ಕಲ್ಯಾಣಿ – ಕಲೆಯೊಂದಿಗಿರುವ ಜೀವಸೆಲೆ
ಕೈ ಮುಗಿದು ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವಿದು ಕಲೆಯ ಬಲೆಯು…
– ಕುವೆಂಪು
ಕವಿಯ ಈ ಕವಿತೆಯನ್ನು ನನಗೇನಾದರೂ ಬರೆಯಲು ಸಾದ್ಯವಾಗಿದ್ದಲ್ಲಿ ನಾನು ಹೀಗೆ ಬರಯಬಲ್ಲೆನೇನೊ…
(ಕವಿ ಮತ್ತು ಕವಿಪ್ರಿಯರ ಕ್ಶಮೆ ಇರಲಿ)
ಕೈ ಮುಗಿದು ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವಿದು ನೀರ ಗುಡಿಯು
ಕಲೆಯೊಂದಿಗಿರುವ ಜೀವಸೆಲೆಯು
ಕಲ್ಯಾಣಿ, ಪುಶ್ಕರಣಿ, ಕೊಳ, ಮೆಟ್ಟಿಲ ಬಾವಿ, ಸೋಣೆ(ಸೂಣೆ), ನೀರಿನ ಮಡು, ಕುಂಡ, ಗುಂಡ, ತೀರ‍್ತ ಹೀಗೆ ಹತ್ತು ಹಲವು ಹೆಸರಿರುವ ಈ ಜೀವ ಸೆಲೆಗಳೇ ನೆಲದಡಿಯಲ್ಲಿ ಬರೆದ ಸುಂದರ ಕಾವ್ಯಗಳು. ಊರಿಗೊಂದು ಕೆರೆ, ಕೇರಿಗೊಂದು ಕಲ್ಯಾಣಿ(ಕೊಳ), ಮನೆಗೊಂದು ಬಾವಿ ಎನ್ನುವ ಹಿರಿಯರ ಆಡು ಮಾತಿನಂತೆ, ಇತಿಹಾಸದಲ್ಲಿ ಬರೆದಿರುವ ಈ ನೀರಿನ ಆಕರಗಳ ಆಳ ಬಹಳ ದೊಡ್ಡದು. ಅವುಗಳ ನಿರ‍್ಮಾಣದಲ್ಲಿ ನಮ್ಮ ಅರಿವಿಗೆ ಸಿಗದ ಮುಂದಾಲೋಚನೆ ಎದ್ದು ಕಾಣುತ್ತದೆ. ಈ ನೀರಿನ ಸೆಲೆಗಳನ್ನು ಕಟ್ಟುವಲ್ಲಿ ಹಿರಿಯರಿಗಿದ್ದ ಅರಿವು ಮತ್ತು ಅವರ ಅಗಾದ ಪರಿಶ್ರಮ ಎದ್ದುಕಾಣುತ್ತದೆ. ಅಲ್ಲದೆ ವಾಸ್ತುಶಿಲ್ಪದ ಕಲ್ಪನೆಯೇ ಎಂತಹವರನ್ನು ಒಂದು ಕ್ಶಣ ಮೂಕವಿಸ್ಮಿತರನ್ನಾಗಿ ಮಾಡುತ್ತದೆ.
ಹಿರಿಯರ ದಾರ‍್ಮಿಕ ಆಚರಣೆ, ಪರಿಸರ ಕಾಳಜಿ ಮತ್ತು ಸಂಸ್ಕ್ರುತಿಯ ನೆಲೆಗಟ್ಟಿನಲ್ಲಿ ಕಟ್ಟಲಾದ ಈ ಕಟ್ಟಡಗಳು ತಾಂತ್ರಿಕತೆಯ ಮತ್ತು ವಾಸ್ತುಶಿಲ್ಪದ ಅಚ್ಚರಿಗಳು. ಬಹಳ ಸರಳವಾಗಿ ಈ ನೀರಿನ ಸೆಲೆಗಳನ್ನು ಹೇಳುವುದಾದರೆ, ಆಳವಾದ ಬಾವಿ ಮತ್ತು ಆ ಬಾವಿಯ ನೀರನ್ನು ತೆಗೆದುಕೊಳ್ಳಲು ಅನುವಾಗುವ ಮೆಟ್ಟಿಲುಗಳ ಒಂದು ಕಟ್ಟಡ ಎನ್ನಬಹುದು, ಇಲ್ಲವೇ ಮೆಟ್ಟಿಲುಗಳಿರುವ ಕೆರೆ ಅನ್ನಬಹುದು. ಗುಡಿಯ ಅಂಗಳ, ಅರಮನೆಯ ಆವರಣ ಹಾಗು ಸಾಮಾನ್ಯವಾಗಿ ಎಲ್ಲರಿಗೂ ಎಟುಕುವಂತಹ ಇತರೆ ಜಾಗಗಳಲ್ಲಿ ಇವನ್ನು ಕಟ್ಟಲಾಗಿದೆ.
ಸಾಮಾನ್ಯವಾಗಿ ಕಲ್ಯಾಣಿ, ಪುಶ್ಕರಣಿ, ಕೊಳ, ಮೆಟ್ಟಿಲ ಬಾವಿ, ಸೋಣೆ(ಸೂಣೆ), ನೀರಿನ ಮಡು, ಕುಂಡ, ತೀರ‍್ತ ಹಾಗು ಮೆಟ್ಟಿಲು ಬಾವಿಗಳು ಒಂದೆ ಆದರೂ ಕಲ್ಯಾಣಿ(ಕೊಳ)ಗಳು ದೇವಸ್ತಾನಗಳಲ್ಲಿ, ರಾಜರುಗಳ ಅರಮನೆ ಆವರಣಗಳಲ್ಲಿ ಕಂಡು ಬಂದರೆ ಇನ್ನು ಇತರ ಕಟ್ಟಡಗಳು ಬೇಸಾಯಕ್ಕೆಂದು, ನೆಲದಡಿಯ ಮಳೆಯ ಬಸಿ ನೀರಿನ ನಿರ‍್ವಹಣೆಗೆಂದು ಊರಿನ ಹೊರಗಡೆ ಕಟ್ಟಿದ್ದನ್ನು ಕಾಣಬಹದು. (ಇವನ್ನು ತಲಪರಿಗೆ, ಮದಕ ಎಂದು ಕರೆಯುವ ವಾಡಿಕೆ ಇದೆ). ಇನ್ನು ದೊಣೆ ಎನ್ನುವುದು ಗುಡ್ಡದ ಮೇಲೆ ತಾನಾಗೆ ರೂಪುಗೊಳ್ಳುವ ಹೊಂಡ. ಇನ್ನು ತಲಪರಿಗೆ, ಚಟ್ಟಿನ ಬಾವಿ, ಚೌಕಿ ಬಾವಿ ಮತ್ತು ಮದಕ ಎಲ್ಲವು ಮನುಶ್ಯನು ಸಣ್ಣ ಪ್ರಮಾಣದಲ್ಲಿ ನಿರ‍್ಮಿಸಿದ ನೀರಿನ ಸೆಲೆಗಳು.
ದಾರ‍್ಮಿಕ ಆಚರಣೆಗಳು, ಕುಡಿಯುವ ನೀರು ಮತ್ತು ಬೇಸಾಯಕ್ಕೆಂದು ದೊಡ್ಡ ಕಲ್ಯಾಣಿಗಳನ್ನು, ಮತ್ತು ಅದಕ್ಕೆ ನೀರುಣಿಸಬಲ್ಲ ಸಣ್ಣ ಸಣ್ಣ ಇಂಗುಗುಂಡಿ ಮತ್ತು ಕಾಲುವೆಗಳ ಏರ‍್ಪಾಟನ್ನು ಹಿಂದಿನ ಕಾಲದಲ್ಲಿ ರಾಜಮನೆತನದವರು ಮಾಡುತ್ತಿದ್ದರು. ಸಾಮಾನ್ಯ ಜನರು ಅಂದಿನ ಕಾಲದಲ್ಲಿ ಸಮಾಜ ಸೇವೆಯ ನೆಪದಲ್ಲಿ ಸಣ್ಣ ಸಣ್ಣ ಕಲ್ಯಾಣಿಗಳನ್ನು ಮತ್ತು ಇತರ ಮಾದರಿಯ ನೀರಸೆಲೆಗಳನ್ನು ಕಟ್ಟುವ ವಾಡಿಕೆ ಇತ್ತು. ನೀರು ಸಂಗ್ರಹಿಸುವ ಈ ಎಲ್ಲ ಪದ್ದತಿಗಳಲ್ಲಿ, ನೆಲದ ಪದರಗಳ ಮೇಲಕ್ಕೆ ಉಕ್ಕುವ ಅತವಾ ಚಿಮ್ಮುವ ನೀರನ್ನು ಸಮರ‍್ತವಾಗಿ ಬಳಸಿಕೊಂಡ ನಮ್ಮ ಹಿರಿಯರ ಜಾಣ್ಮೆ ಅದ್ಬುತ. ಇಂತಹ ಜಾಗಗಳನ್ನು ಗುರುತಿಸಿ, ಹೆಚ್ಚಾಗಿ ಮಳೆ ನೀರು ಸಂಗ್ರಹವಾಗುವ ತಗ್ಗು ಪ್ರದೇಶಗಳಲ್ಲಿ ಹಲವು ರೀತಿಯ ಇಂಗುಗುಂಡಿಗಳನ್ನು ಕಟ್ಟಿ, ನೆಲದಡಿಯ ಮಳೆಯ ಬಸಿ ನೀರನ್ನು ಬಳಸಿಕೊಂಡ ಜಾಣ್ಮೆ ದೊಡ್ಡದು.
ನಮ್ಮಲ್ಲಿ ನೀರು – ಮಳೆ ಇವೆರಡನ್ನೂ ಪೂಜಿಸುವ ಆಚರಣೆಗಳು ಬಹಳ ಹಿಂದಿನಿಂದ ಬಂದಿವೆ. ಈ ನೀರಿನ ಸೆಲೆಗಳಿಗೆ ದೈವೀ ಸ್ವರೂಪ ಕೊಟ್ಟಾಗ ಅವುಗಳನ್ನು ಕಾಪಾಡಿಕೊಳ್ಳಬಹುದು ಎನ್ನುವ ಆಲೋಚನೆ ಹಿಂದಿನವರಿಗಿತ್ತು. ಹಾಗಾಗಿ ಇವೆಲ್ಲವು ಗುಡಿಯ ಆವರಣಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ನೀರು ಬಳಸಲು ಕೆಲವು ಕಟ್ಟುಪಾಡು ಹಾಗು ನಿಯಮಗಳನ್ನು ಮಾಡಿ, ದೇವರ ರೂಪ ಕೊಟ್ಟ ನಮ್ಮ ಹಿರಿಯರ ಜಾಣ್ಮೆಗೆ ನಾವು ಮೂಡ ನಂಬಿಕೆಯ ಪಟ್ಟ ಕಟ್ಟದಿದ್ದರೆ ಅಶ್ಟೇ ಸಾಕು.
ಸಾಂಪ್ರದಾಯಿಕವಾಗಿ ನಮ್ಮ ಪೂರ‍್ವಜರು ಹಲವಾರು ರೀತಿಯಲ್ಲಿ ಮಳೆನೀರಿನ ಸಂಗ್ರಹಣೆಯನ್ನು ಮಾಡಿದರು. ಈ ಎಲ್ಲ ವ್ಯವಸ್ತೆಗಳು ಆಯಾ ಕಾಲದ ಜನ ಜೀವನದ ಅನುಕೂಲಕ್ಕೆ ತಕ್ಕಂತೆ ಬೆಳೆಯುತ್ತಾ ಹೋದವು. ಈ ಎಲ್ಲಾ ನೀರಿನ ಸೆಲೆಗಳ ನಿರ‍್ಮಾಣದ ಹಿಂದೆ ಇರುವ ಉದ್ದೇಶ ಒಂದೇ ಅದರೂ, ಅವುಗಳ ನಿರ‍್ಮಾಣ ಮತ್ತು ವಾಸ್ತುಶಿಲ್ಪದ ವಿನ್ಯಾಸಗಳಲ್ಲಿ ಆಯಾ ಸ್ತಳ ಪುರಾಣ, ಅಲ್ಲಿನ ಅವಶ್ಯಕತೆ ಹಾಗು ಕಾಲಮಾನಕ್ಕೆ ತಕ್ಕಂತೆ ರೂಪಿಸಿದ್ದನ್ನು ಕಾಣಬಹುದಾಗಿದೆ. ಇನ್ನು ವಾಸ್ತುಶಿಲ್ಪದ ದ್ರುಶ್ಟಿಯಿಂದ ಗಮನಿಸಿದಾಗ ಅನೇಕ ಕಲ್ಯಾಣಿಗಳು ಅತಿ ವಿಶಿಶ್ಟ ಕಲಾತ್ಮಕತೆಯಿಂದ ಕಟ್ಟಿರುವುದನ್ನು ನಾವು ನೋಡಬಹುದಾಗಿದೆ. ಕಡಿಮೆ ಮಳೆಯಾಗುವ ಜಾಗಗಳು ಹಾಗು ಒಣ ಬೂಮಿಗಳಲ್ಲಿ ಇವನ್ನು ಕಾಣಬಹುದಾಗಿದೆ. ಸಾಮಾನ್ಯವಾಗಿ ಮುಂಗಾರಿನ ಮಳೆ ನೀರನ್ನು ಹಿಡಿದಿಟ್ಟು, ಬಿರು ಬೇಸಗೆಯಲ್ಲಿ ಜನ ಹಾಗು ಜಾನುವಾರುಗಳಿಗೆ ಕುಡಿಯಲು ನೀರು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಬದುಕಿನ ಎಲ್ಲ ಮಜಲುಗಳಿಗೆ ಆಸರೆಯಾಗಿದ್ದ ಕಲ್ಯಾಣಿ ಹಿರಿತಲೆಮಾರಿನ ಅನೂಹ್ಯ ಕೊಡುಗೆಯಾಗಿ, ಅಳೆಯಲಾಗದಶ್ಟು ಸಂಪತ್ತಿನ ಕಜಾನೆಯಾಗಿ, ಸಂಸ್ಕ್ರುತಿ, ಪರಿಸರ, ವಾಸ್ತುಶಿಲ್ಪ, ಕಟ್ಟಡ ಕಟ್ಟುವ ಪರಿಣಿತಿಗಳ ನೆಪವಾಗಿ, ಲೋಕೋಪಕಾರಕ್ಕೆ ನಾಂದಿ ಹಾಡಿದ ಈ ಕಲ್ಯಾಣಿಗಳು ನೀರಿನ ವ್ಯವಸ್ತೆಯ ಅಚ್ಚರಿಗಳೆ ಸರಿ. ಮಾನವನ ಎಲ್ಲ ಏರಿಳಿತಗಳಿಗೆ ಸಾಕ್ಶಿಯಾದ ಈ ನೀರಿನ ಮೂಲಗಳು ಕ್ರಮೇಣ ಬದುಕಿನ ಉಸಿರಾದವು. ಕಲ್ಯಾಣಿಗಳ ಒಡಲಲ್ಲಿ ಬದುಕು ಅರಳಿತ್ತು.
(ಚಿತ್ರಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು