ಕರುನಾಡು ಕನ್ನಡಿಗರ ಸ್ವತ್ತು, ಸ್ವಾರ‍್ತ ರಾಜಕಾರಣಿಗಳದ್ದಲ್ಲ
ಮಾಜಿ ಸಚಿವರು ಮತ್ತು ಬಿ ಜೆ ಪಿಯ ಶಾಸಕರಾದಂತ ಮಾನ್ಯ ಉಮೇಶ ಕತ್ತಿಯವರ, “ಉತ್ತರ ಕರ‍್ನಾಟಕ ಬೇರೆ ರಾಜ್ಯವಾಗಬೇಕು” ಎಂಬ ಹೇಳಿಕೆ ಈಗ ಎಲ್ಲೆಡೆ ಚರ‍್ಚೆಯಾಗುತ್ತಿದೆ. ಮಾನ್ಯ ಶಾಸಕರು ಇಂತಹ ಹೇಳಿಕೆ ನೀಡಿದ್ದು ಇದೇ ಮೊದಲೇನಲ್ಲ. ಹೋದವರುಶವೂ ರಾಜ್ಯ ಒಡೆಯುವುದರ ಬಗ್ಗೆ ಅವರು ಮಾತನಾಡಿದ್ದರು. “ಉತ್ತರ ಕರ‍್ನಾಟಕ ಏಳಿಗೆಯಲ್ಲಿ ಹಿಂದೆ ಬಿದ್ದಿದೆ, ಕರ‍್ನಾಟಕ ರಾಜ್ಯವು ದೊಡ್ಡದಿರುವುದೇ ಇದಕ್ಕೆ ಕಾರಣ, ರಾಜ್ಯವು ಚಿಕ್ಕದಾಗಿದ್ದರೆ ಏಳಿಗೆಗೆ ಅನುಕೂಲವಾಗುತ್ತದೆ, ಆದರಿಂದ ರಾಜ್ಯವನ್ನು ಒಡೆಯಬೇಕೆನ್ನುವ ನನ್ನ ನಿಲುವು ಸರಿ” ಎಂದೂ ಅವರು ಹೇಳಿದ್ದಾರೆ. ಆದರೆ,
“ನನಗೂ ಮುಕ್ಯಮಂತ್ರಿಯಾಗುವ ಆಸೆ ಇದೆ, ಉತ್ತರ ಕರ‍್ನಾಟಕ ಬೇರೆ ರಾಜ್ಯವಾದರೇ ಅದಕ್ಕೆ ನಾನೇ ಮುಕ್ಯಮಂತ್ರಿ”
ಎಂದು ಅವರೇ ಆಡಿದ ಮಾತುಗಳು ರಾಜ್ಯ ಒಡೆಯುವುದರ ಹಿಂದಿನ ಅವರ ನಿಜವಾದ ಉದ್ದೇಶ ಬಹಿರಂಗ ಪಡಿಸಿದೆ. ಮುಕ್ಯಮಂತ್ರಿಯಾಗಲಿಕ್ಕೆ ರಾಜ್ಯವನ್ನೇ ಒಡೆಯಬೇಕೆನ್ನುವ ನಾಯಕರು ನಮ್ಮನ್ನು ಆಳುತ್ತಿದ್ದಾರೆ, ಅಂತವರನ್ನು ನಾವು ಆರಿಸಿ ಕಳಿಸುತ್ತಿದ್ದೇವೆ ಎಂಬುದೇ ಈ ನಾಡಿನ ದುರಂತ ಅಲ್ಲವೇ? ವಾಸ್ತವತೆಯನ್ನು ಹಾಗೂ ಮುಂದಾಗುವ ಪರಿಣಾಮವನ್ನು ಸರಿಯಾಗಿ ತಿಳಿಯದೇ ತಮ್ಮ ಬೇಳೆ ಬೇಯಿಸಿಕೊಳ್ಳಲು ರಾಜ್ಯ ಎರಡು ಮಾಡಬೇಕೆಂಬುವ ಮಾತುಗಳನ್ನು ಕನ್ನಡಿಗರು ವಿರೋದಿಸಲೇಬೇಕು.
ಮೊದಲಿಗೆ ಈ “ಬೇರೆಯಾಗಬೇಕು” ಎಂಬ ಬೇಡಿಕೆಯ ಬಗ್ಗೆ ತಿಳಿಯೋಣ. ಉತ್ತರ ಕರ‍್ನಾಟಕ ಬೇರೆ ಮಾಡಬೇಕೆಂದು ಹೇಳುವಾಗಲೆಲ್ಲಾ ಏಳಿಗೆಯಲ್ಲಿ ಅದು ಹಿಂದಿರುವ ಕಾರಣವನ್ನು ಮುಂದುಮಾಡಲಾಗುತ್ತದೆ. ಅದಕ್ಕೆ ಪುರಾವೆ ಎಂಬಂತೆ “ನಂಜುಂಡಪ್ಪ ವರದಿ” ಎಂಬ ವರದಿ ಕಡೆ ಬೊಟ್ಟು ಮಾಡುತ್ತಾರೆ. ಇಡೀ ಕರ‍್ನಾಟಕದ ಸ್ತಿತಿ-ಗತಿ-ಏಳಿಗೆಯನ್ನು ತಿಳಿಯಲು ಮತ್ತು ಆಗ ಕಂಡು ಬರುವ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ಮುಕ್ಯಮಂತ್ರಿ ಎಸ್ ಎಮ್ ಕ್ರಿಶ್ಣರವರು ತಮ್ಮ ಆಳ್ವಿಕೆಯಲ್ಲಿ, ಡಾ।। ಡಿ ಎಂ ನಂಜುಂಡಪ್ಪ ಎಂಬುವರ ಮುಂದಾಳ್ತನದಲ್ಲಿ ಸಮಿತಿಯೊಂದನ್ನು ಮಾಡಿದರು. ಈ ಸಮಿತಿಯು ಕರ‍್ನಾಟಕದ ಮೂಲೆ ಮೂಲೆಗೂ ಹೋಗಿ, ಹಲವಾರು ಅಳತೆಗೋಲನ್ನು ಬಳಸಿ ಕರ‍್ನಾಟಕದ ಜನರ ಜೀವನ ಮಟ್ಟದ ಬಗ್ಗೆ, ಕಲಿಕೆ ಬಗ್ಗೆ, ಜಿಲ್ಲೆ-ತಾಲೂಕು-ಹಳ್ಳಿಗಳ ಏಳಿಗೆ ಬಗ್ಗೆ ವರದಿಯನ್ನು ತಯಾರಿಸಿ ಸರಕಾರದ ಮುಂದಿಟ್ಟಿತು. ಆ ವರದಿಯಲ್ಲಿ ಉತ್ತರ ಕರ‍್ನಾಟಕದ 59 ಮತ್ತು ದಕ್ಶಿಣ ಕರ‍್ನಾಟಕದ 55 ತಾಲೂಕುಗಳು ಹಿಂದುಳಿದಿವೆ ಎಂದು ಹೇಳಲಾಗಿದೆ. ಅಂದರೆ, ಹೆಚ್ಚು ಕಮ್ಮಿ ಎರಡೂ ಬಾಗದ ತಾಲೂಕುಗಳ ಸ್ತಿತಿ ಒಂದೇಯಾಗಿವೆ ಎಂಬುದೇ ಇದರ ತಿರುಳು. ಇಡೀ ಕರ‍್ನಾಟಕದ ಅಂದರೆ ಪ್ರತಿ ಹಳ್ಳಿ/ತಾಲೂಕು/ಜಿಲ್ಲೆ ಒಳಹೊಕ್ಕು ನೋಡಿದರೆ ಸಾಕಶ್ಟು ಅಬಿವ್ರುದ್ದಿ ಕೆಲಸಗಳು ಆಗಬೇಕಿರುವುದು ನಿಚ್ಚಳವಾಗಿ ಕಾಣುತ್ತದೆ. ಹೀಗಿರುವಾಗ ‘ಇಡೀ ಕರ‍್ನಾಟಕ’ ಏಳಿಗೆ ಹೊಂದಬೇಕು ಎಂಬುದು ಜನಪ್ರತಿನಿದಿಯಾದ ಉಮೇಶ ಕತ್ತಿಯವರಿಗೆ ಯಾಕೆ ಅನಿಸಲಿಲ್ಲ ಎಂಬ ಪ್ರಶ್ನೆ ಸರಿಯಾದುದ್ದೇ ಮತ್ತು ಕೇಳಬೇಕಾದದ್ದೇ!
ಇಶ್ಟು ದಿವಸ ಆಡಳಿತ ನಡೆಸಿದ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರಕಾರಗಳಲ್ಲೂ ಉತ್ತರ ಕರ‍್ನಾಟಕದ ಎಶ್ಟು ಮಂದಿ ನಾಯಕರು ಮಂತ್ರಿಗಳಿರಲಿಲ್ಲ? ಆದರೂ ಉತ್ತರ ಕರ‍್ನಾಟಕದ ಚಿತ್ರಣ ಯಾಕೆ ಬದಲಾಗಿಲ್ಲ? ಈಗಿರುವ ಕಾಂಗ್ರೆಸ್ ಸರಕಾರಕ್ಕಿಂತ ಮುನ್ನ ಉಮೇಶ ಕತ್ತಿಯವರ ಪಕ್ಶವೇ ಐದು ವರುಶ ಆಡಳಿತ ನಡೆಸಿತ್ತು. ಉತ್ತರ ಕರ‍್ನಾಟಕದ ಏಳಿಗೆ ಬಗ್ಗೆ ಉಮೇಶ್ ರವರು ಏನು ಮಾಡಿದ್ರು? ತಮ್ಮದೇ ಸರಕಾರದ ಗಮನಾನಾದ್ರು ಆ ಕಡೆ ಸೆಳೆದಿದ್ರಾ? ಅನ್ನುವುದನ್ನು ಉತ್ತರ ಕರ‍್ನಾಟಕದ ಮಂದಿಗೆ ಅವರು ತಿಳಿಸುವ ಮನಸ್ಸು ಮಾಡುವರಾ? ಸರ‍್ಕಾರ ಅಬಿವ್ರುದ್ದಿ ಕೆಲಸಗಳಿಗೆ ಹಣ ಮಂಜೂರು ಮಾಡುವ/ಮಾಡಿರುವ ಸುದ್ದಿಯನ್ನು, ಸುದ್ದಿಹಾಳೆಗಳಲ್ಲಿ, ಟಿ ವಿ ಚಾನೆಲ್ಲುಗಳಲ್ಲಿ ಎಶ್ಟು ಬಾರಿ ನಾವು ಓದಿಲ್ಲ ನೋಡಿಲ್ಲ. ಅಂದರೂ ಯಾವುದೋ ಒಂದು ಪ್ರದೇಶದಲ್ಲಿ/ಹಳ್ಳಿಯಲ್ಲಿ ಆ ಕೆಲಸಗಳು ನಡೆಯುತ್ತಿಲ್ಲ ಅಂದರೆ ಅದಕ್ಕೆ ಯಾರು ಹೊಣೆಯಾಗುತ್ತಾರೆ? ಸಾಮಾನ್ಯ ಜನರೇ ಆರಿಸಿ ತಂದ ಜನನಾಯಕರಲ್ಲವೇ? ಅವರನ್ನು ಪ್ರಶ್ನಿಸಿ ಕಿವಿ ಹಿಂಡುವ ಕೆಲಸವನ್ನು ಮಾಡಬೇಕಾದುದು ಜನರೇ ಅಲ್ಲವೇ? ಹಾಗೆಯೇ, ಜನರನ್ನು ಸದಾ ಎಚ್ಚರವಾಗಿ ಇಡಬೇಕೆಂಬುವ ಗುರುತರ ಹೊಣೆ ಹೊತ್ತಿರುವ ಮಾದ್ಯಮಗಳು, ಜನ ಪ್ರತಿನಿದಿಗಳಿಗೆ ಏಳಿಗೆ ವಿಶಯದಲ್ಲಿ ಬಿಸಿ ಮುಟ್ಟಿಸೋ ಕೆಲಸ ಮಾಡಬೇಕಲ್ಲವೇ? ಏಳಿಗೆಯಾಗದೆ ಹಿಂದುಳಿದರೆ, ಯಾರೆಲ್ಲಾ ಪಾಲುದಾರರು ಎಂದು ಇದು ತೋರಿಸಿಕೊಡುತ್ತದಲ್ಲವೇ?
ಆಯಿತು, ರಾಜ್ಯ ಚಿಕ್ಕದಾಗಿದ್ದರೆ ಏಳಿಗೆ ಕೆಲಸಗಳು ಬೇಗ ಬೇಗ ಆಗುತ್ತವೆ ಜನರ ಜೀವನಮಟ್ಟ ಬೇಗನೆ ಮೇಲೇರುತ್ತದೆ ಎಂತಾದರೆ ಸಿಕ್ಕಿಂ, ಮಣಿಪುರ, ಮೀಜೊರಾಮ್, ನಾಗಾಲ್ಯಾಂಡ್ ಅಂತ ಚಿಕ್ಕ ರಾಜ್ಯಗಳು ಇವತ್ತು ಪ್ರಗತಿಯಲ್ಲಿ ಇಡೀ ಬಾರತಕ್ಕೆ ಮಾದರಿಯಾಗಬೇಕಿತ್ತು. ಆದರೆ ಆಗಿರೋದು ಏನು? ರಾಜ್ಯ ಚಿಕ್ಕದಾಗಿದ್ದರೆ ಅಲ್ಲಿಂದ ಗೆದ್ದು ಕೇಂದ್ರದಲ್ಲಿ ಆ ರಾಜ್ಯವನ್ನ ಪ್ರತಿನಿದಿಸುವ ಜನ ಪ್ರತಿನಿದಿಗಳ ಎಣಿಕೆ ಕಡಿಮೆ ಇರುತ್ತದೆ. ಬಾರತದ ಆಡಳಿತದ ಏರ‍್ಪಾಡಿನಲ್ಲಿ ಕೇಂದ್ರದ ಕೈಯಲ್ಲಿ ಹೆಚ್ಚಿನ ಅದಿಕಾರ ಇದೆ. ಕೇಂದ್ರದಲ್ಲಿ ಏನಿದ್ದರೂ ದೊಡ್ಡ ರಾಜ್ಯಗಳದ್ದೇ ಮಾತು.ಚಿಕ್ಕ ರಾಜ್ಯಗಳ ಮಾತಿಗೆ ಅಶ್ಟಾಗಿ ಬೆಲೆಯೇ ಇಲ್ಲ. ರಾಜ್ಯಗಳು ಚಿಕ್ಕದಾದಂತೆ ಕೇಂದ್ರವು ಹೆಚ್ಚು ಬಲ ಹೊಂದುತ್ತದೆ. ಕೇಂದ್ರದ ಅಣತಿ ಮೇರೆಗೆ ರಾಜ್ಯಗಳು ನಡೆಯಬೇಕಾಗುತ್ತದೆ. ಹೀಗಿರುವಾಗ ಕೇಂದ್ರದಿಂದ ಬರುವ ಅನುದಾನ, ಹಮ್ಮುಗೆಗಳಿಗೆ ಒಪ್ಪಿಗೆ – ಇವೆಲ್ಲ ಆಮೆಗತಿಯಲ್ಲಿ ನಡೆಯುತ್ತವೆ (ಇದರ ಜೊತೆ ಏಳಿಗೆಯೂ ಕೂಡ). ಉತ್ತರ ಕರ‍್ನಾಟಕ ಬೇರೆ ರಾಜ್ಯವಾದರೆ ಇದನ್ನು ಹೇಗೆ ನಿಬಾಯಿಸುತ್ತದೆ ಎಂಬುದಕ್ಕೆ ಶಾಸಕರ ಬಳಿ ಉತ್ತರವಿದೆಯೇ?
ಈಗ ಕರ‍್ನಾಟಕವನ್ನು ಒಡೆಯುವ ಮೂಲಕ ಕನ್ನಡ ಮಾತಾಡುವ ಜನರ ನಡುವೆ ಕಂದರವನ್ನು ಉಂಟುಮಾಡಿದರೆ ಏನಾದೀತು ಅನ್ನುವುದನ್ನು ಯೋಚಿಸುವ ಗೋಜಿಗೆ ಉಮೇಶ್ ರವರು ಹೋದಂತಿಲ್ಲ. ಈಗ ಒಟ್ಟಾಗಿರೋ ಕರ‍್ನಾಟಕದ ಸುತ್ತ ಮುತ್ತಲಿರುವ ರಾಜ್ಯಗಳ ಜಗಳಗಂಟ ನಡವಳಿಕೆಯನ್ನು ನೀರು/ಗಡಿ/ಸಾರಿಗೆ ಇತ್ಯಾದಿ ವಿಶಯದಲ್ಲಿ ನಾವು ನೋಡುತ್ತಲೇ ಇದ್ದೇವೆ. ನೀರಿನ ಹಾಗು ಗಡಿ ವಿಶಯದಲ್ಲಿ ಸಾಕಶ್ಟು ನ್ಯಾಯಾದಿಕರಣ ಹಾಗೂ ಗಡಿಸಮಿತಿಗಳ ರಚನೆಗೆ ಕಾರಣವಾಗಿರೋ ನೆರೆರಾಜ್ಯಗಳು, ಅಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗದಿರುವ ಹಾಗೆ ಮಾಡುತ್ತಾ ನಮ್ಮ ರಾಜ್ಯದ ಏಳಿಗೆಗೆ ಯಾವಾಗಲು ತೊಡರುಗಾಲು ಹಾಕುತ್ತಲೇ ಇದ್ದಾವೆ. ಹೀಗಿರುವಾಗ ಕರ‍್ನಾಟಕ ಬಾಗವಾಗಿ ನಮ್ ನಮ್ಮಲ್ಲೇ ಗಡಿ-ನದಿನೀರಿನ ವಿವಾದ ಇತ್ಯಾದಿ ವಿವಾದಗಳು ಹುಟ್ಟಿಕೊಂಡು ಕನ್ನಡಿಗರ ನಡುವೆಯೇ ಹಗೆತನ ಹುಟ್ಟಿ, ಪ್ರಗತಿಗೆ ಕೊಡಲಿ ಪೆಟ್ಟು ಬೀಳುವ ಸಾದ್ಯತೆಯೇ ಜಾಸ್ತಿ ಎಂಬುದು ಕರುನಾಡಿನ ಮಂದಿಗೆ ಗೊತ್ತಾಗಲೇಬೇಕು.
ಕೊನೆಯದಾಗಿ, ರಾಜ್ಯ ಒಡೆಯುವ ಮಾತಾಡುವವರು ಅದಿಕಾರ ಸಿಗದ ರಾಜಕೀಯ ನಾಯಕರು. ಒಂದೇ ನುಡಿಯಾಡುವವರ ನಡುವೆ ಒಡಕು ಮೂಡುವದರಿಂದಾಗುವ ಪರಿಣಾಮವನ್ನು ಅರಿಯದ ಜನರ ಮುಗ್ದ ಮನಸ್ತಿತಿಯೇ ಇಂದಿನ ಅದಿಕಾರದಾಹಿ ರಾಜಕಾರಣಿಗಳಿಗೆ ಬಂಡವಾಳ. ಕೇವಲ 10-20 ನಾಯಕರ ಈ ಹೊತ್ತಿನ ಸ್ವಾರ‍್ತವನ್ನು ಮುಂದೊಮ್ಮೆ, ಸಾಮರಸ್ಯದಿಂದ ಬದುಕುತ್ತಿರುವ ಉಳಿದ ಕೋಟಿ-ಕೋಟಿ ಕನ್ನಡಿಗರ ‘ಪ್ರತ್ಯೇಕತೆಯ ಕೂಗು’ ಎಂಬಂತೆ ಹುಯಿಲೆಬ್ಬಿಸಲು ವೇದಿಕೆ ತಯಾರಾಗುತ್ತಿರುವುದು ಕರ‍್ನಾಟಕದ ದೊಡ್ಡ ದುರಂತವೇ ಸೈ! ಜಾಗತೀಕರಣ ಅಂತಲೋ, ಅತಿಯಾದ ಕೇಂದ್ರೀಕ್ರುತ ಆಡಳಿತ ಏರ‍್ಪಾಡಿಂದಲೋ ಅತವಾ ಮತ್ತ್ಯಾವುದೋ ಕಾರಣದಿಂದಲೋ ಇಂದು ನಮ್ಮ ನಡೆ-ನುಡಿ-ಸಂಸ್ಕ್ರುತಿಗಳಿಗೆ ದಕ್ಕೆ ಉಂಟಾಗುತ್ತಿದೆ. ಆಡಳಿತ ಹಾಗು ಏಳಿಗೆ ಆಶಯದಿಂದ ನುಡಿಯ ನೆಲೆ ಮೇಲೆ ರಚಿತವಾದ ರಾಜ್ಯಗಳು, ಮತ್ತೆ ಒಡೆದು ಹೋಳಾಗುವುದರಿಂದ – ಮಂದಿಯ ನಡುವೆ ಒಗ್ಗಟ್ಟನ್ನು ಸಾದಿಸುವುದು ಹೆಚ್ಚು ಕಗ್ಗಂಟಾಗುವುದರಲ್ಲಿ ಅನುಮಾನವೇ ಇಲ್ಲ. ಹೀಗಿರುವಾಗ ಒಂದೇ ನುಡಿಯಾಡುವ ಮಂದಿಯ ನಡುವೆ ಒಗ್ಗಟ್ಟಿನ ಅಗತ್ಯ ಇವತ್ತು ಹಿಂದೆಂದಿಗಿಂತಲೂ ಹೆಚ್ಚಿದೆ. ಇಂತ ಸಂದರ‍್ಬದಲ್ಲಿ ಕರ‍್ನಾಟಕದಲ್ಲಿ ಕನ್ನಡಿಗರ ಒಗ್ಗಟ್ಟನ್ನು ಹೆಚ್ಚಿಸುವ ಪ್ರಯತ್ನವಾಗಬೇಕೆ ಹೊರತು ಒಗ್ಗಟ್ಟನ್ನು ಮುರಿಯುವ ಪ್ರಯತ್ನವಲ್ಲ. ಇನ್ನು ಮುಂದೆ ಕನ್ನಡಿಗರ ತಲೆಯಲ್ಲಿ ಪ್ರತ್ಯೇಕತೆಯ ಹುಳವನ್ನು ಯಾರೇ ಬಿಟ್ಟರೂ, ಕನ್ನಡಿಗರೇ ಆ ಪ್ರತ್ಯೇಕತೆ ಹುಳವನ್ನು ಹೊಸಕಿಹಾಕಿ, ಒಟ್ಟಾಗಿ ಕನ್ನಡಿಗರ ನಾಳೆಗಳನ್ನು ರೂಪಿಸಲು ಮುಂದಡಿ ಇಡಬೇಕಿದೆ.
( ಚಿತ್ರ ಸೆಲೆ: www.bangalorelivenews.com, kannada.boldsky.com )
ಇತ್ತೀಚಿನ ಅನಿಸಿಕೆಗಳು