ಎಸೆತದೆಣಿಕೆಯ ಎಡವಟ್ಟು

– ಹರ‍್ಶಿತ್ ಮಂಜುನಾತ್.

indvssl
ಕಾಲದ ಗಾಲಿಗೆ ಸಿಕ್ಕಿ ವೇಗವಾಗಿ ಓಡುತ್ತಿರುವ ಹೊತ್ತಿಲ್ಲದ ನಮ್ಮ ಬದುಕಲ್ಲಿ ಎಡವಟ್ಟುಗಳು ಬಲು ಸಹಜ. ಒಮ್ಮೊಮ್ಮೆ ನಾವು ಅಂದುಕೊಳ್ಳದ ರೀತಿಯಲ್ಲಿ ನಮ್ಮ ಕೆಲವು ವಿಚಿತ್ರ ಎಡವಟ್ಟುಗಳು ನಗೆ ತರಿಸಿದರೆ, ಮತ್ತೆ ಕೆಲವು ಪರಿಣಾಮಕಾರಿಯಾಗಿ ಬದಲಾಗುವುದೂ ಉಂಟು. ಆದರೆ ಇನ್ಯಾರೋ ಮಾಡಿದ ಎಡವಟ್ಟಿಗೆ ಮತ್ತಿನ್ಯಾರೋ ಬಲಿಯಾದರೆ ಹೇಗಾಗಬಹುದು ಹೇಳಿ ? ದಾಂಡಾಟದಲ್ಲಾದ(Cricket) ಅಂತಹದ್ದೇ ಒಂದು ಎಡವಟ್ಟಿನ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

2012 ಪೆಬ್ರವರಿ 14 ರಂದು ಇಂಡಿಯಾ ಮತ್ತು ಶ್ರೀಲಂಕಾ ನಡುವೆ 50 ಎಸೆತಗಟ್ಟು(Overs)ಗಳ ಒಂದು ದಾಂಡಾಟ ನಡೆದಿತ್ತು. ಆಸ್ಟ್ರೇಲಿಯಾದ ಅಡಿಲೇಡ್ ಬಯಲಿನಲ್ಲಿ ಸಾಗಿದ ಈ ಪಯ್ಪೋಟಿಯಲ್ಲಿ ತೀರ್‍ಪುಗಾರ(Umpire) ಮಾಡಿದ ಒಂದು ಸಣ್ಣ ಎಡವಟ್ಟು, ಆಟದ ಪಲಿತಾಂಶವನ್ನೇ ಬದಲಿಸಿದ್ದು ವಿಪರ್‍ಯಾಸವೇ ಸರಿ. ಮೊದಲು ದಾಂಡುಗಾರಿಕೆ(Batting) ಮಾಡಿದ ಶ್ರೀಲಂಕಾ ತಂಡ ಜಯವರ್‍ದನೆ ಹಾಗೂ ಚಂಡಿಮಾಲ್ ಉತ್ತಮ ದಾಂಡುಗಾರಿಕೆಯ ಸಹಾಯದಿಂದ ನಿಗದಿತ 50 ಎಸೆತಗಟ್ಟುಗಳಲ್ಲಿ 9 ಹುದ್ದರಿ(Wicket)ಗಳನ್ನು ಕಳೆದುಕೊಂಡು 236 ಓಟ(Runs)ಗಳನ್ನು ಗಳಿಸಿತು. ಇದಕ್ಕುತ್ತರವಾಗಿ ದಾಂಡುಗಾರಿಕೆ ಆರಂಬಿಸಿದ ಇಂಡಿಯಾ ಪಾಳಯವು, ಆರಂಬದ ಕೆಲವು ಆಗಾತಗಳಿಂದ ಚೇತರಿಸಿಕೊಳ್ಳುತ್ತ ನಿದಾನವಾಗಿ ಗುರಿಯೆಡೆಗೆ ಸಾಗುತ್ತಿತ್ತು. ಇಂಡಿಯಾದ ಪರ 91 ಓಟಗಳನ್ನು ಗಳಿಸಿದ ಗಂಬೀರ್, 41ನೇ ಎಸೆತಗಟ್ಟಿನಲ್ಲಿ ತನ್ನ ಹುದ್ದರಿ ಕಳೆದುಕೊಳ್ಳುವಶ್ಟರಲ್ಲಿ ಇಂಡಿಯಾದ ಮೊತ್ತ 5 ಹುದ್ದರಿ ನಶ್ಟಕ್ಕೆ 178. ಬಳಿಕ ಬಂದ ಜಡೇಜಾ ಮತ್ತು ಅಶ್ವಿನ್ ಜೊತೆಸೇರಿಸಿಕೊಂಡ ನಾಯಕ ದೋನಿ ಗುರಿ ಬೆನ್ನಟ್ಟುವುದನ್ನು ಮುಂದುವರೆಸಿದ್ದರು. ಓಟ ಗಳಿಕೆಯಲ್ಲಿ ಏರಿಳಿತ, ನಡು ನಡುವೆ ಹುದ್ದರಿಯ ಕಳೆತ ಹೀಗೆ ಹೊತ್ತು ಕಳೆದಂತೆ, ಆಟ ಸಾಗಿದಂತೆ ನೋಡುಗರಿಗೆ ಕುತೂಹಲವನ್ನೂ ಬರಮಾಡುತ್ತಿತ್ತು.

ಕೊನೆಯ ಎಸೆತಗಟ್ಟಿನ ಆರು ಎಸೆತಗಳಲ್ಲಿ ಇಂಡಿಯಾಕ್ಕೆ ಗೆಲ್ಲಲು ಒಂಬತ್ತು ಓಟಗಳ ಅವಶ್ಯಕತೆಯಿತ್ತು.ಇಂಡಿಯಾದ ಕಯ್ಯಲ್ಲಿದ್ದದ್ದು 2 ಹುದ್ದರಿ ಮಾತ್ರ. ಒಂದು ಬದಿಯಲ್ಲಿ ಎಸೆತಗಾರಿಕೆ ನಡೆಸಲು ಲಸಿಂತ್ ಮಾಲಿಂಗ ತಯಾರಿ ನಡೆಸಿದರೆ, ಇನ್ನೊಂದು ಬದಿಯಲ್ಲಿ ಎಸೆತಗಾರಿಕೆ ಎದುರಿಸಲು ದೋನಿ ಸಜ್ಜಾಗಿದ್ದರು. ಜೊತೆಗೆ ಈ ಕೊನೆಯ ಎಸೆತಗಟ್ಟು ಹೆಚ್ಚಿನ ವಿಶೇಶತೆ ಪಡೆದುಕೊಂಡಿತ್ತು. ಕಾರಣ ಈಗಿನ ದಾಂಡಾಟ(Modern Cricket)ದಲ್ಲಿ ಕೊನೆಯ ಸರದಿಯ ಎಸೆತಗಟ್ಟುಗಳನ್ನು ಎದುರಿಸುವಲ್ಲಿ ದೋನಿ ಜಗತ್ತು ಕಂಡ ಅತಿ ಉತ್ತಮ ದಾಂಡುಗಾರರಲ್ಲಿ ಒಬ್ಬರು. ಹಾಗೆಯೇ ದಾಂಡಾಟದ ಕೊನೆಯ ಸರದಿಯ ಎಸೆತಗಟ್ಟುಗಳನ್ನು ಎಸೆಯುವಲ್ಲಿ ಮಾಲಿಂಗ ಜಗತ್ತು ಕಂಡ ಅತಿ ಉತ್ತಮ ಎಸೆತಗಾರರಲ್ಲಿ ಒಬ್ಬರು. ಹೀಗಿರುವಾಗ ಈ ಎರಡು ಉತ್ತಮ ಆಟಗಾರರ ಮುಕಾಮುಕಿಗೆ ಅಡಿಲೇಡ್ ಬಯಲು ಅಣಿಯಾಗಿತ್ತು.

ಮಾಲಿಂಗ ಎಸೆದ ಕೊನೆಯ ಎಸೆತಗಟ್ಟಿನ ಮೊದಲ ಎರಡು ಎಸೆತಗಳಲ್ಲಿ, ದೋನಿ ಕ್ರಮವಾಗಿ ಜಂಟಿ ಓಟ(Double run), ಮತ್ತು ಒಂಟಿ ಓಟ(Single run) ಗಳಿಸಿದರು. ಮೂರನೆ ಹಾಗೂ ನಾಲ್ಕನೇ ಎಸೆತದಲ್ಲಿ ವಿನಯ್ ಕುಮಾರ್ ಮತ್ತು ದೋನಿ ಕ್ರಮವಾಗಿ ಒಂಟಿ ಓಟಗಳನ್ನು ಗಳಿಸಿದರು. ಆದರೆ ಅಯ್ದನೇ ಎಸೆತದಲ್ಲಿ ವಿನಯ್ ಕುಮಾರ್ ಹುತ್ತರಿಕಳೆತ(Out)ದ ಮೂಲಕ ಇಂಡಿಯಾಕ್ಕೆ ಗೆಲ್ಲಲು ಕೊನೆಯ ಎಸೆತದಲ್ಲಿ 4 ಓಟಗಳ ಅವಶ್ಯಕತೆ ಇತ್ತು. ಆ ಎಸೆತಕ್ಕೆ ಎದುರಿಸುಗ(Striker)ನಾಗಿ ದೋನಿ ನಿಂತಿದ್ದರಿಂತ ಇಂಡಿಯಾದ ಪಾಳಯದಲ್ಲಿ ಆಟ ಗೆಲ್ಲುವ ಬರವಸೆ ಎಶ್ಟಿತ್ತೋ ಅಶ್ಟೇ ಬಯವೂ ಇತ್ತು. ಏಕೆಂದರೆ ಎಸೆತಗಾರಿಕೆಗೆ ಚೆಂಡು ಇದ್ದದ್ದೂ ಮತ್ತದೇ ಮಾಲಿಂಗಾ ಕಯ್ಯಲ್ಲಿ. ನೋಡುಗರ ಹತ್ತು ಹಲವು ಲೆಕ್ಕಾಚಾರಗಳ ನಡುವೆ ತನ್ನದೇ ಆದ ಲೆಕ್ಕಾಚಾರದಲ್ಲಿ ಮಾಲಿಂಗ ಕೊನೆಯ ಎಸೆತ ಎಸೆದೇಬಿಟ್ಟರು. ಆದರೇ ದೋನಿ ಚೆಂಡನ್ನು ಬಲಬದಿ ಎಲ್ಲೆ(Off side boundary)ಯ ಕಡೆ ಜೋರಾಗಿ ಬಾರಿಸುವ ಮೂಲಕ ಮೂರು ಓಟಗಳನ್ನು ಗಳಿಸಲು ಮಾತ್ರ ಸಾದ್ಯವಾಯಿತು. ಆದ್ದರಿಂದ ಇಂಡಿಯಾ 50 ಎಸೆತಗಟ್ಟಿನಲ್ಲಿ 9 ಹುದ್ದರಿ ಕಳೆದುಕೊಂಡು 236 ಓಟ ಗಳಿಸಲಶ್ಟೇ ಶಕ್ತವಾಯಿತು. ಆ ಮೂಲಕ ತೀವ್ರ ಕವ್ತುಕದ ಒಂದು ಆಟ ಸಮಬಲ(Tied)ದ ಮೂಲಕ ಮುಕ್ತಾಯ ಗೊಂಡಿತು. ಹೊತ್ತಿಗನುಸಾರವಾಗಿ ಇತ್ತಂಡಗಳ ಮೇಲಾಟದಿಂದ ಸಾಗುತ್ತಾ ಸಾಗುತ್ತಾ ಕೊನೆ ಎಸೆತಗಟ್ಟಿನ ಕೊನೆಯ ಎಸೆತದ ವರೆಗೂ ಆಟ ಸಾಗಿದ್ದು ವಿಶೇಶ.

ಆದರೆ ಪಲಿತಾಂಶದಲ್ಲಿ ಇಂತಹ ಒಂದು ಬದಲಾವಣೆಯಾಗುವಲ್ಲಿ ಒಂದು ಎಡವಟ್ಟು ಕೆಲಸ ಮಾಡಿತ್ತು. ಒಂದು ವೇಳೆ ಆ ಎಡವಟ್ಟು ಆಗದೇ ಇದ್ದಿದ್ದರೆ ನಿಜಕ್ಕೂ ನಾವೊಂದು ಬೇರೆಯದೇ ಪಲಿತಾಂಶವನ್ನು ನೋಡಬಹುದಿತ್ತು. ಇವೆಲ್ಲಾ ನಡೆದಿದ್ದು 30 ಎಸೆತಗಟ್ಟಿನಲ್ಲಿ. ಮಾಲಿಂಗ ಪಾಲಾದ ಆ ಎಸೆತಗಟ್ಟಿನಲ್ಲಿ ಕೇವಲ 5 ಎಸೆತಗಳನ್ನು ಮಾತ್ರ ಎಸೆಯಲಾಗಿತ್ತು. ಆ ಎಸೆತಗಟ್ಟಿನ ವಿವರ ಹೀಗಿದೆ.

* 29.1 -ಮಾಲಿಂಗಾರ ನೇರ ಎಸೆತವನ್ನು ದೋನಿ ಮೂರನೇ ಆಳಿನ(Third man) ಕಡೆ ಬಾರಿಸುವ ಮೂಲಕ ಒಂಟಿ ಓಟ ಗಳಿಸಿದರು.
*29.2 -ಮಾಲಿಂಗಾರ ಪುಟಿತೆಸೆತ(Short ball)ವನ್ನು ಗಂಬೀರ್ ಕಾಲಿಂದೆ(Fine leg) ಬಾರಿಸುವ ಮೂಲಕ ನಾಲ್ಕು ಓಟದ ಎಲ್ಲೆ ದಾಟಿಸಿದರು.
*29.3 -ಮಾಲಿಂಗಾರ ನೇರ ಎಸೆತವನ್ನು ಕಾಲಂಚಿ(Square leg)ನಾಚೆ ಬಾರಿಸಿ ಒಂಟಿಓಟ ಗಳಿಸಿದರು.
*29.4 -ಮಾಲಿಂಗಾರ ಹಾರೆಸತ(Full toss)ವನ್ನು ದೋನಿ ಕಾಲಂಚಿನಾಚೆ ಬಾರಿಸುವ ಮೂಲಕ ಜಂಟಿ ಓಟ ಗಳಿಸಿದರು.
*29.5 -ಮಾಲಿಂಗಾರ ಬಲಬದಿಗೆ ವಾಲುತ್ತಿದ್ದ ಎಸೆತವನ್ನು ದೋನಿ ಮೂರನೆಯಾಳಿನ ಕಡೆ ದೂಡುವ ಮೂಲಕ ಮತ್ತು ಒಂಟಿ ಓಟ ಗಳಿಸಿದ್ದರು.

ಆದರೆ ತೀರ್‍ಪುಗಾರ ಇಲ್ಲಿಗೇ ಎಸೆತಗಟ್ಟುಗಳ ಮುಕ್ತಾಯ ಎಂದು ಗೋಶಿಸಿದ್ದರು. ಆ ಮೂಲಕ ಕೇವಲ ಅಯ್ದು ಎಸೆತಗಳಿಗೆ ಆ ಎಸೆತಗಟ್ಟು ಸೀಮಿತವಾಗುವ ಮೂಲಕ ಇಂಡಿಯಾ ಒಂದು ಎಸೆತದ ಕಳೆತ ಅನುಬವಿಸಿತ್ತು. ಬಹುಶ್ಯಹ ಆ ಒಂದು ಎಸೆತ ಎಸೆಯಲ್ಪಟ್ಟಿದ್ದರೆ ಪಲಿತಾಂಶದಲ್ಲಿ ಬದಲಾವಣೆಯಾಗುವ ಸಾದ್ಯತೆಯಿತ್ತು. ಇಂಡಿಯಾ ಆ ಎಸೆತದಲ್ಲಿ ಒಂದು ಓಟ ಗಳಸಿದ್ದರೆ ಪಯ್ಪೋಟಿ ಗೆಲ್ಲುತ್ತಿತ್ತು. ಅತವಾ ಒಂದು ಹುದ್ದರಿ ಕಳೆದುಕೊಂಡಿದ್ದರೆ ಆಟವನ್ನೂ ಕಯ್ ಚೆಲ್ಲುವ ಪರಿಸ್ತಿತಿ ಬಂದೊದಗುತಿತ್ತು. ಇದಲ್ಲದೇ ಆಟ ಬೇರೆಯದೇ ರೀತಿಯಲ್ಲಿಯೇ ಕೊನೆಗೊಳ್ಳುವ ಸಾದ್ಯತೆಯಿತ್ತು.

ಇನ್ನೊಂದು ವಿಶೇಶವೆಂದರೆ, ಈ ವರೆಗೆ ಬಹಳಶ್ಟು ಬಾರಿ ದಾಂಡಾಟ ಸಮಬಲದೊಂದಿಗೆ ಕೊನೆಗೊಂಡಿದೆ. ಆದರೆ ಈ ಪೋಟಿ ಮಾತ್ರ ಕೆಲವು ದಾಕಲೆಗಳಿಗೆ ಪಾತ್ರವಾಯಿತು. ಪೋಟಿ ಸಮಬಲಗೊಂಡಾಗ ಇತ್ತಂಡಗಳು ಸಮಾನ ಎಸೆತಗಟ್ಟುಗಳಲ್ಲಿ, ಸಮಾನ ಹುದ್ದರಿ ಕಳೆದುಕೊಂಡು, ಸಮಾನ ಓಟಮಟ್ಟ(Run rate)ದಲ್ಲಿ, ಸಮಾನ ಓಟ ಗಳಿಸಿದ್ದು ಇದೇ ಮೊದಲು. ಇತರ ಪೋಟಿಗಳಂತೆಯೇ ಈ ಪೋಟಿಯಲ್ಲೂ ಯಾವುದಾದರೊಂದು ತಂಡದ ಪರವಾಗಿ ಪಲಿತಾಂಶ ಬಂದಿದ್ದರೆ ನಾವಿಂದು ಇದನ್ನು ನೆನಪಿಸಿಕೊಳ್ಳುವ ಹೊತ್ತು ಬರುತ್ತಿರಲಿಲ್ಲ. ತೀರ್‍ಪುಗಾರರ ಒಂದು ಸಣ್ಣ ಎಡವಟ್ಟು ಈ ಪೋಟಿಯನ್ನು ವಿಶೇಶ ಪೋಟಿಗಳಲ್ಲಿ ಒಂದರ ಸಾಲಿಗೆ ಸೇರಿಸಿದ್ದು ಮಾತ್ರ ವಿಪರ್‍ಯಾಸ.

(ಚಿತ್ರ ಸೆಲೆ: cricdown.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. jspradeep says:

    ನೀವು ಬಳಕೆಯಲ್ಲಿರುವ ಅಟ ಅನ್ನೊ ಪದನ ಪೋಟಿ ಅಂತ ಬಳಸಿ ಕನ್ನಡ ಬಳಕೆ ಕಷ್ಟ ಮಾಡಿದರೆ ಹೇಗೆ ಮಂಜುನಾಥರವರೆ?

ಅನಿಸಿಕೆ ಬರೆಯಿರಿ: