ಇಂದು ಸುಜುಕಿ ಸಿಯಾಜ್ ಬಿಡುಗಡೆ

ಜಯತೀರ‍್ತ ನಾಡಗವ್ಡ.

ciaz-1

ಆಟೋಮೊಬಾಯ್ಲ್ ಕಯ್ಗಾರಿಕೆಯಲ್ಲಿ ಮಾರಾಟ ಹೆಚ್ಚಿಸಿಕೊಂಡು ಮುಂದಾಳತ್ವ ಕಾಯ್ದುಕೊಳ್ಳುವುದು ಕಶ್ಟದ ಕೆಲಸ. ಇಂದಿನ ಮಾರುಕಟ್ಟೆಯಲ್ಲಂತೂ ಇದು ಸಾದ್ಯವೇ ಇಲ್ಲವೆನ್ನಬಹುದು. ಬದಲಾಗುತ್ತಿರುವ ಕೊಳ್ಳುಗರ ಮನಸ್ತಿತಿ, ಪಯ್ಪೋಟಿಗಾರರ ಹೆಚ್ಚಳ ಇದಕ್ಕೆ ಬಲು ಮುಕ್ಯ ಕಾರಣ. ಇಲ್ಲಿಯವರೆಗೆ ಬಾರತದ ತಾನೋಡಗಳ ಮಾರುಕಟ್ಟೆಯಲ್ಲಿ ಮೂರನೇ ಸ್ತಾನ ಕಾಪಾಡಿಕೊಂಡಿದ್ದ ಮಹೀಂದ್ರಾ ಕೂಟದವರು ಕಳೆದೆರಡು ತಿಂಗಳಲ್ಲಿ ಹೋಂಡಾ ಮೋಟಾರ‍್ಸ್ ದವರಿಂದ ಹಿಂದಕ್ಕೆ ತಳ್ಳಲ್ಪಟ್ಟಿದ್ದರೆ, ಒಂದೊಮ್ಮೆ ಮಾರುಕಟ್ಟೆಯಲ್ಲಿ ಎರಡನೇ ಸ್ತಾನದಲ್ಲಿದ್ದ ಟಾಟಾ ಕೂಟದವರನ್ನು ಹ್ಯೂಂಡಾಯ್ ಕಾರು ಕೂಟದವರು ಹಲವು ವರುಶಗಳಿಂದ ಹಿಂದಿಕ್ಕಿದ್ದನ್ನು ನೋಡಬಹುದು. ಕಳೆದ ನಾಲ್ಕಾರು ವರುಶಗಳಲ್ಲಿ ರೆನೋ, ನಿಸ್ಸಾನ್, ಪೋಕ್ಸ್ ವ್ಯಾಗನ್, ಸ್ಕೋಡಾ, ಪೋರ‍್ಡ್ ಮುಂತಾದವರು ಬಾರತದ ಮಾರುಕಟ್ಟೆಗೆ ತಕ್ಕ ಕಾರುಗಳನ್ನು ಆಣಿಗೊಳಿಸಿ ಮಾರಾಟ ಹೆಚ್ಚಿಸಿಕೊಂಡು ಮಾರುತಿ, ಟಾಟಾ, ಮಹೀಂದ್ರಾ, ಹ್ಯುಂಡಾಯ್ ಮುಂತಾದವರಿಗೆ ಸಾಕಶ್ಟು ಬಿಸಿ ಮುಟ್ಟಿಸಿದ್ದಾರೆ.

ಬಾರತದ ಸಿಂಹಪಾಲು ಕಾರಿನ ಮಾರುಕಟ್ಟೆಯನ್ನು ತನ್ನದಾಗಿಸಿಕೊಂಡಿದ್ದ ಮಾರುತಿ ಸುಜುಕಿಯವರ ಪರಿಸ್ತಿತಿಯೂ ಇದಕ್ಕೆ ಹೊರತಾಗಿಲ್ಲ. ಸುಜುಕಿಯ ಮಾರುಕಟ್ಟೆ ಅರ‍್ದ ಪಾಲು ಈಗ ಕುಸಿದು ಮೂರನೇ ಒಂದರಶ್ಟಕ್ಕೆ ಇಳಿದಿದೆ. ದೊಡ್ಡ ಸೆಡಾನ್, ಹಲಬಳಕೆಯ ಬಗೆಯ ಒಂದೆರಡು ಕಾರುಗಳನ್ನು (ಎಸ್ ಎಕ್ಸ್-4, ಗ್ರ್ಯಾಂಡ್ ವಿಟಾರಾ) ಹೊರತಂದು ಸೋಲು ಕಂಡಿದ್ದ ಮಾರುತಿ ಸುಜುಕಿ ಪುಟಾಣಿ ಮತ್ತು ಕಿರುಸೆಡಾನ್ ಕಾರು ತಯಾರಕ ಎಂಬ ಹಣೆಪಟ್ಟಿ ಹೊತ್ತಿದೆ. ಈ ಹಣೆಪಟ್ಟಿ ಕಳಚಲು ಸುಜುಕಿ ಕಾರು ಪಡೆ ಹೊಸ ಹೆಜ್ಜೆ ಇಟ್ಟಿದೆ. ಸಿಯಾಜ್ (Ciaz) ಎಂಬ ಹೆಸರಿನ ದೊಡ್ಡ ಸೆಡಾನ್ ಕಾರು ಇಂದಿನಿಂದ ನಿಮ್ಮ ಹತ್ತಿರದ ಮಾರುತಿ ಮಳಿಗೆಗಳಲ್ಲಿ ಕಾಣಿಸಿಕೊಳ್ಳಲಿದೆ.

ಸಿಯಾಜ್  ಕಾರಿನ ಮುಂಗಡ ಕಾಯ್ದಿರಿಸುವಿಕೆ ಈಗಾಗಲೇ ಬಿರುಸಿನಿಂದ ಸಾಗಿದೆ. ಅಲ್ಟೋ, ಸ್ವಿಪ್ಟ್, ರಿಟ್ಜ್, ವ್ಯಾಗನ್-ಆರ್, ಎಸ್ಟಿಲ್ಲೊ, ಸ್ವಿಪ್ಟ್ ಡಿಜಾಯರ್, ಸೆಲೆರಿಯೊ ಹೀಗೆ ಒಂದರ ಮೇಲೊಂದು ಕಿರು ಹಿಂಕದ (hatchback) ಬಂಡಿಗಳನ್ನೇ ನೆಚ್ಚಿಕೊಂಡಿದ್ದ ಮಾರುತಿ ಸುಜುಕಿ ಕೂಟ ಸಿಯಾಜ್ ಮೂಲಕ ಕೊಳ್ಳುಗರಿಗೆ ಹೆಚ್ಚಿನ ಆಯ್ಕೆ ಒದಗಿಸಲು ಸಿದ್ದವಾದಂತಿದೆ. ಮಾರುತಿ ಸುಜುಕಿಯ ಕಾರನ್ನೇ ಕೊಳ್ಳಬೇಕು ಆದರೆ ಸೆಡಾನ್ ಕಾರುಗಳಲ್ಲಿ ಇವರ ಒಳ್ಳೆಯ ಕಾರುಗಳ ಆಯ್ಕೆ ಇಲ್ಲವೆನ್ನುತ್ತಿದ್ದ ಮಾರುತಿ ಕಾರೊಲವಿಗರಿಗೆ ಇದು ಸಂತಸ ಮೂಡಿಸಲಿದೆ.

Ciaz-2ಕಿರು ಕಾರುಗಳಲ್ಲಿ ತನ್ನ ಎದುರಾಳಿಗಳಿಗಿಂತ ಮುಂದಿರುವ ಮಾರುತಿ ಸುಜುಕಿ ಕೂಟದವರು ಸಿಯಾಜ್ ಮೂಲಕ ಸೆಡಾನ್ ಮಾದರಿಗಳಲ್ಲೂ ಕಿಚ್ಚೆಬ್ಬಿಸಲು ಮುಂದಾಗಿದ್ದಾರೆ. ಸಿಯಾಜ್ ಕಾರುಗಳು ಆಗಲೇ ಸುಜುಕಿಯ ಗುರ‍್ಗಾಂವ್ ಕಾರ‍್ಕಾನೆಯಲ್ಲಿ ತಯಾರಿಗೊಂಡು ಮಾರಾಳಿಗಳ ಬಳಿ ಹೋಗಲು ಸಜ್ಜಾಗಿ ನಿಂತಿರುವ ತಿಟ್ಟಗಳು ಮಿಂಬಲೆಯಲ್ಲಿ ಹರಿದಾಡುತ್ತಿವೆ. ಅಗಸ್ಟ್ ತಿಂಗಳಿನಲ್ಲಿ ಹೆಚ್ಚಿನ ಲಾಬದ ಸವಿಯುಂಡಿರುವ ಸುಜುಕಿಯವರಿಗೆ ಸಿಯಾಜ್ ಬಿಡುಗಡೆ ಹುಮ್ಮಸ್ಸನ್ನು ಎರಡು ಪಟ್ಟಾಗಿಸಿದೆ.

ಇದೇ ವರುಶ ನಡೆದ ಆಟೋ ಎಕ್ಸ್ಪೋದಲ್ಲಿ ಸಿಯಾಜ್ ಮಾದರಿ ಕಾರನ್ನು ನೋಡಿದ್ದ ಹಲವಾರು ಮಂದಿ ಇದರ ಬಗ್ಗೆ ಮೆಚ್ಚುಗೆಯ ನುಡಿಗಳಾಡಿದ್ದನ್ನು ನೆನಪಿಸಿಕೊಳ್ಳಬಹುದು. ಹೊಂಡಾ ಸಿಟಿ, ಹ್ಯುಂಡಾಯ್ ವೆರ‍್ನಾ, ಪೋಕ್ಸ್ ವ್ಯಾಗನ್ ವೆಂಟೋ ಇವುಗಳು ಸಿಯಾಜ್ ಕಾರಿಗೆ ನೇರ ಎದುರಾಳಿಗಳೆಂದು ಗುರುತಿಸಲ್ಪಟ್ಟಿವೆ. ಇದಲ್ಲದೇ ಪಿಯಟ್ ಲಿನಿಯಾ, ರೆನೋ ಸ್ಕಲಾ, ನಿಸ್ಸಾನ್ ಸನ್ನಿ ಹಾಗೂ ಪೋರ‍್ಡ್ ಪೀಯಸ್ಟಾಗಳ ಮಾರಾಟಕ್ಕೂ ಸಿಯಾಜ್ ನಿಂದ ಬಿರುಸಿನ ಪಯ್ಪೋಟಿ ಎದುರಿಸಬಹುದೆನ್ನಲಾಗಿದೆ. ಕೆಲ ತಿಂಗಳ ಹಿಂದೆ ಹೊಸ ಮೊಗಪಡೆದು ಕೊಳ್ಳುಗರ ನೆಚ್ಚಿನ ಕಾರುಗಳೆನಿಸಿರುವ ಹೊಂಡಾ ಸಿಟಿ, ಹ್ಯುಂಡಾಯ್ ವೆರ‍್ನಾ ಕಾರುಗಳ ಗೆಲುವಿನ ಓಟಕ್ಕೆ ಸಿಯಾಜ್ ಅಡ್ಡಗಾಲೊಡ್ಡಲಿದೆ ಎಂಬುದಂತೂ ನಿಕ್ಕಿಯಾಗಿದೆ. ಸುಜುಕಿ ಕೂಟದವರು ಚೀನಾದಲ್ಲಿ ಇದೇ ಸಿಯಾಜ್ ಕಾರನ್ನು ಅಲಿವಿಯೊ (Alivio) ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಿರುವ ಸುದ್ದಿಯೂ ಕೇಳಿ ಬಂದಿದೆ.

ತನ್ನ ಎದುರಾಳಿಗಳ ಹೋಲಿಕೆಯಲ್ಲಿ ಸಿಯಾಜ್ ಯಾವ ರೀತಿಯಲ್ಲಿದೆ ಮತ್ತು ಹೆಚ್ಚಿನ ವಿಶೇಶತೆಗಳೇನು ಇವುಗಳನ್ನು ಕೆಳಗಿನ ಹೋಲಿಕೆ ಪಟ್ಟಿಯಲ್ಲಿ ನೋಡಬಹುದು. ಹರವಿನ (Dimension) ವಿಶಯದಲ್ಲಿ ಇತರೆ ಕಾರುಗಳಿಗಿಂತ ದೊಡ್ಡದಾಗಿರುವ ಸಿಯಾಜ್ ನಲ್ಲಿ ಹಾಯಾಗಿ ಕುಳಿತು ಸಾಗುವ ಯಾವುದೇ ಅನುಮಾನವಿಲ್ಲ. ಆದರೆ ಬಿಣಿಗೆ ವಿಶಯದಲ್ಲಿ ಅಂದರೆ ಕಸುವು, ತಿರುಗುಬಲಗಳಲ್ಲಿ ಸಿಯಾಜ್ ಅಶ್ಟೇನೂ ಹೇಳಿಕೊಳ್ಳುವಂತಿಲ್ಲ.

Petrol_table

ಡಿಸೆಲ್ ಬಿಣಿಗೆಯಲ್ಲಿ ಅದೇ ಹಳೆಯ ಪಿಯಟ್ ನವರ 1.3 ಲೀಟರ್ ಅಳತೆಯ ಮಲ್ಟಿಜೆಟ್ ಎಂಜಿನ್ ಮೇಲೆ ಅವಲಂಬಿಸಿದ್ದರೂ ಉರುವಲಿನ ಅಳವುತನದಲ್ಲಿ ಸಿಯಾಜ್ ಹೊಂಡಾ ಸಿಟಿಗಿಂತ ಮೇಲುಗಯ್ ಹೊಂದಿದೆ. ಮಾಯ್ಲೇಜ್ ನೆಚ್ಚಿಕೊಂಡಿರುವ ಬಹುಪಾಲು ಬಾರತೀಯ ಕೊಳ್ಳುಗರನ್ನು ತನ್ನತ್ತ ಸೆಳೆಯಲು ಇದು ಅನುಕೂಲವಾಗಲಿರುವುದಂತೂ ನಿಜ.

Diesel_table

(ಪಟ್ಟಿಗೆ ಸಂಬಂದಿಸಿದಂತೆ-ಪಿ.ಎಸ್.ಕೂಡ ಕಸುವಿನ ಅಳತೆಗೋಲು. ಒಂದು ಪಿ.ಎಸ್ 0.986 ಹೆಚ್.ಪಿ ಗೆ ಸಮ.
*ಓ.ಹಿ.-ಓಡಿಸುಗನ ಹಿಡಿತದ್ದು Manual Transmission, ತ.ಹಿ.-ತನ್ನಿಡಿತದ್ದು Automatic Transmission. **ಮಾಯ್ಲೇಜ್ -ಎಆರ್ ಎಆಯ್ ARAI ಒರೆಹಚ್ಚುವಿಕೆಯಲ್ಲಿ ದೊರೆತಂತೆ)

ನಂಬಿಕೆ, ಹೆಚ್ಚು ಹೊತ್ತು ಬಾಳಿಕೆ ಮತ್ತು ಒಳ್ಳೆಯ ನೆರವುತಾಣಗಳ ಬಲೆ (Service Network) ಹೊಂದಿರುವ ಮಾರುತಿ ಸುಜುಕಿ ಕೂಟಕ್ಕೆ ಸಿಯಾಜ್ ಹಬ್ಬ ಸಿಹಿ ನೀಡಲಿದೆಯೋ ಕಾದು ನೋಡಬೇಕು. ದೀಪಾವಳಿ ಹಬ್ಬಕ್ಕೆ ಹೊಸ ಸೆಡಾನ್ ಮಾದರಿ ಕೊಳ್ಳಬೇಕೆನ್ನುವರು ಸಿಯಾಜ್ ಕಾರನ್ನು ತಮ್ಮ ಆಯ್ಕೆ ಪಟ್ಟಿಗೆ ಸೇರಿಸಿಕೊಳ್ಳಬಹುದು.

(ಮಾಹಿತಿ ಸೆಲೆ: www.autocarindia.com, www.motorbeam.com, www.zigwheels.com)
(ತಿಟ್ಟ ಸೆಲೆ: www.marutisuzuki.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: