳಲ್ಲಿ ನೀವು ತಲುಪಬೇಕಿರುವ ತಾಣವನ್ನು ಕಡಿಮೆ ಹೊತ್ತಿನಲ್ಲಿ ತಲುಪಲು ಮತ್ತು ರಸ್ತೆ ಬಂಡಿಗಳ ಒಯ್ಯಾಟದಿಂದ ದೂರವಿರಲು ಈ ಬಯ್ಕುಗಳಿಂದ ಸಾದ್ಯವಿಲ್ಲದಂತಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅಮೇರಿಕಾದ ಕಂಪನಿಯೊಂದು ಹಾರುವ ಬಯ್ಕು ತಯಾರಿಕೆಯಲ್ಲಿ ತೊಡಗಿಕೊಂಡಿದೆ. ಮರುಳುಗಾಡಿನಲ್ಲಿ ಹಾಗೂ ಹಿಮಗಾಡಿನಲ್ಲಿ ಓಡಾಡಲು ತಯಾರಾಗಿರುವ ಬಂಡಿಗಳನ್ನೇ ಹೋಲುವ ಇವುಗಳನ್ನು ಒಂದು ಬಗೆಯ ಹೋವರ್ ಬಯ್ಕುಗಳು ಎನ್ನಬಹುದು. ಕ್ಯಾಲಿಪೋರ‍್ನಿಯಾ ಮೂಲದ ಏರೋಪೆಕ್ಸ್(Aerofex) ಎಂಬ ಸಂಸ್ತೆ 2017ರ ಹೊತ್ತಿಗೆ ಇಂತಹ ಇಗ್ಗಾಲಿ ಬಂಡಿಯೊಂದನ್ನು ಅಣಿಗೊಳಿಸುವುದಾಗಿ ಹೇಳಿದೆ. ಏರೋಪೆಕ್ಸ್ ಕೂಟದವರು ತಯಾರಿಸುತ್ತಿರುವ ಈ ಬಂಡಿ ಇಬ್ಬರನ್ನು ಹೊತ್ತು ಸುಮಾರು 10 ಅಡಿ ಮೇಲೆ ಹಾರಬಲ್ಲದು. 2017ಕ್ಕೆ ಬಿಡುಗಡೆಗೊಳ್ಳಲಿರುವ ಈ ಇಗ್ಗಾಲಿ ಬಂಡಿಯು ಗಂಟೆಗೆ 72 ಕಿ.ಮೀ ವೇಗದಲ್ಲಿ ಹಾರುತ್ತ ಸಾಗುತ್ತದಂತೆ.

ಇದರ ಬೆಲೆ 85000 ಡಾಲರ್ ಆಗಿದ್ದು ಏರೋಪೆಕ್ಸ್ ಸಂಸ್ತೆ ಅದಾಗಲೇ ತಮ್ಮ ಮಿಂದಾಣದ ಮೂಲಕ ಮುಂಗಡ ಕಾಯ್ದಿರಿಸುವಿಕೆಯನ್ನು ಆರಂಬಿಸಿದೆ. ಮುಂಗಡ ಕಾಯ್ದಿರಿಸಲು ಅಯ್ದು ಸಾವಿರ ಡಾಲರ್ ಹಣ ತೆರಬೇಕು. ನೆಲದಿಂದ 3 ಮೀಟರ್ ದೂರ ಅಂದರೆ ಸುಮಾರು ಹತ್ತು ಅಡಿಗಳಶ್ಟು ಮೇಲೆ ಹಾರುವ ಈ ಬಯ್ಕು ದಾರಿಗುಂಟ ಬರುವ ಅಡೆತಡೆಗಳನ್ನು ತೊಂದರೆಯಿಲ್ಲದೆ ನಿಬಾಯಿಸುತ್ತದೆ.

ಈ ಬಯ್ಕಿನ ಹಮ್ಮುಗೆಯ ಹಲವು ಕೆಲಸಗಳು ಬಾಕಿಯಿದ್ದು ಮತ್ತು ಅದನ್ನು ಓರೆಗೆ ಹಚ್ಚುವಿಕೆಯ ಕೆಲಸಗಳು ಬಿರುಸಿನಿಂದ ಸಾಗಿದೆ. ಬಂಡಿಯನ್ನು ಹತೋಟಿಯಲ್ಲಿಟ್ಟುಕೊಳ್ಳುವ ಮತ್ತು ಅದರ ನೆಲೆಗೊಳ್ಳುವಿಕೆಯನ್ನು ಮ್ರದುಗೊಳಿಸುವುದು ಪ್ರಮುಕವಾದವು. ಇದರಲ್ಲಿ ಸಾಮಾನ್ಯ ಇಗ್ಗಾಲಿ ಬಂಡಿಯಲ್ಲಿರುವ ಗಾಲಿಗಳ ಬದಲು ಕಾರ‍್ಬನ್ ಪಾಯ್ಬರ್ ತಿರುಗೋಲುಗಳನ್ನು(carbon Fibre Rotors) ಜೋಡಿಸಲಾಗಿದೆ. ಇದರಿಂದ ಈ ಬಯ್ಕು ನೇರವಾಗಿ ಮೇಲೆರಲು ಮತ್ತು ನೆಲಕ್ಕಿಳಿಯಲು ಅನುಕೂಲವಾಗುವುದಲ್ಲದೇ ಯಾವುದೇ “ರನ್ವೇ”(Runway) ಅಗತ್ಯವೂ ಇಲ್ಲ ಎಂದು ಏರೋಪೆಕ್ಸ್ ಕೂಟ ಹೇಳಿಕೊಂಡಿದೆ. ದುಬಾರಿ ಹೆಲಿಕಾಪ್ಟರ್ ಮತ್ತು ಬಾನೋಡಗಳ ಬದಲಾಗಿ ಇಂತ ಇಗ್ಗಾಲಿಬಂಡಿಗಳು ಎಲ್ಲ ಮಂದಿಯ ಸಾರಿಗೆಗೆ ತಕ್ಕುದಾಗಿವೆ ಎಂಬುದು ಏರೋಪೆಕ್ಸ್ ನವರ ಅನಿಸಿಕೆ.

flying bike

ಬರಿ ಹಾರುವ ಬಯ್ಕ್ ತರಹವಶ್ಟೇ ಅಲ್ಲದೇ, ಸಾಮಾನ್ಯ ಬಯ್ಕಿನಂತೆ ನೆಲದ ಮೇಲೆ ಸುಲಬವಾಗಿ ಇದನ್ನು ನೀವು ಓಡಿಸಬಹುದು. ನೆಲದ ಮೇಲೆ ಜುಮ್ಮನೆ ಸಾಗುವಂತೆ ತಕ್ಕ ಎಲ್ಲ ಏರ‍್ಪಾಟುಗಳನ್ನು ಈ ಬಂಡಿಯಲ್ಲಿ ಒದಗಿಸಿದ್ದಾರೆ. ವಾರದ ಕೊನೆಯ ಬಿಡುವಿನ ದಿನಗಳಲ್ಲಿ ಕೆಲವು ಗಂಟೆಗಳಲ್ಲೇ ಇದನ್ನು ಓಡಿಸುವುದು ಕಲಿಯಬಹುದಾಗಿದೆ.

ಏರೋಪೆಕ್ಸ್ ಕೂಟದ ಕೆಲವು ಹಿರಿಯ ಅದಿಕಾರಿಗಳ ಪ್ರಕಾರ, ಬಂಡಿಯ ತೂಕ 356 ಕೆ.ಜಿ ಗಳಶ್ಟಿದೆ. ಇದರ ಮೇಲಾಗಿ 140 ಕೆ.ಜಿ.ಗಳಶ್ಟು ಬಾರವನ್ನು ಇದು ಹೊರಬಲ್ಲದು. ಇದರ ಉರುವಲು ಚೀಲ(fuel tank) ದ ಮಾಹಿತಿಕೊಡಲೊಲ್ಲದ ಅದಿಕಾರಿಗಳು, ಒಂದು ಸಾರಿ ಇದರಲ್ಲಿ ಉರುವಲು ತುಂಬಿಸಿದರೆ 75 ನಿಮಿಶಗಳವರೆಗೆ ಆರಾಮವಾಗಿ ಓಡಿಸುತ್ತ, ಇಲ್ಲವೇ ಹಾರಿಸುತ್ತ ಹೋಗಬಹುದು ಎಂದಿದ್ದಾರೆ.

(ಮಾಹಿತಿ ಮತ್ತು ಚಿತ್ರ ಸೆಲೆ: asianage.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: