ತರ‍್ಕಕ್ಕೆ ನಿಲುಕದ್ದು

ಹರ‍್ಶಿತ್ ಮಂಜುನಾತ್.bikeನಾನೀಗ ಹೇಳಹೊರಟಿರುವ ಕತೆ, ಬರೀ ಕಟ್ಟುಕತೆಯಲ್ಲ. ನಿಜಕ್ಕೂ ಇದು ತರ‍್ಕಕ್ಕೆ ನಿಲುಕದಂತಹ ನಯ್ಜ ಕತೆ. ನಮ್ಮೂರಲ್ಲಿ ಸುಮಾರು ಮೂವತ್ತು ವರುಶಗಳ ಹಿಂದೆ ತಮಿಳುನಾಡಿನಿಂದ ವಲಸೆ ಬಂದ ಸರವಣನವರ ಕುಟುಂಬವೊಂದು ನೆಲೆಸಿದೆ. ವ್ಯಾಪಾರಕ್ಕೆಂದು ಬಂದವರು ಬಳಿಕ ನಮ್ಮಲ್ಲೇ ಒಂದಾಗಿ ಇಲ್ಲೇ ಉಳಿದುಕೊಂಡಿದ್ದಾರೆ. ಇವರಿಗೆ ವಿಜಯ್ ಎಂಬ ಒಬ್ಬನೇ ಮಗ. ಹಣಕಾಸಿನಲ್ಲಿ ತಾವು ಗಟ್ಟಿಗೊಳ್ಳುವ ಸಲುವಾಗಿ ತಮ್ಮ ವ್ಯಾಪಾರದತ್ತ ಸರವಣ ದಂಪತಿಗಳು ಗಮನಹರಿಸಿದರೇ ಹೊರತು, ಇರುವ ಒಬ್ಬ ಮಗನ ಕಡೆಗಲ್ಲ.

ಎಳವೆಯಿಂದಲೂ ತಂದೆ ತಾಯಿಯ ಮಮತೆಯಿಂದ ದೂರವಾಗಿ ಬೆಳೆದ ವಿಜಯ್, ಬೆಳೆಯುತ್ತಾ ಬೆಳೆಯುತ್ತಾ ಒಂದಶ್ಟು ಕೆಟ್ಟ ಹುಡುಗರ ಗುಂಪು ಸೇರಿ ಇನ್ನಶ್ಟು ಕೆಡುತ್ತಾ ಹೋದ. ಇದರಿಂದ ಕೆಟ್ಟ ಚಟಗಳು, ಚಟುವಟಿಕೆಗಳು ವಿಜಯ್‍ನ ಬೆನ್ನುಬಿದ್ದವು. ಎಳವೆಯಿಂದಲೂ ಕಲಿಕೆಮನೆಯಲ್ಲಿ ಕಲಿಸುಗರಿಂದ, ಊರ ಮಂದಿಯಿಂದ ಚೀ… ತೂ… ಎಂದು ನಿಂದನೆಗೊಳಗಾಗುವುದೇ ಈತನ ಪರಿಪಾಟವಾಯಿತು. ಅಪ್ಪ ಕೂಡಿಟ್ಟ ಆಸ್ತಿ ಎಶ್ಟಿದ್ದರೂ ಊರ ತುಂಬಾ ಸಾಲ. ಸಾಲ ಹಿಂಪಡೆಯಲು ಬಂದವರೊಡನೆ ಜಗಳ. ಹೀಗೆ ವಿಜಯ್‍ನ ಕುಚೇಶ್ಟೆಗಳು ನಡೆಯುತ್ತಿದ್ದವು. ಇವು ಒಂದೊಮ್ಮೆ ಹೆತ್ತವರ ಗಮನಕ್ಕೆ ಬಂದರೆ ಹೊಡೆಯುವುದು ಬಡಿಯುವುದು ಹೆತ್ತವರ ಕಾಯಕವಾಯಿತು. ಆದರೆ ಇದಾವುದರಿಂದಲೂ ವಿಜಯ್ ಪಾಟ ಕಲಿಯಲಿಲ್ಲ. ಬದಲಾಗಿ ಕೆಟ್ಟತನವನ್ನು ಮತ್ತಶ್ಟು ಹೆಚ್ಚುಮಾಡುತ್ತಾ ಹೋದ.

ಹೀಗೊಂದು ದಿನ ಸರವಣನವರ ಮನೆಯಲ್ಲಿ ಕಳ್ಳತನವಾಯಿತು. ಸುಮಾರು ಒಂದು ಲಕ್ಶಕ್ಕೂ ಹೆಚ್ಚು ಬೆಲೆಬಾಳುವ ಸೊತ್ತು ಮತ್ತು ಹಣವನ್ನು ಕಳ್ಳರು ದೋಚಿದರು. ಸರವಣರ ಕುಟುಂಬ ಕಂಗಾಲಾಯಿತು. ಕಂಡ ಕಂಡ ದೇವರಿಗೆ ಹರಕೆ ಹೊತ್ತರು. ಕದ್ದ ಕಳ್ಳರಿಗೆ ಹಿಡಿ ಹಿಡಿ ಶಾಪ ಹಾಕಿದರು. ಸರವಣರ ಹೆಂಡತಿಯಂತೂ, ‘ನನ್ನ ಮನೆ ದೋಚಿದೋರು ನನ್ನ ಕಣ್ಣೀರು ಇಂಗೋದ್ರೊಳಗೆ ಮಣ್ಣು ಪಾಲಾಗಲಿ’ ಎಂದು ಮೂರು ಬಾರಿ ನೆಲದಿಂದ ಮಣ್ಣೆತ್ತಿ ಒಗೆದು ಬೊಬ್ಬೆಯಿಡುತ್ತಿದ್ದರು. ಕೆಲವೇ ಹೊತ್ತಿನಲ್ಲಿ ಬಂದ ಕಾಪುಗರು, ಒಮ್ಮೆ ಮನೆಯತ್ತ ಕಣ್ಣಾಯಿಸಿ, ಮನೆಯವರಿಂದ ಮಾಹಿತಿ ಪಡೆದು ಹೊರಟುಹೋದರು. ಇತ್ತ ‘ಊರ ಕಳ್ಳನನ್ನು ಹಿಡಿಯಬಹುದು, ಆದರೆ ಮನೆ ಕಳ್ಳನನ್ನು ಹಿಡಿಯಲು ಸಾದ್ಯವೇ? ಅಶ್ಟಕ್ಕೂ ಈ ಕಳ್ಳತನವನ್ನು ವಿಜಯ್ ಮತ್ತು ಆತನ ಸಂಗಡಿಗರು ಸೇರಿಕೊಂಡು ಏಕೆ ಮಾಡಿರಬಾರದು?’ ಎಂಬ ಅನುಮಾನಗಳು ಊರ ಮಂದಿಯಲ್ಲಿ ಹುಟ್ಟಿಕೊಂಡವು. ಈ ಮಾತು ಸರವಣನವರ ಕಿವಿಗೂ ಬಿತ್ತು.

ಇದಾದ ಒಂದು ತಿಂಗಳ ಬಳಿಕ ವಿಜಯ್ ಒಂದು ಹೊಸ ಹುರಿಬಂಡಿ(Motor Bike) ಕೊಂಡು ಊರಕಡೆ ಬಂದ. ‘ಊರೆಲ್ಲಾ ಸಾಲ ಮಾಡಿಕೊಂಡಿರುವ ಈತ, ಏಕಾಏಕಿ ಹುರಿಬಂಡಿ ಹೇಗೆ ಕೊಂಡುಕೊಂಡ? ಕಳ್ಳತನದ ನಂಟು ನಿಜವಿರಬಹುದೇ?’ ಎನ್ನುತ್ತಾ, ತಮ್ಮ ಅನುಮಾನ ನಿಜವಾಯ್ತೋ ಎಂಬಂತೆ, ಊರಮಂದಿ ಕಾಪುಗರಿಗೆ ಸುದ್ದಿಮುಟ್ಟಿಸಿದರು. ಈ ಸುದ್ದಿ ಸರವಣನವರ ಕಿವಿ ಸೇರುವ ಮುನ್ನ, ವಿಜಯ್ ಜಯ್ಲು ಕಂಬಿಯ ಹಿಂದೆ ಸೇರಿದ್ದ.

ಇತ್ತ ಕಾಪುಗರು ವಿಚಾರಣೆಯನ್ನು ಶುರುವಿಟ್ಟರು. ಮೊದ ಮೊದಲು ವಿಜಯ್ ಕಳ್ಳತನಕ್ಕೂ ತನಗೂ ನಂಟೇ ಇಲ್ಲವೆಂಬಂತೆ ಮಾತನಾಡತೊಡಗಿದ. ಇದಕ್ಕುತ್ತರವಾಗಿ ಕಾಪುಗರು ತಮ್ಮ ದಾಟಿಯಲ್ಲಿ ವಿಚಾರಿಸಿದಾಗ ಒಂದೊಂದಾಗಿ ನಿಜ ಹೊರಬರಲಾರಂಬಿಸಿದವು. ನಿಜಕ್ಕೂ ಈ ಕಳ್ಳತನವನ್ನು ವಿಜಯ್ ತಾನೊಬ್ಬನೇ ಮಾದಿದ್ದನೇ ಹೊರತು ಆತನ ಸಂಗಡಿಗರು ಪಾಲ್ಗೊಂಡಿರಲಿಲ್ಲ. ಅಶ್ಟರಲ್ಲಾಗಲೇ ಅಲ್ಲಿಗೆ ಬಂದ ಸರವಣರು, ತನ್ನ ಮಗ ಹದಿನೇಳನೇ ವಯಸ್ಸಿಗೇ ಜಯ್ಲು ಪಾಲಾದಾನೇ ಎಂದು ದಂಗಾದರು. ಕೊನೆಗೆ ಕಾಪುಗರೊಂದಿಗೆ ತುಸು ಮಾತೂಕತೆ ನಡೆಸಿ, ಮಗನಿಗೂ ಬುದ್ದಿಮಾತು ಹೇಳಿ, ತಾವು ಕೊಟ್ಟಿದ್ದ ದೂರನ್ನು ಹಿಂಪಡೆದು ಮಗನನ್ನು ಕರೆದುಕೊಂಡು ಮನೆಸೇರುವರು.

ತಾನು ಆಸೆಪಟ್ಟು ಕರೀದಿಸಿದ್ದ ಬೆಲೆಬಾಳುವ ಹುರಿಬಂಡಿಯ ಸಲುವಾಗಿ ಇಶ್ಟೆಲ್ಲಾ ರಾದ್ದಾಂತವಾಯಿತಲ್ಲ ಎಂದು ವಿಜಯ್ ಮರುಗಿದನು. ಇನ್ನು ಮುಂದೆ ತಾನು ಈ ಊರಿನಲ್ಲಿರಬಾರದೆಂದು ತೀರ‍್ಮಾನಿಸಿ ಬೆಳಗ್ಗೆ ಎದ್ದವನೇ ನೇರವಾಗಿ ಹುರಿಬಂಡಿ ಹತ್ತಿ ಊರುಬಿಟ್ಟು ಹೊರಟೇ ಬಿಟ್ಟ. ಆದರೆ ಅಲ್ಲೂ ಅದ್ರುಶ್ಟ ವಿಜಯ್‍ನ ಬೆನ್ನಿಗಿರಲಿಲ್ಲ. ಊರಿನಿಂದ ಸುಮಾರು ಅಯ್ವತ್ತು ಮಯ್ಲಿ ದೂರ ಹೋಗಿರಬಹುದು. ಅಶ್ಟರಲ್ಲೇ ಗುಡ್ಡ ಕುಸಿದು, ವಿಜಯ್ ಚಲಿಸುತ್ತಿದ್ದ ಹುರಿಬಂಡಿ ಮೇಲೆಬಿತ್ತು. ಮಣ್ಣಿನೊಳಗೆ ಸಿಕ್ಕಿಕೊಂಡಿದ್ದ ಆತನಿಗೆ ಉಸಿರಾಡಲು ಸಾದ್ಯವಾಗದೇ ಅಲ್ಲೇ ಪ್ರಾಣ ಬಿಟ್ಟಿದ್ದ. ಕೊನೆಗೂ ತಾಯಿಯ ಶಾಪ ಮುಟ್ಟಿತ್ತು, ವಿಜಯ್ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದ. ಸರವಣರ ಹೆಂಡತಿ ತಿಳಿಯದೇ ಕಳ್ಳನಿಗೆಂದು ಮಾಡಿದ್ದ ಶಾಪ ಕೊನೆಗೂ ಸಾವಾಗಿ ತನ್ನ ಮಗನನ್ನೇ ಕೊಂದಿತ್ತು.

ಮಗನನ್ನು ಕಳೆದುಕೊಂಡ ನೋವು ಮಾಸುವ ಮುನ್ನವೇ, ಮಗನ ಹುರಿಬಂಡಿ ಪಕ್ಕದ ಊರಿನ ಪಟೇಲರ ಮಗನಿಗೆ ಮಾರಿದರು. ಅಶ್ಟಕ್ಕೂ ಅವಸರ ಅವಸರವಾಗಿ ಹುರಿಬಂಡಿ ಮಾರುವ ಅಗತ್ಯವೇನಿತ್ತು ಎಂಬ ಕೇಳ್ವಿ ಊರಮಂದಿಯಲ್ಲಿ ಮೂಡಿತ್ತು. ಇದಾದ ಒಂದು ವಾರದಲ್ಲಿ ಪಕ್ಕದೂರಿನ ಪಟೇಲರಿಂದ ಸರವಣನವರಿಗೆ ಸುದ್ದಿಬಂತು. “ರಾತ್ರಿ ಹೊತ್ತು ತಮ್ಮ ಮನೆ ಮುಂದೆ ನಿಲ್ಲಿಸಿದ್ದ ಹುರಿಬಂಡಿಯ ಸುತ್ತ ಯಾರೋ ನಡೆದಾಡಿದಂತಾಗುತ್ತದೆ. ತನ್ನಶ್ಟಕ್ಕೆ ಹುರಿಬಂಡಿಯಿಂದ ಸದ್ದುಗಳು ಬರುತ್ತದೆ. ಈ ಹುರಿಬಂಡಿ ನಮಗೆ ಬೇಡ, ನಮಗೆ ನಮ್ಮ ಹಣ ವಾಪಾಸ್ ಕೊಡಿ” ಎಂದು. ಈ ಎಲ್ಲಾ ಪ್ರಕ್ರಿಯೆಗಳು ಸರವಣರಿಗೂ ಗೋಚರವಾಗಿತ್ತು. ಆ ಕಾರಣಕ್ಕೆ ಅವರು ಹುರಿಬಂಡಿ ಮಾರಿದ್ದು ಎನ್ನುವ ವಿಚಾರ ಊರಿನ ಮಂದಿಗೆ ಆಗ ತಿಳಿಯಿತು. ಆದರೂ ಸರವಣರು ಆ ಬಂಡಿಯನ್ನು ಹಿಂಪಡೆಯುವುದಿಲ್ಲ.

ಇಶ್ಟೆಲ್ಲಾ ನಡೆಯುತ್ತಿದ್ದರೂ ಅದನೆಲ್ಲಾ ತಲೆಗೆ ಹಾಕಿಕೊಳ್ಳದ ಪಟೇಲರ ಮಗ, ಒಂದು ದಿನ ಗೆಳೆಯನ ಸಂಗಡ ಹುರಿಬಂಡಿ ಏರಿ ತನ್ನ ಅಕ್ಕನ ಮನೆ ಕಡೆ ಹೊರಟಿದ್ದ. ಇನ್ನೇನು ಅಕ್ಕನ ಮನೆ ಸಮೀಪಿಸುತ್ತಿದೆ ಎನ್ನುವಶ್ಟರಲ್ಲೇ, ಆಯತಪ್ಪಿ ಹುರಿಬಂಡಿ ಸಮೇತ ಇಬ್ಬರೂ ನೆಲಕ್ಕುರುಳಿದರು. ನೆಲಕ್ಕೆ ಬಿದ್ದ ರಬಸಕ್ಕೆ ಊರ ಪಟೇಲರ ಮಗನ ತಲೆ ರಸ್ತೆಗೆ ಅಪ್ಪಳಿಸಿ ಅಲ್ಲೇ ಪ್ರಾಣಬಿಟ್ಟ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಇನ್ನೊಬ್ಬ ಎರಡು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಜೀವ ಬಿಟ್ಟಿದ್ದ.

ಈ ಗಟನೆ ಆ ಊರಿನಾದ್ಯಂತ ಕಾಡ್ಗಿಚ್ಚಿನಂತೆ ಪಸರಿಸಿತು. ಆಗಲೇ ದೆವ್ವದಂತೆ ಕಾಡಿದ್ದ ಹುರಿಬಂಡಿ, ಅಲ್ಲಿಂದಾಚೆ ಯಮಪಾಶವಾಗಿ ಗೋಚರಿಸಿತು. ಕೂಡಲೇ ಆ ಹುರಿಬಂಡಿಯನ್ನು ಸುಡಬೇಕೆಂದು ಊರಮಂದಿ ಆಗ್ರಹಿಸಿದರು. ಆದರೆ ಪಟೇಲರು ಇದಕ್ಕೆ ಒಪ್ಪಲಿಲ್ಲ. ಅದಕ್ಕೆ ತಮ್ಮ ಬೀಗರ ಮನೆ ಹತ್ತಿರದ ಒಬ್ಬ ಮಂತ್ರವಾದಿಯನ್ನು ಕರೆಸಿ ಅದಕ್ಕೊಂದಿಶ್ಟು ಹೋಮ ಹವನ ಮಾಡಿಸಿ, ಕಯ್ ತೊಳೆದುಕೊಂಡರು. ಅಲ್ಲಿಂದ ಹುರಿಬಂಡಿನಿಂದ ಅಂತಹ ಸದ್ದು ಹೊರಬರುವುದಾಗಲೀ, ಅತವಾ ಹುರಿಬಂಡಿಯ ಸುತ್ತ ಯಾರಾದರು ನಡೆದಾಡಿದಂತಾಗುವುದಾಗಲೀ ಆಗಲಿಲ್ಲ. ಆದರೆ ಇದರ ಉಪಯೋಗವೇನು? ಇದನ್ನು ಓಡಿಸಲು ನನ್ನ ಮಗನೇ ಇಲ್ಲವಲ್ಲ ಎಂದು ಯಾರಿಗಾದರೂ ಮಾರಲು ನಿರ‍್ದರಿಸಿದರು. ಆದರೂ ಆ ಊರಿನವರು ಯಾರೂ ಹುರಿಬಂಡಿ ಕೊಳ್ಳಲು ಮುಂದೆ ಬರಲಿಲ್ಲ. ಇದನ್ನೆಲ್ಲಾ ಗಮನಿಸಿದ ಮಂತ್ರವಾದಿ ತಾನೇ ಆ ಹುರಿಬಂಡಿ ಕೊಳ್ಳಲು ಮುಂದಾದ. ಸುಮಾರು ಆರು ತಿಂಗಳ ಕಾಲ, ಆತ ಆ ಹುರಿಬಂಡಿ ಓಡಿಸಿದ್ದ. ಇಡೀ ಊರಿನವರ ಗಮನ ಆ ಮಂತ್ರವಾದಿಯ ಮೇಲೆಯೇ ಇತ್ತು. ಅಲ್ಲದೇ ಮಂತ್ರವಾದಿಗೂ ಯಾವುದೇ ತರದ ಬದಲಾವಣೆಗಳು ಗಮನಕ್ಕೆ ಬರಲಿಲ್ಲ. ಇದನ್ನೆಲ್ಲಾ ನೋಡಿ, ‘ಅಬ್ಬಾ ! ಈ ಹುರಿಬಂಡಿ ರಂಪಾಟಗಳು ಮುಗಿಯಿತಲ್ಲಾ’ ಎಂದು ಊರಮಂದಿ ನಿಟ್ಟುಸಿರು ಬಿಟ್ಟಿದ್ದರಶ್ಟೆ.

ಆದರೇ ವಿದಿಯ ಆಟ ಬೇರೆಯದೇ ಇತ್ತು. ಮಂತ್ರವಾದಿಯು ಪಕ್ಕದೂರಲ್ಲೊಂದು ಪೂಜೆಗೆಂದು ಹೋಗುತ್ತಿದ್ದ ಹೊತ್ತಿನಲ್ಲಿ, ಎದುರಿನಿಂದ ಬರುತ್ತಿದ್ದ ವಾಹನವೊಂದನ್ನು ತಪ್ಪಿಸುವ ದಾವಂತದಲ್ಲಿ ರಸ್ತೆಗೆ ಬಿದ್ದು ಆತನೂ ಅಸುನೀಗಿದ್ದ. ಇದರಿಂದ ರೊಚ್ಚಿಗೆದ್ದ ಊರಮಂದಿ, ಯಮನಾಗಿ ನಾಲ್ಕು ಮಂದಿಯನ್ನು ಬಲಿ ಪಡೆದಿದ್ದ ಹುರಿಬಂಡಿಯನ್ನು ಬೆಂಕಿಯಿಟ್ಟು ಸುಟ್ಟುಹಾಕಿದರು. ಆದರೆ ಇವೆಲ್ಲದರ ನಡುವೆ ಒಂದು ಗೊಂದಲ ಮೂಡುವುದೇನೆಂದರೆ, ಸುಮಾರು ನಾಲ್ಕು ಬಾರಿ ಅಪಗಾತಕ್ಕಿಡಾಗಿದ್ದ ಹುರಿಬಂಡಿಗೆ ಒಮ್ಮೆಯೂ ಕಿಂಚಿತ್ತು ಗಾಸಿಯಾಗಿರಲಿಲ್ಲ. ಒಟ್ಟಿನಲ್ಲಿ ತರ‍್ಕಕ್ಕೇ ನಿಲುಕದ ರೀತಿಯಲ್ಲಿ, ಸಾವಿನ ರೂಪವಾಗಿದ್ದ ಹುರಿಬಂಡಿ ದುರಂತ ಕೊನೆ ಕಂಡಿತು.

(ಚಿತ್ರಸೆಲೆ: twitsnap)Categories: ನಲ್ಬರಹ

ಟ್ಯಾಗ್ ಗಳು:, , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s