ಯಾಣ – ಒಂದು ಸುಂದರ ತಾಣ

ಪ್ರೇಮ ಯಶವಂತ.

ತಿಟ್ಟನಾವು ಎಶ್ಟೋ ಕಡೆ ದೊಡ್ಡಕಲ್ಲುಬಂಡೆಗಳನ್ನು ನೋಡಿದ್ದುಂಟು ಹಾಗು ಅವುಗಳನ್ನು ಇನ್ಯಾವುದೊ ಆಕಾರಕ್ಕೆ ಹೋಲಿಸಿದ್ದುಂಟು. ಇಂತದ್ದೆ ಒಂದು ಅಪರೂಪದ ಕಲ್ಲುಬಂಡೆಗಳ ಜೋಡಣೆಯನ್ನು ನಾವು ಕರ‍್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ಸಣ್ಣ ಊರಾದ ಯಾಣದಲ್ಲಿ ಕಾಣಬಹುದು. ಕರ‍್ನಾಟಕದ ಸುಂದರ ತಾಣಗಳಲ್ಲೊಂದು ಈ ಯಾಣ. ಮೂರ‍್ತಿ ಚಿಕ್ಕದಾದರು ಕೀರ‍್ತಿ ದೊಡ್ಡದು ಎನ್ನುವ ರೀತಿಯಲ್ಲಿ ಈ ಸಣ್ಣ ಊರಿನ ಕ್ಯಾತಿ ಎಲ್ಲೆಡೆ ಹಬ್ಬಿದೆ. ಇದಕ್ಕೆ ಕಾರಣ ಸಹ್ಯಾದ್ರಿ ಬೆಟ್ಟಗಳ ಸಾಲುಗಳಲ್ಲಿ ಒಂದಾಗಿ, ಸುಂದರವಾದ ಪರಿಸರದಲ್ಲಿ ತನ್ನ ತಲೆ ಎತ್ತಿ ನಿಂತಿರುವ ಕಪ್ಪುಸುಣ್ಣದಕಲ್ಲು (karst limestone) ಬಂಡೆಗಳ ಸೊಬಗು.

ಇಲ್ಲಿನ ಎರಡು ದೊಡ್ಡ ಬೆಟ್ಟಗಳಿಗೆ ಬೈರವೇಶ್ವರ ಬೆಟ್ಟ (390 ಅಡಿ ಎತ್ತರ) ಹಾಗು ಮೋಹಿನಿ ಬೆಟ್ಟ (300 ಅಡಿ ಎತ್ತರ) ಎಂದು ಹೆಸರಿಸಿದ್ದಾರೆ. ಈ ಹೆಸರುಗಳು ಹೇಗೆ ಬಂದವು ಅನ್ನೋದನ್ನ ಬರಹದ ಕೊನೆಯಲ್ಲಿ ತಿಳಿಯೋಣ. ಬೈರವೇಶ್ವರ ಬೆಟ್ಟದಡಿಯಲ್ಲಿ ಒಂದು ಗುಹೆ ಗುಡಿ (cave temple) ಇದೆ. ಬೈರವೇಶ್ವರ ಬೆಟ್ಟದ ಮುಕ ಬಾಗದಲ್ಲಿ 3 ಮೀ. ನಶ್ಟು ಬಾಯಿ ತೆರೆದುಕೊಂಡಿರುವ ದಾರಿಯು ನಮ್ಮನ್ನು ನೇರ ಗುಹೆಯೊಳಗೆ ಕರೆದೊಯ್ಯುತ್ತದೆ. ಈ ಗುಡಿಯಲ್ಲಿ ಒಂದು ಲಿಂಗ ಮೂಡಿದೆ. ಈ ಲಿಂಗ ತಾನಾಗಿಯೇ ಮೂಡಿರುವುದರಿಂದ ಅದನ್ನು ಸ್ವಯಂಬು ಎನ್ನುತ್ತಾರೆ. ಈ ಲಿಂಗ, ಸೂರಿಳಿಗ (stalactite) ಹಾಗು ನೆಲೇರುಗಗಳಿಂದ (stalagmite) ಮೂಡಿರಬಹುದೆಂದು ಅರಿಮೆಗಾರರು (scientist) ತಿಳಿಸುತ್ತಾರೆ. ಸ್ವಯಂಬು ಲಿಂಗದ ಪೂಜೆಗೆ ಸಾವಿರಾರು ಮಂದಿ ದೂರದ ಊರುಗಳಿಂದ ಇಲ್ಲಿಗೆ ಬರುತ್ತಾರೆ. ಹಾಗಾಗಿ ಇದೊಂದು ತಿರುದಾಣವಾಗಿದೆ (piligrimage centre).

ಇದೇ ಗುಹೆಯಲ್ಲಿ ಚಂಡಿಕ ದೇವಿಯ ಕಂಚಿನ ಮೂರ‍್ತಿಯು ಇದೆ. ಸೂರಿನಿಂದ ಲಿಂಗದ ಮೇಲೆ ನೀರು ಸದಾ ತೊಟ್ಟಿಕ್ಕುವುದು ಈ ಗುಡಿಯ ಇನ್ನೊಂದು ವಿಶೇಶ. ಈ ನೀರು ಚಂಡಿ ಹೊಳೆಯಾಗಿ ಹರಿದು ಉಪ್ಪಿನಪಟ್ಟಣದ ಅಗನಾಶಿನಿ ನದಿಯನ್ನು ಸೇರುತ್ತದೆ. ಅಲ್ಲಿನ ಮಂದಿ ಈ ನದಿಯನ್ನು ಗಂಗೋದ್ಬವ ಎಂದು ಕರೆಯುತ್ತಾರೆ. ಶಿವರಾತ್ರಿ ವೇಳೆಯಲ್ಲಿ ನೆಡೆಯುವ 10 ದಿನಗಳ ಆಚರಣೆಗಳು ಈ ತಾಣಕ್ಕೆ ಮತ್ತಶ್ಟು ಮೆರಗು ತರುತ್ತದೆ. ಇದೇ ಶಿವರಾತ್ರಿ ವೇಳೆ ಲಿಂಗದ ಮೇಲೆ ಬೀಳುವ ನೀರನ್ನು ತೆಗೆದುಕೊಂಡು ಮಹಾಬಲೇಶ್ವರನ ಮಹಾ ಮಸ್ತಕಾಬಿಶೇಕಕ್ಕೆ ಯಾಣದಿಂದ ಗೋಕರ‍್ಣಕ್ಕೆ ತೆರಳುತ್ತಾರೆ. ಸೋಜಿಗವೆಂದರೆ ಗೋಕರ‍್ಣದ ಜನರು ಯಾಣಕ್ಕೆ ಇದೇ ಕಾರಣಕ್ಕಾಗಿ ಬರುತ್ತಾರೆ.

ಸೊಕ್ಕಿದ್ದವನು ಯಾಣಕ್ಕೆ ಹೋಗುತ್ತಾನೆ, ರೊಕ್ಕಿದ್ದವನು ಗೋಕರ‍್ಣಕ್ಕೆ ಹೋಗುತ್ತಾನೆ, ಎಂಬ ಗಾದೆ ಮನೆ ಮಾತಾಗಿದೆ. ತನ್ನ ಸುತ್ತಮುತ್ತಲಿನ ಹಸಿರು ಕಾಡಿಗೂ ಹೆಸರುವಾಸಿಯಾಗಿರುವ ಯಾಣ ನೋಡುಗರ ಮನಕ್ಕೆ ಮುದ ನೀಡುವಂತದ್ದಾಗಿದೆ. ಅಲ್ಲೆ 8 ಕಿ.ಮೀ. ದೂರದಲ್ಲಿರುವ “ವಿಬೂತಿ” ನೀರಿಳಿವು (waterfall) ಹಲವಾರು ಯಾತ್ರಿಕರನ್ನು ಸೆಳೆದಿದೆ.

ಹಳಮೆ:

ಬ್ರಿಟಿಶ್ ಅದಿಕಾರಿ ಡಾ. ಪ್ರಾನ್ಸಿಸ್ ಬುಚನ್ 1801 ರಲ್ಲಿ ನೆಡೆಸಿದ ಒರೆತದ (survey) ಪ್ರಕಾರ ಯಾಣದ ಸುತ್ತಮುತ್ತ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ವಾಸವಾಗಿದ್ದರು. ಇದೀಗ ಈ ಎಣಿಕೆ ಕಡಿಮೆಯಾಗಿದ್ದು ಕೆಲವೇ ಕುಟುಂಬಗಳು ಇಲ್ಲಿ ನೆಲೆಯೂರಿದ್ದಾರೆ. 20 ರ ನೂರೇಡರವರೆಗು ಇಲ್ಲಿನ 16 ಕಿ.ಮೀ. ಚಾರಣದ (trek) ದಾರಿಯು ಚಾರಣದಾರರನ್ನು ಸೆಳೆಯುತ್ತಿತ್ತು. ಸುನೀಲ್ ಕುಮಾರ್ ದೇಸಾಯಿಯವರ “ನಮ್ಮೂರ ಮಂದಾರ ಹೂವೆ” ಸಿನಿಮಾದ ಮೂಲಕ ಮತ್ತಶ್ಟು ಹೆಸರುವಾಸಿಯಾಗಿದೆ. ಮಂದಿ ಸಲೀಸಾಗಿ ತಲುಪಬಹುದಾದ ತಾಣವಾಗಿದ್ದು ಪ್ರತಿ ವಾರ ಸಾವಿರಾರು ಪ್ರವಾಸಿಗರನ್ನು ತನ್ನೆಡೆ ಸೆಳೆಯುತ್ತಿದೆ.

ಯಾಣದ ಈ ದೊಡ್ಡ ಬಂಡೆಗಳು ಹೇಗೆ ಕಪ್ಪಾದವು ಎನ್ನುವುದಕ್ಕೆ ಇಲ್ಲೊಂದು ಕತೆ ಇದೆ. ಬಸ್ಮಾಸುರನೆಂಬ ಗುಮ್ಮ ತಾನು ಯಾರ ತಲೆಯ ಮೇಲೆ ಕೈ ಇಟ್ಟರೂ ಅವರು ಬಸ್ಮವಾಗುವಂತೆ ಶಿವನಿಂದ ವರವನ್ನು ಪಡೆದಿದ್ದ. ಆ ವರವನ್ನು ಕಾತ್ರಿಗೊಳಿಸಿಕೊಳ್ಳಲು ಶಿವನ ಮೇಲೆ ಕೈ ಇಡಲು ಹೋದಾಗ ಶಿವ ತಪ್ಪಿಸಿಕೊಂಡು ಹೋಗಿ ವಿಶ್ಣುವಿನ ಬಳಿ ತನ್ನನ್ನು ಕಾಪಾಡಲೆಂದು ಕೇಳಿದನು. ಆಗ ವಿಶ್ಣು ಕಡುಚೆಲುವೆಯಾದ ಮೋಹಿನಿ ರೂಪವನ್ನು ತಾಳಿ ಬಸ್ಮಾಸುರನನ್ನು ತನ್ನೆಡೆಗೆ ಸೆಳೆದು ಕೊಳ್ಳುತ್ತಾನೆ. ಬಸ್ಮಾಸುರನು, ಸುಂದರಿ ಮೋಹಿನಿಯ ರೂಪಕ್ಕೆ ಬೆರಗಾಗುತ್ತಾನೆ. ಬೆರಗಾದ ಬಸ್ಮಾಸುರ ಮೋಹಿನಿ ಹೇಳಿದ ಕುಣಿತದ ಪಂದ್ಯಕ್ಕೆ ಸಿದ್ದನಾದನು. ಎಲ್ಲರನ್ನು ಬಸ್ಮ ಮಾಡುವ ವರವನ್ನು ಪಡೆದಿದ್ದ ಬಸ್ಮಾಸುರನನ್ನು ಕುಣಿತಕ್ಕಿಳಿಸಿ ಉಪಾಯದಿಂದ ತನ್ನ ಕೈಯನ್ನು ತನ್ನ ತಲೆಯ ಮೇಲೆ ಇಟ್ಟುಕೊಳ್ಳುವಂತೆ ಮಾಡಿದಾಗ ಬಸ್ಮಾಸುರ ಸುಟ್ಟು ಬಸ್ಮವಾಗುತ್ತಾನೆ. ಈ ಬಸ್ಮದಿಂದದಲೇ ಯಾಣದ ಕಲ್ಲುಗಳು ಕಪ್ಪಾಗಿವೆ ಎಂದು ನಂಬಲಾಗಿದೆ. ಇದರಿಂದಾಗಿ ಎರಡು ದೊಡ್ಡ ಬೆಟ್ಟಗಳು ಬೈರವೇಶ್ವರ ಮತ್ತು ಮೋಹಿನಿ ತನ್ನ ಹೆಸರನ್ನು ಪಡೆದುಕೊಂಡವು.

ಇಂತ ಹಳಮೆಯನ್ನು ಹೊಂದಿರುವ ಯಾಣ ನಮ್ಮ ಕರುನಾಡ ಬಾಗವಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆ. ಸಾದ್ಯವಾದರೆ ಒಮ್ಮೆ ಹೋಗಿ ಬನ್ನಿ.

(ಮಾಹಿತಿ ಸೆಲೆ: ವಿಕೀಪೀಡಿಯ)
(ಚಿತ್ರ ಸೆಲೆ: educationalservice.net, tripadvisor.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: