ಸಿಂಹ ನಡಿಗೆ – ಇದು ಡಾ.ವಿಶ್ಣುವರ್ದನ್ ಹೆಜ್ಜೆಗುರುತು
“ಹಾವಿನ ದ್ವೇಶ ಹನ್ನೆರಡು ವರುಶ, ನನ್ನ ರೋಶ ನೂರು ವರುಶ.” ಹೀಗೆಂದುಕೊಂಡು ಬಿಸಿನೆತ್ತರಿನ ಯುವನಟನೊಬ್ಬ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗ, ಕನ್ನಡ ಚಿತ್ರರಂಗದ ಗಟಾನುಗಟಿಗಳ ಮುಂದೆ ಇವನೇನು ಮಾಡ್ಯಾನು ಎಂಬ ಕೊಂಕು ನುಡಿಗಳನ್ನು ಸವಾಲಾಗಿ ತೆಗೆದುಕೊಂಡು, ತಾನೇನು, ತನ್ನ ನಟನಾ ಶಕ್ತಿಯೇನು ಎಂಬುದನ್ನು ಮೊದಲ ಓಡುತಿಟ್ಟ(Cinema)ದಲ್ಲೇ ಎಲ್ಲರಿಗೂ ತೋರಿಸಿ, ಇಡೀ ಇಂಡಿಯಾ ಚಿತ್ರರಂಗವೇ ತನ್ನತ್ತ ಬೆರಗುಗಣ್ಣಿನಿಂದ ತಿರುಗಿ ನೋಡುವಂತೆ ಮಾಡಿದ ನಟ ವಿಶ್ಣುವರ್ದನ್.
ತನ್ನ ವಿಶಿಶ್ಟ ಅಬಿನಯದ ಮೂಲಕ ದಶಕಗಳ ಕಾಲ ಕನ್ನಡ ಚಿತ್ರರಂಗದ ನಕ್ಶತ್ರವಾಗಿ ಮೆರೆದ ಡಾ. ವಿಶ್ಣುವರ್ದನ್ ಅವರ 64ನೇ ಹುಟ್ಟುಹಬ್ಬ ಇಂದು. ಇಂತಹ ನಲಿವಿನ ಹೊತ್ತಲ್ಲಿ ಅವರು ನಮ್ಮೊಂದಿಗಿಲ್ಲವಲ್ಲ ಎಂಬ ಬೇಸರ ಒಂದೆಡೆಯಾದರೆ, ಅವರ ಬೆರಗಿನ ನಟನೆ ಮತ್ತು ಎಲ್ಲರೂ ಪಾಲಿಸಬಹುದಾದಂತಹ ಅದ್ಬುತ ವ್ಯಕ್ತಿತ್ವವನ್ನು ನಮ್ಮ ನಡುವೆ ಬಿಟ್ಟುಹೋಗಿದ್ದಾರಲ್ಲ ಎಂಬ ನಿರಾಳ ಮನೋಬಾವ ಇನ್ನೊಂದೆಡೆ. ಅಂತ ಒಬ್ಬ ಮಹನೀಯರು ನಡೆದು ಬಂದ ದಾರಿಯೇ ಈ ಬರಹ ‘ಸಿಂಹ ನಡಿಗೆ’.
ಡಾ. ವಿಶ್ಣುವರ್ದನ್ ಅವರ ಮೂಲ ಹೆಸರು ಸಂಪತ್ ಕುಮಾರ್. ಇವರು ಹುಟ್ಟಿದ್ದು ಸಪ್ಟೆಂಬರ್ 18, 1950 ರಂದು ಸಾಂಸ್ಕ್ರುತಿಕ ನಗರ ಮಯ್ಸೂರಿನಲ್ಲಿ. ತಂದೆ ಹೆಚ್. ಎನ್. ನಾರಾಯಣ್ ರಾವ್, ತಾಯಿ ಕಾಮಾಕ್ಶಮ್ಮ. ವಿಶ್ಣು ತಂದೆಯವರು ಒಬ್ಬ ಬರಹಗಾರರೂ, ಸಂಗೀತಾಸಕ್ತರೂ ಆಗಿದ್ದರು. ಅಲ್ಲದೇ ಕನ್ನಡ ಚಿತ್ರರಂಗದ ನಂಟನ್ನೂ ಹೊಂದಿದ್ದರು. ಒಂದು ಉತ್ತಮ ವಾತಾವರಣದ ನಡುವೆ ಬೆಳೆದ ವಿಶ್ಣುರವರಿಗೆ ಎಳವೆಯಿಂದಲೇ ಹೆತ್ತವರ ಮಮತೆ, ಒಡಹುಟ್ಟಿದವರ ಒಲವು, ಬಂದು ಬಳಗದವರ ಪ್ರೀತಿ ದೊರಕಿತು. ಮಯ್ಸೂರಿನ ಗೋಪಾಲಸ್ವಾಮಿ ಕಲಿಕೆಮನೆಯಲ್ಲಿ ತಮ್ಮ ಮೊದಲ ಹಂತದ ಕಲಿಕೆಯನ್ನು ಶುರುವಿಟ್ಟ ಇವರು, ಮುಂದಿನ ಹಂತದ ಕಲಿಕೆಗೆ ಬೆಂಗಳೂರಿಗೆ ತೆರಳಿ, ಬಸವನಗುಡಿಯ ನ್ಯಾಶನಲ್ ಕಲಿಕೆವೀಡಿನಲ್ಲಿ ಕಲಿಕೆಯನ್ನು ಮುಂದುವರೆಸಿದರು.
ತಮ್ಮ ಎಳವೆಯಿಂದಲೇ ನಟನೆಯ ಗೀಳು ಹಿಡಿಸಿಕೊಂಡಿದ್ದ ವಿಶ್ಣು, “ಶಿವಶರಣ ನಂಬೆಯಕ್ಕ” ಎಂಬ ಓಡುತಿಟ್ಟದಲ್ಲಿ 1955ರಲ್ಲಿ ಬಾಲ ನಟನಾಗಿ ನಟಿಸಿದ್ದರು. ವಿಶ್ಣು ನಟನೆಯ ಈ ಓಡುತಿಟ್ಟ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಓಡುತಿಟ್ಟ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಶಂಕರ್ ಸಿಂಗ್ ಸಿದ್ದಪಡಿಸಿದ ಈ ಓಡುತಿಟ್ಟ ಸಂಪತ್ ಕುಮಾರ್ (ವಿಶ್ಣು) ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿತು, ಮುಂದೆ 1956ರಲ್ಲಿ “ಕೋಕಿಲವಾಣಿ” ಎಂಬ ಮತ್ತೊಂದು ಓಡುತಿಟ್ಟದಲ್ಲಿ ಕೂಡ ವಿಶ್ಣು ನಟಿಸಿದ್ದರು. ಇದಾದ ಬಳಿಕ ತಮ್ಮ ಕಲಿಕೆಯ ದಿನಗಳಲ್ಲಿ ಚಿತ್ರರಂಗದ ಕಡೆ ತೆರಳಲು ವಿಶ್ಣು ಹವಣಿಸುತ್ತಿದ್ದರು. ಆದರೆ ತಮ್ಮ ಇತರೆ ಮಕ್ಕಳಂತೆ ವಿಶ್ಣೂ ಕೂಡ ಉನ್ನತ ಮಟ್ಟದ ಕಲಿಕೆ ನಡೆಸಬೇಕೆಂಬುದು ಹೆತ್ತವರ ಬಯಕೆ. ಈ ಎಲ್ಲಾ ಗೊಂದಲದ ನಡುವೆ ವಿಶ್ಣು 70ರ ದಶಕದಲ್ಲಿ ಚಿತ್ರರಂಗದ ಕಡೆಗೆ ಮತ್ತೆ ಮುಕ ಮಾಡಿದರು. ಅದು ವಂಶವ್ರುಕ್ಶ ಎಂಬ ಓಡುತಿಟ್ಟದ ಮೂಲಕ. 1971 ರಲ್ಲಿ ಬಿ.ವಿ ಕಾರಂತ್ ಮತ್ತು ಗಿರೀಶ್ ಕಾರ್ನಾಡ್ ಅವರ ನಡೆಸುವಿಕೆ(Direction)ಯಲ್ಲಿ ತೆರೆಕಂಡ ಕಾದಂಬರಿ ಆದರಿತ ಈ ಓಡುತಿಟ್ಟದಲ್ಲಿ ವಿಶ್ಣುವಿನದ್ದು ಕೇವಲ ಬಂದು ಹೋಗುವ ಪಾತ್ರವಾಗಿತ್ತು.
ಆ ಬಳಿಕ ಶುರುವಾದದ್ದೇ ನಿಜವಾದ ವಿಶ್ಣುವಿನ ಕಾಲ:
ಕನ್ನಡದ ಬೀಶ್ಮ ಎಂದೇ ಕರೆಯಲ್ಪಡುವ ನಡೆಸಾಳು (Director) ಪುಟ್ಣಣ್ಣ ಕಣಗಾಲ್ ಅವರ ಗರಡಿ ಸೇರಿದ ವಿಶ್ಣು ರಾತ್ರೋ ರಾತ್ರಿ ಚಿತ್ರರಂಗದ ನಕ್ಶತ್ರವಾಗಿ ಮೆರೆದದ್ದು ಈಗ ಹಳಮೆ. ವಿಶೇಶವೆಂದರೆ ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ‘ವಿಶ್ಣುವರ್ದನ್’ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ, ಏಕೆಂದರೆ ಆಗಲೇ ಕನ್ನಡ ಓಡುತಿಟ್ಟದಲ್ಲಿ ಮೂವರು ‘ಕುಮಾರ’ರು ಹೆಸರುವಾಸಿಯಾಗಿದ್ದರು. ಹೆಸರಿನ ಬದಲಾವಣೆಯೊಂದಿಗೆ ನಾಯಕನಟನಾಗಿ ‘ನಾಗರಹಾವು’ ಚಿತ್ರದೊಂದಿಗೆ ಓಡುತಿಟ್ಟಕ್ಕೆ ಬರುವ ಮೂಲಕ ವಿಶ್ಣು ಎಂಬ ಚೇತನದ ಉದಯವಾಯಿತು. 29.12.1972 ರಂದು ತೆರೆಕಂಡ ನಾಗರಹಾವು ಓಡುತಿಟ್ಟ, ಬೆಂಗಳೂರಿನ ಸಾಗರ್ ಕಲೆಮನೆ(Theater) ಒಂದರಲ್ಲೇ ಸತತ 25 ವಾರಗಳು ಓಡಿ, ಆಗಿನ ಕಾಲಕ್ಕೇ 7 ಲಕ್ಶ ರೂಪಾಯಿಗಳನ್ನು ಗಳಿಸಿ ಹೊಸ ದಾಕಲೆ ಬರೆಯಿತು. ಮತ್ತು ಬೆಂಗಳೂರಿನ ಮೂರು ಅತಿಮುಕ್ಯ ಕಲೆಮನೆಗಳಲ್ಲಿ ನೂರು ದಿನ ಪೂರಯ್ಸಿದ ಮೊದಲ ಓಡುತಿಟ್ಟವೆಂಬ ಹೆಗ್ಗಳಿಕೆ ಈ ಓಡುತಿಟ್ಟದ್ದು. ಇಶ್ಟೇ ಅಲ್ಲದೇ ಈ ಓಡುತಿಟ್ಟ ರಾಶ್ಟ್ರಪ್ರಶಸ್ತಿ ಗೆದ್ದುಕೊಂಡಿತು. ವಿಶ್ಣುರ ಮೊದಲ ಓಡುತಿಟ್ಟದ ಈ ಗೆಲುವು ‘ಬೆಳೆವ ಸಿರಿ ಮೊಳಕೆಯಲ್ಲಿ ನೋಡು’ ಎಂಬ ನಾಣ್ಣುಡಿಗೆ ಸರಿಹೊಂದುತ್ತದೆ.
ಇಲ್ಲಿಂದ ಮುಂದೆ ವಿಶ್ಣು ಸಾಕಶ್ಟು ಪ್ರತಿಬಾವಂತ ನಡೆಸಾಳುಗಳ ಬಳಿ ಕೆಲಸ ಮಾಡಿದರು. ಇಂತಹ ಹೊಸ ಹೊಸ ಅನುಬವಗಳು ವಿಶ್ಣು ಅವರನ್ನು ಕೆತ್ತಿದ ಶಿಲೆಯ ಹಾಗೆ ರೂಪುಗೊಳ್ಳುವಂತೆ ಮಾಡಿತು. ತನ್ನ ಗೆಳೆಯ ಬಾರ್ಗವ ಅವರ ನಡೆಸುವಿಕೆಯಲ್ಲಿ ಅತಿ ಹೆಚ್ಚು ಓಡುತಿಟ್ಟಗಳಿಗೆ ಬಣ್ಣಹಚ್ಚಿದ ವಿಶ್ಣು, ತನ್ನ ನೆಚ್ಚಿನ ಸಾಹಸ ಓಡುತಿಟ್ಟಗಳನ್ನು ಜೋಸಯ್ಮನ್, ವಿ. ಸೋಮಶೇಕರ್, ಕೆ.ಎಸ್.ಆರ್. ದಾಸ್ ಅವರ ನಡೆಸುವಿಕೆಯಲ್ಲಿ ಹೆಚ್ಚಾಗಿ ನಟಿಸುತ್ತಿದ್ದರು.
ವಿಶ್ಣು ಸಾಹಸ ಪ್ರೇಮಿಗಳ ಅಚ್ಚುಮೆಚ್ಚಿನ ಆಯ್ಕೆ. ವಿಶೇಶವೆಂದರೆ ರೋಮಾಂಚನಕಾರಿ ಸನ್ನಿವೇಶಗಳಲ್ಲಿ ತಾವೇ ಪಾಲ್ಗೊಂಡು ನೋಡುಗರಿಗೆ ಬರ್ಜರಿ ಮನರಂಜನೆಯ ಅವ್ತಣವನ್ನು ನೀಡುತ್ತಿದ್ದರು. ವಿಶ್ಣು ನಟಿಸಿದ್ದ ‘ಸಾಹಸಸಿಂಹ’ ಓಡುತಿಟ್ಟ 25 ವಾರಗಳನ್ನು ಪೂರಯ್ಸುವ ಮೂಲಕ ವಿಶ್ಣು ಬದುಕಿಕೊಂದು ವಿಶಿಶ್ಟ ತಿರುವನ್ನು ನೀಡಿತ್ತು. ಇಲ್ಲಿಂದ ಮುಂದೆ ವಿಶ್ಣು ‘ಸಾಹಸಸಿಂಹ’ ಎಂದೇ ಹಸರುವಾಸಿಯಾದರು.
ಬಳಿಕ ‘ಮುತ್ತಿನಹಾರ’ದ ಸರದಿ. ಇಂಡಿಯಾದ ಗಡಿಯಲ್ಲಿ ಹೋರಾಡುವ ನಾಡಬಿಮಾನಿ ಯೋದನೊಬ್ಬನ ಪಾತ್ರಕ್ಕೆ ವಿಶ್ಣು ಜೀವ ತುಂಬಿದದರು. ಈ ಓಡುತಿಟ್ಟ ನಾಡಬಿಮಾನ, ಪ್ರೀತಿ-ಪ್ರಣಯ, ತಾಯಿಯ ಮಮತೆ ಹೀಗೆ ಎಲ್ಲಾ ವಿಬಾಗದಲ್ಲೂ ಹೆಚ್ಚುಗಾರಿಕೆ ತೋರಿಸಿ ಕನ್ನಡ ಚಿತ್ರರಂಗದಲ್ಲೇ ಒಂದು ಮಯ್ಲುಗಲ್ಲನ್ನು ಕಟ್ಟಿತು. ಮುಂದೆ ನಾಗಣ್ಣ ನಡೆಸುವಿಕೆಯ ‘ಕೋಟಿಗೊಬ್ಬ’ ಓಡುತಿಟ್ಟ ನಿಜಕ್ಕೂ ವಿಶ್ಣುರವರ ನಟನಾ ಶಕ್ತಿಗೆ ಹಿಡಿದ ಕನ್ನಡಿ. ಈ ಓಡುತಿಟ್ಟದ ನಟನೆ ಮತ್ತು ಸಾಹಸ ಅವರನ್ನು ಮತ್ತಶ್ಟು ಎತ್ತರಕ್ಕೆ ಕೊಂಡೊಯ್ಯಿತು. ಇದಲ್ಲದೇ ಜಯಸಿಂಹ, ದಾದ, ಮೋಜುಗಾರ ಸೊಗಸುಗಾರ, ಸಾಮ್ರಾಟ್, ಅಪ್ಪಾಜಿ, ನಿಶ್ಕರ್ಶ ಇವರ ಕೆಲವು ಸಾಹಸಿ ಓಡುತಿಟ್ಟಗಳು.
ಕೇವಲ ಸಾಹಸದ ಓಡುತಿಟ್ಟಗಳಿಗೆ ಸೀಮಿತ ಎಂಬಂತಿದ್ದ ವಿಶ್ಣುರವರಿಗೆ, ಆಪ್ತಗಳೆಯ ನಡೆಸಾಳು (Director), ಎಸ್.ವಿ. ರಾಜೇಂದ್ರಸಿಂಗ್ ಬಾಬುರವರು ತಮ್ಮ ಗೆಳೆಯನಿಗೆ ಬಾವನಾತ್ಮಕ ಪಾತ್ರಗಳನ್ನು ಕೊಟ್ಟು, “ಬಂದನ” ಓಡುತಿಟ್ಟದ ಮೂಲಕ ಒಬ್ಬ ಹೊಸ ವಿಶ್ಣುವನ್ನು ಪರಿಚಯಿಸಿದರು. ಹರೀಶ್ ಎಂಬ ಬೇನೆಮಾಂಜುಗ(doctor) ನ ಬಗ್ನಪ್ರೇಮದ ಎದೆಕಲಕುವ ಕತೆಯಲ್ಲಿ ಬಾವುಕರನ್ನು ಸೆರೆಹಿಡಿಯುವಂತ ಅದ್ಬುತ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಇಡೀ ಕರ್ನಾಟಕದ ಹೆಂಗೆಳೆಯರ ಮನ ಗೆದ್ದರು. ಇನ್ನೂ ಒಂದು ವಿಶೇಶವೆಂದರೆ ಬಂದನ ಚಿತ್ರ ಹಿಂದಿಯಲ್ಲಿ ರೀಮೇಕ್ ಮಾಡಲು ಅಣಿಮಾಡಿ, ನಟ ಅಮಿತಾಬ್ ಬಚ್ಚನ್ ಗೆ ಮಯ್ಸೂರಿನಲ್ಲಿ ತೋರಿಸಲಾಗಿತ್ತು. ಆಗಲೇ ಹಿಂದಿ ಓಡುತಿಟ್ಟದ ಹೆಸರಾಂತ ತಾರೆಯಾಗಿದ್ದ ನಟ ಅಮಿತಾಬ್, “ಈ ಚಿತ್ರವನ್ನು ನಾವು ಮಾಡಬಲ್ಲೆವು. ಆದರೆ ಇಂತಹ ಬಾವನಾತ್ಮಕ ನಟನೆಗೆ ಅರ್ತ ಕಲ್ಪಿಸಬಹುದಾದಂತಹ ಅದ್ಬುತ ನಟನೆಯನ್ನು ನನ್ನಿಂದ ಮಾಡಲು ಸಾದ್ಯವಿಲ್ಲ. ಅದು ವಿಶ್ಣು ಹೊರತು ಪಡಿಸಿ ಮುತ್ಯಾರಿಂದಲೂ ಮಾಡಲಾಗದು” ಎಂದಿದ್ದರು. ಕನ್ನಡದ ವರ ನಟ ರಾಜಕುಮಾರ್ ಈ ಓಡುತಿಟ್ಟ ನೋಡಿ ಕಣ್ಣೀರಿಟ್ಟು, ಎದ್ದು ನಿಂತು ಓಡುತಿಟ್ಟ ಪರದೆಗೆ ಕಯ್ ಎತ್ತಿ ಮುಗಿದಿದ್ದರಂತೆ. ಅಂತಹ ಮನಕಲುಕುವ ನಟನೆ ವಿಶ್ಣು ಅವರದ್ದು. ಇದಲ್ಲದೇ ತುಂಬಿದ ಮನೆ, ಹಬ್ಬ, ಸೂರ್ಯವಂಶ, ಜೀವನಚಕ್ರ, ಹಾಲುಂಡ ತವರು, ಕುಂತೀಪುತ್ರ, ಕರ್ಣ ಸಂಬಂದಗಳ ಮವ್ಲ್ಯವನ್ನು ಹೇಳಿಕೊಡುವ ಇತರ ಓಡುತಿಟ್ಟಗಳು.
ಇನ್ನು ದ್ವಿಪಾತ್ರಗಳ ನಟನೆಯ ವಿಶಯಕ್ಕೆ ಬರುವುದಾದರೆ ನೋಡುಗರಿಗೆ ಅದೊಂದು ಅದ್ಬುತ ಅನುಬವ. ದ್ವಿಪಾತ್ರಗಳಲ್ಲಿ ಅವರ ನಟನೆ ನಿಜಕ್ಕೂ ಸೋಜಿಗ. ಹೊಸರೀತಿಯ ವೇಶಬೂಶಣ, ಸೊಗಸಾದ ಮಾತಿನ ಚತುರತೆ ಅವರಿಗೆ ದೇವರು ಕೊಟ್ಟ ವರ. ಒಂದು ಪಾತ್ರದಿಂದ ಇನ್ನೊಂದು ಪಾತ್ರವನ್ನು ಗುರುತೇ ಹಿಡಿಯದಂತೆ ಬಿನ್ನವಾಗಿ ನಟಿಸುವ ಬಗೆ ಅವರಿಗೆ ಕರಗತ. ಅದಕ್ಕೇ ಅವರು ಹದಿನಯ್ದು ಓಡುತಿಟ್ಟಗಳಲ್ಲಿ ದ್ವಿಪಾತ್ರ ಮತ್ತು ತ್ರಿಪಾತ್ರಗಳಲ್ಲಿ ಅಬಿನಯಿಸಲು ಸಾದ್ಯವಾದದ್ದು. ಅಲ್ಲದೇ ಇಂದಿಗೂ ‘ಅತಿ ಹೆಚ್ಚಿನ ದ್ವಿಪಾತ್ರಗಳನ್ನು ಮಾಡಿದ ನಟ’ ಎಂಬ ದಾಕಲೆ ಇವರದ್ದೇ. ವಿಶ್ಣು ದ್ವಿಪಾತ್ರದಲ್ಲಿ ನಟಿಸಿದ ಓಡುತಿಟ್ಟಗಳಲ್ಲೊಂದು ‘ಯಜಮಾನ’. ಅದನ್ನೊಮ್ಮೆ ನೆನೆದೊಡನೆ ಆ ಮಮಕಾರಮಯಿ ಅಣ್ಣನ ಪಾತ್ರ ಹಾಗೆ ಕಣ್ಣಮುಂದೆ ಬಂದು ನಿಲ್ಲುತ್ತದೆ. ಅಂತಹ ಅಣ್ಣನೊಬ್ಬ ನಮಗೂ ಇರಬಾರದೇ ಎಂಬ ಯೋಚನೆ ಮೂಡುತ್ತದೆ. ಅಂತಹ ಕಣ್ಣಿಗೆ ಕಟ್ಟುವಂತಹ ನಟನೆ ಅವರದ್ದು. ಈ ಓಡುತಿಟ್ಟ ಮಾಡಿದ ಕೆಲವು ದಾಕಲೆಗಳು ಇನ್ನೂ ಹಾಗೇ ಇದೆ. ಇದಲ್ಲದೇ ಜಮೀನ್ದಾರು, ಸಿಂಹಾದ್ರಿಯ ಸಿಂಹ, ವೀರಪ್ಪನಾಯ್ಕ, ಆಪ್ತರಕ್ಶಕ, ದಾದ ಸೇರಿದಂದೆ ಹಲವು ಓಡುತಿಟ್ಟಗಳಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ.
ಒಂದು ವೇಳೆ, ಸಾಹಸಸಿಂಹ ಡಾ. ವಿಶ್ಣುವರ್ದನ್ ಅವರು ಬದುಕಿನ ಪುಟಗಳನ್ನು ತಿರುವುತ್ತಾ ಹೋದರೆ ಒಂದೊಳ್ಳೆ ಮವ್ಲ್ಯಗಳು ತುಂಬಿದ ಹೊತ್ತುಗೆಯನ್ನು ಓದಿದ ಅನುಬವವಾಗುತ್ತದೆ. ವಿಶ್ಣು ಅವರ ವಯಕ್ತಿಕ ಬದುಕು, ನಾಡಬಿಮಾನ, ಚಿತ್ರರಂಗದವರ ನಂಟು, ದಾನ-ದರ್ಮ, ಆದ್ಯಾತ್ಮವೆಂಬ ಸೆಳೆತ, ಸಂದ ಪ್ರಶಸ್ತಿಗಳು, ಗವ್ರವಗಳು ಸೇರಿದಂತೆ ಅವರ ಕೊನೆಯ ದಿನಗಳ ಬಗೆಗಿನ ಕುತೂಹಲಕಾರಿ ವಿಶಯಗಳನ್ನು ಮುಂದಿನ ಬಾಗದಲ್ಲಿ ತಿಳಿದುಕೊಳ್ಳೋಣ.
(ಚಿತ್ರ ಸೆಲೆ: wikipedia)
1 Response
[…] ಹಿಂದಿನ ಬರಹದಲ್ಲಿ ವಿಶ್ಣುರವರ ಎಳವೆ, ಕಲಿಕೆ ಮತ್ತು ಚಿತ್ರರಂಗದಲ್ಲಿ ಬೆಳೆದ ಪರಿ, ದಶಕಗಳ ಕಾಲ ಅಗ್ರಗಣ್ಯ ನಾಯಕ ನಟನಾಗಿ ಕನ್ನಡ ಚಿತ್ರರಂಗವನ್ನು ಆಳಿದ ರೀತಿಗಳೂ ಸೇರಿದಂತೆ ಕರುನಾಡ ಸಿಂಹ ನಡೆದು ಬಂದ ಹಾದಿಯನ್ನು ಕೊಂಚ ಅವಲೋಕಿಸುವ ಒಂದು ಸಣ್ಣ ಪ್ರಯತ್ನವನ್ನು ನಿಮ್ಮ ಮುಂದಿಡಲಾಗಿತ್ತು. ಅದರ ಮುಂದುವರಿದ ಬಾಗವಾಗಿ, ಈ ಬರಹದಲ್ಲಿ ವಿಶ್ಣುರವರ ಕುರಿತ ಕೆಲ ವಯುಕ್ತಿಕ ವಿಚಾರಗಳನ್ನು ತಿಳಿಯೋಣ. […]