ಅಗ್ಗವಾಗಲಿವೆ ಆಂಡ್ರಾಯ್ಡ್ ಅಲೆಯುಲಿಗಳು

ಪ್ರವೀಣ ಪಾಟೀಲ.

androidheadlinesdotcom
ಗೂಗಲ್ ಮತ್ತು ಆಪಲ್ ಮಾರುಕಟ್ಟೆಯಲ್ಲಿ ತಮ್ಮ ಪಾಲುದಾರಿಕೆಯನ್ನು ಹೆಚ್ಚಿಸಲು ಹೊಸ ಚಳಕ ಹಾಗೂ ಸಾದನಗಳನ್ನು ಸಿದ್ದಪಡಿಸುವುದರಲ್ಲಿ ಸತತವಾಗಿ ತೊಡಗಿಸಿಕೊಂಡಿರುತ್ತಾರೆ. ಇದಕ್ಕೆ ಪೂರಕವಾಗಿ ಕಳೆದ ಸೆಪ್ಟೆಂಬರ್ 15 ರಂದು ಗೂಗಲ್‍ನವರು ಮಾಕ್ರೊಮ್ಯಾಕ್ಸ್, ಕಾರ‍್ಬನ್ ಮತ್ತು ಸ್ಪೈಸ್ ಕೂಟಗಳ ಜೊತೆ ಒಪ್ಪಂದದ ಮೇರೆಗೆ ಆಂಡ್ರಾಯ್ಡ್ ಅನ್ನುವ ಜಾಣ ಅಲೆಯುಲಿಗಳನ್ನು (smart phone) ಬಿಡುಗಡೆ ಮಾಡಿದರು. ಬಾರತದ ಜಾಣ ಅಲೆಯುಲಿ ಮಾರುಕಟ್ಟೆಯಲ್ಲಿ ತಮ್ಮ ಬೇರನ್ನು ಗಟ್ಟಿಗೊಳಿಸಲು ಕೈಗೊಂಡ ಪ್ರಮುಕವಾದ ಈ ನಿರ‍್ದಾರವನ್ನು ಗೂಗಲ್ ಕಾರ‍್ಯಕ್ರಮವೊಂದರಲ್ಲಿ ಮಂದಿಗೆ ತಿಳಿಸಿತು.

ಈ ನಿರ‍್ದಾರದ ಪ್ರಮುಕ ಗುಣಗಳೆಂದರೆ ಒಪ್ಪಂದ ಮಾಡಿಕೊಂಡ ಕೂಟಗಳು ಗೂಗಲ್ ನ ಹೊಸ ಆಂಡ್ರಾಯ್ಡ್ ಸಾಪ್ಟವೇರ‍್ ಅನ್ನು ಅಳವಡಿಸುವಂತಹ ಜಾಣ ಅಲೆಯುಲಿಗಳನ್ನು ಸಿದ್ದಪಡಿಸುವುದು ಮತ್ತು ಗೂಗಲ್ ನ ನಿರ‍್ದಿಶ್ಟವಾದ ಶರತ್ತುಗಳಿಗೆ ಬದ್ದರಾಗಿರುವುದು. ಈ ಶರತ್ತುಗಳಲ್ಲಿ ಮುಕ್ಯವಾದುದೇನೆಂದರೆ, ಕೂಟಗಳು ಅಪ್ಪಟ (original) ಆಂಡ್ರಾಯ್ಡ್ ಅನ್ನು ಅಳವಡಿಸಬೇಕು. ಅಂದರೆ ಕೂಟಗಳು ತಮ್ಮದೇಯಾದ ಸಾಪ್ಟವೇರ್ ಆಗಲಿ ಆಂಡ್ರಾಯ್ಡ್ ಅನ್ನು ಮಾರ‍್ಪಾಟು ಮಾಡುವುದಾಗಲಿ ಮಾಡುವಹಾಗಿಲ್ಲ! ಮತ್ತೊಂದು ಮುಕ್ಯವಾದ ಶರತ್ತೇನೆಂದರೆ ಗೂಗಲ್ ಸೂಚಿಸಿದ ಹಾರ‍್ಡ್‍ವೇರ‍್ ಪಟ್ಟಿ ಪ್ರಕಾರ ಸಿದ್ದಪಡಿಸಿ ಅವರು ಸೂಚಿಸಿದ ಬೆಲೆಯಲ್ಲೇ ಮಾರುಕಟ್ಟೆಯಲ್ಲಿ ಮಾರಬೇಕು. ಇದೊಂದು ಬಹುದೊಡ್ಡ ಬದಲಾವಣೆ ತರುವಂತಹ ನಿರ‍್ದಾರ ಅನ್ನುತ್ತಾರೆ ಬಲ್ಲವರು.

thenextwebdotcomಬೇಗನೆ, ಈ ಒಪ್ಪಂದವನ್ನು ಬಾರತದ ಬಳಿಕ ಬೇರೆ ನಾಡುಗಳಿಗೆ ಹರಡುವ ಎಲ್ಲ ಸಾದ್ಯತೆಗಳು ಇವೆ. ಗೂಗಲ್ ಗೆ ಬಾರತ ಒಂದು ಒರೆಹಚ್ಚುವ ಮಾರುಕಟ್ಟೆ ಮತ್ತು ಇಲ್ಲಿಯ ಗೆಲುವಿನ ಮೇಲೆ ಬೇರೆ ಬೆಳೆಯುವ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡುವ ಗುರಿಯನ್ನೂ ಅದು ಹೊಂದಿದೆ. ಕಂಡಿತವಾಗಿಯೂ ಗೂಗಲ್ ನ ಈ ಮುಂದುವರಿಕೆಯಿಂದ ಆಪಲ್ ನಿದ್ದೆಗೆಟ್ಟಿದೆ. ಏಕೆಂದರೆ ಇಂತಹದೊಂದು ಬದಲಾವಣೆಯಿಂದ ಗೂಗಲ್ ಬಹುಪಾಲು ಮಾರುಕಟ್ಟೆಯನ್ನು ಆವರಿಸುವ ಹೆದರಿಕೆ ಸಹಜವಾಗಿಯೇ ಹುಟ್ಟುತ್ತದೆ.

ಜಾಣ ಅಲೆಯುಲಿ ಬಳಸದ ಮಂದಿಗೆ ಕಡಿಮೆ ಬೆಲೆಯಲ್ಲಿ ಆಂಡ್ರಾಯ್ಡ್ ಪರಿಚಯಿಸಿ ಅವರನ್ನು ತಮ್ಮ ಸಾಪ್ಟವೇರ್ ನ ತೆಕ್ಕೆಗೆ ತೆಗೆದುಕೊಳ್ಳುವ ಗೂಗಲ್ ವರಸೆ (strategy) ಇಲ್ಲಿ ಕಾಣಬಹುದು. ಇದರ ಪರಿಣಾಮವಾಗಿ ಹೆಚ್ಚೆಚ್ಚು ಮಂದಿ ನಡುಬಲೆ ಬಳಕೆದಾರರಾಗಿ ಹುಟ್ಟಿಕೊಳ್ಳುತ್ತಾರೆ. ಕೂಡಣಬಲೆ (social network) ಹಾಗೂ ನಡುಬಲೆಯಿಂದ (internet) ದೂರವಿದ್ದ ಒಂದು ದೊಡ್ಡ ಬಾಗದ ಮಂದಿಗೆ, ಕೈಗೆ ಎಟುಕುವಂತೆ ಮಾಹಿತಿಯ ಹೊಳೆಯೇ ಹರಿದು ಬರುತ್ತದೆ ಮತ್ತು ಅದರ ಜೊತೆಗೆ ಅವಕಾಶಗಳ ಸುರಿಮಳೆಯೂ ಸುರಿಯುತ್ತದೆ.

ಗೂಗಲ್ ಜಗತ್ತಿನೆಲ್ಲೆಡೆ ತಮ್ಮ ಸಾದನಗಳನ್ನು ಮತ್ತು ಸೇವೆಗಳನ್ನು ಹರಡಿರುವದರಿಂದ ಅವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಇನ್ನೂ ಹೆಚ್ಚಿನ ಪಾಲನ್ನು ಪಡೆದುಕೊಂಡರೆ ಅಚ್ಚರಿಯೇನಲ್ಲ. ಈ ಸಂಗತಿಗಳನ್ನು ಗಮನಿಸುತ್ತಿರುವ ಎದುರಾಳಿ ಕೂಟಗಳಲ್ಲಿ ಅಂಜಿಕೆಯ ನಡುಕ ಕಾಣುತ್ತಿದೆ. ಗೂಗಲ್ ನ ಬೆಳೆಯುವಿಕೆಯನ್ನು ತಡೆಯಲು ಇನ್ನಶ್ಟು ಮೇಲ್ಮಟ್ಟದ ಸಾದನಗಳು ಮತ್ತು ಸೇವೆಗಳನ್ನು ಕೊಳ್ಳುಗರಿಗೆ ಪರಿಚಯಿಸುವುದರಲ್ಲಿ ಎರಡು ಮಾತಿಲ್ಲ.

ಕೊನೆಯದಾಗಿ, ಈ ಬೆಳವಣಿಗೆಗಳಿಂದ ಕೊಳ್ಳುಗರಿಗೆ ಹೆಚ್ಚು ಆಯ್ಕೆಗಳು ಸಿಗಲಿವೆ. ಸ್ಯಾಮ್ಸಂಗ್, ಮೊಟೊರೊಲ, ಆಪಲ್ ಕೂಟಗಳು ಮುಂದಿನ ಲೆಕ್ಕಚಾರ ಹಾಕುತ್ತಿರುವಾಗ ಸಾದಾ ಅಲೆಯುಲಿ ಬಳಕೆದಾರರು ಕಡಿಮೆ ಬೆಲೆಗೆ ಅಂಡ್ರಾಯ್ಡ್ ಏರ‍್ಪಾಟಿಗೆ ದುಮುಕಿ ತಮ್ಮ ಮೊದಲನೆಯ ಜಾಣ ಅಲೆಯುಲಿಯ ಅನುಬವವನ್ನು ಸವಿಯಲು ತುದಿಗಾಲಲ್ಲಿ ನಿಂತಿದ್ದು ಎಲ್ಲೆಡೆ ಕಾಣಿಸುತ್ತಿದೆ.

(ತಿಟ್ಟಸೆಲೆಗಳು: androidheadlines.com, thenextweb.com

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *