ಕಾನೊ ಎಣ್ಣುಕ ಕಂತೆ: ಆಡಿ ಕಲಿ – ಮಾಡಿ ನಲಿ
– ಪ್ರವೀಣ ಪಾಟೀಲ.
ಬೆಳೆಯುತ್ತಿರುವ ಜಗತ್ತಿನಲ್ಲಿ ದಿನಕ್ಕೊಂದು ಹೊಸ ಚಳಕಗಳು ಮೂಡಿಬರುತ್ತಿವೆ. ಹೊಸ ಎಣ್ಣುಕಗಳು ಹಾಗು ಎಣ್ಣುಕಗಳಿಗೆ ಸಂಬಂದಿಸಿದ ಚಳಕಗಳು ಹೊರಬರುತ್ತಲೇ ಇವೆ. ಇಂತಹ ಚಳಕಗಳನ್ನು ಹೆಚ್ಚು ಹೆಚ್ಚು ಮಂದಿಗೆ ತಲುಪಿಸುವ ಪ್ರಯತ್ನಗಳನ್ನು ಕೂಡ ಕಂಪನಿಗಳು ಮಾಡುತ್ತಿವೆ. ಇಂತಹ ಚಳಕಗಳಲ್ಲಿ ಕಾನೊ ಎಣ್ಣುಕ ಕಂತೆ(Kano computer kit)ಯೂ ಒಂದು. ಸಾಮಾನ್ಯ ಮಂದಿಯು ಕೂಡ ಈ ಎಣ್ಣುಕವನ್ನು ಬಳಕೆ ಮಾಡುವಂತೆ ಮಾಡಲಾಗಿದೆ, ಹಾಗಾಗಿ ಕಾನೊವನ್ನು ನೀವೇ ಜೋಡಿಸಿ ಸಿದ್ದಪಡಿಸಬಹುದು. ಕಾನೊ ಎಣ್ಣುಕ ಕಂತೆ ಎಲ್ಲರಿಗೂ ಎಣ್ಣುಕ ಹಮ್ಮುಗೆಯನ್ನು ಕಲಿಸುವ ಬರವಸೆ ಮೂಡಿಸಿದೆ.
ಈ ಕಂತೆಯು “ನೀವೇ ಮಾಡಿಕೊಳ್ಳುವ ಎಣ್ಣುಕ ಕಂತೆ”ಯಾಗಿ (Do it yourself Computer Kit) ಹೊರಹೊಮ್ಮಿದ್ದು, ಎಲ್ಲಾ ವಯಸ್ಸಿನ ಮಂದಿಗೆ ಹೊಂದುವ ಹಾಗೆ ಕಟ್ಟಲಾಗಿದೆ. ಮಕ್ಕಳಿಂದ ಹಿಡಿದು ಚಳಕ ಜಗತ್ತಿನ ಅರಿವಿಲ್ಲದ ವಯಸ್ಕರರು ಕೂಡ ಸಲೀಸಾಗಿ ಬಳಸಬಹುದಾಗಿದೆ. ಇದರಿಂದ ಎಣ್ಣುಕ ಹಮ್ಮುಗೆಯನ್ನು ಕಲಿಯುವುದು ಮಕ್ಕಳ ಆಟದಶ್ಟೇ ಹಗುರವಾಗಿದೆ. ರಾಸ್ಬೆರ‍್ರಿ ಪೈ (Raspberry Pi) ಎಂಬ, ಇನ್ನೂ ಸಿದ್ದಪಡಿಸುವಿಕೆಯ ಮೊದಲ ಹಂತದಲ್ಲಿರುವ ಅಗ್ಗದ ಬೆಲೆಯ ಎಣ್ಣುಕದ ಜೊತೆಗೆ ಉಲಿಕ (Speaker) ಮತ್ತು ತಂತಿಯಿಲ್ಲದ ಊಳಿಕ(Wireless Server)ಗಳು ದೊರೆಯುತ್ತವೆ. ಇದನ್ನು ಬಳಸಿ ಬಳಕೆದಾರರು ತಾವಾಗಿಯೇ ಎಣ್ಣುಕವನ್ನು ಕಟ್ಟಬಹುದು. ಎಣ್ಣುಕ ತೆರೆಯನ್ನು ಜೋಡಿಸಿ ಇದರಲ್ಲಿ ಆಟವಾಡುವುದು, ಹಾಡು ಕೇಳುವುದು ಮತ್ತು ಓಡುತಿಟ್ಟಗಳನ್ನು ಕೂಡ ನೋಡಿ ಸವಿಯಬಹುದು.
150 ಡಾಲರ್ ಎಂದರೇ ಸರಿಸುಮಾರು 9000 ರೂಪಾಯಿಯಲ್ಲಿ ಕಾನೊ ಕಂತೆಯನ್ನು ಕೊಳ್ಳಬಹುದು. ತಿಳಿಹೇಳುವ ಹೊತ್ತಗೆ(Instruction Manual), 8GB SD ಎಲೆ, ಕಾನೊ ಏರ‍್ಪಾಟು, ರಾಸ್ಬೆರ‍್ರಿ ಪೈ, ಕಾನೊ ಕೀಲಿಮಣೆ(ಒಳಕಟ್ಟಿದ ಗುರುತುಮಣೆ – built in trackpad) ಮತ್ತು ಅದಕ್ಕೆ ಹೊಂದುವಂತಹ ಹೊದಿಕೆಗಳು(Covers), ಎಚ್‍ಡಿಎಮ್‍ಐ HDMI, ಪುಟ್ಟ USB ತಂತಿಗಳು, ಮಿಂಚುಕಸುವಿನ ಗೂಟ(power plug) ಮತ್ತು ತಂತಿಯಿಲ್ಲದ ಕೂಡಿಸುಕ (Wireless Connector) ಕೂಡ ಈ ಕಂತೆಯಲ್ಲಿ ಬರುತ್ತವೆ.
ಕಾನೊ ಎಣ್ಣುಕದ ಕಂತೆಯು ಕಲೆ, ಅರಿಮೆ, ಹಮ್ಮುಗೆ ಮತ್ತು ಕಲ್ಪನೆಯ ಬೆರಕೆ(Mixture) ಎಂದು ಇದನ್ನು ಸಿದ್ದಪಡಿಸಿದ ಕೂಟವು ಹೇಳಿದೆ. ಈ ಕಂತೆಯ ನೆರವಿನಿಂದ ನುಡಿ ಹಮ್ಮುಗೆಯು ಮತ್ತಶ್ಟು ಮಜವಾಗಲಿದೆ. ಅದಕ್ಕಂತೆಯೇ, ಈ ಎಣ್ಣುಕ ಕಂತೆಯಲ್ಲಿ ಕಾನೊ ಆಟಗಳಿಂದ ಹಮ್ಮುಗೆಯನ್ನು ಕಲಿಸಲಾಗುತ್ತದೆ, ಇದಲ್ಲದೇ ನಿಮ್ಮ ಗೆಳೆಯರಿಗೆ ಯಾವುದಾದರು ಆಟದಲ್ಲಿ ಸವಾಲೆಸಗಿ ಆ ಆಟದ ಮೂಲಕವೂ ಕಲಿಯಬಹುದು. ಕಾನೊ ಕಂತೆಯನ್ನು ಸಾಮಾನ್ಯ ಆಟಗಳನ್ನು ಆಡುವಹಾಗೆ ಸಿದ್ದಪಡಿಸಲಾಗಿದೆ. ಕಾನೊ ಮೆದುಸರಕಿನಲ್ಲಿ (Software) ಆರು ಹಂತಗಳಿವೆ, ಪ್ರತಿಯೊಂದು ಹಂತದಲ್ಲಿ ಒಂದು ಆಟದ ಹಮ್ಮುಗೆಯ ಪರೀಕ್ಶೆಯನ್ನು ದಾಟಬೇಕು. ಹೆಸರಾಂತ ಆಟಗಳಾದ ಪಾಂಗ್, ಸ್ನೇಕ್ ಮತ್ತು ಮೈನ್ಕ್ರಾಪ್ಟ್ ತರಹದ ಆಟಗಳ ಮೂಲಕ ಹಮ್ಮುಗೆಯನ್ನು ಕಲಿಯಬಹುದು. ಈ ಎಣ್ಣುಕವನ್ನು ಯಾವುದೇ ಆಕಾರದಲ್ಲಿ ಹಾಗೂ ಎಣ್ಣುಕ ತೆರೆ ಇರುವ ಯಾವುದೇ ತಾಣಕ್ಕೂ ಒಯ್ಯಬಹುದು.
ಕಾನೊ ಎಣ್ಣುಕ ಕಂತೆ ಜಗತ್ತಿನೆಲ್ಲೆಡೆ ಸದ್ಯಕ್ಕೆ ಇಂಗ್ಲೀಶ್, ಇಸ್ಪಾನಿಯ, ಅರಬ್ಬಿ ಮತ್ತು ಮ್ಯಾಂಡರಿನ್ ನುಡಿಗಳಲ್ಲಿ ಸಿಗುತ್ತದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ನುಡಿಗಳಿಗೆ ಮಾರ‍್ಪಾಟುಗೊಳಿಸುವ ಚಿಂತನೆ ನಡೆಯುತ್ತಿದೆ. ಕಾನೊ ಹಂಚಿಕೆಯು, ಕಿಕ್‍ಸ್ಟಾರ‍್ಟ್ ಎಂಬ ಹೂಡಿಕೆಯ ಮಿಂಬಲೆ ಮೂಲಕ 1,00,000 ಡಾಲರ್ ಹೂಡಿಕೆಯನ್ನು ಸೆಳೆಯುವ ಗುರಿ ಹೊಂದಿತ್ತು. ಆದರೆ ಎಲ್ಲರಿಗೂ ಬೆಚ್ಚಿ ಬೀಳಿಸುವಂತೆ 15,22,160 ಡಾಲರ್‍ನಶ್ಟು ಹಣವನ್ನು 13,382 ಹೂಡಿಕೆದಾರರು ಹೂಡುವ ಮೂಲಕ ಕಾನೊ ಹಂಚಿಕೆಯು ಒಂದು ದೊಡ್ಡ ಸಾದನೆ ಮಾಡಿತು.
ಕಾನೊ ಎಣ್ಣುಕ ಕಂತೆಗೆ ಬಿಡುಗಡೆಗಿಂತ ಮೊದಲೇ ಸಾಕಶ್ಟು ಬೇಡಿಕೆಯಿತ್ತು, ಹಲವಾರು ಗ್ರಾಹಕರು ಬಿಡುಗಡೆಯ ಮೊದಲೇ ಪ್ರೀ-ಆರ‍್ಡರ್ ಮೂಲಕ ಕೊಂಡುಕೊಂಡಿದ್ದರು. ಕಳೆದ ಬೇಸಿಗೆಯಲ್ಲಿ ಪ್ರೀ-ಆರ‍್ಡರ್ ಮಾಡಿದ ಗ್ರಾಹಕರಿಗೆ ಈ ಕಂತೆಯನ್ನು ಪೂರೈಸಲಾಯಿತು. ಇದೀಗ ಕೂಟದವರು ಈ ಕಂತೆಯು ಎಲ್ಲೆಡೆ ಸಿಗುವಹಾಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.
(ಮಾಹಿತಿ ಮತ್ತು ಚಿತ್ರ ಸೆಲೆ: thenextweb.com)
ಇತ್ತೀಚಿನ ಅನಿಸಿಕೆಗಳು