ಅಗ್ಗದ ಬೆಲೆಯ ಮಿಂಚಿನ ಕಾರು

– ಜಯತೀರ‍್ತ ನಾಡಗವ್ಡ.

gigafactory
ಮಿಂಚಿನ ಕಾರು (Electric cars) ತಯಾರಕ ಕೂಟ ಟೆಸ್ಲಾ ಇದೀಗ ಇತರೆ ದೇಶಗಳತ್ತ ಮುಕ ಮಾಡಿದೆ. ಅಮೇರಿಕ, ಕೆನಡಾದಂತ ನಾಡುಗಳಲ್ಲಶ್ಟೇ ಮಾರಾಟವಾಗುತ್ತಿದ್ದ ಇವರ ಕಾರುಗಳು ದೂರದ ಬ್ರಿಟನ್ ಗೆ ಕಾಲಿಟ್ಟಿವೆ. ಹೆಸರುವಾಸಿ ಬ್ರಿಟಿಶ್ ಬರಹಗಾ ರ‍್ತಿ ಇ. ಎಲ್. ಜೆಯ್ಮ್ಸ್ ಇವರಿಗೆ, ಟೆಸ್ಲಾ ಕೂಟದ ಮೊದಲ ಬಲಗಡೆ ಮಿಂತಿಗುರಿ ಹೊಂದಿರುವ ಕಾರು ನೀಡುವ ಮೂಲಕ ಟೆಸ್ಲಾದ ಮುಂದಾಳು ಎಲಾನ್ ಮಸ್ಕ್ ಇನ್ನೊಂದು ಹೆಜ್ಜೆ ಮುಂದಿರಿಸಿದ್ದಾರೆ. ಮೇಲಿಂದ ಮೇಲೆ ಪೆಟ್ರೋಲ್/ಡಿಸೇಲ್ ತುಂಬಿಸುವ ಕಿರಿಕಿರಿ ಮತ್ತು ಕಡಿಮೆ ಬ್ಯಾಟರಿ ಹೊಂದಿರುವ ಕಾರುಗಳ ತಲೆನೋವನ್ನು ಓಡಿಸಲಿದೆ ಟೆಸ್ಲಾ-ಎಸ್ ಕಾರು. ಇದಕ್ಕೆ ಕಾರಿನಲ್ಲಿ ಸಾಕಶ್ಟು ಬ್ಯಾಟರಿಗಳನ್ನು ಅಳವಡಿಸಲಾಗಿದ್ದು, ಇ. ಎಲ್. ಜೆಯ್ಮ್ಸ್ ಗೆ ಸಂತಸ ತಂದಿದೆ.

ಇಂದು ಹೆಚ್ಚು ಮಿಂಚಿನ ಕಾರುಗಳು ದುಬಾರಿಯಾಗಿದ್ದು, ಇವುಗಳ ಬ್ಯಾಟರಿಗಳು ಕೂಡ ಕಡಿಮೆ ಹೊತ್ತಿನಲ್ಲಿ ಚಾರ‍್ಜ್ ಕಳೆದುಕೊಳ್ಳುತ್ತದೆ. ಒಮ್ಮೆ ಚಾರ‍್ಜ್ ಗೊಳಿಸಿದರೆ ಬಲುದೂರ ಓಡಬಲ್ಲ ಹಾಗೂ ಕಡಿಮೆ ದರದ ಮಿಂಚಿನ ಕಾರುಗಳನ್ನು ತಯಾರಿಸುವುದೇ ಟೆಸ್ಲಾ ಕೂಟದ ಪ್ರಮುಕ ಗುರಿಯಾಗಿದೆ. 2017ರ ಹೊತ್ತಿಗೆ ಕಡಿಮೆ ಬೆಲೆಯ ಮಿಂಚಿನಕಾರುಗಳನ್ನು ತಯಾರಿಸಿ ಹೆಚ್ಚು ಜನರನ್ನು ತಲುಪುವ ಮಹದಾಸೆಯೊಂದಿಗೆ ಟೆಸ್ಲಾ ಕೂಟ ಅಮೇರಿಕಾದಲ್ಲಿ “ಗಿಗಾಪ್ಯಾಕ್ಟರಿ” ಯೊಂದನ್ನು ತೆರೆಯಲು ಮುಂದಾಗಿದೆ. ಹೆಚ್ಚು ಕಾಲ ಬಾಳಬಲ್ಲ ಲಿತಿಯಮ್-ಅಯಾನ್ ಬ್ಯಾಟರಿಗಳನ್ನು ಈ ಗಿಗಾಪ್ಯಾಕ್ಟರಿ ಎಂಬ ಕಾರ‍್ಕಾನೆಯಲ್ಲಿ ತಯಾರಿಸಲಾಗುವುದೆಂದು ಸಂಸ್ತೆ ಹೇಳಿಕೊಂಡಿದೆ. ಈ ಕಾರ‍್ಕಾನೆಯಲ್ಲಿ ನೇಸರನ ಮತ್ತು ಗಾಳಿಯ ಕಸುವಿನ ಹೆಚ್ಚಿನ ಬಳಕೆಯನ್ನು ಮಾಡಲಾಗುತ್ತಿರುವುದು ಇನ್ನೊಂದು ವಿಶೇಶ. ಅಮೇರಿಕಾದ ಅರಿಜೋನಾ, ಟೆಕ್ಸಾಸ್, ನ್ಯೂ ಮೆಕ್ಸಿಕೋ ಮತ್ತು ನೆವಾಡಾ ನಾಡುಗಳು ಈ ಕಾರ‍್ಕಾನೆಗೆ ಜಾಗ ನೀಡಲು ಮುಂದೆ ಬಂದಿವೆ.

gigafactory2ಮಿಂಚಿನ ಕಾರುಗಳಲ್ಲಿ ಬ್ಯಾಟರಿಗಳು ದುಬಾರಿ ಸರಕಾಗಿದ್ದು, ಇವುಗಳಿಂದಲೇ ಕಾರುಗಳ ಬೆಲೆಯೂ ಆಕಾಶದೆತ್ತರಕ್ಕೆ ಹೋಗಿವೆ. ಮಿಂಚಿನ ಕಾರುಗಳಲ್ಲಿ ಬ್ಯಾಟರಿ ಗೊಂಚಲನ್ನು “ಪವರ್ ಪ್ಯಾಕ್” ಎಂದು ಕರೆಯಲಾಗುತ್ತದೆ. 7000 ಲಿತಿಯಮ್-ಅಯಾನ್ ಬ್ಯಾಟರಿಗಳನ್ನು ಸೇರಿಸಿ ತಯಾರುಗೊಳ್ಳುವ ಪವರ‍್ಪ್ಯಾಕ್, ಟೆಸ್ಲಾ ಕಾರುಗಳ ಕಸುವಿನ ಸೆಲೆ (ನಮ್ಮ ಮಡಿಲೆಣ್ಣುಕದಲ್ಲೂ ಇಂತಹದ್ದೇ ಬ್ಯಾಟರಿಗಳು ಕೆಲಸಮಾಡುತ್ತವೆ). ಬರುವದಿನಗಳಲ್ಲಿ ಜಗತ್ತಿನೆಲ್ಲಾ ಮಡಿಲೆಣ್ಣುಕ ಮಾರಾಳಿಗಳು ಕೊಂಡುಕೊಳ್ಳುವ ಬ್ಯಾಟರಿಗಿಂತ ಹೆಚ್ಚು ಟೆಸ್ಲಾ ಕೂಟವೊಂದೇ ಕೊಂಡುಕೊಳ್ಳಲಿದೆ.

ಇಂದಿನ ಬಹುತೇಕ ಮಿಂಚಿನ ಕಾರು ತಯಾರಕರು ಬ್ಯಾಟರಿಗಳ ದುಬಾರಿ ಬೆಲೆಯಿಂದ ತಲೆಕೆಡಿಸಿಕೊಂಡಿರುವಂತಿದೆ. ಆದರೆ ಟೆಸ್ಲಾ ಕೂಟ ಮಾತ್ರ ಈ ಪಣಕ್ಕೆ ತನ್ನನ್ನು ತಾನು ಅಣಿಮಾಡಿಕೊಳ್ಳುತ್ತಿದೆ. ಅಗ್ಗದ ಬೆಲೆಯ ಬ್ಯಾಟರಿಗೊಂಚಲುಗಳ ಮೂಲಕ ಹೆಚ್ಚು ಕಾರುಗಳನ್ನು ತಯಾರಿಸಿ, ಡಿಸೇಲ್/ಪೆಟ್ರೋಲ್ ಕಾರುಗಳಿಗೆ ಪಣವೊಡ್ಡಿ ನಿಲ್ಲುವುದೇ ತಮ್ಮ ಗುರಿ ಎನ್ನುತ್ತಾರೆ ಎಲಾನ್ ಮಸ್ಕ್. ಗಿಗಾಪ್ಯಾಕ್ಟರಿಯ ಉದ್ದೇಶವೂ ಅದೇ ಆಗಿದ್ದು, ಮಂದಿಯ ಕಯ್ಗೆಟಕುವ ದರದಲ್ಲಿ ಕಾರು ತಯಾರಿಸುವ ಹಟ ಇವರದು.

ಇಂದಿನ ದಿನದಲ್ಲಿ ಬ್ಯಾಟರಿಗಳನ್ನು ಕಾರಿನಲ್ಲಿ ಜೋಡಿಸುವುದು ಮತ್ತು ಅವುಗಳ ತಯಾರಿಕೆಗೆ ಮುನ್ನೂರು ಡಾಲರ್ (ಪ್ರತಿ ಕಿಲೋವ್ಯಾಟ್ ಅವರ್ ಕಸುವಿಗೆ- perkW-hr) ತಗಲುತ್ತದೆ. ಇದು ಟೆಸ್ಲಾದ ಎದುರಾಳಿಗಳ ಹೋಲಿಕೆಗಿಂತ ಅರ‍್ದದಶ್ಟು ಅಗ್ಗ. ಗಿಗಾಪ್ಯಾಕ್ಟರಿಯ ಮೂಲಕ, ಇದನ್ನು ಇನ್ನೂರಕ್ಕಿಳಿಸಿದರೆ ಪೆಟ್ರೋಲ್/ಡಿಸೇಲ್ ಕಾರುಗಳೊಂದಿಗೆ ಮಿಂಚಿನ ಬಂಡಿಗಳು ಸುಲಬವಾಗಿ ಪಯ್ಪೋಟಿಯಲ್ಲಿರಬಹುದು ಎನ್ನುತ್ತದೆ ಅರಕೆ ಸಂಸ್ತೆ ಸ್ಟ್ಯಾನ್ಪರ‍್ಡ್ ಬೆರ‍್ನ್ ಸ್ಟೆಯ್ನ್(Stanford Bernstein). ಗಿಗಾಪ್ಯಾಕ್ಟರಿಯಲ್ಲಿ ಸುಮಾರು ಅಯ್ದು ಲಕ್ಶ ಬ್ಯಾಟರಿಗೊಂಚಲು ತಯಾರಿಸುವ ಹಮ್ಮುಗೆ ಹಾಕಿಕೊಳ್ಳಲಾಗಿದೆ. ಇಶ್ಟೊಂದು ದೊಡ್ಡ ಸಂಕೆಯಲ್ಲಿ ತಯಾರಿಸಿದರೆ ಬ್ಯಾಟರಿ ಪವರ‍್ಪ್ಯಾಕ್ ಬೆಲೆ ಕಂಡಿತವಾಗಿಯೂ ಕಡಿತಗೊಳ್ಳುತ್ತದೆ ಎನ್ನುವುದು ಎಲಾನ್ ಮಸ್ಕ್ ರವರ ವಾದ.

ಈ ವಾದವನ್ನು ಕೆಲವರು ತಳ್ಳಿಹಾಕಿದ್ದಾರೆ. ಯುಬಿಎಸ್ ಬ್ಯಾಂಕ್ ಪ್ರಕಾರ ಅಗ್ಗದಬೆಲೆಯಲ್ಲಿ ಬ್ಯಾಟರಿ ತಯಾರಿಸುವುದು ಸಾದ್ಯವಿಲ್ಲ ಯಾಕೆಂದರೆ ಕಚ್ಚಾ ಸರಕುಗಳು ಸುಲಬ ಬೆಲೆಯಲ್ಲಿ ದೊರೆಯಲಾರವಂತೆ. ಇದರಲ್ಲಿ ಕಡಿತಗೊಳಿಸಿವುದು ಕಶ್ಟ ಸಾದ್ಯವೆನ್ನುವುದು ಬ್ಯಾಂಕಿನವರ ಅನಿಸಿಕೆ. ರಿಕಾರ್‍ಡೋ(Ricardo) ಎಂಬ ಸಂಸ್ತೆಯ ಬಿಣಿಗೆಯರಿಗ ಪವ್ಲ್ ರಿವೇರಾ(Paul Rivera) ಹೇಳುವಂತೆ ಅಗ್ಗಬೆಲೆಯಲ್ಲಿ ಬ್ಯಾಟರಿ ತಯಾರಿಸಿದರೆ ಮಿಂಚಿನ ಕಾರುಗಳ ಕಸುವು, ಅಳವುತನ, ತಿರುಗುಬಲದ ಮೇಲೆ ಪರಿಣಾಮವಾಗಲಿದೆಯಂತೆ. ಇದರಿಂದ ಇತರೆ ಬಂಡಿಗಳಿಗೆ ಪಯ್ಪೋಟಿವೊಡ್ಡಲಾಗದು ಅನ್ನುವುದು ಪವ್ಲ್ ರ ಅಬಿಪ್ರಾಯ. ಹುರುಪು, ಹುಮ್ಮಸ್ಸುಗಳಿಂದ ಹೊಸತನ ಮಾಡುವ ಹಂಬಲ ಹೊಂದಿರುವ ಎಲಾನ್ ಮಸ್ಕ್ ರ “ಗಿಗಾಪ್ಯಾಕ್ಟರಿ” ಕೆಲಸ ಮಾಡುವುದನ್ನು ನೋಡಲು 2017ರವೆರೆಗೆ ಕಾಯಬೇಕು.

(ಮಾಹಿತಿ ಸೆಲೆ: economist.com)
(ಚಿತ್ರ ಸೆಲೆ: longtailpipe.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: