ಟೆಸ್ಲಾ ಕೂಟದಿಂದ ಹೊರಬಂದ ಹೊಸ ಕಾರು

ಜಯತೀರ‍್ತ ನಾಡಗವ್ಡ.

Tesla-Model-S
ಮಿಂಚಿನ ಕಾರುಗಳ ಹೆಸರುವಾಸಿ ಕಂಪನಿ ಅಮೇರಿಕದ ಟೆಸ್ಲಾ ಇದೀಗ ಹೆಚ್ಚಿನ ವಿಶೇಶತೆಯ ಕಾರೊಂದನ್ನು ಬಿಡುಗಡೆ ಮಾಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಶ್ಟು ಹೆಸರು ಪಡೆದಿರುವ “ಎಸ್” ಹೆಸರಿನ ಮಾದರಿಗೆ ಹೆಚ್ಚಿನ ಚಳಕಗಳನ್ನು ಸೇರಿಸಿ ಈ ಕಾರನ್ನು ಬೆಳವಣಿಗೆ ಮಾಡಲಾಗಿದೆ. ಓಡಿಸುಗನಿಲ್ಲದೇ ಸಾಗುವ(Auto pilot) ಮತ್ತು ಎಲ್ಲ ಗಾಲಿಗಳ ಓಟದ (all wheel drive) ಚಳಕವನ್ನು ಹೊಸ “ಎಸ್” ಮಾದರಿಗಳಿಗೆ ಅಳವಡಿಸಲಾಗಿದೆ.

ಕಳೆದವಾರ ಲಾಸ್ ಎಂಜಲೀಸ್ ನಲ್ಲಿ ನಡೆದ ಸಮಾರಂಬವೊಂದರಲ್ಲಿ ಟೆಸ್ಲಾ ಕೂಟದ ಮೇಲಾಳು ಎಲಾನ್ ಮಸ್ಕ್ ಈ ಬಂಡಿಯನ್ನು ಬಿಡುಗಡೆಗೊಳಿಸಿದರು. ಹೊಸ ಬಂಡಿಯು ಮುಂಚಾಚುವ ಅಲೆಗಾವಲು(forward facing radar), ತಿಟ್ಟಕ ಮತ್ತು ಉದ್ದದ ಹರವಿನ ತಿಳಿಕಗಳನ್ನು ಪಡೆದಿದೆ. ಹೊಸದಾದ ಮೆದುಜಾಣ್ಮೆಯ ಏರ‍್ಪಾಟು ಬಳಸಿಕೊಂಡು ಬಂಡಿ ಕೆಲಸ ಮಾಡಲಿದೆ. ಓಡಿಸುಗರಿಗೆ ನೆರವಾಗಲು ಹಲವು ವಿಶೇಶತೆಗಳನ್ನು ಹೊಸದಾಗಿಸಿದ್ದು ಅದರಲ್ಲಿ ಮಾರ‍್ಪಾಟುಗೊಳ್ಳುವ ಸುಯ್ ಅಂಕೆ (adaptive cruise control), ಓಣಿದಾಟುವ (lane shift) ಮತ್ತು ತಂತಾನೆ ನಿಲುಗಡೆ ತಾಣದಲ್ಲಿ ನಿಲ್ಲಿಸುವವು (auto parking assist) ಮುಕ್ಯವಾದವು.

Elon musk with Tesla car release
ಇಶ್ಟಲ್ಲದೇ ಎಲಾನ್ ಮಸ್ಕ್ ತಿಳಿಸಿರುವಂತೆ ಈ ಕಾರನ್ನು ಇದರೊಡೆಯ ತಾನಿದ್ದಲ್ಲಿಗೇ ಕರೆಯಿಸಿಕೊಳ್ಳುವ ವಿಶೇಶತೆಯೂ ಇದ್ದು, ಕಾರಿನೊಡೆಯನು ಮೊದಲೇ ನೀಡಿದ ಆದೇಶದಂತೆ ಕಾರು ಅವರಿದ್ದಲ್ಲಿಗೆ ಬಂದು ನಿಲ್ಲುತ್ತದೆ. ಬೀದಿ ಮತ್ತು ಎಲ್ಲೆಂದರಲ್ಲಿ ಈ ವಿಶೇಶತೆಯನ್ನು ಬಳಸದೇ ಸ್ವಂತ ಜಾಗಗಳಲ್ಲಿ ಇದನ್ನು ಬಳಸುವಂತೆ ಕೂಡ ಮಸ್ಕ್ ಹೇಳಿದ್ದಾರೆ.

ಅಮೇರಿಕದಂತಹ ನಾಡುಗಳಲ್ಲಿ ಹೆದ್ದಾರಿ ಮೇಲೆ ಕಾರು-ಬಂಡಿ ಓಡಿಸುವುದಕ್ಕೆ ವೇಗದ ಮಿತಿಗಳನ್ನು ಹೇರಲಾಗಿದ್ದು, ಮಿತಿ ಮೀರಿ ಹೋಗುವ ಬಂಡಿಗಳ ತಿಟ್ಟಕವನ್ನು ಸೆರೆಹಿಡಿದು ಬಂಡಿಯೊಡೆಯರಿಗೆ ತಕ್ಕ ದಂಡ ಹೇರುತ್ತಾರೆ. ಇದಕ್ಕೆ ಸಂಬಂದವಾಗಿ, ವೇಗ ಮಿತಿಗಳಿಗೆ ತಕ್ಕಂತೆ, ಟೆಸ್ಲಾ ಹೊಸದಾಗಿಸಿದ “ಎಸ್ ” ಮಾದರಿಗೆ ಅಳವಡಿಸಿದ ತಿಟ್ಟಕಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಬಿಡುಗಡೆ ಸಮಾರಂಬದಲ್ಲಿ ಮಸ್ಕ್ ರವರು ತೋರ‍್ಪಡಿಸಿದರು. ತಾನಾಗೇ ಹಿಡಿಕೆ ತಿರುಗಿಸುವ, ಒಯ್ಯಾಟಕ್ಕೆ ತಕ್ಕಂತೆ ತಾನಾಗೇ ಬಂಡಿ ನಿಲ್ಲುವ ಹಾಗೂ ಓಣಿದಾಟುವಿಕೆ ಮುಂತಾದವುಗಳನ್ನು ಬಂಡಿ ತಾನಾಗೇ ಮಾಡಿ ತೋರಿಸಿ, ನೆರೆದಿದ್ದ ಮಂದಿಯ ಕಣ್ಸೆಳೆಯಿತು. ಗೂಗಲ್ ನವರ ತನ್ನಿಂದ ತಾನಾಗೇ ಓಡುವ ಕಾರಿನಲ್ಲಿರುವ ಹಲವಾರು ವಿಶೇಶತೆಗಳು ಟೆಸ್ಲಾ ಕೂಟದ “ಎಸ್” ಮಾದರಿ ಕಾರಿನಲ್ಲಿ ಅಳವಡಿಸಲಾಗಿದ್ದು, ಗೂಗಲ್ ನವರ ನಿದ್ದೆಗೆಡಿಸಿರಲೂಬಹುದು.Tesla s

ಎಲ್ಲ ಗಾಲಿಗಳ ಓಟ ಅಳವಡಿಸಿದ್ದರಿಂದ ಬಂಡಿಯ ವೇಗ ಸೊನ್ನೆಯಿಂದ 100 ಕಿ.ಮಿ. (ಪ್ರತಿಗಂಟೆಗೆ) ತಲುಪಲು ಕೇವಲ 3.2 ಸೆಕೆಂಡುಗಳು ಸಾಕು. ಪೆರಾರಿ, ಪೋರ‍್ಶ್, ಲಾಂಬೊರ‍್ಗಿನಿ ಮುಂತಾದ ಆಟೋಟದ ಸೂಪರ್ ಕಾರುಗಳು ಎಂದೇ ಕರೆಯಲ್ಪಡುವ ಬಂಡಿಗಳ ವೇಗವೂ ನೂರಕ್ಕೇರಲು ಕಡಿಮೆ ಹೊತ್ತು ತೆಗೆದುಕೊಳ್ಳುತ್ತವೆ. ಇದರಿಂದ ಈ ಸೂಪರ್ ಕಾರುಗಳ ಸಾಲಿಗೆ ಟೆಸ್ಲಾದ ಹೊಸದಾಗಿಸಿದ “ಎಸ್” ಮಾದರಿಯನ್ನು ಸೇರಿಸಬಹುದಾಗಿದೆ ಎಂದು ಮಸ್ಕ್ ರವರ ಅನಿಸಿಕೆ. ಹೊಸದಾದ ಮೆದುಜಾಣ್ಮೆಯ ಮೂಲಕ ಕಾರು ಓಡಿಸುಗರು ಕಾರಿನ ಮೇಲೆ ಒಳ್ಳೆಯ ಹಿಡಿತ ಪಡೆಯುವುದರಿಂದ ಬಂಡಿಯ ಅಳವುತನವೂ ಹೆಚ್ಚಾಗಲಿದೆ.

“ಎಸ್” ಮಾದರಿಯ ಕಿರುಮಾದರಿಗಳಾದ 60, 85 ಮತ್ತು P85 ಗಳಲ್ಲಿ ಎಲ್ಲ ಗಾಲಿಗಳ ಓಟದ ವಿಶೇಶತೆ ಪಡೆಯಲಿವೆ. 60, 85 ಮಾದರಿಗಳು ಈ ಮುಂಚೆ ನೀಡುತ್ತಿದ್ದ 380 ಕುದುರೆಬಲಕ್ಕಿಂತ ತುಸು ಕಡಿಮೆಯಾಗಿ 376 ಕುದುರೆಬಲದ ಕಸುವು ನೀಡಲಿದ್ದರೂ ವೇಗಯೇರಿಕೆಯಲ್ಲಿ ಹಳೆಯ ಮಾದರಿಗಳನ್ನು ಮೀರಿಸಲಿವೆ. ಇನ್ನೂ P85 ಮಾದರಿಯೂ 691 ಕುದುರೆಬಲದ ಓಡುಕದ ಮೂಲಕ ಹೆಚ್ಚು ಕಸುವಿನದ್ದಾಗಿರಲಿದೆ. P85 ಬಂಡಿಯು ಗಂಟೆಗೆ 155 ಮಯ್ಲಿ ಅಂದರೆ ಸುಮಾರು 250 ಕಿ.ಮೀ ನಶ್ಟು ವೇಗದಲ್ಲಿ ಸಾಗಬಲ್ಲದು. ಕಾರು ಈ ವೇಗಯೇರಿಕೆಯಿಂದ ಸಾಗುವುದನ್ನು ನೆರೆದಿದ್ದ ಮಂದಿಗೆ ನೇರವಾಗಿ ತೋರ‍್ಪಡಿಸಿ ಬೆರಗುಗೊಳಿಸಲಾಯಿತು. ಯಾವೊತ್ತು ಹೊಸದನ್ನೇ ಬಯಸಿ ಹೊಸ ಹೊಸ ಕೆಲಸಕ್ಕೆ ಕಯ್ ಹಾಕುವ ಮಸ್ಕ್ ಮತ್ತು ಅವರ ಟೆಸ್ಲಾ ಕೂಟದ ಅರಕೆಗಳು ನಮ್ಮಲ್ಲೂ ಬರುವಂತಾಗಲಿ.

(ಮಾಹಿತಿ ಸೆಲೆ: cnet.com)
(ಚಿತ್ರ ಸೆಲೆ: davehollister.nettechtelling.commashable.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: