ಜಾಣಗಡಿಯಾರಗಳ ಹೊಸ ಜಗತ್ತು

ಪ್ರವೀಣ ಪಾಟೀಲ.

www.phonesreview.com

ಇತ್ತೀಚಿನ ದಿನಗಳಲ್ಲಿ, ಚಳಕ ಜಗತ್ತಿನಲ್ಲಿ ಹೊಸ-ಹೊಸ ಸಾದನಗಳು ಲಗ್ಗೆ ಇಡುತ್ತಿವೆ. iPhone, iPad ನಂತಹ ಸಾದನಗಳು ಚಳಕ ಜಗತ್ತಿನಲ್ಲಿ ಬದಲಾವಣೆಯ ಬಿರುಗಾಳಿಯನ್ನೇ ಬೀಸಿವೆ. ಚಳಕ-ಕಾತುರರ ಅನಿಸಿಕೆಯಲ್ಲಿ 2007ರಲ್ಲಿ ಬಿಡುಗಡೆಯಾದ iPhone ಎನ್ನುವ ಅಲೆಯುಲಿ ಮತ್ತು 2010ರಲ್ಲಿ ಬಿಡುಗಡೆಯಾದ iPad ಎನ್ನುವ ಪುಟ್ಟ ಎಣ್ಣುಕಗಳು, ಚಳಕ ಜಗತ್ತಿನ ಬದಲಾವಣೆಗೆ ನಾಂದಿ ಹಾಡಿದವು. iPhone ಮತ್ತು iPad ನಂತಹ ಸಾದನಗಳಿಂದ ಮಂದಿಯ ಬೆರಳು ತುದಿಯಲ್ಲಿ ಮಾಹಿತಿಯು ದೊರೆಯುವಂತಾಗಿದೆ. ಸಾಮಾನ್ಯ ಮಂದಿಯಿಂದ ದೂರ ಉಳಿದಿದ್ದ ಕೂಡಣ-ಬಲೆ (Social Network) ಕೂಡ ಈಗ ಎಲ್ಲರನ್ನೂ ತಲುಪುವಂತಾಗಿದೆ.

ಕಳೆದ ಸೆಪ್ಟೆಂಬರ 9ರಂದು ಆಪಲ್ ಕೂಟ ತೋರ‍್ಪಡಿಸಿದ ಜಾಣಗಡಿಯಾರ (smart watch) ಕೂಡ ಮತ್ತೊಂದು ಬದಲಾವಣೆಯ ಅಲೆ ಎಬ್ಬಿಸಲಿದೆಯೇ ಎಂಬುದು ಚಳಕ-ಕಾತುರರ ಪ್ರಶ್ನೆಯಾಗಿದೆ. ಕಳೆದು ಒಂದು ವರುಶದಿಂದ ಮಾರುಕಟ್ಟೆಯಲ್ಲಿ ಸಾಕಶ್ಟು ’ಜಾಣಗಡಿಯಾರ’ದಂತಹ ಸಾದನಗಳು ಬಿಡುಗಡೆಗೊಂಡಿವೆ. ಆದರೆ ಸಾಮಾನ್ಯ ಮಂದಿಯನ್ನು ತಲುಪಲು ಇಲ್ಲಿಯವರೆ ಬಿಡುಗಡೆಯಾದ ಇಂತ ಸಾದನಗಳು ಅಶ್ಟೇನೂ ಯಶಸ್ಸು ಕಂಡಿಲ್ಲ.

smart watchಇದಕ್ಕೆ ಅದರದೆಯಾದ ಹಲವಾರು ಕಾರಣಗಳಿವೆ. ಜಾಣಗಡಿಯಾರಗಳು ಅಲೆಯುಲಿಯ ಬದಲಿ ಸಾದನವಾಗಿ ಹೊರಹೊಮ್ಮುವುದರಲ್ಲಿ ಸೋಲು ಕಂಡಿವೆ. ಇದನ್ನು ಅಲೆಯುಲಿಗಳ ಜೊತೆಗೆ ಬಳಕೆ ಮಾಡುವುದು ಅನಿವಾರ‍್ಯವಾದ್ದರಿಂದ ಮಂದಿಗೆ ಸುಲಬವಾಗುವುದಕ್ಕಿಂತ ಮತ್ತೊಂದು ತಡೆಗೋಡೆ ಕಟ್ಟಿದಂತೆ ಕಾಣುತ್ತದೆ. ಸ್ಯಾಮ್‍ಸಂಗ, ಎಲ್.ಜಿ., ಮೋಟೋದಂತಹ ಕಂಪನಿಗಳು ಬಿಡುಗಡೆ ಮಾಡಿದ ಜಾಣಗಡಿಯಾರಗಳು, ಜಾಣ ಅಲೆಯುಲಿಯ ಮೇಲೆ ಅವಲಂಬಿತವಾಗಿದ್ದರಿಂದ ಇವುಗಳನ್ನು ಸಂಪೂರ‍್ಣವಾಗಿ ಒಂದು ಬದಲಿ ಸಾದನವಾಗಿ ಬಳಕೆ ಮಾಡಲು ಸಾದ್ಯವಿಲ್ಲ. ಅದೇ ಪದ್ದತಿ ಮುಂದುವರೆಸಿ ಆಪಲ್ ಕೂಡ ತಮ್ಮ iPhone ಆದಾರಿತ ’ಜಾಣಗಡಿಯಾರ’ನ್ನು ಹೊರತಂದಿರುವುದು ಹಿನ್ನಡೆಯಂತಿದೆ.

ಬೇರೆಲ್ಲ ಜಾಣಗಡಿಯಾರಗಳ ಹಾಗೆ ಇದರಲ್ಲಿ ಕೂಡ ಕಿರು-ಓಲೆ ಹಾಗೂ ಮಿಂಚೆಗಳಿಗೆ ಮರು-ಉತ್ತರ ನೀಡುವ ಒಂದು ಸರಿಯಾದ ಏರ‍್ಪಾಡು ಇಲ್ಲದಾಗಿದೆ. ಇದರಿಂದಾಗಿ, ಇದನ್ನು ತೋರಿಕೆಯ ವಸ್ತುವಿನ ಹಾಗೆ ಬಳಕೆ ಮಾಡುವಂತಾಗಿದೆ. ಕಿರು-ಓಲೆ, ಮಿಂಚೆ ಮುಂತಾದವುಗಳನ್ನು ಓದಲಶ್ಟೇ ಇದನ್ನು ಬಳಕೆ ಮಾಡಬಹುದು. ಇದನ್ನು ಬದುಕಿನಲ್ಲಿ ಬದಲಾವಣೆಯ ಒಂದು ಸಾದನವಾಗಿ ಕಾಣಲು ಸಾದ್ಯವಿಲ್ಲ ಹಾಗಂತಾ ಇದನ್ನು ಅಶ್ಟು ಬೇಗ ತಳ್ಳಿಹಾಕುವಂತೆಯೂ ಇಲ್ಲ. ಆರೋಗ್ಯ ಹಾಗು ಆಟಗಳಲ್ಲಿ ಇದು ಹೆಚ್ಚು ಬಳಕೆ ಕಾಣಲಿದೆ ಅನ್ನುತ್ತಾರೆ ಬಲ್ಲವರು. ಎದೆಬಡಿತ, ತಾಪಮಾನ, ಮ್ಯಾಪ್ಸ ಬಳಕೆಯಂತಹ ಕೆಲಸಗಳನ್ನು ಇದು ಅಚ್ಚುಕಟ್ಟಾಗಿ ಮಾಡುತ್ತದೆ ಹಾಗೂ ಕೆಲವು ಸಾದನಗಳು ನೀರು-ತಡೆಯುವ ಶಕ್ತಿಯುಳ್ಳವರಾದ್ದರಿಂದ ಇದನ್ನು ಯಾವುದೇ ಸಂದರ‍್ಬದಲ್ಲಿ ಬಳಕೆ ಮಾಡಬಹುದು ಮತ್ತು ಯಾವಾಗಲೂ ಇದನ್ನು ಕೈಯಲ್ಲಿ ಕಟ್ಟಿಕೊಂಡಿರಬಹುದು. ಇದರಿಂದ ಪದೆ-ಪದೆ ಅಲೆಯುಲಿ ತೆಗೆದು ನೊಡುವ ಅಗತ್ಯವಿರುವದಿಲ್ಲ.

ಮುಂಬರುವ ದಿನಗಳಲ್ಲಿ ಬಳಕಗಳಿಂದ (apps) ಈ ಸಾದನವನ್ನು ಸ್ವತಂತ್ರವಾಗಿ ಕೆಲವು ಕೆಲಸಗಳನ್ನು ಮಾಡಲು ಕಂಡಿತವಾಗಿಯು ಬಳಕೆ ಮಾಡಬಹುದು ಹಾಗೂ ಮುಂದಿನ ದಿನಗಳಲ್ಲಿ ಇದರ ಬಳಕೆ ಬೇರೇ ವಲಯಗಳಿಗೂ ಹೆಚ್ಚಿಸಬಹುದು. ಜಾಣಗಡಿಯಾರ ನಮ್ಮ ಬದುಕಿನಲ್ಲಿ ಬದಲಾವಣೆ ತರುವಲ್ಲಿ ಸಹಕಾರಿಯಾಗುತ್ತೋ ಅತವಾ ಇದೂ ಕೂಡ ಚಳಕ-ಕಾತುರರ ಒಂದು ಕಲ್ಪನೆಯಾಗಿ ಮರೆಯಾಗುತ್ತೋ ಎಂಬುದು ಕಾಲವೇ ತಿಳಿಸಿ ಹೇಳಬೇಕು.

(ಚಿತ್ರಸೆಲೆ: www.phonesreview.com, forum.xcitefun.net

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications