2,50,000 ಪದಗಳ ಮೈಲಿಗಲ್ಲು ಮುಟ್ಟಿದ ಕನ್ನಡ ವಿಕ್ಶನರಿ

ಹೊನಲು ತಂಡ.

 

ಕನ್ನಡ ವಿಕ್ಶನರಿ ಇಂದು ಎರಡು ಲಕ್ಶ ಐವತ್ತು ಸಾವಿರ ಪದಗಳ ಮೈಲಿಗಲ್ಲನ್ನು ಮುಟ್ಟಿದೆ. ಸಾಮಾನ್ಯ ಮಂದಿಯ ದುಡಿಮೆಯಿಂದ ಕಟ್ಟಲಾಗುತ್ತಿರುವ ಈ ಪದನೆರಕೆಯಿಂದ ಕನ್ನಡ ಸಮಾಜಕ್ಕೆ ಹಲವು ಬಗೆಯಲ್ಲಿ ಪ್ರಯೋಜನವಾಗುತ್ತದೆ. ಹಾಗೆ ನೋಡಿದರೆ ಕನ್ನಡ ಸಮಾಜ ಈಗಾಗಲೇ ಇದರ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದೆ. ಕನ್ನಡ ಪದಗಳ ಹುರುಳುಗಳನ್ನು ಮತ್ತು ಅವುಗಳ ಬಳಕೆಯ ಬಗೆಗಳನ್ನು ಒದಗಿಸುವುದಲ್ಲದೆ ಇಂಗ್ಲೀಶ್ ಪದಗಳಿಗೆ ಕನ್ನಡ ಪದಗಳನ್ನೂ ಮತ್ತು ಕನ್ನಡ ಪದಗಳಿಗೆ ಇಂಗ್ಲಿಶ್ ಪದಗಳನ್ನೂ ಒದಗಿಸುತ್ತದೆ. ಜೊತೆಯಲ್ಲಿ ಕನ್ನಡ ಪದಗಳಿಗೆ ಇತರೆ ನುಡಿಗಳಲ್ಲೂ ಅದೇ ಹುರುಳಿನ ಪದಗಳನ್ನು ಇಲ್ಲಿ ಪಡೆಯಬಹುದಾಗಿದೆ. ಈ ಅನುಕೂಲಗಳನ್ನು ಯಾರು ಬೇಕಾದರೂ, ಪ್ರಪಂಚದ ಯಾವ ಮೂಲೆಯಿಂದಾದರೂ ನಡುಬಲೆಯ ಮೂಲಕ ಬಿಟ್ಟಿಯಾಗಿ ಪಡೆಯಬಹುದು ಎಂಬುದು ವಿಕ್ಶನರಿಯ ಹೆಚ್ಚುಗಾರಿಕೆಯನ್ನು ತೋರಿಸುತ್ತದೆ.

ಯಾವುದೇ ನುಡಿಯಲ್ಲಿ ತಿಳಿವಿನ ಬರಹಗಳನ್ನು ಇಲ್ಲವೇ ಇನ್ನಾವುದೇ ಬಗೆಯ ತಿಳಿವಿನ ಸರಕನ್ನು ಕಟ್ಟಲು ಬೇಕಾಗುವ ಅಡಿಪಾಯವೇ ಪದಗಳು. ಕನ್ನಡ ಪದಗಳು ಹೀಗೆ ಸುಲಬವಾಗಿ ದೊರೆಯಬಲ್ಲವಾದರೆ ಮುಂದೆ ಕನ್ನಡದಲ್ಲಿ ತಿಳಿವಿನ / ಅರಿವಿನ ಕಣಜಗಳನ್ನು ಕಟ್ಟುವ ಕೆಲಸದಲ್ಲಿ ವಿಕ್ಶನರಿಯ ಪಾಲು ದೊಡ್ಡದಾಗುತ್ತದೆ.

ವಿಕ್ಶನರಿಯ ಪದಗಳು APIಗಳ ಮೂಲಕವೂ ದೊರಕುತ್ತವೆ. ಹಾಗಾಗಿ ಇದನ್ನು ಕಂಪ್ಯೂಟರ್ ಮತ್ತು ಸ್ಮಾರ‍್ಟ್ ಪೋನ್ ಗಳ ಹಮ್ಮುಗೆಗಳು (programs) ಮತ್ತು ಬಳಕಗಳು (apps) ನೇರವಾಗಿ ಬಳಸಿಕೊಳ್ಳಬಹುದು. ಇಂತಹ ಅನುಕೂಲದಿಂದ ಹಮ್ಮುಗೆಗಳಿಗೆ ಕನ್ನಡ ಪದಗಳು ನೇರವಾಗಿ ಸಿಗಬಹುದಲ್ಲದೆ ಅವು ಇಂಗ್ಲೀಶ್ ಪದಗಳಿಗೆ ಹಾಗೂ ಪದಕಂತೆಗಳಿಗೆ ಕನ್ನಡದ ನುಡಿಮಾರ‍್ಪುಗಳನ್ನು ನೇರವಾಗಿ ಪಡೆಯಬಲ್ಲವು.

ಪದಗಳ ಎಣಿಕೆಯಲ್ಲಿ ಪ್ರಪಂಚದ ಎಲ್ಲ ನುಡಿಗಳ ವಿಕ್ಶನರಿಗಳ ಸಾಲಿನಲ್ಲಿ ಕನ್ನಡ ವಿಕ್ಶನರಿ 21ನೇ ಸ್ತಾನದಲ್ಲಿದ್ದರೆ ಬಾರತದ ನುಡಿಗಳ ಪೈಕಿ 2ನೇ ಸ್ತಾನದಲ್ಲಿದೆ. ಹೀಗೆ ಎರಡೂವರೆ ಲಕ್ಶ ಪದಗಳೊಂದಿಗೆ ಗಟ್ಟಿಯಾಗಿ ನಿಂತಿರುವ ಕನ್ನಡ ವಿಕ್ಶನರಿ ಕೆಲವೇ ವರುಶಗಳ ಕೆಳಗೆ ಬರಿಯ 250 ಪದಗಳನ್ನು ಹೊಂದಿತ್ತು! ಆಗ ವಿಕ್ಶನರಿ ಕೆಲಸವನ್ನು ಕೈಗೆತ್ತಿಕೊಂಡು ಇಂದಿರುವ ಮಟ್ಟಕ್ಕೆ ತರಲು ‘ಹೊನಲು’ ನಡೆಸುಗರಾದ ವಿವೇಕ್ ಶಂಕರ್, ಪ್ರಶಾಂತ ಸೊರಟೂರ, ಸಂದೀಪ್ ಕಂಬಿ ಮತ್ತು ರತೀಶ ರತ್ನಾಕರ ಅವರುಗಳೂ ದುಡಿದಿದ್ದಾರೆ. ಇವರ ದುಡಿಮೆ ನಮಗೆ ಹೆಮ್ಮೆಯನ್ನು ತಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.